Wednesday, 11th December 2024

ಕೊಟ್ಟ ಹೆಣ್ಣು ಕುಲಕ್ಕೆ ಹೊರಗು ಎನ್ನುವವರ ನಡುವೆ…

ಯಶೋ ಬೆಳಗು

yashomathy@gmail.com

ಸಾಮಾನ್ಯವಾಗಿ ಹೆಣ್ಣು ಮಗು ಹುಟ್ಟುತ್ತಲೇ ಅದು ಮತ್ತೊಂದು ಮನೆಗೆ ಸೇರಿದ್ದು ಅನ್ನುವ ಭಾವನೆಯಿಂದಲೇ ಬೆಳೆಸುವ ವಾತಾವರಣದ ನಡುವೆ ಇಂಥ ಅಪರೂಪದ ಸಹೋದರಿಕೆಯ ಭಾವನೆ ನಿಜಕ್ಕೂ ಆದರ್ಶಯುತ ವಾದದ್ದು. ಪ್ರಶಸ್ತಿ ಸ್ವೀಕಾರದ ನಂತರ ಮಾತನಾಡಿದ ಲಲಿತಾ ನಾಯಕ್ ರವರು ನನಗೂ ಅಣ್ಣತಮ್ಮಂದಿರಿದ್ದಾರೆ. ಅಣ್ಣ ತುಂಬ ಒಳ್ಳೆಯವನು. ತಮ್ಮ ಇರುವ ಒಂದೆಕರೆ ಆಸ್ತಿಯ ಮೇಲೆ ಕೇಸು ಹಾಕಿ ಇಂದಿಗೂ ಕಾಡುತ್ತಿದ್ದಾನೆ….

ಮೊನ್ನೆ ಹಿರಿಯ ಲೇಖಕಿ, ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್‌ರವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಲೇಖಕಿಯರ ಸಂಘದ ವತಿಯಿಂದ ಇಂದಿರಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹೋದಾಗ ಆ ಪ್ರಶಸ್ತಿಯ ಹಿಂದಿನ ಕತೆ ಕೇಳಿ ಮನಸು ಮೂಕವಾಯಿತು. ಇಂದಿರಾ ಎಂದರೆ ಅದು ಇಂದಿರಾ ಗಾಂಧಿಯ ಹೆಸರಿನಲ್ಲಿ ಕೊಡಮಾಡುತ್ತಿರುವ ಪ್ರಶಸ್ತಿಯೆಂದೇ ಭಾವಿಸಿದ್ದೆ.

ಆದರೆ ಗತಿಸಿಹೋದ ಇಂದಿರಾ ಹಾಗೂ ರತ್ನ ಎಂಬ ತನ್ನ ಇಬ್ಬರು ಸಹೋದರಿಯರ ನೆನಪಿನಲ್ಲಿ ಅವರ ಪ್ರೀತಿಯ ಸಹೋದರ ರಾಜನ್ ಆರಂಭಿಸಿದ ದತ್ತಿ ಪ್ರಶಸ್ತಿಯಿದು ಎಂದು ತಿಳಿದಾಗ ಅದೆಷ್ಟು ಪುಣ್ಯವಂತ ರಪ್ಪಾ ಆ ಸಹೋದರಿಯರು ಇಂಥಾ ಅಣ್ಣನನ್ನು ಪಡೆಯಲಿಕ್ಕೆ ಎಂದು ಮನಸು ಭಾವುಕವಾಯಿತು. ಸಾಮಾನ್ಯವಾಗಿ ಹೆಣ್ಣು ಮಗು ಹುಟ್ಟುತ್ತಲೇ ಅದು ಮತ್ತೊಂದು ಮನೆಗೆ ಸೇರಿದ್ದು ಅನ್ನುವ ಭಾವನೆಯಿಂದಲೇ ಬೆಳೆಸುವ ವಾತಾವರಣದ ನಡುವೆ ಇಂಥ ಅಪರೂಪದ ಸಹೋದರಿಕೆಯ ಭಾವನೆ ನಿಜಕ್ಕೂ ಆದರ್ಶಯುತ ವಾದದ್ದು.

ಪ್ರಶಸ್ತಿ ಸ್ವೀಕಾರದ ನಂತರ ಮಾತನಾಡಿದ ಲಲಿತಾ ನಾಯಕ್ ರವರು ನನಗೂ ಅಣ್ಣತಮ್ಮಂದಿರಿದ್ದಾರೆ. ಅಣ್ಣ ತುಂಬ ಒಳ್ಳೆಯ ವನು. ತಮ್ಮ ಇರುವ ಒಂದೆಕರೆ ಆಸ್ತಿಯ ಮೇಲೆ ಕೇಸು ಹಾಕಿ ಇಂದಿಗೂ ಕಾಡುತ್ತಿದ್ದಾನೆ…. ಇರಲಿ, ಮುಂದಿನ ದಿನಗಳಲ್ಲಿ, ನಾನೂ ಆಕ್ಸಿಡೆಂಟಿನಲ್ಲಿ ತೀರಿಹೋದ ನನ್ನ ತಂಗಿ ಬಿ.ಟಿ. ಕೋಮಲ ನಾಯಕ್ ಳ ನೆನಪಿನಲ್ಲಿ ಈ ಪ್ರಶಸ್ತಿಯ ನಿಧಿಗಾಗಿ ನನ್ನ ಕೈಲಾದಷ್ಟು ಧನಸಹಾಯ ಮಾಡುತ್ತೇನೆ ಎಂದಾಗ, ಈ ದೇಶದಲ್ಲಷ್ಟೇ ಅಲ್ಲ, ಈ ಭೂಮಿಯ ಮೇಲೇ ಹೆಣ್ಣು ಜೀವದ ಬವಣೆ ಹೆಚ್ಚೂ ಕಡಿಮೆ ಎಲ್ಲರದ್ದೂ ಒಂದೇ ತೆರನಾದದ್ದು ಅನಿಸಿತು.

ಒಂದೇ ರಕ್ತ ಹಂಚಿಕೊಂಡು ಹುಟ್ಟುವ ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು ಒಂದೇ ಬಾಲ್ಯವನ್ನು ಹಂಚಿಕೊಂಡು ಬೆಳೆದರೂ ನಂತರ ಬೆಳೆಯುತ್ತಾ ಬೆಳೆಯುತ್ತಾ ಅದೆಷ್ಟು ವಿಭಿನ್ನ, ವಿಚಿತ್ರ ಮತ್ತು ಸಂಬಂಧವೇ ಇಲ್ಲವೇನೋ ಎಂಬಷ್ಟು ಇಂಡಿಫರೆಂಟ್
ಆಗಿಬಿಟ್ಟಿರುತ್ತಾರೆಂದರೆ, “ಮದುವೆ ಮಾಡಿಕೊಟ್ಟ ಮೇಲೆ ಅಲ್ಲಿಗೆ ಋಣ ಮುಗಿಯಿತು ಎಂದು ಅಣ್ಣನೆಂದರೆ, ತವರು ಮನೆಯ ಋಣ ಯಾವತ್ತಿಗೋ ಮುಗಿದು ಹೋಯಿತು ಅನ್ನುತ್ತಾರೆ ಅಕ್ಕ-ತಂಗಿಯರು.

ಅದ್ಯಾಕೆ ಈ ಪದ್ದತಿಯನ್ನು ಮುಂದುವರೆಸಿಕೊಳ್ಳುತ್ತಾ ಬಂದಿದ್ದಾರೋ ಇಂದಿಗೂ ಅರ್ಥವಾಗುವುದಿಲ್ಲ. ಎಷ್ಟೇ ಸಮಾನತೆಯ ಅರಿವು ಮೂಡಿಸಿದರೂ, ಕಾನೂನು-ಕಟ್ಟಳೆ ಮಾಡಿದರೂ ಮನಸಿನ ಭಾವವಿನ್ನೂ ಅನೇಕ ಕಡೆ ಹಾಗೇ ಉಳಿದುಕೊಂಡಿದೆ. ಅತಿಯಾದ ಮುದ್ದಿನಿಂದ ಗಂಡುಮಕ್ಕಳನ್ನು ಸಾಕುತ್ತಾ, ಸೋಮಾರಿಗಳನ್ನಾಗಿ ಮಾಡಿ ಕೂರಿಸಿಬಿಡುತ್ತಾರೆ. ಎಷ್ಟೇ ಆಗಲಿ ಅವನು ಗಂಡಸು ಬಿಡು ಅನ್ನುವ ಮಾತು ಅವರ ಎಲ್ಲ ಬೇಜವಾಬ್ದಾರಿತನದ ವರ್ತನೆಗೆ ಕೊಡುವ ಸರ್ಟಿಫಿಕೇಟುಗಳಂತಾಗಿ ಹೋಗು
ತ್ತವೆ.

ತವರುಮನೆಯ ಸೆಳೆತ ಹಾಗೇ ಉಳಿದುಕೊಂಡರೆ ಹೋದ ಮನೆಯಲ್ಲಿ ಹೊಂದಿಕೊಳ್ಳಲಾಗದೆ, ಸಂಸಾರ ಸುಗಮವಾಗದೇ ಹೋದೀತೆಂಬ ಭಯದ ಕಾರಣದಿಂದ ಈ ರೀತಿಯ ಪದ್ದತಿ ಹುಟ್ಟಿಕೊಂಡಿದ್ದಾ? ಗೊತ್ತಿಲ್ಲ. ಹೋದ ಮನೆಯಲ್ಲಿ ಎಲ್ಲವೂ ಸರಿಯಾಗಿದ್ದರೆ ಯಾವ ತೊಂದರೆಯೂ ಇಲ್ಲ. ಆದರೆ ಬದುಕೆಂದರೆ ಬರೀ ಸುಖದ ಸುಪ್ಪತ್ತಿಗೆಯಷ್ಟೇ ಅಲ್ಲವಲ್ಲ. ಏನೇ ಕಷ್ಟ, ತೊಂದರೆ ಬಂದರೂ ಹೆಣ್ಣುಮಕ್ಕಳು ಮೊದಲು ಕೈಚಾಚುವುದು ತವರುಮನೆಯ ಕಡೆಗೇ! ಆದರೆ ಬಾಲ್ಯದಲ್ಲಿ ಅಪ್ಪನ ರಕ್ಷಣೆ ಯಲ್ಲಿಯೂ, ಯೌವ್ವನದಲ್ಲಿ ಗಂಡನ ರಕ್ಷಣೆಯಲ್ಲಿಯೂ, ಮುಪ್ಪಿನಲ್ಲಿ ಮಗನ ರಕ್ಷಣೆಯಲ್ಲಿಯೂ ಸುರಕ್ಷಿತವಾಗಿರಬೇಕಾದ ಹೆಣ್ಣು ಅನೇಕ ಸಲ ಈ ಸಹೋದರರ ಬೇಜವಾಬ್ದಾರಿಯಿಂದ ಸಾಕಷ್ಟು ನಲುಗಿಹೋಗುತ್ತಾರೆ.

ಅತ್ತಿಗೆ ಇದ್ದರಂತೂ ಅಣ್ಣ ನಿಲುಕದ ನಕ್ಷತ್ರವೇ ಆಗಿ ಹೋಗಿರುತ್ತಾನೆ. ಆದರೆ ಎಲ್ಲರೂಹಾಗಿರುವುದಿಲ್ಲ. ಅದಕ್ಕೆ ತದ್ವಿರುದ್ಧವಾದ ಮನೆಗಳನ್ನೂ ಸಾಕಷ್ಟು ನೋಡಿದ್ದೇನೆ. ಆದರೂ ಆ ಅಣ್ಣನ ಪ್ರೀತಿಗೆ ಗೌರವಪೂರ್ವಕ ನಮನಗಳನ್ನು ಮನದಲ್ಲೇ ಅರ್ಪಿಸಿದೆ.
***

ಕಾರ್ಯಕ್ರಮ ಮುಗಿಸಿ ಬರುವಾಗ ಮನದಲ್ಲಿ ಒಂದೇ ಸಮನೆ ಕಾಡುತ್ತಿದ್ದ ವಿಷಯವೆಂದರೆ ಗಂಡು-ಹೆಣ್ಣುಗಳು ಎರಡು ಕಣ್ಣುಗಳಿದ್ದಂತೆ. ಎರಡಲ್ಲಿ ಒಂದಕ್ಕೆ ತೊಂದರೆ ಯಾದರೂ ನೋಟದಲ್ಲಿ ಅಸಮತೆ ಉಂಟಾಗುತ್ತದೆ ಎಂದ ವಿಷಯ ಎಷ್ಟು ಸತ್ಯವಲ್ಲವೆ? ಎನಿಸಿತು. ಆದರೆ ಇಂದು ಈ ಗಂಡು-ಹೆಣ್ಣಿನ ನಡುವಿನ ಸಂಬಂಧಗಳೆಂಬುದು ಅದೆಷ್ಟು ಸಂಕೀರ್ಣವಾಗಿದೆ. ಬಾಲ್ಯ ಕಳೆದು ಯೌವನಕ್ಕೆ ಕಾಲಿಡುತ್ತಿ ದ್ದಂತೆಯೇ ಗಂಡು ಹೆಣ್ಣುಗಳೆರಡರ ನಡೆ-ನುಡಿಯಲ್ಲಿ ಸಾಕಷ್ಟು ವ್ಯತ್ಯಾಸಗಳನ್ನು ನಾವು ಕಾಣಬಹುದು.

ಯಾರದ್ದೋ ಮನೆಯ ಮಗಳು, ಮತ್ಯಾರದ್ದೋ ಮನೆಯ ಮಗುವಿನ ತಾಯಿಯಾಗಿ ಪರಿವರ್ತನೆಯಾದಾಗ ಅವಳಲ್ಲಾಗುವ ಬದಲಾವಣೆಗಳು, ಉಂಟಾಗುವ ತಲ್ಲಣಗಳು, ತೊಳಲಾಟಗಳು, ಎದುರಾಗುವ ಸಂಕಟಗಳು ಅಬ್ಬಬ್ಬ! ಇದರಿಂದಾಗಿಯೇ ಇತ್ತೀಚೆಗೆ ಪ್ರೀತಿ ಬೇಕು, ಆದರೆ ಉಸಿರುಗಟ್ಟಿಸುವ ಬಂಧನ ಬೇಡವೆನ್ನುತ್ತ ಮದುವೆ ಎಂದರೆ ಹೆದರಿ ಮಾರು ದೂರ ಸರಿಯು ತ್ತಿದ್ದಾರೆ ಹೆಣ್ಣುಮಕ್ಕಳು. ಗಂಡುಮಕ್ಕಳೂ ಇದಕ್ಕೆ ಹೊರತಲ್ಲ. ಇರುವುದು ಒಂದೇ ಬದುಕು. Wrong person ಜೊತೆಗೆ ಬದುಕು ವುದಕ್ಕಿಂತಾ ಡಿವೋರ್ಸ್ ಯಾತನೆ ಸಹಿಸಿಕೊಳ್ಳುವುದು, ಆನಂತರ ಬದುಕನ್ನು ಒಂಟಿಯಾಗಿ ಕಳೆಯುವುದು ಹೆಚ್ಚು ಸುಲಭ.

ಮತ್ತೊಂದು ಮದುವೆ ಆಗಿ ಅವರಿವರೊಂದಿಗೆ ಬದುಕು ಕಳೆಯುವುದಕ್ಕಿಂತಾ ನಮ್ಮೊಂದಿಗೆ ನಾವು ಹೆಚ್ಚು comfortable  ಅನ್ನಿಸಿದರೆ, ಒಂಟಿಯಾಗಿ ಉಳಿದುಬಿಡುವುದೂ ಸೂಕ್ತವೇ. ಆಕೆ ಪಾಪ, ಎಂಥ ಗಂಡನನ್ನು ಕಟ್ಟಿಕೊಂಡು ಜೀನಪರ್ಯಂತ
ಹೆಣಗಿದಳು ಅನ್ನಿಸಿಕೊಳ್ಳುವುದಕ್ಕಿಂತ, ಈ ಬದುಕನ್ನು ನನಗಿಷ್ಟ ಬಂದ ರೀತಿಯಲ್ಲಿ ಚೆನ್ನಾಗಿ ಬದುಕಿದೆ ಅನ್ನಿಸುವುದು ಹೆಚ್ಚು ಮುಖ್ಯ ಎನ್ನುತ್ತಾ quality ಬದುಕನ್ನು ಬದುಕುವ ಬಯಕೆಯಲ್ಲಿ ಬರಿದಾಗಿ ಹೋಗುತ್ತಿವೆಯಾ ತುಂಬು ಕುಟುಂಬಗಳು?
ಬಹುಶಃ ಪ್ರೀತಿ ಅನ್ನುವ ವಿಷಯದಲ್ಲಿ ನಡೆಯುವಷ್ಟು ವಂಚನೆ ಮತ್ಯಾವ ವಿಷಯದಲ್ಲೂ ನಡೆಯುವುದಿಲ್ಲವೇನೋ ಅನಿಸು ತ್ತದೆ ಕೆಲವೊಮ್ಮೆ.

ಹರೆಯಕ್ಕೆ ಕಾಲಿಡುತ್ತಿದ್ದಂತೆಯೇ ಆರಂಭವಾಗುವ ಸಂಗಾತಿಯ ಹುಡಕಾಟದ ನಡುವೆ ಇಚ್ಛೆಯನರಿಯುವ ಸಾಂಗತ್ಯ ದೊರೆಯುವುದು ಎಲ್ಲೋ ಕೆಲವರಿಗೆ ಮಾತ್ರ. ಪ್ರೀತಿ ದೈವೀಕವಾ? ದೈಹಿಕವಾ? ಅನ್ನುವ ಜಿಜ್ಞಾಸೆ ಬಹಳಷ್ಟು ಸಾರಿ ಕಾಡುತ್ತದೆ.
ಬದ್ಧತೆಯಿಲ್ಲದ ಪ್ರೀತಿ ಗೋರ್ಕಲ್ಲ ಮೇಲೆ ಮಳೆನೀರು ಸುರಿದಂತೆ. ಕತ್ತಲೆಯಲ್ಲೇ ಅರಳಿ ನರಳುವ ಪ್ರೀತಿಗೆ ಬೆಳಕಿನ ಬಣ್ಣದ ಅರಿವೇ ಇರುವುದಿಲ್ಲ. ಪೀಳಿಗೆಯಿಂದ ಪೀಳಿಗೆಗೆ ತನ್ನ ರೂಪ ಬದಲಿಸುತ್ತಾ ಬಂದಿರುವ ಪ್ರೀತಿ ಇಂದಿನ ಯುವ ಜನತೆಯ ಕಣ್ಣಲ್ಲಿ oಠಿ oಛಿ Zb ಠಿeಟ್ಠಜe ಅನ್ನುವಷ್ಟರ ಮಟ್ಟಿಗೆ ಬಂದು ನಿಂತಿದೆ.

ಹಮೆ ತುಮ್ ಸೆ ಪ್ಯಾರ್ ಕಿತನಾ ಯೆ ಹಮ್ ನಹೀ ಜಾನತೇ; ಮೆ ದುನಿಯಾ ಬುಲಾದೂಂಗಾ ತೇರಿ ಚಾಹತ್ ಮೆ ಅನ್ನುವ ಮಾತೆಲ್ಲ ಈಗ ಕ್ಲೀಷೆ. ಚಾಟಿಂಗ್, ಡೇಟಿಂಗ್ ಮಾಡುತ್ತಾ I am in a relationship ಅಂತ ಬೋಲ್ಡಾಗೇ ಹೇಳಿಕೊಳ್ಳುತ್ತಾ ಸ್ವತಂತ್ರಳಾಗಿ ಬದುಕುವುತ್ತ ದಾಪುಗಾಲಿಡುತ್ತಿದ್ದಾಳೆ ಮಹಿಳೆ. ಆದರೆ ಸುರಕ್ಷಿತವಾಗಿದ್ದಾಳಾ? ಆರ್ಥಿಕ ಸಬಲತೆಯ ಹೆಸರಿನಲ್ಲಿ ಶೋಷಣೆಯ ಮತ್ತೊಂದು ಮಗ್ಗುಲಿನ ಬಲಿಪಶುವಾಗುತ್ತಿದ್ದಾಳಾ? ಉನ್ನತ ಶಿಕ್ಷಣ, ಉನ್ನತ ಹುದ್ದೆ, ಅಧಿಕಾರ ಅಲಂಕರಿಸಿ ದಾಕ್ಷಣ ಪುರುಷನ ಸರಿಸಮನಳಾಗಿ ಬಿಡಬಲ್ಲಳಾ? ಮಹಿಳೆ ಪುರುಷನಿಗಿಂತ ಸಾಕಷ್ಟು ಮುಂದಿದ್ದಾಳೆ.

ಅವಳಿಗ್ಯಾಕೆ ಸಮಾನತೆಯ ಹಕ್ಕು ಅನ್ನುವ ಮಾತಿನ ನಡುವೆಯೂ ಕಾಡುವ ಪ್ರಶ್ನೆಗಿನ್ನೂ ಸಮಂಜಸ ಉತ್ತರ ದೊರೆತಿಲ್ಲ.
ಆದ್ದರಿಂದ ಆಧುನಿಕತೆಯ ಬೆಳವಣಿಗೆಯ ಜೊತೆಜೊತೆಗೆ ಸುರಕ್ಷತೆಯ ಪ್ರಜ್ಞೆಯನ್ನೂ ಬೆಳೆಸಿಕೊಳ್ಳುವುದು ಅವಶ್ಯಕ.  ಇನ್ನು ಅಮ್ಮನೆಂದರೆ ಮುಗಿದೇ ಹೋಯಿತು. ಅದು ನಿರಂತರವಾಗಿ ಪ್ರೀತಿ ಹೊರಸೂಸುವ, ಕಷ್ಟಕ್ಕೆ ಆಗುವ, ಆರೈಕೆ ಮಾಡುವ, ದುಗುಡ ಕಳೆಯುವ ಪ್ರೀತಿ- ವಾತ್ಸಲ್ಯಗಳ ಕರೆಂಟ್ ಅಕೌಂಟು. ಖಾಲಿಯಾಗದ ಅಕ್ಷಯ ಪಾತ್ರೆ. ಅದನ್ನೇ ದುರುಪಯೋಗ ಪಡಿಸಿಕೊಳ್ಳುವ ಅನೇಕ ದುಷ್ಟ ಮಕ್ಕಳಿರುತ್ತಾರೆ. ಅಮ್ಮನ ಪಿಂಚಣಿ ಕಿತ್ತುಕೊಳ್ಳುತ್ತಾರೆ.

ಒಡವೆ ಕಿತ್ತುಕೊಳ್ಳುತ್ತಾರೆ. ಸೈಟು ಬರೆಸಿಕೊಳ್ಳುತ್ತಾರೆ. ಮೊಮ್ಮಕ್ಕಳನ್ನಾಡಿಸಿಕೊಂಡು ಬಿದ್ದಿರು ಅನ್ನುತ್ತಾರೆ. ಆದರೆ ಅದೆಲ್ಲವನ್ನೂ ತಾಯಿ ಸಹಿಸಿಕೊಳ್ಳುತ್ತಾಳೆ. ಯಾಕೆಂದರೆ ಆ ಮಗು ತನ್ನದೇ ರಕ್ತ-ಮಾಂಸಗಳ ಮುಂದುವರಿಕೆ. ತನ್ನ ದೇಹದೊಳಗೆ ಒಂಭತ್ತು ತಿಂಗಳು ಬೆಚ್ಚಗೆ ಮಲಗಿದ್ದದ್ದು. ತನಗೆ ತಾಯ್ತನದ ಸವಿಯುಣಿಸಿದ ಅಮೃತಬಿಂದು. ಆದರೆ ಯಾವುದೇ ಮಕ್ಕಳಾದರೂ ಬೆಳೆಯುತ್ತಾ ಬೆಳೆ ಯುತ್ತ ಅವರದೇ ಆದ ಬದುಕಿನೆಡೆಗೆ ಆಕರ್ಷಣೆಗೊಳ್ಳುವವರೇ.

ಹೀಗಾಗಿ ಏನೇ ಪ್ರೀತಿಯಿದ್ದರೂ ಮೊದಲಿನಿಂ ದಲೇ ಸ್ವಲ್ಪಮಟ್ಟಿಗಿನ ಡಿಟ್ಯಾಚ್‌ಮೆಂಟ್ ಬೆಳೆಸಿಕೊಳ್ಳದಿದ್ದರೆ ಅದನ್ನು ಅಮ್ಮನ ಬಲಹೀನತೆ ಅಂದುಕೊಂಡು ಬಿಡುತ್ತಾರೆ. ಅದೆಷ್ಟೇ ಪ್ರೀತಿಯಿದ್ದರೂ ತಾಯಂದಿರ ಇಡೀ ಜೀವನ ಮಕ್ಕಳ ಸುತ್ತಲೇ ಸುತ್ತುತ್ತಿರಬಾರದು. ತಮ್ಮದೇ ಆದ ಸಮಯವನ್ನು ತಮಗಾಗಿ ಉಳಿಸಿಕೊಳ್ಳಬೇಕು. ಮಮತೆಯ ಸುಳಿಯಲ್ಲಿ ಸಿಲುಕಿಕೊಳ್ಳದೆ ಮಕ್ಕಳನ್ನು ಹೆಚ್ಚು ಗಟ್ಟಿಗರನ್ನಾಗಿ ಮಾಡಬೇಕು.

ಹೀಗೆಲ್ಲ ದಾರಿಯುದ್ದಕ್ಕೂ ಹಂಪು-ಬ್ರೇಕುಗಳ ನಡುವೆ ಆಲೋಚನೆಗಳು ಓಡುತ್ತಲೇ ಇದ್ದವು. ಮನೆಯ ಕದ ತೆರೆದ ಕೂಡಲೇ ಎದುರಾದ ಮಗನನ್ನು ನೋಡುತ್ತಿದ್ದಂತೆಯೇ ಎಲ್ಲ ವಿಚಾರಗಳೂ ಮರೆಯಾಗಿ ನಾನು ಶುದ್ಧಾನುಶುದ್ಧ ಅಮ್ಮನಾಗಿ ಬಿಟ್ಟೆ.