Saturday, 14th December 2024

ಒಂದು ದೇಶ ಒಂದು ಚುನಾವಣೆಗೆ ವಿರೋಧವೇಕೆ?

-ಡಾ.ವಿಜಯ್ ದರಡಾ

ಚುನಾವಣೆಯಂದು ಮತಗಟ್ಟೆಗೆ ಹೋಗಿ ನಿಮ್ಮ ಕ್ಷೇತ್ರದ ಶಾಸಕ ಹಾಗೂ ಸಂಸದರನ್ನು ಒಂದೇ ಸಲ ಆಯ್ಕೆ ಮಾಡುವುದನ್ನು ಕಲ್ಪಿಸಿಕೊಳ್ಳಿ! ಈಗ ನಾವು ಲೋಕಸಭೆಗೆ ಒಂದು ಸಲ, ರಾಜ್ಯ ವಿಧಾನಸಭೆಗೆ ಇನ್ನೊಂದು ಸಲ ಪ್ರತ್ಯೇಕವಾಗಿ ಮತದಾನ ಮಾಡುತ್ತಿದ್ದೇವೆ. ಶಾಸಕರನ್ನೂ, ಸಂಸದರನ್ನೂ ಬೇರೆ ಬೇರೆ ಸಲ ಚುನಾಯಿಸುತ್ತಿದ್ದೇವೆ. ಆದರೆ ಯುವ ಮತದಾರರು ಅರಿಯಬೇಕಾದ ಸಂಗತಿಯೇನು ಗೊತ್ತಾ? ಸ್ವತಂತ್ರ ಭಾರತದಲ್ಲಿ ೧೯೫೧- ೫೨ರಲ್ಲಿ ಮೊದಲ ಚುನಾವಣೆ ನಡೆದಾಗ ಸಂಸತ್ತಿಗೂ, ರಾಜ್ಯ ವಿಧಾನಸಭೆಗಳಿಗೂ ಏಕಕಾಲಕ್ಕೆ ಮತದಾನವಾಗಿತ್ತು. ನಂತರ ೧೯೫೭, ೧೯೬೨ ಮತ್ತು ೧೯೬೭ರಲ್ಲೂ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಒಮ್ಮೆಗೇ ಚುನಾವಣೆ ನಡೆದಿತ್ತು. ನಂತರ ಕೆಲ ರಾಜ್ಯ ಸರಕಾರಗಳನ್ನು ಅವಧಿಗೆ ಮುನ್ನವೇ ವಿಸರ್ಜಿಸಿದ್ದರಿಂದ ಈ ವ್ಯವಸ್ಥೆ ಹಳಿತಪ್ಪಿತು. ಹೀಗೆ ಅವಧಿಪೂರ್ವವಾಗಿ ವಿಸರ್ಜನೆಗೊಂಡ ಸರಕಾರಗಳು, ಪೂರ್ಣಾವಧಿ ಪೂರೈಸುವ ರಾಜ್ಯಗಳಿಗಿಂತ ಮೊದಲೇ ಚುನಾವಣೆಗೆ ಹೋಗಬೇಕಾಯಿತು. ನಂತರ ರಾಜಕಾರಣದಲ್ಲಿ ಹಣದ ಕುಣಿತ ಶುರುವಾಗಿ ಚುನಾವಣೆಗಳಲ್ಲಿ ಅದರ ಹರಿವು ಜೋರಾಯಿತು. ಚುನಾವಣೆಗಳು ಸರಕಾರಕ್ಕೂ ರಾಜಕೀಯ ಪಕ್ಷಗಳಿಗೂ ದುಬಾರಿಯಾದವು. ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬರು ಇಂತಿಷ್ಟೇ ಖರ್ಚುಮಾಡಬೇಕೆಂದು ಆಯೋಗ ನಿಗದಿಪಡಿಸಿದ್ದ ವೆಚ್ಚದ ಮಿತಿ ಬಹಳ ಕಮ್ಮಿಯಿತ್ತು. ಒಂದು ಐಷಾರಾಮಿ ಮದುವೆಯಲ್ಲಿ ನೀರು ಮತ್ತು ಚಹಾ ಖರ್ಚಿಗೇ ಅದಕ್ಕಿಂತ ಹೆಚ್ಚು ಹಣ ಬೇಕಾಗಿತ್ತು! ಆದರೆ, ಚುನಾವಣೆಯಲ್ಲಿ ಖರ್ಚುಮಾಡುವ ಹಣ ಜನರದ್ದು, ಹೀಗಾಗಿ ಅದಕ್ಕೊಂದು ಮಿತಿ ವಿಧಿಸಲೇಬೇಕಿತ್ತು.

ಭಾರತದಲ್ಲೀಗ ಪ್ರತಿವರ್ಷ ಒಂದಲ್ಲಾ ಒಂದು ಕಡೆ ಚುನಾವಣೆಗಳು ನಡೆಯುತ್ತಲೇ ಇರುತ್ತವೆ. ಲೋಕಸಭೆ ಮತ್ತು ವಿಧಾನಸಭೆಗೆ ಮಾತ್ರವಲ್ಲದೆ, ಗ್ರಾಮ-ತಾಲೂಕು-ಜಿಲ್ಲಾ ಪಂಚಾಯತಿಗಳು, ನಗರಸಭೆ, ನಗರಪಾಲಿಕೆ ಹೀಗೆ ಯಾವಾಗಲೂ ಚುನಾವಣೆಗಳು ನಡೆಯುತ್ತಿರುತ್ತವೆ. ಚುನಾವಣಾ ಆಯೋಗವಂತೂ ಕೇಂದ್ರದಿಂದ ಆರಂಭಿಸಿ ರಾಜ್ಯಗಳವರೆಗೆ ಚುನಾವಣಾ ಕರ್ತವ್ಯದಲ್ಲೇ ಯಾವಾಗಲೂ ವ್ಯಸ್ತವಾಗಿರುತ್ತದೆ. ರಾಜಕೀಯ ಪಕ್ಷಗಳ ನಾಯಕರು ಮತ್ತು ಸರಕಾರಗಳಲ್ಲಿರುವ ಸಚಿವರು ತಮ್ಮ ತವರು ರಾಜ್ಯಗಳಲ್ಲಿ ಚುನಾವಣಾ ಪ್ರಚಾರ ಮತ್ತಿತರ ಕಾರ್ಯಗಳಲ್ಲಿ ವ್ಯಸ್ತರಾಗುವುದರಿಂದ ಅದು ಆಡಳಿತದ ಮೇಲೆ ಪರಿಣಾಮ ಬೀರುತ್ತದೆ. ಚುನಾವಣೆ ಘೋಷಣೆಯಾದ ತಕ್ಷಣ ಚುನಾವಣಾ ನೀತಿಸಂಹಿತೆಯೂ ಜಾರಿಯಾಗುತ್ತದೆ. ಈ ಅವಧಿಯಲ್ಲಿ ಸರಕಾರಗಳು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಂತಿರುವುದಿಲ್ಲ. ಹೀಗಾಗಿ ಅಭಿವೃದ್ಧಿ ಕಾಮಗಾರಿಗಳೂ ಸ್ಥಗಿತಗೊಂಡುಬಿಡುತ್ತವೆ. ಚುನಾವಣೆಯ ವೇಳೆ ಅರೆಸೇನಾ ಪಡೆಗಳನ್ನೂ ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗುತ್ತದೆ. ಈ ಎಲ್ಲ ಕಾರಣಗಳಿಂದಾಗಿ, ದೇಶದಲ್ಲಿ ಏಕಕಾಲಿಕ ಚುನಾವಣೆ ನಡೆಸುವ ಪರಿಪಾಠವನ್ನು ಮತ್ತೆ ಜಾರಿಮಾಡಬೇಕೆಂದು ಚುನಾವಣಾ ಆಯೋಗವು ೧೯೮೩ರಲ್ಲಿ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿತ್ತು.

ಆದರೆ ಅಂದು ಅಧಿಕಾರದಲ್ಲಿದ್ದ ಸರಕಾರ ಆ ಪ್ರಸ್ತಾವವನ್ನು ತಿರಸ್ಕರಿಸಿತ್ತು. ನಂತರ ೧೯೯೮-೯೯ರಲ್ಲಿ ಕಾನೂನು ಆಯೋಗವು ಕೇಂದ್ರ ಸರಕಾರಕ್ಕೆ ಮತ್ತದೇ ಶಿಫಾರಸನ್ನು ಮಾಡಿತು. ಸಾಕಷ್ಟು ಅಧ್ಯಯನದ ಬಳಿಕವೇ ಅದು ಏಕಕಾಲಿಕ ಚುನಾವಣಾ ವ್ಯವಸ್ಥೆಯ ಮರುಜಾರಿಗೆ ಮನಸ್ಸು ಮಾಡಿತ್ತು ಮತ್ತು ಅದಕ್ಕಾಗಿ ಸಂವಿಧಾನಕ್ಕೆ ೫ ತಿದ್ದುಪಡಿ ತರುವಂತೆ ತನ್ನ ಶಿಫಾರಸಿನಲ್ಲಿ ಹೇಳಿತ್ತು. ಆದರೆ ಕಾನೂನು ಆಯೋಗದ ಶಿಫಾರಸನ್ನೂ ಕೇಂದ್ರ ಸರಕಾರ ನಿರ್ಲಕ್ಷಿಸಿತು. ನಂತರ ಏಕಕಾಲಿಕ ಚುನಾವಣೆಯ ಬಗ್ಗೆ ಬೇರೆ ಬೇರೆ ವೇದಿಕೆಗಳಲ್ಲಿ ಚರ್ಚೆಗಳು ನಡೆಯಲು ಶುರುವಾದವು. ಈಗಿನ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ೨೦೧೪ರ ಲೋಕಸಭೆ ಚುನಾವಣೆಗೆ ಬಿಜೆಪಿ ಪ್ರಚಾರ ಆರಂಭಿಸಿದಾಗ, ‘ಒಂದು ದೇಶ, ಒಂದು ಚುನಾವಣೆ’ ನಡೆಸುವ ಬಗ್ಗೆ ಅದರ ಪ್ರಣಾಳಿಕೆಯಲ್ಲಿ ಸ್ಪಷ್ಟ ಭರವಸೆ ನೀಡಲಾಯಿತು. ಚುನಾವಣೆಯಲ್ಲಿ ಗೆದ್ದು ಮೋದಿ ಪ್ರಧಾನಿಯಾದ ನಂತರ ೨೦೧೬ರಲ್ಲಿ ಮತ್ತೆ ಅವರು ಈ ವಿಷಯದ ಚರ್ಚೆಗೆ ನಾಂದಿಹಾಡಿದರು. ೨೦೧೭ರಲ್ಲಿ ನೀತಿ ಆಯೋಗ ಈ ಬಗ್ಗೆ ವರದಿಯೊಂದನ್ನು ಮಂಡಿಸಿತು. ನಂತರ ೨೦೧೯ರಲ್ಲಿ ಮೋದಿಯವರು ಮತ್ತೆ ಪ್ರಧಾನಿಯಾದ ಮೇಲೆ, ಇತ್ತೀಚೆಗೆ ಸರ್ವಪಕ್ಷಗಳ ಸಭೆ ಕರೆದು ಏಕಕಾಲಿಕ ಚುನಾವಣೆ ಬಗ್ಗೆ ಚರ್ಚಿಸಿದರು. ಆದರೆ ಕಾಂಗ್ರೆಸ್  ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಈ ಸಭೆಯನ್ನು ಬಹಿಷ್ಕರಿಸಿದವು. ತನ್ಮೂಲಕ ಈ ಪ್ರಸ್ತಾವಕ್ಕೆ ತಮ್ಮ ವಿರೋಧವಿದೆ, ತಾವು ಈ ಬಗೆಗಿನ ಚರ್ಚೆಗೂ ಸಿದ್ಧರಿಲ್ಲ ಎಂಬುದನ್ನು ಸೂಚಿಸಿದವು.

‘ಒಂದು ದೇಶ, ಒಂದು ಚುನಾವಣೆ’ ವ್ಯವಸ್ಥೆ ಜಾರಿಗೆ ಈಗಿನ ಕೇಂದ್ರ ಸರಕಾರ ದೃಢವಾದ ಹೆಜ್ಜೆಗಳನ್ನಿಡುತ್ತಿದೆ. ಏಕಕಾಲಿಕ ಚುನಾವಣೆ ನಡೆಸಲು ತಾನು ಸನ್ನದ್ಧನಾಗಿದ್ದೇ ನೆಂದು ಚುನಾವಣಾ ಆಯೋಗವೂ ಕಳೆದ ವರ್ಷವೇ ಹೇಳಿದೆ. ಈಗ ಕೇಂದ್ರ ಸರಕಾರ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಈ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಸೂಚಿಸಿದೆ. ಈ ಸಮಿತಿಯಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ, ಲೋಕಸಭೆಯ ವಿಪಕ್ಷ ನಾಯಕ ಅಧೀರ್ ರಂಜನ್ ಚೌಧರಿ, ಹಿರಿಯ ನ್ಯಾಯವಾದಿ ಹರೀಶ್ ಸಾಳ್ವೆ, ಮಾಜಿ ಕಾಂಗ್ರೆಸಿಗ ಗುಲಾಂ ನಬಿ ಆಜಾದ್, ಹಣಕಾಸು ಆಯೋಗದ ಮಾಜಿ ಚೇರ್ಮನ್ ಎನ್.ಕೆ.
ಸಿಂಗ್, ಲೋಕಸಭೆಯ ಮಾಜಿ ಕಾರ್ಯದರ್ಶಿ ಸುಭಾಷ್ ಸಿ. ಕಶ್ಯಪ್ ಮತ್ತು ಮಾಜಿ ಮುಖ್ಯ ವಿಚಕ್ಷಣಾ ಆಯುಕ್ತ ಸಂಜಯ್ ಕೊಠಾರಿ ಸದಸ್ಯರಾಗಿದ್ದಾರೆ. ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಸಮಿತಿಯಲ್ಲಿನ ವಿಶೇಷ ಆಹ್ವಾನಿತರಾಗಿದ್ದಾರೆ. ಕಾನೂನು ಕಾರ್ಯದರ್ಶಿ ನಿತಿನ್ ಚಂದ್ರರನ್ನು ಸದಸ್ಯ ಕಾರ್ಯದರ್ಶಿಯನ್ನಾಗಿ ಮಾಡಲಾಗಿದೆ. ಏಕಕಾಲಿಕ ಚುನಾವಣೆಗೆ ಕಾಂಗ್ರೆಸ್‌ನ ವಿರೋಧವಿರುವ ಕಾರಣ, ಸಮಿತಿ ರಚನೆಯ ಬೆನ್ನಲ್ಲೇ ಅದರ ಭಾಗವಾಗಲು ಅಧೀರ್ ರಂಜನ್ ನಿರಾಕರಿಸಿದ್ದಾರೆ. ಇದರ ಹಿಂದೆಯೇ ಇನ್ನಷ್ಟು ವಿರೋಧದ ದನಿಗಳು ಕೇಳಿಬರುತ್ತಿವೆ. ಆದರೆ ದೇಶದಲ್ಲಿ ಚುನಾವಣಾ ವ್ಯವಸ್ಥೆ ಆರಂಭವಾದಾಗಲೇ ‘ಒಂದು ದೇಶ, ಒಂದು ಚುನಾವಣೆ’ ರೀತಿಯಲ್ಲಿ ಚುನಾವಣೆಗಳು ನಡೆಯುತ್ತಿದ್ದಾಗ್ಯೂ ರಾಜಕೀಯ ಪಕ್ಷಗಳು ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಿರವುದೇಕೆ ಎಂದು ಜನರು ಕೇಳಲಾರಂಭಿಸಿದ್ದಾರೆ.

೨೦೧೫ರಲ್ಲಿ ಐಡಿಎ-ಸಿ ಇನ್‌ಸ್ಟಿಟ್ಯೂಟ್ ನಡೆಸಿದ ಅಧ್ಯಯನದಲ್ಲಿ, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲಿಕ ಚುನಾವಣೆ ನಡೆಸಿದರೆ ಜನರು ಒಂದೇ ಪಕ್ಷ ಅಥವಾ ಮೈತ್ರಿಕೂಟಕ್ಕೆ ಮತಹಾಕುವ ಸಾಧ್ಯತೆ ಶೇ.೭೭ರಷ್ಟಿದೆ, ೬ ತಿಂಗಳ ಅಂತರದಲ್ಲಿ ನಡೆಸಿದರೆ ಈ ಸಾಧ್ಯತೆ ಶೇ.೬೧ಕ್ಕೆ ಇಳಿಕೆಯಾಗಲಿದೆ ಎಂಬ ಸಂಗತಿ ಕಂಡುಬಂದಿತ್ತು. ನನ್ನ ಪ್ರಕಾರ ದೇಶದ ಜನರೀಗ ಪ್ರಬುದ್ಧರಾಗಿದ್ದಾರೆ, ತಮಗೇನುಬೇಕು ಎಂಬುದು ಅವರಿಗೆ ಗೊತ್ತಿದೆ. ‘ವಿಪಕ್ಷಗಳು ಒಗ್ಗಟ್ಟಾಗುತ್ತಿರುವುದರಿಂದ ಮೋದಿಯವರ ಜನಪ್ರಿಯತೆ ತಗ್ಗುತ್ತಿದೆ, ಅದಕ್ಕಾಗಿಯೇ ಕೇಂದ್ರ ಸರಕಾರ ೨೦೨೪ರ ಚುನಾವಣೆಗೂ ಮೊದಲೇ ಇಂಥ ಕಸರತ್ತು ಮಾಡುತ್ತಿದೆ’ ಎನ್ನುತ್ತಿದ್ದಾರೆ ಅನೇಕ
ರಾಜಕೀಯ ಪಕ್ಷಗಳ ನಾಯಕರು. ಆದರೆ ಮೋದಿ ಜನ ಪ್ರಿಯತೆ ತಗ್ಗುತ್ತಿದೆ ಎಂಬುದಕ್ಕೆ ಆಧಾರವೇನು? ಎಂಬುದಿಲ್ಲಿ ಪ್ರಶ್ನೆ. ಲೋಕಸಭೆ ಮತ್ತು ವಿಧಾನಸಭೆಗಳ ಚುನಾವಣೆಯಲ್ಲಿ ಮತದಾರರು ವಿಭಿನ್ನವಾಗಿ ಯೋಚಿಸುತ್ತಾರೆ. ರಾಜ್ಯ ಚುನಾವಣೆಗಳ ಆಧಾರದಲ್ಲಿ ಲೋಕಸಭಾ ಚುನಾವಣೆಯ ಫಲಿತಾಂಶ ನಿರ್ಧಾರವಾಗುವುದಿಲ್ಲ! ಹಾಗಾಗಿ ಏಕಕಾಲಿಕ ಚುನಾವಣೆಗೆಂದು ಕೇಂದ್ರವು ಸಂವಿಧಾನಕ್ಕೆ ತಿದ್ದುಪಡಿ ತರಲು ಹೊರ
ಟರೆ, ತಿದ್ದುಪಡಿ ವಿಧೇಯಕವು ರಾಜ್ಯಸಭೆಯಲ್ಲಿ ಅನುಮೋದನೆಗೊಳ್ಳುತ್ತದೆಯೇ? ನಂತರ ಅದಕ್ಕೆ ೧೪ ರಾಜ್ಯಗಳ ವಿಧಾನಸಭೆಯಲ್ಲಿ ಅಂಗೀಕಾರ ದೊರಕುತ್ತದೆಯೇ? ನನ್ನ ಪ್ರಕಾರ, ರಾಜ್ಯಸಭೆಯಲ್ಲಿ ಕೆಲ ರಾಜಕೀಯ ಪಕ್ಷಗಳು ಬೆಂಬಲಿಸಿದರೆ ವಿಧೇಯಕ ಅನುಮೋದನೆಗೊಳ್ಳುತ್ತದೆ. ಆದರೆ ೧೪ ರಾಜ್ಯಗಳ ಒಪ್ಪಿಗೆ ಬೇಕಲ್ಲ? ಬಿಜೆಪಿ ೧೨ ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಲೋಕಸಭೆಯ ಜತೆಗೇ ಒಡಿಶಾ ಹಾಗೂ ಆಂಧ್ರಪ್ರದೇಶಕ್ಕೂ ಚುನಾವಣೆ ನಡೆಯುವುದಿದೆ. ಹೀಗಾಗಿ ಬಿಜೆಪಿಗೆ ಆ ರಾಜ್ಯಗಳ ಬೆಂಬಲವೂ ಸಿಗಬಹುದು. ಒಂದು ಕುತೂಹಲಕರ ಸಂಗತಿಯೊಂದಿಗೆ ಲೇಖನ ಮುಗಿಸುತ್ತೇನೆ. ‘ಒಂದು ದೇಶ, ಒಂದು ಚುನಾವಣೆ’ ಹಾದಿಯಲ್ಲಿ ಭಾರತ ಮುಂದುವರಿದರೆ ಅದು ಇತಿಹಾಸವನ್ನೇ ನಿರ್ಮಿಸಲಿದೆ. ಜಗತ್ತಿನಲ್ಲಿ ಸ್ವೀಡನ್, ಬೆಲ್ಜಿಯಂ ಮತ್ತು ದಕ್ಷಿಣ ಆಫ್ರಿಕದಲ್ಲಿ ಮಾತ್ರ ಸದ್ಯ ಹೀಗೆ ಏಕಕಾಲಿಕ ಚುನಾವಣೆಗಳು ನಡೆಯುತ್ತಿವೆ. ೨೦೧೭ರಲ್ಲಿ ನೇಪಾಳದಲ್ಲಿ ಹೊಸ ಸಂವಿಧಾನ ಜಾರಿಯಾದ ಮೇಲೆ ಹೀಗೆ ಏಕಕಾಲಿಕವಾಗಿ ದೇಶಾದ್ಯಂತ ಚುನಾವಣೆ ನಡೆದಿತ್ತು. ಆದರೆ ಅವೆಲ್ಲವೂ ಸಣ್ಣಪುಟ್ಟ ದೇಶಗಳು. ಭಾರತ ಬಹಳ ದೊಡ್ಡ ದೇಶವಾದರೂ ಇಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸುವ ಬಗ್ಗೆ ನನಗಾವ ಅನುಮಾನವಿಲ್ಲ. ನರೇಂದ್ರ ಮೋದಿಯವರ ಬಗ್ಗೆ ‘ಮೋದಿ ಹೈ ತೋ ಮುಮ್ಕಿನ್ ಹೈ’ ಎಂಬ ಒಂದು ಮಾತಿದೆ. ಮೋದಿಯಿದ್ದರೆ ಎಲ್ಲವೂ ಸಾಧ್ಯ.
(ಲೇಖಕರು ಹಿರಿಯ ಪತ್ರಕರ್ತರು)