Sunday, 1st December 2024

ನಮ್ಮ ಪ್ರಜಾಪ್ರಭುತ್ವವನ್ನು ಮುನ್ನಡೆಸುವವರು ಇವರೇ !

ವಿಶ್ಲೇಷಣೆ

ಸುರೇಂದ್ರ ಪೈ, ಭಟ್ಕಳ

ಕೇವಲ ೭೯೭ (ಶೇ.೧೦ರಷ್ಟು) ಮಹಿಳಾ ಅಭ್ಯರ್ಥಿಗಳು ಈ ಬಾರಿ ಚುನಾವಣಾ ಕಣದಲ್ಲಿದ್ದರು. ಬಿಜೆಪಿಯಲ್ಲಿ ಶೇ.೧೬ರಷ್ಟು, ಕಾಂಗ್ರೆಸ್‌ನಲ್ಲಿ ಶೇ.೧೩ರಷ್ಟು ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿತ್ತು. ಈ ವಿವರವನ್ನು ನೋಡಿದಾಗ, ಪ್ರಜಾಪ್ರತಿನಿಧಿ ಸಭೆಗಳಲ್ಲಿ ಮಹಿಳೆಯರಿಗೆ ಶೇ.೩೩ರಷ್ಟು ಸ್ಥಾನ ಸಿಗುವಂತಾಗಬೇಕೆಂಬ ಆಶಯ/ಧೋರಣೆ ಎಲ್ಲಿ ಹೋಯಿತು ಎಂಬ ಪ್ರಶ್ನೆ ಮೂಡುತ್ತದೆ.

ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ದೇಶ ಭಾರತ. ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯು ಯಾವ ದಿಶೆಯಲ್ಲಿ ನಡೆಯುತ್ತಿದೆ ಮತ್ತು ಅದರ ಗುಣಮಟ್ಟ ಹೇಗಿದೆ ಎಂಬುದನ್ನು ತಿಳಿಯಬೇಕೆಂದರೆ ನಮಗೆ ಎರಡು ಪ್ರಮುಖ ವಿಧಾನಗಳಿವೆ. ಮೊದಲನೆ
ಯದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ಶ್ರೇಯಾಂಕ ಪಟ್ಟಿ. ಉದಾಹರಣೆಗೆ ‘ವಿ-ಡೆಮ್’ (ಈಛಿಞ/ Zಜಿಛಿಠಿಜಿಛಿo ಟ್ಛ ಈಛಿಞಟ್ಚ್ಟZqs) ವರದಿ. ಇದು
ಒಂದು ದೇಶದ ಅಭಿವ್ಯಕ್ತಿ ಸ್ವಾತಂತ್ರ್ಯ, ಪಾರದರ್ಶಕ ಚುನಾವಣೆ, ನಾಗರಿಕ ಸಮಾಜಗಳ ಕುರಿತಾಗಿ ಜಾಗತಿಕ ಮಟ್ಟದಲ್ಲಿ ಶ್ರೇಯಾಂಕ ನೀಡುವ ಕೆಲಸ ಮಾಡುತ್ತದೆ.

ಆದರೆ ಇದರ ವರದಿಗಳು ಭಾರತವನ್ನು ಒಂದು ‘ಚುನಾವಣಾ ನಿರಂಕುಶಾಧಿಕಾರ’ಗಳ ಪಟ್ಟಿಯಲ್ಲಿ ಸೇರಿಸಿವೆ. ಆದ್ದರಿಂದ ಬಹುತೇಕರು ಇದನ್ನು ಒಪ್ಪಿಕೊಳ್ಳುವ ಸಾಹಸ ಮಾಡುವುದಿಲ್ಲ. ಇನ್ನು ಎರಡನೆಯ ಮಾರ್ಗವನ್ನು ನೋಡೋಣ. ಅದುವೇ ‘ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್’ (ಎಡಿಆರ್) ಸಂಸ್ಥೆ. ಇದು ಭಾರತೀಯ ಚುನಾವಣಾ ವ್ಯವಸ್ಥೆಯನ್ನು ಆಧರಿಸಿ ನಿಷ್ಪಕ್ಷಪಾತವಾಗಿ ವರದಿ ನೀಡುವ ಸಂಸ್ಥೆ. ಈ ಸಂಸ್ಥೆಯನ್ನು ೧೯೯೯ರಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಅಹಮದಾಬಾದ್‌ನ ಪ್ರಾಧ್ಯಾಪಕರ ಗುಂಪು ಸ್ಥಾಪಿಸಿತು.

ಅದೇ ವರ್ಷದಲ್ಲಿ, ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಅಪರಾಧಿಕ, ಆರ್ಥಿಕ ಮತ್ತು ಶೈಕ್ಷಣಿಕ ಹಿನ್ನೆಲೆಯನ್ನು ಬಹಿರಂಗಪಡಿಸುವಂತೆ ವಿನಂತಿಸಿ ಈ ಸಂಸ್ಥೆಯ ವತಿಯಿಂದ ದೆಹಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಸಲ್ಲಿಸಲಾಯಿತು. ಇದರ ಆಧಾರದ ಮೇಲೆ ಸುಪ್ರೀಂ ಕೋರ್ಟ್ ೨೦೦೨ರಲ್ಲಿ, ಚುನಾವಣೆಯಲ್ಲಿ ಸ್ಪರ್ಧಿಸುವ ಎಲ್ಲಾ ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ಅಫಿಡವಿಟ್
ಸಲ್ಲಿಸುವ ಮೂಲಕ, ಚುನಾವಣೆಗೆ ಮುಂಚಿತವಾಗಿ ತಮ್ಮ ಅಪರಾಧಿಕ, ಆರ್ಥಿಕ ಮತ್ತು ಶೈಕ್ಷಣಿಕ ಹಿನ್ನೆಲೆಯನ್ನು ಬಹಿರಂಗಪಡಿಸುವುದನ್ನು ಕಡ್ಡಾಯಗೊಳಿಸಿತು.

ಹೀಗೆ ಸಲ್ಲಿಕೆಯಾದ ವಿವರವನ್ನು ಆಧರಿಸಿ ಎಡಿಆರ್ ಸಂಸ್ಥೆಯು, ಮೇ ೨೯ರಂದು ಒಂದು ವಿಸ್ತೃತ ವರದಿಯನ್ನು ಬಿಡುಗಡೆ ಮಾಡಿದೆ. ಈ ಸಲದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಅಪರಾಧಿಕ ಹಿನ್ನೆಲೆ, ಆರ್ಥಿಕ ಸ್ಥಿತಿಗತಿ, ಶಿಕ್ಷಣ ಮತ್ತು ಇತರ ವಿವರಗಳ ವಿಶ್ಲೇಷಣೆಯನ್ನು
ಮಾತ್ರವಲ್ಲದೆ, ಮರು-ಸ್ಪರ್ಧೆ ಮಾಡಿದ ಸಂಸದರುಗಳ ಆಸ್ತಿಗಳ ತುಲನಾತ್ಮಕ ಅವಲೋಕನವನ್ನೂ ಇದು ಒಳಗೊಂಡಿದೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ೭ ಹಂತದ ಮತದಾನವನ್ನು ಹಮ್ಮಿಕೊಳ್ಳಲಾಗಿತ್ತು. ಒಂದರ್ಥದಲ್ಲಿ ಇದು ವಿವಿಧ ರಾಷ್ಟ್ರೀಯ/ಪ್ರಾದೇಶಿಕ ಪಕ್ಷಗಳ ಪಾಲಿಗೆ ಗದ್ದುಗೆಯನ್ನು ಹಿಡಿಯಲು ಏಳು ಸಾಗರಗಳನ್ನು ದಾಟಿ ಬರಬೇಕಾದ ಕಸರತ್ತಾಗಿತ್ತು ಎಂದರೂ ತಪ್ಪಿಲ್ಲ. ಈ ಪೈಕಿ ಯಾವ ಪಕ್ಷದ/ಒಕ್ಕೂಟದ ಅಭ್ಯರ್ಥಿಗಳು ಗದ್ದುಗೆ ಹಿಡಿಯುತ್ತಾರೆ ಎಂಬುದನ್ನು ಅರಿಯುವ ಮೊದಲು, ನಾವು ಎಂಥ ಅಭ್ಯರ್ಥಿಗಳಿಗೆ ನಮ್ಮ ಅಮೂಲ್ಯ ಮತವನ್ನು
ಹಾಕಿದ್ದೇವೆ ಎಂಬುದನ್ನು ತಿಳಿಯಲು ಯತ್ನಿಸೋಣ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಒಟ್ಟು ೮,೩೬೦ ಅಭ್ಯರ್ಥಿಗಳು ಸಲ್ಲಿಸಿರುವ ಅಫಿಡವಿಟ್ ಮಾನ್ಯವಾಗಿದೆ. ಅರ್ಥಾತ್, ಇಷ್ಟು ಜನರು ಚುನಾವಣೆಯನ್ನು ಎದುರಿಸಿದ್ದಾರೆ. ಈ ಎಲ್ಲಾ ಅಭ್ಯರ್ಥಿಗಳ ಮಾಹಿತಿಯನ್ನು ಸಮಗ್ರವಾಗಿ ವಿಶ್ಲೇಷಿಸಿದ ಬಳಿಕ, ಅಭ್ಯರ್ಥಿಗಳ ವಾಸ್ತವಿಕ ಚಿತ್ರಣ, ಇವರಿಗೂ ಹಿಂದಿನ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗೂ ಇರುವ ವ್ಯತ್ಯಾಸ, ಯಾವ ಪಕ್ಷಗಳು ಎಂಥ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತಿವೆ ಎಂಬುದು ಮತ್ತು ಅಭ್ಯರ್ಥಿಗಳ ಆಯ್ಕೆಯ ಹಿಂದೆ ಪಕ್ಷಗಳು ವಹಿಸುವ ಪಾತ್ರ ಇತ್ಯಾದಿ ವಿವರಗಳು ಅನಾವರಣಗೊಳ್ಳುತ್ತವೆ.

ಮೊದಲನೆಯದಾಗಿ, ಕಳೆದ ೪ ಚುನಾವಣೆಗಳ ಕೋಟ್ಯಧಿಪತಿ ಅಭ್ಯರ್ಥಿಗಳ ಮೇಲೆ ಕಣ್ಣು ಹಾಯಿಸೋಣ. ೨೦೦೯ ರಲ್ಲಿ ಕೇವಲ ಶೇ.೧೬ರಷ್ಟು ಕೋಟ್ಯಧಿಪತಿ ಅಭ್ಯರ್ಥಿಗಳಿದ್ದರು. ಆದರೆ ಈ ಪ್ರಮಾಣವು ೨೦೧೪ರಲ್ಲಿ ಶೇ.೨೮ಕ್ಕೆ, ೨೦೧೯ರಲ್ಲಿ ಶೇ.೨೯ಕ್ಕೆ ಮತ್ತು ೨೦೨೪ರಲ್ಲಿ ಶೇ.೩೧ಕ್ಕೆ ಏರಿತು
ಎಂಬುದು ಗಮನಿಸಬೇಕಾದ ಸಂಗತಿ. ಇನ್ನು ಪಕ್ಷವಾರು ಮಾಹಿತಿ ನೋಡಿದರೆ, ಬಿಜೆಪಿಯ ೪೪೦ ಅಭ್ಯರ್ಥಿಗಳಲ್ಲಿ ೪೦೩ ಮಂದಿ (ಶೇ.೯೩ರಷ್ಟು), ಕಾಂಗ್ರೆಸ್‌ನ ೩೨೭ ಅಭ್ಯರ್ಥಿ ಗಳ ಪೈಕಿ ಶೇ.೮೯ರಷ್ಟು ಮಂದಿ, ಬಿಎಸ್‌ಪಿಯ ೩೨೭ ಅಭ್ಯರ್ಥಿಗಳ ಪೈಕಿ ಶೇ.೩೩ರಷ್ಟು ಮಂದಿ ಹಾಗೂ ಕಮ್ಯುನಿಸ್ಟ್ ಪಕ್ಷದ ೫೮ ಅಭ್ಯರ್ಥಿಗಳ ಪೈಕಿ ೫೫ ಮಂದಿ ಕೋಟ್ಯಧಿಪತಿಗಳು.

ಇಲ್ಲಿ ನಾವು ಗಮನಿಸಬೇಕಾದ ಅಂಶ ವೆಂದರೆ, ೨೦೦೯ರಲ್ಲಿ ಬಿಜೆಪಿಯಲ್ಲಿ ಶೇ.೪೨ರಷ್ಟು ಮಾತ್ರ ಕೋಟ್ಯಧಿಪತಿ ಅಭ್ಯರ್ಥಿಗಳಿದ್ದರು; ೧೦ ವರ್ಷದ ಅಧಿಕಾ
ರಾವಧಿಯಲ್ಲಿ ಈ ಪ್ರಮಾಣ ಶೇ.೯೩ಕ್ಕೆ ಏರಿಕೆಯಾಗಿದೆ. ಆಂಧ್ರಪ್ರದೇಶದ ತೆಲುಗುದೇಶಂ ಪಕ್ಷದ ಡಾ.ಚಂದ್ರ ಶೇಖರ್ ಪೆಮ್ಮಸಾನಿ ಅವರು ೫,೭೦೫ ಕೋಟಿ ರುಪಾಯಿ ಗಳ ಒಡೆಯರಾಗಿದ್ದರೆ, ತೆಲಂಗಾಣದಲ್ಲಿ ಬಿಜೆಪಿಯ ಕೊಂಡಾ ವಿಶ್ವೇಶ್ವರ ರೆಡ್ಡಿ ೪,೫೬೮ ಕೋಟಿ, ಗೋವಾದ ಬಿಜೆಪಿಯ ಪಲ್ಲವಿ ಶ್ರೀನಿವಾಸ ಡೆಂಪೋ ೧,೩೬೧ ಕೋಟಿ ರು. ಮೌಲ್ಯದ ಆಸ್ತಿಯಿದೆ (ಇವರುಗಳ ಮಧ್ಯೆ ಶೂನ್ಯ ಆಸ್ತಿಗಳಿಕೆಯ ೪೬ ಅಭ್ಯರ್ಥಿಗಳೂ ಇದ್ದಾರೆ!). ಬಿಜೆಪಿಯಿಂದ ೨೦೧೯ರಲ್ಲಿ ಸ್ಪರ್ಧಿಸಿದ್ದ ೧೮೩ ಅಭ್ಯರ್ಥಿಗಳು ೨೦೨೪ ರಲ್ಲಿ ಪುನರಾವರ್ತನೆಯಾಗಿದ್ದು, ಇವರಲ್ಲಿ ಶೇ.೨೫ರಷ್ಟು ಮತ್ತು ಕಾಂಗ್ರೆಸ್‌ನ ೩೬ ಪುನರಾವರ್ತಿತರಲ್ಲಿ ಶೇ.೩೧ರಷ್ಟು ಸಂಪತ್ತು ಹೆಚ್ಚಾಗಿದೆ.

ಇನ್ನು ಅಪರಾಧಿಕ ಹಿನ್ನೆಲೆಯ ಕಡೆಗೆ ಕಣ್ಣು ಹಾಯಿಸೋಣ. ಈ ಸಲದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದವರ ಪೈಕಿ ೧,೬೪೩ ಅಭ್ಯರ್ಥಿಗಳು ಅಂದರೆ ಶೇ.೨೦ರಷ್ಟು ಮಂದಿ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ. ಈ ಪ್ರಮಾಣವು ೨೦೦೯ರಲ್ಲಿ ಶೇ.೧೫ರಷ್ಟಿತ್ತು. ಇನ್ನು, ೧೪ ಪ್ರತಿಶತ ಅಭ್ಯರ್ಥಿಗಳು ಅತ್ಯಾಚಾರ, ಕೊಲೆ, ಅಪಹರಣ, ಮಹಿಳಾ ದೌರ್ಜನ್ಯದಂಥ ಪ್ರಮುಖ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ. ಕೇರಳ ಬಿಜೆಪಿಯ
ಕೆ.ಸುರೇಂದ್ರನ್ ಮೇಲೆ ಗರಿಷ್ಠ ೨೪೩ ಹಾಗೂ ಕೆ.ರಾಧಾ ಕೃಷ್ಣನ್ ಮೇಲೆ ೨೪೨ ಕ್ರಿಮಿನಲ್ ಕೇಸ್ ದಾಖಲಾಗಿವೆ. ಪಕ್ಷವಾರು ವಿವರ ನೋಡುವುದಾದರೆ, ಸಿಪಿಐ(ಎಂ)ನ ಶೇ.೬೩, ಕಾಂಗ್ರೆಸ್‌ನ ಶೇ.೪೪, ಬಿಜೆಪಿಯ ಶೇ.೪೩ ಅಭ್ಯರ್ಥಿಗಳು ಕ್ರಿಮಿನಲ್ ಕೇಸ್ ಎದುರಿಸುತ್ತಿದ್ದಾರೆ.

ಎಡಿಆರ್ ಸಂಸ್ಥೆಯು ಕೆಲವಷ್ಟು ಮತಕ್ಷೇತ್ರಗಳನ್ನು ‘ರೆಡ್ ಅಲರ್ಟ್’ ಕ್ಷೇತ್ರಗಳು ಎಂದು ಹೆಸರಿಸಿದೆ. ಯಾವ ಮತಕ್ಷೇತ್ರದಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೋ ಅಂಥ ಕ್ಷೇತ್ರ ಇದರಡಿಯಲ್ಲಿ ಬರುತ್ತದೆ. ಅಂದರೆ, ಪ್ರಜೆಯ ಮತವು ಮೂರರಲ್ಲಿ ಒಬ್ಬ ಕ್ರಿಮಿನಲ್ ಅಭ್ಯರ್ಥಿಗೆ ಬೀಳುತ್ತದೆ ಎಂದರ್ಥ. ದೇಶದಲ್ಲಿ ೫೩ ಪ್ರತಿಶತ ಅಂದರೆ ೨೮೮ ಮತಕ್ಷೇತ್ರಗಳು ಈ ವ್ಯಾಪ್ತಿಯಲ್ಲಿ ಬರುತ್ತವೆ. ಎಲ್ಲಾ ಪಕ್ಷದವರು ಕ್ರಿಮಿನಲ್ ಮೊಕದ್ದಮೆ ಇಲ್ಲದ ಹಾಗೂ ತೀರಾ ಮುಖ್ಯವಲ್ಲದ ಮೊಕದ್ದಮೆ ಇರುವ ಅಭ್ಯರ್ಥಿಗಳಿಗೆ ಮಾತ್ರ ನೀಡಬೇಕು ಮತ್ತು ಇದರ ಬಗ್ಗೆ ಜನರಿಗೆ ಮಾಹಿತಿ ನೀಡಬೇಕೆಂದು ೨೦೨೦ರ ಫೆಬ್ರವರಿಯಲ್ಲಿ ತಿಳಿಸಿದ್ದರೂ ಅದು ಪಾಲನೆಯಾಗುತ್ತಿಲ್ಲ. ಇನ್ನು, ವಿದ್ಯಾರ್ಹತೆಯ ಬಗ್ಗೆ ಹೇಳುವುದಾದರೆ, ೩,೪೮೨ (ಶೇ.೪೨ರಷ್ಟು) ಅಭ್ಯರ್ಥಿಗಳು ಕೇವಲ ೫ರಿಂದ ೧೨ನೇ ತರಗತಿವರೆಗೆ ಓದಿರುವುದು ತಿಳಿದುಬರುತ್ತದೆ.

ಕೇವಲ ೭೯೭ (ಶೇ.೧೦ರಷ್ಟು) ಮಹಿಳಾ ಅಭ್ಯರ್ಥಿಗಳು ಈ ಬಾರಿ ಚುನಾವಣಾ ಕಣದಲ್ಲಿದ್ದರು. ಬಿಜೆಪಿಯಲ್ಲಿ ಶೇ.೧೬ ರಷ್ಟು, ಕಾಂಗ್ರೆಸ್‌ನಲ್ಲಿ ಶೇ.೧೩ರಷ್ಟು
ಮಹಿಳಾ ಅಭ್ಯರ್ಥಿ ಗಳಿಗೆ ಟಿಕೆಟ್ ನೀಡಲಾಗಿತ್ತು. ಈ ವಿವರವನ್ನು ನೋಡಿ ದಾಗ, ಪ್ರಜಾಪ್ರತಿನಿಧಿ ಸಭೆಗಳಲ್ಲಿ ಮಹಿಳೆಯರಿಗೆ ಶೇ.೩೩ ರಷ್ಟು ಸ್ಥಾನ ಸಿಗುವಂತಾಗಬೇಕೆಂಬ ಆಶಯ/ಧೋರಣೆ ಎಲ್ಲಿ ಹೋಯಿತು? ಎಂಬ ಪ್ರಶ್ನೆ ಮೂಡುತ್ತದೆ. ಎಡಿಆರ್ ಸಂಸ್ಥೆಯ ಈ ಅಂಕಿ-ಅಂಶಗಳನ್ನು ಗಮನಿಸಿದ ಬಳಿಕ, ಅಭ್ಯರ್ಥಿಗಳ ವಾಸ್ತವಿಕ ಸ್ಥಿತಿಗತಿ ಹಾಗೂ ಗೆದ್ದ ನಂತರ ಇವರು ದೇಶವನ್ನು ಮುನ್ನಡೆಸಬಹುದಾದ ರೀತಿಯ ಬಗ್ಗೆ ಸ್ಪಷ್ಟ ಚಿತ್ರಣ ಸಿಗುತ್ತದೆ.

ಆದರೂ, ದೇಶದ ಜನರ ಈ ವಿಷಯದಲ್ಲಿ ಹೆಚ್ಚು ಒತ್ತಡ ಹಾಕಿದಾಗ, ಇದರ ಬಗ್ಗೆ ಸಾಂವಿಧಾನಿಕ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದಾಗ ಅಥವಾ ‘ನೋಟಾ’ ಆಯ್ಕೆಗೆ ಹೆಚ್ಚು ಮತ ಬಂದಾಗ ಎರಡನೇ ಸ್ಥಾನದ ಅಭ್ಯರ್ಥಿಯನ್ನು ವಿಜಯಿ ಎಂದು ಘೋಷಿಸುವ ಬದಲಾಗಿ ಮರು
ಮತದಾನ ನಡೆಸಿ ಬೇರೆ ಅಭ್ಯರ್ಥಿಗಳಿಗೆ ಅವಕಾಶ ದೊರಕುವಂತೆ ಮಾಡಿದಾಗ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ನಿರೀಕ್ಷಿಸಲು ಸಾಧ್ಯ. ಇಲ್ಲ ವಾದಲ್ಲಿ, ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮುನ್ನಡೆಸುವವರ ಅಸಲಿಯತ್ತನ್ನು ತಿಳಿದರೂ ಏನೂ ಮಾಡಲಾಗ ದಂಥ ಪರಿಸ್ಥಿತಿ ನಮ್ಮದಾಗುತ್ತದೆ. ಆ ಕುರಿತು ಮರುಕ ಪಟ್ಟುಕೊಳ್ಳುವುದೇ ಅನಿವಾರ್ಯ ಆಯ್ಕೆಯಾಗುತ್ತದೆ.

(ಲೇಖಕರು ಹವ್ಯಾಸಿ ಬರಹಗಾರರು)