Monday, 16th September 2024

ಗರ್ಭಿಣಿಯರ ಜೀವರಕ್ಷಕ ವಿಲಿಯಂ ಹಂಟರ್‌

ಹಿಂದಿರುಗಿ ನೋಡಿದಾಗ

ಪ್ರಕೃತಿಯ ಚೋದ್ಯಗಳಲ್ಲಿ ಪ್ರಸವ ಎನ್ನುವುದು ಬಹಳ ಮುಖ್ಯವಾದದ್ದು. ಜೀವಜಗತ್ತಿನಲ್ಲಿ ಪ್ರಸವ ಎನ್ನುವುದು ಅತ್ಯಂತ ಸಹಜವಾಗಿ ನಡೆಯುವ ಕ್ರಿಯೆ. ನಮ್ಮ ಪೂರ್ವಜರಿಗೆ ಪ್ರಸವ ಎನ್ನುವುದು ಎಷ್ಟು ಬೆರಗನ್ನು ಉಂಟುಮಾಡಿತು ಎಂದರೆ ಅದು ತಾಯಿಯನ್ನು ‘ದೈವತ್ವ’ಕ್ಕೆ ಏರಿಸಿತು, ‘ಮಾತೃದೇವತೆ’ಯ ಆರಾಧನೆಗೆ ಎಡೆಮಾಡಿ ಕೊಟ್ಟಿತು. ಮಾತೃಪ್ರಧಾನ ಸಮಾಜವು ರೂಪುಗೊಂಡಿತು.

ಸಂತಾನ ವರ್ಧನಾ ಕಾರ್ಯವು ಬಹುಪಾಲು ನಿಗೂಢವಾಗಿತ್ತು. ಆದರೆ ಮನುಷ್ಯನು ಮೂಲತಃ ತಾನು ‘ಬುದ್ಧಿವಂತ ಮಾನವ’ (ಹೋಮೋ ಸೆಪಿಯನ್ಸ್) ಎನ್ನುವ ತಿಳಿವನ್ನು ಪಡೆದ ವನಾದ ಕಾರಣ, ಸಂತಾನ ವರ್ಧನೆಗೆ ಸಂಬಂಧಿಸಿದ ಅನೇಕ ವಿಚಾರಗಳನ್ನು ಕ್ರಮೇಣ ಅನಾವರಣ ಮಾಡಲಾರಂಭಿಸಿದ. ಅಥರ್ವಣ ವೇದಕಾಲದಲ್ಲಿದ್ದ ಪಿಪ್ಪಲಾದ ಮಹರ್ಷಿಗಳು ತಮ್ಮ ಪ್ರಶ್ನೋಪನಿಷತ್ತಿನಲ್ಲಿ ‘ಜೀವೋತ್ಪತ್ತಿ’ಗೆ ಸಂಬಂಧಿಸಿದ ಮೂಲಭೂತ ಪ್ರಶ್ನೆಗಳನ್ನು ಚರ್ಚಿಸಿದರು. ತಮ್ಮ ಗರ್ಭೋಪನಿಷತ್ತಿನ ಮೂಲಕ ಮನುಷ್ಯನ ದೇಹದ ರಚನೆ ಮತ್ತು ಕಾರ್ಯ, ಗರ್ಭಕಟ್ಟುವಿಕೆ, ೯ ತಿಂಗಳಲ್ಲಿ ಗರ್ಭದ ಬೆಳವಣಿಗೆ, ಪ್ರತಿ ತಿಂಗಳೂ ಗರ್ಭದ ಬೆಳವಣಿಗೆಯಲ್ಲಿ ಸಂಭವಿಸುವ ಬದಲಾವಣೆಗಳು ಹಾಗೂ ಪ್ರಸವದ ಬಗ್ಗೆ ಮಾಹಿತಿಯನ್ನು ನೀಡಿದರು. ಇಲ್ಲಿ ಅಧ್ಯಾತ್ಮಿಕ ವಿಚಾರಗಳಿಗಿಂತ ವಿಜ್ಞಾನಕ್ಕೇ ಒತ್ತು ತುಸು ಹೆಚ್ಚಿದೆ ಎನ್ನಬಹುದು.

ಪಾಶ್ಚಾತ್ಯ ಜಗತ್ತಿನ ಪೈಥಾಗೊರಸ್, ‘ಪುರುಷನ ವೀರ್ಯವು ಉತ್ಪಾದನೆಯಾಗುವಾಗ, ಪ್ರತಿ ವೀರ್ಯಕಣ ದಲ್ಲಿ ಒಂದೊಂದು ಪೂರ್ಣ ರೂಪದಲ್ಲಿ ಬೆಳೆದ ಆದರೆ ಸೂಕ್ಷ್ಮರೂಪದಲ್ಲಿರುವ ಶಿಶುವು ಇರುತ್ತದೆ’ ಎಂದ. ಇದುವೇ ಕುಬ್ಜಮಾನವ (ಹೋಮಂಕ್ಯುಲಸ್). ಇದು ‘ಪೂರ್ವ ರೂಪಣ’ ಸಿದ್ಧಾಂತ ಎಂದು (ಪ್ರಿಫಾರ್ಮೇಶನ್) ಪ್ರಚಲಿತ ವಾಯಿತು. ಆದರೆ ಅರಿಸ್ಟಾಟಲ್ ಭಿನ್ನವಾಗಿ ವಾದಿಸಿದ. ತಾಯಿಯ ಗರ್ಭದಲ್ಲಿರುವ ಆಕಾರರಹಿತ ವಸ್ತುವು ಕ್ರಮೇಣ ಅಭಿವರ್ಧನೆಯಾಗಿ, ಶಿಶುವಿನ ಎಲ್ಲ ಅಂಗಾಂಗಗಳು ರೂಪುಗೊಳ್ಳುತ್ತವೆ; ನಂತರವೇ ಪೂರ್ಣ ಬೆಳೆದ ಶಿಶುವು ಪ್ರಸವದ ಮೂಲಕ ಹೊರಬರುತ್ತದೆ ಎಂದು ವಾದಿಸಿದ. ಇದು ನವರೂಪವಾದ (ನಿಯೋ-ರ್ಮಿಸಂ/ಎಪಿಜೆನೆಟಿಕ್ಸ್) ಎಂದು ಪ್ರಸಿದ್ಧವಾಯಿತು. ಇವರ ಈ ಸಿದ್ಧಾಂತಗಳು ೧೮ನೇ ಶತಮಾನ ದವರೆಗೆ ಮುಂದುವರಿದವು.

ಅದರಲ್ಲೂ ಪೈಥಾಗೊರಸನ ಸಿದ್ಧಾಂತವೇ ಹೆಚ್ಚು ಮಾನ್ಯವಾಗಿತ್ತು. ಮಧ್ಯಯುಗದ ಅರಬ್ ವೈದ್ಯಕೀಯವೂ ಇವರ ವಾದವನ್ನೇ ಎತ್ತಿಹಿಡಿಯಿತು. ಈ ಅವಧಿಯಲ್ಲಿ ಯುರೋಪಿನಲ್ಲಿ ಪುನರುತ್ಥಾನ ಅಥವಾ ರಿನೇಸಾನ್ಸ್ ಆರಂಭವಾಯಿತು. ಎಲ್ಲ ಜ್ಞಾನ ಕ್ಷೇತ್ರಗಳಲ್ಲಿ ಹೊಸ ಹೊಸ ವಿಚಾರಗಳು ರಾರಾಜಿಸಲಾರಂಭಿಸಿದವು. ಅದಕ್ಕೆ ಪ್ರಸವ ವಿಜ್ಞಾನವು ಹೊರತಾಗಿರಲಿಲ್ಲ. ಡಾ.ವಿಲಿಯಂ ಹಂಟರ್ ಓರ್ವ ಸ್ಕಾಟಿಶ್ ವೈದ್ಯ ಹಾಗೂ ಅಂಗರಚನಾ ವಿಜ್ಞಾನಿ. ಇವನು ಜಾನ್ ಮತ್ತು ಆಗ್ನೆಸ್
ಹಂಟರ್ ಅವರ ೭ನೇ ಮಗ. ಇವನು ೧೪ನೆಯ ವಯಸ್ಸಿನಲ್ಲಿ ದೇವತಾಶಾಸದ (ಥಿಯಾಲಜಿ) ಅಧ್ಯಯನಕ್ಕೆ ಗ್ಲಾಸ್ಗೋ ವಿಶ್ವವಿದ್ಯಾಲಯ ಸೇರಿ ೫ ವರ್ಷಗಳ ಕಾಲ ಕಲಿತ. ಆದರೆ ಈ ಕಲಿಕೆಯು ಅವನಿಗೆ ತೃಪ್ತಿ ತರಲಿಲ್ಲ. ಹಾಗಾಗಿ ದೇವತಾಶಾಸ್ತ್ರವನ್ನು ತೊರೆದು ವೈದ್ಯಕೀಯ ಶಿಕ್ಷಣ ಪಡೆಯಲು ಮುಂದಾದ.

ತನ್ನ ಈ ನಿರ್ಣಯಕ್ಕಾಗಿ ಅವನು ಎಂದಿಗೂ ಬೇಸರಗೊಳ್ಳಲಿಲ್ಲ. ಅವನು ತನ್ನ ಸಮಕಾಲೀನ ವೈದ್ಯಕೀಯ ಜಗತ್ತಿನಲ್ಲಿ ಅತ್ಯಂತ ಪ್ರಸಿದ್ಧ ಪ್ರಾಧ್ಯಾಪಕ ಹಾಗೂ ಪ್ರಸವ ವಿಜ್ಞಾನದ ವೈದ್ಯನಾದ. ಅವನನ್ನು ಇಂದು ನಾವೆಲ್ಲರೂ ಸ್ಮರಿಸಿಕೊಳ್ಳುತ್ತಿರುವುದಕ್ಕೆ ಕಾರಣ, ಪ್ರಪಂಚದ ಶ್ರೇಷ್ಠ ವೈದ್ಯಕೀಯ ಕೃತಿಗಳ ಸಾಲಿನಲ್ಲಿ
ನಿಲ್ಲಬಹುದಾದ ‘ಅನಾಟಾಮಿಯ ಯೂಟರಿ ಹ್ಯೂಮನಿಗ್ರಾವಿಡಿ’ ಎನ್ನುವ ವೈದ್ಯಕೀಯ ಗ್ರಂಥವನ್ನು ಸಾರಸ್ವತ ಜಗತ್ತಿಗೆ ನೀಡಿದ. ಇಂದಿಗೆ ಸುಮಾರು ೨೫೦ ವರ್ಷಗಳ ಹಿಂದೆ, ಗರ್ಭಕೋಶ ಹೇಗಿರುತ್ತದೆ, ಅದರ ವಿವಿಧ ಭಾಗಗಳ ಕೆಲಸ ಗಳೇನು, ಭ್ರೂಣವು ಹೇಗೆ ಬೆಳೆದು ಪೂರ್ಣರೂಪದ ಶಿಶುವಾಗುತ್ತದೆ ಎನ್ನುವುದರ ಬಗ್ಗೆ ಬರೆದ ಸಚಿತ್ರ ಗ್ರಂಥವಿದು.

ಮೇ ೨೩, ೧೭೧೮ರಂದು ಸ್ಕಾಟ್ಲೆಂಡಿನ ಲಂಕಾಷೈರ್ ನಗರ ದಲ್ಲಿ ಹುಟ್ಟಿದ ವಿಲಿಯಂ ಹಂಟರ್ ಬಾಲ್ಯದಿಂದಲೇ ವೈದ್ಯ ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸಿಕೊಂಡ. ಮೊದಲು ಹ್ಯಾಮಿಲ್ಟನ್ ಪ್ರದೇಶದಲ್ಲಿ ವೃತ್ತಿನಿರತರಾಗಿದ್ದ ಡಾ.ವಿಲಿಯಂ ಕುಲ್ಲೆನ್ ಎಂಬುವವರ ಬಳಿ ಶಿಷ್ಯವೃತ್ತಿಯನ್ನು ೧೭೩೭-೧೭೩೯ರವರೆಗೆ ನಡೆಸಿದ. ೧೭೪೦ರಲ್ಲಿ ಲಂಡನ್ ನಗರಕ್ಕೆ ಪ್ರಯಾಣ ಬೆಳೆಸಿದ. ಅಂದಿನ ಪ್ರಖ್ಯಾತ ಪ್ರಸೂತಿತಜ್ಞ ವಿಲಿಯಂ ಸ್ಮೆಲ್ಲಿ ಬಳಿ ಶಿಷ್ಯವೃತ್ತಿ ಆರಂಭಿಸಿದ. ಇವರಿಬ್ಬರಿಂದ ಪ್ರಸೂತಿ ವಿಜ್ಞಾನದ ಎಲ್ಲ ಸೂಕ್ಷ್ಮಗಳನ್ನು ಕರಗತ ಮಾಡಿಕೊಂಡ. ಈ ಶಿಷ್ಯವೃತ್ತಿಯು ಮುಂದೆ, ಅವನು ಅತ್ಯುತ್ತಮ ಪ್ರಸೂತಿ ತಜ್ಞನಾಗಲು ಅಗತ್ಯವಾದ ಬುನಾದಿ ಹಾಕಿತು. ಈ ಕ್ಷೇತ್ರದಲ್ಲಿ ಮತ್ತಷ್ಟು ಪರಿಣತಿ ಪಡೆಯಲೆಂದು ಲಂಡನ್ನಿನ ಶ್ರೇಷ್ಠ ಪ್ರಸೂತಿ ತಜ್ಞ ಡಾ.ಜೇಮ್ಸ್ ಡೌಗ್ಲಾಸ್ ಅವರ ಬಳಿ ಕೆಲಸ ಕಲಿಯಲಾರಂಭಿಸಿದ.

ಪ್ರಸೂತಿ ತಂತ್ರದ ಜತೆಗೆ ಅಂಗರಚನಾ ವಿಜ್ಞಾನದ ಬಗ್ಗೆಯೂ ಸಮಗ್ರ ಪ್ರಾಯೋಗಿಕ ಜ್ಞಾನವನ್ನು ಗಳಿಸಿದ. ೧೭೫೦ರಲ್ಲಿ ಗ್ಲಾಸ್ಗೋ ವಿಶ್ವವಿದ್ಯಾಲಯದಿಂದ ವೈದ್ಯಕೀಯದಲ್ಲಿ ಸ್ನಾತಕೋತ್ತರ ಪದವಿ ಪಡೆದ. ೧೭೬೨ರ ವೇಳೆಗೆ ಲಂಡನ್ನಿನಲ್ಲಿ ಹಂಟರ್‌ನನ್ನು ಮೀರಿಸುವಂಥ ಮತ್ತೋರ್ವ ಪ್ರಸೂತಿ ತಜ್ಞನಿಲ್ಲ ಎನ್ನುವಷ್ಟು ಖ್ಯಾತಿ ಪಡೆದ. ಇವನ ಖ್ಯಾತಿ ರಾಣಿ ಷಾರ್ಲೋಟ್‌ಳನ್ನು ತಲುಪಿತು. ಅವನನ್ನು ತನ್ನ ಖಾಸಗಿ ವೈದ್ಯನನ್ನಾಗಿ ನೇಮಿಸಿಕೊಂಡ ರಾಣಿ, ೨ ವರ್ಷಗಳ ಒಳಗೆ
ಹಂಟರನಿಗೆ ‘ಫಿಸಿಶಿಯನ್ ಎಕ್ಸ್‌ಟ್ರಾರ್ಡಿನರಿ’ ಎಂಬ ಗೌರವ ಯುತ ವೈದ್ಯಕೀಯ ಸ್ಥಾನ ನೀಡಿ ಗೌರವಿಸಿದಳು. ಆಗ ಅವನಿಗೆ ೪೪ ವರ್ಷ.

ವಿಲಿಯಂ ಹಂಟರನು ಲಂಡನ್ನಿಗೆ ಬಂದ ದಿನಗಳಿಂದಲೇ ಅಂಗರಚನಾ ವಿಜ್ಞಾನದ ಬಗ್ಗೆ ಆಸಕ್ತಿ ತಳೆದ. ಒಬ್ಬ ವೈದ್ಯನಿಗೆ ಅಂಗರಚನಾ ವಿಜ್ಞಾನದ ತಿಳಿವು ಎಷ್ಟು ಮುಖ್ಯ ಎನ್ನುವುದನ್ನು ತಿಳಿಸಲು ‘ವೈದ್ಯವಿಜ್ಞಾನದ ಭದ್ರವಾದ ತಳಪಾಯವೆಂದರೆ ಅಂಗರಚನಾ ವಿಜ್ಞಾನ. ಒಬ್ಬ ಖಗೋಳ ವಿಜ್ಞಾನಿಗೆ ರೇಖಾ ಗಣಿತದ ತಿಳಿವು ಎಷ್ಟು ಮುಖ್ಯವೋ, ಓರ್ವ ವೈದ್ಯನಿಗೆ ಅಥವಾ ಶಸವೈದ್ಯನಿಗೆ, ಅಷ್ಟೇ ಮುಖ್ಯ ಅಂಗರಚನಾ ವಿಜ್ಞಾನದ ತಿಳಿವು. ಅಂಗರಚನೆಯ ತಿಳಿವು ಹೊಸಹೊಸ ಶೋಧನೆ ಗಳನ್ನು ನಡೆಸಲು ನೆರವಾಗುತ್ತದೆ, ಸಮಾಜದಲ್ಲಿ ಪ್ರಚಲಿತದಲ್ಲಿರುವ ಮೌಢ್ಯಗಳ ನಿವಾರಣೆಗೆ ನೆರವಾಗುತ್ತದೆ ಹಾಗೂ ಘೋರ ತಪ್ಪುಗಳನ್ನು ಮಾಡದಂತೆ ನಮ್ಮನ್ನು ರಕ್ಷಿಸುತ್ತದೆ’ ಎಂದ.

ಈ ಹಿನ್ನೆಲೆಯಲ್ಲಿ ಅವನು ೧೭೪೯ರಿಂದಲೇ ಅಂಗ ರಚನೆ ಮತ್ತು ಪ್ರಸೂತಿ ವಿಜ್ಞಾನದ ಬಗ್ಗೆ ಸ್ವತಂತ್ರವಾಗಿ ಉಪನ್ಯಾಸ ನೀಡಲು ಆರಂಭಿಸಿದ. ಈ ಕಾಯಕವನ್ನು ಅವನು ಸಾಯುವವರಿಗೆ, ಅಂದರೆ ೩೭ ವರ್ಷಗಳವರೆಗೆ ನಿರಂತರವಾಗಿ ಮುಂದುವರಿಸಿದ. ೧೭೭೦. ವಿಲಿಯಂ ಹಂಟರ್ ಪ್ರಸೂತಿ ತಂತ್ರ ವಿಜ್ಞಾನದ ಆಳ-ವ್ಯಾಪ್ತಿಯನ್ನು ಕ್ರಮಬದ್ಧವಾಗಿ ದಾಖಲಿಸುವ ಹಿನ್ನೆಲೆಯಲ್ಲಿ ಲಂಡನ್ನಿನ ‘ಗ್ರೇಟ್ ವಿಂಡ್‌ಮಿಲ್ ಸ್ಟ್ರೀಟ್’ ಎಂಬ ಬಡಾವಣೆಯಲ್ಲಿ ಒಂದು ದೊಡ್ಡ ಮನೆಯನ್ನು ಕಟ್ಟಿಸಿ ಅಲ್ಲಿ ಒಂದು ವರ್ತುಲರಂಗವನ್ನು (ಆಂಫಿಥಿಯೇಟರ್) ನಿರ್ಮಿಸಿದ. ಅಲ್ಲಿ ಮಾನವನ ಅಂಗರಚನೆಯನ್ನು ತಿಳಿಯಲು ಶವದ ಛೇದನಕ್ಕೆ ಅಗತ್ಯವಾದ ಎಲ್ಲ ಅನುಕೂಲತೆಗಳನ್ನು ಏರ್ಪಡಿಸಿದ. ಅದೇ ಮನೆಯಲ್ಲಿಯೇ ಒಂದು ವಸ್ತುಸಂಗ್ರಹಾಲಯ ವನ್ನು ಆರಂಭಿಸಿದ. ತಾನು ಕಂಡ ಅಪರೂಪದ ಮಾನವ ಅಂಗಾಂಗಗಳ ಮಾದರಿಗಳನ್ನು ಸಂರಕ್ಷಿಸಿ, ಸೂಕ್ತ ವಿವರಣೆ ಗಳೊಂದಿಗೆ ಪ್ರದರ್ಶಿಸಿದ.

ಹಂಟರನ ಮನೆಯು ಒಂದು ‘ಪ್ರವಾಸಿ ಸ್ಥಳ’ವಾಗಿ ಪ್ರಸಿದ್ಧಿಗೆ ಬರಲಾರಂಭಿಸಿತು. ಮುಂದೆ ಇದೇ ಮನೆಯೇ ‘ವಿಂಟರ್ ಸ್ಕೂಲ್ ಆಫ್ ಅನಾಟಮಿ’ ಎಂದು ಪ್ರಸಿದ್ಧ ವಾಯಿತು. ವಿಲಿಯಂ ಹಂಟರನಿಗಿಂತಲೂ ಮೊದಲು, ಯುರೋಪಿಯನ್ ವೈದ್ಯಕೀಯದಲ್ಲಿ ಪ್ರಸೂತಿ ವಿಜ್ಞಾನದ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿರಲಿಲ್ಲ. ಅದರಲ್ಲೂ ದಿನ ಸಮೀಪಿಸಿರುವ ತುಂಬು ಗರ್ಭಿಣಿಯ ಸ್ಥಿತಿ-ಗತಿಗಳ ಬಗ್ಗೆ ಅವರಿಗೆ ಜ್ಞಾನಕ್ಕಿಂತ ಅಜ್ಞಾನವೇ ತುಂಬಿ ತುಳುಕುತ್ತಿತ್ತು. ಇಂಥ ವಿಷಮ ಸ್ಥಿತಿಯಲ್ಲಿ
ಹಂಟರನ ಈ ಶಾಲೆ ಖ್ಯಾತವಾಯಿತು. ಲಂಡನ್ನಿನಲ್ಲಿ ಮಾತ್ರವಲ್ಲ, ಇಡೀ ಯುರೋಪಿನಲ್ಲಿ ಹಾಗೂ ವಿಶ್ವಾದ್ಯಂತ ಪ್ರಸಿದ್ಧಿ ಪಡೆಯಿತು. ತುಂಬು ಗರ್ಭವತಿಯರ ಆರೋಗ್ಯ ಸಂರಕ್ಷಣೆಯ ಅಗತ್ಯದ ಬಗ್ಗೆ ಜಾಗೃತಿಯುಂಟಾಯಿತು.

ವಿಲಿಯಂ ಹಂಟರ್ ತನ್ನ ಜೀವಮಾನ ಪೂರ್ಣ ಇದೇ ಶಾಲೆ ಯಲ್ಲಿ ಕರ್ತವ್ಯ ನಿರ್ವಹಿಸಿದ. ವಿಲಿಯಂ ಹಂಟರನು, ಜೇಮ್ಸ್ ಡೌಗ್ಲಾಸ್ ಅವರ ಬಳಿ ಶಿಷ್ಯವೃತ್ತಿ ಆರಂಭಿಸಿದ ದಿನದಿಂದಲೇ ಪ್ರಸೂತಿ ವಿಜ್ಞಾನಕ್ಕೆ ಸಂಬಂಧಿಸಿದ ಮಾದರಿಗಳ ಸಂಗ್ರಹಣೆಯನ್ನು ಆರಂಭಿಸಿದ್ದ. ಸಂಕೀರ್ಣ ಪ್ರಸವಗಳಲ್ಲಿ ಮೃತರಾದ ತಾಯಂದಿರ ಮರಣೋತ್ತರ ಶವಪರೀಕ್ಷೆಯನ್ನು ಬಹಳ ಎಚ್ಚರಿಕೆಯಿಂದ ನಡೆಸುತ್ತಿದ್ದ. ವೈದ್ಯವಿಜ್ಞಾನಕ್ಕೆ ಅಪರೂಪವಾಗಿರುವಂಥ ವಿಷಯಗಳನ್ನು ಒಳಗೊಂಡ ಗರ್ಭಕೋಶ ಮಾದರಿಗಳನ್ನು ಎಚ್ಚರಿಕೆಯಿಂದ ಛೇದಿಸುತ್ತಿದ್ದ. ಮೊದಲು ತುಂಬು ಗರ್ಭಿಣಿಯ ಗರ್ಭಾಶಯದ ಸ್ವರೂಪವನ್ನು ದಾಖಲಿಸಿದ. ಪ್ರಸವವು ಸಾಮಾನ್ಯವಾಗಿ ೩ ಹಂತಗಳಲ್ಲಿ ನಡೆಯುತ್ತದೆ. ಒಂದೊಂದು ಹಂತ ದಲ್ಲೂ ಪ್ರಸವವು ಕಷ್ಟವಾಗುವ ಸಾಧ್ಯತೆಯಿರುತ್ತದೆ. ತೊಡಕು ಗಳಾಗಿ ತಾಯಿ-ಮಗುವಿನ ಜೀವಕ್ಕೆ ಎರವಾಗುವ ಸಂದರ್ಭಗಳಿರುತ್ತವೆ. ಅಂಥ ತಾಯಂದಿರ ಗರ್ಭಕೋಶಗಳನ್ನು ಛೇದಿಸಿ, ಸಂಗ್ರಹಿಸಿದ. ತಾಯಿ-ಮಗುವಿನ ನಡುವೆ ಇರುವ ಜೈವಿಕ ಬಳ್ಳಿಯೇ ಹೊಕ್ಕಳುಬಳ್ಳಿ. ಇದು ಮಗುವಿನ ಹೊಟ್ಟೆಯಿಂದ ಹೊರಟು, ಮಾಸು ಎನ್ನುವ ರಚನೆಯ ಮೂಲಕ ತಾಯಿಯ ಗರ್ಭಕೋಶದ ಭಿತ್ತಿಯೊಡನೆ ಸಂಪರ್ಕ ಸಾಧಿಸಿರುತ್ತದೆ.

ತಾಯಿಯ ರಕ್ತಪರಿಚಲನೆಗಿಂತ ಭಿನ್ನವಾದ ಸ್ವತಂತ್ರ ಪರಿಚಲನೆಯನ್ನು ರೂಪಿಸಿಕೊಳ್ಳುತ್ತದೆ. ತಾಯಿ-ಮಗುವಿನ ಆರೋಗ್ಯವು ಈ ಮಾಸನ್ನು ಆಧರಿಸಿರುತ್ತದೆ. ತಾಯಿ- ಮಗುವಿನ ಉಳಿವು ಅಳಿವು ಗರ್ಭಕೋಶದಲ್ಲಿನ ಮಾಸುವಿನ ಸ್ಥಾನದ ಮೇಲೆ ನಿರ್ಧಾರವಾಗುತ್ತದೆ. ಈ ಎಲ್ಲ ವಿಚಾರಗಳು ಅಂದಿನ ವೈದ್ಯಕೀಯ ಜಗತ್ತಿಗೆ ಅಪರಿಚಿತವಾಗಿತ್ತು. ಅವನ್ನು ಹಂಟರ್ ವಿವರಿಸಿದ. ತನ್ನ ಹೇಳಿಕೆಗೆ ಪೂರಕವಾಗುವಂಥ ಮಾದರಿಗಳನ್ನು ಸಂಗ್ರಹಿಸಿದ. ಹೀಗೆ ೨೧ ವರ್ಷಗಳ ಕಾಲ ತುಂಬು ಗರ್ಭಿಣಿಯರನ್ನು ನಿಕಟವಾಗಿ ಅಧ್ಯಯನ ಮಾಡಿದ. ಪ್ರಸವವಿಜ್ಞಾನವನ್ನು ಕ್ರಮಬದ್ಧಗೊಳಿಸಿದ.

ವಿಲಿಯಂ ಹಂಟರ್ ಗರ್ಭಕೋಶ ಮಾದರಿಗಳನ್ನು ಸಂಗ್ರಹಿಸಿದ. ಅದಕ್ಕೆ ಸಂಬಂಽಸಿದ ಪಠ್ಯವನ್ನು ರಚಿಸಿ ಆಸಕ್ತ ವೈದ್ಯರಿಗೆ, ವೈದ್ಯವಿದ್ಯಾರ್ಥಿಗಳಿಗೆ,  ಸಾರ್ವಜನಿಕರಿಗೆ ವಿವರಿಸಿದ. ಈ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸಲು ಸುಂದರ ಚಿತ್ರಗಳನ್ನು ಬರೆಯಿಸಿದ. ಸುಪ್ರಸಿದ್ಧ ವೈದ್ಯಕೀಯ ಚಿತ್ರಕಾರ ಯಾನ್ -ನ್ ರಿಮ್ಸ್‌ಡೈಕ್‌ನ ನೆರವನ್ನು ಪಡೆದ. ಈತ ಬರೆದ ಚಿತ್ರಗಳು ನೈಜ ಹಾಗೂ ನಿಖರವಾಗಿದ್ದವು. ವಿಲಿಯಂ ಹಂಟರನ ಗೆಳೆಯ ಸರ್ ರಾಬರ್ಟ್ ಸ್ಟ್ರೇಂಜ್ ಪಡಿಯಚ್ಚು ಕಲೆಯಲ್ಲಿ (ಎನ್‌ಗ್ರೇವಿಂಗ್) ಪರಿಣಿತ. ಈತನ ನೇತೃತ್ವದಲ್ಲಿ ಚಿತ್ರಗಳ ಸೊಗಸಾದ ಪಡಿಯಚ್ಚುಗಳು ಸಿದ್ಧವಾದವು. ಇವು ಹಂಟರನ ಹೆಸರನ್ನು ವಿಶ್ವವಿಖ್ಯಾತಗೊಳಿಸಿದವು.೧೭೫೧. ಓರ್ವ ಗರ್ಭವತಿ ಹಠಾತ್ತನೆ ಮೃತಳಾದಳು. ಆಕೆ ಇನ್ನೇನು ನಾಳೆಯೋ ನಾಡಿದ್ದೋ ಮಗುವನ್ನು ಹಡೆಯಬಹುದು ಎಂಬ ನಿರೀಕ್ಷೆಯಿತ್ತು. ಆದರೆ ದುರದೃಷ್ಟವಶಾತ್ ಆಕೆ ಜೀವ ಕಳೆದುಕೊಂಡಳು. ಕೂಡಲೇ ಆಕೆಯ ದೇಹವನ್ನು ಹಂಟರನ ಅಧ್ಯಯನಕ್ಕೆ ಒದಗಿಸಿದರು. ಹಂಟರನು ಆ
ದೇಹವನ್ನು ವರ್ತುಲರಂಗಕ್ಕೆ ತಂದು ಶವ ಛೇದನದ ಮೇಜಿನ ಮೇಲೆ ಮಲಗಿಸಿದ. ವೈದ್ಯರು, ವೈದ್ಯವಿದ್ಯಾರ್ಥಿಗಳು, ಸಾರ್ವಜನಿಕರು ಅಲ್ಲಿ ಸೇರಿದರು. ಎಲ್ಲರ ಸಮ್ಮುಖದಲ್ಲಿ ಆಕೆಯ ಒಡಲ ಛೇದನವನ್ನು ಆರಂಭಿಸಿದ. ಜೇನುಮೇಣಕ್ಕೆ ವಿವಿಧ ಬಣ್ಣ ತುಂಬಿ ರಕ್ತನಾಳಗಳ ಒಳಗೆ ಚುಚ್ಚಿದ. ಇದರಿಂದ ಧಮನಿ ಹಾಗೂ ಸಿರೆಗಳನ್ನು ಗುರುತಿಸುವುದು ಸಾಧ್ಯ ವಾಯಿತು. ತುಂಬುಗರ್ಭದ ಒಳನೋಟವು ಹೇಗಿರುತ್ತದೆ ಎನ್ನುವುದನ್ನು ಎಲ್ಲರೂ ಮೊದಲ ಬಾರಿಗೆ ಕಣ್ಣಾರೆ ಕಂಡರು.

ಹಂಟರ್ ಇವುಗಳ ಚಿತ್ರಗಳನ್ನು ಪಡಿಯಚ್ಚನ್ನು ಸಿದ್ಧಪಡಿಸಿದ. ತನ್ನ ಬಳಿಯಿದ್ದ ಇತರ ಅಮೂಲ್ಯ ಪಡಿಯಚ್ಚುಗಳನ್ನು ಬಳಸಿಕೊಂಡು ಒಂದು ಸಚಿತ್ರ ಗ್ರಂಥವನ್ನು ೧೭೭೪ರಲ್ಲಿ ರಚಿಸಿ ರಾಜ ಮುಮ್ಮಡಿ ಜಾರ್ಜ್‌ನಿಗೆ ಸಮರ್ಪಿಸಿದ. ಅದುವೇ ‘ಅನಟಾಮಿಯ ಯೂಟರಿ ಹ್ಯೂಮನಿ ಗ್ರಾವಿಡಿ’ (ಮಾನವ ತುಂಬುಗರ್ಭಿಣಿಯ ಅಂಗರಚನೆ) ಎಂಬ ಹಂಟರನ ಹೆಸರನ್ನು ಚಿರಸ್ಥಾಯಿಗೊಳಿಸಿದ ಗ್ರಂಥ. ಈ ಗ್ರಂಥ ರಚನೆಯ ಹಿಂದೆ ೩೦ ವರ್ಷಗಳ ಅವಧಿಯಲ್ಲಿ ಹಂಟರ್, ರಿಮ್ಸ್ ಡೈಕ್
ಹಾಗೂ ಸ್ಟ್ರೇಂಜ್ ಅವರು ನಡೆಸಿದ ಪರಿಶ್ರಮವಿತ್ತು. ಇದು ಲ್ಯಾಟಿನ್ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಪ್ರಕಟವಾಯಿತು. ಈತನ ವಸ್ತುಸಂಗ್ರಹಾಲಯದಲ್ಲಿ ೪೦೦ ಪ್ರಸವ ವಿಜ್ಞಾನದ ಮಾದರಿಗಳಿದ್ದವು. ಈತನ ಗ್ರಂಥದಲ್ಲಿ ಅತ್ಯಮೂಲ್ಯ ೩೪ ಚಿತ್ರಗಳಿದ್ದವು. ಇವೆಲ್ಲವನ್ನು ಗ್ಲಾಸ್ಗೋ ನಗರದಲ್ಲಿರುವ ‘ಹಂಟೇರಿಯನ್ ಮ್ಯೂಸಿಯಂ’ನಲ್ಲಿ ಇಂದಿಗೂ ನೋಡಬಹುದು. ಹಂಟರನ ಜೀವಮಾನ ಸಾಧನೆಯಾದ ಈ ಗ್ರಂಥವು ಇಡೀ ಜಗತ್ತಿನ ಪ್ರಸೂತಿ ತಂತ್ರ ಸೇವೆಯ ಗುಣ
ಮಟ್ಟವನ್ನು ಸುಧಾರಿಸಿತು ಎಂದರೆ ಅತಿಶಯೋಕ್ತಿ ಯಾಗಲಾರದು.

Leave a Reply

Your email address will not be published. Required fields are marked *