ಭೂಮಿತಾಯಿ
ಬಸವರಾಜ ಶಿವಪ್ಪ ಗಿರಗಾಂ
ಗ್ರಾಮೀಣ ಭಾಗದಲ್ಲಿರುವ ಬಹುತೇಕ ಕೃಷಿ ಕುಟುಂಬದಲ್ಲಿನ ಮಹಿಳೆಯರು ಇಂದಿಗೂ ನಸುಕಿನಲ್ಲಿಯೇ ಎದ್ದು ಸೂರ್ಯೋದಯದೊಂದಿಗೆ ಕೃಷಿ ಕಾಯಕದಲ್ಲಿ ತೊಡಗಿಕೊಳ್ಳುವುದು ಸಂಪ್ರದಾಯವಾಗಿದೆ. ಭೂಮಿ ತಯಾರಿಯಿಂದ ಹಿಡಿದು, ಬೆಳೆಯ ಕಟಾವಿನವರೆಗಿನ ಪ್ರತಿ ಹಂತದಲ್ಲೂ ಮಹಿಳೆಯರ ಪಾತ್ರ ಬಹುದೊಡ್ಡದು.
ಮಾನವ ಶಾಸ್ತ್ರದ ಅಧ್ಯಯನದ ಪ್ರಕಾರ, ಕೃಷಿ ಕಾರ್ಯವು ಮೊದಲು ಪ್ರಾರಂಭಗೊಂಡಿದ್ದು ಮಹಿಳೆಯರಿಂದಲೇ ಎಂಬುದು ತಿಳಿದು ಬಂದಿದೆ. ಕಾಲ ಕ್ರಮೇಣ ನಾಗರಿಕತೆಯು ಬೆಳೆದಂತೆ, ಕೃಷಿಯಿಂದ ಹಣ ಗಳಿಸುವುದು ಹಾಗೂ ಅಧಿಕಾರ ಚಲಾಯಿಸುವುದು ಪುರುಷ ಪ್ರಧಾನ ವ್ಯವಸ್ಥೆಯಾಗಿ ಬದಲಾ ಯಿತು. ತದನಂತರ ಕೃಷಿಗೆ ಸಂಬಂಧಿಸಿದ ಪ್ರಮುಖ ನಿರ್ಣಯಗಳು ಹಾಗೂ ಹಣಕಾಸಿನ ವ್ಯವಹಾರಗಳು ಪುರುಷರ ನಿಯಂತ್ರಣಕ್ಕೆ ಸೇರಿಕೊಂಡವು. ಆದರೆ ಕೃಷಿಯಲ್ಲಿನ ಶ್ರಮವು ಮಾತ್ರ ಮಹಿಳೆಯರ ಪಾಲಾಯಿತು. ಕೃಷಿಯ ಬೆಳವಣಿಗೆಯಲ್ಲಿ ಮಹಿಳೆಯು ಎಲೆಮರೆಯ ಕಾಯಿಯಂತೆ ಅತ್ಯಂತ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿರುವ ಫಲವಾಗಿ ಕೃಷಿ ಬಹು ಎತ್ತರಕ್ಕೆ ತಲುಪಿದೆ. ಅದರ ಕೀರ್ತಿ ಮಹಿಳೆಯರಿಗೇ ಸಲ್ಲಬೇಕು.
ಕೃಷಿಯ ಮೊದಲ ಹೆಜ್ಜೆಯಾಗಿರುವ ಭೂಮಿ ತಯಾರಿಯಿಂದ ಹಿಡಿದು, ಬೆಳೆಯ ಕಟಾವಿನವರೆಗಿನ ಪ್ರತಿ ಯೊಂದು ಹಂತದಲ್ಲಿ ಮಹಿಳೆಯರ ಪಾತ್ರ ಬಹು ದೊಡ್ಡದಿರುವುದು ಸುಳ್ಳೇನಲ್ಲ. ಬಹುತೇಕ ಕೃಷಿ ಪುರುಷರು ಆದೇಶವಾದಿ ಹಾಗೂ ಅವಕಾಶವಾದಿಗಳಾಗಿದ್ದಾರೆ. ಆದರೆ ಮಹಿಳೆಯರು ಸಂಪೂರ್ಣ ನಿಷ್ಠೆ ಹಾಗೂ ಭಕ್ತಿಯಿಂದ ಕೃಷಿ ಕಾಯಕದಲ್ಲಿ ತೊಡಗುತ್ತಾರಲ್ಲದೆ, ಪುರುಷರಂತೆ ಮತ್ತೊಬ್ಬರ ಮೇಲೆ ಅವಲಂಬಿತರಾಗದೆ ಅವಶ್ಯವಿರುವ ಕಾರ್ಯವನ್ನು ಸಮಯಾನುಸಾರ ಪ್ರಾಮಾಣಿಕವಾಗಿ ಮಾಡಿ ಮುಗಿಸುತ್ತಾರೆ. ಇಂಥ ಅಪ್ರತಿಮ ಸಾಧನೆ ಮಾಡುತ್ತಿರುವ ಮಹಿಳೆಯು ಎಂದೂ ತಾನೊಬ್ಬ ರೈತ ಮಹಿಳೆ ಎಂದು ಬಹಿರಂಗವಾಗಿ ಹೇಳಿಕೊಳ್ಳಲು ಸಾಧ್ಯವಾಗದಿರುವುದು ಖೇದಕರವಾಗಿದೆ.
ಭಾರತ ದೇಶದ ವಿವಿಧ ಸ್ಥಳಗಳಲ್ಲಿ ಬೆರಳೆಣಿಕೆಯ ರೈತ ಮಹಿಳಾ ಗುಂಪುಗಳಿವೆಯಾದರೂ, ಸಮಾಜದ ಮುಖ್ಯ ವಾಹಿನಿಗೆ ಬಂದು ತನ್ನ ತೊಂದರೆಗಳನ್ನು ಹೇಳಿಕೊಳ್ಳುವಷ್ಟು ಮಹಿಳೆಯು ಗಟ್ಟಿಗಿತ್ತಿಯಾಗದಿರುವುದು ಕಳವಳಕಾರಿ ಅಂಶವಾಗಿದೆ. ಅದರಂತೆ ಸರಕಾರದ ಕಾಯಿದೆಗಳು ಸಹ ರೈತ ಮಹಿಳೆಯರ ಹಿತದೃಷ್ಟಿಯಿಂದ ರೂಪಿತವಾಗುವುದು ಬಹಳ ಅಪರೂಪವಾಗಿವೆ. ೨೦೧೪ರಲ್ಲಿ ಆರಂಭವಾದ ಮಹಿಳಾ ರೈತರ ಹಕ್ಕುಗಳ ವೇದಿಕೆಯು ಭಾರತದ ರೈತ ಮಹಿಳೆಯರ ಪರವಾದ ಅನೌಪಚಾರಿಕ ವೇದಿಕೆಯಾಗಿದೆ. ಈ ವೇದಿಕೆಯು ಸುಮಾರು ೨೪ ರಾಜ್ಯ ಗಳಲ್ಲಿ ವ್ಯಾಪಿಸಿಕೊಂಡಿದ್ದು ಅಲ್ಲಿರುವ ರೈತ ಮಹಿಳೆ ಯರು, ಅವರ ಸಾಮೂಹಿಕ ಸಂಘಟನೆಗಳು, ನಾಗರಿಕ ಸಮಾಜ ಸೇವಾ ಸಂಸ್ಥೆಗಳು, ಸಂಶೋಧಕರು ಹಾಗೂ ಕಾರ್ಯಕರ್ತರನ್ನು ಒಳಗೊಂಡಿದೆ ಮತ್ತು ಒಗ್ಗೂಡಿಸಲು ಪ್ರಯತ್ನಿಸುತ್ತಿದೆ. ಅದರಂತೆ ಭಾರತದಲ್ಲಿನ ಮಹಿಳಾ ರೈತರನ್ನು ಗುರುತಿಸುವುದಕ್ಕಾಗಿ ಹಾಗೂ ಅವರಿಗೆ ಸಿಗಬೇಕಾದ ಮಾನ್ಯತೆ ಮತ್ತು ಹಕ್ಕುಗಳ ಖಾತ್ರಿಗಾಗಿ ಶ್ರಮಿಸುತ್ತಿದೆ.
ಮುಖ್ಯವಾಗಿ ಸಣ್ಣ ಹಿಡುವಳಿದಾರ ರೈತ ಮಹಿಳೆಯರನ್ನು ಸಶಕ್ತಗೊಳಿಸುವುದಲ್ಲದೆ ಅವರನ್ನು ಪುರುಷ ಪ್ರಧಾನ ಸಮಾಜದಲ್ಲಿ ಸ್ವಾವಲಂಬಿಗಳನ್ನಾಗಿ ಮಾಡಿ ಸುಸ್ಥಿರ ಕೃಷಿಯ ಮೂಲಕ ಉತ್ತಮ ಜೀವನೋಪಾಯ ಕಲ್ಪಿಸುವುದು ಈ ವೇದಿಕೆಯ ಗುರಿಯಾಗಿದೆ. ಪೀರಿಯಾಡಿಕ್ ಲೇಬರ್ ಫೋರ್ಸ್ ಸರ್ವೆ- ೨೦೧೭ರ ಪ್ರಕಾರ ಜಾಗತಿಕವಾಗಿ ಶೇ.೭೩ರಷ್ಟು ಮಹಿಳೆಯರು ಗ್ರಾಮೀಣ ಕೃಷಿ ಕೆಲಸದಲ್ಲಿ ನಿರತರಾಗಿದ್ದಾರಲ್ಲದೆ ವಿಶ್ವದಲ್ಲಿ ಬಳಸುತ್ತಿರುವ ಶೇ.೫೦ರಷ್ಟು ಆಹಾರವನ್ನು ಅವರೇ ಪೂರೈಸುತ್ತಾರೆ. ಆದರೆ ಮಹಿಳೆಯರು ಕೃಷಿಯಿಂದ ಶೇ.೧೦ರಷ್ಟು ಆದಾಯವನ್ನು ಪಡೆಯುತ್ತಾರೆ ಮತ್ತು ಕೇವಲ ಶೇ.೧ರಷ್ಟು ಮಾತ್ರ ಕೃಷಿ ಸಂಬಂಽತ ಆಸ್ತಿಯನ್ನು ಹೊಂದಿದ್ದಾರೆ. ಅದರಂತೆ ಅಖಿಲ ಭಾರತ ಮಟ್ಟದಲ್ಲಿ ಶೇ.೨೪ರಷ್ಟು ಪುರುಷರು ಭೂಮಿಯನ್ನು ಹೊಂದಿದ್ದರೆ, ಗ್ರಾಮೀಣ ಮಹಿಳೆಯರು ಶೇ.೪ರಷ್ಟು ಮಾತ್ರ ಭೂಮಿಯನ್ನು ಹೊಂದಿದ್ದಾರೆ.
ಪುರುಷರೊಂದಿಗಿನ ಕೃಷಿ ವೇತನ ತಾರತಮ್ಯ ಸೇರಿದಂತೆ ಹತ್ತು ಹಲವು ಕ್ಷೇತ್ರದಲ್ಲಿನ ಸಮಾನತೆಯನ್ನು ಮಹಿಳೆಯರು ಹೊಂದಬೇಕೆನ್ನುವುದು ಮಹಿಳಾ ರೈತರ ಹಕ್ಕುಗಳ ವೇದಿಕೆಯ ಪ್ರಮುಖ ಒತ್ತಾಯವಾಗಿದೆ. ಭಾರತ ಸರಕಾರವು ೨೦೧೭ರಿಂದ ದೇಶದಲ್ಲಿ ಪ್ರತಿವರ್ಷ ಅಕ್ಟೋಬರ್ ೧೫ರಂದು ‘ರಾಷ್ಟ್ರೀಯ ರೈತ ಮಹಿಳಾ ದಿನ’ ಅಥವಾ ರಾಷ್ಟ್ರೀಯ ಮಹಿಳಾ ಕಿಸಾನ್ ದಿವಸ’ವನ್ನು ಆಚರಿಸಲು ಆದೇಶಿಸಿದೆ. ಮುಖ್ಯವಾಗಿ ಕೃಷಿ ಕ್ಷೇತ್ರದಲ್ಲಿ ಮಹಿಳೆಯರನ್ನು ಸಬಲೀಕರಣ ಗೊಳಿಸುವುದು ಈ ದಿನಾಚರಣೆಯ ಪ್ರಮುಖ ಉದ್ದೇಶವಾಗಿದೆ. ಕೃಷಿಯ ಪ್ರಮುಖ ಭಾಗವಾಗಿರುವ ಮಹಿಳೆಯರನ್ನು ಕೇವಲ ಕೃಷಿ ಕಾರ್ಮಿಕರೆಂದು ಪರಿಗಣಿಸದೆ ಗುಣಮಟ್ಟದ ಕೃಷಿ ಕಾಯಕದ ನಾಯಕಿ ಎಂದು ದೇಶಾದ್ಯಂತ ಪರಿಗಣಿಸುವುದು ಅತಿ ಅವಶ್ಯವಿದೆ.
ಮಹಿಳೆಯರು ಕೇವಲ ತಮ್ಮ ಜೀವನೋಪಾಯಕ್ಕಾಗಿ ಮಾತ್ರ ಕೃಷಿ ಕೈಗೊಳ್ಳದೆ ಸಮಾಜದಲ್ಲಿನ ಪ್ರತಿಯೊಂದು ಜೀವಿಗಳಿಗೆ ಅಗತ್ಯವಿರುವ ಆಹಾರದ ಉತ್ಪಾದನೆಗಾಗಿ ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ. ಕೃಷಿಯಲ್ಲಿ ಅತ್ಯವಶ್ಯವಾಗಿರುವ ಮಹಿಳೆಗೆ ಸದ್ಯದ ದಿನಮಾನಗಳಲ್ಲಿ ಪ್ರೋತ್ಸಾಹದ ಕೊರತೆಯು ಎದ್ದು ಕಾಣುತ್ತಿದೆ. ಇತ್ತಿತ್ತಲಾಗಿ ಕೃಷಿ ವಿಶ್ವವಿದ್ಯಾಲಯಗಳು ಪ್ರತಿವರ್ಷ ರೈತ ಮಹಿಳೆಯರನ್ನು ಗುರುತಿಸುತ್ತಿರುವುದು ಅಭಿನಂದನೀಯ ವಾಗಿದೆ. ೧೯೭೭-೭೮ರ ಅಂಕಿ ಅಂಶಗಳ ಪ್ರಕಾರ ಕೃಷಿಯಲ್ಲಿ ಭಾರತದಲ್ಲಿನ ಒಟ್ಟು ಪುರುಷರ ಪೈಕಿ ಶೇ.೮೦.೦೬ರಷ್ಟು ಪುರುಷರು ಪಾಲ್ಗೊಂಡಿದ್ದರು ಹಾಗೂ ಒಟ್ಟು ಮಹಿಳೆಯರ ಪೈಕಿ ಶೇ.೮೮.೦೧ರಷ್ಟು ಮಹಿಳೆಯರು ತೊಡಗಿದ್ದರು.
ಆದರೆ, ೨೦೧೭-೧೮ರ ಮಾಹಿತಿಯಂತೆ, ಈ ಪ್ರಮಾಣವು ಕ್ರಮವಾಗಿ ಶೇ.೫೫ ಮತ್ತು ಶೇ. ೭೩.೦೫ಕ್ಕೆ ಕುಸಿಯಿತು. ಒಟ್ಟಾರೆಯಾಗಿ ಕೃಷಿಯ ಪ್ರಾರಂಭದ ಕಾಲಘಟ್ಟದಿಂದ ಇಲ್ಲಿಯವರೆಗೆ ಕೃಷಿಗೆ ಸಂಬಂಽಸಿದ ಕಾರ್ಯಚಟುವಟಿಕೆ ಗಳಲ್ಲಿ ಮಹಿಳೆಯರೇ ಸದಾ ಮೇಲುಗೈ ಸಾಧಿಸುತ್ತ ಬಂದಿದ್ದಾರೆ. ಆದರೆ ಮಹಿಳೆಯರಿಗೆ ರೈತರು ಎಂದು ಹೇಳಲು ಇಂದಿನವರೆಗೆ ಅಽಕೃತವಾದ ಮಾನ್ಯತೆಯಿಲ್ಲ. ಸರಕಾರವೂ ಪ್ರತಿವರ್ಷ ಕೃಷಿ ಕುರಿತಾದ ಸಂಪೂರ್ಣ ಮಾಹಿತಿಯನ್ನು ತಯಾರಿಸುತ್ತಿದೆ; ಆದರೆ ರೈತ ಮಹಿಳೆ ಯರ ಕುರಿತಾದ ಸಮಗ್ರ ಮಾಹಿತಿಯನ್ನು ಅದು ಸಂಗ್ರಹಿಸುವುದಿಲ್ಲ ಎಂಬ ಅಪಾದನೆಯಿದೆ.
ಸಮಾಜ ಹಾಗೂ ಸರಕಾರವು ಮಹಿಳೆಯರಿಗೆ ಸಮಾನ ಹಕ್ಕು ಬೇಕು ಎಂದು ಪ್ರತಿಪಾದಿಸುತ್ತವೆ. ಆದರೆ ಮಹಿಳೆಯರು ತಮ್ಮ ಮೂಲ ಮನೆತನದ ಆಸ್ತಿಯನ್ನು ಅಧಿಕೃತವಾಗಿ ಪಡೆಯುವುದಿಲ್ಲ. ಇದನ್ನು ಪ್ರಶ್ನಿಸಲು ಮಹಿಳೆಯರು ಹಿಂದೇಟು ಹಾಕುತ್ತಾರೆ. ಕಾರಣ ಆ ಮಹಿಳೆಗಾಗಿ ಮೂಲ ಮನೆತನ ದವರು ನೆರವೇರಿಸಿದ ಮದುವೆ ಹಾಗೂ ಶಿಕ್ಷಣದ ಖರ್ಚುಗಳ ವಿವರವನ್ನು ಮುಂದಿಡುತ್ತಾರೆ. ಇದಲ್ಲದೆ ಮಹಿಳೆಯರು ತವರುಮನೆಯ ಮೇಲಿನ ಮಮತೆಯಿಂದ ಹಾಗೂ ಸಂಬಂಧವನ್ನು ಕಡಿದುಕೊಳ್ಳುವ ಭಯದಿಂದ ಈ ಕೃಷಿ ಆಸ್ತಿ ಮೇಲಿರುವ ಹಕ್ಕನ್ನು ಚಲಾಯಿಸುವುದಿಲ್ಲ.
ಇಂದು ಬಹುತೇಕ ಮಹಿಳೆಯರಿಗೆ ಭೂಮಿಯಲ್ಲಿ ಶ್ರಮ ಹಾಕುವುದು ಮಾತ್ರ ಉಳಿದಿದೆ. ಗ್ರಾಮೀಣ ಭಾಗ ದಲ್ಲಿರುವ ಬಹುತೇಕ ಕೃಷಿ ಕುಟುಂಬದಲ್ಲಿನ ಮಹಿಳೆಯರು ಇಂದಿಗೂ ನಸುಕಿನಲ್ಲಿಯೇ ಎದ್ದು ಸೂರ್ಯೋದ ಯದೊಂದಿಗೆ ಕೃಷಿ ಕಾಯಕದಲ್ಲಿ ತೊಡಗಿಕೊಳ್ಳುವುದು ಸಂಪ್ರದಾಯವಾಗಿದೆ. ಆದರೆ ಆ ಕೃಷಿ ಭೂಮಿಯಿಂದ ಕೃಷಿ ಉತ್ಪನ್ನಗಳು ಹೊರಬಂದ ನಂತರ ದರ ನಿಗದಿ ಸೇರಿದಂತೆ ಹಲವು ಪ್ರಮುಖ ಕಾರ್ಯಗಳು ಪುರುಷರ ನಿರ್ಣಯಗಳಂತೆ ನಡೆಯುತ್ತವೆ. ಆದ್ದರಿಂದ ಈ ಪುರುಷ ಪ್ರಧಾನ ವ್ಯವಸ್ಥೆಗೆ ಮೊದಲು ಕಡಿವಾಣ ಹಾಕಬೇಕು.
ಪ್ರಮುಖವಾಗಿ ದರ ನಿಗದಿ ವಿಷಯದಲ್ಲಿ ಮಹಿಳೆಯರ ಪಾತ್ರ ಬಹಳ ಹಿರಿದಾಗಿರುತ್ತದೆ, ಕಾರಣ ಮಹಿಳೆಯರಷ್ಟು ಚೌಕಾಶಿ ವ್ಯವಹಾರವು ಎಂದೆಂದಿಗೂ ಪುರುಷರಿಂದ ಸಾಧ್ಯವಿಲ್ಲ. ಬೀಜದ ನಾಟಿಯಿಂದ ಫಸಲಿನ ಕೊಯ್ಲಿನವರೆಗೆ ಆದ ಸಂಪೂರ್ಣ ಖರ್ಚು-ವೆಚ್ಚಗಳ ಅರಿವು ಮಹಿಳೆಯರಿಗೆ ಜಾಸ್ತಿ ಇರುತ್ತದೆ. ಆದ್ದರಿಂದ ಕೃಷಿ ಲಾಭದಾಯಕವಾಗಿ ಮುನ್ನಡೆಯಬೇಕಾದರೆ ಬೆಲೆ ನಿಗದಿ ವಿಷಯದಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯ ಕೊಡಬೇಕಾಗಿರುವುದು ಅತಿ ಅವಶ್ಯ ವಿದೆ. ಒಂದು ಅಂದಾಜಿನ ಪ್ರಕಾರ ಶೇ.೭೦ರಷ್ಟು ಮಹಿಳೆಯರು ಇಂದಿಗೂ ಕೃಷಿ ಕಾಯಕದಲ್ಲಿ ನಿರತರಾಗಿದ್ದಾರೆ. ಆದರೆ ಪ್ರಮುಖ ಭಾಗವಾಗಿರುವ ಮಾರುಕಟ್ಟೆಯಲ್ಲಿನ ವ್ಯವಹಾರದ ಬಳಿ ಮಹಿಳೆಯರ ಪ್ರವೇಶವನ್ನು ತಡೆಹಿಡಿದಿರುವುದು ದುರದೃಷ್ಟಕರವಾಗಿದೆ.
ಮಾರುಕಟ್ಟೆಯವರೆಗೆ ಮಹಿಳೆಗೆ ಅವಕಾಶ ಕಲ್ಪಿಸಿದಲ್ಲಿ ಹಲವು ಪುರುಷರ ಚಟಗಳ ನಿಯಂತ್ರಣವಾಗಬಹುದಲ್ಲದೆ ನೈಜ ಕೃಷಿ ಉತ್ಪನ್ನದ ಖರ್ಚು-ವೆಚ್ಚಗಳ ಅವಲೋಕನದಿಂದ ಕೃಷಿಯಿಂದ ನಿರ್ದಿಷ್ಟ ಬೆಲೆ ಪಡೆಯಬಹುದಾಗಿದೆ. ಕೃಷಿಯಲ್ಲಿಯೂ ಮಹಿಳೆಯು ಅಬಲೆಯಲ್ಲ, ಸಂಪೂರ್ಣವಾಗಿ ಸಬಲೆ ಎಂಬುದನ್ನು ಸರಕಾರ ಹಾಗೂ ಪುರುಷ ಪ್ರಧಾನ ಸಮಾಜವು ಅರಿತು, ಮಹಿಳೆಯರಿಗೆ ಸೂಕ್ತ ಸ್ವಾತಂತ್ರ್ಯ ಹಾಗೂ ಸವಲತ್ತುಗಳನ್ನು ಕಲ್ಪಿಸಬೇಕು.
(ಲೇಖಕರು ಕೃಷಿತಜ್ಞರು)