Friday, 13th December 2024

ಕನ್ನಡಕ್ಕೆ ಭದ್ರಬುನಾದಿ ಹಾಕಿದ ಮಹಾತ್ಮನ ಸಮಾಧಿ ಮುಂದೆ ನಿಂತಾಗ

ನೂರೆಂಟು ವಿಶ್ವ

ಮೊನ್ನೆ ನಾನು ಜರ್ಮನಿಯ ಫ್ರಾಂಕ್ ಫರ್ಟಿನಲ್ಲಿ ನಡೆದ ೭೫ನೇ ಅಂತಾರಾಷ್ಟ್ರೀಯ ಪುಸ್ತಕಮೇಳದಲ್ಲಿ ಭಾಗವಹಿಸಿದ ನಂತರ ಅಲ್ಲಿಂದ ಸುಮಾರು ೨೪೦ ಕಿ.ಮೀ. ದಕ್ಷಿಣಕ್ಕೆ, ವಿಶ್ವವಿಖ್ಯಾತ ಮರ್ಸಿಡಿಸ್ ಬೆಂಜ್ ಕಾರುಗಳು ತಯಾರಾಗುವ ಸ್ಟುಟಗರ್ಟ್ ಎಂಬ ನಗರದಿಂದ ಸುಮಾರು ೪೦ ಕಿ.ಮೀ.
ಅಂತರದಲ್ಲಿರುವ ಟ್ಯುಬಿಂಗನ್ ಎಂಬ ಸುಂದರವಾದ ನಗರಕ್ಕೆ ಹೋಗಬೇಕೆಂಬುದು ನಿರ್ಧರಿಸಿದೆ. ಇದು ನನ್ನ ಬಹುದಿನಗಳ ಕನಸಾಗಿತ್ತು. ಇದಕ್ಕೆ ಪೂರಕವಾಗಿ ಜರ್ಮನಿಯ ಹ್ಯಾಂಬರ್ಗ್ ನಗರದಲ್ಲಿ ವಿಜ್ಞಾನಿಯಾಗಿರುವ, ಕನ್ನಡದ ಸನ್ಮಿತ್ರ ಡಾ.ಶ್ರೀಕಾಂತ ಭಟ್ ಅವರು ನೀರೆರೆದರು. ನಾನು ಹತ್ತಾರು ಸಲ ಫ್ರಾಂಕ್ ಫರ್ಟಿಗೆ ಹೋಗಿದ್ದರೂ, ಅಲ್ಲಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಆದರೆ ಈ ಸಲ ಡಾ.ಭಟ್ ಅವರು ಅಲ್ಲಿಗೆ ಹೋಗುವ ನನ್ನ ಉತ್ಸಾಹಕ್ಕೆ ನೀರೆರೆದಿದ್ದರು.

ಜರ್ಮನಿಯಲ್ಲಿ ಟ್ಯುಬಿಂಗನ್‌ಗೆ ವಿಶೇಷ ಸ್ಥಾನವಿದೆ. ಅಲ್ಲಿ ಯುರೋಪಿನಲ್ಲಿಯೇ ಹಳೆಯದಾದ ವಿಶ್ವವಿದ್ಯಾಲಯಗಳಿವೆ. ಆ ಊರಿನಲ್ಲಿ ಹತ್ತರಲ್ಲಿ ಏಳು ಮಂದಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು. ಅದೊಂದು ವಿಶಿಷ್ಟವಾದ ವಿದ್ಯಾನಗರಿ. ಎಲ್ಲಿ ನೋಡಿದರೂ ದಟ್ಟ ಹಸುರು ಹಾಸು, ರಸ್ತೆಗಳನ್ನು ಆವರಿಸಿದ ಹಳೆಯದಾದ ಮರಗಳು. ಎಲ್ಲೂ ಗಗನಚುಂಬಿ, ಆಧುನಿಕ ಕಟ್ಟಡಗಳಿಲ್ಲ. ಎಲ್ಲೆಡೆಯೂ ನೂರು-ಇನ್ನೂರು ವರ್ಷಗಳ ಹಳೆಯ ಇಮಾರತು ಗಳು. ಈ ಊರಿನೊಳಗೆ ಪ್ರವೇಶಿಸಿದರೆ, ದೇಗುಲದೊಳಗೆ ಕಾಲಿಟ್ಟ ಅನುಭವ. ಮೊದಲ ನೋಟದಲ್ಲೇ ನಾನು ಟ್ಯುಬಿಂಗನ್ ಪ್ರೇಮಪಾಶಕ್ಕೆ ಬಿದ್ದಿದ್ದು ಸುಳ್ಳಲ್ಲ.

ಟ್ಯುಬಿಂಗನ್‌ಗೂ, ಕನ್ನಡಕ್ಕೂ ಒಂದು ಅದ್ಭುತ ಸಂಬಂಧವಿದೆ. ಎಲ್ಲಿಯ ಜರ್ಮನಿ, ಎಲ್ಲಿಯ ಕನ್ನಡ ಎಂದು ಅಚ್ಚರಿಯಾಗಬಹುದು. ಆದರೆ ಕನ್ನಡದ ಕೆಲಸಕ್ಕಾಗಿ ಜೀವ ಸವೆಸಿದ ಇಬ್ಬರಿಗೆ ಟ್ಯುಬಿಂಗನ್ ವಿಶ್ವವಿದ್ಯಾಲಯ ಡಾಕ್ಟರೇಟ್ ನೀಡಿ ಗೌರವಿಸಿದೆ ಎಂಬ ಸಂಗತಿ ಕನ್ನಡಿಗರಿಗೆ ಗೊತ್ತಿಲ್ಲ.
ಜರ್ಮನಿಯಿಂದ ಕ್ರಿಶ್ಚಿಯನ್ ಮತ ಪ್ರಚಾರಕ್ಕೆ ಕರ್ನಾಟಕಕ್ಕೆ ಆಗಮಿಸಿದ ಇಬ್ಬರು ಪಾದ್ರಿಗಳಾದ ಹರ್ಮನ್ ಫ್ರಾಡ್ರಿಕ್ ಮೊಗ್ಲಿಂಗ್ ಮತ್ತು ಫಾದರ್ ರೆವೆರೆಂಡ್ ಫರ್ಡಿನಂಡ್ ಕಿಟೆಲ್ ಅವರಿಗೆ ಅಲ್ಲಿನ ವಿಶ್ವವಿದ್ಯಾಲಯ ಡಾಕ್ಟರೇಟ್ ನೀಡಿದೆ.

ಕನ್ನಡದ ಕೆಲಸಕ್ಕೆ ವಿದೇಶಿ ವಿಶ್ವವಿದ್ಯಾಲಯವೊಂದು ಈ ಸಮ್ಮಾನ ನೀಡಿರುವುದು ವಿರಳಾತಿವಿರಳ. ಜರ್ಮನಿಯ ಹರ್ಮನ್ ಮೊಗ್ಲಿಂಗ್, ಮಂಗಳೂರಿಗೆ ಆಗಮಿಸಿ, ಕನ್ನಡ ಕಲಿತು, ಕನ್ನಡದ ಮೊಟ್ಟ ಮೊದಲ ಪತ್ರಿಕೆ- ‘ಮಂಗಳೂರು ಸಮಾಚಾರ’ವನ್ನು ಆರಂಭಿಸಿದರು. ಸುಮಾರು ೧೮೦
ವರ್ಷಗಳ ಹಿಂದೆ ಮೊಗ್ಲಿಂಗ್ ಮೊದಲ ಕನ್ನಡ ಪತ್ರಿಕೆಯನ್ನು ಆರಂಭಿಸಿ ಕನ್ನಡ ಪತ್ರಿಕೋದ್ಯಮಕ್ಕೆ ನಾಂದಿ ಹಾಡಿದರು. ಕಿಟೆಲ್ ಕನ್ನಡ ಭಾಷೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು. ಹೀಗಾಗಿ ಇವರಿಬ್ಬರೂ ಕನ್ನಡ ಮತ್ತು ಕನ್ನಡಿಗರ ಪಾಲಿಗೆ ಪ್ರಾತಃಸ್ಮರಣೀಯರು. ಈ ಇಬ್ಬರ ಪೈಕಿ ಕಿಟೆಲ್, ಟ್ಯುಬಿಂಗನ್ ನಲ್ಲಿ ತಮ್ಮ ಕೊನೆಯ ದಿನಗಳನ್ನು ಕಳೆದರು. ಕರ್ನಾಟಕದಿಂದ ಮರಳಿದ ಅವರು ಟ್ಯುಬಿಂಗನ್ ನಗರದಲ್ಲಿರುವ ಹೋಲ್ಡರ್ಲಿನ್ ಸ್ಟ್ರಾಸೆ (ಸ್ಟ್ರಾಸೆ ಅಂದ್ರೆ ಜರ್ಮನ್ ಭಾಷೆಯಲ್ಲಿ ರಸ್ತೆ ಎಂದರ್ಥ)ಯಲ್ಲಿ ಒಂದು ಮನೆಯಲ್ಲಿದ್ದರು.

ಇಂದು ಆ ಮನೆ ಆಧುನಿಕ ಸ್ವರೂಪ ಪಡೆದು ಬೇರೆಯವರ ಸ್ವತ್ತಾಗಿದೆ. ಕಿಟೆಲ್ ಅವರು ಕೊನೆಯುಸಿರೆಳೆದಿದ್ದು ಸಹ ಟ್ಯುಬಿಂಗನ್‌ನಲ್ಲಿ.
ಆ ನಗರದಲ್ಲಿ ಅವರ ಸಮಾಽಯೂ ಇದೆ. ಸಾವಿರಾರು ಸಮಾಽಯ ನಡುವೆ ಕಿಟೆಲ್ ಸಮಾಧಿಯೂ ಇದೆ. ಸಮಾಧಿಯ ಪ್ರವೇಶದ್ವಾರದಲ್ಲಿ ಯಾರ ಯಾರ ಸಮಾಧಿ ಎಲ್ಲಿದೆ ಎಂಬ ವಿವರಗಳಿದ್ದರೂ, ಅಲ್ಲಿನ ಜನರಿಗೆ ಕಿಟೆಲ್ ಒಬ್ಬ ಸಾಮಾನ್ಯ ಪಾದ್ರಿ ಅಥವಾ ಮಿಷನರಿ. ಅವರಿಗೆ ಕನ್ನಡದ ಬಗ್ಗೆಯೇ ಗೊತ್ತಿಲ್ಲ. ಹೀಗಾಗಿ ಕಿಟೆಲ್ ಮಹತ್ವವೂ ಗೊತ್ತಿಲ್ಲ. ಕನ್ನಡಿಗರಾದ ನಾವೇ ಅಲ್ಲಿನವರಿಗೆ ಕಿಟೆಲ್ ಬಗ್ಗೆ ಹೇಳಿದರೆ, ‘ಕಿಟೆಲ್ ಕೆನಡಾದ ಭಾಷೆ ಬಗ್ಗೆ ಅಧ್ಯಯನ ಮಾಡಿದ್ದಾನಾ?’ ಅಂತ ಕೇಳುತ್ತಾರೆ.

ಅಲ್ಲಿನವರಿಗೆ ಕನ್ನಡ ಎಂಬ ಒಂದು ಶ್ರೀಮಂತ ಭಾಷೆಯಿದೆ ಎಂಬುದೂ ಗೊತ್ತಿಲ್ಲ. ಅಂಥ ಭಾಷೆಯ ಬಗ್ಗೆ ಜೀವ ಸವೆಸಿದ ಒಬ್ಬ ಪುಣ್ಯಾತ್ಮನ ಬಗ್ಗೆ
ಅವರಲ್ಲಿ ಯಾವುದೇ ಪುಳಕ, ಅಭಿಮಾನ, ಗೌರವ ಇರಲು ಸಾಧ್ಯವೇ ಇಲ್ಲ. ಈ ಕಾರಣದಿಂದ ಕಿಟೆಲ್ ಸಮಾಧಿ ಸಾವಿರಾರು ಸಮಾಧಿಗಳಲ್ಲಿ ಒಂದೆಡೆ ಯಾವ ವಿಶೇಷ ಅಲಂಕಾರಗಳಿಲ್ಲದೇ ಯಾರ ಗಮನ ಸೆಳೆಯದ ರೀತಿಯಲ್ಲಿ ಅವಜ್ಞೆಗೆ ಒಳಗಾಗಿದೆ. ಆದರೆ ಕನ್ನಡ ಭಾಷೆಗೆ ಭದ್ರಬುನಾದಿ ಹಾಕಿ ಕೊಟ್ಟ ಆ ಮಹಾತ್ಮ ಅಲ್ಲಿ ೧೨೦ ವರ್ಷಗಳಿಂದ ತಣ್ಣಗೆ ಮಲಗಿದ್ದಾನೆ. ಅಲ್ಲಿ ಸುಂದರವಾಗಿ ಅಲಂಕಾರಗೊಂಡ ನೂರಾರು ಸಮಾಧಿಗಳು ಗಮನ ಸೆಳೆಯುತ್ತವೆ. ಆದರೆ ಕಿಟೆಲ್ ಸಮಾಧಿ ಬಳಿ ನೆಟ್ಟ ಶಿಲುಬೆಯಾಕಾರದ ಕಲ್ಲಿನ ಮೇಲೆ ಅವರ ಹೆಸರಿರುವುದನ್ನು ಬಿಟ್ಟರೆ, ಅವರನ್ನು ಗುರುತಿಸುವ ಯಾವ ಸಂಗತಿಗಳೂ ಅಲ್ಲಿಲ್ಲ. ಡಾ.ಭಟ್ ಅವರ ಸಹಕಾರ ಇಲ್ಲದಿದ್ದರೆ, ಆ ಸಮಾಽಯನ್ನು ಗುರುತಿಸುವುದೂ ಸಾಧ್ಯವಿರಲಿಲ್ಲ.

ಟ್ಯುಬಿಂಗನ್ ನಗರಕ್ಕೂ, ಕನ್ನಡಕ್ಕೂ ಇನ್ನೊಂದು ಸಂಬಂಧವಿದೆ. ಅದೇನೆಂದರೆ ಅಲ್ಲಿನ ವಿಶ್ವವಿದ್ಯಾಲಯ, ಸುಮಾರು ೧೨೯ ವರ್ಷಗಳ ಹಿಂದೆ ಕಿಟೆಲ್ ಬರೆದ ಪದಕೋಶದ ಮೂಲಪ್ರತಿಯನ್ನು ಸ್ವಲ್ಪವೂ ಹಾಳಾಗದಂತೆ, ಬೆಲೆ ಕಟ್ಟಲಾಗದ ಯಾವುದೋ ಅಮೂಲ್ಯ ವಸ್ತುವಿನಂತೆ, ಭದ್ರವಾಗಿ,
ಕಾಳಜಿಯಿಂದ ಸುರಕ್ಷಿತವಾದ ಲಾಕರ್‌ನಲ್ಲಿಟ್ಟು ಸಂಗ್ರಹಿಸಿಟ್ಟಿದೆ. ಕಿಟೆಲ್ ಪದಕೋಶದ ಒರಿಜಿನಲ್ ಪ್ರತಿ ನೋಡಬೇಕೆಂದರೆ ಆ ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ಹೋಗಬೇಕು. ಅಲ್ಲಿನ ಗ್ರಂಥಪಾಲಕರು ಅದನ್ನು ನಿರ್ದಿಷ್ಟ ತಾಪಮಾನದಲ್ಲಿ ಅದು ಮಳೆ, ಗಾಳಿ, ತೇವಾಂಶ, ಬೆಳಕು ಹೀಗೆ
ಯಾವ ಕಾರಣಕ್ಕೂ ವಿರೂಪವಾಗದಂತೆ ಅತ್ಯಂತ ಪ್ರೀತಿಯಿಂದ ಕಾಪಿಟ್ಟಿದ್ದಾರೆ.

ಸುಮಾರು ೭೦ ಸಾವಿರ ಕನ್ನಡ ಪದಗಳಿರುವ, ೧,೭೦೦ ಪುಟಗಳ ಆ ಪದಕೋಶ, ಕನ್ನಡದ ಬಗ್ಗೆ ಏನೇನೂ ಗೊತ್ತಿಲ್ಲದ ಜರ್ಮನಿಯ ಒಂದು ಪುಟ್ಟ ನಗರದ ವಿಶ್ವವಿದ್ಯಾಲಯದಲ್ಲಿ ಸುರಕ್ಷಿತವಾಗಿದೆ. ಅದೇ ಸಮಾಧಾನ! ಅದನ್ನು ಕಣ್ತುಂಬಿಕೊಳ್ಳುವುದೇ ಒಂದು ಧನ್ಯತೆಯ ಕ್ಷಣ! ಜರ್ಮನಿಯ ಸಂಶೋಧಕ ರೆಇನ್ಹರ್ಡ್ ವೆಂಟ್ ಎಂಬುವವರು ಕಿಟೆಲ್ ಬಗ್ಗೆ An Indian to the Indians? On the Initial Failure and the
Posthumous Success of the Missionary Ferdinand Kittel ಎಂಬ ಗ್ರಂಥ ಬರೆದಿದ್ದು, ಅದರಲ್ಲಿ ಕಿಟೆಲ್ ಅವರನ್ನು ಒಬ್ಬ Failed Missionary ಎಂದು ಬಣ್ಣಿಸಿದ್ದಾರೆ. ಅಂದರೆ ಕಿಟೆಲ್ ಕನ್ನಡದ ಕೆಲಸ ಮಾಡುವುದು, ಅವರನ್ನು ಕರ್ನಾಟಕಕ್ಕೆ ಕಳಿಸಿಕೊಟ್ಟ ಬಾಸೆಲ್ ಮಿಷನ್‌ಗೆ ಆರಂಭದಲ್ಲಿ ಇಷ್ಟವಿರಲಿಲ್ಲ.

ಅವರು ಕನ್ನಡದ ಕೆಲಸ ಮಾಡುವುದನ್ನು ಅನೇಕರು ವಿರೋಧಿಸಿದ್ದರು. ಧರ್ಮಪ್ರಚಾರ ಮಾಡುವುದನ್ನು ಬಿಟ್ಟು ಉಳಿದ ಕೆಲಸಗಳನ್ನು ಮಾಡುತ್ತಿರುವ
ಕಿಟೆಲ್ ಕಾರ್ಯಗಳ ಬಗ್ಗೆ ಅವರಿಗೆ ಸಮಾಧಾನವಿರಲಿಲ್ಲ. ಕಳಿಸಿದ ಉದ್ದೇಶವೇ ಬೇರೆ, ಆದರೆ ಕಿಟೆಲ್ ಮಾಡುತ್ತಿರುವುದೇ ಬೇರೆ ಎಂದು ಬಾಸೆಲ್ ಮಿಷನ್‌ನಲ್ಲಿರುವ ಧರ್ಮಪ್ರಚಾರಕ ಮಂಡಳಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಅದಕ್ಕಾಗಿಯೇ ಅವರನ್ನು ಒಬ್ಬ ‘ವಿಫಲ ಪಾದ್ರಿ ಅಥವಾ ವಿಫಲ
ಧರ್ಮಪ್ರಚಾರಕ’ ಎಂದು ಬಣ್ಣಿಸಿದ್ದು. ಕಿಟೆಲ್ ಮರಣದ ನಂತರವೇ ಅವರ ಕಾರ್ಯ ಅದೆಷ್ಟು ಮಹತ್ವದ್ದು ಎಂದು ಅಲ್ಲಿನವರಿಗೆ ಗೊತ್ತಾಗಿದ್ದು. ಅದಕ್ಕಾಗಿ ಅವರು ಆ ಕೃತಿಯ ಶೀರ್ಷಿಕೆಯಲ್ಲಿ Posthumous Success of the Missionary Ferdinand Kittel ಎಂದು ಹೇಳಿದ್ದು.
೧೮೩೨ರಲ್ಲಿ ಅವರು ಜರ್ಮನಿಯ ಹ್ಯಾಂಬರ್ಗ್ ಸನಿಹದ ಬ್ರೆಮನ್‌ಗೆ ಹತ್ತಿರವಿರುವ ರೆಸ್ಟರಹಾಫೆ ಎಂಬಲ್ಲಿ ಹುಟ್ಟಿದ್ದು.

ಮೂಲತಃ ಅವರದು ಕ್ರಿಶ್ಚಿಯನ್ ಪಾದ್ರಿಯ ಮನೆತನ. ಅಂದರೆ ಕಿಟೆಲ್ ತಂದೆ ಕೂಡ ಸ್ಥಳೀಯ ಚರ್ಚಿನಲ್ಲಿ ಪಾದ್ರಿಯಾಗಿದ್ದರು. ೫ ಜನ ಮಕ್ಕಳ ಪೈಕಿ ಕಿಟೆಲ್ ಅವರೇ ಹಿರಿಯರು. ವಿದ್ಯಾಭ್ಯಾಸದಲ್ಲಿ ಮುಂದಿದ್ದ ಕಿಟೆಲ್ ಅವರು, ತಂದೆಯ ಆಣತಿಯ ಮೇರೆಗೆ ಬಾಸೆಲ್ ಮಿಷನ್‌ಗೆ ಸೇರಿದರು. ಅಲ್ಲಿ ೪ ವರ್ಷಗಳ ಶಿಕ್ಷಣ ಮತ್ತು ತರಬೇತಿಯ ಬಳಿಕ ಅವರನ್ನು ಧರ್ಮಪ್ರಚಾರಕ್ಕಾಗಿ ಕರ್ನಾಟಕಕ್ಕೆ ಕಳಿಸಿಕೊಡಲಾಯಿತು. ಮಂಗಳೂರಿನಲ್ಲಿರುವ ಬಾಸೆಲ್
ಮಿಷನ್ ಸಂಸ್ಥೆಗೆ ವರದಿ ಮಾಡಿಕೊಂಡ ಕಿಟೆಲ್ ಅವರಿಗೆ, ಮಂಗಳೂರು, ಮಡಿಕೇರಿ ಮತ್ತು ಧಾರವಾಡ ಪ್ರಾಂತಗಳನ್ನು ಧರ್ಮಪ್ರಚಾರದ ಕ್ಷೇತ್ರ ಗಳಾಗಿ ವಹಿಸಿಕೊಡಲಾಯಿತು. ಜನ, ಭಾಷೆ, ಆಚಾರ-ವಿಚಾರ, ಸಂಸ್ಕೃತಿ ಗೊತ್ತಿಲ್ಲದ ಪರಕೀಯ ಊರು. ಹೀಗಾಗಿ ಕಿಟೆಲ್‌ಗೆ ಆರಂಭದಲ್ಲಿ ಕನ್ನಡ ಕಲಿಯುವುದು ಅನಿವಾರ್ಯವಾಯಿತು.

ಆರಂಭದ ಒಂದೂವರೆ ವರ್ಷ ಅವರು ಕನ್ನಡ ಕಲಿಕೆಗಾಗಿಯೇ ತಮ್ಮನ್ನು ಮುಡಿಪಾಗಿಟ್ಟರು. ಅವರಿಗೆ ಕರ್ನಾಟಕದ ಭಾಷೆ ಮತ್ತು ಸಂಗೀತದ ಮೇಲೆ
ಒಲವು ಮೂಡಲಾರಂಭಿಸಿತು. ಹೆಚ್ಚಿನ ಸಮಯವನ್ನು ಅದಕ್ಕೇ ಮೀಸಲಾಗಿ ಇಡಲಾರಂಭಿಸಿದರು. ಅವರಿಗೆ ವಹಿಸಿದ ಧರ್ಮಪ್ರಚಾರದ ಕೆಲಸವನ್ನು ಬಿಟ್ಟು, ಕನ್ನಡ ಭಾಷೆ ಕಲಿಯುವುದಕ್ಕೆ ಹೆಚ್ಚಿನ ಸಮಯ ಮತ್ತು ಗಮನವನ್ನು ವ್ಯಯಿಸಲಾರಂಭಿಸಿದರು. ಪದಗಳ ಅರ್ಥ ಹುಡುಕಿಕೊಂಡು ಊರೂರು ಅಲೆಯಲಾರಂಭಿಸಿದರು. ಧರ್ಮಪ್ರಚಾರ ಮಾಡುವಾಗ, ಸ್ಥಳೀಯರ ವಿರೋಧ ಮೂಡಿದಾಗ ಕಿಟೆಲ್ ಕಂಗಾಲಾಗಿದ್ದರು. ಕ್ರಿಶ್ಚಿಯನ್ ಧರ್ಮಕ್ಕೆ
ಮತಾಂತರ ಆಗುತ್ತೇವೆ ಎಂದು ಹೇಳಿ ಹಣ ಪಡೆದವರು ಮತಾಂತರವಾಗದೇ ಮೋಸ ಮಾಡಿದ ಘಟನೆ ಅವರಲ್ಲಿ ತೀವ್ರ ನಿರಾಸೆಯನ್ನುಂಟು ಮಾಡಿತ್ತು. ಹೀಗಾಗಿ ಧರ್ಮಪ್ರಚಾರದ ಕೆಲಸವೆಂದರೆ ಅವರ ಮನಸ್ಸು ಯಾಕೋ ಹಿಂದೇಟು ಹಾಕುತ್ತಿತ್ತು. ಆದರೆ ಅವರಿಗೆ ಕನ್ನಡದ ಕೆಲಸ ಹೆಚ್ಚು ಸಮಾಧಾನ ಕೊಡುತ್ತಿತ್ತು. ಧರ್ಮಪ್ರಚಾರಕ್ಕೆ ಒಲ್ಲದ ಮನಸ್ಸು ಮತ್ತು ಕನ್ನಡ ಭಾಷೆ ಮೇಲಿನ ಪ್ರೇಮ- ಈ ಎರಡರ ನಡುವಿನ ದ್ವಂದ್ವ ಅವರನ್ನು ತೀವ್ರವಾಗಿ ಕಾಡಲಾರಂಭಿಸಿತ್ತು.

ಆ ಸಂದರ್ಭದಲ್ಲಿ ಅವರಿಗೆ ಧೈರ್ಯ ತುಂಬಿದವರು ಹರ್ಮನ್ ಮೊಗ್ಲಿಂಗ್. ಕಿಟೆಲ್ ಕರ್ನಾಟಕಕ್ಕೇ ಬರುವುದಕ್ಕಿಂತ ಕೆಲ ವರ್ಷಗಳ ಮೊದಲು, ಧರ್ಮಪ್ರಚಾರಕ್ಕೆ ಕೇರಳಕ್ಕೆ ಕಳಿಸಲ್ಪಟ್ಟಿದ್ದ ಹರ್ಮನ್ ಗುಂಡೇರ್ಟ್ ಎಂಬ ಮತ್ತೊಬ್ಬ ಜರ್ಮನ್ ಪಾದ್ರಿ ಸಹ ಮೂಲ ಉದ್ದೇಶವನ್ನು ಮರೆತು ಮಲಯಾಳಂ ಭಾಷೆಯ ಪದಕೋಶ ರಚನೆಯಲ್ಲಿ ತೊಡಗಿದ್ದರು. ತಮಗೆ ಧರ್ಮ ಪ್ರಚಾರದಲ್ಲಿ ಆಸಕ್ತಿ ಇಲ್ಲದ ವಿಚಾರವನ್ನು ಕಿಟೆಲ್, ಹರ್ಮನ್
ಮೊಗ್ಲಿಂಗ್ ಮುಂದೆ ಹೇಳಿಕೊಂಡಾಗ, ಗುಂಡೇರ್ಟ್ ಮಲಯಾಳಂದಲ್ಲಿ ಮಾಡಿದ ಕೆಲಸವನ್ನು ಅವರಿಗೆ ಮನವರಿಕೆ ಮಾಡಿಕೊಟ್ಟರು. ಇದು ಕಿಟೆಲ್ ತಲೆಯಲ್ಲಿ ಹೊಸ ಹುಳುವನ್ನು ಬಿಟ್ಟಂತಾಯಿತು.

ಅದಾದ ಬಳಿಕ ಎಲ್ಲ ವಿರೋಧಗಳ ನಡುವೆ ಕಿಟೆಲ್ ಕನ್ನಡದ ಕೆಲಸಕ್ಕೆ ಹೆಚ್ಚಿನ ಸಮಯ ಮುಡಿಪಾಗಿಡಲು ಗಟ್ಟಿ ನಿರ್ಧಾರ ಮಾಡಿದರು. ಇದು ಬಾಸೆಲ್ ಮಿಷನ್ ಸಂಸ್ಥೆಗೆ ಸರಿ ಕಾಣಲಿಲ್ಲ. ಹೀಗಾಗಿ ಕಿಟೆಲ್ ಅವರನ್ನು ಅದು ವಾಪಸ್ ಕರೆಯಿಸಿಕೊಂಡಿತು. ಆದರೆ ಕಿಟೆಲ್ ವಾದ ಬೇರೆಯದೇ ಆಗಿತ್ತು. ಸ್ಥಳೀಯ ಕನ್ನಡ ಭಾಷೆಯನ್ನು ಕಲಿಯದೇ ಧರ್ಮಪ್ರಚಾರ ಕಷ್ಟದ ಕೆಲಸ, ತಮ್ಮ ಕೆಲಸವೂ ಮೂಲ ಉದ್ದೇಶಕ್ಕೆ ಸಹಾಯಕವಾಗಲಿದೆ
ಎಂದು ವಾದಿಸಿದರು. ಅವರ ವಾದವನ್ನು ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡ ಬಾಸೆಲ್ ಮಿಷನ್ ಧರ್ಮಪ್ರಚಾರಕ ಮಂಡಳಿ, ಮತ್ತೊಮ್ಮೆ ಕಿಟೆಲ್ ಅವರನ್ನು ಕರ್ನಾಟಕಕ್ಕೆ ಕಳಿಸಿಕೊಟ್ಟಿತು.

ಅಲ್ಲಿಂದ ಆಗಮಿಸಿದ ಕಿಟೆಲ್, ತಮ್ಮ ಸಂಪೂರ್ಣ ಸಮಯವನ್ನು ಕನ್ನಡ ಪದಕೋಶ ರಚನೆಗೇ ಮುಡಿಪಾಗಿಟ್ಟರು. ಒಂದು ಪದದ ಅರ್ಥ, ಪ್ರಯೋಗ,
ಬಳಕೆಯನ್ನು ಅರಿಯಲು ಆ ಪದವನ್ನು ಹೆಚ್ಚಾಗಿ ಬಳಸುವ ಊರುಗಳಿಗೆ ಹೋಗಿ, ಅಲ್ಲಿನ ಜನರೊಂದಿಗೆ ಮಾತಾಡಿ, ಟಿಪ್ಪಣಿ ಮಾಡಿಕೊಂಡು ಬರಲಾರಂಭಿಸಿದರು. ಈ ಕೈಂಕರ್ಯದಲ್ಲಿ ಅವರು ಕರ್ನಾಟಕದ ಸುಮಾರು ೪,೦೦೦ಕ್ಕೂ ಅಽಕ ಹಳ್ಳಿಗಳಿಗೆ ಭೇಟಿ ಕೊಟ್ಟು ಕನ್ನಡ ಪದಗಳ ಅರ್ಥವನ್ನು ಖುದ್ದಾಗಿ ಅಲ್ಲಿನ ಜನರಿಂದಲೇ ತಿಳಿದುಕೊಳ್ಳಲು ಪ್ರಯತ್ನಿಸಿದರು. ಕೆಲವೊಮ್ಮೆ ಒಂದೊಂದು ಪದದ ಸರಿಯಾದ ಅರ್ಥವನ್ನು ತಿಳಿಯಲು ಅವರು ನಾಲ್ಕೈದು ಮೈಲು ಕಾಲ್ನಡಿಗೆ ಯಲ್ಲಿ ನಡೆದಿದ್ದುಂಟು. ಪದಗಳ ಅರ್ಥ ತಿಳಿಯುವಾಗ ಸ್ಥಳೀಯ ನಾಣ್ನುಡಿ, ಗಾದೆಗಳ ಸಂಗ್ರಹವನ್ನೂ ಮಾಡಿದರು.

ಅದೊಂದು ಮಹಾಭಿಯಾನ! ಕಿಟೆಲ್ ಕನ್ನಡದ ಕೆಲಸಕ್ಕೆ ಸಂಪೂರ್ಣ ತೊಡಗಿಸಿಕೊಂಡಿದ್ದು ಬಾಸೆಲ್ ಮಿಷನ್‌ನಲ್ಲಿ ವಿವಾದದ ವಿಷಯವಾಗಿತ್ತು.
ಅಷ್ಟೊತ್ತಿಗೆ ಅವರು ಕನ್ನಡ ಪದಕೋಶ ರಚನೆಯ ಕೊನೆಯ ಹಂತದಲ್ಲಿದ್ದರೂ. ಪದಕೋಶ ಮುದ್ರಿಸಲು ಹಣಕಾಸಿನ ನೆರವು ಬೇಕಾಗಿತ್ತು. ಆದರೆ ಬಾಸೆಲ್ ಮಿಷನ್ ಇದಕ್ಕೆ ಹಣ ನೀಡುವುದಿಲ್ಲ ಎಂದು ಹೇಳಿತು. ಅಲ್ಲಿಗೆ ಕಿಟೆಲ್ ಪದಕೋಶ ಕೆಲಸ ನನೆಗುದಿಗೆ ಬಿದ್ದಂತಾಗಿತ್ತು. ಅವರು ಧರ್ಮಪ್ರಚಾರದ ಕೆಲಸವನ್ನು ಬಿಟ್ಟಿದ್ದರು. ಪದಕೋಶ ಕೆಲಸವೂ ಮುಗಿದಿತ್ತು.

ಆದರೆ ಅದನ್ನು ಮುದ್ರಿಸುವುದು ದೊಡ್ಡ ತಲೆನೋವಾಗಿ ಪರಿಣಮಿಸಿತು. ಆಗ ಬಾಸೆಲ್ ಮಿಷನ್ ಕಿಟೆಲ್ ಅವರನ್ನು ತಾಯ್ನಾಡಿಗೆ ವಾಪಸ್ ಕರೆಯಿಸಿಕೊಂಡಿತು. ಅಲ್ಲಿನ ಮುಖ್ಯಸ್ಥರಿಗೆ ಹಣ ನೀಡುವಂತೆ ಕಿಟೆಲ್ ಮನವಿ ಮಾಡಿಕೊಂಡರು. ಆದರೆ ಅವರು ತಕ್ಷಣ ಸಮ್ಮತಿಸಲಿಲ್ಲ. ತಾವು ಇಷ್ಟು ವರ್ಷಗಳ ಕಾಲ ಮಾಡಿದ ಕೆಲಸ ವ್ಯರ್ಥವಾಗುತ್ತದೆ ಎಂದು ಕಿಟೆಲ್ ಬಾಸೆಲ್ ಮಿಷನ್ ಮುಂದೆ ವಾದಿಸಿದಾಗ, ಆಗಲೂ ಒಲ್ಲದ ಮನಸ್ಸಿನಿಂದ ಸ್ವಲ್ಪ ಹಣಕಾಸು ನೆರವು ನೀಡಲು ಬಾಸೆಲ್ ಮಿಷನ್ ಸಮ್ಮತಿಸಿತು.

ಆಗ ಭಾರತದಲ್ಲಿ ಬ್ರಿಟಿಷರ ಆಡಳಿತ. ಪದಕೋಶ ಮುದ್ರಣಕ್ಕೆ ಬೇಕಾಗುವ ಮಿಕ್ಕ ಹಣವನ್ನು ತಾವು ಬ್ರಿಟಿಷ್ ಸರಕಾರದಿಂದ ಪಡೆಯುವುದಾಗಿ ಕಿಟೆಲ್ ಬಾಸೆಲ್ ಮಿಷನ್ ಮುಂದೆ ಹೇಳಿದರು. ಇದು ಅವರಿಗೆ ಬಾಸೆಲ್ ಮಿಷನ್ ಹಣಕಾಸು ನೆರವು ಸಿಗಲು ಕಾರಣವಾಯಿತು. ಅಷ್ಟೇ ಅಲ್ಲ, ಮೈಸೂರು ರಾಜರಿಂದಲೂ ಧನಸಹಾಯ ಅಪೇಕ್ಷಿಸುವುದಾಗಿ ಅವರು ಮನವರಿಕೆ ಮಾಡಿಕೊಟ್ಟರು. ಇದಕ್ಕೆ ಸಮ್ಮತಿಸಿದ ಬಾಸೆಲ್ ಮಿಷನ್ ಮತ್ತೊಮ್ಮೆ ಕಿಟೆಲ್ ಅವರನ್ನು ಕರ್ನಾಟಕಕ್ಕೆ ಕಳಿಸಲು ಒಪ್ಪಿಗೆ ನೀಡಿತು. ಬಾಸೆಲ್ ಮಿಷನ್ ಸಭೆಯಲ್ಲಿ ಐವರ ಪೈಕಿ ಮೂರು ಮಂದಿ ಕಿಟೆಲ್ ವಾದವನ್ನು ಬೆಂಬಲಿಸಿ ದ್ದರಿಂದ ಅವರು ಪದಕೋಶ ಮುದ್ರಣಕ್ಕೆ ಅಂತಿಮ ರೂಪುರೇಷೆ ನೀಡಲು ಸಹಾಯಕವಾಯಿತು. ಅಲ್ಲಿಂದ ಮರಳಿದ ಕಿಟೆಲ್ ಬ್ರಿಟಿಷ್ ಸರಕಾರ ಮತ್ತು ಮೈಸೂರು ಮಹಾರಾಜರ ಸಹಕಾರದಿಂದ ಪದಕೋಶ ಮುದ್ರಣಕ್ಕೆ ಮುಂದಾದರು.

ಪ್ರತಿ ಸಲ ಅವರು ಜರ್ಮನಿಗೆ ಹಡಗಿನಲ್ಲಿ ಬಂದು ಹೋಗಲು ಐದಾರು ತಿಂಗಳು ಹಿಡಿಯುತ್ತಿತ್ತು. ಒಂದು ಪತ್ರ ವ್ಯವಹಾರಕ್ಕೆ ಮೂರ್ನಾಲ್ಕು ತಿಂಗಳಾಗುತ್ತಿತ್ತು. ಈ ಮಧ್ಯೆ ಅವರು ಬಾಸೆಲ್ ಮಿಷನ್ ಕಳಿಸಿದ ಹುಡುಗಿಯನ್ನು ಮಂಗಳೂರಿನಲ್ಲಿ ಮದುವೆಯಾಗಿದ್ದು, ಅವಳಿಗೆ ಇಬ್ಬರು ಮಕ್ಕಳಾಗಿ
ದ್ದು, ಎರಡನೇ ಹೆರಿಗೆಯಲ್ಲಿ ಪತ್ನಿ ತೀರಿಕೊಂಡಿದ್ದು, ನಂತರ ಪತ್ನಿಯ ಸಹೋದರಿಯನ್ನೇ ವಿವಾಹವಾಗಿದ್ದು, ಅವಳಿಂದ ನಾಲ್ವರು ಹುಟ್ಟಿದ್ದು, ಗಂಡ-ಹೆಂಡತಿ ನಡುವಿನ ವ್ಯಾಕುಲ, ತುಮುಲ, ಅಭಿಪ್ರಾಯಭೇದದ ಹೊಯ್ದಾಟ, ದುಸುಮುಸ, ಗಂಡ-ಹೆಂಡತಿ ನಡುವಿನ ಪತ್ರ ವ್ಯವಹಾರ, ಹೆಂಡತಿ ಬಾಸೆಲ್ ಮಿಷನ್‌ಗೆ ಬರೆದ ಪತ್ರ ವಿನಿಮಯ.. ಅವೇ ಇನ್ನೊಂದು ರೋಚಕ ಕಥೆ. ಕೊನೆಗೂ ಕಿಟೆಲ್ ಪದಕೋಶ ಮುದ್ರಣಗೊಂಡಿತು.

ಕಿಟೆಲ್ ಅಷ್ಟಕ್ಕೇ ಸುಮ್ಮನಾಗಲಿಲ್ಲ. ಕನ್ನಡ-ಇಂಗ್ಲಿಷ್ ವ್ಯಾಕರಣ ಪುಸ್ತಕ ರಚನೆಗೂ ಮುಂದಾದರು. ಅದು ಕರ್ನಾಟಕದಲ್ಲಿ ಮುದ್ರಣಗೊಂಡಾಗ ಕಿಟೆಲ್
ಜರ್ಮನಿಯಲ್ಲಿದ್ದರು. ತಾವು ರಚಿಸಿದ ಆ ಕೃತಿಯನ್ನು ಕಣ್ತುಂಬಿಸಿಕೊಳ್ಳಬೇಕು ಎಂದು ಹಲವು ಸಲ ಕಾತರದಿಂದ ಅಲವತ್ತುಕೊಂಡರೂ, ಅದು ಮೂರ್ನಾಲ್ಕು ವರ್ಷಗಳ ಕಾಲ ಸಾಧ್ಯವಾಗಿರಲಿಲ್ಲ. ಕರ್ನಾಟಕದಲ್ಲಿ ಹಡಗಿನಲ್ಲಿ ಅದು ಬರಬೇಕಾಗಿತ್ತು. ಅದಕ್ಕೆ ಕನಿಷ್ಠ ಐದಾರು ತಿಂಗಳು ಬೇಕಾಗಿತ್ತು.
ಕೊನೆಗೊಂದು ದಿನ ಆ ಕೃತಿ ಕೈ ಸೇರುವ ಹೊತ್ತಿಗೆ ಅವರ ದೃಷ್ಟಿ ಮಂದವಾಗಿತ್ತು. ಆ ಪುಸ್ತಕವನ್ನು ಮೈದಡವಿದ ನಂತರದ ದಿನಗಳಲ್ಲಿ ಅವರು ಅಸುನೀಗಿದರು.

ಕನ್ನಡದಲ್ಲಿ ಸಾಕಷ್ಟು ಪದಕೋಶಗಳು ಪ್ರಕಟವಾಗಿದ್ದರೂ, ಇಂದಿಗೂ ಕಿಟೆಲ್ ಪದಕೋಶವನ್ನು ಮೀರಿಸುವ ಇನ್ನೊಂದು ಕೃತಿ ಬಂದಿಲ್ಲ. ಎಲ್ಲ ಪದಕೋಶಗಳಿಗೂ ಕಿಟೆಲ್ ಕೋಶವೇ ಆಧಾರ. ಭಾಷೆ ನದಿಯಾದರೆ, ಪದಕೋಶ ಎಂಬುದು ಅಣೆಕಟ್ಟು. ಅಂಥ ‘ಕನ್ನಡದ ಕನ್ನಂಬಾಡಿ’ಯನ್ನು ಕಟ್ಟಿದ
ಕಿಟೆಲ್ ಸಮಾಽಯ ಮುಂದೆ ಹೋಗಿ ಶಿರಬಾಗಿ ನಮಿಸಿ ಬಂದಾಗ ನನ್ನಲ್ಲಿ ಧನ್ಯತೆಯ ರೋಮಾಂಚನ ಭಾವ!