Sunday, 13th October 2024

ಇದು ವೈದ್ಯಲೋಕದ ಕರಾಳ ಕಥೆ !

ಹಿಂದಿರುಗಿ ನೋಡಿದಾಗ

ವಿಶ್ವದಲ್ಲಿ ಗುಲಾಮರಾಗಿ ಬದುಕನ್ನು ಸವೆಸಿದ ಜನಾಂಗಗಳಲ್ಲಿ ನೀಗ್ರೋಗಳು ಮುಖ್ಯರಾದವರು. ಮಧ್ಯಯುಗದ ಯುರೋಪ್ ಮತ್ತು ಅಮೆರಿಕಗಳಲ್ಲಿ ನೀಗ್ರೋ ಗುಲಾಮರನ್ನು ತೋಟಗಾರಿಕೆ ಯಲ್ಲಿ ಪ್ರಧಾನವಾಗಿ ಬಳಸಿಕೊಳ್ಳುತ್ತಿದ್ದರು. ೧೮೪೦ರ ದಶಕದಲ್ಲಿ ಅಮೆರಿಕದ ಅಲಬಾಮದ ಮಾಂಟ ಗೋಮರಿ ತೋಟಗಳಲ್ಲಿ ಗುಲಾಮರಾಗಿ ನೀಗ್ರೋಗಳು ದುಡಿಯುತ್ತಿದ್ದರು.

ಅಂಥ ಗುಲಾಮಿ ಬದುಕನ್ನು ನಡೆಸುತ್ತಿದ್ದ ಹಲವು ನೀಗ್ರೋ ಮಹಿಳೆಯರು ಆಧುನಿಕ ಸ್ತ್ರೀರೋಗ ವಿಜ್ಞಾನದ (ಗೈನೆಕಾಲಜಿ) ಬೆಳವಣಿಗೆಗೆ ಕಾರಣ ವಾದದ್ದು ಮರೆಯಲಾಗದ ದುರಂತ ಇತಿಹಾಸ ವಾಗಿದೆ. ಜೇಮ್ಸ್ ಮೇರಿಯೋನ್ ಸಿಮ್ಸ್ ಅಮೆರಿಕದ ಪೆನ್ಸಿಲ್ವೇನಿಯಾದ ಫಿಲಡೆಲ್ಫಿಯಾದಲ್ಲಿ ೧೮೩೫ರಲ್ಲಿ ವೈದ್ಯಕೀಯ ಪದವಿ ಪಡೆದು ಮಾಂಟಗೊಮರಿಯ ಮೌಂಟ್ ಮೀಗ್ಸ್ ಎಂಬಲ್ಲಿ ವೃತ್ತಿ ಆರಂಭಿಸಿದ.

೨ ಮಕ್ಕಳ ಸಾವಿಗೆ ಕಾರಣವಾಗುತ್ತಿದ್ದಂತೆಯೇ, ಅಲಬಾಮದ ಕ್ಯೂಬಾಹಾಚಿ ಎಂಬ ಸ್ಥಳಕ್ಕೆ ಬಂದು ‘ಪ್ಲಾಂಟೇಶನ್ ಫಿಸಿಶಿಯನ್’ ಎಂಬ ಹೆಸರಿನಲ್ಲಿ ವೃತ್ತಿಯನ್ನು ಆರಂಭಿಸಿದ. ಇಲ್ಲಿ ೧೮೪೦ರಿಂದ ೧೮೫೩ರವರೆಗೆ ಕರಾಳ ಪ್ರಯೋಗಗಳಲ್ಲಿ ತೊಡಗಿದ. ನೀಗ್ರೋಗಳನ್ನು ಗುಲಾಮರನ್ನಾಗಿ ಮಾರಾಟ ಮಾಡುವ ವ್ಯವಸ್ಥಿತ ಜಾಲವಿತ್ತು. ತೋಟಗಳ ಮಾಲೀಕರು ಇವರನ್ನು ಹಣ ಕೊಟ್ಟು ಕೊಳ್ಳುತ್ತಿದ್ದರು. ಒಂದು ಸಲ ಖರೀದಿಸಿದ ಮೇಲೆ ಗುಲಾಮರು ಮಾಲೀಕರ ಸ್ವತ್ತಾಗುತ್ತಿದ್ದರು. ಮಾಲೀಕ ಅವರನ್ನು ಹೇಗೆ ಬೇಕಾದರೂ ನಡೆಸಿಕೊಳ್ಳಬಹುದಾಗಿತ್ತು.

ಅವರಿಗೆ ಸಮಕಾಲೀನ ಸಮಾಜದ ಅಥವಾ ಕಾನೂನಿನ ರಕ್ಷಣೆಯಿರಲಿಲ್ಲ. ಅಲಬಾಮದ ತೋಟಗಳಲ್ಲಿ ನೀಗ್ರೋ ಗಂಡು-ಹೆಣ್ಣುಗಳು ದುಡಿಯು ತ್ತಿದ್ದರು. ಅವರಲ್ಲಿ ಹೆಣ್ಣು ಮಕ್ಕಳು, ರಾತ್ರಿಯಲ್ಲಿ ಶ್ರೀಮಂತರ ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗುತ್ತಿದ್ದರು. ಮಾಲೀಕರೊಡನೆ ಲೈಂಗಿಕವಾಗಿ ಸಹ ಕರಿಸುವುದು ತಮ್ಮ ‘ಕರ್ತವ್ಯ’ಗಳಲ್ಲಿ ಒಂದು ಎಂದು ಆ ಹುಡುಗಿಯರು ಭಾವಿಸುತ್ತಿದ್ದರು. ಹಾಗಾಗಿ ಈ ಅಮಾನವೀಯ ಕೃತ್ಯವು ಸದ್ದಿಲ್ಲದೆ ನಡೆಯುತ್ತಿತ್ತು. ಇಂಥ ಹುಡುಗಿ ಯರು ಗರ್ಭವತಿಯರಾದಾಗ ಮಾತ್ರ ಸಮಸ್ಯೆಗಳು ಉದ್ಭವವಾಗುತ್ತಿದ್ದವು.

೧೮೪೫. ವೆಸ್ಕಾಟ್ ಪ್ಲಾಂಟೇಶನ್‌ನಲ್ಲಿ ಅನಾರ್ಕ ಎನ್ನುವ ೧೮ರ ಹರೆಯದ ನೀಗ್ರೋ ಹುಡುಗಿ ಗರ್ಭವತಿಯಾಗಿದ್ದಳು. ಆಕೆ ೭೨ ಗಂಟೆಗಳ ಕಾಲ ಪ್ರಸವವೇದನೆ ಅನುಭವಿಸಿದರೂ ಪ್ರಸವವಾಗಲಿಲ್ಲ. ಹಾಗಾಗಿ ತೋಟದ ಮಾಲೀಕ ಡಾ.ಸಿಮ್ಸ್ ಗೆ ಹೇಳಿ ಕಳಿಸಿದ. ಆತ ಸುತ್ತಮುತ್ತಲ ಪ್ರದೇಶದಲ್ಲಿ ಶಸ್ತ್ರ ವೈದ್ಯಕೀಯವನ್ನು ಕಲಿತಿದ್ದ ಹಾಗೂ ಎಲ್ಲ ಶಸ್ತ್ರ ವೈದ್ಯಕೀಯ ಉಪಕರಣಗಳಿದ್ದ ಏಕೈಕ ವೈದ್ಯನಾಗಿದ್ದ. ಅಂದಿನ ದಿನಗಳಲ್ಲಿ ಸೀ ರೋಗ ಮತ್ತು ಪ್ರಸೂತಿ ತಂತ್ರ ಎಂಬ ವೈದ್ಯಕೀಯ ಶಾಖೆಯೇ ಇರಲಿಲ್ಲ.

ಹಾಗಾಗಿ ಸ್ತ್ರೀ ರೋಗಗಳ ಚಿಕಿತ್ಸೆಯಲ್ಲಿ ವೈದ್ಯರಿಗೆ ಯಾವುದೇ ಪರಿಣತಿ ಇರಲಿಲ್ಲ. ಹೆರಿಗೆಯನ್ನು ಸೂಲಗಿತ್ತಿಯರೇ ಮಾಡಿಸುತ್ತಿದ್ದ ಕಾರಣ, ವೈದ್ಯರು ಈ ವಿಷಯದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಅದರಲ್ಲೂ ಡಾ.ಸಿಮ್ಸ್ ಮಹಾಶಯ ಸ್ತ್ರೀಜನನಾಂಗಗಳ ಪರೀಕ್ಷೆ ಎಂದರೆ ಹೇವರಿಸಿಕೊಳ್ಳುತ್ತಿದ್ದ. ಈತ ಮಾಲೀಕನ ಆಜ್ಞೆಯ ಮೇರೆಗೆ ಅನಾರ್ಕಳನ್ನು ಪರೀಕ್ಷಿಸಲೇಬೇಕಾಯಿತು. ಹೆರಿಗೆ ಸ್ಥಗಿತವಾಗಿದ್ದ ಕಾರಣ, ಹೆರಿಗೆ ಇಕ್ಕಳವನ್ನು (ಫಾರ್ಸೆಪ್ಸ್) ಬಳಸಿ ಶಿಶುವನ್ನು ಹೊರಗೆಳೆದುಹಾಕಿದ. ಐದು ದಿನಗಳಾದವು. ತೋಟದ ಮಾಲೀಕ ಮತ್ತೆ ಡಾ.ಸಿಮ್ಸ್‌ಗೆ ಹೇಳಿಕಳುಹಿಸಿದ. ಅನಾರ್ಕಳ ಯೋನಿನಾಳಕ್ಕೆ ಘಾತ ವಾಗಿತ್ತು. ಅಲ್ಲಿದ್ದ ಅಂಗಾಂಶವು ಹರಿದು ಚಿಂದಿಯಾಗಿತ್ತು.

ಯೋನಿಯಿಂದ ಮೂತ್ರಾಶಯಕ್ಕೆ ಒಂದು ನಾಳವ್ರಣವು (ವೆಸೈಕೋ ವೆಜೈನಲ್ ಫಿಸ್ಟುಲ) ರೂಪುಗೊಂಡಿತ್ತು ಹಾಗೂ ಯೋನಿಯಿಂದ ಮಲನಾಳಕ್ಕೆ (ರೆಕ್ಟೋವೆಜೈನಲ್ ಫಿಸ್ಟುಲ್) ಮತ್ತೊಂದು ನಾಳವ್ರಣವು ರೂಪುಗೊಂಡಿತ್ತು. ಮೂತ್ರವು ಯೋನಿಯ ಮೂಲಕ ಹೊರಗೆ ಜಿನುಗುತ್ತಿತ್ತು ಹಾಗೂ
ಮಲದ ತುಣುಕುಗಳು ಮತ್ತು ಹೂಸು ಯೋನಿಯಿಂದ ಹೊರಗೆ ಬರುತ್ತಿದ್ದವು. ಇವೆರಡೂ ಅನಿಯಂತ್ರಿತವಾಗಿದ್ದ ಕಾರಣ, ಎರಡೂ ನಾಳಗಳು ಹಾಗೂ ಇಡೀ ಯೋನಿಯು ಸೋಂಕುಗ್ರಸ್ತವಾಗಿ ಅನಾರ್ಕ ಪೂರ್ಣರೂಪದಲ್ಲಿ ಅಸ್ವಸ್ಥ ಳಾಗಿದ್ದಳು. ತೊಡೆಗಳಲ್ಲಿ ವಿಪರೀತ ನೋವು ಇದ್ದ ಕಾರಣ ಆಕೆ ಹಾಸಿಗೆ ಬಿಟ್ಟು ಮೇಲೇಳಲಾರದವಳಾಗಿದ್ದಳು.

ಡಾ.ಸಿಮ್ಸ್ ಅನಾರ್ಕಳನ್ನು ಪರೀಕ್ಷೆ ಮಾಡಿ, ಆಕೆಗೆ ಗುಣ ವಾಗದ ಸಮಸ್ಯೆ ಇರುವುದಾಗಿಯೂ, ಆಕೆ ತನ್ನ ಜೀವಮಾನ ಪೂರ್ತಿ ಹೀಗೆಯೇ ಹಾಸಿಗೆ ಮೇಲೆಯೇ ಬದುಕಬೇಕಾಗಿ ರುವುದು ಅನಿವಾರ್ಯವಾಗಿರುವುದಾಗಿಯೂ ತೀರ್ಮಾನ ವನ್ನಿತ್ತ. ತೋಟದ ಮಾಲೀಕ ಅನಾರ್ಕಳ ದುಡಿಮೆಯಿಂದ
ಹಣವನ್ನು ನಿರೀಕ್ಷಿಸುತ್ತಿದ್ದ. ಆದರೆ ಈಗ ಆಕೆಯನ್ನು ಅವಳ ಜೀವಮಾನಪೂರ್ಣ ಆರೈಕೆ ಮಾಡುವ ಖರ್ಚನ್ನು ಭರಿಸುವ ಹೊಣೆ ಹೊರಬೇಕಾಯಿತು.

ಒಂದು ತಿಂಗಳಾಯಿತು. ಸಿಮ್ಸ್ ಬಳಿ ‘ಬೆಟ್ಸಿ’ ಎಂಬ ೧೭ ವರ್ಷದ ನೀಗ್ರೋ ಹುಡುಗಿ ಬಂದಳು. ಆಕೆಯೂ ಎರಡೂ ನಾಳವ್ರಣಗಳಿಗೆ ತುತ್ತಾಗಿದ್ದಳು. ಸ್ವಲ್ಪ ದಿನಗಳಲ್ಲಿ ಲೂಸಿ ಎಂಬ ಹದಿಹರೆಯದ ಹುಡುಗಿ ಬಂದಳು. ಆಕೆಯ ಸ್ಥಿತಿಯೂ ಅನಾರ್ಕ ಮತ್ತು ಬೆಟ್ಸಿಯರಿಗಿಂತ ಭಿನ್ನವಾಗಿರಲಿಲ್ಲ. ಈ ಹುಡುಗಿಯರಿಗೆ ಸಿಮ್ಸ್ ಇಕ್ಕಳ ಹೆರಿಗೆಯನ್ನೇನೂ ಮಾಡಿಸಿರಲಿಲ್ಲ. ಆದರೂ ಈ ಎಳೇ ಹುಡುಗಿಯರ ಜನನ ಮಾರ್ಗವು ಕಿರಿದಾಗಿದ್ದ ಕಾರಣ, ಶಿಶುವಿನ ತಲೆಯು ಜನನ ಮಾರ್ಗದಲ್ಲಿ ೭೨ ಗಂಟೆಗಳಿಗೂ ಹೆಚ್ಚು ಕಾಲ ಸ್ಥಗಿತವಾಗಿದ್ದು, ಮೂತ್ರಾಶಯ ಮತ್ತು ಮಲಾಶಯಗಳ ಮೇಲೆ ವಿಪರೀತ
ಒತ್ತಡ ಹಾಕುತ್ತಿದ್ದ ಕಾರಣ, ಅಲ್ಲಿ ರಕ್ತಸಂಚಾರ ಸ್ಥಗಿತವಾಗಿತ್ತು.

ಅದರ ಫಲವಾಗಿ ಯೋನಿ, ಮೂತ್ರಾಶಯ ಹಾಗೂ ಗುದನಾಳಗಳ ಊತಕವು ಮೃತವಾಗಿ ರಂಧ್ರವೇರ್ಪಟ್ಟಿತ್ತು. ಸ್ತ್ರೀ ಜನನಾಂಗ ಎಂದರೇನೆ ಹೇವರಿಸಿಕೊಳ್ಳುತ್ತಿದ್ದ ಸಿಮ್ಸ್, ಇದ್ದಕ್ಕಿದ್ದ ಹಾಗೆ ಆಸಕ್ತಿ ತೋರಲಾರಂಬಿಸಿದ. ಈ ಸ್ತ್ರೀಯರ ಅನಾರೋಗ್ಯವನ್ನು ತಾನು ಗುಣಪಡಿಸಿದರೆ, ತನಗೆ ವೈದ್ಯ
ಕೀಯ ಜಗತ್ತಿನಲ್ಲಿ ಬಹುದೊಡ್ಡ ಹೆಸರು ಬರುತ್ತದೆ ಹಾಗೂ ಮಾಲೀಕರು ಕೈತುಂಬಾ ಹಣ ಕೊಡುತ್ತಾರೆ ಎಂಬ ವಿಚಾರ ಹೊಳೆಯಿತು. ಕೂಡಲೇ ಈ ಪ್ರಕರಣಗಳನ್ನು ಗುಣಪಡಿಸಲು ತಾನು ಏನೇನು ಮಾಡಬಹುದು ಎಂದು ಲೆಕ್ಕ ಹಾಕಲಾರಂಭಿಸಿದ.

ತನ್ನ ಮನೆಯ ಅಂಗಳದಲ್ಲಿದ್ದ ನಾಲ್ಕು ಹಾಸಿಗೆಗಳ ‘ಆಸ್ಪತ್ರೆ’ಯನ್ನು ೧೨ ಹಾಸಿಗೆಗಳಿಗೆ ವಿಸ್ತರಿಸಿದ. ಅನಾರ್ಕ, ಬೆಟ್ಸಿ ಮತ್ತು ಲೂಸಿ ಜತೆಯಲ್ಲಿ, ಇಂಥದ್ದೇ ಸಮಸ್ಯೆಯಿಂದ ನರಳುತ್ತಿದ್ದ ೭ ಹುಡುಗಿಯರನ್ನು ಆಯ್ಕೆ ಮಾಡಿಕೊಂಡ. ‘ನೀಗ್ರೋ ಎಕ್ಸ್‌ಪರಿಮೆಂಟಲ್ ಸರ್ಜರಿ’ಯನ್ನು ಆರಂಭಿಸಿದ. ೬ ತಿಂಗಳ ಅವಽಯಲ್ಲಿ ಇವರೆಲ್ಲರ ಸಮಸ್ಯೆಯನ್ನು ನಿವಾರಿಸಬಹುದೆಂದು ಬಗೆದ ಸಿಮ್ಸ್, ತೋಟದ ಮಾಲೀಕರಿಗೆ ಈ ಮಹಿಳೆಯರ ‘ಸ್ವಾಮ್ಯ’ವನ್ನು ೬ ತಿಂಗಳ ಕಾಲ ತನಗೆ ನೀಡಬೇಕೆಂದ. ಸಿಮ್ಸ್ ಒಂದು ಸಲ ಆ ಹೆಣ್ಣುಮಕ್ಕಳ ಸ್ವಾಮ್ಯ ಪಡೆದ ಕೂಡಲೇ, ಆತನು ಅವರೊಡನೆ ಏನನ್ನು ಬೇಕಾದರೂ ಮಾಡಬಹುದಾದ ಸ್ವಾತಂತ್ರ್ಯವನ್ನು ಸಹಜವಾಗಿ ಗಳಿಸಿದ.

ಸಿಮ್ಸ್ ತನ್ನ ಶಸ್ತ್ರಚಿಕಿತ್ಸಾ ಕೋಣೆಯನ್ನು ಸಿದ್ಧಪಡಿಸಿದ. ವೈದ್ಯಕೀಯ ಇತಿಹಾಸದಲ್ಲಿ ಯಾರೂ ಮಾಡದೇ ಇರುವಂಥ ಶಸ್ತ್ರಚಿಕಿತ್ಸೆಯನ್ನು ಸಿಮ್ಸ್
ಮಾಡಲಿದ್ದ. ಹಾಗಾಗಿ ಸುತ್ತಮುತ್ತಲಿನ ವೈದ್ಯರಿಗೆ ಅತೀವ ಕುತೂಹಲವುಂಟಾಯಿತು. ಅವರೆಲ್ಲರೂ ಬಂದರು. ಶಸ್ತ್ರಚಿಕಿತ್ಸಾ ಕೋಣೆ ಕಿಕ್ಕಿರಿಯಿತು. ಮೊದಲು ತನ್ನ ಪ್ರಯೋಗಕ್ಕೆ ಲೂಸಿಯನ್ನು ಆಯ್ಕೆ ಮಾಡಿಕೊಂಡು ಸಂಪೂರ್ಣ ನಗ್ನವಾಗಿಸಿದ. ಆಕೆಯನ್ನು ಶಸ್ತ್ರಚಿಕಿತ್ಸಾ ಮೇಜಿನ ಮೇಲೆ ಏರಿಸಿದ. ಆಕೆ ಮೊಣಕಾಲು ಮತ್ತು ಮೊಣಕೈಯನ್ನು ಊರಿಕೊಂಡು ತನ್ನ ನಿತಂಬವನ್ನು ಮೇಲಕ್ಕೆತ್ತಿದಳು.

ಮೊಳಕೈಗಳ ನಡುವೆ ತಲೆಯನ್ನು ಇರಿಸಿಕೊಂಡಳು. ಅದೆಷ್ಟು ಪರಪುರುಷರ ಕಣ್ಣುಗಳು ಆಕೆಯ ಒಡಲನ್ನು ದಿಟ್ಟಿಸಿ ನೋಡುತ್ತಿದ್ದವೋ! ಲೂಸಿಗೆ ಯಾವುದೇ ರೀತಿಯ ಅರಿವಳಿಕೆ ನೀಡದೆ ಶಸಚಿಕಿತ್ಸೆ ಮಾಡಲು ಸಿಮ್ಸ್ ನಿರ್ಧರಿಸಿದ. ಅಂದಿನ ಕಾಲಕ್ಕೆ ಅರಿವಳಿಕೆ ಲಭ್ಯವಿತ್ತು. ಆದರೆ ಅರಿವಳಿಕೆ ತಜ್ಞರು ಅಪರೂಪವಾಗಿದ್ದರು. ಸಿಮ್ಸ್‌ಗೆ ಅರಿವಳಿಕೆ ಬಗ್ಗೆ ತಿಳಿವಳಿಕೆಯಿರಲಿಲ್ಲ. ‘ಅರಿವಳಿಕೆಯು ಸುರಕ್ಷಿತವಲ್ಲ’ ಎಂಬ ಮೌಢ್ಯವು ಅಂದಿನ ದಿನಗಳಲ್ಲಿ ಪ್ರಚಲಿತದಲ್ಲಿತ್ತು. ಜತೆಗೆ ‘ಬಿಳಿಯ ಮಹಿಳೆಯರಿಗೆ ಹೋಲಿಸಿದರೆ ನೀಗ್ರೋ ಮಹಿಳೆಯರಿಗೆ ನೋವಾಗುವುದಿಲ್ಲ’ ಎಂಬ ನಂಬಿಕೆಯೂ ಪ್ರಚಲಿತ ದಲ್ಲಿತ್ತು.

ಹಾಗಾಗಿ ಲೂಸಿಗೆ ಯಾವುದೇ ಅರಿವಳಿಕೆ ನೀಡಲಿಲ್ಲ. ದುರದೃಷ್ಟವಶಾತ್ ಈ ನಂಬಿಕೆಯು ಇಂದಿಗೂ ಅಸ್ತಿತ್ವದಲ್ಲಿದೆ! (Kelly M. Hoffman khoffman@ virginia.edu, Sophie Trawalter, Jordan R. Axt, and M. Norman OliverAuthors Info &
Affiliations. Edited by Susan T. Fiske, Princeton University, Princeton, NJ, and approved March 1, 2016. April 4, 2016113 (16) 4296-4301 https://doi.org/10.1073/ pnas.1516047113). ಸಿಮ್ಸ್ ಶಸಚಿಕಿತ್ಸೆ ನಡೆಸುವಾಗ ಲೂಸಿ ಅಲುಗದಂತೆ ಒಂದಷ್ಟು ಜನರು ಬಿಗಿಯಾಗಿ ಹಿಡಿದು ಕೊಂಡರು. ಸಿಮ್ಸ್ ಒಂದು ಗಂಟೆಯ ಕಾಲ ಶಸಚಿಕಿತ್ಸೆ ನಡೆಸಿದ. ಲೂಸಿಯ ಪಾಲಿಗೆ ಆ ಅವಧಿ ಪ್ರತ್ಯಕ್ಷ ನರಕವಾಗಿತ್ತು. ವಿಪರೀತ ನೋವಿನಿಂದ ಚೀರುತ್ತಿದ್ದರೂ ಲೂಸಿಗೆ ಯಾರೂ ಒಂದು ಸಾಂತ್ವನದ ಮಾತನ್ನೂ ಆಡಲಿಲ್ಲ. ಶಸಚಿಕಿತ್ಸೆ ಯಶಸ್ವಿಯಾಗಲಿಲ್ಲ.

ಸಿಮ್ಸ್ ಲೂಸಿಯ ಮೇಲೆ ಪ್ರಯೋಗ ಮಾಡಿದಂತೆ ಬೆಟ್ಸಿ ಮತ್ತು ಅನಾರ್ಕಳ ಮೇಲೂ ಮಾಡಿದ. ಆನ್ ಮ್ಯಾಕ್ರೀ (೧೬) ಲ್ಯಾವೀನಿಯ (೧೩) ಡೇಲಿಯ (೨೩) ಹಾಗೂ ಜೂಲಿಯ (೨೦) ಅವರ ಮೇಲೂ ಶಸಚಿಕಿತ್ಸೆ ನಡೆಸಿದ. ಉಳಿದ ನೀಗ್ರೋ ಹುಡುಗಿಯರ ಹೆಸರು ತಿಳಿದುಬಂದಿಲ್ಲ. ಸುಮಾರು ೫
ವರ್ಷಗಳವರೆಗೆ ಇವರನ್ನು ಗಿನಿಪಿಗ್‌ಗಳಿಗಿಂತಲೂ ಕೆಟ್ಟದಾಗಿ ನಡೆಸಿಕೊಂಡ. ಶಸಚಿಕಿತ್ಸೆಗಳನ್ನು ಒಂದರ ನಂತರ ಮತ್ತೊಂದರಂತೆ ಮಾಡುತ್ತಲೇ ಹೋದ. ಅನಾರ್ಕಳ ಮೇಲೆ ಒಟ್ಟು ೩೦ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ. ಕೊನೆಗೆ ಅನಾರ್ಕಳನ್ನು ‘ಗುಣಪಡಿಸಿದೆ’ ಎಂದು ಘೋಷಿಸಿದ.

೧೮೫೨ರಲ್ಲಿ ಸಿಮ್ಸ್ ತನ್ನ ಸಂಶೋಧನಾ ಪ್ರಬಂಧವನ್ನು ಪ್ರಕಟಿಸಿದ. ಹೆಸರು ಅವನನ್ನು ಅರಸಿಕೊಂಡು ಬಂತು. ‘ಸಿಲ್ವರ್ ಸ್ಯೂಚರ್ಸ್ ಇನ್ ಸರ್ಜರಿ’, ‘ದಿ ಸಿಮ್ಸ್ ಆಪರೇ ಷನ್ ಫಾರ್ ವೆಸೈಕೋ ವೆಜೈನಲ್ ಫಿಸ್ಟುಲ’, ‘ಯೂಟೆರೈನ್ ಡಿಸೀಸಸ್’, ‘ಹಿಸ್ಟರಿ ಆಫ್ ದಿ ಡಿಸ್ಕವರಿ ಆಫ್ ಅನೆಸ್ತೀಸಿಯ’ ಮುಂತಾದ ಪುಸ್ತಕಗಳನ್ನು ಬರೆದ. ೧೮೫೫ರಲ್ಲಿ ಅಮೆರಿಕದ ಮೊದಲ ಮಹಿಳಾ ಆಸ್ಪತ್ರೆಯನ್ನು ಸ್ಥಾಪಿಸಿದ. ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷನಾದ.

ಲಂಡನ್, ಡಬ್ಲಿನ್, ಬರ್ಲಿನ್. ಬೆಲ್ಜಿಯಂ, ಆಸ್ಟ್ರಿಯ, ರಷ್ಯಾ, ಸ್ಪೇನ್, ಪೋರ್ಚುಗಲ್, ಇಟಲಿ ದೇಶಗಳಲ್ಲಿ ಸನ್ಮಾನಗಳಾದವು. ಫ್ರಾನ್ಸ್ ಸರಕಾರ ತನ್ನ ಅತ್ಯುನ್ನತ ಪ್ರಶಸ್ತಿ ‘ಲೆಜಿಯೋನ್ ಆಫ್ ಆನರ್’ ನೀಡಿತು. ನ್ಯೂಯಾರ್ಕಿನ ಬ್ರಿಯಾಂಟ್ ಪಾರ್ಕಿನಲ್ಲಿ ಅವನ ಕಂಚಿನ ಪುತ್ಥಳಿಯ ಅನಾವರಣ ವಾಯಿತು. ಈ ಗೌರವ ಮೊದಲ ಬಾರಿಗೆ ಅಮೆರಿಕದ ವೈದ್ಯನೊಬ್ಬನಿಗೆ ದೊರೆಯಿತು. ಜಗತ್ತಿನ ಹಲವೆಡೆ ಅವನ ಪುತ್ಥಳಿಗಳನ್ನು ಸ್ಥಾಪಿಸಿದರು. ‘ಆಧುನಿಕ ಸೀರೋಗವಿಜ್ಞಾನದ ಪಿತಾಮಹ’ ಎಂಬ ಅಭಿದಾನಕ್ಕೆ ಪಾತ್ರನಾದ. ಕಾಲಚಕ್ರ ಉರುಳಿತು.

ಸಿಮ್ಸ್ ನೀಗ್ರೋ ಮಹಿಳೆಯರ ಮೇಲೆ ಶಸ್ತ್ರಚಿಕಿತ್ಸೆ ಮಾಡುವ ಮೊದಲು ಅವರ ಒಪ್ಪಿಗೆ ಪಡೆದಿರಲಿಲ್ಲ. ತಾನು ಪ್ರಾಯೋಗಿಕ ಶಸ್ತ್ರಚಿಕಿತ್ಸೆ ಮಾಡುತ್ತಿರುವುದಾಗಿ ಯಾರಿಗೂ ತಿಳಿಹೇಳಿರಲಿಲ್ಲ. ಇಂಥ ಪ್ರಯೋಗಗಳನ್ನು ಮೊದಲು ಪ್ರಾಣಿಗಳ ಮೇಲೆ ಮಾಡುವುದು ವಾಡಿಕೆ. ಪ್ರಾಣಿಗಳಲ್ಲಿ ಯಶಸ್ಸನ್ನು ಪಡೆದ ಮೇಲೆ, ಮನುಷ್ಯರ ಮೇಲೆ ಪ್ರಯೋಗಿಸುವುದು ಪದ್ಧತಿ. ಸಿಮ್ಸ್ ಈ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಹುಡುಗಿಯರಿಗೆ ಯಾವುದೇ
ರೀತಿಯ ಅರಿವಳಿಕೆ ನೀಡಿರಲಿಲ್ಲ. ವರ್ಣಭೇದ ನೀತಿಯನ್ನು ಎಗ್ಗಿಲ್ಲದೆ ತೋರಿದ್ದ. ಈ ಹಿನ್ನೆಲೆಯಲ್ಲಿ ಸಿಮ್ಸ್ ನಡೆಸಿದ ಬರ್ಬರ ಪ್ರಯೋಗಗಳ ಬಗ್ಗೆ
ಜನರು ದಂಗೆಯೆದ್ದರು, ಅವನನ್ನು ತೀವ್ರವಾಗಿ ಖಂಡಿಸಿದರು.

ನ್ಯೂಯಾರ್ಕ್‌ನಲ್ಲಿದ್ದ ಸಿಮ್ಸ್ ಪುತ್ಥಳಿಗಳನ್ನು ಸ್ಥಳಾಂತರ ಮಾಡಿದರು. ಅಲಬಾಮ ಮಾಂಟಗೋಮರಿಯಲ್ಲಿ ೧೫’ ಎತ್ತರದ ಅನಾರ್ಕ, ೧೨’ ಎತ್ತರದ ಬೆಟ್ಸಿ ಹಾಗೂ ೯’ ಎತ್ತರದ ಪ್ರತಿಮೆಗಳನ್ನು ಸ್ಮಾರಕ ರೂಪದಲ್ಲಿ ಸ್ಥಾಪಿಸಿದರು. ಅನಾರ್ಕಳ ಹೊಟ್ಟೆ ಖಾಲಿ. ಗರ್ಭಕೋಶವಿದ್ದ ಕಡೆಯಲ್ಲಿ ಒಂದು ಗುಲಾಬಿ ಹೂವು. ಉಳಿದವರ ಮೈತುಂಬಾ ಶಸ್ತ್ರಚಿಕಿತ್ಸಾ ಉಪಕರಣಗಳು ನಾಟಿರುವಂತೆ ರೂಪಿಸಿದರು. ಅಷ್ಟೂ ವಿಗ್ರಹಗಳನ್ನು ಬೇಕೆಂದೇ ‘ಸ್ಕ್ರ್ಯಾಪ್’ನಿಂದ ನಿರ್ಮಿಸಿದರು. ಏಕೆಂದರೆ ‘ದೀಸ್ ವುಮನ್ ವರ್ ಡಿಸ್ಕಾರ್ಡೆಡ್!’ ಎಂಬ ಸಂದೇಶವನ್ನು ಸಾರಬೇಕಾಗಿತ್ತು.

ಜತೆಗೆ ಇತಿಹಾಸದಲ್ಲಿ ಮೊದಲ ಬಾರಿಗೆ ಈ ಮೂವರು ನೀಗ್ರೋ ಮಹಿಳೆಯರನ್ನು ‘ಸ್ತ್ರೀ ರೋಗ ವಿಜ್ಞಾನದ ಮಾತೆಯರು’ (ಮದರ್ಸ್ ಆಫ್
ಗೈನಕಾಲಜಿ) ಎಂದು ಕರೆದು ಗೌರವಿಸಿದರು.