ಅಭಿವ್ಯಕ್ತಿ
ಡಾ.ಆರ್.ಜಿ.ಹೆಗಡೆ
ಖಾಸಗೀಕರಣದ ಆರ್ಥಿಕತೆಯನ್ನು ಒಂದು ಯುಗದಲ್ಲಿ ವಿಲನ್ ಆಗಿ ಬಿಂಬಿಸಿದವನು ಕಾರ್ಲ್ ಮಾರ್ಕ್ಸ್. ಆತ ಭಾವಿಸಿದ್ದೆಂದರೆ ಅದು ಅಮಾನವೀಯ ವ್ಯವಸ್ಥೆ. ಸಂಪತ್ತಿನ ಅಸಮಾನ ಹಂಚಿಕೆ ಮತ್ತು ‘ದುಡಿಯುವ ವರ್ಗದ’ ಶೋಷಣೆ ಅದರ ಪ್ರಮುಖ ಭಾಗ. ಲಾಭ ಮಾಡಲು ಭಂಡವಾಳಶಾಹಿ ಏನು ಬೇಕಾದರೂ ಮಾಡುತ್ತಾನೆ.
ಸುತ್ತಮುತ್ತಲಿರುವವರನ್ನು ಶೋಷಿಸುತ್ತಾನೆ. ಹಣವನ್ನೇ ಶಕ್ತಿಯನ್ನಾಗಿಸಿ ಇನ್ನಷ್ಟು ಹಣ ಮಾಡುತ್ತಾನೆ. ಸರಕಾರಗಳನ್ನು ಆಡಿಸ ಲಾರಂಭಿಸುತ್ತಾನೆ. ಹೀಗಾಗಿ ಆತ ಜನರ ವೈರಿ. ಇಂತಹವರನ್ನು ಸಾಕುವ, ಕ್ರೂರ ಅಸಮಾನತೆಗಳನ್ನು ಸೃಷ್ಟಿಸುವ ಅದು ದುಷ್ಟ ವ್ಯವಸ್ಥೆ. ಖಾಸಗೀಕರಣದ ವ್ಯವಸ್ಥೆಯ ದೋಷಗಳನ್ನು ಹೇಳುತ್ತ ಮಾರ್ಕ್ಸ್ ಇಪ್ಪತ್ತನೆಯ ಶತಮಾನದ ಇತಿಹಾಸವನ್ನೇ ಅಲುಗಾಡಿಸಿ ಹೊಸ ಆರ್ಥಿಕತೆಗೆ ಭಾಷ್ಯ ಬರೆದ. ‘ಅಸಮಾನತೆಯ ಕಂದರಗಳನ್ನು ತೋಡಿದ್ದ’ ಖಾಸಗಿ ಆರ್ಥಿಕತೆಯ ವಿರುದ್ಧ ‘ದುಡಿಯುವ ವರ್ಗದವರಿಗೆ’ ಸಮಾನತೆ ತಂದಿಡಬಲ್ಲ ಕನಸಿನಂಥ ಸಿದ್ಧಾಂತವೊಂದನ್ನು ಕಟ್ಟಿದ.
ಕ್ರಾಂತಿಯ ಮೂಲಕ ಈ ವರ್ಗ ರಾಜಕೀಯ, ಆರ್ಥಿಕ ಅಽಕಾರವನ್ನು ‘ಡಿಕ್ಟೇಟರ್‌ಶಿಪ್ ಅನ್ನು’ ತಮ್ಮ ಕೈಯಲ್ಲಿ ತೆಗೆದು ಕೊಳ್ಳಬೇಕು. ಸಂಪತ್ತನ್ನು ಜನರ ಸಾಮರ್ಥ್ಯಕ್ಕೆ ತಕ್ಕಂತೆ ದುಡಿಸಿ ಉತ್ಪಾದಿಸಬೇಕು. ನಂತರ ಅವರವರಿಗೆ ಅವಶ್ಯಕತೆ ಇರುವು ದನ್ನು ನೀಡಬೇಕು. ಸಂಪತ್ತನ್ನು ಉತ್ಪಾದಿಸುವ ಮತ್ತು ಅದನ್ನು ಸಮಾನವಾಗಿ ಹಂಚುವ ಹೊಣೆ ‘ಸರಕಾರದ್ದು’. ಹೀಗೆ ಭಂಡವಾಳಶಾಹಿಯನ್ನು ಹೊಡೆದೋಡಿಸಿದಾಗ ಬಡತನ, ಅಸಮಾನತೆ ನಾಶ ವಾಗುತ್ತವೆ.
ವ್ಯವಸ್ಥೆ ಸಮಾಜದಲ್ಲಿ ಸ್ಥಿರವಾದಂತೆ ದೇಶದ ಅವಶ್ಯಕತೆಯೇ ಇರುವುದಿಲ್ಲ. ಉಳಿಯುವುದು ಮನುಷ್ಯರೆಲ್ಲರೂ ಸಮಾನವಾಗಿ ಬದುಕಬಲ್ಲ ಆದರ್ಶ ಸಮಾಜ ಮಾತ್ರ. ಹೀಗೆ ವಾದವೊಂದನ್ನು ಮಾರ್ಕ್ಸ್ ಮಂಡಿಸಿದ. ವಾದ ಸರಣಿಗೆ ಜಗತ್ತೇ ಹುಚ್ಚಾಗಿ ಹೋಯಿತು. ಹಲವು ದೇಶಗಳು ರಕ್ತಕ್ರಾಂತಿಯಲ್ಲಿ ಮಿಂದು ಈಗ ಸೋಷಿಯಲಿಸ್ಟ್ ದೇಶಗಳಾದವು. ‘ದುಡಿಯುವ ವರ್ಗದವರು’ ರಾಜಕೀಯ ಅಧಿಕಾರವನ್ನು ತಮ್ಮ ಕೈಯಲ್ಲಿ ತೆಗೆದುಕೊಂಡರು. ರಾಜಕೀಯ, ಆರ್ಥಿಕ ದೃಷ್ಟಿಯಿಂದ ಜಗತ್ತು ತಲೆಕೆಳಗಾಗಿ ಹೋಯಿತು.
ಇಪ್ಪತ್ತನೆಯ ಶತಮಾನದ ಆರಂಭ ಇಂತಹ ಕ್ರಾಂತಿಗಳ ಸಮಯ. ಆದರೆ ನಂತರ ಆಗಿಹೋಗಿದ್ದು ಬೇರೆಯೇ. ಮಾರ್ಕ್ಸ್ ತನ್ನ ಕೆಟ್ಟ ಕನಸಿನಲ್ಲೂ ಯೋಚಿಸಿರದ ದಾರಿಯಲ್ಲಿ ಆ ಸಿದ್ಧಾಂತ ಜಗತ್ತನ್ನು ಕೊಂಡುಹೋಯಿತು. ಘಟನೆಗಳು ಮಾರ್ಕ್ಸ್‌ನ
ನಿರೀಕ್ಷೆಗೆ ವಿರುದ್ಧವಾಗಿ ನಡೆದು ಸಮಾಜವಾದಿ ವೇಷ ತೊಟ್ಟ ಈ ಸರಕಾರಗಳು ಹಿಂದಿನ ವ್ಯವಸ್ಥೆಗಿಂತ ದೊಡ್ಡ ಬಂಡವಾಳ ಶಾಹಿ, ಭ್ರಷ್ಟ, ಶೋಷಣೆಯ ವ್ಯವಸ್ಥೆಗಳಾಗಿ ಹೋದವು.
ಸಮಾನತೆಯ ಹೆಸರಿನಲ್ಲಿ ದೇಶದ ಚುಕ್ಕಾಣಿ ಹಿಡಿದವರು ಸಂಪತ್ತನ್ನು ಲೂಟಿ ಮಾಡಿದರು. ನೂರು ವರ್ಷಗಳಿಗಿಂತಲೂ ಕಡಿಮೆ ಸಮಯದಲ್ಲಿ ರಷ್ಯಾ ಕುಸಿದುಹೋಯಿತು. ಮಾರ್ಕ್ಸ್ ಕಟ್ಟಿದ್ದ ಕನಸಿನ ಸಾಮ್ರಾಜ್ಯ ಕುಸಿದುಬಿತ್ತು. ಅಪಾರ ವಿದ್ವತ್ತು ಇದ್ದ ಮಾರ್ಕ್ಸ್ ಎಲ್ಲಿ ತಪ್ಪಿದ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಅಂದರೆ ಮಾತ್ರ ಇಂದು ಖಾಸಗಿಕರಣ ಏಕೆ ಅನಿವಾರ್ಯ ಮತ್ತು ನಾವು ಅದನ್ನು ಏಕೆ ಸ್ವಾಗತಿಸಬೇಕು ಎನ್ನುವುದು ಅರ್ಥವಾಗುತ್ತದೆ. ಮೂಲ ದಲ್ಲಿರುವುದು ಮನುಷ್ಯನ ಮನಸ್ಸು.
ಮನುಷ್ಯ ತನಗೆ ಲಾಭವಿಲ್ಲದ ವ್ಯವಸ್ಥೆಯಲ್ಲಿ ತನ್ನ ಪೂರ್ತಿ ಶಕ್ತಿಯನ್ನು ತೊಡಗಿಸಿ ಪರಿಶ್ರಮದಲ್ಲಿ ತೊಡಗುವುದಿಲ್ಲ. ಬುದ್ಧಿ ವಂತಿಕೆ ಬಳಸುವುದಿಲ್ಲ. ಅಲ್ಲದೆ ಒತ್ತಡವಿಲ್ಲದೆ, ತನ್ನ ವೈಯಕ್ತಿಕ ಗುರಿಗಳಿಲ್ಲದೆ ಕೆಲಸ ಮಾಡುವುದಿಲ್ಲ. ಈ ಕಾರಣಗಳಿಗಾಗಿ ಸಮಾಜವಾದದಂಥ ‘ಸಮಾನತೆ’ಯ ವ್ಯವಸ್ಥೆಯನ್ನಿಟ್ಟು ಕೊಂಡು ಸಂಪತ್ತನ್ನು ಸೃಷ್ಟಿಸಲು ಸಾಧ್ಯವಾಗುವುದಿಲ್ಲ. ಸಂಪತ್ತು ಸೃಷ್ಟಿಯಾಗುವುದು ಅದು ಮನುಷ್ಯನ ವೈಯಕ್ತಿಕ ಆಸಕ್ತಿಯ ಭಾಗವಾದಾಗ ಮಾತ್ರ. ಸಾರ್ವಜನಿಕ ಕೆಲಸ ಯಾರ ಕೆಲಸವೂ ಅಲ್ಲ. ಮತ್ತೆ ಸಂಪತ್ತು ಸೃಷ್ಟಿಸದೆ ಅದನ್ನು ವಿತರಿಸುವುದಾದರೂ ಹೇಗೆ? ಹಿಂದಿನ ಹಾಗೂ ಇಂದಿನ ಸಮಾಜವಾದಿ ದೇಶಗಳೆಲ್ಲವೂ ಹೆಚ್ಚು ಕಡಿಮೆ ದಾರಿ ಕಾಣದ ದೇಶಗಳಾಗಿರುವ ಕಾರಣ ಇದು.
ಚೀನಾದ ಕಥೆ ಬೇರೆ. ಅದು ಹೊರಗಡೆ ಕೆಂಪು ಬೋರ್ಡ್ ತಗಲಿಸಿಕೊಂಡು ಒಳಗಿನಿಂದ ಖಾಸಗೀಕರಣವನ್ನು ಜಾರಿಗೊಳಿಸಿದೆ.
ಇಂದಿನ ಜಗತ್ತಿನ ದೊಡ್ಡ ದೊಡ್ಡ ಖಾಸಗಿ ಕಂಪನಿಗಳಲ್ಲಿ ಹಲವು ಚೀನಾದಲ್ಲಿವೆ. ಅದು ಸಮಾಜವಾದಿ ತತ್ತ್ವಗಳನ್ನು ಆಧರಿಸಿ ನಿಂತಿರುವ ದೇಶ ಅಲ್ಲ. ಹೇಳಬೇಕಾದದ್ದೆಂದರೆ ಇದನ್ನೆಲ್ಲಾ ನೋಡಿದ ಜಗತ್ತು ಮರಳಿ ಈ ಕಾಲ ಘಟ್ಟದಲ್ಲಿ ತೀರ್ಮಾನಕ್ಕೆ ಬಂದಿದೆ. ಏನೆಂದರೆ ಯಾರು ಏನೇ ಹೇಳಲಿ, ಕೊನೆಯಲ್ಲಿ ಉಳಿಯುವುದು ಖಾಸಗೀಕರಣವೇ!
ಅದೇ ಒಳ್ಳೆಯದು ಅಥವಾ ಅನಿವಾರ್ಯ ಎನ್ನುವ ನಿಲುವಿಗೆ ಬಂದಿವೆ. ಮತ್ತೆ ಸಂತಸದ ವಿಷಯವೆಂದರೆ ಇತಿಹಾಸದಿಂದ ಪಾಠ ಕಲಿತ ಖಾಸಗೀಕರಣದ ವ್ಯವಸ್ಥೆ ಕೂಡ ಹಿಂದಿನ ತನ್ನ ಹಲವು ದೋಷಗಳನ್ನು ತಿದ್ದಿಕೊಂಡು ಹೊಸ ಅವತಾರ ಧರಿಸಿ ಮರಳಿ ಬಂದಿದೆ. ಭಾರತವೂ ಕೂಡ ಇತಿಹಾಸದಿಂದ ಪಾಠ ಕಲಿತಿದೆ. ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟವಾಗಿ, ಘಂಟಾಘೋಷವಾಗಿ ಹೇಳಿಬಿಟ್ಟಿದ್ದಾರೆ. ಏನೆಂದರೆ ಭಾರತ ತನ್ನ ಮೊದಲಿನ ಇಬ್ಬಂದಿ ನೀತಿಯನ್ನು ಕೊಡಕೊಂಡು ಖಾಸಗೀಕರಣದತ್ತ ವೇಗವಾಗಿ ಹೆಜ್ಜೆಹಾಕಲಿದೆ. ಹೆಚ್ಚು ಹೆಚ್ಚು ಕ್ಷೇತ್ರಗಳನ್ನು ಖಾಸಗಿಯವರಿಗೆ ತೆರೆಯಲಿದೆ.
ಈಗಾಗಲೇ ಸರಕಾರ ಇನ್ಶೂರೆನ್ಸ್ ಕ್ಷೇತ್ರದಲ್ಲಿ ಶೇಕಡಾ ಎಪ್ಪತ್ತನಾಲ್ಕರಷ್ಟು ಎಫ್ಡಿಐಯನ್ನು ಸ್ವಾಗತಿಸಿದೆ. ಕೃಷಿ, ಶಿಕ್ಷಣ, ರೈಲ್ವೇಸ್, ಸರಕಾರಿ ಸ್ವಾಮ್ಯದ ಕಂಪನಿಗಳು, ಬ್ಯಾಕಿಂಗ್ ಮುಂತಾದ ಕ್ಷೇತ್ರಗಳನ್ನು ಮುಕ್ತಗೊಳಿಸುವ ಮಾತುಗಳು ಬಂದಿವೆ. ಇಂಡಿಯನ್ ಏರ್‌ಲೈನ್ಸ್ ಮಾರಾಟಕ್ಕಿದೆ. ಅಂದರೆ ದೇಶ ಸುಮಾರು ಎಂಭತ್ತರ ದಶಕದವರೆಗೆ ತಾನು ನಡೆದಿದ್ದ ದಾರಿಯನ್ನು ಬಿಟ್ಟು ಈಗ ಅದರ ಸಂಪೂರ್ಣ ವಿರುದ್ಧ ದಾರಿಯಲ್ಲಿ ನಡೆಯಲಾರಂಭಿಸಿದೆ. ಹೀಗೆ ಹೆಜ್ಜೆಗಳನ್ನು ಮೊದಲು ಹಾಕಲಾರಂಭಿಸಿದವರು
ರಾಜೀವ್ ಗಾಂಧಿ, ಪಿ.ವಿ. ನರಸಿಂಹರಾವ್, ಮತ್ತು ಮನಮೋಹನ್ ಸಿಂಗ್.
ಅನಿವಾರ್ಯವಾಗಿ ಈಗ ಅದನ್ನು ಆಯ್ಕೆಯಾಗಿ ಸ್ವೀಕರಿಸಿ ಭಾರತಕ್ಕೆ ಒಂದು ಸ್ಪಷ್ಟ, ಐತಿಹಾಸಿಕ, ಧೈರ್ಯದ, ಸ್ವಾಗತಾರ್ಹ
ನಿರ್ದೇಶನ ನೀಡಿರುವವರು ಪ್ರಧಾನಿ ಮೋದಿ. ಖಾಸಗೀಕರಣ ಕುರಿತು ಪ್ರಧಾನಿಯವರ ನಿರ್ಧಾರ ಏಕೆ ಸ್ವಾಗತಾರ್ಹ ಎಂಬು ದನ್ನು ಈಗ ಹೇಳಬೇಕು. ಒಂದನೆಯ ವಿಷಯ. ಖಾಸಗೀಕರಣ ಇಂದಿನ ಇಡೀ ಜಗತ್ತಿನ ಟ್ರೆಂಡ್. ಖಾಸಗೀಕರಣ ಜಾಗತೀಕರಣ ಕೂಡ. ಅಂದರೆ ನಮಗೆ ಜಾಗತಿಕವಾದ ಜ್ಞಾನ, ತಂತ್ರಜ್ಞಾನ ಮತ್ತು ಬಂಡವಾಳ ಬೇಕೇ ಬೇಕು. ಭಾರತಕ್ಕೆ ಇಂದು ಹಲವು ಟ್ರಿಲಿಯನ್ ಬಂಡವಾಳವನ್ನು ಸುಲಭವಾಗಿ ಅರಗಿಸಿಕೊಳ್ಳುವ ಸಾಮರ್ಥ್ಯ ಇದೆ.
ಬಂದರುಗಳ ಅಭಿವೃದ್ಧಿ, ವಿಮಾನಯಾನ ವ್ಯವಸ್ಥೆಯನ್ನು ಪ್ರತಿ ಜಿಲ್ಲೆಗೂ ಕೊಂಡೊಯ್ಯುವುದು, ಪ್ರಾಥಮಿಕ, ಮಾಧ್ಯಮಿಕ, ಪದವಿ, ವಿಶ್ವವಿದ್ಯಾಲಯ ಶಿಕ್ಷಣ ಹಾಗೂ ರಿಸರ್ಚ್‌ಗೆ ಸೌಕರ್ಯ ಒದಗಿಸುವುದು, ಕುಡಿಯುವ ನೀರು, ಆರೋಗ್ಯ, ರಕ್ಷಣೆ, ಕೃಷಿ,
ಗ್ರಾಮೀಣಾಭಿವೃದ್ಧಿ, ನದಿಗಳ ಜೋಡಣೆ, ಮೂಲಭೂತ ಸೌಲಭ್ಯ ಅಭಿವೃದ್ಧಿ, ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದ ಅಭಿವೃದ್ಧಿ, ಬಡವರಿಗೆ ಮನೆ ನಿರ್ಮಾಣ, ಇಂಥವಕ್ಕೆಲ್ಲ ಹಲವು ಟ್ರಿಲಿಯನ್ ಡಾಲರ್‌ಗಳೇ ಬೇಕು.
ಖಾಸಗಿ ಬಂಡವಾಳಕ್ಕೆ ಆಹ್ವಾನ ನೀಡದಿದ್ದರೆ ಇವಕ್ಕೆಲ್ಲ ದುಡ್ಡು ಎಲ್ಲಿಂದ ತರುವುದು. ತಂತ್ರಜ್ಞಾನವನ್ನು ಎಲ್ಲಿಂದ ತರುವುದು? ಗಮನಿಸಬೇಕು. ಇಂದಿನ ಜಗತ್ತು ತಂತ್ರಜ್ಞಾನ ಆಧರಿತವಾದುದು. ಅದಕ್ಕೆ ನಮ್ನನ್ನು ಇಂದು ಕಾಡುವ ಹಲವು ರೀತಿಯ ಸಮಸ್ಯೆಗಳಿಗೆ, ಉದಾಹರಣೆ ಪರಿಸರ, ಬಡತನ ನಿರ್ಮೂಲನೆ, ಮಾಲಿನ್ಯ, ಆರೋಗ್ಯ, ಉದ್ಯೋಗ ಪೂರೈಕೆ, ಕೃಷಿ, ಕೈಗಾರಿಕೆ, ಮೂಲಭೂತ ಸೌಲಭ್ಯ ಅಭಿವೃದ್ಧಿ ಮತ್ತು ಒಟ್ಟಾರೆ ‘ಗ್ರಾಸ್ ನ್ಯಾಶನಲ್ ಹ್ಯಾಪಿನೆಸ್’ನ ಅಭಿವೃದ್ಧಿ ಸಾಧಿಸುವ ಸಾಮರ್ಥ್ಯವಿದೆ.
ಎರಡನೇ ವಿಷಯ ಎಂದರೆ ಖಾಸಗೀಕರಣದ ವ್ಯವಸ್ಥೆಗೆ ಸಮಾಜವಾದಿ ಸಂಸ್ಕೃತಿ ನಮ್ಮಲ್ಲಿ ಹುಟ್ಟಿಸಿ ಹೋಗಿರುವ ಬೇಜವಾ ಬ್ದಾರಿಯ, ಭ್ರಷ್ಟತೆಯ ವ್ಯವಸ್ಥೆಯಿಂದ ದೇಶವನ್ನು ಹೊರತರುವ ಸಾಮರ್ಥ್ಯವಿದೆ. ನಮ್ಮಲ್ಲಿ ಇನ್ನೂ ಇರುವ ಆ ಸಂಸ್ಕೃತಿಯಲ್ಲಿ ಸಂಪತ್ತಿನ ಸೃಷ್ಟಿ, ವಿತರಣೆ ಮತ್ತು ದೇಖರೇಖಿ ಎಲ್ಲವೂ ಸರಕಾರಗಳದೇ ಜವಾಬ್ದಾರಿ. ಶಿಕ್ಷಣ, ನೌಕರಿ ಕೊಡುವುದು, ಮದುವೆ
ಮಾಡಿಸುವುದು, ತಾಳಿ ಕೊಡಿಸುವುದು, ಟಾಯ್ಲೆಟ್ ಕಟ್ಟಿಸುವುದು, ಅದನ್ನು ಸ್ವಚ್ಛವಾಗಿಸುವುದು ಎಲ್ಲವೂ ಸರಕಾರದ ಜವಾಬ್ದಾರಿಗಳೇ.
ಮತ್ತೆ ಇದೆಲ್ಲವನ್ನು ಸರಕಾರ ಉಚಿತವಾಗಿ ಮಾಡಬೇಕು. ಟ್ಯಾಕ್ಸ್ ಹಾಕಕೂಡದು. ಹಾಕಿದರೆ ಕೇವಲ ‘ಶ್ರೀಮಂತರಿಗೆ’ ಹಾಕಬೇಕು.
ಇಂತಹ ಸಬ್ಸಿಡಿಯ ಸಂಸ್ಕೃತಿ ಸರಕಾರದ ಮೇಲೆ ಎರಡು ರೀತಿಯ ಭಾರಗಳನ್ನು ತಂದಿದೆ. ಒಂದನೆಯದು ಸರಕಾರವೇ ಎಲ್ಲದಕ್ಕೂ ಹಣ ಒದಗಿಸಬೇಕು. ಎರಡನೆಯದು ಎಲ್ಲವನ್ನೂ ಸರಕಾರವೇ ನಿರ್ವಹಣೆ ಮಾಡಬೇಕು. ಸಾರ್ವಜನಿಕ ಟಾಯ್ಲೆಟ್ ಗಳಿಂದ ಹಿಡಿದು ಕೈಗಾರಿಕೆಗಳವರೆಗೆ. ಜನರಿಗೆ ಜವಾಬ್ದಾರಿಗಳು ಇಲ್ಲವೇ ಇಲ್ಲ. ಇಂತಹ ವ್ಯವಸ್ಥೆಯಲ್ಲಿ ಸರಕಾರಕ್ಕೆ ಆದಾಯವೂ ಇರುವುದಿಲ್ಲ. ಮತ್ತೆ ಕೆಲಸದಿಂದ ಓವರ್ ಲೋಡ್ ಆಗಿ ಹೋಗುವ ಸರಕಾರಗಳಿಗೆ ಇವೆಲ್ಲವನ್ನೂ ನಿರ್ವಹಿಸುವುದು ದುಸ್ತರ.
ಇಂದಿನ ಸರಕಾರಗಳ ಸಮಸ್ಯೆ ಇದೇ. ನಮ್ಮ ಸಾರ್ವಜನಿಕ ಸೇವೆಗಳ, ಉದಾಹರಣೆಗೆ ಕುಡಿಯುವ ನೀರು, ವಿದ್ಯುತ್, ಶುಚಿತ್ವ , ವೈದ್ಯಕೀಯ ಮತ್ತು ಶಾಲೆಗಳ ಗುಣಮಟ್ಟ ಜಾಗತಿಕ ಮಟ್ಟಗಳಿಗೆ ಹೋಲಿಕೆಯಲ್ಲಿ ಕಳಪೆಯಾಗಿರುವುದರ ಕಾರಣ ಇದು. ಪರಿಹಾರ ಖಾಸಗೀಕರಣ ಮಾತ್ರ. ಮತ್ತೆ ನಮ್ಮ ಜನ ಪಡೆಯುವ ಸೇವೆಗಳಿಗೆ ಹಣ ನೀಡುವುದನ್ನು, ಗುಣಮಟ್ಟಕ್ಕಾಗಿ ಒತ್ತಾಯಿ ಸುವುದನ್ನು ಕಲಿತಾಗ ಮಾತ್ರ. ಇದರಿಂದ ಭಾರೀ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಕೂಡ ಸಾಧ್ಯವಿದೆ.
ಉದಾಹರಣೆಗೆ ನಮ್ಮ ದೇಶದಲ್ಲಿ ಸ್ವಚ್ಛತೆಗೆ ಲಕ್ಷಾಂತರ ನೌಕರಿಗಳನ್ನು ಸೃಷ್ಟಿಸುವ ಅಗತ್ಯವಿದೆ. ರೇಲ್ವೆ ಸ್ವಚ್ಛತೆ, ನಗರ ಸ್ವಚ್ಛತೆ ಹೀಗೆ. ಮತ್ತೆ ಟ್ಯಾಕ್ಸ್ ಪಡೆಯುವ ಸರಕಾರಗಳು ಶ್ರೀಮಂತ ವಾಗುತ್ತದೆ. ಸರಕಾರಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಬಂಡವಾಳ ತೊಡಗುತ್ತದೆ. ಗುಣಮಟ್ಟದ ಕೆಲಸವಾಗುತ್ತದೆ. ನೌಕರಿಗಳು ಹುಟ್ಟಿಕೊಳ್ಳುತ್ತವೆ. ಉದಾಹರಣೆಗೆ ಭೂತಾನ್ ಅನ್ನು ನೋಡಬೇಕು. ಕೊಲ್ಲಿ ರಾಷ್ಟ್ರಗಳನ್ನು ನೋಡಬೇಕು. ಚೀನಾದ ಪಬ್ಲಿಕ್ ಟ್ರಾನ್ಸ್ ಪೋರ್ಟ್ ವ್ಯವಸ್ಥೆಯನ್ನು ನೋಡಬೇಕು. ಜಪಾನ್ ನೋಡಬೇಕು. ಜನರಿಗೆ ಅತ್ಯುತ್ತಮ ಸೇವೆಯನ್ನು ಅವು ಹೇಗೆ ಒದಗಿಸುತ್ತವೆ ನೋಡಬೇಕು.
ಹೀಗೆ ನಮ್ಮ ಜನ ಸಬ್ಸಿಡಿಯ ಮೈಂಡ್‌ಸೆಟ್ ನಿಂದ ಹೊರಬಂದು ಜಗತ್ತನ್ನು ನೋಡಿದರೆ ನಾವು ಖಾಸಗೀಕರಣವನ್ನು ಏಕೆ ಬೆಂಬಲಿಸಬೇಕು ಎನ್ನುವುದು ಅರ್ಥವಾಗುತ್ತದೆ. ಖಾಸಗೀಕರಣದ ಅನಿವಾರ್ಯತೆಯನ್ನು ಇನ್ನೊಂದು ದೃಷ್ಟಿಯಿಂದಲೂ ನೋಡಬೇಕು. ಮೀಸಲಾತಿಯ ಉದ್ದೇಶವೇ ಇಂದು ಫಲವಾದಂತಿದೆ. ಅದು ಇಂದು ಅಸಂಗತ ಮಟ್ಟಗಳನ್ನು ಮುಟ್ಟುತ್ತಿದೆ.
ಪರಿಣಾಮ ಏನಾಗಿದೆ ಯೆಂದರೆ ಸರಕಾರದಲ್ಲಿ ಹುದ್ದೆಗಳು ಖಾಲಿ ಇವೆ. ಆದರೆ ಈ ಹುದ್ದೆಗಳನ್ನು ತುಂಬಿಕೊಳ್ಳಲು ಸಾಧ್ಯ ವಾಗುತ್ತಲೇ ಇಲ್ಲ.
ನೇಮಕ ಸಂಕೀರ್ಣ, ವರ್ಷಗಳನ್ನೇ ತೆಗೆದುಕೊಳ್ಳುವ ಪ್ರಕ್ರಿಯೆಯಾಗಿ ಹೋಗಿದೆ. ಕಾರಣ ಮೀಸಲಾತಿಯ ಹಿನ್ನೆಲೆಯಲ್ಲಿ ಕೋರ್ಟು ಕಚೇರಿ ಅಲೆದಾಟ. ಇವೆಲ್ಲದರಿಂದ ಬೇಸರಗೊಂಡ ಪ್ರತಿಭಾನ್ವಿತರು ಬೇರೆ ಉದ್ಯೋಗಗಳನ್ನು ಹುಡುಕುತ್ತಿದ್ದಾರೆ. ಸರಕಾರದ ಕೆಲಸ ಹಲವೊಮ್ಮೆ ಮಂದಗತಿಯಲ್ಲಿ ಸಾಗುತ್ತಿರುವ ಕಾರಣ ಇದು. ಏನೆಂದರೆ ಸರಕಾರದಲ್ಲಿ ಮಾನವ ಸಂಪನ್ಮೂಲದ ತೀವ್ರ ಕೊರತೆ ಇದೆ. ಅಲ್ಲದೆ ಸರಕಾರಿ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿ ಸಾಮರ್ಥ್ಯಕ್ಕಿಂತ ಸೀನಿಯಾರಿಟಿ ಮುಖ್ಯ. ಖಾಸಗಿ ಕ್ಷೇತ್ರ ಹಾಗಲ್ಲ. ಅದು ಯಾವಾಗಲೂ ಕೆಲಸ ಮಾಡಬಲ್ಲವರನ್ನು ಹುಡುಕುತ್ತಿರುತ್ತದೆ. ಲಾಭ ಮಾಡಬಲ್ಲವರನ್ನು ಹುಡುಕು ತ್ತಿರುತ್ತದೆ. ಹೊಸ ಆವಿಷ್ಕಾರಗಳನ್ನು, ಹೊಸ ಯೋಚನೆಗಳನ್ನು ಹೆಚ್ಚು ಪ್ರೋತ್ಸಾಹಿಸುತ್ತದೆ.
ಹಾಗಾಗಿಯೇ ಖಾಸಗಿ ಕ್ಷೇತ್ರ ಶ್ರೇಷ್ಠತೆಯ ಕ್ಷೇತ್ರವಾಗಿ ಬೆಳೆಯುವುದು. ಗಮನಿಸಿ. ದೇಶದಲ್ಲಿ ಕೋಟಿ ಕೋಟಿ ಜನರಿಗೆ ಉದ್ಯೋಗ ನೀಡಿದ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಖಾಸಗಿ ಚೈತನ್ಯದ ಪ್ರತಿಫಲ. ಮತ್ತೆ ಇಂದಿನ ಖಾಸಗೀಕರಣ ಕೇವಲ ಹಣದ ವಿಷಯವಾಗಿ
ಉಳಿದಿಲ್ಲ. ಇದು ವಿಜ್ಞಾನದ ಯುಗ. ಜ್ಞಾನವಂತನೇ ಹಣವಂತ. ಹಾಗಾಗಿ ಅದು ಪ್ರತಿಭೆಗೆ, ಜ್ಞಾನಕ್ಕೆ, ತಂತ್ರಜ್ಞಾನಕ್ಕೆ ಪ್ರೋತ್ಸಾಹ
ನೀಡುತ್ತಿದೆ. ವರ್ಕ್ -ರ್ಸನ್ನು ಘೋಷಿಸಿ ತಾವು ಹಣಮಾಡಲಾಗುವುದಿಲ್ಲ ಎಂಬುದು ಇಂದಿನ ‘ಖಾಸಗೀಕರಣಕ್ಕೆ’ ತಿಳಿದಿದೆ.
ಹಾಗಾಗಿಯೇ ಇಂದು ಹಲವು ಕಡೆ ಖಾಸಗಿ ಕ್ಷೇತ್ರ ಭಾರೀ ಸಂಬಳ ನೀಡುವ ಕ್ಷೇತ್ರ. ಎಲ್ಲರನ್ನೂ ಬಡವರನ್ನಾಗಿಸಿ ತಾವು ಶ್ರೀಮಂತ ರಾಗಿ ಉಳಿಯಲು ಸಾಧ್ಯವಾಗುವುದಿಲ್ಲ ಎನ್ನುವುದೂ ಇಂದಿನವರಿಗೆ ತಿಳಿದಿದೆ. ಮತ್ತೆ ಸಮಸ್ಯೆಗಳ ಪರಿಹಾರಕ್ಕೆ ಅವು ಇಂದು ಹೊಸ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡುತ್ತಿವೆ. ಹೊಸ ತಂತ್ರಜ್ಞಾನಗಳು ಜನಸ್ನೇಹಿಯಾದವು. ಅದ್ಭುತವಾದವು. ಉದಾಹರಣೆಗೆ ಮೆಡಿಕಲ್ ತಂತ್ರಜ್ಞಾನ. ಕೃಷಿ ತಂತ್ರಜ್ಞಾನ. ಇವೆಲ್ಲ ನಮಗೆ ಬೇಡವೇ? ಇವೆಲ್ಲ ತರುವುದು ಸಾಧ್ಯ ಖಾಸಗಿಯಿಂದ ಮಾತ್ರ. ಮತ್ತೆ ನಾವು ಭಾರತೀಯರು ಒಂದು ವಿಷಯವನ್ನು ವಿಶೇಷವಾಗಿ ಅರಿಯಬೇಕು.
ಏನೆಂದರೆ ಚೀನಾವನ್ನು ಮಗ್ಗುಲಲ್ಲಿಟ್ಟುಕೊಂಡು ನಾವು ಹಳೆಯ ಚಿಂತನೆಗಳಲ್ಲಿ ಕಾಲಹರಣ ಮಾಡುವುದು ಸಾಧ್ಯವಾಗುವು ದಿಲ್ಲ. ನಮಗೆ ಬೇಕಾಗಿಯೋ, ಬೇಡವಾಗಿಯೋ ಬಲಿಷ್ಠ ರಾಷ್ಟ್ರವನ್ನು, ಸೈನ್ಯವನ್ನು ಕಟ್ಟಲೇಬೇಕು. ಇದನ್ನು ಜನತೆ ಕೂಡ ಅರ್ಥ ಮಾಡಿಕೊಳ್ಳಬೇಕು. ಮತ್ತೆ ದೇಶ ಒಮ್ಮೆಲೇ ಎಲ್ಲವನ್ನೂ ಖಾಸಗೀಕರಣ ಗೊಳಿಸಿಬಿಡಬೇಕು ಎಂದೇನೂ ಅಲ್ಲ. ರಕ್ಷಣೆ, ಆಂತರಿಕ ಭದ್ರತೆ, ಹಣಕಾಸು, ಬಡತನ ನಿರ್ಮೂಲನೆ ಕ್ಷೇತ್ರಗಳನ್ನು ಕೈಯಲ್ಲಿಟ್ಟುಕೊಂಡು ಉಳಿದ ಕ್ಷೇತ್ರಗಳನ್ನು ಆದ್ಯತೆಗಳನ್ನು ಗುರುತಿಸಿ ಖಾಸಗಿಗೆ ತೆರೆಯುತ್ತ ಹೋಗಬೇಕು. ಇನ್ನೂ ಒಂದು ಮಾತು. ಖಾಸಗೀಕರಣವನ್ನು ಪಾರದರ್ಶಕವಾಗಿ, ಉದ್ಯಮಗಳಿಗೆ ಲೆವೆಲ್ ಪ್ಲೇಯಿಂಗ್ ಫೀಲ್ಡ್ ಸಿಗುವಂತೆ ಒದಗಿಸುವುದು ಸರಕಾರಗಳ ಜವಾಬ್ದಾರಿ. ಇಲ್ಲವಾದರೆ ಮತ್ತೆ ಎಲ್ಲವೂ ಎಡವಟ್ಟು ಆಗಿ ಹೋಗು ತ್ತದೆ. ಹಾಗಾಗದಂತೆ ಎಚ್ಚರ ವಹಿಸುವುದು ಜನತೆಯ ಜವಾಬ್ದಾರಿ.