Wednesday, 11th December 2024

ವಿಶ್ವಗುರು ಪಟ್ಟದತ್ತ ಇಟ್ಟ ಪುಟ್ಟ ಹೆಜ್ಜೆ

ವಿದೇಶವಾಸಿ

dhyapaa@gmail.com

ವಿದೇಶದ ಬ್ಯಾಂಕ್ ಒಂದು ಭಾರತದ ಬ್ಯಾಂಕ್‌ನಲ್ಲಿ ತನ್ನ ಖಾತೆ ತೆರೆಯಬಹುದು. ಆ ದೇಶದ ವ್ಯಕ್ತಿ ಭಾರತದಿಂದ ಏನಾದರೂ ಕೊಳ್ಳಬೇಕೆಂದರೆ, ಡಾಲರ್ ವ್ಯವಹಾರ ತಪ್ಪಿಸಿ, ನೇರವಾಗಿ ಭಾರತದ ರುಪಾಯಿಯಲ್ಲಿ ಹಣ ವರ್ಗಾಯಿಸಬಹುದು. ಭಾರತೀಯರೂ ಆ ದೇಶದಿಂದ ಏನಾದರೂ ಕೊಳ್ಳಬೇಕಾದರೆ ರುಪಾಯಿಯ ಹಣ ಜಮಾ ಮಾಡಬಹುದು.

‘ಅತಿ ಶೀಘ್ರದಲ್ಲಿ ಭಾರತ ವಿಶ್ವಗುರು ಆಗಲಿದೆ’, ‘ವಿಶ್ವಗುರು ಆಗುವತ್ತ ಭಾರತ’, ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಸುದ್ದಿ ನಾವು ನೀವೆಲ್ಲ ಕೇಳುತ್ತಿದ್ದೇವೆ, ನೋಡು ತ್ತಿದ್ದೇವೆ. ಹಾಗೇನಾದರೂ ಆದರೆ ಅದಕ್ಕಿಂತ ಹೆಚ್ಚಿನ ಖುಷಿ ಇನ್ನೇನು ಬೇಕು? ಅದು ನಿಜವಾಗಿಯೂ ಹೌದೇ ಎಂದು ಹುಡುಕುತ್ತ ಹೊರಟರೆ ನಿರಾಸೆಯಾಗುತ್ತಿತ್ತು. ವಿಶ್ವಗುರು ಆಗುವುದಕ್ಕೆ ಬೇಕಾದ ಅರ್ಹತೆಗಳೇನು? ಅದು ಭಾರತಕ್ಕಿದೆಯೇ?ಇದುವರೆಗಿನ ಭಾರತದ ಬಂಡವಾಳ ಅಂತ ಏನಾದರೂ ಇದ್ದರೆ, ಅಧ್ಯಾತ್ಮ, ಯೋಗ, ಸಂಸ್ಕೃತಿ, ಪರಂಪರೆ ಇತ್ಯಾದಿ, ಇತ್ಯಾದಿ.

ಭಾರತ ವಿಶ್ವಕ್ಕೆ ಭರಪೂರು ನೀಡಬಹುದಾದದ್ದೂ ಅದನ್ನೇ. ಅದೊಂದರಿಂದಲೇ ಭಾರತ ವಿಶ್ವಗುರು ಆಗುವುದಕ್ಕೆ ಸಾಧ್ಯವೇ ಎಂದರೆ, ಖಂಡಿತಾ ಇಲ್ಲ. ಹಾಗೇನಾದರೂ ಇದ್ದರೆ ಭಾರತ ಈಗಾಗಲೇ ವಿಶ್ವಗುರು ಆಗಬೇಕಿತ್ತು. ಇಂದಿನ ಕಾಲಘಟ್ಟದಲ್ಲಿ ವಿಶ್ವಗುರು ಎಂದು ಕರೆಸಿಕೊಳ್ಳುವುದಕ್ಕೆ ಬೇರೆಯದೇ ಅರ್ಹತೆ, ಯೋಗ್ಯತೆ ಬೇಕು. ಒಂದು ಕಾಲದಲ್ಲಿ ಒಂದು ದೇಶ ಅಥವಾ ರಾಜ್ಯದ ತಾಕತ್ತನ್ನು ಸೇನಾಬಲದಿಂದ, ಅದರಲ್ಲಿರುವ ಸೈನಿಕರು, ಆನೆ, ಒಂಟೆ, ಕುದುರೆಗಳ ಲೆಕ್ಕದಿಂದ ತಿಳಿಯುತ್ತಿದ್ದರಂತೆ. ಶ್ರೀಮಂತಿಕೆಯನ್ನು ರಾಜ್ಯದಲ್ಲಿರುವ ಗೋವುಗಳ ಸಂಖ್ಯೆಯಿಂದ ಅಳೆಯುತ್ತಿದ್ದರಂತೆ.

ಆಗಿನ ಕಾಲದಲ್ಲಿ ಆಸ್ತಿ, ಶ್ರೀಮಂತಿಕೆಯ ಪಟ್ಟಿ ಕೊಡಲು ‘ಫೋರ್ಬ್ಸ್’ ನಂತಹ ಸಂಸ್ಥೆಗಳು ಇರಲಿಲ್ಲವಲ್ಲ! ಬಿಡಿ, ಈಗ ಒಂದು ದೇಶದ ಸಾಮರ್ಥ್ಯ ಅಳೆಯಲು ಮಾಪನ
ಯಾವುದು? ಸೇನೆ ಎನ್ನುವುದು ಸರಿಯಾದ ಉತ್ತರವಾಗಲಾರದು. ಏಕೆಂದರೆ ಯಾವ ದೇಶದ ಸೇನೆಯಲ್ಲಿ ಎಷ್ಟು ಬಲವಿದೆ ಎನ್ನುವುದನ್ನು ಹೊಡೆದಾಡಿಯೇ ನೋಡಬೇ ಕಾದೀತು. ಈ ಹಿಂದೆ ನಡೆದ ಎರಡು ವಿಶ್ವಯುದ್ಧಗಳು ಇದಕ್ಕೆ ಸಾಕ್ಷಿ. ಒಂದು ವಿಷಯ ನೆನಪಿರಲಿ, ಈಗ ಯಾವ ದೇಶ ದಲ್ಲಿ ಎಷ್ಟು ಸೈನಿಕರಿದ್ದಾರೆ, ಶಸ್ತ್ರಾಸ್ತ್ರಗಳಿವೆ ಎನ್ನು
ವುದು ಮಾನದಂಡ ಆಗಲಾರದು, ಅವು ಯಾವ ಪ್ರಮಾಣದಲ್ಲಿ ಕೆಲಸ ಮಾಡುತ್ತವೆ ಎನ್ನುವುದು ಪ್ರಮುಖವಾಗುತ್ತದೆ. ಆದ್ದರಿಂದ ಈ ಕಾಲದಲ್ಲಿ ಒಂದು ದೇಶ ಬಲಾಢ್ಯ ಎಂದೆನಿಸಿಕೊಳ್ಳುವುದು ಅಲ್ಲಿಯ ಹಣ ಅಥವಾ ‘ಕರೆನ್ಸಿ’ಯಿಂದ. ಸದ್ಯ ಅಮೆರಿಕ ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಳ್ಳುವುದಕ್ಕೆ ಕಾರಣ ಅಲ್ಲಿಯ ‘ಡಾಲರ್’ ಹೊರತು
ಸೇನೆಯಲ್ಲ.

ಅಮೆರಿಕವನ್ನು ಮೀರಿಸಿ ಭಾರತವೇ ಆಗಲಿ, ಇನ್ಯಾವ ದೇಶವೇ ಆಗಲಿ, ದೊಡ್ಡಣ್ಣನ ಸ್ಥಾನಕ್ಕೆ ಏರಬೇಕು, ವಿಶ್ವಗುರು ಎಂದೆನಿಸಿಕೊಳ್ಳಬೇಕು ಎಂದರೆ ಸದ್ಯ ಚಾಲ್ತಿಯಲ್ಲಿರುವ ಡಾಲರ್‌ನ್ನು ಮೀರಿಸಬೇಕು, ವಿದೇಶಿ ಮೀಸಲು ಮೊತ್ತವನ್ನು ಹೆಚ್ಚಿಸಿಕೊಳ್ಳಬೇಕು, ವಗೈರೆ, ವಗೈರೆ. ಅದರ ಜತೆಗೆ, ಅಥವಾ ನಂತರವೇ ಉಳಿದ ಸಂಗತಿಗಳು. ಹಾಗಾ
ದರೆ ಭಾರತ ವಿಶ್ವಗುರು ಆಗುವುದು ಯಾವಾಗ? ಇದಕ್ಕೆ ನಿರ್ದಿಷ್ಟ ಉತ್ತರ ಸಿಗದಿದ್ದರೂ, ಆ ದಿಕ್ಕಿನಲ್ಲಿ ಒಂದು ಆಶಾಕಿರಣ ಮೂಡಿರುವುದಂತೂ ಹೌದು. ಇಂದು ವಿಶ್ವದಾದ್ಯಂತ ಹೆಚ್ಚಿನ ವ್ಯಾಪಾರ ನಡೆಯುತ್ತಿರುವುದು ಸ್ವಿಫ್ಟ್(Society of Worlwide Interbank Financial Telecommunication) ಮುಖಾಂತರ ಎನ್ನುವುದು ಎಲ್ಲರೂ ತಿಳಿದ ವಿಚಾರ. ೧೯೭೩ ರಲ್ಲಿ ಕಾರ್ಯಾರಂಭ ಮಾಡಿದಾಗಿನಿಂದ ಇಲ್ಲಿಯವರೆಗೆ ಬಹುತೇಕ ಅಂತಾರಾಷ್ಟ್ರೀಯ ವ್ಯವಹಾರಗಳು ಸ್ವಿ- ಮೂಲಕವೇ ನಡೆಯುತ್ತಿವೆ.

ಇಂದು ವಿಶ್ವದಾದ್ಯಂತ ಹನ್ನೊಂದು ಸಾವಿರ ಬ್ಯಾಂಕ್‌ಗಳು ಸ್ವಿಫ್ಟ್ ವ್ಯವಸ್ಥೆಗೆ ತಮ್ಮನ್ನು ಅಳವಡಿಸಿಕೊಂಡಿವೆ. ಈ ಮೂಲಕ ಪ್ರತಿನಿತ್ಯ ಒಂದು ಟ್ರಿಲಿಯನ್ ಡಾಲರ್ ವಹಿವಾಟು ನಡೆಯುತ್ತದೆ. ದೇಶದ ಒಳಗಾದರೆ ಖರೀದಿಸುವವ ಮಾರುವವನ ಬಳಿ ಹೋಗಿ ದುಡ್ಡು ಕೊಟ್ಟು ತನಗೆ ಬೇಕಾದದ್ದನ್ನು ಖರೀದಿಸಬಹುದು. ಆದರೆ ವಿದೇಶದಿಂದ ಏನನ್ನಾದರೂ ಖರೀದಿಸಬೇಕೆಂದರೆ ಇದು ಲಾಗೂ ಆಗುವುದಿಲ್ಲ. ಸದ್ಯ ಅದಕ್ಕಿರುವ ಏಕೈಕ ಮಾರ್ಗ ಬ್ಯಾಂಕ್ ಮತ್ತು ಸ್ವಿಫ್ಟ್. ಈ ಪದ್ಧತಿ ಹೇಗೆ ಕೆಲಸಮಾಡುತ್ತದೆ ಎಂದು ತಿಳಿದು ಮುಂದು ವರಿಯೋಣ.

ಭಾರತದ ಒಬ್ಬ ವ್ಯಾಪಾರಿ ದುಬೈನಿಂದ ಒಂದು ಕೋಟಿ ರುಪಾಯಿ ಮೌಲ್ಯದ ಖರ್ಜೂರ ಖರೀದಿಸಬೇಕು ಎಂದುಕೊಳ್ಳಿ. ಆತ ತನ್ನ ಖಾತೆಯಿಂದ ದುಬೈ ವ್ಯಾಪಾರಿಯ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುವಂತೆ ತನ್ನ ಬ್ಯಾಂಕನ್ನು ಕೋರಿಕೊಳ್ಳುತ್ತಾನೆ. ಸದ್ಯದ ಪರಿಸ್ಥಿತಿಯಲ್ಲಿ, ಭಾರತದಲ್ಲಿರುವ ಆ ಬ್ಯಾಂಕ್ ದುಬೈನ ಬ್ಯಾಂಕಿಗೆ ನೇರವಾಗಿ ಹಣ ವರ್ಗಾವಣೆ ಮಾಡುವಂತಿಲ್ಲ. ಆತ ಖಾತೆ ಹೊಂದಿದ ಬ್ಯಾಂಕ್ ಅಮೆರಿಕದ ಯಾವುದಾದರೊಂದು ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದು, ಆ ಬ್ಯಾಂಕಿಗೆ ಸೂಚನೆ ನೀಡುತ್ತದೆ. ಅದೇ ರೀತಿ ಖರ್ಜೂರ ಮಾರುವವನ ಖಾತೆ ಹೊಂದಿದ ದುಬೈನ ಬ್ಯಾಂಕ್ ಕೂಡ ಅಮೆರಿಕದ ಒಂದು ಬ್ಯಾಂಕ್‌ನಲ್ಲಿ ಖಾತೆ ಹೊಂದಿರುತ್ತದೆ.

ಅದು ಭಾರತದ ಬ್ಯಾಂಕ್ ಖಾತೆ ಹೊಂದಿರುವ ಬ್ಯಾಂಕ್ ಆಗಿರದೇ, ಬೇರೆಯದ್ದೇ ಇರಲಿಕ್ಕೂ ಸಾಕು. ಆಗ ಭಾರತದ ಬ್ಯಾಂಕ್‌ನ ಖಾತೆ ಹೊಂದಿರುವ ಅಮೆರಿಕದ ಬ್ಯಾಂಕ್ ದುಬೈ ಬ್ಯಾಂಕ್‌ನ ಖಾತೆ ಹೊಂದಿರುವ ಇನ್ನೊಂದು ಅಮೆರಿಕದ ಬ್ಯಾಂಕ್‌ಗೆ ಸಂದೇಶ ರವಾನಿಸುತ್ತದೆ. ಆ ಬ್ಯಾಂಕ್ ದುಬೈನ ಬ್ಯಾಂಕಿಗೆ ಸಂದೇಶ ರವಾನಿಸುತ್ತದೆ. ಆಗ ದುಬೈನ
ಬ್ಯಾಂಕ್‌ನಲ್ಲಿ ಮಾರಾಟಗಾರನ ಖಾತೆಗೆ ಹಣ ಜಮಾ ಆಗುತ್ತದೆ. ಇದೆಲ್ಲ ನಡೆಯುವುದು ಸ್ವಿ- ಸಂದೇಶದಿಂದ.

ಇದರಲ್ಲಿ ಮೊದಲನೆಯದಾಗಿ ಸಮಯವಂತೂ ವ್ಯರ್ಥವಾಗುತ್ತದೆ, ಜತೆಗೆ ರುಪಾಯಿಯಿಂದ ಡಾಲರ್, ಡಾಲರ್‌ನಿಂದ ಯುಎಇಯ ದಿಹ್ರಾಮ್ ಗೆ ಹಣ ಪರಿವರ್ತನೆಯಲ್ಲಿ ಸ್ವಲ್ಪ ಹಣ ಪೋಲಾಗುತ್ತದೆ. ಅದಲ್ಲದೆ ಸ್ವಿಫ್ಟ್ ಸೇವೆಗಾಗಿ ಬ್ಯಾಂಕ್‌ಗಳು ಒಂದರಿಂದ ಐದು ಪ್ರತಿಶತ ಕಮಿಷನ್ (ಸೇವಾ ಶುಲ್ಕ) ಪಡೆಯುತ್ತವೆ. ಈಗ, ಒಂದು ಕೋಟಿ ಮೊತ್ತದ ಖರ್ಜೂರ ಖರೀದಿಸಬೇಕೆಂದರೆ, ಎರಡೂವರೆ ಪ್ರತಿಶತ ಸೇವಾಶುಲ್ಕ ಎಂದು ಪರಿಗಣಿಸಿದರೆ ಅಮೆರಿಕದ ಬ್ಯಾಂಕಿಗೆ ಎರಡೂವರೆ ಲಕ್ಷ ರುಪಾಯಿ ತೆತ್ತಬೇಕಾಗುತ್ತದೆ. ಅಲ್ಲದೇ, ಆ ಹಣದ ಮೇಲೆ ಅಮೆರಿಕ ತನ್ನ ನಿಗಾ ಇಟ್ಟಿದ್ದು, ಒಂದು ಮಟ್ಟಿನ ನಿಯಂತ್ರಣವನ್ನೂ ಹೊಂದಿರುತ್ತದೆ.

‘ಯಾರದ್ದೋ ದುಡ್ಡು, ಅಮೆರಿಕದ ಜಾತ್ರೆ’ ಎಂದರೆ ಇದು! ಈಗ ವಿಶ್ವದಾದ್ಯಂತ ಬಹುತೇಕ ಸ್ವಿಫ್ಟ್ ಮೂಲಕವೇ ವ್ಯಾಪಾರ ನಡೆಯುತ್ತಿದ್ದು, ಅದರಲ್ಲಿ ನಲವತ್ತು ಪ್ರತಿಶತಕ್ಕೂ ಹೆಚ್ಚು ಅಮೆರಿಕನ್ ಡಾಲರ್ ನಲ್ಲಿ ನಡೆಯುತ್ತದೆ. ಮೂವತ್ತೇಳಕ್ಕೂ ಹೆಚ್ಚು ಪ್ರತಿಶತ ಯುರೋದಲ್ಲಿ, ಆರು ಪ್ರತಿಶತ ಬ್ರಿಟಿಷ್ ಪೌಂಡ್‌ನಲ್ಲಿ ನಡೆಯುತ್ತದೆ. ಉಳಿದವು ಚೀನಾದ ಯೌನ್, ಜಪಾನಿನ ಯೆನ್, ಕೆನಡಾ, ಆಸ್ಟ್ರೇಲಿಯಾ, ಹಾಂಗ್ಕಾಂಗ್ ಡಾಲರ್‌ನ ನಿಯಂತ್ರಣದಲ್ಲಿವೆ. ಇವರ ನಡುವೆ ಭಾರತದ ರುಪಾಯಿ ತೂರಿಕೊಂಡು ತನ್ನದೇ ಆದ ಸ್ಥಾನ ಸ್ಥಾಪಿಸಿ ಕೊಳ್ಳಬೇಕು. ಹೀಗಿರುವಾಗ ಭಾರತ ತನ್ನ ವ್ಯಾಪಾರವನ್ನು ರುಪಾಯಿಯಲ್ಲಿ ಮಾಡುತ್ತದೆ, ತನಗೆ ಬೇಕಾದುದ್ದನ್ನು ರುಪಾಯಿ ಕೊಟ್ಟು ಖರೀದಿಸುತ್ತದೆ ಎಂದರೆ ಯಾರು ಸುಮ್ಮನಿದ್ದಾರು? ಅದರಲ್ಲೂ ಪ್ರಮುಖ ಪಾಲು ಪಡೆಯುವ ಅಮೆರಿಕಕ್ಕಂತೂ ಮೆಣಸು ತಿನ್ನದೆಯೇ ಕಣ್ಣಲ್ಲಿ, ಮೂಗಲ್ಲಿ ನೀರು ಇಳಿಯಬಹುದು.

ಏಕೆಂದರೆ ಇದರಿಂದ ರುಪಾಯಿಯ ಮೌಲ್ಯ ಹೆಚ್ಚಬಹುದು, ಡಾಲರ್ ಮೌಲ್ಯ ಕುಸಿಯಬಹುದು. ಆ ಸಂದರ್ಭದಲ್ಲಿ ಅಮೆರಿಕವಂತೂ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಅದರ ಬಳಿ ಇರುವ ‘ನಿರ್ಬಂಧ’ದ ಅಸವನ್ನು ಬಳಸುತ್ತದೆ. ಇತ್ತೀಚೆಗೆ ಯುಕ್ರೇನ್-ರಷ್ಯಾ ಯುದ್ಧ ಆರಂಭವಾದಾಗ ರಷ್ಯಾದ ಮೇಲೆ ನಿರ್ಬಂಧ ಹೇರಿ, ಅಮೆರಿಕದ ಬ್ಯಾಂಕ್‌ ನಲ್ಲಿರುವ ರಷ್ಯಾದ ಮುನ್ನೂರು ಬಿಲಿಯನ್ ಡಾಲರ್ ಹಿಡಿದಿಟ್ಟುಕೊಂಡಿದ್ದು ಒಂದು ಉದಾಹರಣೆ. ಇದಕ್ಕೆ ಭಾರತವೂ ಹೊರತಲ್ಲ. ಹಿಂದೆ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ ಪೋಖ್ರಾನ್‌ನಲ್ಲಿ ಅಣುಬಾಂಬ್ ಪರೀಕ್ಷೆ ನಡೆಸಿದಾಗ ಭಾರತದ ಮೇಲೆ ನಿರ್ಬಂಧ ವಿಧಿಸಿದ್ದರಿಂದ ಭಾರತಕ್ಕೆ ಸುಮಾರು ನೂರ ನಲವತ್ತು ಮಿಲಿಯನ್ ಡಾಲರ್ ನಷ್ಟವಾಗಿತ್ತು.

ಈಗ ನಡೆಯುತ್ತಿರುವ ವ್ಯವಸ್ಥೆಗೆ NOSTRO ಖಾತೆ ಅಥವಾ ಪದ್ಧತಿ ಎನ್ನುತ್ತಾರೆ. ನೊಸ್ಟ್ರೊ ಎನ್ನುವುದು ಲ್ಯಾಟಿನ್ ಪದವಾಗಿದ್ದು, ‘ನಮ್ಮದು’ ಎಂಬ ಅರ್ಥ ಕೊಡುತ್ತದೆ. ಇನ್ನೂ ಸುಲಭವಾಗಿ ಹೇಳಬೇಕೆಂದರೆ, ‘ನಮ್ಮ ಹಣ, ನಿಮ್ಮ ಬ್ಯಾಂಕಿನಲ್ಲಿ’ ಎನ್ನಬಹುದು. ಕಳೆದ ವರ್ಷ ಜುಲೈನಲ್ಲಿ ಭಾರತದ ರಿಸರ್ವ್ ಬ್ಯಾಂಕ್ VOSTRO ಖಾತೆ ತೆರೆಯಲು
ಅವಕಾಶ ಮಾಡಿಕೊಟ್ಟಿದ್ದು, ಕಳೆದ ಡಿಸೆಂಬರ್ ತಿಂಗಳಿನಿಂದ ಅದು ಕಾರ್ಯವನ್ನೂ ಆರಂಭಿಸಿದೆ. ವೊಸ್ಟ್ರೊ ಎಂದರೆ ‘ನಿಮ್ಮದು’ ಎಂಬ ಅರ್ಥ. ಅಂದರೆ ನಿಮ್ಮ ಹಣ ನಮ್ಮ ಬ್ಯಾಂಕಿನಲ್ಲಿ ಎಂದು. ಈ ವ್ಯವಸ್ಥೆಯಲ್ಲಿ ವಿದೇಶದ ಬ್ಯಾಂಕ್ ಒಂದು ಭಾರತದ ಬ್ಯಾಂಕ್‌ನಲ್ಲಿ ತನ್ನ ಖಾತೆ ತೆರೆಯಬಹುದು. ಇದರಿಂದ ಆ ದೇಶದ ವ್ಯಕ್ತಿ ಭಾರತದಿಂದ ಏನಾದರೂ ಕೊಳ್ಳಬೇಕೆಂದರೆ, ಡಾಲರ್ ವ್ಯವಹಾರ ತಪ್ಪಿಸಿ, ನೇರವಾಗಿ ಭಾರತದ ರುಪಾಯಿಯಲ್ಲಿ ಹಣ ವರ್ಗಾಯಿಸಬಹುದು.

ಭಾರತೀಯರೂ ಆ ದೇಶದಿಂದ ಏನಾದರೂ ಕೊಳ್ಳಬೇಕಾದರೆ ರುಪಾಯಿಯ ಅವರ ಖಾತೆಗೆ ನೇರವಾಗಿ ಹಣ ಜಮಾ ಮಾಡಬಹುದು. ಇದರಿಂದ ಭಾರತಕ್ಕೆ ಆಗುವ ಲಾಭ ವೇನು? ಮೊದಲನೆಯದಾಗಿ, ಭಾರತಕ್ಕೆ ತನ್ನ ಆರ್ಥಿಕ ಹಿತಾಸಕ್ತಿ ಕಾಪಾಡಿಕೊಳ್ಳಲು ಸಹಾಯಕಾರಿ. ಉದಾಹರಣೆಗೆ, ಭಾರತ ರಷ್ಯಾದಿಂದ ಅಥವಾ ಇರಾನ್‌ನಿಂದ ತೈಲ ಖರೀದಿಸಬೇಕು ಎಂದುಕೊಳ್ಳಿ. ಆ ದೇಶಗಳ ಮೇಲೆ ಪಾಶ್ಚಿಮಾತ್ಯ ದೇಶಗಳು ನಿರ್ಬಂಧ ಹೇರಿ, ಹಣ ಪಾವತಿಸುವ ಮಾರ್ಗವನ್ನು ನಿಯಂತ್ರಿಸಿದವು ಅಂದುಕೊಳ್ಳಿ. ಅದನ್ನು ಮೀರಿ, ಭಾರತ ಆ ದೇಶಗಳಿಗೆ ರುಪಾಯಿಯಲ್ಲಿ ಹಣ ವರ್ಗಾವಣೆ ಮಾಡಿ ಸರಕು ಪಡೆದುಕೊಳ್ಳಬಹುದು.

ಎರಡನೆಯದಾಗಿ, ಭಾರತ ಡಾಲರ್ ಬದಲು ರುಪಾಯಿಯನ್ನು ಬಳಕೆಗೆ ತರಬಹುದು. (ಸುಮ್ಮನೆ ಊಹಿಸಿ, ಮುಂದಿನ ಬಾರಿ ನೀವು ದುಬೈಗೆ ಹೋದಾಗ ಅಲ್ಲಿ ಯುಎಇ ದಿಹ್ರಾಮ್ ಬದಲು ಭಾರತದ ರುಪಾಯಿ ನೀಡಿ ನಿಮಗೆ ಬೇಕಾದದ್ದನ್ನು ಖರೀದಿಸುವಂತಾದರೆ ಹೇಗೆ?) ಹಾಗೇನಾದರೂ ಆದರೆ, ಅದು ಭಾರತಕ್ಕೆ ವಿದೇಶಿ ಮೀಸಲುಗಳನ್ನು
ಉತ್ತಮವಾಗಿ ನಿರ್ವಹಿಸಲು ಸಹಾಯಕಾರಿಯಾಗಬಹುದು. ಮೂರನೆಯದಾಗಿ, ರುಪಾಯಿ ಬಳಸಿ ಅಂತಾರಾಷ್ಟ್ರೀಯ ವ್ಯಾಪಾರವನ್ನು ಸುಲಭವಾಗಿ ಮಾಡಬಹುದು
ಎಂದಾದರೆ, ರುಪಾಯಿ ವಿಶ್ವದಾದ್ಯಂತ ವ್ಯಾಪಕ ಮಾನ್ಯತೆ ಪಡೆಯಬಹುದು. ಎಷ್ಟು ದೇಶಗಳು ಭಾರತದೊಂದಿಗೆ ಈ ರೀತಿಯ ವ್ಯಾಪಾರಕ್ಕೆ ಇಳಿಯುತ್ತವೆಯೋ ಅಷ್ಟು ಭಾರತಕ್ಕೆ ಲಾಭ. ಕಳೆದ ಡಿಸೆಂಬರ್‌ನಲ್ಲಿ ರಷ್ಯಾ ಮತ್ತು ಶ್ರೀಲಂಕಾ ಈ ವ್ಯಾಪ್ತಿಯಲ್ಲಿ ಬಂದಿದ್ದು, ಈಗಾಗಲೇ ಭಾರತ ಈ ಮೂಲಕವೇ ರಷ್ಯಾದಿಂದ ತೈಲ ಖರೀದಿಸುತ್ತಿದೆ. ಇಸ್ರೇಲ್, ಜರ್ಮನಿ, ಸಿಂಗಾಪುರ, ಮಯನ್ಮಾರ್, ಮಾರಿಷಿಯಸ್ ಮತ್ತು ಮಲೇಶಿಯಾ ಕೂಡ ಈಗ ಈ ಪಟ್ಟಿಗೆ ಸೇರ್ಪಡೆಯಾಗಿವೆ. ಈ ಮಾದರಿಯ ವ್ಯಾಪಾರಕ್ಕೆ ಯುಎಇ ಮತ್ತು ಭಾರತ ಈಗಾಗಲೇ ಮೂರೂವರೆ ಸಾವಿರ ಕೋಟಿ ರುಪಾಯಿ ಹಣ ವಿನಿಮಯದ ಒಪ್ಪಂದಕ್ಕೆ ಸಹಿ ಹಾಕಿವೆ.

ಇದರಿಂದ ಭಾರತ ನಾಳೆಯೋ, ಮುಂದಿನ ವರ್ಷವೋ ವಿಶ್ವಗುರುವಾಗುತ್ತದೆ ಎಂದಲ್ಲ. ಒಂದು ಕಾಲದಲ್ಲಿ ಪೌಂಡ್ ಸಶಕ್ತವಾಗಿತ್ತು. ಒಂದು ಪೌಂಡ್ ಖರೀದಿಸಲು ಐದು ಡಾಲರ್ ನೀಡಬೇಕಿತ್ತು. ಇಂದು ಒಂದು ಡಾಲರ್ ಖರೀದಿಸ ಬೇಕೆಂದರೆ ಒಂದು ಪೌಂಡ್‌ಗಿಂತಲೂ ಹೆಚ್ಚು ಹಣ ಕೊಡಬೇಕು. ಎರಡನೆಯ ವಿಶ್ವಯುದ್ಧದ ನಂತರ ಡಾಲರ್ ಮೌಲ್ಯ ವೃದ್ಧಿಸಲು ಆರಂಭವಾಯಿತು. ಅದಕ್ಕೆ ಕಾರಣಗಳು ಹಲವು. ಇರಲಿ, ಇಷ್ಟು ದಿನ ಕೊಟೆಯ ಒಳಗೆ ಕುಳಿತು ನಾವು ವಿಶ್ವಗುರು ಆಗುವ ಕನಸು ಕಾಣುತ್ತಿದ್ದೆವು. ಕೋಟೆಯಿಂದ ಹೊರಗೆ ಬಂದು ವಿಶ್ವವನ್ನು ಗೆದ್ದರೆ ಮಾತ್ರ ವಿಶ್ವಗುರು ಆಗಲು ಸಾಧ್ಯ ಅಲ್ಲವೇ? ಆ ನಿಟ್ಟಿನಲ್ಲಿ ಭಾರತ ಒಂದು ಪುಟ್ಟ ಹೆಜ್ಜೆಯನ್ನಂತೂ ಇಟ್ಟಿದೆ ಎಂದು ಹೇಳಬಹುದು.