Wednesday, 18th September 2024

ಒತ್ತಡ ನಿರ್ವಹಣೆಗೆ ಕಾರ್ಯಾಗಾರದ ಅಗತ್ಯ

ಸ್ವಗತ

ಮೋಹನದಾಸ ಕಿಣಿ

ಆಧುನಿಕ ಬದುಕಿನಲ್ಲಿ ಒತ್ತಡವಿಲ್ಲದವರು ಬಹುಶಃ ಯಾರೂ ಇಲ್ಲ, ಶ್ರೀಮಂತರಿಗೆ ಒಂದು ರೀತಿಯ ಒತ್ತಡವಿದ್ದರೆ ಮಧ್ಯಮ ವರ್ಗದವರ ಒತ್ತಡವೇ
ಬೇರೆ. ಬಡವರಿಗೆ? ಅವರಿಗೂ ಒಂದಲ್ಲ ಒಂದು ರೀತಿಯ ಒತ್ತಡ ಇದ್ದೇ ಇರುತ್ತದೆ. ಹಾಗೆಯೇ ವಯೋವೃದ್ಧರು, ವೃದ್ಧಾಶ್ರಮದಲ್ಲಿರುವವರು, ಹೀಗೆ ಎಲ್ಲರಿಗೂ ಒತ್ತಡ ಇರುವುದು ಸಹಜವೇ. ಆದರೆ ಪ್ರತಿಯೊಬ್ಬರ ಒತ್ತಡದ ಪ್ರಮಾಣ, ವಿಧಾನ ಮತ್ತು ಕಾರಣಗಳು ಮಾತ್ರ ಬೇರೆ ಬೇರೆ. ಏನೇ ಇರಲಿ, ನನ್ನ ಸರಕಾರಿ ಸೇವಾವಧಿಯಲ್ಲಿ ನೋಡಿದ ಒಂದು ಉದಾಹರಣೆ ಹೀಗಿದೆ.

ನಮ್ಮ ಜಿಲ್ಲೆಯ ಓರ್ವ ಜಿಲ್ಲಾಧಿಕಾರಿಯವರು ಸರಕಾರಿ ಉದ್ಯೋಗಿಗಳಿಗೆ, ಒತ್ತಡ ನಿರ್ವಹಣೆಯ ಕುರಿತು ಒಂದು ಕಾರ್ಯಾಗಾರ ಏರ್ಪಡಿಸಿದ್ದರು. ಮೊದಲಿಗೆ ಹೆಚ್ಚಿನವರು ಇದರಲ್ಲಿ ಅರೆ ಮನಸ್ಸಿನಿಂದ ಭಾಗವಹಿಸಿದ್ದರು. ಆದರೆ ಶಿಬಿರ ಮುಗಿಯುವಾಗ ಭಾಗವಹಿಸಿದವರಿಗೆ ಅದೆಷ್ಟು ಉಪಯುಕ್ತ ಎಂಬುದರ ಅರಿವಾಯಿತು. ಶಿಬಿರಕ್ಕೆ ಹಾಜರಾದವರ ಅನುಭವಗಳನ್ನು ಕೇಳಿ ಇತರರು ಮತ್ತೊಮ್ಮೆ ಶಿಬಿರ ಏರ್ಪಡಿಸಲು ಜಿಲ್ಲಾಧಿಕಾರಿಯವರಿಗೆ ಒತ್ತಾಯಿಸಿದರು.

ದುರದೃಷ್ಟವಶಾತ್ ಆ ಜಿಲ್ಲಾಧಿಕಾರಿಯವರಿಗೆ ಕೆಲವೇ ದಿನದಲ್ಲಿ ವರ್ಗವಾಯಿತು, ಪ್ರಸ್ತಾವನೆ ಮೂಲೆಗೆ ಸೇರಿತು. ಆ ನಂತರ ಬಂದ ಜಿಲ್ಲಾಧಿಕಾರಿಯವ ರ್ಯಾರೂ ಈ ನಿಟ್ಟಿನಲ್ಲಿ ಆಸಕ್ತಿ ತೋರಿಸಲೇ ಇಲ್ಲ. ಆದರೆ ನಂತರ ಬಂದ ಜಿಲ್ಲಾಧಿಕಾರಿಯವರಲ್ಲಿ ಒಬ್ಬರು ವೈದ್ಯಕೀಯ ಪದವೀಧರರಾಗಿದ್ದರು.
ಮೊದಲಿಗೆ ಅವಕಾಶ ತಪ್ಪಿದ ನೌಕರರಲ್ಲಿ ಕೆಲವರು ಅಂತಹ ದೊಂದು ಕಾರ್ಯಾಗಾರವನ್ನು ಪುನಃ ಏರ್ಪಡಿಸುವಂತೆ ಹೊಸ ಜಿಲ್ಲಾಧಿಕಾರಿಯವರಿಗೆ ವಿನಂತಿ ಮಾಡಿಕೊಂಡರು.

ಅದಕ್ಕೆ ಅವರ ಪ್ರತಿಕ್ರಿಯೆ ಹೀಗಿತ್ತು: ಸರಕಾರಿ ಉದ್ಯೋಗದಲ್ಲಿ ಒತ್ತಡ ಎಲ್ಲಿದೆ? ಕೆಳ ಹಂತದಲ್ಲಿ ಕಡತ ಮಂಡಿಸುತ್ತಾರೆ, ಅಧಿಕಾರಿ ಮಂಜೂರು ಮಾಡುತ್ತಾರೆ ಅಥವಾ ತಿರಸ್ಕರಿಸುತ್ತಾರೆ. ಅಷ್ಟೇ ತಾನೆ? ಕೆಲಸದ ವೇಳೆ ಸಮಯ ವ್ಯರ್ಥ ಮಾಡದೆ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಯಾವ ಒತ್ತ
ಡವೂ ಇರುವುದಿಲ್ಲ ತಮಾಷೆಯೆಂದರೆ, ಹೀಗೆ ಹೇಳಿದ ಸಾಹೇಬರು ಮರುದಿನ ಬೆಳಿಗ್ಗೆ ಸಿಕ್ಕಾಪಟ್ಟೆ ತಲೆಬಿಸಿ ಮಾಡಿಕೊಂಡಿದ್ದರು. ಏಕೆಂದರೆ, ಬೆಳ್ಳಂ ಬೆಳಗ್ಗೆ ಯಾರೋ ರಾಜಕಾರಣಿಗಳ ಗುಂಪೊಂದು ಯಾವುದೋ ವಿಷಯಕ್ಕೆ ರೇಗಾಡಿದ್ದರಂತೆ. ಆ ತಲೆಬಿಸಿಯ ಕಾರಣಕ್ಕೆ ಸಾಹೇಬರು ಕಚೇರಿಯ ಸಿಬ್ಬಂದಿ ಮೇಲೆ ದಿನವಿಡೀ ರೇಗಾಡುತ್ತಿದ್ದರು. ಆ ಸಿಬ್ಬಂದಿ, ಕಚೇರಿಗೆ ಬಂದ ಸಾರ್ವಜನಿಕರ ಮೇಲೆ ರೇಗುತ್ತಿದ್ದರು. ಅವರವರ ತಲೆ ಬಿಸಿ ಅವರವರಿಗೆ. ಆದರೂ ಜಿಽಕಾರಿಯವರಿಗೆ ಒತ್ತಡ ನಿರ್ವಹಣಾ ಕಾರ್ಯಗಾರ ಅಗತ್ಯವಿದೆಯೆಂದು ಅನ್ನಿಸಲೇ ಇಲ್ಲ!

ಮೊದಲಿನ ಕಾರ್ಯಾಗಾರದ ಫಲಿತಾಂಶ ನೋಡಿದವರು ಇಂತಹ ಕಾರ್ಯಾಗಾರದ ಅಗತ್ಯವನ್ನು ಎಷ್ಟು ವಿವರಿಸಿದರೂ, ಇಂತಹ ಕಾರ್ಯಕ್ರಮಗಳನ್ನು ಆಗಿಂದಾಗ್ಗೆ ನಡೆಸಿದರೆ ಸಿಬಂಧಿ ಮತ್ತು ಸಾರ್ವಜನಿಕರ ನಡುವೆ ಉತ್ತಮ ಸಂವಹನ ಮೂಡಲು, ತನ್ಮೂಲಕ ವ್ಯವಸ್ಥೆಯಲ್ಲಿ ಸುಧಾರಣೆಯಾಗುವ
ಅವಕಾಶವೂ ಇದೆಯೆಂದು ವಿವರಿಸಿ ಹೇಳಿದರೂ ಅವರು ಕಿವಿಗೊಡಲೇ ಇಲ್ಲ!

ಪುನಃ ಸರಕಾರಿ ಉದ್ಯೋಗಿಗಳ ವಿಷಯಕ್ಕೇ ಬರುವುದಾದರೆ, ಲೋಕಾಯುಕ್ತ ವ್ಯವಸ್ಥೆಗೆ ವಿಭಿನ್ನ ಆಯಾಮ ನೀಡಿದವರಲ್ಲಿ ಒಬ್ಬರು ಭ್ರಷ್ಟ ನೌಕರರನ್ನು ಪ್ರಾಮಾಣಿಕರೊಂದಿಗೆ ಸರಿಸಮನಾಗಿ ತೂಗಿದ ಕಾರಣಕ್ಕೆ ಕೆಲವು ನೌಕರರು ಅನಗತ್ಯ ತೊಂದರೆಗೀಡಾದ ಉದಾಹರಣೆಗಳಿವೆ. ಅವುಗಳಲ್ಲಿ ಒಂದು;
ಕಾರವಾರದಲ್ಲಿ ಸರಕಾರಿ ಅಧಿಕಾರಿಗಳ ಸಭೆ ನಡೆಸಿ ಸಾರ್ವಜನಿಕರಿಂದ ದೂರು ಸ್ವೀಕರಿಸಿ ಸ್ಥಳದ ವಿಚಾರಣೆ ನಡೆಸಿ ಪರಿಹಾರ ನೀಡುವ ಕಾರ್ಯಕ್ರಮ ವಿತ್ತು. ಎಂದಿನಂತೆ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗುವ ಲೋಕಾಯುಕ್ತ ನ್ಯಾಯಮೂರ್ತಿಯವರು ಯಾವುದೋ ಒಂದು ದೂರಿಗೆ ಸಂಬಂಧಿಸಿ ಅಧಿಕಾರಿಯೊಬ್ಬರನ್ನು ಪುಂಖಾನುಪುಂಖವಾಗಿ ಪ್ರಶ್ನಿಸುತ್ತಿದ್ದರು.

ಎಲ್ಲರೂ ಅಪ್ಪಟ ಸತ್ಯವಂತರೆಂದು ಇಲ್ಲಿ ಹೇಳುತ್ತಿಲ್ಲ. ಅವರು ಪ್ರಶ್ನಿಸುತ್ತಿದ್ದ ಅಧಿಕಾರಿ ಆ ದಿನ ತೀವ್ರ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಇದನ್ನು ಲೆಕ್ಕಿಸದೆ, ಆ ವ್ಯಕ್ತಿ ನಾಟಕ ಮಾಡುತ್ತಾರೆಂದು ಇನ್ನಷ್ಟು ಗದರಿದರು. ಅವರ ಧ್ವನಿಗೆ ಹೆದರಿದ ಅಧಿಕಾರಿ ತಲೆಸುತ್ತಿ ಬಂದು ಬಿದ್ದೇ ಬಿಟ್ಟರು. ಅಲ್ಲಿದ್ದವರು ಆತನನ್ನು ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲಿ ತೀವ್ರ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದರು! ಇದು ಮಾಧ್ಯಮಗಳಲ್ಲಿ ಚಿಕ್ಕದೊಂದು ವರದಿಯಾಗಿ ಪ್ರಕಟವಾಗುವಷ್ಟಕ್ಕೆ ಸೀಮಿತವಾಗಿತ್ತು. ಇದು ಹಳೆಯ ಘಟನೆ. ಈಗಲೂ ಇಂತಹವುಗಳು ನಡೆಯುತ್ತಲೇ ಇವೆ ಎಂಬುದಕ್ಕೆ ಒಂದೆರಡು ಉದಾಹರಣೆಗಳು: ಹಾಸನ ಜಿಲ್ಲೆಯಲ್ಲಿ ಕ್ಷೇತ್ರ ಶಿಕ್ಷಣ ಇಲಾಖೆಯ ಉದ್ಯೋಗಿಯೊಬ್ಬರು ಹೃದಯಾಘಾತ ದಿಂದ ನಿಧನರಾದ ಸುದ್ದಿ ಪ್ರಕಟವಾಗಿತ್ತು.

ಅವರಿಗೆ ಕಚೇರಿಯಲ್ಲಿ ಮೇಲಾಧಿಕಾರಿಗಳಿಂದ ನಿರಂತರ ಒತ್ತಡವಿತ್ತು ಎಂದು ಆಪಾದಿಸಿ ಅವರ ಬಂಧುಗಳು ಶವವನ್ನು ಕಚೇರಿ ಮುಂಭಾಗದಲ್ಲಿ ಇರಿಸಿ ಕೆಲಕಾಲ ಮುಷ್ಕರ ಹೂಡಿದ್ದೂ ವರದಿಯಾಗಿತ್ತು. ಇನ್ನೊಂದೆಡೆ ದಕ್ಷಿಣ ಕನ್ನಡ ಜಿಯ ಗ್ರಾಮೀಣ ಪ್ರದೇಶದ ಗ್ರಾಮಸಭೆಯೊಂದರಲ್ಲಿ ವೈದ್ಯಕೀಯ ಇಲಾಖೆಯ ಅಧಿಕಾರಿಯವರೊಬ್ಬರನ್ನು ಹಲವಾರು ಗ್ರಾಮಸ್ಥರು ನಿರಂತರ ಪ್ರಶ್ನೆ ಮಾಡಿದಾಗ ಅವರು ಪ್ರಜ್ಞೆ ತಪ್ಪಿ ಬಿದ್ದರೆಂಬ ವರದಿ ಇತ್ತು. ಇದರಲ್ಲಿ ಯಾರು ಸರಿ, ಯಾರು ತಪ್ಪು ಅನ್ನುವುದು ಬೇರೆ ವಿಷಯ. ಆದರೆ ಎಲ್ಲ ಉದ್ಯೋಗಿಗಳೂ ಅಪ್ರಾಮಾಣಿಕರಲ್ಲ, ಅವರಿಗೂ ಕೆಲಸದ ಜೊತೆ ಜೊತೆಗೆ ಇತರ ಒತ್ತಡಗಳೂ ಇರುತ್ತದೆ ಎಂಬುದನ್ನು ಜನರೂ ಅರ್ಥ ಮಾಡಿಕೊಳ್ಳಬೇಕು.

ಸರಕಾರಿ ನೌಕರರು, ಅಧಿಕಾರಿಗಳೆಂದರೆ ಸಾರ್ವಜನಿಕರಿಗೆ ಅಸಹನೆ ಇರುವುದು ಸಹಜವೇ. ಆದರೆ ಸಾರ್ವಜನಿಕರೂ ಅಧಿಕಾರಿಗಳೊಂದಿಗೆ ತಾಳ್ಮೆಯಿಂದ ವರ್ತಿಸುವ ಮತ್ತು ಎಲ್ಲರೂ ಒಂದೇ ರೀತಿ ಇಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಏಕೆಂದರೆ ಸರಕಾರಿ ಉದ್ಯೋಗಿಗಳೂ ಮನುಷ್ಯರೇ, ಅವರಿಗೂ ನೂರೆಂಟು ರೀತಿಯ ಒತ್ತಡ, ಆರೋಗ್ಯ ಮತ್ತು ಕೌಟುಂಬಿಕ ಸಮಸ್ಯೆಗಳು ಇದ್ದೇ ಇರುತ್ತವೆ. ಇದೆಲ್ಲವನ್ನು ಇಂತಹ ಕಾರ್ಯಾಗಾರಗಳನ್ನು ಆಗಿಂದಾಗ್ಗೆ ಏರ್ಪಡಿಸುವ ಮೂಲಕ ಒಂದಿಷ್ಟಾದರೂ ತಿಳಿಗೊಳಿಸಲು ಸಾಧ್ಯ.

ಇದಿಷ್ಟು ಔದ್ಯೋಗಿಕ ಕ್ಷೇತ್ರಗಳ ಉದಾಹರಣೆಯಾದರೆ, ಹಿಂದೊಮ್ಮೆ ಶಾಸಕರಿಗೂ, ಸರಕಾರಿ ಸ್ವಾಮ್ಯದ ಬಾಲಬ್ರೂಯಿ ಕಟ್ಟಡದಲ್ಲಿ ಶಾಸಕರಿಗೆ, ಒತ್ತಡ ನಿಯಂತ್ರಣಕ್ಕೆ ಯೋಗ, ಪರಿಣತರಿಂದ ಸಮಾಲೋಚನೆ ನಡೆಸುವ ಶಿಬಿರಗಳನ್ನು ಏರ್ಪಡಿಸುವ ಬಗ್ಗೆ ವರದಿಯಾಗಿತ್ತು. ಇಂತಹ ವ್ಯವಸ್ಥೆ ಮಾಡುವ
ಮೂಲಕ ಜನ ಪ್ರತಿನಿಧಿಗಳು ಸಾರ್ವಜನಿಕರೊಂದಿಗೆ ಸಂವಹನ, ಸಮಾಧಾನದಿಂದ ವರ್ತಿಸಲು ಸಾಧ್ಯವಾಗುತ್ತದೆ ಎಂಬುದು ಇಂತಹದೊಂದು ಪ್ರಸ್ತಾವನೆಯ ಉದ್ದೇಶವಿರಬಹುದು. ಆದರೆ ಇದನ್ನು ಎಷ್ಟು ಮಂದಿ, ಎಷ್ಟು ಪರಿಣಾಮಕಾರಿಯಾಗಿ ಪಾಲಿಸುತ್ತಾರೆ ಎನ್ನುವುದು ನಂತರದ ಮಾತು.

ಶಾಲೆ ಕಾಲೇಜುಗಳಲ್ಲಿ ಹದಿಹರೆಯದವರ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ, ಓದಿನ ಬಗ್ಗೆ, ಮನೆಯ ವಾತಾವರಣ ಹಾಗೂ ಇನ್ನಿತರ ಒತ್ತಡಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುವಂತೆ ಸಾಮಾಜಿಕ ಕಾರ್ಯಾಗಾರ ಜತೆಗೆ ವೈಯಕ್ತಿಕ ಸಂವಹನ ನಡೆಸುವ ಅಗತ್ಯವಿದೆ. ಇದರಿಂದ ಚಿಕ್ಕ ಪುಟ್ಟ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಅಹಿತಕರ ಘಟನೆಗಳನ್ನು ತಡೆಗಟ್ಟಲು ಸಾಧ್ಯವಿದೆ. ಇಂತಹ ಕಾರ್ಯಾಗಾರಗಳಲ್ಲಿ ತಜ್ಞರ ಜೊತೆಗೆ ಆಯಾ
ವಿಭಾಗದಲ್ಲಿ ಸ್ವಂತ ಅನುಭವ ಇರುವವರನ್ನು ಉಪಯೋಗಿಸಿದರೆ ಹೆಚ್ಚು ಪರಿಣಾಮಕಾರಿಯಾದೀತು. ಉದಾ: ಗಂಭೀರ ಕಾಯಿಲೆಯ ರೋಗಿಗಳಿಗೆ, ಗುಣಮುಖರಾದವರ ಅನುಭವ, ಸರಕಾರಿ ನೌಕರರಿಗೆ ಆಯಾ ಇಲಾಖೆಗಳ ಅನುಭವವಿರುವ ನಿವೃತ್ತ ನೌಕರರು, ವಿದ್ಯಾರ್ಥಿಗಳಿಗೆ ಸಮಸ್ಯೆಗಳ ಅನುಭವ ಇರುವವರು, ಮಹಿಳಾ ಉದ್ಯೋಗಿಗಳು ಮತ್ತು ಹದಿಹರೆಯದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಆಯಾ ಕ್ಷೇತ್ರದ ಅನುಭವ ಇರುವವರನ್ನು, ಉದಾ ಬಾಣಂತನ ಸಹಾಯಕಿ ಮುಂತಾದವರನ್ನೂ ಸೇರಿಸಿಕೊಳ್ಳುವುದು ಹೆಚ್ಚು ಪರಿಣಾಮಕಾರಿ ಎನಿಸುತ್ತದೆ.

ದೇಹಾರೋಗ್ಯ ಸರಿದೂಗಿಸಲು ಎಡೆ ಜಿಮ್ ಮುಂತಾದವುಗಳು ಇರುವಂತೆ, ಮಾನಸಿಕ ಆರೋಗ್ಯದ ಸಮತೋಲನಕ್ಕೆ ಮಾನಸಿಕ ಜಿಮನಂತಹ ವ್ಯವಸ್ಥೆ, ಶಾಲಾ ಕಾಲೇಜುಗಳಲ್ಲಿ ಪೂರ್ಣಕಾಲಿಕ ತಜ್ಞ ಮನಃ ಶಾಸಜ್ಞರ ನೇಮಕ, ಜತೆಗೆ ನಿಯಮಿತವಾಗಿ ಕಾರ್ಯಾಗಾರಗಳನ್ನು, ತರಬೇತಿ ಶಿಬಿರಗಳನ್ನು ಏರ್ಪಡಿ ಸುವುದು ಇಂದಿನ ತುರ್ತು ಅಗತ್ಯವಾಗಿದೆ.

(ಲೇಖಕರು: ನಿವೃತ್ತ ಕಚೇರಿ ಅಧಿಕ್ಷಕ, ಆರೋಗ್ಯ ಇಲಾಖೆ ಮತ್ತು ಹವ್ಯಾಸಿ ಬರಹಗಾರ)

Leave a Reply

Your email address will not be published. Required fields are marked *