ಅವಲೋಕನ
ಡಾ.ಆರ್.ಜಿ.ಹೆಗಡೆ
ಭಾರತೀಯನಾಗಿ ತಾನು ಸಾಂಸ್ಕೃತಿಕ ಮರುಹುಟ್ಟು ಪಡೆದ ಕಥನವನ್ನು ಗಾಂಧಿ ಹಿಂದ್ ಸ್ವರಾಜ್‌ನಲ್ಲಿ ಮತ್ತು ‘ದ ಸ್ಟೋರಿ ಆಫ್ ಮೈ ಎಕ್ಸ್ಪೆರಿಮೆಂಟ್ಸ್ ವಿಥ್ ಟ್ರೂತ್ ನಲ್ಲಿ ಹೇಳಿಕೊಳ್ಳುತ್ತಾರೆ. ತಾರುಣ್ಯದಲ್ಲಿ ಗಾಂಧಿ ಬ್ರಿಟಿಷ್ ಜೀವನ ವಿಧಾನವನ್ನೇ ಆರಾಧಿಸಿ ದ್ದರು.
ಭಾರತೀಯತೆಗೆ ‘ಅನ್ಯ’ರಾಗುವ ಮಾನಸಿಕ ಸ್ಥಿತಿಯಲ್ಲಿದ್ದರು. ಮತ್ತೆ ಅವರಿಗೆ ನಮ್ಮ ಸಂಸ್ಕೃತಿಯ ಅನನ್ಯತೆಯ ಅರಿವಾಗಿದ್ದು ತಾವು ಬ್ಯಾರಿಸ್ಟರಾಗಲು ಇಂಗ್ಲೆಂಡಿಗೆ ಹೋಗಿ ಪಾಶ್ಚಾತ್ಯ ಸಂಸ್ಕೃತಿಯೊಂದಿಗೆ ಮುಖಾಮುಖಿಯಾದಾಗಲೇ. ಈ ಸಂಸ್ಕೃತಿ ಆ
ಯುಟಿಲಿಟೇರಿಯನ್ ಸಂಸ್ಕೃತಿಗಿಂತ ಭಿನ್ನವಾಗಿ ನಿಂತು ನೈತಿಕತೆ ಮತ್ತು ಪಾರಮಾರ್ಥಿಕತೆಗೆ ನೀಡಿದ್ದ ಪ್ರಾಮುಖ್ಯತೆಯ ಅರಿವುಂಟಾಗಿದ್ದು ಅಲ್ಲಿಯೇ.
ಧರ್ಮಗಳನ್ನು ನಮ್ಮ ಸಂಸ್ಕೃತಿ ಬಳಸಿಕೊಂಡು, ಕಾಪಾಡಿಕೊಂಡು ಬಂದಿದ್ದು ಇದೇ ಉದ್ದೇಶಕ್ಕಾಗಿಯೇ ಎಂಬ ತಿಳಿವು ಮೂಡಿದ್ದು ಮತ್ತು ಇಂಥ ಸಂಸ್ಕೃತಿಯಿಂದ ‘ಹೊರಗಾಗುವ’ ವ್ಯಕ್ತಿ ತನ್ನ ನೈತಿಕ ಪ್ರಜ್ಞೆ, ಘನತೆ, ಶಕ್ತಿ, ಗೌರವ ಕಳೆದುಕೊಂಡು ನಿಲ್ಲುವ ಎಚ್ಚರ ಮೂಡಿದ್ದು. ಇಂಥ ದರ್ಶನದ ನಂತರವೇ ಗಾಂಧಿ ತಮ್ಮನ್ನು ತಾವು ಸನಾತನಿ ಹಿಂದು ಎಂದು ಕರೆದುಕೊಂಡು ತಮ್ಮ ವ್ಯಕ್ತಿತ್ವವನ್ನು, ಚಳವಳಿಯನ್ನು ದೇಸಿ, ಧಾರ್ಮಿಕ, ನೈತಿಕ ಹಂದರಗಳ ಮೇಲೆ ನಿಲ್ಲಿಸಿದ್ದು.
ಗಾಂಧಿ ಚಳವಳಿಯ ಉದ್ದೇಶ ಸ್ವಾತಂತ್ರ್ಯ ಪಡೆಯುವುದರ ಜತೆಗೆ ಒಂದು ಆದರ್ಶ ಸಮಾಜವನ್ನು, ‘ರಾಮ ರಾಜ್ಯವನ್ನು’ (ನೈತಿಕತೆಯನ್ನು ಪ್ರಧಾನವಾಗಿ ಹೊಂದಿದ ದೇಶ) ಕಟ್ಟುವುದು ಇತ್ತು. ಸಮಾಜದ ಒಳಗಿದ್ದ ಅಸಮಾನತೆಗಳನ್ನು ಓಡಿಸಿ,
ಜನರನ್ನೆಲ್ಲ ವಿಭಿನ್ನತೆಯಲ್ಲಿಯೇ ಒಂದು ಐಕ್ಯತೆಯಲ್ಲಿ ಸಂಘಟಿಸುವುದು ಇತ್ತು. ಇಂಥ ಉದ್ದೇಶವನ್ನು ಸಾಧಿಸಲು ಗಾಂಧಿ ಬಳಸಿಕೊಂಡಿದ್ದು ನಮ್ಮ ಅಸಂಖ್ಯ ಧರ್ಮ, ಜಾತಿಗಳೊಳಗೆ ಸಮಾನ ಅಂಶವಾಗಿ ಬೇರುಬಿಟ್ಟಿದ್ದ ನೈತಿಕ ಶಕ್ತಿಯನ್ನು.
ಮತ್ತೆ ಅವುಗಳಲ್ಲಿನ ವಿಕೃತಿಗಳು, ದೋಷಗಳು ಮತ್ತು ಅಮಾನವೀಯತೆಗಳ ಪರಿಚಯವೂ ಗಾಂಧಿಗೆ ಇತ್ತು. ಗೊಡ್ಡು
ಸಂಪ್ರದಾಯಗಳ ವಿರುದ್ಧ ಸಮರ ಸಾರಿದವರು ಅವರು. ಢಾಂಬಿಕ ಧಾರ್ಮಿಕತೆ, ದುಷ್ಟ ಜಾತೀಯತೆ ವಿರುದ್ಧ ಸಾಯುವವರೆಗೂ ಹೋರಾಡಿದವರು. ಆದರೂ ಈ ಧರ್ಮ, ಜಾತಿ ವ್ಯವಸ್ಥೆಗಳಿಗೆ ಜನರಿಗೆ ನೈತಿಕ ಸಂಕೋಲೆ ಹಾಕುವ ಶಕ್ತಿ ಇದೆ ಎನ್ನುವುದನ್ನು
ಗಾಂಽ ಗ್ರಹಿಸಿದ್ದರು. ಅಂದರೆ ಉದಾಹರಣೆ, ನಮ್ಮವರು ಅಂಥ (ಕೆಟ್ಟ) ಕೆಲಸ ಮಾಡುವುದಿಲ್ಲ, ಮಾಡಬಾರದು ಎನ್ನುವ ಭಾವನೆ ಅಂದಿನ ಜನರ ಮನಸ್ಸನ್ನು ಕಟ್ಟಿಹಾಕಿತ್ತು.
ವ್ಯವಸ್ಥೆ ಅಷ್ಟರ ಮಟ್ಟಿಗೆ ಒಳ್ಳೆಯದು ಎನ್ನುವ ಅರಿವು ಬಹುಶಃ ಗಾಂಧಿ ಅವರಿಗಿತ್ತು. ಆಂತರಿಕವಾಗಿ ತಿದ್ದಬೇಕು. ಮುರಿದು ಹಾಕಿದರೆ ‘ಅನೈತಿಕತೆ’ಯನ್ನು ಹತೋಟಿಯಲ್ಲಿಡುವ ಐತಿಹಾಸಿಕ ವ್ಯವಸ್ಥೆಯೇ ನಾಶವಾಗಿ ಹೋಗುತ್ತದೆ ಎಂದು ಬಹುಶಃ ನಂಬಿದವರು ಗಾಂಧಿ. ಮತ್ತೆ ದಾರ್ಶನಿಕರಾದ ರಸ್ಕಿನ್, ಥೋರೋ, ಟಾಲ್ ಸ್ಟಾಯ್ ಅವರನ್ನು ಆಳವಾಗಿ ಓದಿದ್ದ ಅವರಿಗೆ ನೈತಿಕ ಸಾಮ್ರಾಜ್ಯವೊಂದನ್ನು ಕಟ್ಟುವ ಭಾರತೀಯ ಬಗೆ ಸ್ಪಷ್ಟವಾಗಿ ಗೋಚರಿಸಿತ್ತು. ಈ ಹಿನ್ನೆಲೆಯಲ್ಲಿಯೇ ಅವರು ತಮ್ಮದೇ ಆದ, ‘ಗಾಂಧಿಯನ್ ಸೋಷಿಯಲಿಸಂ’ ಎಂದು ಕರೆಸಿಕೊಳ್ಳಲ್ಪಟ್ಟ ಸಾಮಾಜಿಕ ಆರ್ಥಿಕ ಚಿಂತನೆಯೊಂದನ್ನು ಅಭಿವೃದ್ಧಿಪಡಿಸಿದ್ದು
ಯಾವ ರೀತಿಯ ಚಿಂತನೆಗಳಿಂದ ಗಾಂಧಿ ದೂರವಾಗಿಯೇ ಇದ್ದರು ಎನ್ನುವುದನ್ನೂ ಹೇಳಬೇಕು.
(ಅಂದಿನ ಜಗತ್ತಿನ ಹಲವು ದೇಶಗಳು ಆಯ್ದುಕೊಂಡಿದ್ದ) ಪಾಶ್ಚಾತ್ಯ ಸಮಾಜವಾದಕ್ಕೆ ಗಾಂಧಿ ಆಕರ್ಷಿತರಾಗಲೇ ಇಲ್ಲ. ಏಕೆಂದರೆ ಗಾಂಧಿಗೆ ನೈತಿಕತೆಯನ್ನು ಪ್ರಧಾನವಾಗಿ ಹೊಂದಿರದ, ಜನರನ್ನು ಕೇವಲ ಆರ್ಥಿಕ ವರ್ಗಗಳನ್ನಾಗಿ ನೋಡುವ
ಐಡಿಯಾಲಜಿಯ ಕುರಿತು ಅನುಮಾನವಿತ್ತು. ಮೂಲತಃ ಧರ್ಮನಿಷ್ಟವಾಗಿದ್ದ, ಕಡುಬಡವನೂ ನೈತಿಕವಾಗಿ ಶ್ರೀಮಂತನೇ ಆಗಿದ್ದ ನಮ್ಮ ಸಮಾಜಕ್ಕೆ ಆ ತತ್ತ್ವ ಉಂಟುಮಾಡಬಹುದಾದ ಅಪಚಾರದ ಕಲ್ಪನೆ ಇತ್ತು.
ಸಿದ್ಧಾಂತ ಹೇಳುವ ರೀತಿಯ ‘ಸಮಾನತೆ’ಗೆ ಮರುಳಾಗಿ ಹೋದರೆ ಜನ ತಮ್ಮ ಧಾರ್ಮಿಕ/ ನೈತಿಕ ಹಿನ್ನೆಲೆಯಿಂದ ಹೊರಬಂದು
‘ಅನ್ಯರಾಗಿ’ ಹೋಗಿಬಿಡಬಹುದಾದ ಅಪಾಯದ ಅರಿವು ಇತ್ತು. ಹೀಗಾಗಿಯೇ ಗಾಂಧಿ ಭಾರತೀಯ ನೈತಿಕ ಬುನಾದಿಯ ಅಂಶಗಳಾದ ತ್ಯಾಗ, ಸತ್ಯ, ಆತ್ಮಗೌರವ, ಪಾಪ, ಪುಣ್ಯ, ಮೋಕ್ಷ ಇಂತಹ ಪರಿಕಲ್ಪನೆಗಳನ್ನು ಕಾಯ್ದುಕೊಂಡೇ ಬಂದು ಜನರ
ನಡವಳಿಕೆಯನ್ನು ನಿಯಂತ್ರಿಸಿದ್ದು. ನಮ್ಮ ನೈತಿಕ ವ್ಯವಸ್ಥೆಯನ್ನು ಬುಡಮೇಲು ಮಾಡಬಹುದೆಂದು ಅನಿಸಿದ್ದ ವಿಚಾರಧಾರೆಗೆ ಪ್ರೋತ್ಸಾಹ ನೀಡದಿದ್ದುದು.
ಭಾರತೀಯ ಪ್ರಜ್ಞೆಯಲ್ಲಿ ಗಾಂಧಿ ಸೃಷ್ಟಿಸಿದ ಇಂಥ ಜಾಗೃತಿಯಿಂದಾಗಿಯೇ ನಮ್ಮ ಜನ ಒಂದಾಗಿ ಸಮಾನತೆಯನ್ನು ನೈತಿಕ ನಡವಳಿಕೆಯಲ್ಲಿ ಕಂಡುಕೊಂಡು ಘನವಂತರಾಗಿ ಎದ್ದುನಿಂತಿದ್ದು. ಅಂದಿನ ಭಾರತೀಯರ ಮನಸ್ಸಿನಲ್ಲಿ ಬಲವಾಗಿ
ಬೇರುಬಿಟ್ಟಿದ್ದು ನೈತಿಕವಾಗಿ ಭ್ರಷ್ಟನಾಗದಂತೆ ಬದುಕಬೇಕೆಂಬ ಬಯಕೆ. ಕಡುಬಡವರು ಕೂಡ ಹಣಕ್ಕಾಗಿ ಬದುಕಿರಲಿಲ್ಲ. ಅವರಿಗಿದ್ದ ಬಯಕೆ ಮಾನವಂತರಾಗಿ, ಧರ್ಮವಂತರಾಗಿ ಬದುಕಿ ಮೋಕ್ಷ ಪಡೆಯುವುದು.
ಅನೈತಿಕ ಬದುಕನ್ನು ಘೋರ ಪಾಪವಾಗಿ ಕಂಡವರು ಅವರು. ಭ್ರಷ್ಟ ಸಂಪತ್ತಿಗೆ ಸವಾಲು ಹಾಕಿ ಬದುಕಿದವರು. ಹೀಗೆ ಗಾಂಧಿ ತೋರಿದ ಬೆಳಕಿನಲ್ಲಿ ಜನ ತಮ್ಮ ತಮ್ಮ ಧರ್ಮ, ಜಾತಿ, ಮತ, ಇವನ್ನೆಲ್ಲ ಇಟ್ಟುಕೊಂಡೇ ಅವನ್ನು ಮೀರಿ ಎದ್ದು ನಿಂತಿದ್ದು ಬಹುಶಃ ಆಗ ಜನತೆ ಅಪ್ಪಟ ಪ್ರಾಮಾಣಿಕರಾಗಿ ಬದುಕಿದ್ದುದಕ್ಕೆ ಕಾರಣ.
ಆದರೆ ಈಗ ಆಗಿರುವುದೇ ಬೇರೆ. ನಂತರದ ದಶಕಗಳಲ್ಲಿ ಆರಂಭವಾದ ನಮ್ಮ ಅದಃಪತನ ಕ್ರಮೇಣ ವೇಗ ಪಡೆದು ಈಗಂತೂ ಮೌಲ್ಯಗಳ ವ್ಯವಸ್ಥೆ ಕುಸಿದುಹೋದಂತಿದೆ. ಜನ ಹಣಕ್ಕಾಗಿ ಎಂಥ ಹೀನ ಕೆಲಸಕ್ಕೂ ಇಳಿಯಲು ಹೇಸದಿರುವುದು ಹೌದು.
ಎಲ್ಲೆಲ್ಲೂ ಕಾಣುತ್ತಿರುವುದು ವೈಯಕ್ತಿಕ, ಸಾಮಾಜಿಕ, ಸಾಂಸ್ಥಿಕ ಭ್ರಷ್ಟತೆಯ ಚಿತ್ರಗಳು. ಕೆಲವೇ ದಶಕಗಳ ಹಿಂದೆ ಹಾಗೆ ಇದ್ದ ಜನ ಹೀಗೇಕೆ ಆಗಿ ಹೋದರು? ಮಹತ್ವದ ಕಾರಣ ಗಾಂಧಿ ಆಗ ಬಡಿದೆಬ್ಬಿಸಿದ್ದ ನೈತಿಕ ಶಕ್ತಿ ಈಗ ನಮ್ಮ ಸಮಾಜದಲ್ಲಿ ವಿಸ್ಮೃತಿ ಯಲ್ಲಿರ ವಂತಿರುವುದು.
ಅದು ಹೇಗೆ ಘಟಿಸಿಹೋಯಿತು ಎನ್ನುವುದೇ ನಮ್ಮ ಮುಂದಿರುವ ಮಹತ್ವದ ಪ್ರಶ್ನೆ. ಬಹುಶಃ ಇದಕ್ಕೆ ಒಂದು ಕಾರಣ ಗಾಂಧಿ
ತಿರಸ್ಕರಿಸಿದಂತಿದ್ದ ಪಾಶ್ಚಾತ್ಯ ಸಮಾಜವಾದಿ ಸಿದ್ದಾಂತ ನಂತರ ಸುಮಾರು ಐವತ್ತು ವರ್ಷಗಳ ಕಾಲ ನಮ್ಮ ಮನಸ್ಸನ್ನು ಆಳಿಬಿಟ್ಟಿದ್ದು. ಕುತೂಹಲವೆಂದರೆ ಆ ತತ್ತ್ವ ಕೂಡ ಗಾಂಧಿ ತತ್ವದಂತೆ ಬಡತನ ನಿರ್ಮೂಲನೆಯ, ಸರ್ವರನ್ನೂ ಒಳಗೊಳ್ಳುವ ಸಮಾಜವೊಂದನ್ನು ಷ್ಟಿಸುವ ಮಾತನಾಡುತ್ತಲೇ ಒಳಬಂದಿದ್ದು.
ಭಾರತದಲ್ಲಿ ಅಸಮಾನತೆಗಳಿದ್ದುದು, ಇರುವುದೂ ಸುಳ್ಳಲ್ಲ. ಹೀಗಾಗಿ ಅದು ದೇಶದ ಮೇಲೆ ಭಾರೀ ಪ್ರಭಾವ ಬೀರಿತು. ಮತ್ತೆ ಸಿದ್ಧಾಂತವೇ ಕೆಟ್ಟದು ಎಂದೇನೂ ಅಲ್ಲ. ಅಥವಾ ಅದು ದೇಶಕ್ಕೆ ಮಾಡಿದ್ದೆಲ್ಲವೂ ಕೆಟ್ಟದು ಎಂದೂ ಅಲ್ಲ. ಅದರಲ್ಲಿಯೂ
ಕೆಲವು ಹಿರಿಯ ನಾಯಕರು ಚಳವಳಿಗೆ ದೇಸೀ ಸ್ವರೂಪ ನೀಡಿದರು.
ಈ.ಎಂ.ಎಸ್.ನಂಬೂದರಿಪಾದ್, ಜಯಪ್ರಕಾಶ್ ನಾರಾಯಣ್, ಜ್ಯೋತಿ ಬಸು, ಇಂದಿರಾ ಗಾಂಧಿ, ದೇವರಾಜ ಅರಸು, ಜಾರ್ಜ್ ಫೆರ್ನಾಂಡಿಸ್ ಮತ್ತಿತರ ಹಿರಿಯರು ಸಿದ್ಧಾಂತದ ತತ್ತ್ವಗಳನ್ನು ಬಡತನ ನಿರ್ಮೂಲನೆಯಲ್ಲಿ, ಸಾಮಾಜಿಕ ಪಿಡುಗುಗಳ
ನಿವಾರಣೆಯಲ್ಲಿ ಸಶಕ್ತವಾಗಿಯೇ ಬಳಸಿಕೊಂಡರು. ಹಾಗೆಯೇ ದೇಶಾದ್ಯಂತ ಲಕ್ಷಾಂತರ ಪ್ರಗತಿಶೀಲರು ಬಹುಶಃ ಅನಂತ ಮೂರ್ತಿಯವರ, ಲಂಕೇಶರ ಹಾಗೆ, ಗಾಂಧಿ ಮತ್ತು ಪಾಶ್ಚಾತ್ಯ ಸಮಾಜವಾದ ಎರಡರ ಪ್ರಭಾವದಲ್ಲಿಯೂ ಬಂದು, ಮತ್ತೆ ಅದೇ
ಸಮಯದಲ್ಲಿ ಎರಡೂ ಚಿಂತನೆಗಳ ಮಿತಿಗಳೂ ಕಣ್ಣಿಗೆ ಬಿದ್ದು ತೀವ್ರ ಗೊಂದಲಗಳಲ್ಲಿಯೂ ಸಿಲುಕಿದ್ದರು.
ಆದರೆ ಇಂದಿನ ವಿಪರೀತದ ನೈತಿಕ ಸಮಸ್ಯೆಗಳನ್ನು ಸೃಷ್ಟಿಸಿದ್ದು ಸಿದ್ಧಾಂತದ ಒಂದು ಪಂಥದ ‘ಉಗ್ರ’ (ಸೆಮಿನಾರುಗಳಲ್ಲಿ ಬೀಫ್ ತಿಂದು ತೋರಿಸಿಸುವುದನ್ನೇ ಹಿರಿಮೆಯಾಗಿಸಿಕೊಂಡ, ನಂಬಿಕೆಯ ಮೂಲಗಳಾದ ದೇವರು, ಧರ್ಮಗಳ ಕುರಿತು ಕೀಳು ಭಾಷೆಯಲ್ಲಿ ಮಾತನಾಡುವುದನ್ನು ಬಂಡಾಯವೆಂದುಕೊಂಡ) ತಿಕ್ಕಲು ವ್ಯಕ್ತಿತ್ವದವರು ನಡೆದ ದಾರಿ. ಈ ಪಂಥವು ಕ್ರಮೇಣ ಚಳವಳಿಯ ನೇತೃತ್ವವನ್ನು ಹಿಡಿದು ನಮ್ಮ ಇಡೀ ಸಂಸ್ಕೃತಿ ಮತ್ತು ಸಾಮಾಜಿಕ ವ್ಯವಸ್ಥೆ ಸಾರಾಸಗಟಾಗಿಯೇ
ತಿರಸ್ಕರಿಲರ್ಹ ವಾದ ಅಮಾನವೀಯ ವ್ಯವಸ್ಥೆಯಂತೆ ಕಂಡುಬಂದಿತ್ತು.
ಅಲ್ಲದೆ ಅದು ಚಳವಳಿಯನ್ನು ಬುದ್ಧ, ಶಂಕರರು, ಬಸವಣ್ಣ, ಭಕ್ತಿ ಚಳವಳಿಗಳು, ಕನಕ, ಪುರಂದರ, ಶಿಶುನಾಳ ಶರೀಫ್, ಗಾಂಧಿ ಹಾಗೆ ಇತಿಹಾಸದ ಭಾಗವಾದ ಚಳವಳಿಯನ್ನಾಗಿ ರೂಪಿಸದೆ ಜನರನ್ನು ನಮ್ಮ ಇತಿಹಾಸದಿಂದ ಹೊರಗಡೆ ತಂದು ಅವರನ್ನು
‘ಜಾತ್ಯತೀತ, ಧರ್ಮರಹಿತ’ ವ್ಯಕ್ತಿಗಳನ್ನಾಗಿ ನಿರೂಪಿಸಲು ಪ್ರಯತ್ನಿಸಿತು. ಮತ್ತು ‘ಜಾತ್ಯತೀತ ಸಮಾಜವೊಂದನ್ನು’ ಕಟ್ಟಲು ಯತ್ನಿಸಿತು.
ನಮ್ಮ ನೈತಿಕ ವ್ಯವಸ್ಥೆಯನ್ನೇ ಮೂಲೋತ್ಪಾಟನೆ ಮಾಡಲು ಪ್ರಯತ್ನಿಸಿತು. ಇತಿಹಾಸವನ್ನು ಗೇಲಿ ಮಾಡುತ್ತ ಜನರಲ್ಲಿ ಕೀಳರಿಮೆ ಬೆಳೆಸುತ್ತ ಹೋಯಿತು. ಮೌಲ್ಯಗಳ ಚೌಕಟ್ಟನ್ನು ಮುರಿದುಹಾಕಿತು. ಜನರನ್ನು ಕೂಡಿಸುವ ಗಾಂಧಿ ಪ್ರಯತ್ನಕ್ಕೆ ವಿರುದ್ಧವಾಗಿ ನಡೆಯಲು ಪ್ರಯತ್ನಿಸಿತು. ಈ ಹುಚ್ಚಿಗೆ ಸಿಲುಕಿಕೊಂಡ ಸಾರ್ವಜನಿಕ ಬದುಕು ತನ್ನ ಪರಂಪರೆಯನ್ನು ಬಿಟ್ಟು
ಸಂಕೋಲೆಗಳನ್ನು ಬಿಚ್ಚಿಹಾಕಿ ಬಯಲಲ್ಲಿ ಬಂದು ನಿಂತಿತು. ಸಂಸ್ಕೃತಿಯಿಂದ ಹೊರಬಂದ ಜನ ಜಾತ್ಯತೀತರಾಗಿ ಹೋದರು.
ರಾಮಾಯಣ, ಮಹಾಭಾರತ, ನೀತಿಕಥೆಗಳು, ಧರ್ಮಗಳು, ನಂಬಿಕೆಗಳು ಹಾಸ್ಯದ ವಿಷಯಗಳಾಗಿ ಹೋದವು.
ಇನ್ನೂ ಮಹತ್ವದ ವಿಷಯವೆಂದರೆ ಕೆಲವರು ಸಂಸ್ಕೃತಿಯ ಅವಹೇಳನವನ್ನು ಒಂದು ರಾಜಕೀಯ ಅಸವಾಗಿ ಬಳಸಿಕೊಂಡು ರಾಜಕೀಯವನ್ನು ಆರಂಭಿಸಿದರು. ಇಂಥವರ ಕೈಯಲ್ಲಿ ಮಾಧ್ಯಮಗಳು, ಅಧಿಕಾರ ಇದ್ದವು. ಶಿಕ್ಷಣದ ನೀತಿ ನಿರೂಪಣೆಯ
ಜವಾಬ್ದಾರಿಯೂ ಇತ್ತು. ನಂತರ ನಮ್ಮ ಮನಸ್ಸನ್ನು ಆಳಿದ್ದು ಒಂದು ಸಿದ್ಧಾಂತದ ರಾಜಕೀಯಕರಣವನ್ನು ಎತ್ತಿ ಹಿಡಿದ ಪಠ್ಯಪುಸ್ತಕಗಳು. ಅಂಥ ಗುಂಗಿನಲ್ಲಿದ್ದ ಪ್ರಾಧ್ಯಾಪಕರುಗಳು ಮತ್ತು ಶಿಕ್ಷಕರು. ಸಂಸ್ಕೃತಿಯ ಲಯ ನಮ್ಮ ಶಾಲೆಗಳಿಂದ, ಸಮಾಜದಿಂದ ಮಾಯವಾಗಿ ಹೋಯಿತು.
ಸಮಾಜವಾದಿ ಚಿಂತಕರು ಹಲವೊಮ್ಮೆ ಯುವ ಜನತೆಯಲ್ಲಿರುವ ಸಹಜವಾದ ಆದರ್ಶದ ಮನೋವೇದಿಕೆಯನ್ನು ಇತಿಹಾಸವನ್ನು ಹೀಗಳೆಯಲು ಬಳಸಿಕೊಂಡರು. ಇಂಥ ಮಾತುಗಳನ್ನು ಆಡಿದವರು ಬುದ್ಧಿಜೀವಿಗಳಾಗಿ ವಿಜೃಂಭಿಸಿದರು. ಸಂಸ್ಕೃತಿಯ, ಇತಿಹಾಸದ ತೇಜೋವಧೆ ಮಾಡುವುದು ಈಗ ಒಂದು ಜನಪ್ರಿಯ ಹವ್ಯಾಸವಾಗಿ, ಪ್ರಚಾರದ ತಂತ್ರವಾಗಿ,
ಸ್ಟಾಂಡ್ ಅಪ್ ಕಾಮೆಡಿಯಾಯಿತು. ಬಯಲಲ್ಲಿ ನಿಂತ ಜನ ಪಾಪ ಪುಣ್ಯಗಳ ಪ್ರಜ್ಞೆ ಕಳೆದುಕೊಂಡು ನಿಂತರು.
ತಮ್ಮ ಪೂರ್ವಜರು ತೋರಿದ್ದ ಘನತೆಯನ್ನೆಲ್ಲ ಮರೆತು ಭಯ ತೊರೆದು, ಕಟ್ಟುಪಾಡು ಬಿಚ್ಚಿ ಹಾಕಿ ಭ್ರಷ್ಟಚಾರದಲ್ಲಿ, ಅನೈತಿಕತೆಯಲ್ಲಿ ಮುಳುಗಿದರು. ಜಾಗತೀಕರಣವೂ ನಮ್ಮನ್ನು ಆಳವಾಗಿಯೇ ಬಾಧಿಸಿದೆ. ವ್ಯಂಗ್ಯದ ವಿಷಯವೆಂದರೆ ಇಂಥ
ಸಮಾಜವಾದಿ ಚಿಂತಕರು ಜಾಗತೀಕರಣವನ್ನು ಎಷ್ಟೇ ವಿರೋಧಿಸಿದರೂ ಅದು ಭಾರಿ ಪ್ರಮಾಣದಲ್ಲಿ ಬೆಳೆದು ನಿಲ್ಲಲು ಬೇಕಿದ್ದ ರೀತಿಯ (ಮೌಲ್ಯ ರಹಿತ) ಮನಸ್ಸುಗಳನ್ನು ಸೃಷ್ಟಿಸಿಬಿಟ್ಟಿದ್ದರು. ನಮ್ಮ ಜನ ಈಗಾಗಲೇ ಹೊರಬಂದು ನಿಂತು ಸಾಂಸ್ಕೃತಿಕವಾಗಿ
ನ್ಯೂಟ್ರಲ್ ಆಗಿಹೋಗಿದ್ದರು. ಮತ್ತೆ ಮೈದಾನ ಖಾಲಿಯಾಗಿಯೇ ಇತ್ತು.
‘ಸ್ವದೇಶ’ದಿಂದ ಹೊರಬಂದವರು ವಿದೇಶಿಯಾಗಲೇ ಬೇಕಲ್ಲ? ನಮ್ಮ ಜನ ಈಗಾಗಲೇ ಹೊರಬಂದು ನಿಂತು ಸಾಂಸ್ಕೃತಿಕವಾಗಿ ನ್ಯೂಟ್ರಲ್ ಆಗಿಹೋಗಿದ್ದರು. ಮತ್ತೆ ಈಗ ಜಾಗತೀಕರಣ ನೈತಿಕ ಅಧೋಗತಿಯ ವೇಗವನ್ನು ಅಧಿಕಗೊಳಿಸಿದೆ. ಇದನ್ನೆಲ್ಲ ಹೇಳಿದ್ದು ನಮ್ಮ ಇತಿಹಾಸವನ್ನು ಅತಿಯಾಗಿ ರಂಜಿಸಿಕೊಂಡು, ಒಂದು ಹೈಪರ್ ನ್ಯಾಷನಲಿಸಂ ಅನ್ನು ಸೃಷ್ಟಿಸಬೇಕಿತ್ತು. ಅಥವಾ ಸೃಷ್ಟಿಸಬೇಕು ಎಂದೇನೂ ಅಲ್ಲ. ಅಥವಾ ನಮ್ಮ ಧರ್ಮ, ಜಾತಿ ವ್ಯವಸ್ಥೆ ಸರಿ ಇತ್ತು ಎಂದು ಹೇಳುವುದೂ ಉದ್ದೇಶವಲ್ಲ. ಜಾತಿ ವ್ಯವಸ್ಥೆ ಇತಿಹಾಸದಲ್ಲಿ ದೊಡ್ಡ ದುರಂತಗಳಿಗೆ ಕಾರಣವಾಗಿದೆ.
ನಿಜ. ಆದರೆ ನಿಜಕ್ಕೂ ನಮ್ಮ ಆಂತರಿಕ ಸುಧಾರಣೆಯ ದಾರಿ ಇದ್ದದ್ದು, ಇರುವುದು ಜನರನ್ನು ವ್ಯವಸ್ಥೆಯಿಂದ ಹೊರತರುವು ದರಲ್ಲಿ ಅಲ್ಲ. ದಾರಿ ಇದ್ದದ್ದು, ಇರುವುದು ಆಂತರಿಕವಾದ ನೈತಿಕ ಚಳವಳಿಗಳಲ್ಲಿ. ಮತ್ತು ಕಾನೂನಾತ್ಮಕ ಕ್ರಮಗಳಲ್ಲಿ.
ಕುಸಿದ ಸಾಮಾಜಿಕ ಮತ್ತು ನೈತಿಕ ವ್ಯವಸ್ಥೆಯನ್ನು ಸರಿಪಡಿಸುವ ಮಾರ್ಗ ಒಂದೇ. ಗಾಂಧಿ ತೋರಿದ ಮಾರ್ಗವನ್ನು ಮತ್ತೆ ಎತ್ತಿ ಹಿಡಿಯುವುದು. ಹಾಗೆಂದು ಅದೆಲ್ಲ ಸುಲಭವೇನೂ ಅಲ್ಲ. ಏಕೆಂದರೆ ನಮ್ಮ ಧರ್ಮಗಳ ಸ್ವರೂಪಗಳೂ ಇಂದು ಬದಲಾಗಿ ಹೋಗಿದ್ದು ಅವು ಕೂಡ ತಮ್ಮ ಮುಗ್ದತೆಯನ್ನು ಕಳೆದುಕೊಂಡು ಕುಳಿತಿರುವಂತೆ ಅನಿಸುತ್ತಿದೆ. ಆದರೂ ಅದನ್ನು
ಮಾಡಲೇಬೇಕು.
ನಮಗೆ ಉಳಿದಿರುವ ಒಂದು ದಾರಿಯೆಂದರೆ ಆ ಸಂಸ್ಕೃತಿಯನ್ನು ಅದರ ಮಾನವೀಯತೆಯನ್ನು, ನೈತಿಕತೆಯನ್ನು ಮತ್ತೆ ನಮ್ಮ ಕರಿಕ್ಯುಲಮ್‌ನ ಭಾಗವಾಗಿಸುವದು. ನಮ್ಮ ಪರಂಪರೆಯ ಪಠ್ಯಗಳನ್ನು, ಇತಿಹಾಸವನ್ನು ಬೋಧಿಸುವುದು. ಪ್ರಸ್ತುತದ ನಮ್ಮ
ನೈತಿಕ ಸವಾಲುಗಳಿಗೆ ಬಹುಶಃ ಉತ್ತರ ಇದು.