ಪ್ರಸ್ತುತ
ಬಿ.ಸಿ.ನಾಗೇಶ್
ಸ್ಪರ್ಧಾತ್ಮಕ ಪರೀಕ್ಷೆಗಳು, ನೇಮಕ ಸಂಬಂಽಸಿದ ಪರೀಕ್ಷೆಗಳಿಗೆ, ಸಂದರ್ಶನಗಳಿಗೆ ನೆರವಾಗುತ್ತದೆ. ದೈನಂದಿನ ಜೀವನದಲ್ಲಿ ನಮಗೆ ಎದುರಾಗುವ ಪ್ರಶ್ನೆಗಳಿಗೆ ಕೂಡಲೇ ಪರಿಣಾಮಕಾರಿಯಾಗಿ ಉತ್ತರ ನೀಡಲು ನೆರವಾಗುತ್ತದೆ. ಇದು ಜೀವನದಲ್ಲಿ ಯಶಸ್ಸು ಸಾಧಿಸಲು ಖಂಡಿತ ನೆರವಾಗುತ್ತದೆ.
ದ್ವಿತೀಯ ಪಿಯುಸಿ ಪರೀಕ್ಷೆ ಎಂದರೆ ಮುಂದಿನ ಶೈಕ್ಷಣಿಕ, ವೃತ್ತಿಪರ ಕೋರ್ಸ್/ತರಗತಿಗೆ ಹೋಗಲು ಇರುವ ಒಂದು ಪ್ರಮುಖ ಮೆಟ್ಟಿಲು. ಹೀಗಾಗಿ, ಈ ಪರೀಕ್ಷೆ ಬಗ್ಗೆ ಭಯ, ಆತಂಕ ಸಹಜ. ವಿದ್ಯಾರ್ಥಿ ಜೀವನದಲ್ಲಿ ಪ್ರತಿ ವರ್ಷ ಪರೀಕ್ಷೆ ಬರೆದು ಉತ್ತೀರ್ಣಗೊಂಡು ಮುಂದಿನ ತರಗತಿಗೆ ತಲುಪಿರುವಿರಿ. ಪರೀಕ್ಷೆಯ ಸಮಯದಲ್ಲಿ ಸಹಜವಾಗಿ ಕಾಡಿದ್ದ ಭಯ, ಆತಂಕಗಳಿಗೆ ಕಾರಣಗಳಿಲ್ಲ ಎಂಬುದು ಪರೀಕ್ಷೆ ಬರೆದು ಫಲಿತಾಂಶ ಬಂದ ನಂತರ ಅರಿವಿಗೆ ಬಂದಿರುತ್ತದೆ. ಹೀಗಾಗಿ, ಅದೇ ರೀತಿ ಈ ಬಾರಿಯ ಪಿಯು ಪರೀಕ್ಷೆ ಕೂಡ ಯಥಾ ಪ್ರಕಾರದ ಒಂದು ಪರೀಕ್ಷೆ ಎಂದು ಭಾವಿಸಿ. ಸಹಜವಾಗಿ ಬರೆಯಿರಿ.
ಪರೀಕ್ಷೆಯನ್ನು ಲಘುವಾಗಿ ಪರಿಗಣಿಸದಿರಿ. ಸ್ವಲ್ಪ ಗಂಭೀರತೆಯೂ ಇರಲಿ. ಏಕೆಂದರೆ, ಈ ಪರೀಕ್ಷೆ ನಿಮ್ಮ ಶೈಕ್ಷಣಿಕ, ವೃತ್ತಿಪರ ಜೀವನದ ದಿಕ್ಕನ್ನು ಬದಲಿಸಬಲ್ಲದು. ಅತ್ಯುತ್ತಮ ಅಂಕ ಗಳಿಕೆ ಸಾಧನೆ ಮಾಡಬೇಕು ಎನ್ನುವ ಛಲ ಇರಬೇಕು. ಆದರೆ, ಈ ಪರೀಕ್ಷೆಯೊಂದೇ ನಿಮ್ಮ ಜೀವನವನ್ನು ನಿರ್ಧಾರ ಮಾಡುವುದಿಲ್ಲ ಎಂದು ನೆನಪಿಟ್ಟುಕೊಳ್ಳಬೇಕು. ಏಕೆಂದರೆ, ಜಗತ್ತು ವಿಶಾಲವಾಗಿದ್ದು ಪರೀಕ್ಷೆಯಲ್ಲಿ ಟಾಪರ್‌ಗಳಾಗದೇ ಇರುವವರು ಕೂಡ ತಮ್ಮ ಜೀವನದಲ್ಲಿ ಯಶಸ್ಸು ಸಾಧಿಸಿ ಉನ್ನತ ಸ್ಥಾನಕ್ಕೆ ಏರಿದ್ದಾರೆ.
ಅಂತಹ ಲೆಕ್ಕವಿಲ್ಲದಷ್ಟು ಉದಾಹರಣೆಗಳು ನಮಗೆ ಸಿಗುತ್ತವೆ. ವ್ಯಾಪಾರ, ಉದ್ಯಮ, ಕ್ರೀಡೆ, ಸಾಹಿತ್ಯ, ಸಂಗೀತ ಸೇರಿದಂತೆ ಜೀವನದಲ್ಲಿ ಹತ್ತು ಹಲವು ವಲಯಗಳ ಮೂಲಕ ಜೀವನದಲ್ಲಿ ಯಶಸ್ಸು ಸಾಧಿಸಿರುವ ಕಾರಣ ಪಿಯು ಪರೀಕ್ಷೆ ಬಗ್ಗೆ ಹೆದರಬೇಕಿಲ್ಲ. ಆತ್ಮವಿಶ್ವಾಸ ಮತ್ತು ನಂಬಿಕೆ ಇದ್ದರೆ ಸಾಕು. ಕಳೆದ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆ ನಡೆದಿಲ್ಲ. ಕೋವಿಡ್-೧೯ ಭೀತಿಯಿಂದ ೧೦ನೇ ತರಗತಿ ಮತ್ತು ಪ್ರಥಮ ಪಿಯುಸಿಯಲ್ಲಿನ ಶೈಕ್ಷಣಿಕ ಸಾಧನೆ ಆಧಾರದ ಮೇಲೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲಾಗಿತ್ತು.
ಆದರೆ ಈ ಬಾರಿ ಆನ್‌ಲೈನ್ ತರಗತಿಗಳು ಹಾಗೂ ಭೌತಿಕ ತರಗತಿಗಳು ನಡೆದಿವೆ. ಆದರೂ ಪೂರ್ಣ ಪ್ರಮಾಣದಲ್ಲಿ ತರಗತಿಗಳು ನಡೆದಿಲ್ಲ ಎಂಬ ಕಾರಣಕ್ಕೆ ಈ ಬಾರಿಯ ಪರೀಕ್ಷೆಯನ್ನು ಸ್ವಲ್ಪ ಮಟ್ಟಿಗೆ ಸರಳೀಕರಣಗೊಳಿಸ ಲಾಗಿದೆ. ಒಂದು ಅಂಕದ ೧೫ ಪ್ರಶ್ನೆಗಳಿಗೆ ಬಹು ಆಯ್ಕೆಯ ಉತ್ತರಗಳನ್ನು ನೀಡಲಾಗಿದೆ. ಹೀಗಾಗಿ, ಮಕ್ಕಳು ಆತಂಕ ಪಡುವ ಅಗತ್ಯವಿಲ್ಲ. ಪ್ರಾಯೋಗಿಕ ಪರೀಕ್ಷೆಯ ಅಂಕಗಳು ಇರುತ್ತವೆ. ಹೀಗಾಗಿ ಓದಿ, ಬರೆದಿದ್ದು ಮತ್ತು ಅರ್ಥೈಸಿಕೊಂಡಿದ್ದನ್ನು ಪರೀಕ್ಷೆಯಲ್ಲಿ ಉತ್ತಮ ರೀತಿಯಲ್ಲಿ ಪ್ರಸ್ತುತಪಡಿಸಿದರೆ ನೀವು ಅತ್ಯುತ್ತಮ ಅಂಕ ಸಾಧನೆ ಮಾಡಲು ಸಾಧ್ಯವಾಗುತ್ತದೆ.
ಅತ್ಯುತ್ತಮ ಅಂಕ ಸಾಧನೆಯು ಮುಂದಿನ ಶೈಕ್ಷಣಿಕ, ವೃತ್ತಿ ಜೀವನಕ್ಕೆ ಹೆಚ್ಚಿನ ವಿಶ್ವಾಸ ಮತ್ತು ಉತ್ಸಾಹವನ್ನು ನೀಡುತ್ತದೆ. ಹೀಗಾಗಿ, ಈ ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಿ, ಸಿದ್ದತೆಯಿಂದ ಪರೀಕ್ಷೆಯನ್ನು ಬರೆಯಿರಿ. ಪಿಯುಸಿ ಮುಖ್ಯ ಪರೀಕ್ಷೆಯ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಇಲಾಖೆಯ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾಗಿದೆ. ಮುಖ್ಯ ಪರೀಕ್ಷೆ ಮಾದರಿಯ ಕಾಲೇಜುಗಳಲ್ಲಿ ಪೂರ್ವ ಸಿದ್ಧತೆ ಪರೀಕ್ಷೆಗಳನ್ನು ನಡೆಸಲಾಗಿದೆ. ಹೀಗಾಗಿ, ಮುಖ್ಯ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಹೇಗಿರುತ್ತದೆ ಎಂಬ ಸ್ಪಷ್ಟ ಚಿತ್ರಣ ನಿಮಗೆ ಈಗಾಗಲೇ ಸಿಕ್ಕಿದೆ.
ಪರೀಕ್ಷೆಯ ಭಯದ ಕಾರಣ ‘ಪಾಸ್’ ಆದರೆ ಸಾಕು ಎನ್ನುವ ಮನೋಭಾವದಿಂದ ವಿದ್ಯಾರ್ಥಿಗಳು ಹೊರ ಬರಬೇಕು. ಪರೀಕ್ಷೆಯ ಪೂರ್ವದಲ್ಲಿ ಮತ್ತು ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಮನಸ್ಸನ್ನು ಕೇಂದ್ರೀಕರಿಸಬೇಕು. ಆಗಾಗ ದೀರ್ಘ ಉಸಿರಾಟ ಮಾಡುವ ಮೂಲಕ ಮನಸ್ಸನ್ನು ಶಾಂತಗೊಳಿಸಿಕೊಳ್ಳ
ಬೇಕು. ಅನ್ಯ ವಿಚಾರಗಳನ್ನು ತಲೆಯಿಂದ ತೆಗೆದು ಕೇವಲ ಓದಿದ್ದನ್ನು ಬರೆಯುವುದರ ಕಡೆ ಗಮನ ಹರಿಸಬೇಕು.
ಶಾಂತ ಚಿತ್ತವಿದ್ದರೆ ಪರೀಕ್ಷೆಯನ್ನು ಉತ್ತಮ ರೀತಿಯಲ್ಲಿ ಎದುರಿಸಲು ಸಾಧ್ಯವಾಗುತ್ತದೆ. ಓದಿದ್ದು ಬೇಗ ನೆನಪಿಗೆ ಬರುತ್ತದೆ. ಸಾಕಷ್ಟು ವಿದ್ಯಾರ್ಥಿಗಳು ತಮಗೆ ಏಕಾಗ್ರತೆ ಸಾಧಿಸಲು ಆಗುವುದಿಲ್ಲ ಎನ್ನುತ್ತಾರೆ. ಇದಕ್ಕೆ ಪರಿಹಾರವಿದೆ. ಏಕಾಗ್ರತೆ ಸಾಧಿಸಲು ಮಕ್ಕಳು ಪ್ರತಿದಿನ ಸೂರ್ಯ ನಮಸ್ಕಾರ,
ಯೋಗಾಸನ ಮತ್ತು ಧ್ಯಾನ ಮಾಡುವುದು ಉತ್ತಮ ಕ್ರಮವಾಗಿದೆ. ಯೋಗಾಸನ, ಧ್ಯಾನದಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಜತೆಗೆ ಏಕಾಗ್ರತೆ ಬರುತ್ತದೆ. ಇದರಿಂದ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಹದಿ ಹರೆಯದ ವಯಸ್ಸಿನ ಚಂಚಲ ಮನಸ್ಸಿಗೆ ಆರಂಭದಲ್ಲಿ ಧ್ಯಾನ, ಯೋಗಾಸನ ಕಷ್ಟ ಎನಿಸಿದರೂ ನಂತರ ಅಭ್ಯಾಸವಾಗುತ್ತದೆ.
ಕೋವಿಡ್-೧೯ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಇಡಿ ಜಗತ್ತು ಅನುಸರಿಸಿದ ನೈಸರ್ಗಿಕ ಸೋಂಕು ನಿಯಂತ್ರಣ ಮತ್ತು ಚಿಕಿತ್ಸಾ ಕ್ರಮವಾಗಿರುವ ಪ್ರಾಣಾಯಾಮ ಮಾಡುವಂತೆ ದೇಶ-ವಿದೇಶಗಳ ವೈದ್ಯರು, ವಿಜ್ಞಾನಿಗಳು ಸಲಹೆ ನೀಡಿದ್ದನ್ನು ನಾವಿಲ್ಲಿ ನೆನೆಪಿಸಿಕೊಳ್ಳಬಹುದು. ಅಭ್ಯಾಸ ಇಲ್ಲದವರು ಕನಿಷ್ಟ ಐದು ಹತ್ತು ನಿಮಿಷಗಳ ಕಾಲ ಮಾಡುವ ಸರಳ ವ್ಯಾಯಾಮ ಸಹಕಾರಿಯಾಗಲಿದೆ. ರಾಜ್ಯದ ವಿವಿಧ ಕಾಲೇಜುಗಳಿಗೆ ಭೇಟಿ ನೀಡಿದ ವೇಳೆ
ಪಿಯು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಉತ್ಸಾಹ ಕಂಡು ನನಗೆ ಖುಷಿಯಾಯಿತು. ಬಹುತೇಕ ೨ ವರ್ಷಗಳ ಕಾಲ ತರಗತಿಗಳು ನಡೆಯದೇ ಸಹಪಾಠಿಗಳ ಜತೆಗಿನ ಒಡನಾಟವನ್ನು ಕಳೆದುಕೊಂಡಿದ್ದ ವಿದ್ಯಾರ್ಥಿಗಳು ಯಾವಾಗ ಕಾಲೇಜು ಆರಂಭವಾಗುತ್ತದೆ ಎಂದು ಕಾಯುತ್ತಿದ್ದರು.
ಕೋವಿಡ್-೧೯ ನಿರ್ಬಂಧಗಳನ್ನು ಸರ್ಕಾರ ಸಡಿಲಗೊಳಿಸಿದ ಬಳಿಕ ಸಾಕಷ್ಟು ವಿದ್ಯಾರ್ಥಿಗಳು ಕಾಲೇಜುಗಳಿಗೆ ಭೇಟಿ ನೀಡಿ ಕ್ಯಾಂಪಸ್‌ನಲ್ಲಿ ಕೆಲ ಕಾಲ ಓಡಾಡಿ ಮನೆಗೆ ಹೋಗುತ್ತಿದ್ದರು. ಕಾಲೇಜು ಆರಂಭವಾದ ಕೂಡಲೇ ಕಾಲೇಜಿಗೆ ಉತ್ಸಾಹದಿಂದ ಧಾವಿಸಿದರು. ತರಗತಿಗಳಿಗೆ ನಿಯಮಿತವಾಗಿ ಹಾಜರಾ ದರು. ಶಿಕ್ಷಣ, ಶಾಲೆ ಮತ್ತು ಕಾಲೇಜು ಜೀವನವು ಕೇವಲ ಅಕ್ಷರ eನ, ಪದವಿ, ಸರ್ಟಿಫಿಕೇಟ್ ಪಡೆದುಕೊಳ್ಳುವುದು ಅಷ್ಟೇ ಅಲ್ಲ. ಪರಸ್ಪರ ನಡುವಿನ ಒಡನಾಟ, ಸ್ನೇಹ, ಬಾಂಧವ್ಯ ಮತ್ತು ಸಾಮಾಜಿಕ ಜೀವನದ ಮಹತ್ವದ ಮಜಲುಗಳು. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಕೆಯು
ವಿದ್ಯಾರ್ಥಿಗೆ ಸಾಧನೆ ಎನಿಸಿಕೊಳ್ಳುತ್ತದೆ. ಆದರೆ, ಎರಡು ವರ್ಷಗಳ ಕಾಲ ಕಾಲೇಜಿನಲ್ಲಿ ಕಲಿತದ್ದು ಮತ್ತು ಕಾಲೇಜು ದಿನಗಳ ಅನುಭವಗಳು ನಮ್ಮ ಮುಂದಿನ ಜೀವನಕ್ಕೆ ದಾರಿ ಮಾಡಿಕೊಡುತ್ತವೆ. ಶಿಸ್ತು, ಬದ್ಧತೆ, ಆರೋಗ್ಯಯುತ ಸಮಾಜ ನಿರ್ಮಾಣ ಮತ್ತು ದೇಶದ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಸಹಕಾರಿಯಾಗುತ್ತವೆ.
ಮೊಬೈಲ್‌ನಿಂದ ದೂರವಿರಲೇಬೇಕು: ಮಕ್ಕಳು ಏಕಾಗ್ರತೆ ಸಾಧಿಸದೇ ಇರಲು ಮೊಬೈಲ ಫೋನ್ ಅತಿ ಯಾದ ಬಳಕೆ ಪ್ರಮುಖ ಕಾರಣವಾಗಿದೆ. ಮೊಬೈಲ್ ಫೋನ್ ಬಳಕೆ ಕಡಿಮೆ ಮಾಡಿ ಓದಿನ ಕಡೆ ಗಮನ ಹರಿಸ ಬೇಕಿದೆ. ಹಿಂದಿನ ವರ್ಷಗಳಲ್ಲಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ ವಿದ್ಯಾರ್ಥಿ ಗಳನ್ನು ಕೇಳಿದಾಗ ಅವರು ಮೊಬೈಲ್ ಫೋನ್ ಬಳಕೆಯನ್ನು ಅತಿ ಕಡಿಮೆ ಪ್ರಮಾಣದಲ್ಲಿ ಮಾಡಿರುತ್ತಾರೆ. ಇವತ್ತಿನ ಕಾಲದಲ್ಲಿ ಕಲಿಕೆ ಮತ್ತು
ಸಂಪರ್ಕಕ್ಕೆ ಮೊಬೈಲ್ ಅನಿವಾರ್ಯವಾಗಿದೆ. ಆದರೆ ವಿದ್ಯಾರ್ಥಿ ಜೀವನದಲ್ಲಿ, ಅದರಲ್ಲೂ ಪರೀಕ್ಷೆ ಸಂದರ್ಭದಲ್ಲಿ ಮೊಬೈಲ್ ಫೋನ್‌ನಿಂದ ದೂರ ಇರಬೇಕು. ವಿದ್ಯಾರ್ಥಿಗಳು ಮೊಬೈಲ್ ಫೋನ್‌ನಿಂದ ದೂರವಿದ್ದಷ್ಟು ಉತ್ತಮ. ಅದರಿಂದ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ.
ಜ್ಞಾನಾರ್ಜನೆಗಾಗಿ ಓದಬೇಕು: ಪರೀಕ್ಷೆಯ ಆತಂಕ ನೀಗಿಸಲು ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮದಲ್ಲಿ ಹೇಳಿದ ಪ್ರಮುಖ ವಿಷಯವನ್ನು ನಾವೆಲ್ಲರೂ ಎಂದೆಂದಿಗೂ ನೆನಪಿನಲ್ಲಿಟ್ಟುಕೊಳ್ಳಲೇಬೇಕು. ಪರೀಕ್ಷೆಯಲ್ಲಿ ಪಾಸ್ ಆಗಲು ಅಥವಾ ಉತ್ತಮ ಅಂಕ ಸಾಧನೆಗಾಗಿ ಓದುವ ಬದಲು ಜ್ಞಾನಾರ್ಜನೆಗಾಗಿ ಓದಬೇಕು. ಏಕೆಂದರೆ, ಶಿಕ್ಷಣ ಪಡೆಯುವುದೇ ಜ್ಞಾನಾರ್ಜನೆಗಾಗಿ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಈ ರೀತಿ ಓದುವುದರಿಂದ ಅದು ಸುದೀರ್ಘವಾಗಿ ನಮ್ಮ ತಲೆಯಲ್ಲಿ ಉಳಿದುಕೊಳ್ಳುತ್ತದೆ. ದೇಶದ ಉತ್ತಮ ಮತ್ತು
ಜವಾಬ್ದಾರಿಯುತ ಪ್ರಜೆಯಾಗಿ ಜೀವನ ನಡೆಸಲು ನೆರವಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳು, ನೇಮಕ ಸಂಬಂಧಿಸಿದ ಪರೀಕ್ಷೆಗಳಿಗೆ, ಸಂದರ್ಶನಗಳಿಗೆ ನೆರವಾಗುತ್ತದೆ.
ದೈನಂದಿನ ಜೀವನದಲ್ಲಿ ನಮಗೆ ಎದುರಾಗುವ ಪ್ರಶ್ನೆಗಳಿಗೆ ಕೂಡಲೇ ಪರಿಣಾಮಕಾರಿಯಾಗಿ ಉತ್ತರ ನೀಡಲು ನೆರವಾಗುತ್ತದೆ. ಇದು ಜೀವನದಲ್ಲಿ
ಯಶಸ್ಸು ಸಾಧಿಸಲು ಖಂಡಿತ ನೆರವಾಗುತ್ತದೆ. ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು, ಪುನರಾವರ್ತಿತ ಹಾಗೂ ಖಾಸಗಿ ಅಭ್ಯರ್ಥಿಗಳು ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು. ಭಯ, ಆತಂಕವನ್ನು ಬಿಡಬೇಕು. ಪರೀಕ್ಷಾ ಕೇಂದ್ರಕ್ಕೆ ಸ್ವಲ್ಪ ಬೇಗ ತೆರಳಿದರೆ ಗೊಂದಲಗಳಿಗೆ ಆಸ್ಪದ ಇರುವುದಿಲ್ಲ.
ಎಲ್ಲ ವಿದ್ಯಾರ್ಥಿಗಳಿಗೆ ಶುಭಾಶಯಗಳು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು