Saturday, 14th December 2024

ಸ್ತ್ರೀ ಎಂದರೆ ’ಶೇಕಡಾ 33’ ಅಷ್ಟೇ ಸಾಕೇ..?

ಅಭಿಮತ

ಡಾ.ದಯಾನಂದ ಲಿಂಗೇಗೌಡ

ಇಡೀ ಭೂಮಂಡಲದ ಸೃಷ್ಟಿಗಳಲ್ಲಿ ಎಲ್ಲಾ ಜೀವಿಗಳಲ್ಲಿ ಗಂಡು-ಹೆಣ್ಣಿನ ಲಿಂಗಾನುಪಾತವು ಸಮನಾಗಿಲ್ಲ. ಕೆಲವೊಂದು ಜೀವಿ ಗಳಲ್ಲಿ ಹೆಣ್ಣಿನ ಸಂಖ್ಯೆ ಹೆಚ್ಚಿದ್ದರೆ, ಮತ್ತೆ ಕೆಲವೊಂದು ಜೀವಿಗಳಲ್ಲಿ ಗಂಡುಗಳ ಸಂಖ್ಯೆ ಹೆಚ್ಚಿದೆ. ಉದಾಹರಣೆಗೆ, ಜೇನುಹುಳು ವಿನ ಗೂಡಿನಲ್ಲಿ ಒಂದು ಗಂಡುಜೇನು ಹುಳುವಿಗೆ ಸರಾಸರಿ ೧೦೦೦ ಹೆಣ್ಣು ಜೇನು ಇರುತ್ತವೆ.

ಮಾನವ ಜೀವಿಗಳಲ್ಲಿ ಜೇನುಹುಳುಗಳಲ್ಲಿ ಕಾಣಬರುವಷ್ಟು ಪ್ರಮಾಣದಲ್ಲಿ ಲಿಂಗಾನುಪಾತದಲ್ಲಿ ಅಸಮತೋಲನ ಕಾಣದಿ ದ್ದರೂ, ಮಾನವರಲ್ಲಿ ಲಿಂಗಾನುಪಾತ ಸರಿಸಮನಾಗಿಲ್ಲ ಎಂಬುದು ಗಮನಾರ್ಹ. ಹುಟ್ಟಿನಲ್ಲಿ ಮಾನವ ಹಸ್ತಕ್ಷೇಪ ಆಗುವುದಕ್ಕೆ ಮೊದಲಿನ ಕಾಲದಲ್ಲಿ, ಗಂಡು ಮಕ್ಕಳ ಸಂಖ್ಯೆ ಹೆಣ್ಣು ಮಕ್ಕಳ ಸಂಖ್ಯೆಗಿಂತ ಹೆಚ್ಚಾಗಿರುವುದು ಕಂಡುಬರುತ್ತದೆ. ಭೌಗೋಳಿಕ ವಾಗಿ ಸಣ್ಣಪುಟ್ಟ ವ್ಯತ್ಯಾಸವಿದ್ದರೂ, ದೊಡ್ಡ ಮಟ್ಟದಲ್ಲಿ ಹೇಳುವುದಾದರೆ ಇದೇ ರೀತಿಯ ಲಿಂಗಾನುಪಾತ ಇಡೀ ಪ್ರಪಂಚ ದಾದ್ಯಂತ ಕಾಣಸಿಗುತ್ತದೆ.

ಇಂದಿಗೂ, ಹೆಣ್ಣು ಮಕ್ಕಳು ಹೆಚ್ಚಾಗಿರುವ ರಾಷ್ಟ್ರಗಳ ಸಂಖ್ಯೆ ಅತ್ಯಂತ ಕಡಿಮೆ ಮತ್ತು ಅಂಥ ರಾಷ್ಟ್ರಗಳು ಬಹಳ ಕಡಿಮೆ ಜನಸಂಖ್ಯೆಯುಳ್ಳ ರಾಷ್ಟ್ರಗಳು. ಉದಾಹರಣೆಗೆ, ನೇಪಾಳದಂಥ ಸಣ್ಣ ರಾಷ್ಟ್ರದಲ್ಲಿ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಿದೆ. ಆದರೆ ಬಹುತೇಕ ರಾಷ್ಟ್ರಗಳಲ್ಲಿ ಇಂದಿಗೂ ಗಂಡು ಮಕ್ಕಳ ಸಂಖ್ಯೆ ಹೆಣ್ಣು ಮಕ್ಕಳ ಸಂಖ್ಯೆಗಿಂತ ಹೆಚ್ಚೇ. ಅಂದರೆ, ಹೆಣ್ಣು ಮತ್ತು ಗಂಡಿನ ಹುಟ್ಟಿನ ಲಿಂಗಾನುಪಾತವನ್ನು ಸಮಸಮಕ್ಕೆ ತರುವ ಉದ್ದೇಶ ಯಾರಿಗಾದರೂ ಇದ್ದರೆ ಅದು ಪ್ರಕೃತಿಗೆ ವಿರುದ್ಧ.

ಭಾರತದ ಇತಿಹಾಸದಲ್ಲಿ ಲಿಂಗಾನುಪಾತವನ್ನು ಗಮನಿಸುವುದಾದರೆ, ಇಲ್ಲಿ ಗಂಡು ಮಕ್ಕಳ ಸಂಖ್ಯೆ ಹೆಣ್ಣು ಮಕ್ಕಳ ಸಂಖ್ಯೆಗಿಂತ ಹೆಚ್ಚಿದೆ. ೧೯೭೦ರಲ್ಲಿ, ಇನ್ನೂ ನಿರ್ದಿಷ್ಟವಾಗಿ ನೋಡುವುದಾದರೆ, ಗರ್ಭಪಾತವು ಕಾನೂನಿನಲ್ಲಿ ಅಂಗೀಕಾರವಾಗುವ ಮೊದಲು ಕೂಡ, ೧೦೦ ಹೆಣ್ಣು ಮಕ್ಕಳಿಗೆ ೧೦೫ ಗಂಡು ಮಕ್ಕಳ ಸಂಖ್ಯೆ ಇತ್ತು. ೧೯೮೦ರ ನಂತರ, ಅಂದರೆ ಭಾರತಕ್ಕೆ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಬಂದ ನಂತರ ಈ ಲಿಂಗಾನುಪಾತದಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬಂತು.

ಅತಿ ಹೆಚ್ಚು ಲಿಂಗಾನುಪಾತ ೨೦೧೦ರಲ್ಲಿ ದಾಖಲಾಗಿದೆ (೧೦೦ ಹೆಣ್ಣು ಮಕ್ಕಳಿಗೆ ೧೧೧ ಗಂಡು ಮಕ್ಕಳು). ಈ ವ್ಯತ್ಯಾಸಕ್ಕೆ ಪ್ರಸವ ಪೂರ್ವ ಪತ್ತೆ ಮಾತ್ರ ಕಾರಣ ಎಂದು ದೂರುವುದು ಸರಿಯಲ್ಲ. ಏಕೆಂದರೆ ಈ ಕಾಲಘಟ್ಟದಲ್ಲಿ ಜನಸಂಖ್ಯಾ ನಿಯಂತ್ರಣ ಕಾರ್ಯ ಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆ. ಒಬ್ಬ ತಾಯಿ ೧೦ ಮಕ್ಕಳನ್ನು ಹೆರುವ ಕಾಲದಲ್ಲಿದ್ದ ಲಿಂಗಾನುಪಾತ ವನ್ನು, ಒಬ್ಬ ತಾಯಿಯು ಒಂದು ಅಥವಾ ಎರಡು ಮಕ್ಕಳನ್ನು ಹೆರುವ ಕಾಲದಲ್ಲಿನ ಲಿಂಗಾನುಪಾತಕ್ಕೆ ಹೋಲಿಸುವುದು ಸಮಂಜಸವಲ್ಲ.

ಆದರೆ, ಜನಸಂಖ್ಯಾ ನಿಯಂತ್ರಣ ಕಾರ್ಯಕ್ರಮಗಳಿಂದಲೂ ಈ ಲಿಂಗಾನುಪಾತ ವ್ಯತ್ಯಾಸವಾಗಿರುವ ಸಾಧ್ಯತೆಯಿದೆ. ಇದಕ್ಕೆ ಇನ್ನೂ ಹಲವಾರು ಸಾಮಾಜಿಕ ಕಾರಣಗಳಿರಬಹುದು. ಉದಾಹರಣೆಗೆ, ಹೆಣ್ಣು ಮಕ್ಕಳಿಗಿಂತ ಹೆಚ್ಚು ಆಗುತ್ತಿದ್ದ ಗಂಡು ಮಕ್ಕಳ ಅಕಾಲಿಕ ಮೃತ್ಯುಗಳನ್ನು, ಆರೋಗ್ಯ ಕ್ಷೇತ್ರದಲ್ಲಿನ ಕ್ರಾಂತಿಗಳು ತಡೆಯುತ್ತಿರಬಹುದು.

ಪ್ರಸವಪೂರ್ವ ಲಿಂಗಪತ್ತೆಯನ್ನು ನಿರ್ಬಂಧಿಸುವ ಕಾನೂನು (ಪಿಎನ್‌ಡಿಟಿ) ೧೯೯೪ರಲ್ಲಿ ಜಾರಿಗೆ ಬಂತು. ಈ ಕಾನೂನಿನ ಉದ್ದೇಶ ಸರಿಯಾಗಿದ್ದರೂ, ಇದರ ಜಾರಿಯಲ್ಲಿ ಹಲವು ದೋಷಗಳು ಸೇರಿಕೊಂಡಿವೆ. ಇಂದಿರಾ ಗಾಂಧಿ ಕಾಲದ ಜನಸಂಖ್ಯಾ ನಿಯಂತ್ರಣ ಕಾರ್ಯಕ್ರಮವು ಸದುದ್ದೇಶವನ್ನು ಹೊಂದಿದ್ದರೂ ಜಾರಿಗೊಳಿಸುವಲ್ಲಿ ಹಲವಾರು ಎಡವಟ್ಟುಗಳನ್ನು ಮಾಡಿ
ಕೊಂಡಂತೆ, ಪಿಎನ್‌ಡಿಟಿ ಕಾನೂನು ಕೂಡ ‘ಆಧುನಿಕ ನಸ್‌ಬಂದಿ’ ಕಾರ್ಯಕ್ರಮದಂತೆ ಜಾರಿಯಾಗಿದೆ. ಈ ಕಾನೂನಿನ ಹುಚ್ಚಾಟಗಳಿಗೆ ಕೆಲವೊಂದು ಉದಾಹರಣೆ ಗಳನ್ನು ನೋಡೋಣ. ಪಿಎನ್‌ಡಿಟಿ ಕಾನೂನಿನ ಪ್ರಕಾರ, ಪ್ರತಿಯೊಬ್ಬ ಗರ್ಭಿಣಿಯ ಸ್ಕ್ಯಾನಿಂಗ್ ಮಾಡಲು, ಸ್ಕ್ಯಾನಿಂಗ್‌ಗೆಂದು ಕಳಿಸಿದ ವೈದ್ಯರ ಶಿಫಾರಸು ಪತ್ರ ಬೇಕೇ ಬೇಕು.

ಅಂದರೆ ಸ್ಕ್ಯಾನಿಂಗ್ ಮಾಡುವ ರೇಡಿಯಾಲಜಿಸ್ಟ್‌ಗಳು ಕೂಡ ಎಂಬಿಬಿಎಸ್ ಮಾಡಿದ ವೈದ್ಯರು ಎಂಬುದನ್ನು ಈ ಕಾನೂನು ಮರೆತಿದೆ. ಇದರೊಂದಿಗೆ ಗರ್ಭಿಣಿಯರ ಆಧಾರ್ ಕಾರ್ಡು, ಗುರುತಿನ ಪತ್ರ, ಜತೆಗೆ ‘ನಾವು ಲಿಂಗಪತ್ತೆ ಮಾಡಲು ಕೇಳಿಲ್ಲ,  ಮಾಡಿಸಿಲ್ಲ’ ಎಂದು ಸಹಿಹಾಕಿದ ಫಾರಂಗಳು, ರಿಜಿಸ್ಟರ್‌ಗಳು ಹೀಗೆ ಪ್ರತಿ ಗರ್ಭಿಣಿಯೂ ಹಲವಾರು ಪತ್ರಗಳನ್ನು ತಯಾರು
ಮಾಡಿಕೊಂಡಿರಬೇಕು. ಈ ಎಲ್ಲಾ ದಾಖಲೆಗಳ ಪ್ರತಿಗಳನ್ನು ಪ್ರತಿ ತಿಂಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಕಳಿಸಿಕೊಡಬೇಕು. ಇದರಲ್ಲಿ ಯಾವುದೇ ನ್ಯೂನತೆ ಕಂಡು ಬಂದರೆ, ಅಂಥ ಸ್ಕ್ಯಾನಿಂಗ್ ಸೆಂಟರ್‌ಗಳನ್ನು ತಕ್ಷಣವೇ ಮುಚ್ಚಿಸುವ ಅಧಿಕಾರವನ್ನು ನಿಯೋಜಿತ ಅಧಿಕಾರಿಗಳಿಗೆ ಕೊಡಲಾಗಿದೆ.

ಸ್ಕ್ಯಾನಿಂಗ್ ಮಾಡುವ ಯಾವುದೇ ವೈದ್ಯರಿಗೆ ನಿಜವಾಗಲೂ ಲಿಂಗಪತ್ತೆಯ ದುರುದ್ದೇಶವಿದ್ದರೆ, ಈ ಎಲ್ಲಾ ದಾಖಲೆ ಪತ್ರಗಳನ್ನು ಸರಿಯಾಗಿ ಇಟ್ಟು ಕೊಂಡು ಲಿಂಗಪತ್ತೆ ಮಾಡಬಹುದು. ಈ ದಾಖಲೆ ಪತ್ರಗಳನ್ನು ಸೃಷ್ಟಿಮಾಡುವುದರಿಂದ, ಪ್ರಸವಪೂರ್ವ
ಲಿಂಗಪತ್ತೆಯನ್ನು ಹೇಗೆ ತಡೆಯಲಾಗುತ್ತದೆ ಎಂಬುದು ನನಗೆ ಇದುವರೆಗೂ ಅರ್ಥವಾಗಿಲ್ಲ!

ದಾಖಲೆಗಳು ಸರಿಯಿಲ್ಲ ಎಂಬ ತಾಂತ್ರಿಕ ಕಾರಣಗಳಿಗೋಸ್ಕರ ಅಧಿಕಾರಿಗಳ ಕಿರುಕುಳ ಅತಿಯಾಗಿದೆ. ದಾಖಲೆ ಪತ್ರಗಳನ್ನು ಸರಿಯಾಗಿಟ್ಟಿಲ್ಲ ಎಂಬ ಕಾರಣವನ್ನು ಮುಂದುಮಾಡಿ ಸ್ಕ್ಯಾನಿಂಗ್ ಸೆಂಟರ್‌ಗಳನ್ನು ಮುಚ್ಚಿಸುವ ಬೆದರಿಕೆ ಹಾಕಿ ಕೋಟ್ಯಂತರ ರುಪಾಯಿ ಹಣವನ್ನು ಸುಲಿಗೆ ಮಾಡುವ ವ್ಯವಸ್ಥೆ ರೂಪುಗೊಂಡಿದೆ. ಅಂದರೆ, ಅಧಿಕಾರಿಗಳು ಹಣ ಮಾಡುವುದಕ್ಕೆ ಈ ಕಾನೂನು ಒಂದು ಸುಲಭದ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ. ದಾಖಲೆಗಲ್ಲವೂ ಸರಿಯಿದ್ದರೂ ‘ಮೇಜಿನ ಕೆಳಗಿನ’  ಆದಾಯ ವನ್ನು ಅಧಿಕಾರಿಗಳಿಗೆ ನಿಯತವಾಗಿ ಕೊಡದಿದ್ದರೆ ಅಪಾಯ ಕಟ್ಟಿಟ್ಟಬುತ್ತಿ.

ಎಲ್ಲ ದಾಖಲೆಗಳನ್ನೂ ಒಂದೇ ಪತ್ರದಲ್ಲಿ ಅಳವಡಿಸಿ ಸರಳೀಕರಿಸುವುದಕ್ಕೆ ಅವಕಾಶಗಳಿದ್ದರೂ, ಅದನ್ನು ಮಾಡದೆ ದಿನದಿಂದ ದಿನಕ್ಕೆ ಕಾಗದಪತ್ರಗಳ ಪ್ರಮಾಣವನ್ನು ಹೆಚ್ಚಿಸುತ್ತಿರುವುದರ ಉದ್ದೇಶವು ಎಲ್ಲರಿಗೂ ಅರ್ಥವಾಗುವಂಥದ್ದು. ಸ್ಕ್ಯಾನಿಂಗ್ ಮಾಡುವ ವೈದ್ಯರು ಈ ಕಾನೂನಿನ ಪ್ರಕಾರ ಎರಡಕ್ಕಿಂತ ಹೆಚ್ಚು ಕೇಂದ್ರಗಳಲ್ಲಿ ಕೆಲಸ ಮಾಡುವಂತಿಲ್ಲ ಎಂಬ ನಿಯಮವಿದೆ. ಎರಡಕ್ಕಿಂತ ಹೆಚ್ಚು ಕೇಂದ್ರ ಗಳಲ್ಲಿ ಕೆಲಸ ಮಾಡದಂತೆ ಒಬ್ಬ ವೈದ್ಯರನ್ನು ತಡೆಯುವುದರಿಂದ ಲಿಂಗಾನುಪಾತದಲ್ಲಿ ಹೇಗೆ ಬದಲಾವಣೆಗಳನ್ನು ತರಬಹುದು ಎಂಬುದನ್ನು ಯಾರಾದರೂ ಅಧಿಕಾರಿಗಳು ದಯವಿಟ್ಟು ವಿವರಿಸಿದರೆ ಒಳ್ಳೆಯದು! ಪರಿಣತ ವೈದ್ಯರು ಸಿಗುವುದಿಲ್ಲ ಎಂಬ ದೂರು ಒಂದು ಕಡೆಯಾದರೆ, ಲಭ್ಯವಿರುವ ವೈದ್ಯರು ಹೆಚ್ಚು ಕಡೆ ಕೆಲಸ ಮಾಡುವುದನ್ನು
ತಡೆಯುವ ಕಾನೂನು ಇನ್ನೊಂದು ಕಡೆ. ಗ್ರಾಮೀಣ ಭಾಗದಲ್ಲಿ ಇದು ಕೃತಕ ಅಭಾವವನ್ನು ಸೃಷ್ಟಿಸುತ್ತಿದೆ.

ಅದೂ ಅಲ್ಲದೆ ಇದು ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧ. ಈ ಕಾನೂನಿನ ಪ್ರಕಾರ, ವೈದ್ಯಕೀಯ ಸ್ಕ್ಯಾನಿಂಗ್ ಯಂತ್ರ ಗಳನ್ನು ನಿಗದಿತ ಜಾಗದಲ್ಲಿ ಮಾತ್ರ ಇಟ್ಟು ಸ್ಕ್ಯಾನಿಂಗ್ ಮಾಡಬೇಕು, ಅವನ್ನು ಬೇರೆ ಸ್ಥಳ/ ಕೋಣೆಗಳಿಗೆ ವರ್ಗಾಯಿಸು ವಂತಿಲ್ಲ. ಈ ಮೊದಲು ವೈದ್ಯರು, ಸಾಗಿಸಬಹುದಾದ ಸಣ್ಣ ಯಂತ್ರಗಳನ್ನು ಕಾರಿನ ಹಿಂಬದಿಯಲ್ಲಿಟ್ಟುಕೊಂಡು ಹಲವಾರು ಆಸ್ಪತ್ರೆಗಳಿಗೆ ಭೇಟಿಯಿತ್ತು, ತಮ್ಮ ಸೇವೆಯು ನಿರ್ದಿಷ್ಟ ಪ್ರದೇಶದ ಮೂಲೆ ಮೂಲೆಗೂ ತಲುಪುವಂತೆ ಮಾಡಬಹುದಿತ್ತು. ಈ ಕಾನೂನಿನಿಂದ ಅದಕ್ಕೂ ಕಲ್ಲುಬಿದ್ದಿದೆ.

ಅದೂ ಅಲ್ಲದೆ, ಇಂದು ಒಂದೇ ಆಸ್ಪತ್ರೆಯೊಳಗೆ ವಿವಿಧ ಕೋಣೆಗಳಿಗೆ ಹೋಗಿ ತಪಾಸಣೆ ಮಾಡುವುದೂ ಕಾನೂನು ಪ್ರಕಾರ ಸರಿಯಲ್ಲ! ಕಾನೂನು/ನಿಯಮಗಳು ಅಪರಾಧವನ್ನು ತಡೆಯುವಂತಿರಬೇಕೇ ವಿನಾ ದೈನಂದಿನ ಚಟುವಟಿಕೆಗಳಿಗೆ ತೊಂದರೆ ಕೊಡುವಂತೆ ಇರಬಾರದು. ‘ಲಂಚ ತೆಗೆದುಕೊಳ್ಳುವುದಿಲ್ಲ’ ಎಂಬುದಾಗಿ ಪ್ರತಿ ಸರಕಾರಿ ಅಧಿಕಾರಿಯಿಂದ ದಿನಕ್ಕೆ ೧೦ ಸಲ ಬರೆಸಿಕೊಂಡರೆ ಭ್ರಷ್ಟಾಚಾರ ಹೇಗೆ ಕಡಿಮೆಯಾಗುವುದಿಲ್ಲವೋ, ಹಾಗೆಯೇ ಪ್ರತಿ ಸ್ಕ್ಯಾನಿಂಗ್ ನಂತರ ‘ಲಿಂಗ ಪತ್ತೆ ಮಾಡಿಲ್ಲ’ ಎಂದು ದಾಖಲೆ ಸೃಷ್ಟಿಸಿದರೆ ಈ ಕೃತ್ಯಗಳು ಕಡಿಮೆಯಾಗುವುದಿಲ್ಲ.

ಇದು ಕಾನೂನು ಪಾಲಿಸುವವರಿಗಷ್ಟೇ ತೊಂದರೆ ಕೊಡುತ್ತದೆಯೇ ಹೊರತು, ಕಾನೂನುಬಾಹಿರವಾಗಿ ಪ್ರಸವ ಪೂರ್ವ ಲಿಂಗಪತ್ತೆ ಮಾಡುವ ಮನಸ್ಥಿತಿಯುಳ್ಳವರನ್ನು ತಡೆಯುವುದಿಲ್ಲ. ಮಂಡ್ಯದಲ್ಲಿ ಇತ್ತೀಚೆಗೆ ವರದಿಯಾದ, ಆಲೆಮನೆಯಲ್ಲಿ ಲಿಂಗಪತ್ತೆ ಮಾಡುತ್ತಿದ್ದ ಪ್ರಕರಣ ಇದಕ್ಕೆ ಜ್ವಲಂತ ಉದಾಹರಣೆ. ಸ್ಕ್ಯಾನಿಂಗ್ ಎಂಬುದು ಕೇವಲ ಗರ್ಭಿಣಿಯರಿಗೆ ಸೀಮಿತವಾಗಿರುವಂಥ ದ್ದಲ್ಲ; ಈ ಉಪಕರಣದಿಂದ ದೇಹದ ವಿವಿಧ ಭಾಗಗಳ ಸ್ಕ್ಯಾನಿಂಗ್ ಮಾಡಬಹುದು. ಆದ್ದರಿಂದ, ರಕ್ತನಾಳದ ನಳಿಕೆ ಹಾಕುವ ದಾದಿಯರಿಂದ ಹಿಡಿದು, ಆಪರೇಷನ್ ಮಾಡುವ ವೈದ್ಯರವರೆಗೆ ಹಲವು ಸ್ತರದ ವೈದ್ಯ ಸಿಬ್ಬಂದಿ ಈ ಯಂತ್ರಗಳನ್ನು ನೆಚ್ಚುತ್ತಾರೆ.

ಇಂದು ಮೊಬೈಲ್‌ಗಳಲ್ಲೂ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಮಾಡುವ ತಂತ್ರಜ್ಞಾನ ಬಂದಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಇಷ್ಟೊಂದು ಬದಲಾವಣೆಯಾಗುತ್ತಿದ್ದರೂ, ನಿಗದಿತ ಸ್ಥಳದಲ್ಲಿ ಮಾತ್ರವೇ ಸ್ಕ್ಯಾನಿಂಗ್ ಮಾಡಬೇಕೆನ್ನುವುದು ಹಾಸ್ಯಾಸ್ಪದವಷ್ಟೇ ಅಲ್ಲ, ಇದು ರೋಗಿಗಳಿಗೆ ನೀಡುವ ಹಲವಾರು ಸೇವೆಗಳಲ್ಲಿ ತೊಂದರೆಯನ್ನುಂಟುಮಾಡುತ್ತದೆ. ಈ ಕಾನೂನು ಇಂದಿನ ಆರೋಗ್ಯ ಕ್ಷೇತ್ರಕ್ಕೆ ಪೂರಕವಲ್ಲವಾದ್ದರಿಂದ, ಇದರ ಪಾಲನೆ ಸಾಧ್ಯವಿಲ್ಲದ ಪರಿಸ್ಥಿತಿ ಒದಗಿದೆ. ಅಷ್ಟೇ ಅಲ್ಲದೆ, ಹಣವಿದ್ದವರು ವಿದೇಶಕ್ಕೆ ಹೋಗಿ ಕಾನೂನುಬದ್ಧವಾಗಿಯೇ ಲಿಂಗಪತ್ತೆ ಮಾಡಿ ಕೊಂಡು ಬರಬಹುದು.

ಪಿಎನ್‌ಡಿಟಿ ಕಾನೂನು ಬರುವುದಕ್ಕೆ ಮುಂಚಿನ ಸಮಯದಲ್ಲಿದ್ದ ಲಿಂಗಾನುಪಾತ ಮತ್ತು ಈಗಿನ ಲಿಂಗಾನುಪಾತವನ್ನು ಗಮನಿಸಿದರೆ ಹೆಚ್ಚು ವ್ಯತ್ಯಾಸವೇನೂ ಕಾಣುತ್ತಿಲ್ಲ. ಅಂದರೆ ಈ ಕಾನೂನು ಸಾಧಿಸಿದ್ದು ಅಷ್ಟರಲ್ಲೇ ಇದೆ. ಇಷ್ಟಾಗಿಯೂ ಈ ಕಾನೂನನ್ನು ಕಾಲದಿಂದ ಕಾಲಕ್ಕೆ ಉಗ್ರವಾಗಿ ಜಾರಿಗೆ ತರುವ ಕ್ರಮ ನಿಯತವಾಗಿ ನಡೆಯುತ್ತಿದೆ. ಇದಕ್ಕೆ ಅವೈಜ್ಞಾನಿಕವಾಗಿ, ಯಾವುದೋ ಒಂದು ಜಿಲ್ಲೆಯಲ್ಲಿ ಲಿಂಗಾನುಪಾತ ಕಡಿಮೆಯಾಗುತ್ತಿರುವುದನ್ನು ಬೆರಳುಮಾಡಿ ತೋರಿಸಲಾಗುತ್ತದೆ. ಹೇಗೆ
ರಾಷ್ಟ್ರೀಯ ಲಿಂಗಾನುಪಾತವನ್ನು ಒಂದು ಕುಟುಂಬಕ್ಕೆ ಅನ್ವಯಿಸಲಾಗುವುದಿಲ್ಲವೋ, ಹಾಗೆ ಆ ರಾಷ್ಟ್ರೀಯ ಲಿಂಗಾನುಪಾತ ವನ್ನು ಒಂದು ಸೀಮಿತ ಭೌಗೋಳಿಕ ಪ್ರದೇಶದಲ್ಲಿ ಸಾಧಿಸಿ ತೋರಿಸುತ್ತೇವೆ ಅಂದುಕೊಳ್ಳುವುದು ಅತ್ಯಂತ ಅವೈಜ್ಞಾನಿಕ ಅಷ್ಟೇ ಅಲ್ಲ, ಇದರ ಹಿಂದೆ ಭ್ರಷ್ಟಾಚಾರದ ಲೆಕ್ಕಾಚಾರವೂ ಇದೆ.

ಅಲ್ಟ್ರಾ ಸೌಂಡ್ ತಪಾಸಣೆ ಮಾಹಿತಿಗೂ, ಹೆರಿಗೆ ನಂತರದ ಮಾಹಿತಿಗೂ ಏನಾದರೂ ವ್ಯತ್ಯಾಸವಿದೆಯೇ? ಯಾವ ಲಿಂಗದ ಭ್ರೂಣಗಳು ಯಾವ ಕಾರಣಕ್ಕೆ ಕಮ್ಮಿಯಾಗುತ್ತಿವೆ/ಕಾಣೆಯಾಗುತ್ತಿವೆ? ಎಂಬುದನ್ನು ಸಂಬಂಧಪಟ್ಟ ವಿಭಾಗದವರು ಇದು ವರೆಗೂ ಅಧ್ಯಯನ ಮಾಡಿದ್ದು ಕಂಡಿಲ್ಲ. ವೈದ್ಯರುಗಳಿಂದ ದಾಖಲೆ ಪಡೆಯುವುದಕ್ಕಷ್ಟೇ ಅಧಿಕಾರಿಗಳ ಉತ್ಸಾಹ ಸೀಮಿತ. ಈ ರೀತಿ ಅವೈಜ್ಞಾನಿಕವಾದ, ಈ ಕಾಲಕ್ಕೆ ಸಲ್ಲದ ಕಾನೂನನ್ನು ತರುವ ಬದಲು, ಪ್ರಸವಪೂರ್ವ ಲಿಂಗಪತ್ತೆಯನ್ನು ಕಡ್ಡಾಯ ಗೊಳಿಸಲಿ. ಹಾಗೆ ಲಿಂಗಪತ್ತೆಯಾದ ಹೆಣ್ಣುಮಕ್ಕಳ ಭ್ರೂಣವನ್ನು ಹೆರಿಗೆಯಾಗುವವರೆಗೂ ಹಿಂಬಾಲಿಸಿ ನೋಡಿಕೊಂಡರೆ, ಎಲ್ಲಿ ಯಾವಾಗ ಹೆಣ್ಣು ಭ್ರೂಣದ ಹತ್ಯೆ ಯಾಗುತ್ತಿದೆ ಎಂಬುದು ಗಮನಕ್ಕೆ ಬರುತ್ತದೆ.

ಕೊನೇಮಾತು: ಮಹಿಳೆಯರಿಗೆ ಜನಪ್ರತಿನಿಧಿ ಸಭೆಗಳಲ್ಲಿ ಶೇ.೩೩ರಷ್ಟು ಮೀಸಲಾತಿ ನೀಡುವ ಕಾನೂನನ್ನು ಸಂಸತ್ತು ಇತ್ತೀಚೆಗೆ ಅಂಗೀಕರಿಸಿದೆ. ಮಹಿಳೆಯರ ಅನುಪಾತ ಶೇ.೫೦ರಷ್ಟು ಇರಬೇಕು ಎನ್ನುವ ಸರಕಾರ, ಶೇ.೩೩ರಷ್ಟು ಮಾತ್ರ ಮೀಸಲಾತಿ ಕೊಟ್ಟಿದ್ದೇಕೆ ಎಂಬುದು ಅರ್ಥವಾಗದ ವಿಷಯ. ಶೇ.೩೩ರ ಮೂಲ ನಿಜಕ್ಕೂ ನಿಗೂಢ!

(ಲೇಖಕರು ರೇಡಿಯಾಲಜಿಸ್ಟ್)