Monday, 16th September 2024

ನಾಯಕನಾರೋ ನಡೆಸುವನೆಲ್ಲೋ ?

ಅಶ್ವತ್ಥಕಟ್ಟೆ

ranjith.hoskere@gmail.com

ಕಾಂಗ್ರೆಸ್‌ನಿಂದ ಬಿಜೆಪಿಯತ್ತ ವಾಲಿರುವ ನಾಯಕರಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ನಷ್ಟವಾಗುತ್ತದೆ ಎನ್ನುವುದಕ್ಕಿಂತ, ದಶಕಗಳಿಂದ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ಮನಿಶ್ ತಿವಾರಿ, ಕಮಲನಾಥ್‌ರಂಥ ನಾಯಕರ ನಿರ್ಗಮನದಿಂದ ಅವರ ಹಿಂಬಾಲಕರು ಪಕ್ಷ ತೊರೆಯುವ ಸಾಧ್ಯತೆಯಿದೆ.

ದೇಶದಲ್ಲಿ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ಪಕ್ಷಾಂತರ ಪರ್ವ ಸರ್ವೇ ಸಾಮಾನ್ಯ. ಆ ಪಕ್ಷದವರು ಈ ಪಕ್ಷಕ್ಕೆ, ಈ ಪಕ್ಷದವರು ಆ ಪಕ್ಷಕ್ಕೆ ಹೋಗುವುದು ಪ್ರತಿ ಚುನಾವಣೆಯ ಸಂದರ್ಭದಲ್ಲಿ ಕಾಣಬರುವ ಸಹಜ ಚಟುವಟಿಕೆ. ಕೆಲ ವೊಂದಿಷ್ಟು ಮಂದಿ ಪಕ್ಷಾಂತರಕ್ಕೆ ಮುಂದಾದ ಸಮಯದಲ್ಲಿ ಅವರನ್ನು ತಡೆಯುವ ಪ್ರಯತ್ನ ಮಾಡಿದರೆ, ಇನ್ನು ಕೆಲವೊಂದಿಷ್ಟು ಮಂದಿ ಹೋದರೂ ಅವರನ್ನು ಮಾತನಾಡಿಸಲು ಪಕ್ಷದ ನಾಯಕರು ಹೋಗದಷ್ಟು ‘ಪ್ರಭಾವಿ’ಗಳಾಗಿರುತ್ತಾರೆ. ಈ ಎರಡನ್ನೂ ಮೀರಿದ ಪಕ್ಷಾಂತರಗಳೂ ನಡೆಯುತ್ತವೆ. ಅವು ನಡೆದಾಗ ಸಾಮಾನ್ಯರಿಗೆ ‘ಅಚ್ಚರಿ’ ಎನಿಸಿದರೆ, ಕಾರ್ಯಕರ್ತರಿಗೆ ‘ಅಘಾತ’ವಾಗುವುದರಲ್ಲಿ ಸಂಶಯವಿಲ್ಲ.

ಕಳೆದೊಂದು ವರ್ಷದಿಂದ ಆಗುತ್ತಿರುವ ಪಕ್ಷಾಂತರ ಪರ್ವವನ್ನು ಗಮನಿಸಿದರೆ, ಅಚ್ಚರಿ ಹಾಗೂ ಆಘಾತ ಎರಡೂ ಆಗುತ್ತವೆ. ಕಾರಣ ಅನೇಕ ನಾಯಕರು ಕಾಂಗ್ರೆಸ್ ಪಕ್ಷದಿಂದ ಹೊರನಡೆದಿದ್ದಾರೆ. ಹೀಗೆ ಹೊರನಡೆದಮ ಅನೇಕರು, ದಶಕಗಳ ಕಾಲ ಯಾವ ತತ್ವ, ಸಿದ್ಧಾಂತ ಹಾಗೂ ಪಕ್ಷವನ್ನು ವಿರೋಧಿಸಿಕೊಂಡು ಬಂದಿದ್ದರೋ, ಅದೇ ಬಿಜೆಪಿಯನ್ನು ಸೇರಿ ಬೇರೆ-ಬೇರೆ ಸ್ಥಾನಮಾನಗಳನ್ನು ಅಲಂಕರಿಸಿದ್ದಾರೆ. ಅನೇಕರು ಈ ರೀತಿ ಪಕ್ಷಾಂತರ ಮಾಡಿದ್ದು, ಬಿಜೆಪಿಗೆ ಹೋಗಿ ಯಾವುದೋ ಒಂದು ಶಾಸಕ, ಸಂಸದನ ಸ್ಥಾನ ಪಡೆಯಬೇಕು ಎನ್ನುವ ಕಾರಣಕ್ಕಿಂತ ಹೆಚ್ಚಾಗಿ, ಪಕ್ಷದಲ್ಲಿ ಕಳೆದೊಂದು ದಶಕದಿಂದ ಕಾಣಿಸುತ್ತಿರುವ ನಾಯಕತ್ವದಲ್ಲಿನ ಸಮಸ್ಯೆಯಿಂದಾಗಿ ಎಂದರೆ ತಪ್ಪಾಗುವುದಿಲ್ಲ.

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು, ೨೦೧೩ರ ಲೋಕಸಭಾ ಚುನಾವಣೆಗೂ ಮೊದಲು ಎಐಸಿಸಿ ಅಧ್ಯಕ್ಷ ಸ್ಥಾನವನ್ನು ರಾಹುಲ್ ಗಾಂಧಿ ಅವರಿಗೆ ಬಿಟ್ಟು ಕೊಟ್ಟರು. ‘ರಾಗಾ’ ಅಧಿಕಾರಕ್ಕೆ ಬರುತ್ತಿದ್ದಂತೆ ಪಕ್ಷದಲ್ಲಿ ಕೆಲ ವೊಂದಷ್ಟು ಬದಲಾವಣೆ ತರಲು ಮುಂದಾದರು. ಈ ಬದಲಾವಣೆಯ ಹಂತದಲ್ಲಿ ಪಕ್ಷಕ್ಕಾಗಿ ದಶಕಗಳಿಂದ ದುಡಿದ ಅನೇಕರು ‘ಸೈಡ್‌ಲೈನ್’ ಆದರು. ಇದರಿಂದ ಬೇಸತ್ತು ಕೆಲವೊಂದಷ್ಟು ಮಂದಿ ಪಕ್ಷದಿಂದ ಹೊರಬಂದರೆ, ೨೦೧೮ರ
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಆದ ಹಿನ್ನಡೆ ಯಿಂದ ಅನೇಕರು ರಾಜಕೀಯ ಭವಿಷ್ಯಕ್ಕಾಗಿ ಬಿಜೆಪಿಯತ್ತ ವಾಲಿದರು. ಈ ಎರಡೂ ಅವಧಿಯನ್ನು ಮೀರಿ, ಪಕ್ಷ ದೊಂದಿಗೆ ನಿಷ್ಠರಾಗಿದ್ದ ಅನೇಕರು ಈ ಲೋಕಸಭಾ ಚುನಾವಣೆ ವೇಳೆಗೆ ವಲಸೆ ತೆರಳಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಸೋನಿಯಾ ಗಾಂಧಿ ಅವರ ಆತ್ಯಾಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕರ್ನಾಟಕದ ಎಸ್.ಎಂ. ಕೃಷ್ಣ, ಎನ್. ಡಿ. ತಿವಾರಿ, ವಿಜಯ್ ಬಹುಗುಣ, ಜಗದಂಬಿಕ ಪಾಲ್ ಸೇರಿದಂತೆ ಅನೇಕರು ‘ಕಡೆಗಣನೆ’ಯನ್ನು ಖಂಡಿಸಿ ಪಕ್ಷಾಂತರ ಮಾಡಿದ್ದರು. ಬಳಿಕ ಒಂದು ಕಾಲದಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಆಪ್ತರಾಗಿದ್ದ ಜ್ಯೋತಿರಾಧಿತ್ಯ ಸಿಂಧಿಯಾ, ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಪಕ್ಷಾಂತರ ಮಾಡಿದ್ದರು. ಇದೀಗ ಇಂದಿರಾ ಗಾಂಧಿ ಅವರ ಮೂರನೇ ಪುತ್ರ ಎಂದೇ ಕಾಂಗ್ರೆಸ್‌ನಲ್ಲಿ ಮನೆಮಾತಾಗಿದ್ದ ಕಮಲನಾಥ್ ಸೇರಿದಂತೆ ಅನೇಕರು ಪಕ್ಷಾಂತರ ಮಾಡಲು ಸಿದ್ಧವಾಗಿದ್ದಾರೆ ಎನ್ನುವ ಗುಸುಗುಸು ರಾಜಕೀಯ
ವಲಯದಲ್ಲಿ ಬಹುದೊಡ್ಡ ಮಟ್ಟದಲ್ಲಿ ಕೇಳಿಬರುತ್ತಿದೆ.

ಒಂದು ಕಾಲದಲ್ಲಿ ನೆಹರು ಕುಟುಂಬಕ್ಕೆ ಆಪ್ತರಾಗಿ, ಬಿಜೆಪಿಯನ್ನು ಕಟುಶಬ್ದಗಳಿಂದ ಟೀಕಿಸಿದವರೆಲ್ಲ ಈಗ ಬಿಜೆಪಿಯನ್ನು ಸೇರುತ್ತಿರುವುದಕ್ಕೆ ಕಾರಣವಿಲ್ಲವೆಂದಲ್ಲ.
ಕಾಂಗ್ರೆಸ್‌ನಿಂದ ಬಹುತೇಕ ನಾಯಕರು ಹೊರನಡೆಯುತ್ತಿರುವುದಕ್ಕೆ ನೀಡುತ್ತಿರುವ ಏಕೈಕ ಕಾರಣವೆಂದರೆ, ಕಾಂಗ್ರೆಸ್ ನ ಭವಿಷ್ಯ ಹಾಗೂ ನಾಯಕತ್ವದಲ್ಲಿನ ಆತಂಕ. ಕಾಂಗ್ರೆಸ್ ಇಲ್ಲದೇ ದೇಶದ ಇತಿಹಾಸವನ್ನು ನೋಡಲು ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿಯಿಂದ, ಈ ಪರಿಸ್ಥಿತಿಗೆ ಬರಲು ಹಲವು ಕಾರಣಗಳಿವೆ. ರಾಹುಲ್ ಗಾಂಽ ಅಧ್ಯಕ್ಷರಾದ ಬಳಿಕ ತಮ್ಮದೇ ಆದ ತಂಡದೊಂದಿಗೆ ಜನರನ್ನು ಮುಟ್ಟುವ ಪ್ರಯತ್ನ ಮಾಡಿದರು. ‘ರಾಗಾ’ ಹೋದಕಡೆಯೆಲ್ಲ ಅತ್ಯುತ್ತಮ ಎನಿಸುವ ಜನಸ್ಪಂದನೆಯೂ ಸಿಕ್ಕಿತ್ತು. ಆದರೆ ‘ಮೋದಿ ವೇವ್’ ಎದುರಿಗೆ ಈ ಜನಸ್ಪಂದನೆ ಮತವಾಗಿ ಪರಿವರ್ತನೆಯಾಗಲಿಲ್ಲ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಬೆಂಬಲಕ್ಕಿಂತ ಹೆಚ್ಚಾಗಿ ಸದನದಲ್ಲಿ ತಲೆ ಎಣಿಕೆಯೇ ಮುಖ್ಯವಾಗುವುದರಿಂದ, ‘ರಾಗಾ’ ಯಶಸ್ವಿಯಾಗಲಿಲ್ಲ. ಪಕ್ಷದ ನಾಯಕತ್ವದಲ್ಲಿದ್ದ ನಂಬಿಕೆಯನ್ನು ಕಾರ್ಯ ಕರ್ತರು ಕಳೆದುಕೊಳ್ಳುತ್ತಿದ್ದಂತೆ, ಸಹಜವಾಗಿಯೇ ಪಕ್ಷದ ಸಂಘಟನೆಯಲ್ಲಿಯೂ ಹಲವು ಏರುಪೇರುಗಳು ಕಾಣಿಸಿ
ದ್ದವು. ೨೦೧೮ರ ಲೋಕಸಭಾ ಚುನಾವಣೆಯ ಬಳಿಕ ಈ ಡ್ಯಾಮೇಜ್ ಅನ್ನು ಸರಿಪಡಿಸಿಕೊಳ್ಳಲು, ಎಐಸಿಸಿ ಅಧ್ಯಕ್ಷ ಸ್ಥಾನದಿಂದ ರಾಹುಲ್ ಕೆಳಗಿಳಿದು, ಕಳೆದೊಂದು ವರ್ಷದ ಹಿಂದೆ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಈ ಪಟ್ಟವನ್ನು ನೀಡಲಾಗಿದೆ. ಖರ್ಗೆ ಅವರು ಈ ಹುದ್ದೆಯನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದರೂ, ಆಗಿರುವ ಡ್ಯಾಮೇಜ್ ಸರಿಪಡಿಸುವುದು ಕಷ್ಟಸಾಧ್ಯ ಎಂದರೆ ತಪ್ಪಾಗುವುದಿಲ್ಲ.

ನಾಯಕರು ಸಾಲು ಸಾಲಾಗಿ ಪಕ್ಷ ತೊರೆಯುತ್ತಿರುವ ನಡುವೆಯೂ ‘ಇಂಡಿಯ’ ಮೈತ್ರಿಕೂಟ ಕಾಂಗ್ರೆಸ್ ಪಾಲಿಗೆ ಹೊಸ ಚೈತನ್ಯವನ್ನು ನೀಡಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಯನ್ನು ಏಕಾಂಗಿಯಾಗಿ ಎದುರಿಸಿ ಕೈಸುಟ್ಟುಕೊಳ್ಳುವುದಕ್ಕಿಂತ, ಮೈತ್ರಿ ಮೂಲಕ ಒಂದಾದರೆ ಸೋಲಿಸಬಹುದು ಎನ್ನುವ ಲೆಕ್ಕಾಚಾರದಲ್ಲಿ ಬಿಜೆಪಿಯೇತರ ಪಕ್ಷಗಳ ನಾಯಕರು ಒಂದಾಗಿ ‘ಇಂಡಿಯ’ ಕೂಟವನ್ನು ರಚಿಸಿಕೊಂಡಿದ್ದರು. ಆದರೆ ‘ಇಂಡಿಯ’ ರಚನೆಯಾದ ಸಮಯ ದಲ್ಲಿಯೇ, ಅದರ ವ್ಯಾಲಿಡಿಟಿಯ ಪ್ರಶ್ನೆಗಳು ಎದ್ದಿದ್ದವು. ಲೋಕಸಭಾ ಚುನಾವಣೆಗೆ ಕೇವಲ ಎಂಟು ತಿಂಗಳಿರುವಾಗ ರಚನೆಯಾದ ಈ ಮೈತ್ರಿಯನ್ನು ಮುನ್ನಡೆಸುವವರು
ಯಾರು? ಚುನಾವಣೆಯಲ್ಲಿ ಗೆದ್ದರೂ ಪ್ರಧಾನಿ ಅಭ್ಯರ್ಥಿ ಯಾರು ಎಂಬೆಲ್ಲ ಪ್ರಶ್ನೆಗಳು ಸಹಜವಾಗಿಯೇ ಮೂಡಿದ್ದವು.

ಆದರೆ ನಿರೀಕ್ಷೆಯಂತೆ ಮೈತ್ರಿಯಾದ ನಾಲ್ಕೇ ತಿಂಗಳಲ್ಲಿ, ಟಿಕೆಟ್ ಹಂಚಿಕೆ, ನಾಯಕತ್ವದ ಪ್ರಶ್ನೆ ಸೇರಿದಂತೆ ವಿವಿಧ ವಿಷಯದಲ್ಲಿ ಒಡಕು ಮೂಡಿ, ಒಂದೊಂದು ಪಕ್ಷ ಗಳು ಒಂದೊಂದು ದಿಕ್ಕಿನೆಡೆಗೆ ತಿರುಗಿ ಕೂತಿವೆ. ಅದರಲ್ಲಿಯೂ ‘ಇಂಡಿಯ’ ಮೈತ್ರಿಕೂಟದ ಸಂಚಾಲಕನ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ನಿತೀಶ್ ಕುಮಾರ್ ‘ಘರ್ ವಾಪ್ಸಿ’ ಎನ್ನುವಂತೆ ಬಿಜೆಪಿಯೊಂದಿಗೆ ಮತ್ತೆ ಹೋಗಿದ್ದು, ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ಗೆ ಸೀಟು ಕೊಡುವುದಿಲ್ಲವೆಂದು ಮಮತಾ ಬ್ಯಾನರ್ಜಿ ಹೇಳಿದ್ದು, ಪಂಜಾಬ್‌ನ ಎಲ್ಲ ಸ್ಥಾನಗಳನ್ನು ‘ಆಪ್’ ಕೇಳಿದ್ದು, ಉತ್ತರ ಪ್ರದೇಶದಲ್ಲಿ ನಾಲ್ಕು ಸ್ಥಾನ ಮಾತ್ರ ಕಾಂಗ್ರೆಸ್‌ಗೆ ಕೊಡುತ್ತೇವೆ ಎಂದು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಹೇಳಿದ್ದು ಕಾಂಗ್ರೆಸ್‌ಗೆ ಬಹುದೊಡ್ಡ ಆಘಾತವನ್ನು ತಂದಿಟ್ಟಿದೆ.

ಇದೀಗ ‘ಇಂಡಿಯ’ ಕೂಟದಲ್ಲಿಯೇ ಇರುವ ಎನ್ ಸಿಪಿಯ ಶರದ್ ಪವಾರ್ ಬಣ ಹಾಗೂ ಉದ್ಧವ್ ಠಾಕ್ರೆಯ ವರ ಶಿವಸೇನೆ ಬಣಕ್ಕೆ ಚಿಹ್ನೆಯೇ ಇಲ್ಲದಂತಾಗಿದೆ.
‘ಇಂಡಿಯ’ ಕೂಟದಲ್ಲಿ ಉಳಿದಿರುವ ಅನೇಕ ಪಕ್ಷಗಳು ಒಂದೂ ಸ್ಥಾನವನ್ನು ಗೆಲ್ಲಲು ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿ ಯಲ್ಲಿವೆ. ಇನ್ನು ಕೇರಳ ಸಿಪಿಎಂ ಹಾಗೂ ಸ್ಥಳೀಯ ಕಾಂಗ್ರೆಸ್ ನಡುವೆ ಸಾಮರಸ್ಯವು ಈ ಹಂತದಲ್ಲಿಯೂ ಕಾಣಿಸದಿರುವುದು ಕಾಂಗ್ರೆಸ್‌ನಲ್ಲಿ ‘ನಾಯಕತ್ವ’ ಸಮಸ್ಯೆಗೆ ಇನ್ನಷ್ಟು ತುಪ್ಪ ಸುರಿಯುವ ಪ್ರಯತ್ನ ಮಾಡಿದಂತಾಗಿದೆ.

ಈ ರೀತಿ ಬಿರುಕು ಮೂಡಲು ಕಾರಣ ನೋಡುವುದಾದರೆ, ಬಿಜೆಪಿ ವಿರೋಽಸುವ ಎಲ್ಲ ಪಕ್ಷಗಳು ಒಂದಾಗಿಯೇ ‘ಇಂಡಿಯ’ ಕೂಟವನ್ನು ರಚಿಸಿದ್ದವು. ಆದರೆ ಮೈತ್ರಿಕೂಟದಲ್ಲಿ ಬಹುತೇಕ ಪ್ರಾದೇಶಿಕ ಪಕ್ಷಗಳೇ ತುಂಬಿದ್ದರಿಂದ, ಕಾಂಗ್ರೆಸ್ ಸಹಜವಾಗಿ ಪ್ರಧಾನಿ ಅಭ್ಯರ್ಥಿಯನ್ನಾಗಿ ರಾಹುಲ್ ಗಾಂಧಿ ಅವರನ್ನು ಬಿಂಬಿಸಲು ಪ್ರಯತ್ನಿಸಿತ್ತು. ಆದರೆ ಮೈತ್ರಿಕೂಟದಲ್ಲಿರುವ ಇತರೆ ಪಕ್ಷಗಳಿಗೆ ರಾಹುಲ್ ಗಾಂಧಿ ನಾಯಕತ್ವದ ಮೇಲೆ ನಂಬಿಕೆ ಉಳಿದಿಲ್ಲ. ಆದ್ದರಿಂದ ಅದನ್ನು ವಿರೋಽಸಿಯೇ ಒಂದೊಂದಾಗಿ ‘ಇಂಡಿಯ’ ಕೂಟದಿಂದ ಹೊರ ನಡೆಯು ತ್ತಿವೆ. ಇನ್ನು ಮೈತ್ರಿಕೂಟದಲ್ಲಿರುವ ಪ್ರಬಲ ಪಕ್ಷಗಳು ತಟಸ್ಥ ವಾಗಿವೆ. ಹಾಗೆ ನೋಡಿದರೆ, ಕಾಂಗ್ರೆಸ್ ನಾಯಕರಿಗೆ ಸದ್ಯದ ಪರಿಸ್ಥಿತಿಯಲ್ಲಿ ಕರ್ನಾಟಕವೇ ಬಹುದೊಡ್ಡ ಆಶಾಕಿರಣವಾಗಿ ಕಾಣಿಸುತ್ತಿದೆ. ಸ್ಪಷ್ಟ ಹಾಗೂ ಭರ್ಜರಿ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿರುವ ಕಾಂಗ್ರೆಸ್ ಐದು ವರ್ಷ ಸುಭದ್ರ ಸರಕಾರದ ನಿರೀಕ್ಷೆಯಲ್ಲಿದೆ. ಈಗಿರುವ ಬಹುಮತ ವನ್ನು ನೋಡಿದರೆ, ಬಿಜೆಪಿಯವರು ‘ಆಪರೇಷನ್ ಕಮಲ’ದ ಸಾಹಸಕ್ಕೆ ಕೈಹಾಕುವುದು ಸುಲಭವಲ್ಲ.

ಪಕ್ಷದ ಶಾಸಕರೊಂದಿಗೆ ಪಕ್ಷ ಸಂಘಟನೆಯೂ ಅಷ್ಟೇ ಗಟ್ಟಿ ಯಾಗಿರುವುದು ಕರ್ನಾಟಕದಲ್ಲಿ ಕಾಂಗ್ರೆಸಿಗೆ ಇರುವ ಬಹುದೊಡ್ಡ ಪ್ಲಸ್ ಪಾಯಿಂಟ್. ಮುಖ್ಯಮಂತ್ರಿ ಸಿದ್ದ ರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್ ನಾಯಕತ್ವದಲ್ಲಿ ರಾಜ್ಯ ಕಾಂಗ್ರೆಸ್, ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ರಾಷ್ಟ್ರೀಯ ನಾಯಕ ರಿಗೆ ಇರುವ ಶಕ್ತಿ. ಈ ಕಾರಣಕ್ಕಾಗಿಯೇ ಕರ್ನಾಟಕ ರಾಜ್ಯ ಕಾಂಗ್ರೆಸ್‌ಗೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ‘ಟಾರ್ಗೆಟ್ ೨೦’ ಅನ್ನು ಪಕ್ಷದ ಹೈಕಮಾಂಡ್ ನೀಡಿರುವುದು.

ಕರ್ನಾಟಕ ಹೊರತುಪಡಿಸಿ, ಇನ್ಯಾವುದೇ ರಾಜ್ಯವನ್ನು ಗಮನಿಸಿದರೂ ನಾಯಕತ್ವದಲ್ಲಿ ಹೇಳಿಕೊಳ್ಳುವಂಥ ‘ಗಟ್ಟಿ’ತನ ಉಳಿದಿಲ್ಲ. ಇತರೆ ರಾಜ್ಯ ಹಾಗೂ ರಾಷ್ಟ್ರ
ಮಟ್ಟದಲ್ಲಿ ಕಾಂಗ್ರೆಸ್‌ಗೆ ನಿಷ್ಠವಾಗಿರುವ ನಾಯಕರುಗಳಿಗೆ ಕೇಂದ್ರ ಸರಕಾರದ ‘ಸ್ವಾಯತ್ತ ಸಂಸ್ಥೆ’ಗಳು ಎನಿಸಿರುವ ಇ.ಡಿ., ಆದಾಯ ತೆರಿಗೆ ಇಲಾಖೆಯ ಭೀತಿ ಕಾಡುತ್ತಿದೆ. ಈ ಭೀತಿಗೆ ಬಗ್ಗದಿರುವ ನಾಯಕರಿಗೆ ಅಽಕಾರದ ಆಸೆಯನ್ನು ತೋರಿಸಿ, ಸೆಳೆಯುವ ಪ್ರಯತ್ನ ನಡೆಯುತ್ತಿದೆ. ಈ ಎರಡನ್ನೂ ಮೀರಿ ಅಸ್ತಿತ್ವದ ಹುಡುಕಾಟದಲ್ಲಿರುವ ಹಲವು ನಾಯಕರಿಗೆ ‘ಅಸ್ತಿತ್ವ’ ಅಥವಾ ಮಕ್ಕಳಿಗೆ ರಾಜಕೀಯ ನೆಲೆಯನ್ನು ನೀಡುವ ಭರವಸೆಯನ್ನು ನೀಡಲಾಗುತ್ತಿದೆ;
ಕಾಂಗ್ರೆಸಿಗರನ್ನು ಸೆಳೆಯುವ ಕೆಲಸವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ.

ಇತ್ತೀಚಿಗೆ ಕಾಂಗ್ರೆಸ್‌ನಿಂದ ಬಿಜೆಪಿಯತ್ತ ವಾಲಿರುವ ಹಲವು ಹಿರಿಯ ನಾಯಕರಿಂದ ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುದೊಡ್ಡ ನಷ್ಟವಾಗುತ್ತದೆ ಎನ್ನುವುದಕ್ಕಿಂತ, ದಶಕಗಳಿಂದ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ಮನಿಶ್ ತಿವಾರಿ, ಕಮಲನಾಥ್‌ರಂಥ ನಾಯಕರ ನಿರ್ಗಮನದಿಂದ ಅವರ ಹಿಂಬಾಲಕರು ಪಕ್ಷ ತೊರೆಯುವ ಸಾಧ್ಯತೆಯಿರುತ್ತದೆ. ಇದಕ್ಕಿಂತ ಹೆಚ್ಚಾಗಿ, ದಶಕಗಳಿಂದ ಪಕ್ಷದಲ್ಲಿರುವವರೇ, ಪಕ್ಷ ಬಿಡುತ್ತಿರುವಾಗ ಮುಂದೇನು ಎನ್ನುವ ಆತಂಕ ಪಕ್ಷದಲ್ಲಿರುವ ಕಾರ್ಯಕರ್ತರಲ್ಲಿ ಮೂಡುತ್ತದೆ. ಇದೇ ಬಿಜೆಪಿ ನಾಯಕರಿಗೆ ಬೇಕಿರುವ ಅಂಶ.

ನೆಹರು ಕಾಲದಿಂದಲೂ ದೇಶದ ರಾಜಕೀಯದ ಪ್ರತಿಹೆಜ್ಜೆಯಲ್ಲಿಯೂ ಕಾಂಗ್ರೆಸ್ ತನ್ನದೇ ಆದ ಇತಿಹಾಸವನ್ನು ಬರೆದಿದೆ. ಆದರೆ ಸೋನಿಯಾ ಗಾಂಧಿ ಅವರಿಂದ ರಾಹುಲ್ ಗಾಂಧಿ ಅವರಿಗೆ ಅಽಕಾರ ವರ್ಗಾವಣೆಯಾದ ಬಳಿಕ ಆಗಿರುವ ಡ್ಯಾಮೇಜ್ ಸರಿಪಡಿಸುವ ನಿಟ್ಟಿನಲ್ಲಿ ಹಿಂದೆಯೇ ಯೋಚಿಸಬೇಕಿತ್ತು. ಹಾಗೆಂದ ಮಾತ್ರಕ್ಕೆ ಪಕ್ಷವು ಕೇಡರ್ ಮತ್ತು ಸಂಘಟನೆಯ ವಿಷಯದಲ್ಲಿ ಈಗಲೂ ಸಂಪೂರ್ಣ ನೆಲಕಚ್ಚಿದೆ ಎನ್ನುವ ಸ್ಥಿತಿಯಿಲ್ಲ. ಆದರೆ ಆ ಕೇಡರ್ ಅನ್ನು ಬಡಿದೆಬ್ಬಿಸುವ ಕೆಲಸವಾಗಬೇಕಿದೆ. ಕಾಂಗ್ರೆಸ್ ಕಾರ್ಯಕರ್ತ ರಲ್ಲಿ ಅಥವಾ ನಾಯಕರಲ್ಲಿ ಪಕ್ಷದ ಬಗ್ಗೆ ಅನುಮಾನ ಅಥವಾ ಅಪನಂಬಿಕೆಯಿಲ್ಲ. ಆದರೆ ಪಕ್ಷದ ನಾಯಕತ್ವದ
ವಿಷಯದಲ್ಲಿ ಆತಂಕವಿದೆ. ಆದ್ದರಿಂದ ಪಕ್ಷದ ನಾಯಕರು, ಕಾರ್ಯಕರ್ತರಲ್ಲಿ ನಾಯಕತ್ವದ ಮೇಲಿನ ವಿಶ್ವಾಸವನ್ನು ಹೆಚ್ಚಿಸುವ ಕೆಲಸವನ್ನು ಮಾಡಬೇಕಿದೆ. ಈ ಸತ್ಯವನ್ನು ಅರಿಯುವ ತನಕ ಈ ರೀತಿ ‘ಪಕ್ಷಾಂತರ’ ಎನ್ನುವ ಪ್ರಕ್ರಿಯೆ ನಿರಂತರವಾಗಿರುವುದು ನಿಶ್ಚಿತ.

Leave a Reply

Your email address will not be published. Required fields are marked *