Friday, 13th December 2024

ಕೊಟ್ಟ ಕುದುರೆ ಏರುವರೋ, ತವರಲ್ಲೇ ಉಳಿವರೋ?!

-ಎಂ.ಕೆ.ಭಾಸ್ಕರ್ ರಾವ್

ಎಐಸಿಸಿ ಅಧ್ಯಕ್ಷ ಖರ್ಗೆಯವರು ಕಣಕ್ಕಿಳಿದರೆ ಪಕ್ಷದ ಕಾರ್ಯಕರ್ತರು, ಮುಖಂಡರು ಹಗಲೂ ರಾತ್ರಿ ಕೆಲಸ ಮಾಡುವ ಸನ್ನಿವೇಶ ಕಲಬುರ್ಗಿ ಲೋಕಸಭಾ ಕ್ಷೇತ್ರದಲ್ಲಿದೆ. ಆದರೆ ಉತ್ತರ ಪ್ರದೇಶದ ಯಾವ ಕ್ಷೇತ್ರದಲ್ಲೂ ಲೋಕಸಭಾ ಅಭ್ಯರ್ಥಿಯನ್ನು ಗೆಲ್ಲಿಸಿ ಕಳಿಸುವಷ್ಟು ಕಾಂಗ್ರೆಸ್ ಶಾಸಕರು ಇಲ್ಲ.

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶಗಳನ್ನು ಗಮನಿಸಿದರೆ ಮಲ್ಲಿಕಾರ್ಜುನ ಖರ್ಗೆ ಅವರ ಸತತ ಗೆಲುವು ಅವರನ್ನು ಸೋಲಿಲ್ಲದ ಸರದಾರನ ಪಟ್ಟದಲ್ಲಿ ಕೂರಿಸಿದೆ. ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತ ಕಾರಣ ಅವರ ಪಟ್ಟದ ಕುರ್ಚಿಯ ಕಾಲು ಊನವಾಗಿದೆ. ಪ್ರಸ್ತುತ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಖರ್ಗೆಯವರನ್ನು ಮುಂದಿಟ್ಟುಕೊಂಡು ಸಾಂಪ್ರದಾಯಿಕ ದಲಿತ
ವೋಟುಗಳನ್ನು ಕಾಂಗ್ರೆಸ್‌ನತ್ತ ಕ್ರೋಡೀಕರಿಸುವ ಯೋಚನೆ, ಅವರೇ ಅಧ್ಯಕ್ಷರಾಗಿರುವ ಕಾಂಗ್ರೆಸ್ ಪಕ್ಷದಲ್ಲಿ ರೆಕ್ಕೆಪುಕ್ಕ ಮೂಡಿಸುವ ಸನ್ನಾಹದಲ್ಲಿರುವಂತಿದೆ. ಉತ್ತರ ಪ್ರದೇಶದಿಂದ ಬಂದಿರುವ ವರದಿಗಳನ್ನು ನಂಬಬಹುದಾದರೆ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಆ ರಾಜ್ಯದ ಪರಿಶಿಷ್ಟ ಜಾತಿಗೆ ಮೀಸಲಿರುವ ಒಂದು ಕ್ಷೇತ್ರದಲ್ಲಿ ಈ ದಲಿತ ನಾಯಕ ಕಣಕ್ಕೆ ಇಳಿಯುವ ಸಾಧ್ಯತೆಯನ್ನು ವರದಿ ವಿವರಿಸಿದೆ. ನರೇಂದ್ರ ಮೋದಿ ಮತ್ತು ಖರ್ಗೆಯವರು ಅದೇ ಮೊದಲಬಾರಿಗೆ ೨೦೧೪ರಲ್ಲಿ ಲೋಕಸಭೆಗೆ ಆಯ್ಕೆಯಾದರು. ೨೦೧೯ರಲ್ಲಿ ತಮ್ಮ ನೆಚ್ಚಿನ ಮತ್ತು ಅಗಾಧ ಕೆಲಸ ಮಾಡಿರುವ ಕಲಬುರ್ಗಿ ಕ್ಷೇತ್ರದಲ್ಲೇ ಖರ್ಗೆ ಸೋತರು.

ಕನಸುಮನಸಿನಲ್ಲೂ ಅವರು ಸೋಲನ್ನು ನಿರೀಕ್ಷಿಸಿರಲಿಲ್ಲ. ತಮ್ಮನ್ನು ಸೋಲಿಸಲೆಂದು ಆರ್‌ಎಸ್‌ಎಸ್ ದೊಡ್ಡ ಸಂಚನ್ನೇ ರೂಪಿಸಿ ಯಶಸ್ವಿ ಆಯಿತು ಎನ್ನುವುದು ಖರ್ಗೆಯವರ ಆರೋಪ. ದಲಿತ ನಾಯಕನನ್ನು ಸೋಲಿಸುವ ಕುತಂತ್ರವನ್ನು ಬಿಜೆಪಿ ಮಾಡಿತೆಂದು ಖರ್ಗೆ ಬೆಂಬಲಿಗರು ಈಗಲೂ ಹೇಳುತ್ತಾರೆ. ಚುನಾವಣೆಯಲ್ಲಿ ಸ್ಪರ್ಧಿ ಪ್ರತಿಸ್ಪರ್ಧಿಗೆ ಇರುವ ಏಕೈಕ ಗುರಿ ಎಂದರೆ ಎದುರಾಳಿಯನ್ನು ಸೋಲಿಸುವುದು, ಇದರಲ್ಲಿ ಕುತಂತ್ರದ ಪ್ರಶ್ನೆಯೇ ಬರುವುದಿಲ್ಲ. ಹಾಗೇನಾದರೂ ಇದ್ದರೆ ಬಿ.ಆರ್. ಅಂಬೇಡ್ಕರರನ್ನು ಲೋಕಸಭೆಗೆ ಆಯ್ಕೆಯಾಗದಂತೆ ಸೋಲಿಸಿದ ಕಾಂಗ್ರೆಸ್ ಪಕ್ಷವೂ ಸಂಚು, ಕುತಂತ್ರ ಮಾಡಿತ್ತೆಂದು ಖರ್ಗೆ ಬೆಂಬಲಿಗರು ಮನವರಿಕೆ ಮಾಡಿಕೊಳ್ಳಬೇಕು. ಖರ್ಗೆಯವರು ಸೋತರೆಂದ ಮಾತ್ರಕ್ಕೆ ಬೀದಿಗೆ ಬೀಳಲಿಲ್ಲ. ಅವರನ್ನು ರಾಜ್ಯಸಭೆಗೆ ಕರೆತಂದು ವಿರೋಧ ಪಕ್ಷದ ನಾಯಕನ ಸ್ಥಾನವಿತ್ತು ಗೌರವಿಸುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ.
ಈಗ ಅವರು ಎರಡು ಹುದ್ದೆ ಹೊಂದಿದ್ದಾರೆ. ಒಂದು ವಿರೋಧ ಪಕ್ಷದ ನಾಯಕ ಸ್ಥಾನ ಮತ್ತೊಂದು ಎಐಸಿಸಿ ಅಧ್ಯಕ್ಷ ಸ್ಥಾನ. ಅವರ ಎಐಸಿಸಿ ಅಧ್ಯಕ್ಷಾವಧಿಯಲ್ಲಿ ಕಾಂಗ್ರೆಸ್ ಪಕ್ಷ ಹಿಮಾಚಲ ಪ್ರದೇಶ ಮತ್ತು ಕರ್ನಾಟಕವನ್ನು ಗೆದ್ದು ಸರಕಾರ ರಚಿಸಿದೆ. ಇಲ್ಲವೆಂದಿಲ್ಲ, ಒಂದೆರಡು ಸೋಲೂ ಇದೆ.

ಆದರೆ ಗೆಲುವು ಆ ಪಕ್ಷಕ್ಕೆ ಸಂಜೀವಿನಿಯಂತೆ ಕೆಲಸ ಮಾಡಿದೆ. ಅದರಲ್ಲೂ ಕರ್ನಾಟಕದ ಚುನಾವಣೆಯಲ್ಲಿ ಅದು ೧೩೫ ಸೀಟು ಗೆದ್ದ ಪರಿ ಸ್ವತಃ ಕಾಂಗ್ರೆಸ್ಸಿಗರನ್ನೂ ಅಚ್ಚರಿಯ ಮಡುವಿಗೆ ನೂಕಿದೆ. ಖೇದದ ಸಂಗತಿ ಎಂದರೆ ಖರ್ಗೆ ಅವರಿಗೆ ಗೆಲುವಿನ ಕ್ರೆಡಿಟ್ ಸಿಗಲಿಲ್ಲ. ರಾಹುಲ್ ಗಾಂಧಿಯವರು ನಡೆಸಿದ ಭಾರತ್ ಜೋಡೋ ಯಾತ್ರೆ ಪರಿಣಾಮ ಈ ಜಯ ಎನ್ನುವ ಮೂಲಕ ಆ ಪಕ್ಷದ ‘ನಿಜ ಹೈಕಮಾಂಡ್’ ಕಿರೀಟಕ್ಕೆ ತುರಾಯಿ ತೊಡಿಸಲಾಯಿತು. ಖರ್ಗೆಯವರು ಅದನ್ನು ನೋಡಿ ಒಳಸಂಕಟದಲ್ಲಿ ಸಂತೋಷಿಸಿದರು. ಇದೀಗ ಲೋಕಸಭಾ ಚುನಾವಣೆ ಹೆಬ್ಬಾಗಿಲಿಗೆ ಬಂದು ನಿಂತಿದೆ. ಈ ಚುನಾವಣೆಯಲ್ಲಿ ಎನ್‌ಡಿಎ/ಬಿಜೆಪಿ ಮತ್ತೆ ಅಧಿಕಾರಕ್ಕೆ ಬಾರದಂತೆ ತಡೆಯುವ, ನರೇಂದ್ರ ಮೋದಿ ಮರಳಿ ಪ್ರಧಾನಿಯಾಗುವುದು ಶತಾಯಗತಾಯ ಸಾಧ್ಯವಾಗದಂತೆ ಮಾಡುವ ಉದ್ದೇಶದಿಂದಲೇ ಕಾಂಗ್ರೆಸ್ ನೇತೃತ್ವದ ಯುಪಿಎ ವಿಸರ್ಜನೆಯಾಗಿ ‘ಡಾಟೆಡ್’ ಇಂಡಿಯ ಒಕ್ಕೂಟ ಜನ್ಮ ತಳೆದಿದೆ. ಈ ಒಕ್ಕೂಟದ ಸದಸ್ಯ ಪಕ್ಷಗಳು ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆ ಮಾಡಿಕೊಂಡು ಅಧಿಕಾರಕ್ಕೆ ಬರುವ ಯತ್ನಕ್ಕೆ ನಾಂದಿ ಹಾಡಿವೆ. ಯುಪಿಎ ಭಾಗವಾಗಿರದ ಸಿಪಿಎಂ, ಸಿಪಿಐ, ಟಿಎಂಸಿ  ಮುಂತಾದ ಪಕ್ಷಗಳೂ ‘ಡಾಟೆಡ್’ ಇಂಡಿಯ ಒಕ್ಕೂಟದಲ್ಲಿ ಒಂದಾಗಿವೆ.

ಬರುತ್ತಿರುವ ಸುದ್ದಿಗಳನ್ನು ನೋಡಿದರೆ ಈ ತಿಂಗಳಿನಿಂದಲೇ ಸೀಟು ಹೊಂದಾಣಿಕೆಗೆ ಸಂಬಂಧಿಸಿದ ಸಮಾಲೋಚನಾ ಮಾತುಕತೆಗಳು ಒಕ್ಕೂಟದ ೨೮ ಪಕ್ಷಗಳ ನಡುವೆ ನಡೆಯಲಿದೆ. ಏತನ್ಮಧ್ಯೆ ಖರ್ಗೆಯವರನ್ನು ಉತ್ತರ ಪ್ರದೇಶದ ಮೀಸಲು ಕ್ಷೇತ್ರವೊಂದರಿಂದ ಕಣಕ್ಕಿಳಿಸುವ ಚರ್ಚೆ ಸಾಗಿದೆ. ಉತ್ತರ ಪ್ರದೇಶ ೮೦ ಲೋಕಸಭಾ ಕ್ಷೇತ್ರವುಳ್ಳ ರಾಜ್ಯ. ಆ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಲೋಕಸಭಾ ಸ್ಥಾನ ಗೆಲ್ಲುವ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತದೆ ಎನ್ನುವುದು ಪ್ರತೀತಿ. ೨೦೧೪ ಮತ್ತು ೨೦೧೯ರ ಚುನಾವಣೆಯಲ್ಲಿ ಬಿಜೆಪಿ/ಎನ್‌ಡಿಎ ಆ ರಾಜ್ಯದಲ್ಲಿ ಊಹಾತೀತ ಭರ್ಜರಿ ಜಯಗಳಿಸಿತು. ೨೦೧೪ರಲ್ಲಿ ಎರಡು ಸ್ಥಾನ (ರಾಯ್ ಬರೇಲಿ-ಸೋನಿಯಾ ಗಾಂಧಿ ಮತ್ತು ಅಮೇಠಿ-ರಾಹುಲ್ ಗಾಂಧಿ) ಗೆದ್ದ ಕಾಂಗ್ರೆಸ್ಸು ೨೦೧೯ರಲ್ಲಿ ಉಳಿಸಿಕೊಂಡಿದ್ದು ರಾಯಬರೇಲಿ ಕ್ಷೇತ್ರವನ್ನು ಮಾತ್ರ. ಕಳೆದ ಚುನಾವಣೆಯಲ್ಲಿ ಅದು ಸಮಾಜವಾದಿ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿತ್ತು. ಈ ಸಲ ಸಮಾಜವಾದಿ ಪಕ್ಷವೂ ‘ಡಾಟೆಡ್’ ಇಂಡಿಯ ಒಕ್ಕೂಟದ ಭಾಗವಾಗಿರುವುದರಿಂದ ಸೀಟು ಹೊಂದಾಣಿಕೆ ಬಹಳ ಕಷ್ಟದ್ದಾಗಲಾರದು. ಸಮಾಜವಾದಿ ಪಕ್ಷ ಖರ್ಗೆಯವರಿಗೆ
ಬೆಂಬಲವಾಗಿ ನಿಂತರೆ ಅವರ ಗೆಲುವು ಖಚಿತ ಎಂಬ ನಿಲುವಿಗೆ ಆ ರಾಜ್ಯದ ಕಾಂಗ್ರೆಸ್ ಘಟಕ ಬಂದಿರುವಂತಿದೆ.

ಆದರೆ ತಮ್ಮ ಕರ್ಮಭೂಮಿ ಕಲಬುರ್ಗಿಯನ್ನು ಬಿಟ್ಟು ಉತ್ತರ ಪ್ರದೇಶಕ್ಕೆ ಖರ್ಗೆಯವರು ಹೋಗುತ್ತಾರೆಯೇ..? ದೊಡ್ಡ ಅನುಮಾನವಿದೆ. ಈ ಅನುಮಾನಕ್ಕೆ ಅದರದೇ ಆದ ಕೆಲವು ಕಾರಣಗಳಿವೆ. ಅವುಗಳನ್ನು
ಒಂದೊಂದಾಗಿ ಗಮನಿಸೋಣ. ಕರ್ನಾಟಕದಲ್ಲಿ ಇಪ್ಪತ್ತು ಲೋಕಸಭಾ ಸ್ಥಾನವನ್ನಾದರೂ ಗೆಲ್ಲಬೇಕೆಂಬ ಛಲದ ನಿರ್ಣಯ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರದು. ಖರ್ಗೆಯವರು ಎಐಸಿಸಿಗೆ ಅಧ್ಯಕ್ಷರಾಗಿರುವ ಎರಡನೇ ಕನ್ನಡಿಗ (ಬಹಳ ವರ್ಷಗಳ ಹಿಂದೆ ಎಸ್.ನಿಜಲಿಂಗಪ್ಪ ಈ ಸ್ಥಾನವನ್ನು ಅಲಂಕರಿಸಿದ್ದರು). ಉತ್ತರ ಪ್ರದೇಶದ ಜನ, ಕ್ಷೇತ್ರ ಪರಿಚಯ ಇಲ್ಲದೆಡೆ ಸ್ಪರ್ಧೆ ಮಾಡಲೆಂದೇ ಹೋಗುವಷ್ಟು ಇಲ್ಲಿ ಪಕ್ಷ ಈಗ ದುರ್ಬಲವಾಗಿಲ್ಲ ಎನ್ನುವುದು ಈ ಮುಖಂಡದ್ವಯರ ಸಹಜ ತೀರ್ಮಾನವಾಗಿರುತ್ತದೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ಬಿಜೆಪಿ ಇನ್ನೂ ಚೇತರಿಸಿಕೊಂಡಿಲ್ಲ. ಮುಗಿಯದ ಗೊಂದಲದ ಮಡುವಿನಲ್ಲಿ ಅದು ಒದ್ದಾಡುತ್ತಿದೆ. ಇಲ್ಲಿ (ಕಲಬುರ್ಗಿ ಕ್ಷೇತ್ರದಲ್ಲಿ ಎಂದು ಓದಿಕೊಳ್ಳಿ) ಗೆಲುವಿನ ಲಕ್ಷಣ ದಿನದಿಂದ ದಿನಕ್ಕೆ ನಿಚ್ಚಳವಾಗುತ್ತಿರುವಾಗ ಖರ್ಗೆಯವರು ಕರ್ನಾಟಕದಲ್ಲಿ ಕಣಕ್ಕಿಳಿಯದೆ ಉತ್ತರ ಪ್ರದೇಶಕ್ಕೆ ಹೋದರೆ ಸ್ಥಳೀಯವಾಗಿ ರವಾನೆಯಾಗುವ ಸಂದೇಶ ಅಪಾಯಕಾರಿಯಾಗಿರುತ್ತದೆ ಎನ್ನುವುದು ಸಂದೇಹಾತೀತ.

ಎಐಸಿಸಿ ಅಧ್ಯಕ್ಷರಿಗೇ ಗೆಲುವಿನ ವಿಶ್ವಾಸವಿಲ್ಲದೆ ಬೇರೆಡೆ ಹೋಗಿದ್ದಾರೆಂಬ ಪ್ರಚಾರಕ್ಕೆ ಪಕ್ಷ ತಾನಾಗೇ ಅವಕಾಶ ಮಾಡಿಕೊಟ್ಟಂತಾಗದೆ? ಕಲಬುರ್ಗಿ ಲೋಕಸಭಾ ಕ್ಷೇತ್ರದ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ
ಕಾಂಗ್ರೆಸ್ ಗೆದ್ದಿದೆ. ಮಗ ಪ್ರಿಯಾಂಕ್ ಖರ್ಗೆ ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ತಾವೇ ಅಧ್ಯಕ್ಷರಾಗಿರುವ ಪಕ್ಷದ ಸರಕಾರವಿದೆ. ಎಐಸಿಸಿ ಅಧ್ಯಕ್ಷರು ಕಣಕ್ಕೆ ಇಳಿದರೆ ಪಕ್ಷದ ಕಾರ್ಯಕರ್ತರು, ಮುಖಂಡರು ಹಗಲೂ ರಾತ್ರಿ ಕೆಲಸ ಮಾಡುವ ಸನ್ನಿವೇಶ ಈ ಎಲ್ಲ ಕಾರಣಗಳಿಗಾಗಿ ಸೃಷ್ಟಿಯಾಗಿದೆ. ಅಲ್ಲಿ ಉತ್ತರ ಪ್ರದೇಶದ ಯಾವ ಲೋಕಸಭಾ ಕ್ಷೇತ್ರದಲ್ಲೂ ಲೋಕಸಭಾ ಅಭ್ಯರ್ಥಿಯನ್ನು ಗೆಲ್ಲಿಸಿ ಕಳಿಸುವಷ್ಟು ಕಾಂಗ್ರೆಸ್ ಶಾಸಕರು ಇಲ್ಲ. ಸಮಾಜವಾದಿ ಪಕ್ಷದ ಹಂಗಿನ ಅರಮನೆಯಲ್ಲಿ ವಾಸಕ್ಕೆ ಜಾಗ ಹುಡುಕಿಕೊಳ್ಳುವಂಥ ಸ್ಥಿತಿ. ಖರ್ಗೆಯವರು ಇದನ್ನೆಲ್ಲ ಯೋಚಿಸದೆ ಒಪ್ಪಿಗೆ ಕೊಡಲಾರರು. ಉತ್ತರ ಪ್ರದೇಶದ ಕಾಂಗ್ರೆಸ್ ಘಟಕದ
ತೀರ್ಮಾನ ಎಐಸಿಸಿ ಅಧ್ಯಕ್ಷರನ್ನು ಕಟ್ಟಿಹಾಕಲಾರದು. ಆದರೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸಲಹೆ ಮಾಡಿದರೆ ಅದನ್ನು ತಿರಸ್ಕರಿಸುವ ಛಾತಿ ಖರ್ಗೆ ಅವರಲ್ಲಿಲ್ಲ ಎನ್ನುವುದನ್ನು ಯಾರೂ ಒಪ್ಪಬೇಕು.
ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಗರಿಷ್ಠ ಲೋಕಸಭಾ ಸ್ಥಾನ ಗಳಿಸುವ ನಿಟ್ಟಿನಲ್ಲಿ ಈಗಾಗಲೇ ಒಂದಿಷ್ಟು ಚುನಾವಣಾ ಉದ್ದೇಶಿತ ಕಾರ್ಯಕ್ರಮ ಘೋಷಿಸಿದ್ದಾರೆ. ಮತ್ತೊಮ್ಮೆ ಮೋದಿ
ಪ್ರಧಾನಿಯಾಗುವುದಕ್ಕೆ ಏನೆಲ್ಲ ಬೇಕೋ ಅದೆಲ್ಲವನ್ನೂ ಸಂಕಲ್ಪಬದ್ಧವಾಗಿ ಆದಿತ್ಯನಾಥ್ ಕೈಗೆತ್ತಿಕೊಂಡಿದ್ದಾರೆ. ಆ ರಾಜ್ಯದಲ್ಲಿ ನಾಲ್ಕು ಬಾರಿ ಸಿಎಂ ಆಗಿದ್ದ ಮಾಯಾವತಿ ಇದೀಗ ದುರ್ಬಲರಾಗಿದ್ದಾರೆ.

ಅವರ ನೇತೃತ್ವದ ಬಹುಜನ ಸಮಾಜ ಪಕ್ಷವು ದಲಿತ ಮತಗಳನ್ನು ಸಮಾಜವಾದಿ ಪಕ್ಷದತ್ತ ಹೋಗದಂತೆ ತಡೆಯುವ ವಿಚಾರದಲ್ಲಿ ದೊಡ್ಡ ಶಂಕೆಯೇ ಇದೆ. ಸಂಘಟನೆ ದುರ್ಬಲವಾಗಿರುವ ಈ ಸಮಯದಲ್ಲಿ ಖರ್ಗೆ (ಅಲ್ಲಿ ಕಣಕ್ಕೆ ಇಳಿದರೆ) ಅವರಿಗೆ ವೋಟು ಹಾಕಬೇಡಿರೆಂದು ದಲಿತ ಸಮುದಾಯಕ್ಕೆ ಮಾಯಾವತಿ ಕರೆಕೊಡಲಾರರು. ಅಂಥ ಕರೆಯನ್ನು ಕೊಟ್ಟರೂ ದಲಿತ ಮತದಾರರು ಅದಕ್ಕೆ ಕಿವಿಗೊಡಲಾರರು. ಮಾಯಾವತಿ ದುರ್ಬಲರಾದ ಮಾತ್ರಕ್ಕೆ ಖರ್ಗೆಯವರು ಚುನಾವಣೆಯನ್ನು ಗೆದಿಯಬಹುದೆ? ಅಂಥ ಪವಾಡಸದೃಶ ಶಕ್ತಿ ಖರ್ಗೆಯವರಲ್ಲಿದೆಯೆ? ಇತ್ತ ಕಲಬುರ್ಗಿ ಲೋಕಸಭಾ ಕ್ಷೇತ್ರದಲ್ಲಿ ಎಲ್ಲ ಹಳ್ಳಿ, ಗ್ರಾಮಗಳ ಖುದ್ದು ಪರಿಚಯ
ಖರ್ಗೆಯವರಿಗೆ ಇದೆ. ಬಹುತೇಕ ಎಲ್ಲ ಹಳ್ಳಿ, ಗ್ರಾಮಗಳಲ್ಲಿ, ಗ್ರಾಮ ಪಂಚಾಯತಿ, ತಾಲೂಕು ಮತ್ತು ಜಿಲ್ಲಾ ಪಂಚಾಯತಿಗಳ ಮಟ್ಟದಲ್ಲಿ ಮುಖಂಡರ, ಕಾರ್ಯಕರ್ತರ ಮುಖ ಪರಿಚಯ ಅವರಿಗೆ ಇದೆ. ತಿಮ್ಮಣ್ಣ, ಕರಿಯಣ್ಣ, ರಾಮಣ್ಣ ಎಂದು ಕರೆಯುವಷ್ಟು ಜನರ ಹೆಸರೂ ಅವರಿಗೆ ಗೊತ್ತಿದೆ. ಕಳೆದ ಚುನಾವಣೆಯಲ್ಲಿ ತಮ್ಮ ಸೋಲು ಒಂದು ಆಕಸ್ಮಿಕ ಎಂದು ಖರ್ಗೆ ಭಾವಿಸಿಲ್ಲ. ಹರಸಾಹಸದಲ್ಲಿ ತಮ್ಮನ್ನು ಸೋಲಿಸಲಾಗಿದೆ ಎಂದು ಅವರೇ ಪದೇ ಪದೆ ಹೇಳಿದ್ದಾರೆ. ಹೀಗಿರುವಾಗ ಕಳೆದುಕೊಂಡಿದ್ದನ್ನು ಕಳೆದುಕೊಂಡಲ್ಲೇ ಹುಡುಕುವ ಯತ್ನಕ್ಕೆ ಖರ್ಗೆಯವರು ಮುಂದಾದರೆ ಅವರು ಉತ್ತರ ಪ್ರದೇಶದತ್ತ ಕ್ಷೇತ್ರ ಹುಡುಕಿಕೊಂಡು ಅಲೆದಾಡಲಿಕ್ಕಿಲ್ಲ.