Thursday, 7th December 2023

ಮನಸ್ಸಿಗೆ ತೋಚಿದ್ದನ್ನು ಗೀಚಿದ್ದೇನೆ ಆತ್ಮಾಭಿವ್ಯಕ್ತಿ ಹಕ್ಕು ಚಲಾಯಿಸಿದ್ದೇನೆ

ನರೇಂದ್ರ ಮೋದಿ ಬರೆದ ಮುನ್ನುಡಿ

ಪ್ರಧಾನಿ ನರೇಂದ್ರ ಮೋದಿ ಅವರ ವಿಚಾರ ಮತ್ತು ಟಿಪ್ಪಣಿಗಳ ಸಂಗ್ರಹವೇ ಲೆಟರ್‌ಸ್‌ ಟು ಮದರ್ ಪುಸ್ತಕ. ಗುಜರಾತಿಯಲ್ಲಿ
ಪ್ರಕಟವಾಗಿದ್ದ ಸಾಕ್ಷಿ ಭಾವದ ಇಂಗ್ಲಿಷ್ ಅವತರಣಿಕೆ ಗುರುವಾರ ಬಿಡುಗಡೆಯಾಗಿದೆ. ಇದು ಸ್ವತಃ ಮೋದಿ ಅವರೇ ಬರೆದಿರುವ ಮುನ್ನುಡಿ. ಲೇಖಕಿ ಭಾವನಾ ಸೊಮಯಾ ಈ ಪುಸ್ತಕವನ್ನು ಇಂಗ್ಲಿಷ್‌ಗೆ ಭಾಷಾಂತರಿಸಿದ್ದಾರೆ.

ಇದು ಸಾಹಿತ್ಯಕ ಬರವಣಿಗೆಯಲ್ಲ. ಈ ಪುಸ್ತಕದಲ್ಲಿ ಬರುವ ಸಂಗತಿಗಳು ನನ್ನ ಮನಸ್ಸಿನಲ್ಲಿ ಆಗಾಗ ಬಂದುಹೋದ ಯೋಚನೆ ಗಳ ಪ್ರತಿಬಿಂಬಗಳಷ್ಟೆ. ಅಲ್ಲಲ್ಲಿ ಇವು ಕಚ್ಚಾ ಆಗಿ, ಯಾವುದೇ ಫಿಲ್ಟರ್ ಇಲ್ಲದೆ ಹೇಗೆ ನನ್ನ ಮನಸ್ಸಿಗೆ ತೋಚಿವೆಯೋ ಹಾಗೇ ಅಭಿವ್ಯಕ್ತಿಗೊಂಡಿವೆ.

ಸಾರ್ವಜನಿಕ ವ್ಯಕ್ತಿಯನ್ನು ಯಾವಾಗಲೂ ಆತನ ಹುದ್ದೆೆಯ ಮೇಲೆ ಅಳೆಯುತ್ತಾರೆ. ಅವನು ಏನು ಹೇಳುತ್ತಾನೆ ಅಥವಾ ಏನು
ಮಾಡುತ್ತಾನೆ ಎಂಬುದಕ್ಕಿಂತ ಆತನ ವ್ಯಕ್ತಿತ್ವವನ್ನು ಉತ್ಪ್ರೇಕ್ಷಿಸಿ ಹೇಳಲಾಗಿರುತ್ತದೆ. ಹೀಗಾಗಿ ಅವನ ಹಿನ್ನೆಲೆಯಲ್ಲಿರುವ ನಿಜವಾದ ಇಮೇಜನ್ನು ಹುಡುಕುವುದು ಬಹಳ ಕಷ್ಟ. ಅಥವಾ ಇದನ್ನು ಹೀಗೆ ಹೇಳೋಣ. ಒಂದು ಹಂತದಲ್ಲಿ ನಮ್ಮ ಮಾಸ್ಕ್ನ ಹಿಂದಿರುವ ನಿಜವಾದ ಮುಖವನ್ನು ಹುಡುಕುವ ಆಸೆ ನಮಗೇ ಹೊರಟುಹೋಗಿರುತ್ತದೆ.

ಮನುಷ್ಯನಿಗೆ ಬದುಕನ್ನು ಸರಳವಾಗಿ ಬದುಕಲು ಸಾಧ್ಯವಾಗುವುದೂ ಒಂದು ಅದೃಷ್ಟ. ಆಳದಲ್ಲಿ ನಾವೆಲ್ಲರೂ ಸಾಮಾನ್ಯ
ಜೀವಿಗಳೇ. ವಿಶ್ವದಲ್ಲಿರುವ ಧನಾತ್ಮಕ ಮತ್ತು ಋಣಾತ್ಮಕ ಶಕ್ತಿಗಳು ಎಲ್ಲರ ಮೇಲೂ ಸಮಾನವಾಗಿ ಪ್ರಭಾವ ಬೀರುತ್ತಿರುತ್ತವೆ. ದೌರ್ಬಲ್ಯಗಳು, ಮೌಲ್ಯಗಳು, ಭರವಸೆ, ಬೇಸರ, ಪ್ರೀತಿ, ಮೋಹ, ನಿರೀಕ್ಷೆ ಅಥವಾ ಗುರಿಗಳು ಇಲ್ಲದವರು ಯಾರೂ ಇಲ್ಲ. ನಾವ್ಯಾರೂ ಈ ಸಂಗತಿಗಳಿಗಿಂತ ಮೇಲಲ್ಲ.

ನಿಮ್ಮಂತೆ ನಾನೂ ಕೂಡ ಒಬ್ಬ ಸಾಮಾನ್ಯ ಜೀವಿ. ನನಗೂ ಒಂದಷ್ಟು ಶಕ್ತಿ ಮತ್ತು ದೌರ್ಬಲ್ಯಗಳಿವೆ. ಎಲ್ಲರಂತೆ ನಾನೂ ಕೂಡ ಹೆಚ್ಚೆಚ್ಚು ತಿಳಿದುಕೊಳ್ಳಲು ಮತ್ತು ವಿಕಾಸ ಹೊಂದಲು ನಿರಂತರವಾಗಿ ಪ್ರಯತ್ನಿಸುತ್ತಿರುತ್ತೇನೆ. ಹಿಂದೆ ಯಾವಾಗಲೋ ನನ್ನ ಮೇಲೆ ವಿಪರೀತ ಒತ್ತಡವಿದ್ದಾಗ ಒಮ್ಮೆ ಮಾತೃ ದೇವತೆಗೆ ಪತ್ರಗಳನ್ನು ಬರೆಯಲು ಆರಂಭಿಸಿದೆ. ಕ್ರಮೇಣ ಅದೊಂದು ಅಭ್ಯಾಸವೇ ಆಗಿಹೋಯಿತು. ನಾನು ಆಕೆಯನ್ನು ‘ಜಗತ್ ಜನನಿ’ ಎಂದು ಕರೆಯುತ್ತೇನೆ. ಪ್ರತಿ ರಾತ್ರಿ ಹಾಸಿಗೆಗೆ ಹೋಗುವುದಕ್ಕಿಂತ ಮುಂಚೆ ಆಕೆಯ ಜತೆಗೆ ನನ್ನ ಹೃದಯಾಂತರಾಳದ ಚಿಂತನೆಗಳನ್ನು ಹಂಚಿಕೊಳ್ಳತೊಡಗಿದೆ. ಅಚ್ಚರಿಯೆಂದರೆ ಹೀಗೆ ಮಾಡುವುದರಿಂದ ನನ್ನಲ್ಲಿ ಶಾಂತಿ ನೆಲೆಸತೊಡಗಿತು. ಎಲ್ಲರೂ ಮಲಗುವವರೆಗೆ ಕಾದಿದ್ದು, ನಂತರ ಯಾವುದಾದರೊಂದು ಮೂಲೆಗೆ ಹೋಗಿ ಸುಮ್ಮನೆ ನನ್ನ ನೋಟ್‌ಬುಕ್‌ನಲ್ಲಿ ಬರೆಯುತ್ತಿದ್ದೆ.

ಹಾಗೆ ಬರೆದಿದ್ದು ಪುಸ್ತಕ ಪ್ರಕಟಿಸಬೇಕು ಎಂಬ ಉದ್ದೇಶದಿಂದ ಅಲ್ಲವೇ ಅಲ್ಲ. ನನಗಾಗಿ ನಾನು ಬರೆದುಕೊಳ್ಳುತ್ತಿದ್ದೆ ಅಷ್ಟೆೆ.
ಇಷ್ಟಕ್ಕೂ ನಾನು ಲೇಖಕನಲ್ಲ. ನಮ್ಮಲ್ಲಿ ಬಹಳಷ್ಟು ಜನರು ಲೇಖಕರಲ್ಲ. ಆದರೆ, ಎಲ್ಲರಿಗೂ ಒಂದೊಂದು ಅಭಿವ್ಯಕ್ತಿಯಿದೆ. ತಮ್ಮ ಮನಸ್ಸಿನಲ್ಲಿರುವುದನ್ನು ಹೊರಹಾಕಲೇಬೇಕು ಎಂಬ ಒತ್ತಡ ತೀವ್ರವಾದಾಗ ಪೆನ್ನು, ಪೇಪರು ತೆಗೆದುಕೊಳ್ಳದೆ ಬೇರೆ ದಾರಿಯೇ ಇರುವುದಿಲ್ಲ. ಅದನ್ನು ಬರೆದು ಬೇರೆಯವರಿಗೆ ತೋರಿಸುವ ಉದ್ದೇಶ ನಮಗಿರುವುದಿಲ್ಲ. ಬದಲಿಗೆ ನಮ್ಮ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ, ನಮ್ಮ ಹೃದಯ ಹಾಗೂ ತಲೆಯಲ್ಲಿರುವ ವಿಚಾರಗಳನ್ನು, ಭಾವನೆಗಳನ್ನು ವಿಮರ್ಶೆಗೆ ಒಡ್ಡುಕೊಳ್ಳುವ ಹಾಗೂ ಏಕೆ ನಮಗೆ ಹಾಗನ್ನಿಸುತ್ತಿದೆ ಎಂಬುದಕ್ಕೆ ಕಾರಣ ಕಂಡುಕೊಳ್ಳುವ ಪ್ರಯತ್ನವಷ್ಟೇ ಅದಾಗಿರುತ್ತದೆ. ನಾನು ಹೀಗೆ ಬರವಣಿಗೆ ಆರಂಭಿಸಿದ್ದರ ಪರಿಣಾಮ ಮಾತ್ರ ಅದ್ಭುತವಾಗಿತ್ತು. ಅದು ಜಗತ್ ಜನನಿಯ ಜತೆಗಿನ ಒನ್-ವೇ ಸಂಭಾಷಣೆಯಾಗಿದ್ದರೂ ಪ್ರತಿದಿನ ನಾನು ಮಾಡಿದ ಕಾರ್ಯಗಳನ್ನು ರೀವೈಂಡ್ ಮಾಡಿಕೊಳ್ಳುವ ಶಿಸ್ತು ಬಹಳ ವಿಶಿಷ್ಟ ರೀತಿಯಲ್ಲಿ ನನ್ನೊಳಗಿನ ಒತ್ತಡವನ್ನು ನಿವಾರಿಸಿತು. ಯಾವುದೋ ಒಂದು ದೊಡ್ಡ ಶಕ್ತಿ ನನ್ನನ್ನು ರಕ್ಷಿಸುತ್ತಿರುವಂತೆ ಭಾಸವಾಗ ತೊಡಗಿತು.

ಬಹಳ ವರ್ಷಗಳವರೆಗೆ ನಾನು ಹೀಗೆ ಪ್ರತಿ ರಾತ್ರಿಯೂ ತದೇಕಚಿತ್ತದಿಂದ ಕುಳಿತು ಬರೆದಿದ್ದೇನೆ. ಅಷ್ಟೇ ಅಲ್ಲ, ಕೆಲಗಳಿಗೊಮ್ಮೆ
ಅವೆಲ್ಲವುಗಳನ್ನೂ ವ್ಯವಸ್ಥಿತವಾಗಿ ಹರಿದು ಹಾಕಿ ಸುಟ್ಟುಬಿಟ್ಟಿದ್ದೇನೆ. ಹೀಗೆ ಕಾಲಾನುಕ್ರಮದಲ್ಲಿ ಅಸಂಖ್ಯ ಪುಟಗಳನ್ನು ಬೆಂಕಿಗೆ
ಹಾಕಿದ್ದೇನೆ.  ಒಂದು ದಿನ ಪತ್ರಗಳಿಗೆ ಬೆಂಕಿ ಹಚ್ಚುವ ಸಿದ್ಧತೆಯಲ್ಲಿದ್ದಾಗ ಆರ್‌ಎಸ್‌ಎಸ್‌ನ ನನ್ನ ಸ್ನೇಹಿತ ನರೇಂದ್ರ ಭಾಯಿ ಪಂಚಾಶರ ಅನಿರೀಕ್ಷಿತವಾಗಿ ಮನೆಗೆ ಬಂದರು. ನಾನು ಕೈತೋಟದಲ್ಲಿ ಪತ್ರಗಳನ್ನು ಹರಿಯುವುದರಲ್ಲಿ ಬ್ಯುಸಿಯಾಗಿದ್ದ ಜಾಗಕ್ಕೇ ಅವರ ಆಗಮನವಾಯಿತು. ತಕ್ಷಣ ನನ್ನ ಕೈಲಿ ಉಳಿದಿದ್ದ ಕಾಗದಗಳನ್ನು ಕಿತ್ತುಕೊಂಡರು. ನನ್ನ ಚಿಂತನೆಗಳನ್ನೆಲ್ಲ ನಾನೇ ನಾಶಪಡಿಸುತ್ತಿರುವುದಕ್ಕೆ ಚೆನ್ನಾಗಿ ಬೈದರು. ಅವು ಎಷ್ಟು ಅಮೂಲ್ಯ ಮತ್ತು ಏಕೆ ಅವುಗಳನ್ನು ದಾಖಲಿಸಿಡಬೇಕು ಎಂಬ ಬಗ್ಗೆ ದೀರ್ಘ ಪ್ರವಚನ ನೀಡಿದರು. ‘ನೀನು ಇವುಗಳನ್ನು ಬರೆದಿದ್ದೀಯಾ ಮತ್ತು ಇಷ್ಟು ಕಾಲ ಜತನದಿಂದ ಇಟ್ಟಿದ್ದೀಯಾ ಎಂಬುದೇ ಇವು ನಿನಗೆ ಅಮೂಲ್ಯ ಎಂಬುದಕ್ಕೆ ಸಾಕ್ಷಿ. ಅವುಗಳನ್ನು ನಾಶಪಡಿಸುವ ಮೂಲಕ ನಿನ್ನ ಅಂತರಾತ್ಮಕ್ಕೇ ಅವಮಾನ ಮಾಡು ತ್ತಿದ್ದೀಯಾ’ ಎಂದರು.

ಅವರ ಮಾತು ನನ್ನ ಮೇಲೆ ಪ್ರಭಾವ ಬೀರಿತು. ಇನ್ನುಮುಂದೆ ನನ್ನ ಅಂತರಾತ್ಮಕ್ಕೆ ಗೌರವ ನೀಡುತ್ತೇನೆಂದೂ, ಮೂರು ತಿಂಗಳಿ ಗೊಮ್ಮೆ ನಡೆಸುವ ಈ ಯಜ್ಞವನ್ನು ಇಲ್ಲಿಗೇ ನಿಲ್ಲಿಸುತ್ತೇನೆಂದೂ ಅವರಿಗೆ ಮಾತು ಕೊಟ್ಟೆೆ. ನಂತರ ಹಲವಾರು ವರ್ಷಗಳೇ ಕಳೆದವು. ಅದು ಹೇಗೋ ಗೊತ್ತಿಲ್ಲ, ಇಮೇಜ್ ಪಬ್ಲಿಷರ್ಸ್‌ಗೆ ನಾನು ಬರೆದಿಟ್ಟ ಪತ್ರಗಳ ಬಗ್ಗೆ ತಿಳಿಯಿತು. ಅವರು ಈ ಪತ್ರಗಳ ನ್ನೆಲ್ಲ ಸೇರಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸುವುದಕ್ಕೆ ನನ್ನ ಒಪ್ಪಿಗೆ ಕೇಳಿದರು. ನಾನು ಬೇಡ ಅಂದೆ. ಆದರೆ, ಮತ್ತೆ ಪಂಚಾಶರ ಭಾಯಿ ನಾನು ಒಪ್ಪಿಕೊಳ್ಳಲೇಬೇಕೆಂದು ಒತ್ತಾಯ ಮಾಡಿದರು. ಬಹುಶಃ ಅವು ಪ್ರಕಟವಾಗದೇ ಹೋದರೆ ನಾನು ಇನ್ನಾವತ್ತೋ ಒಂದು ದಿನ ಮತ್ತೆ ಸುಟ್ಟುಹಾಕುತ್ತೇನೆ ಎಂದು ಅವರಿಗೆ ಅನ್ನಿಸಿರಬೇಕು!

ಹಾಗೆ ನನ್ನ ಅಳಿದುಳಿದ ಪತ್ರಗಳು 2014ರಲ್ಲಿ ‘ಸಾಕ್ಷಿ ಭಾವ’ ಎಂಬ ಸಂಕಲನವಾಗಿ ಗುಜರಾತಿ ಭಾಷೆಯಲ್ಲಿ ಹೊರಬಂದವು.
ಈ ಪತ್ರಗಳು ಹಾಗೂ ಪುಸ್ತಕದ ಎಲ್ಲ ಕ್ರೆಡಿಟ್ ನನ್ನ ಸ್ನೇಹಿತ ಪಂಚಾಶರ ಭಾಯಿಗೆ ಸೇರಬೇಕು. ಅವತ್ತು ಅವರು ನಮ್ಮ ಮನೆಗೆ ಬರದೇ ಹೋಗಿದ್ದರೆ, ನನ್ನನ್ನು ತಡೆಯದೇ ಹೋಗಿದ್ದರೆ, ನನಗೆ ಬೈಯದೇ ಇದ್ದಿದ್ದರೆ ಮತ್ತು ನನಗೆ ಜ್ಞಾನೋದಯವಾಗುವಂತೆ
ಮಾಡದೆ ಹೋಗಿದ್ದರೆ, ಜಗತ್ ಜನನಿಯ ಜತೆಗಿನ ನನ್ನ ಅಂತಃಸ್ಸಾಕ್ಷಿಯ ಸಂವಾದವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಅವಕಾಶವನ್ನೇ ಕಳೆದುಕೊಳ್ಳುತ್ತಿದ್ದೆ. ಜಗತ್ ಜನನಿಯ ಜತೆಗಿನ ಆಪ್ತ ಸಮಾಲೋಚನೆಯಲ್ಲಿ ನಾನು ನನ್ನೊಳಗಿನ ಭಯ, ಬೇಸರ, ಸಂಘರ್ಷ ಹಾಗೂ ಒಬ್ಬ ಸಾಧಾರಣ ಮನುಷ್ಯನ ಸಾಧಾರಣ ಭಾವನೆಗಳನ್ನೆಲ್ಲ ಮುಕ್ತವಾಗಿ ಹಂಚಿಕೊಂಡಿದ್ದೇನೆ. ಇಲ್ಲಿರುವ ನನ್ನ ಕೆಲ ಯೋಚನೆಗಳು ಬಹಳ ವಿಕ್ಷಿಪ್ತವಾಗಿವೆ.

ಅವುಗಳಿಗೆ ಒಂದು ಆಕಾರವೇ ಇಲ್ಲ. ಬಹುಶಃ ನಮ್ಮ ಎದೆ ತುಂಬಿದ್ದಾಗ ಮನಸ್ಸು ನಮ್ಮ ಕೈಗಿಂತ ವೇಗವಾಗಿ ಓಡುತ್ತದೆ. ಹಾಗಾಗಿ ಅಲ್ಲಲ್ಲಿ ನನ್ನ ಯೋಚನೆಗಳು ಓತಪ್ರೋತವಾಗಿ ಓಡಿವೆ ಮತ್ತು ಅದೇ ವೇಳೆ ತುಂಬಿ ಹರಿಯುವಂತೆಯೂ ಇವೆ. ನಾನೇನೂ ವೃತ್ತಿಪರ ಲೇಖಕನಲ್ಲ. ನನಗೆ ಲೇಖನದ ವಿನ್ಯಾಸ ಅಥವಾ ಚೌಕಟ್ಟಿನ ಬಗ್ಗೆೆ ಗೊತ್ತಿಲ್ಲ. ಆದರೆ, ನನಗೆ ಅಂತರಾಳದ ಭಾವನೆಗಳು ಅರ್ಥವಾಗುತ್ತವೆ. ಹಾಗಾಗಿ ಇನ್ನು ನನ್ನೊಳಗೆ ಇದನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ ಅನ್ನಿಸಿದಾಗಲೆಲ್ಲ ನಾನು ನನಗೆ ಅನ್ನಿಸಿದ್ದನ್ನು ಬರೆದುಬಿಡುತ್ತೇನೆ.

ಜಗತ್ ಜನನಿಗೆ ಇದು ಅರ್ಥವಾಗುತ್ತದೆ. ಖಂಡಿತ ಆಕೆ ನನ್ನನ್ನು ಜಡ್‌ಜ್‌ ಮಾಡಲು ಹೋಗುವುದಿಲ್ಲ. ಖಂಡಿತ ಆಕೆ ನನ್ನ ಬರವಣಿಗೆ ಅಥವಾ ನಾನು ಬಳಸಿದ ಪದಗಳಿಂದ ನನ್ನನ್ನು ಅಳೆಯಲು ಹೋಗುವುದಿಲ್ಲ. ನಾನು ಗದ್ಯ ಬರೆಯುತ್ತೇನೋ, ಪದ್ಯ
ಬರೆಯುತ್ತೇನೋ, ಪ್ರಬಂಧ ಬರೆಯುತ್ತೇನೋ ಅಥವಾ ನನಗೆ ತೋಚಿದ್ದನ್ನು ಹಾಗೇ ಗೀಚುತ್ತೇನೋ ಎಂಬುದೆಲ್ಲ ಆಕೆಗೆ ಮುಖ್ಯವಲ್ಲ. ಆಕೆಗೆ ನನ್ನೊಳಗು ಅರ್ಥವಾಗುತ್ತದೆ.

ನಾನೇನನ್ನು ಅಭಿವ್ಯಕ್ತಿಗೊಳಿಸಿದ್ದೇನೋ ಅದು ಅವಳಿಗೆ ಅರ್ಥವಾಗುತ್ತದೆ. ನಾನೇನನ್ನು ಅಭಿವ್ಯಕ್ತಿಗೊಳಿಸಿಲ್ಲವೋ ಅದೂ ಅವಳಿಗೆ ಅರ್ಥವಾಗುತ್ತದೆ. ಇದು ನನಗೆ ಅರ್ಥವಾದ ಮೇಲೆ ನಾನೇಕೆ ನಾನೇ ಬರೆದಿದ್ದನ್ನು ಸುಟ್ಟುಹಾಕಲಿ? ಬಹುಶಃ ನಾನು ಬರೆದಿದ್ದನ್ನು ನಾನೇ ನಾಶಪಡಿಸಿದ್ದಕ್ಕೆ ಏನಾದರೂ ಒಂದು ತಾರ್ಕಿಕ ಕಾರಣ ನೀಡಬಹುದು ಅಂದರೆ ಹಳೆಯ ನೋವುಗಳನ್ನು ಮತ್ತೆ ಕೆದಕಿ ನೋಡುವುದು ಇನ್ನೂ ನೋವಿನ ವಿಚಾರ ಎಂದಷ್ಟೇ ಹೇಳಬಹುದು.

ಅದೇನೇ ಇರಲಿ, ಇಂದು ನಾನು ಹಳೆಯ ನೆನಪುಗಳಿಂದಲೇ ಶಕ್ತಿ ಪಡೆದುಕೊಳ್ಳುತ್ತೇನೆ. ಹಳೆಯ ಎಲ್ಲ ಸಂತೋಷದ ಕ್ಷಣಗಳು ನನ್ನ ಜತೆಗೇ ಹಾರಾಡುತ್ತಿರುತ್ತವೆ ಮತ್ತು ಎಲ್ಲ ನೋವುಗಳು ಅಳಿಸಿಹೋಗುತ್ತವೆ ಎಂಬ ನಂಬಿಕೆ ನನಗಿದೆ. ಮನಸ್ಸು ಧನಾತ್ಮಕ ವಾಗಿದ್ದರೆ ಯಾವತ್ತೂ ಭರವಸೆ ನಮ್ಮ ಜತೆಗೆ ಇರುತ್ತದೆ. ನನಗೆ ಪುಸ್ತಕಗಳೆಂದರೆ ಬಹಳ ಇಷ್ಟ. ಸಮಯ ಸಿಕ್ಕಾಗಲೆಲ್ಲ ಸಾಕಷ್ಟು ಓದುತ್ತಿರುತ್ತೇನೆ. ಕಲೆ ಹಾಗೂ ಸಂಸ್ಕೃತಿಯ ಸೌಂದರ್ಯಕ್ಕೆ ನಾನು ಮಾರುಹೋಗುತ್ತೇನೆ. ಆದರೆ, ನಾನೊಬ್ಬ ಸಾಹಿತಿ ಎಂಬ
ಭ್ರಮೆಯೆಲ್ಲ ನನಗಿಲ್ಲ. ‘ಸಾಕ್ಷಿ ಭಾವ’ದ ಗುಜರಾತಿ ಆವೃತ್ತಿಯನ್ನು ಪ್ರಕಟಿಸುವುದಕ್ಕೇ ನಾನು ಬಹಳ ಹಿಂದೆಮುಂದೆ ನೋಡಿದ್ದೆ. ಆದರೆ, ಸ್ನೇಹಿತರ ಒತ್ತಡಕ್ಕೆೆ ಕಟ್ಟುಬಿದ್ದು ಪ್ರಕಟಿಸಬೇಕಾಯಿತು. ಈಗ ಆರು ವರ್ಷಗಳ ನಂತರ ಇಂಗ್ಲಿಷ್ ಆವೃತ್ತಿ ಹೊರಬರುತ್ತಿದೆ. ಇದೊಂದು ಖುಷಿಯ ಅಚ್ಚರಿ.

ಬಹಳ ವರ್ಷಗಳ ಹಿಂದೆ ನಾವು ಬರೆದಿದ್ದನ್ನು ಈಗ ನಾವೇ ಓದಿದರೆ ಒಂಥರಾ ವಿಚಿತ್ರ ಅನ್ನಿಸುತ್ತದೆ. ಏಕೆಂದರೆ ನೀವು ಈಗ ಆಗಿನ ವ್ಯಕ್ತಿಯಾಗಿರುವುದಿಲ್ಲ. ಸಾಕಷ್ಟು ಬದಲಾಗಿರುತ್ತೀರಿ. ಈಗಿನ ಸಂದರ್ಭಗಳೂ ಬೇರೆಯಿರುತ್ತವೆ. ಆದರೂ ಅವೆಲ್ಲ ನಿಮ್ಮ
ಒಂದು ಭಾಗವೇ ಆಗಿರುವುದರಿಂದ ಮತ್ತು ನಿಮ್ಮ ಬದುಕಿನ ಪಯಣದ ಅಳಿಸಲಾಗದ ಭಾಗವೇ ಆಗಿರುವುದರಿಂದ ಮುಜುಗರ ಪಡುವ ಅಗತ್ಯವಿಲ್ಲ. ಅಂದು ನನಗೆ ಏನನ್ನಿಸುತ್ತಿತ್ತೋ ಅದನ್ನು ಅಂದು ಬರೆದಿದ್ದೇನೆ, ಇಂದು ನನಗೆ ಏನನ್ನಿಸುತ್ತದೆಯೋ ಅದನ್ನು ಇಂದು ಬರೆಯುತ್ತೇನೆ. ಅಂದೂ ನನ್ನನ್ನು ಜನರು ಜಡ್ಜ್‌ ಮಾಡಿದ್ದರು, ಇಂದೂ ಜಡ್ಜ್ ಮಾಡುತ್ತಾರೆ. ಅಂದೂ ನನಗೆ ಯಾರದೇ ಶಿಫಾರಸು ಬೇಕಾಗಿರಲಿಲ್ಲ, ಇಂದೂ ನನಗೆ ಶಿಫಾರಸು ಬೇಕಾಗಿಲ್ಲ. ನಮಗೆಲ್ಲರಿಗೂ ಆತ್ಮಾಭಿವ್ಯಕ್ತಿಯ ಹಕ್ಕಿದೆ. ನಾನು ಮಾಡಿರುವುದೂ ಅದನ್ನೇ.

Leave a Reply

Your email address will not be published. Required fields are marked *

error: Content is protected !!