ಮಹಿಳಾ ದನಿ
ಅದಿತಿ ನಾರಾಯಣಿ ಪಾಸ್ವಾನ್
ಕಳೆದ ವರ್ಷ ಬಿಹಾರ ಮತ್ತು ಉತ್ತರ ಪ್ರದೇಶದ ಪೂರ್ವಭಾಗಗಳಿಗೆ ಅಧ್ಯಯನ ಪ್ರವಾಸಕ್ಕೆ ಹೋಗಿದ್ದಾಗ, ಗ್ರಾಮೀಣ ಮತ್ತು ಅರೆಪಟ್ಟಣ ಪ್ರದೇಶಗಳಲ್ಲಿ ಮಹಿಳೆಯರ ಬದುಕನ್ನು ಸಬಲೀಕರಣಗೊಳಿಸುವಲ್ಲಿನ ಸ್ವಸಹಾಯ ಸಂಘಗಳ ಪಾತ್ರದ ಬಗ್ಗೆ ಮಹಿಳಾ ರಾಜಕಾರಣಿಗಳನ್ನು ಸಂದರ್ಶಿಸಿದ್ದೆ. ಹೀಗೆ ಸಂದರ್ಶಿಸಲ್ಪಟ್ಟವರಲ್ಲಿ ಮಹಿಳಾ ಸರಪಂಚರು, ಬ್ಲಾಕ್ ಪ್ರಮುಖರು, ಜಿಲ್ಲಾ ಪರಿಷತ್ ಸದಸ್ಯರು ಸೇರಿದ್ದರು. ಅವರೊಂದಿಗೆ ಸಹಜವಾಗಿಯೇ ಅವರ ‘ಪ್ರಧಾನ’ ಪತಿ, ‘ಪರಿಷತ್’ ಪತಿಗಳನ್ನೂ ಭೇಟಿ ಮಾಡಿದ್ದೆ.
ಆಗ ನನ್ನಲ್ಲಿ, ‘ಪಂಚಾಯಿತಿ, ಬ್ಲಾಕ್ ಮತ್ತು ಜಿಲ್ಲಾ ಪರಿಷತ್‌ಗಳ ಮಟ್ಟದಲ್ಲಿನ ಮಹಿಳಾ ಮೀಸಲಿನಿಂದ ಮಹಿಳೆಯರ ಬದುಕು ನಿಜಕ್ಕೂ ಎಷ್ಟು ಬದಲಾಗಿದೆ? ಅವರ ಹಕ್ಕಿನ ರಕ್ಷಣೆಯಲ್ಲಿ ಈ ಮೀಸಲಾತಿ ಕೆಲಸ ಮಾಡಿದೆಯೇ? ಪ್ರಜಾಪ್ರಭುತ್ವದ ಮೊದಲ ಮೆಟ್ಟಿಲಲ್ಲಿ ಅವರಿಗೆ ದಕ್ಕಿದ ಈ ಪ್ರಾತಿನಿಧ್ಯದಿಂದಾಗಿ ಜನರಿಗೇನಾದರೂ ಲಾಭವಾಗಿ ದೆಯೇ?’ ಎಂಬೆಲ್ಲ ಪ್ರಶ್ನೆಗಳು ಸುರಿಸಿದವು. ನಾನು ನಿರೀಕ್ಷಿಸುತ್ತಿದ್ದ ಉತ್ತರ ಬಹುತೇಕ ಎಲ್ಲಾ ಸದಸ್ಯೆಯರಿಂದಲೂ ಬಂದಿತ್ತು: ‘ಖಂಡಿತ ಪ್ರಯೋಜನವಾಗಿದೆ. ನಮ್ಮ ಪರವಾಗಿ ಗಂಡ, ಅಪ್ಪ ಅಥವಾ ಅಣ್ಣ ಸಭೆಗಳಿಗೆ ಹೋಗುವುದು ನಿಜ.
ಹಾಗೆಯೇ ಮೀಸಲಾತಿ ಇರದಿದ್ದಿದ್ದರೆ ನಾವು ಈ ಜಾಗಕ್ಕೆ ಬರಲು ಸಾಧ್ಯವಿರಲಿಲ್ಲ ಎಂಬುದೂ ನಿಜ. ಆದರೆ, ಈ ಅಧಿಕಾರ ದಿಂದಾಗಿ ನಮಗೆ ನಮ್ಮ ಮನೆ ಮತ್ತು ಊರಿನಲ್ಲಿ ಗೌರವ ಸಿಗುತ್ತಿರುವುದೂ ಅಷ್ಟೇ ನಿಜ’ ಎಂಬುದು ಅವರ ಉತ್ತರವಾಗಿತ್ತು. ಅವರ ಗಂಡಂದಿರು ಈಗ ಹೊಡೆಯುವುದನ್ನು ನಿಲ್ಲಿಸಿದ್ದಾರೆ. ಊರಲ್ಲೊಬ್ಬ ಮಹಿಳೆ ಅಂಥ ಹುದ್ದೆಯಲ್ಲಿದ್ದರೆ, ನೆರೆಹೊರೆಯ, ನೆಂಟರಿಷ್ಟರ ಮನೆಯ ಮಹಿಳೆಯರ ಮಾತಿಗೂ ಒಂದು ಘನತೆ ಬರುತ್ತದೆ. ಅವರ ಮಾತನ್ನು ಬೇರೆಯವರು ಕೇಳಿಸಿಕೊಳ್ಳುತ್ತಾರೆ, ಸಮಸ್ಯೆಗಳನ್ನು ಪರಿಹರಿಸುತ್ತಾರೆ.
ಇಲ್ಲದಿದ್ದಿದ್ದರೆ ಅವರನ್ನು ನಿರ್ಲಕ್ಷಿಸಿಬಿಡುತ್ತಿದ್ದರು. ಮಹಿಳಾ ಸಬಲೀಕರಣದ ಈ ವ್ಯಾಖ್ಯಾನ ನಮ್ಮ ವ್ಯಾಖ್ಯಾನಕ್ಕಿಂತ ಬೇರೆಯಿ ರಬಹುದು. ನಮ್ಮಲ್ಲನೇಕರು ಮಹಿಳಾ ಸಬಲೀ ಕರಣವನ್ನು ನಗರಕೇಂದ್ರಿತ ದೃಷ್ಟಿಕೋನದಿಂದ ನೋಡುತ್ತೇವೆ. ಆದರೆ ಗ್ರಾಮೀಣ ಮಹಿಳಾ ಸಬಲೀಕರಣದ ನೈಜ ಅನುಭವ ಗಳು ಈ ಪರಿಕಲ್ಪನೆಯನ್ನು ನಾವು ಅರ್ಥೈಸಿಕೊಂಡಿರುವುದನ್ನೂ ಮೀರಿ ಮುಂದೆ ಹೋಗಬಲ್ಲವು. ಪಂಚಾಯ್ತಿಗೆ ಚುನಾಯಿತರಾಗಿ ಅಧಿಕೃತ ಸರಕಾರಿ ದಾಖಲೆಗೆ ಸಹಿಹಾಕುವುದು, ಭಾಷಣ ಮಾಡುವುದು, ಮಗಳ ಶಿಕ್ಷಣದ ಬಗ್ಗೆ ನಿರ್ಧರಿಸುವುದು, ಎಲ್ಲಕ್ಕಿಂತ ಹೆಚ್ಚಾಗಿ ಮನೆಯಲ್ಲಿ ಅತ್ತೆ-ಮಾವನಿಂದ ಗೌರವ ಪಡೆಯುವುದು ಇವೆಲ್ಲ ದಕ್ಕಿರು ವುದು ಮಹಿಳಾ ಹಕ್ಕುಗಳ ಹೋರಾಟದಿಂದಲೇ.
ಪ್ರಾತಿನಿಧ್ಯವೆಂಬುದು ಸಂಕೀರ್ಣ ವಿಚಾರ; ಶಿಕ್ಷಣದಂತೆ ಇದರ ಪ್ರತಿಫಲ ಸಿಗುವುದೂ ದೀರ್ಘಾವಧಿಯಲ್ಲೇ. ಈ ನಿಟ್ಟಿನಲ್ಲಿ ನೋಡಿದರೆ, ಸಂಸತ್ತಿನಲ್ಲಿ ಮಂಡಿಸಿದ ಮಹಿಳಾ ಮೀಸಲು ವಿಧೇಯಕವು, ಮಹಿಳೆಯರಿಗೆ ಪ್ರಾತಿನಿಧ್ಯ ಕಲ್ಪಿಸುವ ಪ್ರಕ್ರಿಯೆಯ ಆರಂಭಿಕ ಹೆಜ್ಜೆಯಷ್ಟೇ. ಅವರ ಅವಕಾಶಗಳ ವಿಸ್ತರಣೆಗೆ ಹಾಕಿರುವ ಶ್ರೀಕಾರವಿದು. ದಲಿತ ಕುಟುಂಬದಿಂದ ಬಂದಿರುವ ನನಗಂತೂ ಇದು ನೇರವಾಗಿ ರಿಲೇಟ್ ಆಗುತ್ತದೆ. ನನ್ನ ಪೂರ್ವಜರು ಹಳ್ಳಿಯಲ್ಲಿ ಕಾವಲುಗಾರರ ಕೆಲಸ ಮಾಡುತ್ತಿದ್ದರು. ‘ದ ಇಂಡಿಯನ್ ಎಕ್ಸ್ ಪ್ರೆಸ್’ನಂಥ ರಾಷ್ಟ್ರಮಟ್ಟದ ಪತ್ರಿಕೆಯಲ್ಲಿ ಲೇಖನ ಬರೆವ ಮಟ್ಟಿಗೆ ಶಿಕ್ಷಣವಿಂದು ನನ್ನನ್ನು ಬೆಳೆಸಿದೆ. ದೇಶ ಹಾಗೂ ಜಗತ್ತಿನಾದ್ಯಂತ ಈ ಪತ್ರಿಕೆಯನ್ನು ಓದುತ್ತಾರೆ. ಮಹಿಳಾ ಮೀಸಲು ಕೂಡ ಇಂಥದೇ ಅವಕಾಶಗಳನ್ನು ತೆರೆದಿಡುತ್ತದೆ.
ನಾನು ದೆಹಲಿ ವಿಶ್ವವಿದ್ಯಾಲಯದ ಶಿಕ್ಷಕರ ಸಂಘಟನೆಯ ಕಾರ್ಯಕಾರಿ ಸಂಘದ ಚುನಾವಣೆಗೆ ಸ್ಪರ್ಧಿಸಿ ಕಳೆದೊಂದು ತಿಂಗಳಿಂದ ಪ್ರಚಾರ ಮಾಡುತ್ತಿರುವೆ. ಅಲ್ಲಿನ ಮಹಿಳಾ ಸಹೋದ್ಯೋಗಿಗಳೊಂದಿಗೆ ಮಾತಾಡುವಾಗ, ಅವರೆಲ್ಲ ತಮ್ಮ ಪರವಾಗಿ ನನ್ನಂಥ ಹೆಣ್ಣುಮಗಳೊಬ್ಬಳು ಚುನಾವಣೆಗೆ ನಿಂತಿದ್ದಾಳೆಂದು ಅಭಿಮಾನದಿಂದ ಹೇಳುತ್ತಿದ್ದಾರೆ. ಚುನಾವಣೆಗೆ ಸ್ಪರ್ಧಿಸಿರುವುದು ನಾನಾದರೂ, ಅವರಿಗೆಲ್ಲ ಅದೇನೋ ಹೆಮ್ಮೆ.
ಅವರಲ್ಲನೇಕರು, ಮಹಿಳಾ ಪ್ರಾತಿನಿಧ್ಯದಿಂದಾಗಿ ಅಲ್ಲಿನ ಶಿಕ್ಷಣ ವ್ಯವಸ್ಥೆ ಮತ್ತು ಮಹಿಳಾ ಪರವಾಗಿ ಒಟ್ಟಾರೆ ವಾತಾವರಣ ಹೇಗೆ ಸುಧಾರಿಸಬಲ್ಲದು ಎಂಬುದನ್ನು ನನ್ನೊಂದಿಗೆ ಚರ್ಚಿಸುತ್ತಿದ್ದಾರೆ. ಇದರರ್ಥ ಇಷ್ಟೇ: ಸಾರ್ವಜನಿಕ ಜೀವನದಲ್ಲಿ ಮಹಿಳೆಯರು ಹೆಚ್ಚೆಚ್ಚು ಹುದ್ದೆಗಳನ್ನು ಅಲಂಕರಿಸುತ್ತಾ ಹೋದಂತೆ ಮಹಿಳೆಯರ ಆತ್ಮವಿಶ್ವಾಸವೂ ಹೆಚ್ಚತೊಡಗುತ್ತದೆ, ಅವರ ಮಾತಿಗೆ ಬೆಲೆ ಸಿಗತೊಡಗುತ್ತದೆ. ಅದರಿಂದ ಮಹಿಳಾಪರ ವಾತಾವರಣವೊಂದು ಸೃಷ್ಟಿಯಾಗುತ್ತದೆ, ಅಲ್ಲಿ ಮಹಿಳೆಯರಿಗೆ ಭದ್ರತಾ ಭಾವನೆ ಮೂಡುತ್ತದೆ. ಅವರನ್ನು ಬೆಂಬಲಿಸುವ, ಅವರ ಕಷ್ಟಕ್ಕೆ ದನಿಯಾಗುವ ಪ್ರತಿನಿಧಿಗಳು ಅಲ್ಲಿರುತ್ತಾರೆ.
ಕಷ್ಟಕಾಲದಲ್ಲಿ ಅವರಿಗೆ ರಕ್ಷಣೆ ಸಿಗುತ್ತದೆ, ಅವರ ಹಕ್ಕುಗಳ ಪರವಾಗಿ ನಿಲ್ಲುವವರು ಅಲ್ಲಿರುತ್ತಾರೆ. ಸಂಸತ್ತು ಮತ್ತು ವಿಧಾನಸಭೆ ಗಳಲ್ಲಿ ಮಹಿಳೆಯರಿಗೆ ಶೇ.೩೩ ರಷ್ಟು ಮೀಸಲಾತಿ ನೀಡುವ ಈ ವಿಧೇಯಕ ಅಂಗೀಕಾರಗೊಂಡರೆ ಭಾರತದಲ್ಲಿ ಈಗಿರುವ ೮೨ ಸಂಸದೆಯರ ಸಂಖ್ಯೆ ೧೮೧ಕ್ಕೆ ಏರುತ್ತದೆ. ಈ ವಿಧೇಯಕದಲ್ಲಿ ಪರಿಶಿಷ್ಟ ಜಾತಿ- ಪಂಗಡಗಳು ಮತ್ತು ಆಂಗ್ಲೋ ಇಂಡಿಯನ್ ಸಮುದಾಯದ ಮಹಿಳೆಯರಿಗೆ ಒಳಮೀಸಲಾತಿಯೂ ಇದೆ. ಸಂವಿಧಾನದ ‘೩೩೦ ಎ’ ಪರಿಚ್ಛೇದಕ್ಕೆ ಇನ್ನೊಂದು ತಿದ್ದುಪಡಿಸಿ ಸೇರಿಸಿ, ಅದರಲ್ಲಿ ಲೋಕಸಭೆಯಲ್ಲಿ ಎಸ್‌ಸಿ-ಎಸ್‌ಟಿಗಳಿಗೆ ನೀಡಿರುವ ಮೀಸಲಾತಿಯ ಮೂರನೇ ಒಂದರಷ್ಟು ಭಾಗವನ್ನು ಮಹಿಳಾ ಸದಸ್ಯರಿಗೆ ನೀಡಬೇಕೆಂಬ ನಿಯಮ ತರಲಾಗುತ್ತದೆ.
ಇನ್ನೊಂದು ತಿದ್ದುಪಡಿಯಲ್ಲಿ, ಲೋಕಸಭೆಯ ಒಟ್ಟು ಸ್ಥಾನಗಳ ಪೈಕಿ ಮೂರನೇ ಒಂದರಷ್ಟು ಸೀಟುಗಳಿಗೆ ನೇರ ಚುನಾವಣೆ
ಮೂಲಕವೇ ಮಹಿಳೆಯರನ್ನು ಚುನಾಯಿಸಬೇಕು ಎನ್ನಲಾಗಿದೆ. ಹಾಗೆಯೇ ಸಂವಿಧಾನದ ‘೨೩೯ ಎಎ’ ಪರಿಚ್ಛೇದದ ಇನ್ನೊಂದು ತಿದ್ದುಪಡಿಗೆ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ. ಅದರಡಿ, ರಾಷ್ಟ್ರ ರಾಜಧಾನಿ ಪ್ರದೇಶದ ದೆಹಲಿ ವಿಧಾನಸಭೆಯಲ್ಲಿ ಮಹಿಳೆಯ ರಿಗೆ ಮೀಸಲಾತಿ ನೀಡಬೇಕೆಂದು ಪ್ರಸ್ತಾಪಿಸಲಾಗಿದೆ. ಅದರ ಉಪಪರಿಚ್ಛೇದ ‘ಬಿಬಿ’ ಅಡಿ, ದೆಹಲಿ ವಿಧಾನ ಸಭೆಯಲ್ಲಿ ಮೂರನೇ ಒಂದರಷ್ಟು ಸ್ಥಾನಗಳನ್ನು ಎಸ್ ಸಿ-ಎಸ್‌ಟಿ ಮಹಿಳೆಯರಿಗೆ ಮೀಸಲಿಡಬೇಕೆಂದು ಪ್ರಸ್ತಾಪಿಸಲಾ ಗಿದೆ. ನನ್ನ ಪ್ರಕಾರ ಈ ಮಸೂದೆ ಯು ಪ್ರಸ್ತುತ ಕೇಂದ್ರ ಸರಕಾರದ ಅತಿದೊಡ್ಡ ಸುಧಾರಣಾವಾದಿ ಕ್ರಮವಾಗಿ ಪರಿಗಣಿಸಲ್ಪಡಲಿದೆ.
ಶಾಸನ ರಚನಾ ಪ್ರಕ್ರಿಯೆಯಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ನೀಡುವುದು ಬಹಳ ದಿನಗಳಿಂದ ಬಾಕಿ ಉಳಿದಿತ್ತು. ನಮ್ಮದು ಸಹಭಾಗಿತ್ವದ ಪ್ರಜಾಪ್ರಭುತ್ವ. ಯಾರನ್ನೂ ಹೊರಗಿಡದೆ ಎಲ್ಲರನ್ನೂ ಒಳಗೊಳ್ಳುವುದೇ ಇದರ ಲಕ್ಷಣ. ಈ ವ್ಯವಸ್ಥೆಯಲ್ಲಿ ಪ್ರತಿ ಯೊಬ್ಬ ಭಾರತೀಯನ ಆಶೋತ್ತರಕ್ಕೂ ದನಿ ಸಿಗಬೇಕು ಮತ್ತು ಅದು ಈಡೇರಬೇಕು. ಆದ್ದರಿಂದಲೇ ನಮ್ಮ ಸಂಸದೀಯ ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಸಮಾನಾವಕಾಶ ಕಲ್ಪಿಸಲು ಗರಿಷ್ಠವಾಗಿ ಯತ್ನಿಸಲಾಗಿದೆ. ಆದರೂ ಅನೇಕ ಅಡೆತಡೆ ಗಳಿಂದಾಗಿ ಎಲ್ಲೆಡೆ ಎಲ್ಲರಿಗೂ ಪ್ರಾತಿನಿಧ್ಯ ಸಿಗುತ್ತಿಲ್ಲ. ಕೆಲವೆಡೆ ಒಂದಷ್ಟು ವರ್ಗಗಳನ್ನು ಹೊರಗೇ ಇರಿಸಲಾಗಿದೆ.
ಆಳಕ್ಕಿಳಿದು ನೋಡಿದರೆ ಇದಕ್ಕೆ ಕಾರಣವೂ ಕಾಣುತ್ತದೆ. ಅದೆಂದರೆ, ನಮ್ಮ ರಾಜಕೀಯ ವ್ಯವಸ್ಥೆ ಮತ್ತು ಸಮಾಜ ಪರಸ್ಪರ ಬೆಸೆದುಕೊಂಡಿವೆ. ಸಮಾಜದ ಕೆಲ ವರ್ಗಗಳಿಗೆ ಇನ್ನೂ ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ. ಹೀಗಾಗಿ ಈ ವರ್ಗಗಳದ್ದು ರಾಜಕೀಯ ದಲ್ಲೂ ಅದೇ ಸ್ಥಿತಿ. ಕೆಲವೇ ವ್ಯಕ್ತಿಗಳ ಖಾಸಗಿ ಹಿತಾಸಕ್ತಿಯಂತೆ ಕೆಲಸ ಮಾಡುವ ರಾಜಕೀಯ ಪಕ್ಷಗಳ ವಿಷಯದಲ್ಲಂತೂ ಇದು ಮತ್ತಷ್ಟು ನಿಜ. ದುರದೃಷ್ಟವಶಾತ್ ಕೆಲವೇ ಪಕ್ಷಗಳನ್ನು ಹೊರತುಪಡಿಸಿ ಮಿಕ್ಕೆಲ್ಲವೂ ಭಾರತದಲ್ಲಿ ಕೆಲವೇ ಕೆಲವರ ಹಿತಾಸಕ್ತಿಗೆ ತಕ್ಕಂತೆ ಕೆಲಸ ಮಾಡುತ್ತವೆ. ಸಿದ್ಧಾಂತಕ್ಕೆ ಬದಲು ಅವು ಕೆಲ ವ್ಯಕ್ತಿಗಳಿಗೆ ಬದ್ಧವಾಗಿ ಕೆಲಸ ಮಾಡುತ್ತವೆ. ಅಂಥ ಪಕ್ಷಗಳಿಗೆ ಈಗಿರುವ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಬೇಕಿಲ್ಲ, ಸಮಾಜ ಸುಧಾರಣೆಯಾಗುವುದೂ ಅವಕ್ಕೆ ಬೇಕಿಲ್ಲ.
ದೇಶದಲ್ಲಿನ ಯಥಾಸ್ಥಿತಿ ಮುಂದುವರಿದರೆ ಅವಕ್ಕೆ ಲಾಭವಿದೆ. ಆದರೆ ಮಹಿಳಾ ಮೀಸಲಾತಿ ವಿಧೇಯಕದಿಂದ ಆ ಪಕ್ಷಗಳಲ್ಲೂ
ಬದಲಾವಣೆ ಬರುತ್ತದೆ. ಅದು ಅನಿವಾರ್ಯ. ಈ ವಿಧೇಯಕದಿಂದ ಸಮಾಜದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಸಿಗುವುದು ಖಾತ್ರಿ ಯಾಗಿ ದೇಶದ ಒಟ್ಟಾರೆ ರಾಜಕೀಯ ವಾತಾವರಣ ಬದಲಾಗುತ್ತದೆ. ಸಾಮಾಜಿಕ ವ್ಯವಸ್ಥೆಯಲ್ಲಿ ಸುಧಾರಣೆಯಾಗಿ ಅನೇಕ ನ್ಯೂನತೆಗಳು ನಿವಾರಣೆಯಾಗುತ್ತವೆ. ಇದು ಈವರೆಗೆ ನಿರಾಕರಿಸಲಾದ ಪ್ರಾತಿನಿಧ್ಯದ ಹಕ್ಕನ್ನು ಮಹಿಳೆಯರಿಗೆ ದೊರಕಿಸಿ ಕೊಡುವ ವಿಧೇಯಕವೂ ಹೌದು. ಎಲ್ಲಾ ಜಾತಿಗಳಿಗೂ ಪ್ರಾತಿನಿಧ್ಯ ನೀಡುವ ಸಹಭಾಗಿತ್ವದ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿ ರುವ ನಾವು ಈ ಮಹಿಳಾ ಮೀಸಲಾತಿ ಯಿಂದಾಗಿ ಉಜ್ವಲ ಪ್ರಜಾಪ್ರಭುತ್ವಕ್ಕೆ ನಾಂದಿ ಹಾಡಲಿದ್ದೇವೆ.
ಈ ವಿಧೇಯಕದಿಂದಾಗಿ, ಮಹಿಳೆಯರು ಚುನಾವಣೆಗೆ ಸ್ಪರ್ಧಿಸಿದರೂ ಸಾಕು ಅದರಿಂದಾಗಿ ಅವರು ಮನೆಯಿಂದ ಹೊರಗೆ ಬರುವಂತಾಗುತ್ತದೆ. ಅವರು ಹೀಗೆ ಹೊರಬಂದರೆ, ಗಡಿಗಳನ್ನು ದಾಟಿ, ಅಡೆತಡೆ ಮೀರಿ ರಾಜಕೀಯದಲ್ಲಿ ಗಟ್ಟಿಯಾಗಿ ನಿಲ್ಲಲು ದಾರಿಗಳು ತನ್ನಿಂತಾನೇ ತೆರೆದುಕೊಳ್ಳುತ್ತವೆ. ಈ ವಿಧೇಯಕವು ಸಂಸದೀಯ ಪ್ರಜಾಪ್ರಭುತ್ವದ ಲಕ್ಷಣ ಗಳನ್ನಷ್ಟೇ ಅಲ್ಲದೆ ಅದರ ಒಟ್ಟಾರೆ ಚಿತ್ರಣವನ್ನೇ ಬದಲಿಸುತ್ತದೆ. ಪ್ರಜಾಪ್ರಭುತ್ವದ ತಾಯಿಯಾಗಿರುವ ಭಾರತ ಕೊನೆಗೂ ತನ್ನ ಹೊಸ ಸಂಸತ್ತಿನ ಭವ್ಯಗೋಡೆಗಳ ನಡುವೆ ತನ್ನ ಹೆಣ್ಣುಮಕ್ಕಳಿಗೆ ಸಿಗಬೇಕಾದ ಗೌರವ ಮತ್ತು ಹಕ್ಕನ್ನು ದೊರಕಿಸಿಕೊಡಲು ಸಜ್ಜಾಗಿದೆ. ಆ ಕಾರ್ಯ ಸುರಳೀತವಾಗಿ ನೆರವೇರಲಿ.
(ಲೇಖಕಿ ದೆಹಲಿ ವಿವಿ ಅಸಿಸ್ಟೆಂಟ್ ಪ್ರೊಫೆಸರ್)