Wednesday, 9th October 2024

ಮೋದಿ ಅಮೆರಿಕ ಪ್ರವಾಸ ಚೀನಾ, ಪಾಕ್’ಗೇಕೆ ಸಿಟ್ಟು ತರಿಸಿದೆ ?

ಪ್ರಚಲಿತ

ವಿಜಯ್ ದರ‍್’ಡ, ಹಿರಿಯ ಪತ್ರಕರ್ತ,

ಅಧ್ಯಕ್ಷರು, ಲೋಕಮತ್ ಪತ್ರಿಕಾ ಸಮೂಹ

ಜಗತ್ತಿನೆಲ್ಲೆಡೆ ರಾಜತಾಂತ್ರಿಕತೆ ಎಂಬುದು ಚಿತ್ರ ತಿರುವುಗಳನ್ನು ಪಡೆಯುತ್ತಿರುವ ಹೊತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಹೋಗಿ ಬಂದಿದ್ದಾರೆ. ಈ
ಸಂದರ್ಭದಲ್ಲಿ ಯಾರು ರಾಜತಾಂತ್ರಿಕ ಲಾಭ ಪಡೆಯುತ್ತಾರೋ ಅವರೇ ಶಕ್ತಿಶಾಲಿಗಳು. ಅವರನ್ನೇ ಪ್ರಬಲ ಆಟಗಾರನೆಂದು ಜಗತ್ತು ನೋಡುತ್ತದೆ. ಭಾರತಕ್ಕೆ
ಪ್ರಬಲ ಆಟಗಾರನಾಗುವ ಅವಕಾಶದೆ. ಆದರೆ ಬಹಳ ಎಚ್ಚರಿಕೆಯಿಂದ ಆಟವಾಡಿದರೆ ಮಾತ್ರ ಅದು ಸಾಧ್ಯ. ಈ ದಾರಿಯಲ್ಲಿ ಸಾಕಷ್ಟು ಅಡೆತಡೆಗಳೂ ಇವೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕದ ಅಧ್ಯಕ್ಷ ಜೋ ಬೈಡೆನ್  ಅವರ ಸಭೆಯ ನೇರಪ್ರಸಾರ ನೀವು ನೋಡಿದ್ದರೆ ಮೋದಿಯವರ ಬಾಡಿ ಲ್ಯಾಂಗ್ವೇಜನ್ನು ಗಮನಿಸಿರುತ್ತೀರಿ. ಜತೆಗೆ ಅವರ ಸರಳವಾದ ಮಾತು ಗಳನ್ನೂ ಕೇಳಿರುತ್ತೀರಿ. ಆ ಸಭೆಯನ್ನು ನೋಡಿದರೆ ಜಗತ್ತಿನ ಅತ್ಯಂತ ಹಳೆಯ ಹಾಗೂ ಅತ್ಯಂತ ದೊಡ್ಡ ಪ್ರಜಾಪ್ರಭುತ್ವಗಳು ಎದುರು ಬದುರು ಕುಳಿತು ಮಾತನಾಡುತ್ತಿರುವಂತೆ ಹಾಗೂ ಎರಡು ಸಮಾನ ರಾಷ್ಟ್ರಗಳ ನಡುವೆ ಸಭೆ ನಡೆಯುತ್ತಿರುವಂತೆ ಕಾಣಿಸುತ್ತಿತ್ತು. ಜೋ ಬೈಡೆನ್‌ಗೆ ಭೌಗೋಳಿಕ ರಾಜಕೀಯದ ವಾಸ್ತವಗಳು ಅರ್ಥವಾಗುತ್ತಿವೆ.

ಇನ್ನು, ಮೋದಿಯವರಿಗಂತೂ ಎಲ್ಲಾ ಜಾಗತಿಕ ಸವಾಲುಗಳ ನಡುವೆ ಭಾರತಕ್ಕೊಂದು ದೊಡ್ಡ ಅವಕಾಶವಿದೆ ಎಂಬುದು ಈಗಾಗಲೇ ಗೊತ್ತಿದೆ. ಹೀಗಾಗಿ ರಾಜತಾಂತ್ರಿಕ ನಡೆಗಳನ್ನು ಜಾಣತನದಿಂದ ಇರಿಸಿದರೆ ಗಾಳಿ ಬೀಸುವ ದಿಕ್ಕನ್ನು ಭಾರತದತ್ತ ತಿರುಗಿಸಲು ಸಾಧ್ಯದೆ. ರಾಜತಾಂತ್ರಿಕತೆ ಎಂಬುದೊಂದು ಬಹಳ ಸಂಕೀರ್ಣ ವಾದ ಕಲೆ. ಅಲ್ಲಿ ಏನು ಕಾಣಿಸುತ್ತದೆಯೋ ಅದು ಆಗುವುದಿಲ್ಲ ಮತ್ತು ಏನು ಆಗುತ್ತದೆಯೋ ಅದು ಮೇಲ್ನೋಟಕ್ಕೆ ಕಾಣಿಸುವುದಿಲ್ಲ. ಇಬ್ಬರೂ ನಾಯಕರು ಅಲ್ಲಿ ಪರಸ್ಪರರನ್ನು ಹೊಗಳುತ್ತಿದ್ದರೂ ಅವರ ಮನಸ್ಸಿನೊಳಗೆ ನಾನಾ ವಿಷಯಗಳು ಹರಿದಾಡುತ್ತಿದ್ದಿರಬಹುದು.

ಭಾರತಕ್ಕೆ ಈಗ ಇರುವ ದೊಡ್ಡ ತಲೆನೋವು ಅಫ್ಘಾನಿಸ್ತಾನ. ಏಕೆಂದರೆ ಅಲ್ಲಿ ಪಾಕಿಸ್ತಾನ ಆಟವಾಡುತ್ತಿದೆ. ಜತೆಗೆ ಆ ದೇಶದ ಮೇಲೆ ಚೀನಾ ಹಿಡಿತ ಸಾಽಸಲು ಯತ್ನಿಸುತ್ತಿದೆ. ಪಾಕಿಸ್ತಾನವು ಅಫ್ಘಾನಿಸ್ತಾನದ ಭೂಮಿಯನ್ನು ಭಾರತದ ವಿರುದ್ಧ ಬಳಸುತ್ತದೆ ಎಂಬುದು ಭಾರತಕ್ಕೆ ಚೆನ್ನಾಗಿ ತಿಳಿದಿದೆ! ಅದನ್ನು ತಡೆಯಲು ಅಮೆರಿಕ ಒತ್ತಡ ಹಾಕಬೇಕೆಂದು ಭಾರತ ಬಯಸುತ್ತಿದೆ. ಇನ್ನೊಂದೆಡೆ, ಅಮೆರಿಕಕ್ಕೆ ಅಫ್ಘಾನಿಸ್ತಾನಕ್ಕಿಂತ ಚೀನಾ ಹಾಗೂ ಇರಾನ್ ಬಗ್ಗೆ ಹೆಚ್ಚು ಆತಂಕ. ಏಕೆಂದರೆ ಇತ್ತೀಚಿನ ವರ್ಷಗಳಲ್ಲಿ ಅಮೆರಿಕದ ತಾಕತ್ತಿಗೆ ಚೀನಾ ಸವಾಲೆಸೆಯುತ್ತಲೇ ಇದೆ.

ಅತ್ತ, ಇರಾನ್ ಕೂಡ ನಿರಂತರವಾಗಿ ಅಮೆರಿಕಕ್ಕೆ ಸಡ್ಡು ಹೊಡೆಯುತ್ತಿದೆ. ಅಫ್ಘಾನಿಸ್ತಾನದ ಮೇಲೆ ಇರಾನ್ ಒಂದು ಕಣ್ಣಿಟ್ಟಿರಬೇಕು ಎಂಬುದು ಕೂಡ ಅಮೆರಿಕ ಮತ್ತು ಅಫ್ಘಾನಿಸ್ತಾನದ ನಡುವೆ ನಡೆದ ಒಪ್ಪಂದಗಳಲ್ಲಿ ಒಂದು. ಚೋದ್ಯವೆಂದರೆ, ಎಪ್ಪತ್ತು ವರ್ಷಗಳ ಕಾಲ ಪಾಕಿಸ್ತಾನಕ್ಕೆ ಒಳಗೊಳಗೇ ಸಹಾಯ ಮಾಡಿದ
ಅಮೆರಿಕಕ್ಕೆ ಈಗ ಚೀನಾ ವಿರುದ್ಧದ ಯುದ್ಧದಲ್ಲಿ ತನಗೆ ಯಾರಾದರೂ ಸಹಾಯ ಮಾಡುವುದಿದ್ದರೆ ಅದು ಭಾರತ ಎಂಬುದು ಅರ್ಥವಾಗಿದೆ. ಭಾರತ ಬಹಳ ದೊಡ್ಡ ದೇಶ. ಇಲ್ಲಿ ಬಹುದೊಡ್ಡ ಮಾರುಕಟ್ಟೆಯಿದೆ. ಭಾರತವೀಗ ಬಹುದೊಡ್ಡ ಆರ್ಥಿಕ ಶಕ್ತಿ ಕೂಡ ಹೌದು.

ಚೀನಾದ ತಾಳಕ್ಕೆ ಪಾಕಿಸ್ತಾನ ಕುಣಿಯುತ್ತಿದೆ ಎಂಬುದು ಅಮೆರಿಕಕ್ಕೆ ಗೊತ್ತು. ಭಯೋತ್ಪಾದನೆ ವಿರುದ್ಧದ ಯುದ್ಧದಲ್ಲಿ ಲಕ್ಷಾಂತರ ಕೋಟಿ ಡಾಲರ್ ಗಳನ್ನು ನುಂಗಿ ನೀರು ಕುಡಿದ ಮೇಲೂ ಪಾಕಿಸ್ತಾನವು ಭಯೋತ್ಪಾದಕರಿಗೇ ಬೆಂಬಲ ನೀಡುತ್ತಿದೆ ಎಂಬುದು ಅಮೆರಿಕಕ್ಕೆ ಚೆನ್ನಾಗಿ ಅರ್ಥವಾಗಿದೆ. ಒಸಾಮಾ ಬಿನ್ ಲಾಡೆನ್‌ಗೆ ಆ ದೇಶ ಸುರಕ್ಷಿತ ಆಶ್ರಯ ನೀಡಿತ್ತು. ನಾನು ಹೇಳುವುದು ಏನೆಂದರೆ, ಅಮೆರಿಕಕ್ಕೆ ಈ ಸಮಯದಲ್ಲಿ ಭಾರತದ ಅಗತ್ಯ ತುಂಬಾ ಇದೆ. ಭಾರತವು ಜಗತ್ತಿನ ಅತಿ ದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿರುವುದರಿಂದ ಈ ಮಾರುಕಟ್ಟೆಯನ್ನು ಇನ್ನಷ್ಟು ಶಕ್ತಿಶಾಲಿಗೊಳಿಸಿದರೆ ಚೀನಾದ ಆರ್ಥಿಕ ಶಕ್ತಿಯನ್ನು ದುರ್ಬಲಗೊಳಿಸಲು ಸಾಧ್ಯವಿದೆ. ಪ್ರಸ್ತುತ ಚೀನಾದಲ್ಲಿ ಅನೇಕ ಅಮೆರಿಕನ್ ಕಂಪನಿಗಳು ಕೆಲಸ ಮಾಡುತ್ತಿವೆ. ಅವುಗಳನ್ನು ಭಾರತದ ಕಡೆ ತಿರುಗಿಸಿದರೆ ಚೀನಾದ ಆರ್ಥಿಕ ಸಾಮ್ರಾಜ್ಯಶಾತನಕ್ಕೆ ಖಂಡಿತ ಕಡಿವಾಣ ಹಾಕಬಹುದು.

ಭಾರತದಲ್ಲಿರುವಷ್ಟು ಅವಕಾಶಗಳು ಸದ್ಯದ ಮಟ್ಟಿಗೆ ಇನ್ನಾವ ದೇಶದಲ್ಲೂ ಇಲ್ಲ. ಇದೇ ವೇಳೆ, ಭಯೋತ್ಪಾದನೆ ವಿರುದ್ಧದ ಯುದ್ಧದಲ್ಲಿ ನಮಗೆ ಅಮೆರಿಕದ ಸಹಾಯ ಬೇಕು ಎಂಬುದು ಭಾರತಕ್ಕೆ ಗೊತ್ತಿದೆ. ಆದರೆ, ಎರಡೂ ದೇಶಗಳು ಸಾಮಾನ್ಯವಾಗಿ ತಮಗೇನು ಬೇಕು ಎಂಬುದನ್ನು ಸ್ಪಷ್ಟವಾಗಿ ಬಾಯಿಬಿಟ್ಟು ಹೇಳುವುದಿಲ್ಲ. ಇದು ರಾಜತಾಂತ್ರಿಕ ಅಗತ್ಯ. ಭವಿಷ್ಯದ ಬಗ್ಗೆ ಸ್ಪಷ್ಟವಾಗಿ ಏನನ್ನಾದರೂ ಹೇಳುವುದರಿಂದ ಉಭಯ ದೇಶಗಳು ಬಹಳ ಜಾಣತನದಿಂದ ನುಣುಚಿಕೊಳ್ಳಲು ಯತ್ನಿಸುತ್ತವೆ. ಈಗ ನಿಮ್ಮ ಮನಸ್ಸಿನಲ್ಲೊಂದು ಪ್ರಶ್ನೆ ಹುಟ್ಟಿಕೊಳ್ಳಬಹುದು. ಭಾರತಕ್ಕೆ ಅಮೆರಿಕದ ಅಗತ್ಯ ಹೆಚ್ಚಿದೆಯೋ ಅಥವಾ ಅಮೆರಿಕಕ್ಕೆ ಭಾರತದ ಅಗತ್ಯ ಹೆಚ್ಚಿದೆಯೋ? ನನ್ನ ಪ್ರಕಾರ ಎರಡೂ ದೇಶಗಳಿಗೆ ಪರಸ್ಪರರ ಅಗತ್ಯ ಹೆಚ್ಚಿರುವುದು ನಿಜವಾದರೂ, ಅಮೆರಿಕಕ್ಕೆ ಭಾರತದ ಅಗತ್ಯ ಒಂದು ಗುಲಂಗಜಿ ತೂಕದಷ್ಟು ಜಾಸ್ತಿಯಿದೆ. ಏಕೆಂದರೆ ಹಿಂದೆ ಯಾವತ್ತೂ ಆ ದೇಶಕ್ಕೆ ಸವಾಲೆಸೆಯದವರೆಲ್ಲ ಇಂದು ಸವಾಲು ಎಸೆಯುತ್ತಿದ್ದಾರೆ. ಅದರ ನಡುವೆಯೇ
ಜೋ ಬೈಡೆನ್‌ರ ಜನಪ್ರಿಯತೆ ಅಮೆರಿಕದಲ್ಲಿ ಬಹಳ ವೇಗವಾಗಿ ಕುಸಿಯುತ್ತಿದೆ.

ಅಫ್ಘಾನಿಸ್ತಾನದಿಂದ ತರಾತುರಿಯಲ್ಲಿ ಸೇನೆ ಹಿಂದಕ್ಕೆ ಕರೆಸಿಕೊಂಡಿದ್ದರಿಂದ ಜಾಗತಿಕ ಮಟ್ಟದಲ್ಲಿ ಅಮೆರಿಕದ ವಿಶ್ವಾಸಾರ್ಹತೆಗೆ ಧಕ್ಕೆಯುಂಟಾಗಿದೆ. ತನ್ನ ಘನತೆಗೆ ಉಂಟಾಗಿರುವ ಗಾಯ ಗುಣಪಡಿಸಿ ಕೊಳ್ಳಲು ಅಮೆರಿಕಕ್ಕೆ ಬಹಳ ಸಮಯ ಬೇಕು. ಆದ್ದರಿಂದಲೇ ಇಂದು ಅಮೆರಿಕವನ್ನು ಎಷ್ಟರಮಟ್ಟಿಗೆ ನಂಬಬಹುದು ಎಂಬ ಪ್ರಶ್ನೆಗಳನ್ನು ಭಾರತದಲ್ಲೂ ಕೇಳಲಾಗುತ್ತಿದೆ. ರಷ್ಯಾದ ಸ್ನೇಹ ಬಲಿ ಕೊಟ್ಟು ಅಮೆರಿಕದ ಸ್ನೇಹ ಗಟ್ಟಿಗೊಳಿಸಿಕೊಳ್ಳಬೇಕೇ? ರಷ್ಯಾ ನಮ್ಮ ಅತ್ಯಂತ ಹಳೆಯ ಹಾಗೂ ಬಹಳ ನಂಬಿಕಸ್ಥ ಪಾಲುದಾರ. ಆ ದೇಶಕ್ಕೆ ಬೇಸರ ತರಬಾರದು. ಇಷ್ಟಕ್ಕೂ ನಾವು ಯಾವುದೇ ದೇಶದ ಮಡಿಲಿನಲ್ಲೂ ಕುಳಿತುಕೊಳ್ಳಬಾರದು.

ಮೋದಿ ಭೇಟಿ ವೇಳೆ ಅಮೆರಿಕದಲ್ಲೇ ಕ್ವಾಡ್ ಶೃಂಗಸಭೆ ನಡೆತು. ‘ಕ್ವಾಡ್ರಲಾಟರಲ್ ದೇಶಗಳು’ ಅಂದರೆ ಅಮೆರಿಕ, ಜಪಾನ್, ಭಾರತ ಹಾಗೂ ಆಸ್ಟ್ರೇಲಿಯಾ. ಈ ದೇಶಗಳು ತಮ್ಮ ನಡುವಿನ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳುವ ನಿರ್ಧಾರ ಮಾಡಿದವು. ಇದು ಸ್ವಾಗತಾರ್ಹ ನಡೆ. ಏಕೆಂದರೆ ಕ್ವಾಡ್ ದೇಶಗಳು ಒಗ್ಗಟ್ಟಾದರೆ ಈ ಪ್ರದೇಶದಲ್ಲಿ ಚೀನಾದ ಸಾಮ್ರಾಜ್ಯಶಾತನಕ್ಕೆ ಬ್ರೇಕ್ ಹಾಕಲು ಸಾಧ್ಯವಿದೆ.

ಇದು ನಮಗೆ ಸೇನಾ ತಾಂತ್ರಿಕ ಕ್ಷೇತ್ರದಲ್ಲೂ ಸಹಾಯಕ್ಕೆ ಬರಬೇಕು. ಚೀನಾದ ಜತೆಗೆ ನಾವು ಸ್ಪರ್ಧೆ ನಡೆಸಬೇಕು ಅಂದರೆ ನಮಗೆ ಹೊಸ ತಂತ್ರಜ್ಞಾನಗಳು
ಬೇಕು. ಈ ವಿಷಯದಲ್ಲಿ ಭಾರತದ ರಾಜತಾಂತ್ರಿಕತೆ ಸರಿಯಾದ ದಿಕ್ಕಿನಲ್ಲಿ ಕೆಲಸ ಮಾಡುತ್ತಿದೆ. ಆದರೆ, ಎಲ್ಲಕ್ಕಿಂತ ಹೆಚ್ಚು ಮುಖ್ಯವಾದ ಸಂಗತಿ ಏನೆಂದರೆ,
ನಾವು ಆರ್ಥಿಕವಾಗಿ ಹೆಚ್ಚೆಚ್ಚು ಸಬಲರಾದಷ್ಟೂ ಯುದ್ಧ ಭೂಮಿಯಲ್ಲಿ ಇನ್ನಷ್ಟು ಗಟ್ಟಿಗರಾಗಿ ಮುಂದೆ ಹೋಗುತ್ತೇವೆ. ಈ ಕಾಲದಲ್ಲಿ ಯಾರ ಬಳಿ ಸಂಪತ್ತು,
ಜ್ಞಾನ ಹಾಗೂ ವಿಜ್ಞಾನವಿದೆಯೋ ಅವರ ಸ್ನೇಹ ಸಂಪಾದಿಸುವುದಕ್ಕೆ ಎಲ್ಲರೂ ಯತ್ನಿಸುತ್ತಾರೆ. ಈ ವಿಷಯವನ್ನು ನಮ್ಮ ಪ್ರಧಾನಿ ನರೇಂದ್ರ ಮೋದಿ ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ.

ಇದನ್ನು ಗಮನದಲ್ಲಿಟ್ಟುಕೊಂಡೇ ಅವರು ಅಮೆರಿಕದ ಭೇಟಿಯಲ್ಲಿ ಐದು ಅತಿದೊಡ್ಡ ಕಂಪನಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ)ಗಳನ್ನು ಭೇಟಿ
ಮಾಡಿ, ಭಾರತಕ್ಕೆ ಅವರ ಕಂಪನಿಗಳನ್ನು ಸೆಳೆಯುವ ಯತ್ನ ಮಾಡಿದರು. ಅಡೋಬ್ ಸಿಇಒ ಶಂತನು ನಾರಾಯಣನ್, ಜನರಲ್ ಆಟೋಮಿಕ್ಸ್‌ನ ವಿವೇಕ್
ಲಾಲ್, ಕ್ವಾಲ್ಕಮ್‌ನ ಕ್ರಿಸ್ಟಿಯಾನೋ ಅಮನ್, ಫಸ್ಟ್ ಸೋಲಾರ್‌ನ ಮಾರ್ಕ್ ವಿಡ್ಮನ್ ಹಾಗೂ ಬ್ಲ್ಯಾಕ್ ಸ್ಟೋನ್‌ನ ಸ್ಟೀಫನ್ ಶ್ವಾರ್ಜ್‌ಮನ್‌ರನ್ನು ಮೋದಿ
ಭೇಟಿ ಮಾಡಿದರು. ಶಂತನು ಮತ್ತು ವಿವೇಕ್ ಭಾರತೀಯ ಮೂಲದವರು. ಐಟಿ ಹಾಗೂ ಡಿಜಿಟಲ್ ಕ್ಷೇತ್ರದಲ್ಲಿ ಅಡೋಬ್ ಕಂಪನಿ ಬಹಳ ಮುಖ್ಯವಾದ ಕಂಪನಿ. ಜನರಲ್ ಆಟೋಮಿಕ್ಸ್ ಕಂಪನಿ ಮಿಲಿಟರಿ ಡ್ರೋನ್‌ಗಳನ್ನು ತಯಾರಿಸುತ್ತದೆ.

ಭಾರತ ಡ್ರೋನ್‌ಗಳನ್ನು ಖರೀದಿಸುತ್ತದೆ. ಕ್ವಾಲ್ಕಮ್ ಕಂಪನಿ ಸಾಫ್ಟವೇರ್ ಕ್ಷೇತ್ರದ ದಿಗ್ಗಜ. ಈ ಕಂಪನಿ ಸೆಮಿಕಂಡಕ್ಟರ್ ಹಾಗೂ ವೈರ್‌ಲೆಸ್ ಉಪಕರಣ
ಗಳನ್ನು ಕೂಡ ತಯಾರಿಸುತ್ತದೆ. ಫಸ್ಟ್ ಸೋಲಾರ್ ಕಂಪನಿ ಸೌರಶಕ್ತಿ ಕ್ಷೇತ್ರದಲ್ಲಿ ದೊಡ್ಡ ಹೆಸರು. ಈ ಕಂಪನಿಗಳು ನಮ್ಮಲ್ಲಿಗೆ ಬಂದರೆ ಭಾರತ ಬಹಳ
ಎತ್ತರಕ್ಕೆ ಜಿಗಿದಂತಾಗುತ್ತದೆ! ಈ ಜಿಗಿತ ಜಿಗಿಯಬೇಕಾದರೆ ಬಹಳ ಸೂಕ್ಷ್ಮವಾಗಿ, ಅತ್ಯಂತ ಕರಾರುವಾಕ್ಕಾಗಿ ಲೆಕ್ಕಾಚಾರ ಹಾಕಬೇಕು. ಅಭಿವೃದ್ಧಿ ಹೊಂದುವ ಆಸೆಯಲ್ಲಿ ಅಮೆರಿಕದ ಜತೆಗೆ ಕುರುಡಾಗಿ ಪ್ರೀತಿಗೆ ಬೀಳುವ  ಅಗತ್ಯವಿಲ್ಲ. ಅದರ ಬದಲು ನಮಗೆ ಏನು ಮುಖ್ಯ ಎಂಬುದನ್ನು ವಿಶ್ಲೇಷಣೆ ಮಾಡಬೇಕು. ಅದಕ್ಕೆ ತಕ್ಕಂತೆ ಹೆಜ್ಜೆಯಿಡಬೇಕು.

ಜಾಗತಿಕ ರಾಜಕೀಯವೆಂದರೆ ಚೆಸ್ ಆಟದ್ದಂತೆ. ಬಹಳಷ್ಟು ನಡೆಗಳು ಮುಂದಿನ ಇನ್ನಾವುದೋ ನಡೆಗೆ ಸಂಬಂಧಿಸಿರುತ್ತವೆ. ಆದರೆ ಎದುರಾಳಿಯನ್ನು
ಹೊಡೆದುಹಾಕಲು ಒಂದು ಕರಾರುವಾಕ್ ನಡೆ ಸಾಕಾಗುತ್ತದೆ.