Friday, 13th December 2024

ಇದು ಇಬ್ಬನಿಗೆ ಬಲೆ ಬೀಸುವ ಕೆಲಸ

ವಿದೇಶವಾಸಿ

ಕಿರಣ್ ಉಪಾಧ್ಯಾಯ, ಬಹ್ರೈನ್‌

ಕಳೆದ ವಾರದ ಅಂಕಣದಲ್ಲಿ ನೀರಿನ ವಿಷಯ ಬರೆಯುವಾಗ ತುಂಬಿಸಿಕೊಂಡ ತೊಟ್ಟಿ ಪೂರ್ತಿ ಖಾಲಿಯಾಗಿರಲಿಲ್ಲ. ಬಾಕಿ
ಉಳಿದದ್ದನ್ನು ಈ ವಾರ ಹರಿಬಿಡುತ್ತಿದ್ದೇನೆ.

ಇಂದು ಸಂಪೂರ್ಣ ಖಾಲಿಯಾಗುತ್ತಾ? ಗೊತ್ತಿಲ್ಲ, ಭಾರ ಕಮ್ಮಿಯಾಗಿ ಸ್ವಲ್ಪ ಹಗುರ ಆಗಬಹುದು. ಏಕೆಂದರೆ, ಕಲೆ ಹಾಕಿದ ಮಾಹಿತಿ, ಭೂಮಿಯನ್ನು ಆವರಿಸಿಕೊಂಡ ಶೇಕಡಾ ಎಪ್ಪತ್ತರಷ್ಟು ನೀರಿನ ಒಂದು ಬಿಂದು ಮಾತ್ರ. ಆ ಒಂದು ಹನಿಗಾಗಿಯೇ ಇಂದು ಇಷ್ಟೆಲ್ಲ ಪರದಾಟ.

ನೀರಿನ ವಿಷಯವೇ ಹಾಗೆ, ತುಂಬಿಸಿಕೊಂಡಷ್ಟೂ ಹಿಡಿದಿಟ್ಟುಕೊಳ್ಳುವ ದೊಡ್ದ ಕೊಳ. ಆದರೆ ಮಿತಿ ಮೀರಿ ಬಳಸಿದರೆ ಅನಾಹುತ ಮಾತ್ರ ಖಂಡಿತ ತಪ್ಪಿದುದ್ದಲ್ಲ. ಮನುಷ್ಯನ ದೇಹದ ತಾಪಮಾನ ಕಾಪಾಡಲು ನೀರು ಎಷ್ಟು ಅವಶ್ಯಕವೋ, ಪರಿಸರದ ತಾಪಮಾನ ಕಾಪಾಡುವುದಕ್ಕೂ ನೀರು ಅಷ್ಟೇ ಅವಶ್ಯಕ.

ನಮಗಿರುವ ಜಲ ಸಂಪನ್ಮೂಲದಲ್ಲಿ ಶೇಕಡಾ ಎಪ್ಪತ್ತರಷ್ಟು ಕೃಷಿಗೆ, ಇಪ್ಪತ್ತರಷ್ಟು ಕಾರ್ಖಾನೆಗೆ ಉಳಿದ ಹತ್ತು ನಮ್ಮ ದಿನನಿತ್ಯದ ಬಳಕೆಗೆ ಉಪಯೋಗಿಸಲ್ಪಡುತ್ತದೆ. ಸಾಮಾನ್ಯ ಮನುಷ್ಯ ಪ್ರತಿನಿತ್ಯ ಸರಾಸರಿ ಒಂದು ನೂರ ಐವತ್ತು ಲೀಟರ್ ನೀರು ಉಪಯೋ ಗಿಸುತ್ತಾನೆ. ಅದರಲ್ಲಿ ಕುಡಿಯಲು ಬಳಸುವುದು ಸರಾಸರಿ ಒಂದುವರೆ ಲೀಟರ್ ಮಾತ್ರ.

ಆ ಒಂದು ಲೀಟರ್ ಕುಡಿಯುವ ನೀರಿಗೇ ತತ್ವಾರ, ಇನ್ನು ಉಳಿದದ್ದರ ಕಥೆ, ಹರೋಹರ. ಕುಡಿಯಲು ಯೋಗ್ಯವಲ್ಲದ ನೀರು ಕುಡಿದು ಉಂಟಾಗುವ ಅತಿಸಾರದಿಂದ ವಿಶ್ವದಾದ್ಯಂತ ಪ್ರತಿನಿತ್ಯ ಐದು ಸಾವಿರ ಮಕ್ಕಳು ಅಸುನೀಗುತ್ತಿದ್ದಾರೆ. ಇದು ಆಯ್ಲೆ ಪಯ್ಲೆ ಲೆಕ್ಕವಲ್ಲ, ಯುನಿಸೆಫ್ (UNICEF) ಅಂಕಿ ಅಂಶ. ಇದು ದುರಂತವಲ್ಲದೇ ಇನ್ನೇನು? ಸುಮ್ಮನೆ ಒಂದು ಸಣ್ಣ ಲೆಕ್ಕ ನೋಡಿ. ವಿಶ್ವದ 786 ಕೋಟಿ ಜನಸಂಖ್ಯೆಯಲ್ಲಿ ಪ್ರತಿಯೊಬ್ಬರೂ ಕುಡಿಯಲು ಒಂದುವರೆ ಲೀಟರ್ ಬಳಸಿದರೂ ಸಾವಿರದ ಇನ್ನೂರ ಐವತ್ತು ಕೋಟಿ ಲೀಟರ್ ನೀರು ಬೇಕು.

ನೂರ ಐವತ್ತು ಲೀಟರ್ ದಿನಬಳಕೆಗೆ ಉಪಯೋಗಿಸಿದರೆ, ಪ್ರತಿದಿನ ಒಂದೂ ಕಾಲು ಲಕ್ಷ ಕೋಟಿ ಲೀಟರ್! ಈಗ, ನಿತ್ಯ ಪ್ರತಿ ಯೊಬ್ಬರೂ ಹತ್ತು ಲೀಟರ್ ಉಳಿಸಿದರೂ, ದಿನಕ್ಕೆ, ವರ್ಷಕ್ಕೆ ಎಷ್ಟು ನೀರು ಉಳಿಸಿದಂತಾಯಿತು, ಲೆಕ್ಕ ಮಾಡಿ! ಇಂಥ ಭಯಾನಕ ಸನ್ನಿವೇಶದ ನಡುವೆ ಮರುಭೂಮಿಯಲ್ಲಿನ ಓಯಸಿಸ್‌ನಂತೆ ಸಣ್ಣ ಸಣ್ಣ ಭಗೀರಥನ ವಂಶಸ್ಥರು ಕಾಣ ಸಿಗುತ್ತಾರೆ ಎಂಬುದೇ ಸದ್ಯದ ಸಮಾಧಾನ.

ಆಫ್ರಿಕಾ ಖಂಡದ ಗ್ರಾಮೀಣ ಭಾಗದಲ್ಲಿ ಜನರು ತಮಗೆ ಸಿಗುವ ಸಮಯದ ಕಾಲು ಭಾಗವನ್ನು ನೀರು ಶೇಖರಿಸಲು ವ್ಯಯಿಸು ತ್ತಾರೆ. ಅದರಲ್ಲಿ ಮಹಿಳೆಯರು ಮತ್ತು ಮಕ್ಕಳ ಸಂಖ್ಯೆ ಹೆಚ್ಚು. ಮನೆಯಿಂದ ಹಲವು ಕಿಲೋ ಮೀಟರ್ ದೂರ ಹೋಗಿ ಇಪ್ಪತ್ತು ಲೀಟರ್ ನೀರು ತುಂಬಿಸಿದ ಬಕೆಟ್ ತಲೆಯ ಮೇಲೆ ಹೊತ್ತು ತರುವುದೆಂದರೆ ಎರಡರಿಂದ ಮೂರು ತಾಸಿನ ಕೆಲಸ. ತೀರಾ ಇತ್ತೀಚಿನವರೆಗೂ ಒಂದು ಬಕೆಟ್ ನೀರಿನಲ್ಲಿಯೇ ಅಡುಗೆ ಮಾಡುವುದರಿಂದ ಹಿಡಿದು ಸ್ನಾನ, ಶೌಚ, ಪಾತ್ರೆ, ಬಟ್ಟೆ ಒಗೆಯುವುದು ಇತ್ಯಾದಿ ನಿತ್ಯದ ಕೆಲಸ ಮುಗಿಸಬೇಕಾಗಿತ್ತು.

ಈಗಲೂ ಕೆಲವು ಪ್ರದೇಶಗಳಲ್ಲಿ ಅದೇ ಸ್ಥಿತಿಯಿದೆ. ನಮ್ಮ ದೇಶದಲ್ಲೂ ಕೆಲವು ಪ್ರದೇಶಗಳಲ್ಲಿ ಈ ಪರಿಸ್ಥಿತಿಯಿದೆ. ದೂರದಿಂದ
ತಲೆಯ ಮೇಲೆ ಭಾರ ಹೊತ್ತು ನಡೆಯುವುದರಿಂದ ಸ್ವಾಭಾವಿಕವಾಗಿಯೇ ಬೆನ್ನು ಮೂಳೆಯ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ಇದರಿಂದ ಕತ್ತು, ಬೆನ್ನು, ಸೊಂಟದ ಭಾಗದಲ್ಲಿ ಸಾಕಷ್ಟು ನೋವು ಅನುಭವಿಸುವುದರೊಂದಿಗೆ ವೃದ್ಧಾಪ್ಯವೂ ಬೇಗನೆ ಆವರಿಸಿ ಕೊಳ್ಳುತ್ತದೆ. ಇದಕ್ಕೆ ಸಣ್ಣ ಪ್ರಮಾಣದ ಪರಿಹಾರ ದೊರಕಿಸಿಕೊಟ್ಟದ್ದು ‘ಹಿಪ್ಪೊ ವಾಟರ್ ರೋಲರ್’. ಆಫ್ರಿಕಾದ ಗ್ರಾಮೀಣ ಪ್ರದೇಶದ ಜನರ ಬವಣೆ ನೋಡಲಾಗದೇ, ಪರಿಹಾರಕ್ಕೆ ಹೆಣಗಿದವರು ದಕ್ಷಿಣ ಆಫ್ರಿಕಾದ ಇಬ್ಬರು ಎಂಜಿನಿಯರ್‌ ಗಳಾದ ಪೆಟ್ಟಿ ಪೆಟ್ಜರ್ ಮತ್ತು ಜೋಹಾನ್ ಜೊಂಕರ್.

ಹಿಪ್ಪೊ ರೋಲರ್‌ನಲ್ಲಿ ಇರುವುದು ಕಡಿಮೆ ಸಾಂದ್ರತೆಯ ಪಾಲಿಥಿಲೀನ್ ಡ್ರಮ್ ಅಥವಾ ವೃತ್ತಾಕರದ ಟ್ಯಾಂಕ್ ಮತ್ತು ಉದ್ದದ ಸ್ಟೀಲ್ ಹಿಡಿಕೆ. ಡ್ರಮ್‌ನಲ್ಲಿ ನೀರು ತುಂಬಿಸಿ, ಅಡ್ಡವಾಗಿಸಿದರೆ ಅದೇ ಚಕ್ರವಾಗುತ್ತದೆ. ಅದರ ಎರಡು ಕಡೆಗಳಲ್ಲಿ ಹಿಡಿಕೆ ಸಿಕ್ಕಿಸಿ ತಳ್ಳಿಕೊಂಡು ಹೋಗಬಹುದಾದ ತಿರುಗುವ ಡ್ರಮ್ ಆಗುತ್ತದೆ. ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಬಳಸುವ ಸಣ್ಣ ಚಕ್ರದ ಕೈಬಂಡಿ ನೀವು ನೋಡಿರಬಹುದು. ಅದೇ ಸಿದ್ಧಾಂತದಲ್ಲಿ ತಯಾರಾದ ಸಾಧನ ಇದು. ಒಂದು ಸಲಕ್ಕೆ ಒಂದು ಡ್ರಮ್‌ನಲ್ಲಿ ತೊಂಬತ್ತು ಲೀಟರ್ ನೀರು ತುಂಬಿಸಿಕೊಂಡು ತರಬಹುದು. ನೀರು ತುಂಬಿಸಲು ಇರುವ ಸುಮಾರು ಐದು ಇಂಚಿನ ಬಾಯಿಯಿಂದ ತಿರುಗು ವಾಗ ನೀರು ಸ್ವಲ್ಪವೂ ಸೋರದಂತೆ ಅದರ ಮುಚ್ಚಳನ್ನು ವಿನ್ಯಾಸಗೊಳಿಸಲಾಗಿದೆ.

ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾರಿಂದ ಪ್ರಶಂಸೆ ಪಡೆದ ಹಿಪ್ಪೊ ರೋಲರ್ಸ್ ಕಳೆದ ಏಳು ವರ್ಷದಲ್ಲಿ ದಕ್ಷಿಣ ಆಫ್ರಿಕಾ, ಘಾನಾ, ನಮೀಬಿಯಾ ಇತ್ಯಾದಿ ದೇಶವೂ ಸೇರಿದಂತೆ ಆಫ್ರಿಕಾ ಖಂಡದ ಇಪ್ಪತ್ತು ದೇಶಗಳ ಸುಮಾರು ಐವತ್ತು ಸಾವಿರ ಕುಟುಂಬಗಳಿಗೆ ವರದಾನವಾಗಿದೆ. ಅಂದಾಜು ನೂರ ಇಪ್ಪತ್ತೈದು ಡಾಲರ್ ಬೆಲೆಬಾಳುವ ಈ ರೋಲರ್ ಗಳನ್ನು ಲಾಭರಹಿತ ಸಂಸ್ಥೆಗಳ ಸಹಾಯದಿಂದ ಜನರಿಗೆ ಉಚಿತವಾಗಿ ಒದಗಿಸಿಕೊಡಲಾಗುತ್ತಿದೆ. ಇದರ ಪ್ರಯೋಜನವನ್ನು ನಮ್ಮ ದೇಶದಲ್ಲೂ ಕೆಲವರು ಪಡೆದಿದ್ದಾರೆ.

ಕಚ್ಚಾ ರಸ್ತೆಯಲ್ಲೂ ಗಂಟೆಗೆ ಹದಿನೈದರಿಂದ ಇಪ್ಪತ್ತು ಕಿಲೋಮೀಟರ್ ವೇಗದಲ್ಲಿ ಉರುಳಿಸಿಕೊಂಡು ಹೋಗುವಂತೆ ಇದನ್ನು
ರಚಿಸಲಾಗಿದೆ. ‘ವಾಟರ್‌ಕೋನ್’ (Watercone) ಹೆಸರಿನ ಜರ್ಮನಿಯ ಒಂದು ಸಂಸ್ಥೆಯಿದೆ. ಈ ಸಂಸ್ಥೆ ಉಪ್ಪು ನೀರನ್ನು ಕುಡಿ ಯಲು ಯೋಗ್ಯವಾಗಿಸುವ ಸಣ್ಣ ಸಾಧನವನ್ನು ತಯಾರಿಸುತ್ತದೆ. ತೀರಾ ಸರಳ ತಂತ್ರಜ್ಞಾನದ ಈ ಸಾಧನದಲ್ಲಿರುವುದು, ತ್ಯಾಜ್ಯ ವಸ್ತುವಿನ ಮರುಬಳಕೆಯಿಂದ ತಯಾರಿಸಿದ, 80 ಸೆಂಟಿಮೀಟರ್ ವ್ಯಾಸದ, ಕಪ್ಪು ಬಣ್ಣದ ಒಂದು ತಟ್ಟೆ.

ಇನ್ನೊಂದು, ಥರ್ಮೋ ಫಾರ್ಮಬಲ್ ಪಿಇಟಿ (PET) ಯಿಂದ ತಯಾರಿಸಿದ ಶಂಕುವಿನ ಆಕಾರದ, ಬುಡದಂದು ಸಣ್ಣ ಟ್ರೇ, ತುದಿಯಂದು ಸಣ್ಣ ಮುಚ್ಚಳ ಹೊಂದಿದ ಪಾರದರ್ಶಕ ಮುಚ್ಚಿಗೆ. ಕೆಳಗಿನ ತಟ್ಟೆಯಲ್ಲಿ ನೀರು ತುಂಬಿಸಿ, ಮೇಲೆ ಮುಚ್ಚಿಗೆ
ಇಡುವುದಷ್ಟೇ ಕೆಲಸ. ಕಪ್ಪು ಬಣ್ಣದ ತಟ್ಟೆ ಸೂರ್ಯನ ಶಾಖ ಹೀರಿ ನೀರು ಆವಿಯಾಗಲು ಸಹಕರಿಸುತ್ತದೆ. ಆವಿಯಾದ ನೀರು ಮುಚ್ಚಿಗೆಯ ಒಳಗೋಡೆಯಲ್ಲಿ ಹನಿಗಳ ರೂಪದಲ್ಲಿ ಘನೀಕರಣಗೊಂಡು, ಕ್ರಮೇಣ ಕೆಳಗಿನ ಟ್ರೇ ಯಲ್ಲಿ ಸಂಗ್ರಹಗೊಳ್ಳುತ್ತದೆ.

ಮುಚ್ಚಳ ತೆಗೆದು, ಮುಚ್ಚಿಗೆಯನ್ನು ಬುಡಮೇಲಾಗಿಸಿ ಪ್ರತಿನಿತ್ಯ ಒಂದರಿಂದ ಒಂದುವರೆ ಲೀಟರ್ ಕುಡಿಯುವ ನೀರನ್ನು ತಯಾರಿಸಿಕೊಳ್ಳಬಹುದಾದ, ಐದು ವರ್ಷ ಬಾಳಿಕೆ ಬರುವ, ಸಾಧನ ಇದು. ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಇದಕ್ಕೆ ವಿದ್ಯುತ್ತು, ಬ್ಯಾಟರಿ, ಫಿಲ್ಟರ್ ಇತ್ಯಾದಿ ಯಾವುದರ ಅವಶ್ಯಕತೆಯೂ ಇಲ್ಲ. ಹಣ್ಣು, ಮೀನು ಒಣಗಿಸಲೂ ಇದನ್ನು ಉಪಯೋಗಿ ಸಬಹುದು ಎಂಬುದು ಇನ್ನೊಂದು ಸಂಗತಿ. ಅಂದಹಾಗೆ, ಈ ಸಾಧನ ಕಂಡು ಹಿಡಿದವರು, ಸಂಸ್ಥೆಯನ್ನು ಸ್ಥಾಪಿಸಿದವರು ಸ್ಟೀಫನ್ ಅಗಸ್ಟಿನ್.

ಎಲ್ಲಕ್ಕಿಂತ ಕುತೂಹಲ ಕೆರಳಿಸುವ ವಿಷಯವೆಂದರೆ, ಇಬ್ಬನಿ ಸೆರೆಹಿಡಿಯುವ ಬಲೆ. ಮಂಜು ಅಥವಾ ಇಬ್ಬನಿ ಎಂದರೆ ಕವಿಗಳಿಗೆ ಒಂದು ರೀತಿಯ ಪುಳಕ. ಅದೇ ಇಬ್ಬನಿ ಕೇವಲ ಕಾವ್ಯಕ್ಕಷ್ಟೇ ಅಲ್ಲ, ಎಷ್ಟೋ ಜನರಿಗೆ ಜೀವಧಾತುವೂ ಹೌದು. ಇಬ್ಬನಿಯ
ಹಿಡಿದಿಟ್ಟುಕೊಂಡು ಶುದ್ಧನೀರನ್ನಾಗಿ ಪರಿವರ್ತಿಸಿಕೊಳ್ಳುವ ವಿಧಾನ ಇಂದು ನಿನ್ನೆಯದಲ್ಲ. ಹದಿಮೂರನೆಯ ಶತಮಾನದಿಂದ ಹದಿನಾರನೆಯ ಶತಮಾನದವರೆಗೆ ಅಮೆರಿಕದಲ್ಲಿದ್ದ ಇಂಕಾನ್ ಸಾಮ್ರಾಜ್ಯದಲ್ಲಿ ಇಬ್ಬನಿಯಿಂದ ನೀರು ಹಿಡಿದಿಟ್ಟುಕೊಳ್ಳುವ ಕಾರ್ಯ ಮಾಡುತ್ತಿದ್ದರಂತೆ.

ಕೆಲವು ಶುಷ್ಕ ಪ್ರದೇಶದಲ್ಲಿ ಇಬ್ಬನಿಯ ನೀರೇ ಕೃಷಿಗೆ ಮೂಲಾಧಾರವಾಗಿತ್ತಂತೆ. ಆ ಕಾಲದಲ್ಲಿ ಇಬ್ಬನಿಯ ಹನಿಗಳನ್ನು ಸಂಗ್ರಹಿ ಸಲು ಮರಗಳ ಕೆಳಗೆ ಅಗಲ ಬಾಯಿಯ ಪಾತ್ರೆಗಳನ್ನಿಟ್ಟು ಕುಡಿಯುವ ನೀರು ಸಂಗ್ರಹಿಸುತ್ತಿದ್ದರಂತೆ ಎಂದರೆ ಇದು ಎಷ್ಟು ಪ್ರಾಚೀನ ಪದ್ಧತಿ ಎಂಬುದರ ಅರಿವಾಗುತ್ತದೆ. ಇಂಗ್ಲೆಂಡಿನ ದಕ್ಷಿಣ ಭಾಗದಲ್ಲಿರುವ ಡ್ಯೂ ಪಾಂಡ್ ಅಥವಾ ಇಬ್ಬನಿ ಕೊಳಗಳು, ಉಕ್ರೇನ್ ದೇಶದಲ್ಲಿರುವ ಪುರಾತನ ಕಲ್ಲಿನ ರಾಶಿಗಳು ಇಬ್ಬನಿ ಹಿಡಿದಿಟ್ಟುಕೊಳ್ಳಲು ಮನುಷ್ಯ ಮಾಡಿದ ಪ್ರಯತ್ನಗಳ ಕಥೆಯನ್ನು ಹೇಳುತ್ತವೆ.

ಹಳೆಯ ಕಾಲದ ಗುಡ್ಡದ ಮೇಲಿರುವ ಬಹುತೇಕ ಸಣ್ಣ ಕೊಳಗಳೆಲ್ಲ ಇದೇ ಕಾರ್ಯಕ್ಕೆ ನಿರ್ಮಿತವಾದವುಗಳು. ಅಂದು ಆರಂಭ ವಾದ ಇಬ್ಬನಿಯ ಸೆರೆ ಇಂದಿಗೂ ಮುಂದುವರಿದಿದೆ. ಆಧುನಿಕವಾಗಿ ಇದನ್ನು ಹಿಡಿಯುವ ಮೊದಲ ಪ್ರಯತ್ನ ಆರಂಭವಾದದ್ದು 1970ರ ದಶಕದಲ್ಲಿ. ದಕ್ಷಿಣ ಆಫ್ರಿಕಾದ ವಾಯುಪಡೆಯ ನೆಲೆಯಲ್ಲಿ ಇದನ್ನು ಪ್ರಯೋಗ ರೂಪದಲ್ಲಿ ಆರಂಭಿಸಲಾಯಿತು. ನೂರು ಚದರ ಮೀಟರ್ ವಿಸ್ತಾರದ ಎರಡು ಬೇಲಿಯ ಮೇಲೆ ಬಿದ್ದ ಮಂಜಿನ ಹನಿಗಳಿಂದ ಹನ್ನೊಂದು ಲೀಟರ್ ನೀರು ಸಂಗ್ರಹಿಸಲಾಗಿತ್ತು.

ಮುಂದುವರಿದು, ತೊಂಬತ್ತರ ದಶಕದಲ್ಲಿ ಇಟಲಿಯಲ್ಲಿ ಒಂದು ಚದರ ಮೀಟರ್ ಬೇಲಿಯಿಂದ ಅರ್ಧ ಲೀಟರ್ ನೀರು
ಸಂಗ್ರಹಿಸಲಾಯಿತು. ಈ ದಿನಗಳಲ್ಲಿ ಇಬ್ಬನಿ ಹಿಡಿಯಲು ಗುಡ್ದದ ಮೇಲೆ ಬಲೆ ಹಾಕುತ್ತಿದ್ದಾರೆ. ಬಿದಿರು ಅಥವಾ ಸ್ಟೀಲ್‌ನ ಕಂಬಕ್ಕೆ ಲಂಬವಾಗಿ ಸಣ್ಣ ಜಾಲರಿಯ ಬಲೆ ಕಟ್ಟುತ್ತಾರೆ. ಕೆಲವೊಮ್ಮೆ ಬಲೆಯನ್ನು ಕಮಾನಿನ ಆಕೃತಿಯಲ್ಲಿ ಕಟ್ಟುವುದೂ ಇದೆ. ತೀರಾ ಹಿಂದುಳಿದ ಪ್ರದೇಶದಲ್ಲಿ ಆಧುನಿಕ ಬಲೆಗೆ ಖರ್ಚು ಮಾಡುವಷ್ಟು ಹಣ ಇಲ್ಲದಿದ್ದಲ್ಲಿ ದಪ್ಪ ಬಟ್ಟೆ ಕಟ್ಟುವುದೂ ಇದೆ.

ಜಾಲರಿಯ ಬಲೆಯಲ್ಲಿ ನೀರಿನ ಹನಿಗಳ ಘನೀಕರಣ ಹೆಚ್ಚಾಗಿರುತ್ತದೆ. ಜಾಲಿಯ ರಂಧ್ರ ಸಣ್ಣದಾದಷ್ಟೂ ಅದರ ನೀರು ಹಿಡಿಯುವ ಸಾಮರ್ಥ್ಯ ಹೆಚ್ಚುತ್ತದೆ. ಘನೀಕರಣ ಹೆಚ್ಚಿಸಲು ರಾಸಾಯನಿಕಗಳ ಲೇಪನ ಮಾಡುವುದೂ ಇದೆ. ಹೈಡ್ರೋಫಿಲಿಕ್ ಮತ್ತು ಹೈಡ್ರೋಫ್ಯಾಬಿಕ್ ಲೇಪನಗಳು ಘನೀಕರಣ ಹೆಚ್ಚಿಸಿ, ತನ್ಮೂಲಕ ಹೆಚ್ಚು ನೀರು ಸಂಗ್ರಹವಾಗಲು ಸಹಕರಿಸುತ್ತವೆ. ಒಂದು ಘನ ಮೀಟರ್ ಇಬ್ಬನಿಯಲ್ಲಿ ಹೆಚ್ಚೆಂದರೆ ಅರ್ಧ ಗ್ರಾಂ ನೀರು ಇರುತ್ತದೆ. ತೀರಾ ಚಿಕ್ಕದಾದ, ಒಂದರಿಂದ ನಲವತ್ತು ಮೈಕ್ರೋ ಮೀಟರ್ ವ್ಯಾಸದ ನೀರಿನ ಹನಿಗಳು ಗಾಳಿಯಲ್ಲಿ ತೇಲಿ ಇಬ್ಬನಿಯ ರೂಪದಲ್ಲಿ ಬರುತ್ತವೆ.

ನೀರ ಹನಿಗಳನ್ನು ಹೊತ್ತ ಗಾಳಿ ಜಾಲಿಯನ್ನು ಸವರಿಕೊಂಡು ಮುಂದೆ ಹೋಗುವಾಗ ಅದರಲ್ಲಿನ ಹನಿಗಳನ್ನು ಜಾಲಿ
ಹಿಡಿದಿಟ್ಟುಕೊಳ್ಳುತ್ತದೆ. ಈ ಇಬ್ಬನಿಯ ಬಲೆಗಳು ಗಾಳಿಯಲ್ಲಿನ ಶೇಕಡಾ ಹತ್ತರಷ್ಟು ತೇವಾಂಶವನ್ನು ಸೆರೆಹಿಡಿಯುತ್ತವೆ. ಸಾಮಾನ್ಯ ವಾಗಿ ಎರಡು ಬಲೆಯನ್ನು ಅಕ್ಕಪಕ್ಕದಲ್ಲಿ ಅಳವಡಿಸಿರುತ್ತಾರೆ. ಕಾರಣ ಸರಳ, ಬಲೆಗಳು ಒಂದಕ್ಕೊಂದು ತಾಗಿದಾಗ ಉಂಟಾಗುವ ಘರ್ಷಣೆಯಿಂದ ಘನೀಕೃತಗೊಂಡ ನೀರು ಬೇಗನೆ ಕೆಳಗೆ ಇಳಿಯುತ್ತದೆ. ಜಾಲಿಯ ಕೆಳಗೆ ಅಳವಡಿಸಿತುವ ತೊಟ್ಟಿಯಲ್ಲಿ ಶುದ್ಧ ನೀರು ಸಂಗ್ರಹವಾಗುತ್ತದೆ. ಹೀಗೆ ಕೊಯ್ಲು ಮಾಡಿದ ನೀರು ಅಂತರ್ಜಲಕ್ಕಿಂತಲೂ ಶುದ್ಧ ಮತ್ತು ಸುರಕ್ಷಿತ. ಇದರ ನಿರ್ವಹಣೆ ಸುಲಭ, ಸೋವಿ.

ವಿಶ್ವದಾದ್ಯಂತ ಇಂದು ಇಪ್ಪತ್ತೈದು ದೇಶದ ಹಳ್ಳಿಗಳು ಇದರ ಲಾಭ ಪಡೆದುಕೊಳ್ಳುತ್ತಿವೆ. ಇಂಟರ್‌ನ್ಯಾಷನಲ್ ಆರ್ಗನೈಸೇಶನ್ ಫಾರ್ ಡ್ಯೂ ಯುಟಿಲೈಸೇಶನ್ ಎಂಬ ಸಂಸ್ಥೆ ಇಬ್ಬನಿಯಿಂದ ನೀರು ಪಡೆಯುವ ಮಹತ್ತರ ಕಾರ್ಯ ನಿರ್ವಹಿಸುತ್ತಿದೆ. ಯೆಮನ್
ಮತ್ತು ಚಿಲಿ ದೇಶಗಳಲ್ಲಿ ಕೆಲವು ಯಶಸ್ವಿ ಕಾರ್ಯಾಚರಣೆಯ ನಂತರ ಭವಿಷ್ಯದಲ್ಲಿ ಗ್ವಾಂಟೆಮಾಲಾ, ಹೈಟಿ, ನೇಪಾಳದಂತಹ ದೇಶಗಳಲ್ಲಿ ಈ ಸೌಲಭ್ಯ ಒದಗಿಸಲು ಕಾರ್ಯಪ್ರವೃತ್ತವಾಗಿದೆ.

ಇಂದು ವಿಶ್ವದ ಅತಿ ದೊಡ್ದ ಇಬ್ಬನಿಯ ಬಲೆ ಇರುವುದು ಮೊರೊಕ್ಕೊ ದೇಶದ ದರ್ ಸಿ ಹಮದ್ ಗುಡ್ಡಗಾಡು ಪ್ರದೇಶದಲ್ಲಿ. ಒಟ್ಟೂ ಸುಮಾರು 900 ಚದರ ಮೀಟರ್ ಹರಡಿಕೊಂಡಿರುವ ಬಲೆ ಪ್ರತಿ ಚದರ ಮೀಟರ್‌ಗೆ ಇಪ್ಪತ್ತೆರಡು ಲೀಟರ್‌ನಂತೆ ಪ್ರತಿ ದಿನ ಸುಮಾರು ಇಪ್ಪತ್ತು ಸಾವಿರ ಲೀಟರ್ ನೀರು ಒದಗಿಸಿಕೊಡುತ್ತಿದೆ. ಆಸು ಪಾಸಿನ ಸುಮಾರು ಹದಿನೈದು ಗ್ರಾಮಗಳು ಇದರ ಪ್ರಯೋಜನ ಪಡೆದುಕೊಳ್ಳುತ್ತಿವೆ.

ಇಂದು ಸೌರಶಕ್ತಿಯಿಂದ ನೀರನ್ನು ಸಂಸ್ಕರಿಸುವ, ಶುದ್ಧೀಕರಿಸುವ, ಗಾಳಿಯಿಂದ ನೀರು ಉತ್ಪಾದಿಸುವ ಹತ್ತು ಹಲವು ಉಪಕರಣ ಗಳು ಮಾರುಕಟ್ಟೆಗೆ ಬಂದಿವೆ. ಗಾಳಿಯಿಂದ ನೀರು ತಯಾರಿಸುವ, ನಾಲ್ಕು ನೂರರಿಂದ ಎರಡು ಸಾವಿರ ಡಾಲರ್ ಮೌಲ್ಯದ ಚಿಕ್ಕ ಚಿಕ್ಕ ಯಂತ್ರಗಳು ಅಮೇಜಾನ್‌ನಲ್ಲಿಯೇ ಲಭ್ಯವಿದೆ.

ಅನೇಕ ಸಂಸ್ಥೆಗಳು ಜನರಿಗೆ ನೀರು ಒದಗಿಸಿಕೊಡುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ. ನೀರು ತಯಾರಿಸಲು ದುಡ್ಡು ಕೊಟ್ಟು ಯಂತ್ರವನ್ನು ಖರೀದಿಸುವ ದುಃಸ್ಥಿತಿ ನಮಗೆ ಬಂದಿದೆಯೆಂದರೆ ಯಾರನ್ನು ಶಪಿಸೋಣ? ಕಾರಣ ನಾವೇ. ನಮ್ಮನ್ನು
ನಾವೇ ಶಪಿಸಿಕೊಳ್ಳಬೇಕು. ಪರಿಸ್ಥಿತಿ ಹೀಗೇ ಮುಂದುವರಿದರೆ ಮುಂದಿನ ಒಂದು ದಶಕದಲ್ಲಿ ಭೂಮಿಯ ಮೇಲಿರುವ ಅರ್ಧ ದಷ್ಟು ಜನ ಕುಡಿಯುವ ಶುದ್ಧ ನೀರಿಗೆ ಪರಿತಪಿಸಬೇಕಾಗುತ್ತದಂತೆ.

ಇದೇ ನಮ್ಮ ಸಾಧನೆಯಾ? ಒಂದು ಮಾತು ನೆನಪಿರಲಿ, ನಾವು ಎಷ್ಟೇ ನೀರು ಉಳಿಸುತ್ತಿದ್ದೇವೆ ಎಂದು ಅನಿಸಿದರೂ, ಇನ್ನೂ ಒಂದಷ್ಟು ನೀರಿನ ಹನಿ ಉಳಿಸಲು ಅವಕಾಶ ಇದ್ದೇ ಇದೆ. ದಾರಿ ನಾವೇ ಹುಡುಕಿಕೊಳ್ಳಬೇಕು.