Thursday, 19th September 2024

ಸಾವು ಸಹಜ, ಅನಿವಾರ್ಯ : ಭಯವೇಕೆ ?

ಸತ್ಯದರ್ಶನ

ಗೋಪಾಲಕೃಷ್ಣ ಭಟ್ ಬಿ.

ಸಾವೆಂಬುದು ಯಾವಾಗ, ಎಲ್ಲಿ ಮತ್ತು ಹೇಗೆ ಬರುತ್ತದೆ ಎನ್ನುವುದರ ಮೇಲೆ ಭಗವಂತನನ್ನು ಬಿಟ್ಟು ಇನ್ನಾರಿಗೂ ನಿಯಂತ್ರಣ ಇರುವುದಿಲ್ಲ. ವೈದ್ಯರು ತಮ್ಮ
ಚಿಕಿತ್ಸೆಯ ಮೂಲಕ ಅದನ್ನು ವಿಳಂಬ ಮಾಡುತ್ತಾರೆ ಎನ್ನುವ ಮಾತು ಕೇಳಿಬಂದರೂ, ವಾಸ್ತವದಲ್ಲಿ ಅದು ಭಗವಂತನು ಹಾಕಿದ ಗೆರೆಯವರೆಗೆ ಮಾತ್ರ ಇರುತ್ತದೆ.

ಜನನದಂತೆ ಸಾವು ಕೂಡ ಬದುಕಿನ ಸಹಜ ಕ್ರಿಯೆಗಳಲ್ಲೊಂದು. ಸಾವು ಒಮ್ಮೊಮ್ಮೆ ಅನಿರೀಕ್ಷಿತ ಮತ್ತು ಆಕಸ್ಮಿಕವಾದರೂ, ಅದು ನಿಶ್ಚಿತ ಎಂಬುದಂತೂ
ಸತ್ಯ. ಇದು ಎಲ್ಲಿ, ಹೇಗೆ ಮತ್ತು ಯಾವಾಗ ಬರುತ್ತದೆ ಎಂದು ಖಚಿತವಾಗಿ ಹೇಳಲಾಗದು. ಸಾವನ್ನು ನಿರ್ಧರಿಸುವವನು ದೇವರು. ಈ ಮಧ್ಯೆ ಸಾವನ್ನು ವಿಳಂಬ ಮಾಡುವ ಪ್ರಕ್ರಿಯೆಯು ವೈದ್ಯಕೀಯ ಚಿಕಿತ್ಸೆಯ ಹೆಸರಿನಲ್ಲಿ ನಡೆದರೂ, ಈ ನಿಟ್ಟಿನಲ್ಲಿ ಭಗವಂತನದೇ ಕೊನೆಯ ಮಾತು. ನಾವು ಅವನಾಡಿಸುವ ಸೂತ್ರದ ಬೊಂಬೆಗಳು, ಅಷ್ಟೇ.

ಹುಟ್ಟಿದ ಮನುಷ್ಯನು ಒಂದು ದಿನ ಸಾಯಲೇಬೇಕು ಎನ್ನುವುದು ಈ ಜಗತ್ತಿನ, ಸೃಷ್ಟಿಯ ನಿಯಮವಾಗಿದ್ದರೂ, ಸಾವು ಮತ್ತು ಸಾವಿನ ಭಯ ವಯಸ್ಸಿನ ಭೇದವಿಲ್ಲದೆ ಪ್ರತಿಯೊಬ್ಬರನ್ನೂ ಅಗೋಚರವಾಗಿ ಕಾಡುತ್ತಿರುತ್ತವೆ. ‘ಇಂದು ಅವನು ಹೋದ, ನಾಳೆ ನಾನೇ ಏನೋ?’ ಎನ್ನುವ ಅಳುಕು ಕೊರೆಯುತ್ತಿರುತ್ತದೆ. ಕೆಲವರು ‘ಇದು ಜೀವನದ ಒಂದು ಭಾಗ ಮತ್ತು ಎದುರಿಸಲೇಬೇಕಾದ ಅನಿವಾರ್ಯ’ ಎಂದು ಧೈರ್ಯವಾಗಿ ಇದ್ದರೂ, ಹಲವರು ಈ ನಿಟ್ಟಿನಲ್ಲಿ ಚಿಂತಾಕ್ರಾಂತರಾಗಿ ಠಿeZZಠಿಟ meಟಚಿಜಿZ ಅಥವಾ ಛಿZ ಟ್ಛ bಛಿZಠಿeಗೆ ಒಳಗಾತ್ತಾರೆ.

ಥನಾಟೋ ಫೋಬಿಯಾ ಎನ್ನುವುದು ಗ್ರೀಕ್ ಭಾಷೆಯ ಶಬ್ದ; ‘ಥನಾಟೋಸ’ ಎಂದರೆ ಸಾವು, ‘ಫೋಬೋಸ್’ ಎಂದರೆ ಭಯ. ಇದನ್ನು ಒಂದು ಕಾಯಿಲೆ ಎನ್ನಲಾಗದು. ಮಾನಸಿಕ ತಜ್ಞರ ಪ್ರಕಾರ ಇದು ಒಂದು ಮಾನಸಿಕ ತೊಳಲಾಟ, ಅವ್ಯಕ್ತ ಭಯ ಮತ್ತು ಒಳಗೊಳಗೇ ಕುದಿಯುವ ಹೇಳಲಾಗದ ಸಂಕಟ.
ಈ ಸಿಂಡ್ರೋಮ್ ಹಿಂದೆ ಹಲವಾರು ಕಾರಣಗಳು ಇರುತ್ತವೆ ಎಂದು ಇವುಗಳನ್ನು ಟ್ರೀಟ್ ಮಾಡುವ ಕೌನ್ಸೆಲರ್‌ಗಳು ಹೇಳುತ್ತಾರೆ. ಮುಖ್ಯವಾಗಿ ಅತಿ ಹತ್ತಿರದ, ಅಂದರೆ ತಂದೆ-ತಾಯಿ, ಅಣ್ಣ-ತಮ್ಮ-ಸೋದರಿಯಂಥ ರಕ್ತಸಂಬಂಧಿಗಳ, ಕುಟುಂಬದ ಸದಸ್ಯರ, ಆಪ್ತರ ಮರಣಗಳು ಮನಸ್ಸಿನ ಮೇಲೆ ಆಳವಾದ
ಪರಿಣಾಮವನ್ನು ಉಂಟುಮಾಡುತ್ತವೆ.

ಹಾಗೆಯೇ, ಗುಣವಾಗದ ಕಾಯಿಲೆಗಳು, ಅಂಗಾಂಗ ವೈ-ಲ್ಯಗಳು, ಸುದೀರ್ಘ ಚಿಕಿತ್ಸೆಗಳು ಮಾನಸಿಕವಾಗಿ ಕುಬ್ಜನನ್ನಾಗಿ ಮಾಡುತ್ತಿರುವುದು, ತನ್ನ ಸಾವು ಹತ್ತಿರದಲ್ಲೇ ಇದೆ ಎಂದು ಸೂಚಿಸುವುದು, ತಾನಿನ್ನು ಲೆಕ್ಕದಿಂದ ಹೊರಗೆ ಎಂಬ ಹತಾಶೆಯ ಭಾವ ಒಳಗಿನಿಂದ ಕುದಿಯುವುದು ಮುಂತಾದವು ಸಾವಿನ
ಭೀತಿಯನ್ನು ಹೆಚ್ಚಿಸುತ್ತವೆ. ಮಾನಸಿಕವಾಗಿ ದುರ್ಬಲರಾಗಿರುವವರು, ಅನಾರೋಗ್ಯಪೀಡಿತರು, ಜೀವನದಲ್ಲಿ ಯಾವುದೋ ಕಾರಣಕ್ಕೆ ಅತೃಪ್ತರಾಗಿದ್ದವರು, ದೇವರು-ಧರ್ಮ-ಸಂಸ್ಕೃತಿ-ಸಂಸ್ಕಾರದಲ್ಲಿ ನಂಬಿಕೆ, ವಿಶ್ವಾಸ ಶ್ರದ್ಧೆ ಇಲ್ಲದವರು, ಖಿನ್ನತೆ ಅಥವಾ ಮಾನಸಿಕ ಅಸ್ವಸ್ಥತೆ ಇದ್ದವರಲ್ಲಿ ಈ ಭೀತಿಯು ಹೆಚ್ಚಾಗಿ
ಕಾಣುತ್ತದೆ ಎಂದು ಹೇಳಲಾಗುತ್ತದೆ.

ಸಾವಿನ ಭಯ ಹೊಂದಿದವರು, ಈ ಭಯದಿಂದಾಗಿ ತಮ್ಮ ದೈನಂದಿನ ಜೀವನದಲ್ಲಿ ಇರಬೇಕಾದ ಲಯವನ್ನು ಕಳೆದುಕೊಂಡು ಸುಗಮ ಜೀವನದ ಹಳಿ ತಪ್ಪಿಸಿಕೊಳ್ಳುತ್ತಾರೆ. ಅವರು ಒಂದು ರೀತಿಯಲ್ಲಿ ಅಂತರ್ಮುಖಿಯಾಗುತ್ತಾರೆ ಮತ್ತು ತಮ್ಮ ಕುಟುಂಬದವರು ಸೇರಿದಂತೆ ಯಾರೊಂದಿಗೂ ಬೆರೆಯಲು  ಇಚ್ಛಿಸುವುದಿಲ್ಲ. ಸಾಮಾಜಿಕ ಚಟುವಟಿಕೆಗಳಿಂದಲೂ ದೂರ ಸರಿಯುತ್ತಾರೆ. ತದೇಕಚಿತ್ತರಾಗಿ ಶೂನ್ಯವನ್ನು ದಿಟ್ಟಿಸುತ್ತಾ ಬಹುತೇಕ ಸಮಯವನ್ನು ಕಳೆಯುತ್ತಾರೆ. ಸಾವಿನಲ್ಲಿ ಇದ್ದಿರಬಹುದಾದ ಭಯಾನಕ ನೋವು, ತಮ್ಮನ್ನು ನಂಬಿದವರು-ನೆಚ್ಚಿದವರು ತಮ್ಮ ಸಾವಿನಿಂದಾಗಿ ಅನುಭವಿಸುವ ಯಾತನೆ ಮತ್ತು ಸಂಕಟದ ಬಗ್ಗೆಯೇ ಇವರು ಚಿಂತಿಸುತ್ತಾರೆ.

ಕೋವಿಡ್ ಪಿಡುಗು ಅಪ್ಪಳಿಸಿದ ಸಮಯದಲ್ಲಿ, ಉತ್ತಮ ಚಿಕಿತ್ಸೆಯ ಹೊರತಾಗಿಯೂ, ಈ ರೋಗದಿಂದಾದ ತೊಂದರೆಗಿಂತಲೂ ಈ ರೋಗದ ಭಯದಿಂದಲೇ ಬಹುಜನರು ಸಾವನ್ನಪ್ಪಿದ್ದಾರಂತೆ. ಭಯಕ್ಕಿಂತಲೂ ಅದರ ದೂರಗಾಮಿ ಪರಿಣಾಮ ಅಪಾಯಕಾರಿಯಾಗಿರುತ್ತದೆ. ಇದರ ಮೊದಲ ಪರಿಣಾಮವು ಉದ್ವೇಗ ವಾಗಿದ್ದು, ಅದರಿಂದ ಹೃದಯದ ಬಡಿತದಲ್ಲಿ ಏರುಪೇರು, ಉಸಿರಾಟದಲ್ಲಿ ಕಷ್ಟ ಉಂಟಾಗುತ್ತದೆ. ಇದು ಮುಂದುವರಿದರೆ ಮೂರ್ಛೆಗೆ ಕಾರಣವಾಗಿ ಜೀವಕ್ಕೆ ಅಪಾಯವಾಗಬಹುದು ಎಂದು ಮಾನಸಿಕ ತಜ್ಞರು ಅಭಿಪ್ರಾಯಪಡುತ್ತಾರೆ.

ಸಾವು ಸಂಭವಿಸಿದಾಗ ದುಃಖ ಸಹಜ.ಕುಟುಂಬದವರು, ಹಿರಿಯರು, ಆಪ್ತರು, ಇನ್ನೂ ಬಹುಕಾಲವಿದ್ದು ಬದುಕನ್ನು ಇನ್ನೂ ಸುದೀರ್ಘವಾಗಿ ನೋಡಬಹುದಾ ದವರು, ಸಾವಿನ ವಯಸ್ಸನ್ನು ತಲುಪದವರು ರೋಗ- ರುಜಿನ ಇಲ್ಲದೇ ಹಠಾತ್ ಸಾವಿಗೀಡಾದರೆ ಅಂಥ ಪ್ರಕರಣಗಳು ಹೆಚ್ಚು ನೋವು ಮತ್ತು ದುಃಖವನ್ನು ನೀಡುತ್ತವೆ. ಇದು ವ್ಯಕ್ತಿಯ ಕಾರ್ಯಕ್ಷಮತೆಯನ್ನು ಕುಂಠಿತಗೊಳಿಸುತ್ತದೆ ಮತ್ತು ಆತನ ದೈನಂದಿನ ಚಟುವಟಿಕೆಗಳನ್ನು ನಿಧಾನಗತಿಗೆ ಬದಲಾಯಿಸುತ್ತದೆ. ಇದನ್ನು ನಿಯಂತ್ರಿಸದಿದ್ದರೆ ‘ಥಾನಟೋ ಫೋಬಿಯಾ’ಕ್ಕೆ ತಿರುಗುವ ಸಾಧ್ಯತೆ ಹೆಚ್ಚಾಗುತ್ತದೆ ಮತ್ತು ಖಿನ್ನತೆಗೆ ಜಾರುವ ಪ್ರಮೇಯಗಳೂ ಇರುತ್ತವೆ.

ಅಂತೆಯೇ, ಇಂಥವರಿಗೆ ನೋವು ಮರುಕಳಿಸದಂತೆ ನಿಗಾ ವಹಿಸಲು ಅಪಾಯಕಾರಿ ಸ್ಥಳಗಳು, ಸಂದರ್ಭಗಳು ಅವರ ಗಮನಕ್ಕೆ ಬಾರದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಅವರು ತಮ್ಮ ಆರೋಗ್ಯದ ಬಗ್ಗೆ ಅತಿಯಾಗಿ ಚಿಂತಿಸುತ್ತಾರೆ ಮತ್ತು ನಿರಂತರವಾಗಿ ವೈದ್ಯರ ಸಲಹೆಯಲ್ಲಿ ಇರುತ್ತಾರೆ ಹಾಗೂ ಅನಾ ರೋಗ್ಯದ ಚಿಹ್ನೆಗಳನ್ನು ಗಮನಿಸುತ್ತಾ ಇರುತ್ತಾರೆ. ಇದನ್ನು ಆರೋಗ್ಯಶಾಸ್ತ್ರದಲ್ಲಿ ‘ರೋಗಭ್ರಮಣೆ’ ಅಥವಾ ‘ಹೈಪೋಕೋಂಡ್ರಿಯಾಸಿಸ್’ ಎನ್ನುತ್ತಿದ್ದು,
ವ್ಯಕ್ತಿಯು ಈ ಅವಸ್ಥೆಯನ್ನು ತಲುಪದಂತೆ ಕಣ್ಣಿಡಬೇಕಾಗುತ್ತದೆ.

ಸಾವೆಂಬುದು ಯಾವಾಗ, ಎಲ್ಲಿ ಮತ್ತು ಹೇಗೆ ಬರುತ್ತದೆ ಎನ್ನುವುದರ ಮೇಲೆ ಭಗವಂತನನ್ನು ಬಿಟ್ಟು ಇನ್ನಾರಿಗೂ ನಿಯಂತ್ರಣ ಇರುವುದಿಲ್ಲ. ವೈದ್ಯರು ತಮ್ಮ ಚಿಕಿತ್ಸೆಯ ಮೂಲಕ ಅದನ್ನು ವಿಳಂಬ ಮಾಡುತ್ತಾರೆ ಎನ್ನುವ ಮಾತು ಕೇಳಿಬಂದರೂ, ವಾಸ್ತವದಲ್ಲಿ ಅದು ಭಗವಂತನು ಹಾಕಿದ ಗೆರೆಯವರೆಗೆ ಮಾತ್ರ
ಇರುತ್ತದೆ. ಇದು ನಿಶ್ಚಿತವಾಗಿರುವುದರಿಂದ, ಈ ನಿಟ್ಟಿನಲ್ಲಿ ಅತಿಯಾದ ಮೋಹಪಾಶವು, ದೈಹಿಕ ಮತ್ತು ಮಾನಸಿಕ ಆರೋಗ್ಯದ ದೃಷ್ಟಿಯಲ್ಲಿ ಹಾಗೂ ವ್ಯಕ್ತಿಯ ಸುಗಮ ಭವಿಷ್ಯದ ನಿಟ್ಟಿನಲ್ಲಿ ಅಪೇಕ್ಷಣೀಯವಲ್ಲ. ಬದುಕಿನಲ್ಲಿ ಆವರೆಗೆ ಗಳಿಸಿದ ಹಣ, ಆಸ್ತಿ ಮತ್ತು ಭೋಗವಸ್ತುಗಳನ್ನು ಬಿಟ್ಟು, ದೇಹದಿಂದ ಹೊರಹೋಗಲು ಮಾನಸಿಕವಾಗಿ ಸಿದ್ಧರಿರಬೇಕು.

ತನ್ನ ನಂತರ ಅವೆಲ್ಲಾ ಏನಾಗುತ್ತವೆ, ಯಾರು ಅನುಭವಿಸುತ್ತಾರೆ, ಯಾರ ಪಾಲಾಗುತ್ತದೆ, ತನ್ನ ಸಂಸಾರದ ಹೊಣೆ ಯಾರು, ಹೇಗೆ ನಿಭಾಯಿಸಬಹುದು, ತನ್ನ
ನಂತರ ತನ್ನ ಮನೆಯವರು ಹೇಗೆ ಜೀವನ ನಡೆಸಬಹುದು? ಎನ್ನುವ ಪ್ರಾಪಂಚಿಕ ವಿಷಯಗಳನ್ನು ತ್ಯಜಿಸಬೇಕಾಗುತ್ತದೆ. ಒಂದು ಅಧ್ಯಯನ ವರದಿಯ ಪ್ರಕಾರ, ಸಾಯುವ ಆಲೋಚನೆಯಲ್ಲಿ ಇರುವವರಲ್ಲಿ ಶೇ.೩-೧೦ರಷ್ಟು ಜನರು ಮಾನಸಿಕ ಒತ್ತಡದಲ್ಲಿರುತ್ತಾರೆ. ಇವರಲ್ಲಿ ಹೆಚ್ಚಿನವರು ಹಿರಿಯ ನಾಗರಿಕರು ಎನ್ನುವುದು ಇನ್ನೊಂದು ವಿಶೇಷವಾಗಿರುತ್ತದೆ. ಇದನ್ನು ಎದುರಿಸಲು ಅವರು ತಮ್ಮ ಮನೋಬಲ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು.

ಸಾವನ್ನು ಗೆಲ್ಲುವುದಂತೂ ಸಾಧ್ಯವಿಲ್ಲ, ಅಂತೆಯೇ ಅದನ್ನು ಧೈರ್ಯವಾಗಿ ಎದುರಿಸುವ, ನಿಭಾಯಿಸುವ ಮಾರ್ಗವನ್ನು ಹುಡುಕಬೇಕು. ಅನುಭವಿಗಳ ಪ್ರಕಾರ, ನಿಯತ ಆಹಾರ ಸೇವನೆ, ನಿದ್ರೆ, ವಿಶ್ರಾಂತಿ, ಯೋಗ, ಧ್ಯಾನ, ಪೂಜೆ, ಓದುವ ಅಭ್ಯಾಸಗಳು, ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ, ಹಿರಿಯರಾಗಿ ಇತರರಿಗೆ ಮಾರ್ಗದರ್ಶನ ಮಾಡುವುದು, ಮನೆಗೆಲಸ ದಲ್ಲಿ ನೆರವಾಗುವುದು, ಕುಟುಂಬಸ್ಥರೊಂದಿಗೆ ಮತ್ತು ನೆರೆಹೊರೆಯವರೊಂದಿಗೆ ಬೆರೆಯುವುದು ಇವು ಸಾವನ್ನು ಎದುರಿಸುವುದರೊಂದಿಗೆ ಸಾವಿನ ಟೆಂಡೆನ್ಸಿಯನ್ನು ನಿಯಂತ್ರಿಸುತ್ತವೆ.

ಸಾವಿನ ಬಗೆಗೆ ಚಿಂತಿಸುವಾಗ, ಅದರ ಬಗೆಗೆ ಚಿಂತನ-ಮಂಥನ ಮಾಡುವಾಗ, ‘ಒಳಿತು ಮಾಡು ಮನುಸ, ನೀ ಇರೋದು ಮೂರು ದಿವಸ’ ಹಾಡು
ನೆನಪಾಗುತ್ತದೆ. ಈ ಹುಟ್ಟು-ಸಾವಿನ ಅಂತರದಲ್ಲಿ ಮನುಷ್ಯ ಮಾಡಿದ ಪುಣ್ಯಕಾರ್ಯಗಳು ಒಂದು ರೀತಿಯಲ್ಲಿ ವಿಮೆ ಇದ್ದಂತೆ. ಅಂದರೆ, ಮಾಡಿದ ಪುಣ್ಯಕಾರ್ಯ ಗಳು, ಸಮಾಜಕ್ಕೆ, ನಾಡು-ನುಡಿಗೆ ಸಲ್ಲಿಸಿದ ಸೇವೆಗಳು, ಬಲಿದಾನಗಳು, ಕೊಡುಗೆಗಳು, ಸಂಕಷ್ಟದಲ್ಲಿ ಇದ್ದವರಿಗೆ ನೀಡಿದ ನೆರವು ಇವು ಮರಣದ ನಂತರವೂ ವ್ಯಕ್ತಿಯ ಆತ್ಮಕ್ಕೆ ಒತ್ತಾಸೆಯಾಗಿದ್ದು ಅದು ಸದ್ಗತಿ ಹೊಂದಲು ಇಂಬುನೀಡುತ್ತವೆ. ಸಾವನ್ನು ಒಂದು ಪ್ರಕೃತಿ ಸಹಜವಾದ ಮತ್ತು ಸ್ವಾಭಾವಿಕವಾದ ಪ್ರಕ್ರಿಯೆ ಎಂದು ಪರಿಗಣಿಸಬೇಕು. ‘ಜಾತಸ್ಯ ಮರಣಂ ಧ್ರುವಂ’ (ಡೆತ್ ಈಸ್ ಸರ್ಟನ್ ಫಾರ್ ಎವರಿಒನ್/ ಎವರಿಥಿಂಗ್ ಬಾರ್ನ್).

ಇದರಿಂದ ಪಲಾಯನವಾಗುವ ಮಾರ್ಗ ಇರುವುದಿಲ್ಲ. ಒಬ್ಬರಿಗೆ ಮೊದಲು, ಇನ್ನೊಬ್ಬರಿಗೆ ಸ್ವಲ್ಪ ವಿಳಂಬ; ಒಬ್ಬರಿಗೆ ಸುಖದ ಸಾವು, ಇನ್ನೊಬ್ಬರಿಗೆ ಸಂಕಷ್ಟದ ಸಾವು. ಭಗವಂತನು ಆಡಿಸುವ ಬೊಂಬೆಯಾಟದಲ್ಲಿ ಮನುಷ್ಯನು ನಿಮಿತ್ತ ಮಾತ್ರ. ಸಾವು ಬದುಕಿನ ಅಂತ್ಯ, ಬದುಕಿನ ಇನ್ನೊಂದು ಭಾಗ ಮಾತ್ರ. ಸಾವು ಎಲ್ಲರಿಗೆ ಬಂದಂತೆ ನಮಗೂ ಬರುತ್ತದೆ ಎನ್ನುವ ದಾರ್ಶನಿಕ ನಿಲುವನ್ನು ಹೊಂದಿದಾಗ ಸಾವು ಹೆದರಿಸುವುದಿಲ್ಲ. ಮುಂದೆ ಹೋದವರ ಸಂಗಡ ನಾವೂ ಹೋಗಿ ಸೇರಿಕೊಳ್ಳುತ್ತೇವೆ ಎಂದು ಭಾವಿಸಬೇಕು.

(ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ)

Leave a Reply

Your email address will not be published. Required fields are marked *