Friday, 20th September 2024

ಸೋಲನ್ನು ಗೆಲ್ಲುವ ಕಲೆಯಲ್ಲಿ ನಿಸ್ಸೀಮರು ಯಾರು ?

ಅಕ್ಬರ್‌ ನಾಮಾ

ಎಂ.ಜೆ.ಅಕ್ಬರ್‌

ಮೊದಲಿಗೊಂದು ಪ್ರಶ್ನೆ. ಸೋಲನ್ನು ಗೆಲ್ಲಲು ಸಾಧ್ಯವಿದೆಯೇ? ಬಹುಶಃ ಸಾಧ್ಯವಿದೆ. ನೀವು ಗುರಿಯನ್ನೇ ಬಹಳ ಹತ್ತಿರಕ್ಕೆ ನಿಗದಿಪಡಿಸಿಕೊಳ್ಳಿ. ಆಗ ನೀವು ಬಿಟ್ಟ ಬಾಣವು ಗುರಿಯ ಸ್ವಲ್ಪ ದೂರ ಆಚೆ ಹೋಗಿ ಬಿದ್ದರೆ, ಅಯ್ಯೋ ಜಸ್ಟ್ ಮಿಸ್ ಆಗಿಹೋಯಿತು ಎಂದು ಖುಷಿಪಡುವುದಕ್ಕೆ ಏನೂ ಅಡ್ಡಿಯಿಲ್ಲ. ನಾನೇನೂ ವಕ್ರದೃಷ್ಟಿಯನ್ನು ಸಮರ್ಥಿಸಿಕೊಳ್ಳುತ್ತಿಲ್ಲ. ಬದಲಿಗೆ, ನಿರೀಕ್ಷೆಗಳನ್ನು ಕಲಾತ್ಮಕವಾಗಿ ನಿಭಾಯಿಸುವ ಚಾಕಚಕ್ಯತೆಯನ್ನು
ಹೊಗಳುತ್ತಿದ್ದೇನೆ. ರಾಜಕೀಯದಲ್ಲಿ ಯಾವಾಗಲೂ ವೇಟಿಂಗ್ ರೂಮ್ ಎಂಬ ಬೇಜಾರಿನ ಸ್ಥಳದಲ್ಲಿ ಕುಳಿತುಕೊಂಡಿರುವವರಿಗೆ ಇಂತಹದ್ದೊಂದು ಜಾಣ್ಮೆ ಇದ್ದರೆ ಒಳ್ಳೆಯದೇ ಬಿಡಿ.

ಕಾಂಗ್ರೆಸ್ ಪಕ್ಷ ಈ ಕಲೆಯನ್ನು ಸಿದ್ಧಿಸಿಕೊಂಡಿದೆ. ಹೇಗೆ ಎಂಬುದನ್ನು ನೋಡಲು ಅಂಕಿಅಂಶಗಳನ್ನು ಗಮನಿಸಿದರೆ ಹೆಚ್ಚು ಪ್ರಯೋಜನವಿಲ್ಲ. ಆದರೂ ನೋಡೋಣ ಬನ್ನಿ. ಕೊನೆಯ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದು ೨೦೦೯ರ ಚುನಾವಣೆಯಲ್ಲಿ. ಆ ಸಲ ಅದು ಗೆದ್ದಿದ್ದು ೨೦೬ ಸೀಟುಗಳನ್ನು.
ಪಡೆದ ಮತ ಶೇ.೨೮.೫೫ರಷ್ಟು. ಆ ಚುನಾವಣೆಯಲ್ಲಿ ಬಿಜೆಪಿ ೧೧೬ ಸೀಟು ಗೆದ್ದು, ಶೇ.೧೮.೮ ಮತ ಗಳಿಸಿತ್ತು. ಹದಿನೈದು ವರ್ಷಗಳ ಬಳಿಕ ಈಗ ಬಿಜೆಪಿ ಶೇ.೩೬.೫೬ ಮತ ಪಡೆದು ೨೪೦ ಸೀಟು ಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ ಪಕ್ಷ ಶೇ.೨೧.೧೯ ಮತ ಪಡೆದು ೯೯ ಸೀಟುಗಳನ್ನು ಗೆದ್ದಿದೆ. ನೀವು ಏನನ್ನು ಗಮನಿಸಬೇಕು ಎಂಬುದು ಇಲ್ಲೇ ಕಾಣಿಸುತ್ತದೆ. ಈ ಸಲದ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟದ ಅಂಗಪಕ್ಷಗಳ ಸಾಧನೆಗಿಂತ ಕಾಂಗ್ರೆಸ್‌ನ ಸಾಧನೆ
ಚೆನ್ನಾಗಿತ್ತು.

ಏಕೆಂದರೆ ಅಂಗಪಕ್ಷಗಳ ಬಳಿ ಭರವಸೆ ಕೊಡುವುದಕ್ಕೆ ಹೆಚ್ಚೇನೂ ಇರಲಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ೪೪ ಸೀಟುಗಳಿಂದ ೯೯ ಸೀಟುಗಳಿಗೆ ಏರಲು ೧೦ ವರ್ಷ ಬೇಕಾಯಿತು ಅಂದರೆ, ಇದೇ ಬೆಳವಣಿಗೆಯ ದರವನ್ನು ಆಧರಿಸಿ ಹೇಳುವುದಾದರೆ, ಅವರು ೨೦೩೪ರ ಚುನಾವಣೆಯಲ್ಲಿ ೨೦೦ ಸೀಟಿಗೆ ಬರಬಹುದು. ಈ ಎಲ್ಲ ಲೆಕ್ಕಾಚಾರವನ್ನು ಬದಿಗಿಡೋಣ. ಈಗ ಕಾಂಗ್ರೆಸ್ ಪಕ್ಷದ ಮುಂದಿರುವ ಪ್ರಶ್ನೆ ಏನೆಂದರೆ, ನಿಜವಾಗಿಯೂ ಕಾಂಗ್ರೆಸ್ ಎಂಬ ಬ್ರ್ಯಾಂಡ್ ಮತ್ತೆ ಚಾಲ್ತಿಗೆ ಬಂದಿದೆಯೇ ಇಲ್ಲವೇ? ಏನಾದರೂ ಸುಧಾರಣೆ ಆಗಿದೆಯೇ? ಎಲ್ಲಿಯವರೆಗೆ ಕಾಂಗ್ರೆಸ್ ಪಕ್ಷ ದೆಹಲಿಯ ಯಮುನಾ ತಟದಿಂದ ಡೈಮಂಡ್ ಹಾರ್ಬರ್ ಪ್ರದೇಶದ ಗುಂಟ ಬಂಗಾಳದಲ್ಲಿ ಗಂಗಾನದಿ ಸಮುದ್ರವನ್ನು ಸೇರುವ ಸಾಗರ್ ದ್ವೀಪದ ಪ್ರದೇಶದವರೆಗಿನ ಬೆಲ್ಟ್‌ನಲ್ಲಿ ೧೮೦ ಸೀಟುಗಳ ಆಸಿಪಾಸಿನಲ್ಲೇ ಒದ್ದಾಡುತ್ತದೆಯೋ; ಎಲ್ಲಿಯವರೆಗೆ ಕಾಂಗ್ರೆಸ್ ಪಕ್ಷ ಮಹಾರಾಷ್ಟ್ರ ಹಾಗೂ ಮಧ್ಯ ಭಾರತದಂತಹ ಪ್ರಮುಖ ಸ್ಥಳದಲ್ಲಿ ಗೆಲ್ಲಲು ಹೆಣಗಾಡುತ್ತದೆಯೋ ಅಲ್ಲಿಯ ವರೆಗೂ ಬಿಜೆಪಿಗೆ ಸಹಜ ಪರ್ಯಾಯವಾಗಲು ಸಾಧ್ಯವಿಲ್ಲ.

ಇತಿಹಾಸವನ್ನು ಗಮನಿಸಿದರೆ ಇದು ಇನ್ನೂ ಚೆನ್ನಾಗಿ ಅರ್ಥವಾಗುತ್ತದೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕಾಂಗ್ರೆಸ್ ಪಕ್ಷ ಮೊದಲ ಬಾರಿ ಕುಸಿದಿದ್ದು ೧೯೬೭ರ ಚುನಾವಣೆಯಲ್ಲಿ. ಹೆಚ್ಚು ಕಮ್ಮಿ ಅಸ್ತಿತ್ವದಲ್ಲೇ ಇಲ್ಲದಿದ್ದ ವಿರೋಧ ಪಕ್ಷದ ಎದುರು ಕಾಂಗ್ರೆಸ್ ಪಕ್ಷ ಆ ಚುನಾವಣೆಯಲ್ಲಿ ಬಹಳ ತೆಳುವಾದ ಬಹುಮತದೊಂದಿಗೆ ಗೆದ್ದಿತ್ತು. ನಂತರ ೧೯೭೧ರ ಅವಧಿಪೂರ್ವ ಲೋಕಸಭೆ ಚುನಾವಣೆಯಲ್ಲಿ ಇಂದಿರಾ ಗಾಂಧಿಯವರು ಪಕ್ಷಕ್ಕೆ ಅದ್ಭುತ ಜಯ ತಂದು
ಕೊಟ್ಟರು. ೧೯೬೯ರಲ್ಲಿ ಪಕ್ಷ ಇಬ್ಭಾಗವಾಗಿದ್ದರಿಂದ ಉಂಟಾದ ಹಿನ್ನಡೆಯನ್ನು ಅವರು ಆ ಚುನಾವಣೆಯಲ್ಲಿ ಬಹಳ ಚೆನ್ನಾಗಿ ತುಂಬಿಕೊಂಡಿದ್ದರು.

೧೯೬೯ರ ಬೆಳವಣಿಗೆಯನ್ನು ಅವರ ಉತ್ತರಾಧಿಕಾರಿಗಳು ಪೂರ್ತಿ ಒಪ್ಪುವುದಿಲ್ಲ. ಅದು ಬೇರೆ ವಿಚಾರ. ೧೯೬೦ ಹಾಗೂ ೧೯೭೦ರ ದಶಕದಲ್ಲಿ ವಿರೋಧ ಪಕ್ಷಗಳು ‘ನಾವು ಕಾಂಗ್ರೆಸ್ ಅಲ್ಲ, ಹೀಗಾಗಿ ನಮಗೆ ಮತ ಹಾಕಿ’ ಎಂದು ದಯನೀಯವಾಗಿ ಕೇಳುತ್ತಿದ್ದವು. ಈಗ ಕಾಂಗ್ರೆಸ್ ಪಕ್ಷ ಇದೇ ದಯನೀಯ ಧಾಟಿಯಲ್ಲಿ ಮತಯಾಚನೆ ಮಾಡುತ್ತಿದೆ. ‘ನಾವು ಬಿಜೆಪಿ ಅಲ್ಲ, ಹೀಗಾಗಿ ನಮಗೆ ಮತ ಹಾಕಿ’ ಎಂದು ಕಾಂಗ್ರೆಸಿಗರು ಕೇಳುತ್ತಿದ್ದಾರೆ. ಇದು ದೊಡ್ಡ ರೋಗಕ್ಕೆ ಪೇನ್ ಕಿಲ್ಲರ್ ತೆಗೆದುಕೊಂಡಂತೆ. ಅದರಿಂದ ತಾತ್ಕಾಲಿಕವಾಗಿ ನೋವು ಶಮನ ವಾಗಬಹುದೇ ಹೊರತು ರೋಗ ವಾಸಿಯಾಗುವುದಿಲ್ಲ. ಕೆಳಗೆ ಬಿದ್ದ ರಾಜಕೀಯ ಪಕ್ಷವೊಂದು ಮತ್ತೆ ಮೇಲೇಳಬೇಕು ಎಂದಾದರೆ ಅದಕ್ಕೆ ರಾಜಕೀಯವಾಗಿ ಬಹಳ ಗಂಭೀರವಾದ ಕ್ರಿಯಾ ಯೋಜನೆ ಬೇಕಾಗುತ್ತದೆ.

ಮತದಾರರಿಗೆ ಉತ್ತಮ ಭವಿಷ್ಯವನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ತಮ್ಮ ಯೋಜನೆಗಳು ಏನು, ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ತಮ್ಮಲ್ಲಿರುವ ಚಿಂತನೆಗಳು ಏನು ಎಂಬುದನ್ನು ಮನದಟ್ಟಾಗುವಂತೆ ಜನರಿಗೆ ವಿವರಿಸಿ ವಿಶ್ವಾಸ ಗಳಿಸಿಕೊಳ್ಳಬೇಕಾಗುತ್ತದೆ. ಪತ್ರಿಕಾಗೋಷ್ಠಿ ನಡೆಸುವುದ
ಕ್ಕಿಂತ ಇದು ತುಂಬಾ ಕಷ್ಟಕರ ಸಂಗತಿ.

***
ಋತುಗಳು ಬದಲಾದಂತೆ ಪವಾಡಗಳು ಕೂಡ ಮಂಕಾಗಬಹುದು. ಒಡಿಶಾದಲ್ಲಿ ಆಗಿದ್ದು ಅದೇ. ಭಾರತದ ಪ್ರಜಾಪ್ರಭುತ್ವದಲ್ಲಿ ಈವರೆಗೆ ಘಟಿಸಿದ ರಾಜಕೀಯ ಪವಾಡಗಳಲ್ಲಿ ನವೀನ್ ಪಟ್ನಾಯಕ್ ಅವರ ದಿಢೀರ್ ಬೆಳವಣಿಗೆ ಹಾಗೂ ನಿರಂತರ ಗೆಲುವು ಕೂಡ ಒಂದು. ಬೌದ್ಧಿಕವಾಗಿ ನವೀನ್ ಪಟ್ನಾಯಕ್ ಉದಾರವಾದಿ ಪಾಶ್ಚಾತ್ಯ ರಾಷ್ಟ್ರಗಳಿಗೆ ಹೊಂದುವಂತಹ ರಾಜಕೀಯ ಚಿಂತನೆಗಳನ್ನು ಹೊಂದಿರುವ ವ್ಯಕ್ತಿ. ಒಡಿಶಾದಂತಹ ಹಿಂದುಳಿದ ರಾಜ್ಯದ ಸಂಕಷ್ಟಗಳನ್ನು ನಿವಾರಿಸುವ ಶಕ್ತಿ ಅವರಿಗೆ ಇರಲಿಲ್ಲ.

ಆದರೆ ಅವರ ತಂದೆ ಬಿಜು ಪಟ್ನಾಯಕ್ ಬಿಟ್ಟು ಹೋಗಿದ್ದ ಅಸಾಧಾರಣ ಸಾಧನೆಯ ಪರಂಪರೆ ಪುತ್ರ ನವೀನ್ ಪಟ್ನಾಯಕ್ ಅವರ ರಾಜಕೀಯಕ್ಕೆ ಗಟ್ಟಿಯಾದ ಅಡಿಗಲ್ಲಾಗಿ ಒದಗಿಬಂದಿತು. ಆದರೂ ಹೀಗೆ ವಂಶಪಾರಂಪರ್ಯವಾಗಿ ಬಂದ ಯಾವುದೇ ಹೆಚ್ಚುಗಾರಿಕೆ ನಮ್ಮ ದೇಶದ ರಾಜಕೀಯದಲ್ಲಿ
ಒಂದು ಅವಽಗಿಂತ ಹೆಚ್ಚಿನ ಸಮಯಕ್ಕೆ ಬೆನ್ನಿಗೆ೦ ನಿಲ್ಲುವುದಿಲ್ಲ. ಇಲ್ಲಿ ಕೆಲಸ ಮಾಡಿ ತೋರಿಸಬೇಕು, ಗೆಲ್ಲಬೇಕು. ನನಗೆ ಬಿಜು ಪಟ್ನಾಯಕ್ ಅವರ ಆಕರ್ಷಕ ವ್ಯಕ್ತಿತ್ವ ಹತ್ತಿರದಿಂದ ಪರಿಚಯವಿತ್ತು.

ಆದರೆ ಮಗನನ್ನು ನಾನು ಯಾವತ್ತೂ ಭೇಟಿಯಾಗಿಲ್ಲ. ಆದರೂ ನವೀನ್ ಪಟ್ನಾಯಕ್ ಅವರ ಸುದೀರ್ಘ ಅವಧಿಯ ಆಳ್ವಿಕೆಯನ್ನು ಇತಿಹಾಸವು ಅವರ ತಂದೆಯ ಅವಧಿಯಂತೆಯೇ ನೆನಪಿಟ್ಟುಕೊಳ್ಳುತ್ತದೆ ಎಂಬುದರಲ್ಲಿ ನನಗೆ ಅನುಮಾನವಿಲ್ಲ. ಒಡಿಶಾ ಎಂಬ ಗುಡ್ಡಗಾಡು ರಾಜ್ಯವನ್ನು ಆಧುನಿಕತೆ ಯತ್ತ ಕೊಂಡೊಯ್ಯುವ ಸುದೀರ್ಘ ಪ್ರಯಾಣದಲ್ಲಿ ನವೀನ್ ಪಟ್ನಾಯಕ್ ಅವರ ಯುಗದ ಅಧ್ಯಾಯವು ಅಳಿಸಲಾಗದ ಶಾಯಿಯಲ್ಲಿ ಬರೆದಿಡು ವಂಥದ್ದಾಗಿದೆ.

ಬರೋಬ್ಬರಿ ಕಾಲು ಶತಮಾನದ ಕಾಲ ನವೀನ್ ಪಟ್ನಾಯಕ್ ಒಡಿಶಾದಲ್ಲಿ ಒನ್ ವೇಯಲ್ಲಿ ವಿರುದ್ಧ ದಿಕ್ಕಿನಿಂದ ಕಾರು ಓಡಿಸಿಕೊಂಡು ಹೋದಂತೆ ರಾಜಕೀಯದ ಬಂಡಿಯನ್ನು ಓಡಿಸಿದ್ದರು. ಬಹಳ ನಾಜೂಕಾಗಿ ಅವರು ವಿರೋಧಿಗಳು ತಲೆಯೆತ್ತದಂತೆ ನೋಡಿಕೊಂಡಿದ್ದರು. ಆದರೆ ವೇಗ ಕೂಡ ಒಂದು ಹಂತದಲ್ಲಿ ಬೇಸರ ತರಿಸುತ್ತದೆ. ಹಾಗಿರುವಾಗ ನವೀನ್ ಪಟ್ನಾಯಕ್ ಅವರ ತೆವಳುವ ರಾಜಕೀಯ ಬೇಸರ ತರಿಸದೇ ಇದ್ದೀತೆ? ಅದೇನಾದರೂ ಇರಲಿ, ಸುದೀರ್ಘ ಎರಡು ದಶಕದ ಕಾಲ ಗೌರವಯುತ ವಾಗಿ ರಾಜಕೀಯ ನಡೆಸಿದಂತೆಯೇ ಅವರು ತುಂಬಾ ಪ್ರಬುದ್ಧತೆಯಿಂದ ಕುರ್ಚಿಗೆ ವಿದಾಯವನ್ನೂ ಹೇಳಿದ್ದಾರೆ.

ದ್ವೇಷವಿಲ್ಲ, ನರಳಾಟ ಇಲ್ಲ, ದೂರು ಇಲ್ಲ, ಸಣ್ಣತನ ಇಲ್ಲ, ನನ್ನ ಹಕ್ಕು ಕಿತ್ತುಕೊಂಡರು ಎನ್ನುವಂತಹ ಕೂಗಾಟ ಇಲ್ಲ, ಗೆದ್ದವರ ಮೇಲೆ ವಿಷಕಾರುವ ಪ್ರವೃತ್ತಿಯೂ ಇಲ್ಲ. ನವೀನ್ ಪಟ್ನಾಯಕ್ ಈಗ ಏನು ಯೋಚಿಸುತ್ತಿರಬಹುದು? ‘ಪ್ರಜಾಪ್ರಭುತ್ವ ನನಗೆ ಅಧಿಕಾರ ನೀಡಿತು. ಅದೇ ಪ್ರಜಾಪ್ರಭುತ್ವ ನನಗೀಗ ವಿಶ್ರಾಂತಿ ತೆಗೆದುಕೊಳ್ಳಲು ಹೇಳಿದೆ’. ೨೦೨೫ರಲ್ಲಿ ಯಾರಿಗಾದರೂ ಭಾರತ ರತ್ನ ನೀಡುವುದಿದ್ದರೆ ಅದಕ್ಕೆ ನವೀನ್ ಪಟ್ನಾಯಕ್ ಅರ್ಹರು.

***
ಸಾಮಾನ್ಯವಾಗಿ ಚುನಾವಣೆಯ ಫಲಿತಾಂಶ ಬಂದ ನಂತರ ಚಾಕು ಚೂರಿಗಳು ಹೊರಗೆ ಬರುತ್ತವೆ. ಆದರೆ, ಬ್ರಿಟನ್ನಿನಲ್ಲಿ ಈ ಬಾರಿ ಚುನಾವಣೆಗೂ ಮೊದಲೇ ಕೊಯ್ಯುವ, ಕತ್ತರಿಸುವ ಆಟಗಳು ಶುರುವಾಗಿವೆ. ಜಗತ್ತಿನ ಪ್ರಜಾಪ್ರಭುತ್ವಕ್ಕೆ ತಾನೇ ತಾಯಿ ಎಂದು ಹೇಳಿಕೊಳ್ಳುವ ದೇಶ ಬ್ರಿಟನ್. ಅಲ್ಲಿ ಈ ಸಲದ ಚುನಾವಣೆಯಲ್ಲಿ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷ ಶವಾಗಾರಕ್ಕೆ ಹೋಗಿ ಮಲಗುವುದರಲ್ಲಿ ಯಾರಿಗೂ ಅನುಮಾನ ಉಳಿದಿಲ್ಲ. ಆ ಪಕ್ಷದ ಹಾಲಿ ನಾಯಕ ರಿಷಿ ಸುನಕ್ ತಮ್ಮ ಗುರು ಬೋರಿಸ್ ಜಾನ್ಸನ್‌ಗೇ ಮಣ್ಣುಮುಕ್ಕಿಸಿ ಅಧಿಕಾರಕ್ಕೆ ಬಂದವರು.

ಆಕರ್ಷಕ ಖಾಸಗಿ ವೃತ್ತಿಯನ್ನು ತ್ಯಾಗ ಮಾಡಿ ಬ್ರಿಟನ್ನಿನ ಜನರ ಸೇವೆಗಾಗಿಯೇ ರಾಜಕೀಯಕ್ಕೆ ಬಂದಿದ್ದೇನೆ ಎಂಬ ಸ್ವಯಂ ನಿರ್ಮಿತ ಇಮೇಜ್‌ನೊಂದಿಗೆ ಅಧಿಕಾರದ ಏಣಿಯಲ್ಲಿ ರಿಷಿ ಸುನಕ್ ಮೇಲೆ ಹತ್ತಿ ಬಂದಿದ್ದರು. ಆದರೆ ರಾಜಕಾರಣದ ನಿಜವಾದ ಅಖಾಡದಲ್ಲಿ ಆ ಇಮೇಜ್ ಬಹುಕಾಲ ಉಳಿದಿಲ್ಲ.
ಚಾಣಾಕ್ಷ ಲಾಟರಿ ವಿಜೇತನಂತೆ ಅವರು ೧೦ ಡೌನಿಂಗ್ ಸ್ಟ್ರೀಟ್ ಮನೆಗೆ ಪ್ರವೇಶಿಸಿದ್ದರು. ಅವರ ಅಸಾಧಾರಣ ಬುದ್ಧಿವಂತಿಕೆಗೆ ಅದೃಷ್ಟ ಕೂಡ ಜೊತೆಯಾಗಿದ್ದರಿಂದ ಕೊನೆಗೂ ಅವರಿಗೆ ಯೋಗ್ಯವಾದ ಸ್ಥಾನ ಸಿಕ್ಕಿದೆ ಎಂದು ಬಹಳ ಜನರು ಹಾಡಿ ಹೊಗಳಿದ್ದರು.

ಆದರೆ ಅಧಿಕಾರಕ್ಕೇರಿದ ವ ಆ ಹೊಗಳಿಕೆಯ ಸೌಧದ ಇಟ್ಟಿಗೆಗಳು ದಿನೇದಿನೇ ಒಂದೊಂದಾಗಿ ಕಳಚಿ ಬೀಳುತ್ತಿದ್ದವು. ಕೊನೆಗೆ, ಜೂನ್ ೬ರಂದು ನಡೆದ ಡಿ-ಡೇ ಸಮಾರಂಭ ದಿಂದ ಅವರು ಅರ್ಧಕ್ಕೇ ತರಾತುರಿಯಲ್ಲಿ ಎದ್ದುಹೋಗುವುದರೊಂದಿಗೆ ಆ ಸೌಧ ಪೂರ್ತಿ ನೆಲಸಮವಾಯಿತು. ೧೯೪೪ರಲ್ಲಿ ಹಿಟ್ಲರ್‌ ನನ್ನು ನಿರ್ನಾಮ ಮಾಡಿ ಬ್ರಿಟನ್ನನ್ನು ರಕ್ಷಿಸಿದ ಹಾಗೂ ಜಗತ್ತನ್ನು ಫ್ಯಾಸಿಸಂನ ಕಪಿಮುಷ್ಟಿಯಿಂದ ಬಿಡುಗಡೆಗೊಳಿಸಿದ ಮಹಾಯುದ್ಧದ ಆರಂಭದ ಸ್ಮರಣಾರ್ಥ ಡಿ-ಡೇ ಆಚರಿಸಲಾಗುತ್ತದೆ. ಬ್ರಿಟಿಷರಿಗೆ ಈ ದಿನ ಬಹಳ ಮುಖ್ಯವಾದುದು. ಆದರೆ ಅವರ ಈ ಪ್ರಧಾನಿಗೆ ಯಾವತ್ತೂ ಬ್ರಿಟನ್ ಅರ್ಥವೇ ಆಗಿಲ್ಲ. ರಿಷಿಯನ್ನು ನೋಡಿದರೆ ಮುಗ್ಧ ಹಾಗೂ ಗೊಂದಲಗೊಂಡ ವ್ಯಕ್ತಿಯಂತೆ ಕಾಣಿಸುತ್ತಾರೆ. ದೊಡ್ಡವರ ಮ್ಯಾಚ್‌ನಲ್ಲಿ ಮಧ್ಯೆ ತೂರಿಕೊಂಡ ಅನನುಭವಿಯ ರೀತಿಯಲ್ಲಿ ಹೇಗೋ ಇಲ್ಲಿಯ ವರೆಗೆ ಪ್ರಧಾನಿಯಾಗಿ ಕಾಲಯಾಪನೆ ಮಾಡಿದ್ದಾರೆ.

ಈಗ ತಮ್ಮ ನಿಸ್ವಾರ್ಥ ಪ್ರತಿಭೆಗೆ ವೋಟು ನೀಡಲು ನಿರಾಕರಿಸುತ್ತಿರುವ ಪ್ರಜೆಗಳ ಮುಂದೆ ಗೊಳೋ ಎನ್ನುತ್ತಿದ್ದಾರೆ. ಒಳಗಿನ ಗಾಯಕ್ಕೆ ಹೊರಗಿನಿಂದ ಬ್ಯಾಂಡೇಜ್ ಮಾಡಿದರೆ ಏನು ಪ್ರಯೋಜನ? ರಿಷಿ ಸುನಕ್ ಬಿಟ್ಟ ಬಾಣದಿಂದ ಗಾಯಗೊಂಡ ಚಿರತೆ ಬೋರಿಸ್ ಜಾನ್ಸನ್. ರಾಜಕೀಯದ ಚಾಟಿಯನ್ನು ಹೇಗೆ ಬೀಸಬೇಕು ಎಂಬುದನ್ನು ಬಹಳ ಚೆನ್ನಾಗಿ ಅರಿತಿರುವ ವೃತ್ತಿಪರ ರಾಜಕಾರಣಿ. ಕನ್ಸರ್ವೇಟಿವ್ ಪಕ್ಷದಲ್ಲಿ ರಿಷಿಗೆ ಹಿತಶತ್ರು. ಕೊನೆಗೂ ಅವರು ರಿಷಿಗೆ ಪಾಠ ಕಲಿಸಿದ್ದಾರೆ. ಈಗ ರಿಷಿ ಬಹಿರಂಗವಾಗಿಯೇ ಬೋರಿಸ್ ಜಾನ್ಸನ್‌ರನ್ನು ಹೊಗಳಲು ಆರಂಭಿಸಿದ್ದಾರೆ. ‘ಜಾನ್ಸನ್ ಚುನಾವಣಾ ಪ್ರಚಾರ ಮಾಡಿದರೆ
ಏನಾದರೂ ಬದಲಾವಣೆ ಆಗಬಹುದು’ ಎಂದು ರಿಷಿ ಹೇಳುತ್ತಿದ್ದಾರೆ. ಈ ಬೇಡಿಕೆಗಾಗಿ ಬೋರಿಸ್ ಇಷ್ಟೂ ದಿನ ಕಾಯುತ್ತಿದ್ದರು.

ಕೊನೆಗೆ ಅದೇ ಸುದ್ದಿ ಬಂದಾಗ ‘ನಾನು ರಜೆಯಲ್ಲಿದ್ದೇನೆ’ ಎಂದು ತಣ್ಣಗೆ ಘೋಷಿಸಿದರು. ಲಂಡನ್ನಿನಲ್ಲಿ ಮಾತ್ರ ಇಂಥದ್ದು ನಡೆಯಲು ಸಾಧ್ಯ. ಸದ್ಯದಲ್ಲೇ ನಡೆಯಲಿರುವ ಬ್ರಿಟನ್ನಿನ ಸಂಸತ್ ಚುನಾವಣೆಗೆ ರಿಷಿ ಸುನಕ್ ಅವರ ಪ್ರಚಾರದ ರೀತಿ ಹೇಗಿದೆ ಗೊತ್ತಾ? ಅವರು ಜಯ ಕೇಳುತ್ತಿಲ್ಲ. ಬದಲಿಗೆ, ‘ಲೇಬರ್ ಪಕ್ಷಕ್ಕೆ ಅದ್ಭುತ ಗೆಲುವು ನೀಡಬೇಡಿ. ಸರಳ ಬಹುಮತ ನೀಡಿ, ಸಾಕು’ ಎನ್ನುತ್ತಿದ್ದಾರೆ.

***
ಜಗತ್ತನ್ನು ನಾಶಪಡಿಸಲು ಎಷ್ಟು ಅಣುಬಾಂಬ್‌ಗಳು ಬೇಕು? ಒಂದೇ ಸಾಕು. ಈಗ ಉಂಟಾಗಿರುವ ಯುದ್ಧದ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆ ನಡೆಸುವ ಹೊತ್ತಿಗೆ ಜಗತ್ತಿನಲ್ಲಿರುವ ಅರ್ಧದಷ್ಟು ಅಣುಬಾಂಬ್‌ಗಳ ಟ್ರಿಗರ್ ಒತ್ತಿ ಆಗಿರುತ್ತದೆ. ಸ್ಟಾಕ್‌ಹೋಮ್ ಇಂಟರ್‌ ನ್ಯಾಷನಲ್ ಪೀಸ್ ರೀಸರ್ಚ್ ಇನ್‌ಸ್ಟಿಟ್ಯೂಟ್ ಇಂತಹದ್ದೊಂದು ಆತಂಕ ವ್ಯಕ್ತಪಡಿಸಿದೆ. ಈ ಸಂಸ್ಥೆಯ ಪ್ರಕಾರ ರಷ್ಯಾ ಬಳಿ ೪೩೮೦, ಅಮೆರಿಕದ ಬಳಿ
೩೭೦೮, ಚೀನಾ ಬಳಿ ೫೦೦, ಫ್ರಾನ್ಸ್ ಬಳಿ ೨೯೦, ಬ್ರಿಟನ್ ಬಳಿ ೨೨೫, ಭಾರತದ ಬಳಿ ೧೭೨, ಪಾಕಿಸ್ತಾನದ ಬಳಿ ೧೭೦, ಇಸ್ರೇಲ್ ಬಳಿ ೯೦ ಹಾಗೂ ಉತ್ತರ ಕೊರಿಯಾ ಬಳಿ ೫೦ ಪರಮಾಣು ಸಿಡಿತಲೆಗಳಿವೆ. ಇದರಲ್ಲಿ ಬ್ರಿಟಿಷರ ಕೋಟಾವನ್ನು ಬದಿಗಿಡೋಣ.

ಏಕೆಂದರೆ, ಈ ವರ್ಷದ ಜನವರಿಯಲ್ಲಿ ಬ್ರಿಟಿಷ್ ರಾಯಲ್ ನೇವಿಯು ಪರೀಕ್ಷಾರ್ಥ ಉಡಾವಣೆ ಮಾಡಿದ ಟ್ರೈಡೆಂಟ್ ಕ್ಷಿಪಣಿ ೬೦೦ ಕಿ.ಮೀ.ಗಳಷ್ಟು ದೂರ ಹಾರಿ ಅಟ್ಲಾಂಟಿಕ್ ಸಮುದ್ರದಲ್ಲಿ ಬೀಳಬೇಕಿತ್ತು. ಆದರೆ ಅದು ಉಡಾವಣೆಯಾಗುತ್ತಿದ್ದಂತೆ ಅಲ್ಲೇ ಉದುರಿಬಿದ್ದಿತ್ತು. ಒಂದು ವೇಳೆ ಅದು ಉಡಾವಣೆಯಾದ ಜಾಗದಲ್ಲೇ ಬೀಳದೆ ಅರ್ಧ ದಾರಿ ಕ್ರಮಿಸಿ ಯಾವುದಾದರೂ ಆಫ್ರಿಕನ್ ದೇಶಕ್ಕೆ ಹೋಗಿ ಅಪ್ಪಳಿಸಿದ್ದರೆ ಏನಾಗುತ್ತಿತ್ತು? ಕ್ಷಿಪಣಿ ಪರೀಕ್ಷೆಯ ಬಳಿಕ ರಕ್ಷಣಾ ಸಚಿವ ಗ್ರಾಂಟ್ ಶಾಪ್ಸ್ ‘ನಮ್ಮದು ಅತ್ಯಂತ ವಿಶ್ವಾಸಾರ್ಹ ಪರೀಕ್ಷೆ ಎಂದು ಹೇಳಿರುವುದು ಬಹಳ ಮಜವಾಗಿದೆ. ೨೦೧೬ರಲ್ಲೂ ಇದೇ ಟ್ರೈಡೆಂಟ್ ಕ್ಷಿಪಣಿಯ ಪರೀಕ್ಷೆ ವಿ-ಲಗೊಂಡಿತ್ತು. ಆಗಿನ ರಕ್ಷಣಾ ಸಚಿವರು ಏನು ಹೇಳಿದ್ದರೋ ಗೊತ್ತಿಲ್ಲ.’

ಎರಡು ಸಾವಿರ ವರ್ಷಗಳ ಹಿಂದೆ ರೋಮನ್‌ನ ಪ್ರಸಿದ್ಧ ತತ್ವಶಾಸ್ತ್ರಜ್ಞ ಸೆನೆಕಾ ‘ನಿಮಗೆ ಯಾವಾಗ ಬೇಕೋ ಆಗ ಬದುಕನ್ನು ಕೊನೆಗೊಳಿಸಿಕೊಳ್ಳಿ. ಆದರೆ ಆ ಅಂತ್ಯ ಚೆನ್ನಾಗಿರುವಂತೆ ನೋಡಿ ಕೊಳ್ಳಿ’ ಎಂದು ಹೇಳಿದ್ದ. ಸೆನೆಕಾ, ನೀನಿಂದು ಬದುಕಿರಬೇಕಿತ್ತು.

(ಲೇಖಕರು: ಹಿರಿಯ ಪತ್ರಕರ್ತರು)