Saturday, 14th December 2024

ಮಹಿಳಾಪರ ಯೋಜನೆಗಳ ಸದ್ಬಳಕೆ ಮುಖ್ಯ

ಅಭಿಮತ

ಲಕ್ಷ್ಮೀದೇವಿ

ಮಹಿಳೆಯರ ಸ್ಥಾನಮಾನ ಉತ್ತಮ ಸ್ಥಿತಿಗೆ ಹಂತಹಂತವಾಗಿ ಸುಧಾರಿಸುತ್ತಿದೆ. ಆದರೆ ಇನ್ನೂ ಕೂಡ ಮಹಿಳಾ ಶೋಷಿತ ವರ್ಗ ಇರುವುದು ಸತ್ಯಕ್ಕೆ ದೂರವಾಗಿಲ್ಲ. ಈ ಕಾರಣದಿಂದ ರಾಜ್ಯ ಸರಕಾರ ಮಹಿಳೆಯರ ಅಭ್ಯುದಯಕ್ಕಾಗಿ 2021ರ ಮಾರ್ಚ್ 8 ರಂದು ಮಹಿಳಾ ದಿನಾಚರಣೆಯಂದೇ ರಾಜ್ಯದ ಬಜೆಟ್ ಮಂಡಿಸಿ ಮಹಿಳೆಯರಿಗೆ ಗೌರವ ಸೂಚಿಸಿದೆ.

ರಾಜ್ಯ ಬಜೆಟ್‌ನಲ್ಲಿ ಮಹಿಳೆಯರಿಗಾಗಿ 37,188 ಕೋಟಿಯ ಬಾರಿ ಮೊತ್ತವನ್ನ ಮೀಸಲಿಟ್ಟಿದೆ. ಕರೋನಾದ ಸಂಕಷ್ಟ ಪರಿಸ್ಥಿತಿ ಯಲ್ಲಿಯೂ ಕೂಡ ಯಾವೊಬ್ಬ ಮಹಿಳೆ ಶೋಷಿತರಾಗಬಾರದು. ಆಶ್ರಯವಿಲ್ಲದೆ ಪರದಾಡಬಾರದು ಎಂಬುದರೊಂದಿಗೆ ಮಹಿಳಾ ಅಭಿವೃದ್ಧಿ ಮಾಡಬೇಕೆಂಬ ಉದ್ದೇಶವಾಗಿದೆ. ಉಪಯುಕ್ತವಾದ ಕೆಲ ಯೋಜನೆಗಳ ಪರಿಚಯ ಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿರುತ್ತದೆ. ಈ ಸುಮಾರು 20 ವರ್ಷದಿಂದ ಕರ್ನಾಟಕದ ಎಲ್ಲ ತಾಲೂಕು ಮತ್ತೆ ಜಿಲ್ಲೆಗಳಲ್ಲಿ 194 ಸಾಂತ್ವನ ಕೇಂದ್ರಗಳನ್ನು ರಾಜ್ಯ ಸರಕಾರ ಸ್ವಯಂ ಸೇವಾ ಸಂಸ್ಥೆಯ ಮೂಲಕ ದಿನದ 24 ಗಂಟೆಗಳಲ್ಲಿ ಮಹಿಳಾ ದೌರ್ಜನ್ಯಕ್ಕೆ ಸಂಬಂಧಪಟ್ಟಂತೆ ಉಚಿತ ಆಪ್ತಸಮಾಲೋಚನೆ ಕಾನೂನು ನೆರವು, ಆಶ್ರಯ ಇತರ ಸೇವೆಗಳನ್ನು ಒದಗಿಸುತ್ತ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ.

2005ನೇ ಇಸವಿಯಿಂದ ಕೌಟುಂಬಿಕ ದೌರ್ಜನ್ಯ ಕಾಯಿದೆ ಹೆಚ್ಚು ಒತ್ತನ್ನು ನೀಡಿ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಪರವಾಗಿ ಶಿಶು ಅಭಿವೃದ್ಧಿ ಯೋಜನಾಽಕಾರಿಗಳು ಅಥವಾ ಸಂರಕ್ಷಣಾಧಿಕಾರಿಗಳು ವಕೀಲರ ಸಹಯೋಗದಲ್ಲಿ ಉಚಿತ ಆಪ್ತಸಮಾಲೋಚನೆ ಮತ್ತು ಕಾನೂನು ನೆರವು ನೀಡುತ್ತಾ ಕಾನೂನು ಸಮಸ್ಯೆಗಳನ್ನು ಬಗೆಹರಿಸುತ್ತದೆ. ಬಾಲಕಿಯರ ವಸತಿ ನಿಲಯ 18 ವರ್ಷಕ್ಕಿಂತ ಒಳಪಟ್ಟ ಬಾಲಕಿಯರಿಗಾಗಿ ಗ್ರಾಮಾಂತರ ಮತ್ತು ಹಿಂದುಳಿದ ಪ್ರದೇಶಗಳ ಹೆಣ್ಣುಮಕ್ಕಳಿಗೆ, ಶಿಕ್ಷಣವನ್ನು ಪ್ರೋತ್ಸಾಹಿಸಲು ಮತ್ತು ಬಾಲ್ಯ ವಿವಾಹವನ್ನು ತಡೆಗಟ್ಟುವ ಸಲುವಾಗಿ ಇಲಾಖೆ ವತಿಯಿಂದ ಬಾಲಕಿಯರ ವಸತಿ ನಿಲಯ ನಡೆಸುತ್ತಿದ್ದು ಪ್ರಸ್ತುತ ರಾಜ್ಯದಲ್ಲಿ 41 ಬಾಲಕಿಯರ ವಸತಿ ನಿಲಯಗಳಿವೆ.

ಅತ್ಯಾಚಾರಕ್ಕೆ ಒಳಗಾದ ಮಹಿಳೆಯರಿಗೆ ಎಫ್ಐಆರ್ ಆದ 24 ಗಂಟೆಯೊಳಗಾಗಿ ತುರ್ತು ಪರಿಹಾರಕ್ಕಾಗಿ 25 ಸಾವಿರ ಪರಿಹಾರ ನೀಡುವುದು ಹೆಚ್ಚಿನ ವೈದ್ಯಕೀಯ ಚಿಕಿತ್ಸೆ ಬಂದರೆ 2 ಲಕ್ಷ ಪರಿಹಾರ ಹಾಗೂ ಒಂದು ವೇಳೆ ಅತ್ಯಾಚಾರ, ಆಸಿಡ್ ದಾಳಿಗೆ ಒಳಗಾಗಿ ಮೃತಪಟ್ಟ ಪಕ್ಷದಲ್ಲಿ ಮಹಿಳೆಯ ಕುಟುಂಬಕ್ಕೆ 1 ಲಕ್ಷ ಪರಿಹಾರ ನಿಧಿಯನ್ನು ಇಲಾಖೆ ನೀಡುತ್ತದೆ. ಕೇಂದ್ರ ಸರಕಾರದ ಒನ್ ಸ್ಟಾಪ್ ಸೆಂಟರ್ ಅಥವಾ ಸಖಿ ರಾಜ್ಯದ ಜಿಗಳಲ್ಲಿ ಒಂದೇ ಸೂರಿನಡಿ ಸಮಗ್ರ ಸೌಲಭ್ಯ ಒದಗಿಸುವ ಸಲುವಾಗಿ ಅಂದರೆ ವೈದ್ಯಕೀಯ ನೆರವು , ಪೊಲೀಸ್ ನೆರವು , ಕಾನೂನು ನೆರವು, ಆಪ್ತಸಮಾಲೋಚನೆ ಮತ್ತು ವಿಶೇಷವಾಗಿ 18  ವರ್ಷಕ್ಕಿಂತ ಕಡಿಮೆ ಇರುವ ಬಾಲಕಿಯರಿಗೆ ಮತ್ತು ಬಾಲಕರಿಗೆ ಲೈಂಗಿಕ ಕಿರುಕುಳ ಸಂಭವಿಸಿದಾಗ ಇವರ ಬೆಂಬಲವಾಗಿ ಪೋಕ್ಸೋ ಕಾಯಿದೆಗೆ
ಸಂಬಂಧಪಟ್ಟಂತೆ ಕಾರ್ಯನಿರ್ವಹಿಸುತ್ತ ದೌರ್ಜನ್ಯಕ್ಕೆ ಒಳಗಾದ ಮಕ್ಕಳಿಗೆ ಆಶ್ರಯ ನೀಡಿ ಮಕ್ಕಳಿಗೆ ಮಗುವಾದ ಪಕ್ಷದಲ್ಲಿ ದತ್ತುಸ್ವೀಕಾರ ಕೇಂದ್ರಗಳಿಗೆ ದಾಖಲೆ ಮಾಡುತ್ತದೆ.

ಕೇಂದ್ರ ಪುರಸ್ಕೃತ ಯೋಜನೆಯಾದ ಸ್ವಾಧಾರ ಗೃಹಗಳು ಕಷ್ಟಕರ ಪರಿಸ್ಥಿತಿಯಲ್ಲಿರುವ ಮಹಿಳೆಯರಿಗಾಗಿ ಆಶ್ರಯ ಮೂಲಭೂತ ವಸ್ತುಗಳ ನೀಡುವುದು ಶಿಕ್ಷಣ ವೃತ್ತಿ ತರಬೇತಿ, ಆಪ್ತಸಮಾಲೋಚನೆ ಹಾಗೂ ಕುಟುಂಬಕ್ಕೆ ಪುನರ್ಮಿಲನ ಮತ್ತು ಕಾನೂನು ನೆರವನ್ನು ಸ್ವಯಂಸೇವಾ ಸಂಸ್ಥೆಯ ಸಹಯೋಗದಲ್ಲಿ ಮಹಿಳೆಯರಿಗ ಆಶ್ರಯ ನೀಡಿ ಮಹಿಳೆಯರ ರಕ್ಷಣೆ ಮಾಡುತ್ತವೆ. ಸ್ವೀಕಾರ ಕೇಂದ್ರಗಳು ಅಲ್ಪಾವಧಿ ವಸತಿಗಾಗಿ ಇದ್ದು ವಿಧವೆಯರು ನಿರ್ಗತಿಕರು ಪ್ರತ್ಯೇಕ ಮಹಿಳೆಯರು ಸ್ವಯಂ ಪ್ರೇರಿತರಾಗಿ ಬಂದಲ್ಲಿ ಅವರಿಗೆ ತಾತ್ಕಾಲಿಕ ಆಶ್ರಯ ನೀಡಲಾಗುವುದು, ಇಂಥ ಯೋಜನೆಗಳನ್ನು ಸದುಪಯೋಗ ಪಡೆದರೆ ಮಹಿಳಾ ಸಾಗಾಣಿಕೆ
ಮತ್ತು ದುರುಪಯೋಗ ಇರದೇ ಮಹಿಳಾ ಸಬಲೆಯಾಗಿ ಜೀವನ ನಡೆಸಲು ಸಹಕಾರಿಯಾಗಿರುತ್ತದೆ.