Wednesday, 11th December 2024

Yagati Raghu Nadig Column: ಅಟ್ಟಂಬಟ್ಟೆ ಕೋಳಿಮೊಟ್ಟೆ ತಿಂಗ್ಳುತಂಕ ಮಾತಾಡಿಸ್ಬೇಡ..

ರಸದೌತಣ

ಯಗಟಿ ರಘು ನಾಡಿಗ್

naadigru@gmail.com

ಹಿಂದಿಯ ಖ್ಯಾತ ಗಾಯಕ ಜಗಜೀತ್ ಸಿಂಗ್ ಯಾರಿಗೆ ತಾನೇ ಗೊತ್ತಿಲ್ಲ? ಅವರು, ಜೇನುತುಪ್ಪದಲ್ಲಿ ಅದ್ದಿ ತೆಗೆದಂಥ ತಮ್ಮ ಸುಮಧುರ ಕಂಠದಲ್ಲಿ ಹಾಡಿ ಅಮರಗೊಳಿಸಿದ ಗಝಲ್ ಗಳು, ಕವಿತೆಗಳು, ಭಕ್ತಿಗೀತೆಗಳು ಒಂದೆರಡಲ್ಲ. ಈ ಪೈಕಿ ಸುದರ್ಶನ್ ಫಾಕಿರ್ ಅವರ ಈ ಅಮರಗೀತೆಯೂ ಸೇರಿದೆ: “ಯೇ ದೌಲತ್ ಭೀ ಲೇಲೋ, ಏ ಶೊಹರತ್ ಭೀ ಲೇಲೋ, ಭಲೇ ಛೀನ್ ಲೋ ಮುಝ್‌ಸೆ ಮೇರಿ ಜವಾನಿ, ಮಗರ್ ಮುಝ್‌ಕೊ ಲೌಟಾ ದೊ ಬಚ್‌ಪನ್ ಕಾ ಸಾವನ್, ವೋ ಕಾಗಜ್ ಕಿ ಕಷ್ತಿ, ವೋ ಬಾರಿಶ್ ಕಾ ಪಾನಿ” (ಓ ದೇವರೇ, ಬೇಕಿದ್ದರೆ ನನ್ನ ಈ ಸಂಪತ್ತನ್ನು ತೆಗೆದುಕೋ, ಈ ಕೀರ್ತಿಯನ್ನೂ ಸೆಳೆದುಕೋ, ನನ್ನಿಂದ ನನ್ನ ಯೌವನವನ್ನೂ ಕಸಿದುಕೋ; ಆದರೆ ನನಗೆ ಬಾಲ್ಯದ ಶ್ರಾವಣವನ್ನೂ, ಆ ಕಾಗದದ ದೋಣಿಯನ್ನೂ, ಮಳೆಯ ನೀರನ್ನೂ ಮರಳಿಸಿಬಿಡು…). ಎಂಥ ಅದ್ಭುತ ಕೋರಿಕೆ!

ಕವಿಗೆ ಇಲ್ಲಿ ಸಂಪತ್ತಾಗಲೀ ಕೀರ್ತಿಯಾಗಲೀ ಬೇಕಾಗಿಲ್ಲ; ಆತ ಹಪಹಪಿಸುತ್ತಿರುವುದು ಬಾಲ್ಯದಲ್ಲಿ ತಾನು ಅನು‌ ಭವಿಸಿದ ಶ್ರಾವಣಮಾಸದ ವಾತಾವರಣಕ್ಕಾಗಿ, ಆಗಿನ ಮಳೆಯಲ್ಲಿ ತೇಲಿಬಿಟ್ಟ ಕಾಗದದ ದೋಣಿಗಾಗಿ… ಬಾಲ್ಯ ಎಂದರೆ ಹಾಗೆಯೇ. ತೊದಲ್ನುಡಿಯಿಂದ ಪ್ರಾರಂಭಿಸಿ, ಗೆಳೆಯರೊಡನೆ ಅಬೋಧ ಭಾವನೆಗಳನ್ನು ಹಂಚಿ ಕೊಳ್ಳಲು ಶುರುಮಾಡುವ ೨-೩ರ ಪ್ರಾಯದಿಂದ ಮೊದಲ್ಗೊಂಡು ಸರಿಸುಮಾರು ಪ್ರಾಥಮಿಕ/ಮಾಧ್ಯಮಿಕ ಶಾಲೆಯ ವರೆಗಿನ ಬಾಲ್ಯವಿದೆಯಲ್ಲಾ, ಆಗ ನಮಗಾಗುವ ಅನುಭವಗಳು ಹಸಿ ಜೇಡಿಮಣ್ಣಿನ ಮೇಲೆ ಗಾಜಿನ ಚೂರಿನಿಂದ ಬರೆದಷ್ಟು ಸುಟವಾಗಿ ಮನದಲ್ಲಿ ಮೂಡಿಬಿಡುತ್ತವೆ.

ಕಾರಣ, ಬಾಲ್ಯದಲ್ಲಿನ ಮನಸ್ಸು ಸುಕ್ಕಿಲ್ಲದ ಬಿಳಿಹಾಳೆ! ಜತೆಗೆ ಆ ಘಟ್ಟದಲ್ಲಿ ಒಡನಾಡಿಗಳ ನಿರ್ವ್ಯಾಜ ಸ್ನೇಹ ವಿರುತ್ತದೆ, ಷರತ್ತಿಲ್ಲದ ಪ್ರೀತಿ-ವಾತ್ಸಲ್ಯ ಗಳಿರುತ್ತವೆ, ಒಬ್ಬರನ್ನೊಬ್ಬರು ಬಿಟ್ಟಿರಲಾಗದ ಅನನ್ಯ ನಂಟಿರುತ್ತದೆ.
ಬಾಲ್ಯದ ನೆನಪುಗಳನ್ನೆಲ್ಲಾ ಹೃದಯದ ಕ್ಯಾಮೆರಾದಲ್ಲಿ ಸೆರೆಹಿಡಿದು ಸ್ಮೃತಿಕೋಶದ ಟ್ರಂಕಿನಲ್ಲಿ ತೂರಿಸಿ ಭದ್ರವಾಗಿ
ಬೀಗ ಜಡಿದು ಕಾಪಿಟ್ಟುಕೊಂಡವರು, ಮುಂದೆ ಯಾವಾಗಲಾದರೊಮ್ಮೆ ಬೇಸರವಾದಾಗ ಅವನ್ನು ಹೊರ ತೆಗೆದು ಆಸ್ವಾದಿಸಿದರೆ ‘ಮನಸ್ಸು ಫ್ರೆಶ್, ದೇಹ ರಿಫ್ರೆಶ್’ ಆಗೋದು ಅಪ್ಪಟ ಹದಿನಾರಾಣೆ ಸತ್ಯ. ಕಾರಣ, ಮನುಷ್ಯನ ಜೀವಿತದ ಬೇರಾವ ಕಾಲಘಟ್ಟದಲ್ಲೂ ಪ್ರಾಯಶಃ ದಕ್ಕದ ಮುಗ್ಧ, ಪರಿಶುದ್ಧ ಹಾಗೂ ಆಹ್ಲಾದಕರ ಅನುಭೂತಿ ಗಳಾಗಿರುತ್ತವೆ ಅವು.

ಚಂದಮಾಮನನ್ನು ತೋರಿಸಿಕೊಂಡು ಅಮ್ಮ ಉಣಿಸಿದ ತುತ್ತು, ಅದನ್ನು ಉಂಡ ಮೇಲೆ ನೀರಿನ ಹಂಗಿಲ್ಲದೆ ಅವಳ ಸೆರಗಿನಂಚಲ್ಲೇ ಬಾಯೊರೆಸಿಕೊಂಡಾಗಿನ ಸಹಜಸ್ವಾತಂತ್ರ್ಯ, ಗುಮ್ಮ ಬರುವನೆಂಬ ಹೆದರಿಕೆಯಲ್ಲಿ ಅಪ್ಪನ ಮೊರೆ ಹೋದಾಗ ಆ ‘ಹೀರೋ’ನಿಂದ ದಕ್ಕಿದ ಬಿಸಿಯಪ್ಪುಗೆ, ಹಿರಿಯಜ್ಜಿ ಹಿಂಡಿ ಬಿಸಿಲಲ್ಲಿ ಒಣಹಾಕಿದ ಫೇಣಿ-ಸಂಡಿಗೆ ಯನ್ನು ಆಕೆ ಒಡ್ಡಿದ ಫೇಣಿಹಿಟ್ಟಿನ ಪ್ರಲೋಭನೆಗೆ ಸೋತು-ಕೂತು ಕಾಯುವ ಮೂಲಕ ಮಾಡಿದ ‘ಸಮಾಜ ಸೇವೆ’(!), ಗಣೇಶ ಚೌತಿಯಂದು ಮನೆಮನೆಗೂ ಹೋಗಿ ಗಣಪತಿಯನ್ನು ದರ್ಶಿಸಿ ಹೊಟ್ಟೆ ಬಿರಿಯುವಂತೆ ಕಡುಬು ತಿಂದಾಗಿನ ‘ಬಕಾಸುರ ಸಂಭ್ರಮ’, ಗೆಳೆಯ-ಗೆಳತಿಯರ ಗ್ಯಾಂಗ್ ಕಟ್ಟಿಕೊಂಡು ತೋಟದ ಸಾಲಲ್ಲಿ ಹೆಜ್ಜೆ ಹಾಕುತ್ತ ಮಾವಿನ ಕಾಯಿಗೆ ಕಲ್ಲುಬೀರಿ ‘ಕಳ್ಳಮಾಲಿನ ರುಚಿ’ ಚಪ್ಪರಿಸುವಾಗಿನ ಮಜಾ, ಅಮ್ಮನ ಎಚ್ಚರಿಕೆ ಯನ್ನೂ ಮೀರಿ ಹಿಡಿಗಟ್ಟಲೆ ನೇರಳೆಹಣ್ಣು ತಿಂದು ಮನೆಗೆ ಬಂದಾಗ, ‘ಮಗಚುವ ಕೈಯಲ್ಲಿ ಬರೆ ಬೀಳುವುದು ಖಾತ್ರಿ’ ಎಂಬ ಕಹಿಸತ್ಯದ ಅರಿವಾಗಿ, ನಾಲಗೆಯ ಮೇಲಿನ ನೇರಳೆ ಬಣ್ಣವನ್ನು ಉಜ್ಜಿ ತೊಳೆದು ಕೊಳ್ಳುವ ವಿಫಲಯತ್ನ(!), ಮನೆಯ ಹೂದೋಟದಲ್ಲಿ ಅರಳಿದ ದುಂಡುಮಲ್ಲಿಗೆ ಹೂವನ್ನು ತಿಳಿದಂತೆ ಪೋಣಿಸಿ ಹಾರಮಾಡಿ ಗಣಿತದ ಟೀಚರ್‌ಗೆ ಕೊಡುವಾಗಿನ ಪುಳಕ, ಅಬೋಧ ಕಂಗಳ ಬಾಲ-ಬಾಲೆಯರಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಹುಟ್ಟಿಬಿಡುವ ಒಂಥರಾ ’Calf Love’… ಅಬ್ಬಬ್ಬಾ! ಹೇಳುತ್ತಾ ಹೋದರೆ ಬಾಲ್ಯದ ರಮ್ಯ ರಸಘಟ್ಟಿಗಳಿಗೆ ಕೊನೆಯೇ ಇಲ್ಲ..!!

ಬಾಲ್ಯಕ್ಕೆ ಅದರದ್ದೇ ಆದ ಮೆರುಗನ್ನು ಕಟ್ಟಿಕೊಡುವಲ್ಲಿ ಆಟಗಳದ್ದು ಎತ್ತಿದ ಕೈ. ಲಗೋರಿ, ಚಿಣ್ಣಿ-ದಾಂಡು,
ಮರಕೋತಿ, ‘ಕೆರೆ-ದಡ’, ವಿಷಾಮೃತ, ಕಲ್ಲು-ಮಣ್ಣು, ‘ಮೆಲ್ಲ ವಂದು ಗಿಲ್ಲಿ ಪೋ ಪೋ’, ಜೂಟಾಟ, ಕಣ್ಣಾ ಮುಚ್ಚಾಲೆ, ಸಾಲುಚೆಂಡು ಮುಂತಾದ ಆಟಗಳು ಇಂದಿನ ಬಹುತೇಕ ಮಕ್ಕಳಿಗೆ ಗೊತ್ತಿಲ್ಲ. ‘ಮೊಬೈಲ್ ಗೇಮ್’ ಗಳಿಗೆ ಒಡ್ಡಿಕೊಂಡ ಈಗಿನ ಮಕ್ಕಳಿಗೆ, ಸಹಜ ಸ್ವರೂಪದಲ್ಲೇ ‘ಮೊಬೈಲ್’ ಆಗಿರುವ ಮೇಲಿನ ‘ಗೇಮ್’ ಗಳನ್ನು ಆಡಲು ಸಮಯವಾದರೂ ಎಲ್ಲಿ, ಅದಕ್ಕೆ ಮೈದಾನವಾದರೂ ಇನ್ನೆಲ್ಲಿ? ಮರಗಳೇ ಇಲ್ಲವಾಗುತ್ತಿರುವಾಗ ಮರಕೋತಿ ಆಟ ಎಲ್ಲಿಂದ ಬರಬೇಕು!

ಕೆರೆಯಂಗಳ, ಗೋಮಾಳ, ಮೈದಾನಗಳನ್ನು ನುಂಗಿ ನೀರು ಕುಡಿದು ಬಹುಮಹಡಿ ಕಟ್ಟಡವನ್ನು ಎಬ್ಬಿಸುವವರ
ಸಾಮ್ರಾಜ್ಯದಲ್ಲಿ ಜೂಟಾಟ, ವಿಷಾಮೃತ, ಕಲ್ಲು-ಮಣ್ಣು, ಕಣ್ಣಾಮುಚ್ಚಾಲೆ ಆಟಕ್ಕೆ ಅವಕಾಶವೆಲ್ಲಿ?! ಇನ್ನು, ಬಾಲ್ಯದಲ್ಲಾಡುವ ಆಟಗಳ ಸಂಗಡ ಹೇಳಿಕೊಳ್ಳುವ ‘ಪದ್ಯ’ಗಳದ್ದೇ ಒಂದು ಕಥೆ. “ಅವಲಕ್ಕಿ ಪವಲಕ್ಕಿ,
ಕಾಂಚಾಣ ಮಿಣಮಿಣ, ಧಾಮ್ ಧೂಮ್, ಟಸ್ ಪುಸ್, ಕೊಂಯ್ ಕೊಟಾರ್” ಎಂಬುದು ಇವುಗಳ ಪೈಕಿ ಎದ್ದು
ಕಾಣುವಂಥದ್ದು. ಮೇಲ್ನೋಟಕ್ಕೆ ಇದ್ಯಾವುದೋ ಹುಚ್ಚು ಪ್ರಾಸದ ಶಿಶುಗೀತೆ ಎನಿಸುವುದುಂಟು, ಹಾಗಂತ
ಕೆಲವರು ನಿರ್ಲಕ್ಷಿಸುವುದೂ ಉಂಟು. ಆದರೆ ಇದರಲ್ಲೊಂದು ಗೂಢಾರ್ಥವಿದೆ. ಭೂಮಿಮೇಲೆ ಮನುಷ್ಯ
ಹಾದು ಹೋಗುವ ವಿವಿಧ ಘಟ್ಟಗಳನ್ನು ಕೆಲವೇ ಪದಗಳಲ್ಲಿ ಕಟ್ಟಿಕೊಡುವ ಈ ‘ಪದ್ಯ’ ಬದುಕಿನ ಕಹಿವಾಸ್ತವ ವನ್ನೂ ತೆರೆದಿಡುತ್ತದೆ (ಮನೆಯಲ್ಲಿನ ಹಿರಿಯಜ್ಜಿಯರು ಅದನ್ನು ವಿಶಿಷ್ಟವಾಗಿ ಹೇಳುತ್ತಾರೆ, ಬೇಕಿದ್ದರೆ ಕೇಳಿನೋಡಿ!).

ಅದು ಹೀಗಿದೆ: ಮನುಷ್ಯ ಬಾಲ್ಯದಲ್ಲಿ ತಿನ್ನೋದು ‘ಅವಲಕ್ಕಿ’ಯನ್ನು, ಬೆಳೆದು ದೊಡ್ಡವನಾದ ಮೇಲೆ
‘ಪವಲಕ್ಕಿ’ ಅಂದರೆ ಪಾವು ಅಕ್ಕಿಯನ್ನು ತಿನ್ನುತ್ತಾನೆ. ನಂತರ ಉದ್ಯೋಗ/ವ್ಯವಹಾರದಲ್ಲಿ ತೊಡಗಿಸಿಕೊಂಡ
ಮೇಲೆ ಕೈಯಲ್ಲಿ ‘ಕಾಂಚಾಣ’ ಅಂದರೆ ದುಡ್ಡು ಓಡಾಡತೊಡಗುತ್ತದೆ, ಪರಿಣಾಮವಾಗಿ ಬದುಕಿನಲ್ಲಿ ಎಲ್ಲವೂ
‘ಮಿಣಮಿಣ’ ಎಂದು ಹೊಳೆಯುತ್ತಿರುವಂತೆ ಭಾಸವಾಗುತ್ತದೆ. ನಂತರ, ‘ಧಾಮ್ ಧೂಮ್’ ಎಂದು ಅವನ
ಮದುವೆಯಾಗುತ್ತದೆ. ಅವನಿಗೆ ಮಕ್ಕಳಾದ ನಂತರ, ಆತನ ಜೀವನದಲ್ಲಿ ಹಿಂದೆ ‘ಮಿಣಮಿಣ’ ಎಂದಿದ್ದೆಲ್ಲವೂ
‘ಟಸ್ ಪುಸ್’ ಎನ್ನತೊಡಗುತ್ತವೆ, ಕಾರಣ ಮಕ್ಕಳು ಹೇಳಿದ್ದಕ್ಕೆಲ್ಲಾ ಆತ ಗೋಣುಹಾಕಬೇಕಾಗುತ್ತದೆ. ಕೊನೆಯಲ್ಲಿ ‘ಕೊಂಯ್ ಕೊಟಾರ್’ ಎನ್ನುತ್ತಾ ವ್ಯಕ್ತಿ ಮರಣಿಸುತ್ತಾನೆ!

ಇದೇ ರೀತಿಯಲ್ಲಿ, “ಅಂತಿ ಮಿಂತಿ ತಾವಲ್ ತಂತಿ, ಗರುಡ ಪೇಪರ್ ಡಿಯೋ ಡಿಶ್, ಕೊಂಯ್ ಕೊಟಾರ್”
ಎಂಬ ವಿಲಕ್ಷಣ ಪದ್ಯವೂ ಇವೆ. ಈ ಸಾಲನ್ನು ನಿರ್ದಿಷ್ಟ ಆಟದ ವೇಳೆ ಬಳಸುವುದರ ಜತೆಗೆ, ಗುಂಪಿನಲ್ಲಿ
ಯಾರೋ ಗೊತ್ತಿಲ್ಲದಂತೆ ‘ಅಪಾನವಾಯು’ವನ್ನು ಬಿಟ್ಟಾಗ, ಅದರ ಮೂಲವನ್ನು ಕಂಡುಹಿಡಿಯಲೂ
ಮಕ್ಕಳು ಬಳಸುವುದುಂಟು! ಈ ಪದ್ಯದ ಸಾಲಿನಲ್ಲಿನ ಒಂದೊಂದೇ ಪದವನ್ನು ಒಬ್ಬೊಬ್ಬರಿಗೆ ನಿರ್ದೇಶಿಸಿ
ಹೇಳಿಕೊಂಡು ಬಂದು, ಕೊನೆಗೆ ಯಾರ ಮೇಲೆ ‘ಕೊಟಾರ್’ ಎಂಬ ಪದ ನಿಲ್ಲುತ್ತದೋ ಅವರೇ ಅಪಾನವಾಯು ವನ್ನು ಬಿಟ್ಟಿದ್ದು ಎಂದು ನಿರ್ಧರಿಸುವ ಫಾರ್ಮುಲಾ ಇದು!!

ಬಾಲ್ಯದಲ್ಲಿ ಆಗಾಗ ಇಣುಕುವ ಹುಸಿಮುನಿಸಿನದ್ದೇ ಮತ್ತೊಂದು ಮಜಾಘಟ್ಟ! ಕಾರಣವಲ್ಲದ ಕಾರಣಕ್ಕೆ
ಗೆಳೆಯ/ಗೆಳತಿಯರು ಪರಸ್ಪರ ‘ಠೂ’ ಬಿಡಲು ‘ಭೀಷ್ಮ ಪ್ರತಿಜ್ಞೆ’ ಮಾಡುವುದು ಇಂಥ ‘ಮಹಾಭಾರತ’ದ ಒಂದು
ಅಧ್ಯಾಯ (ಇದಕ್ಕೆ ‘ಚಾಳಿ ಬಿಡುವುದು’ ಎಂದೂ ಕೆಲವೆಡೆ ಹೇಳುತ್ತಾರೆ!). ಆಗೆಲ್ಲ ಪರಸ್ಪರರು ಕೈಯಿನ ತೋರು
ಬೆರಳು ಮತ್ತು ಮಧ್ಯಬೆರಳಿನ ತುದಿಗಳನ್ನು ಸೇರಿಸಿ ಅಂಡಾಕಾರವನ್ನು ಮಾಡಿ, ಅದನ್ನು ತುಟಿಗಳ ಸಮ್ಮುಖ
ಹಿಡಿದುಕೊಂಡು, “ಅಟ್ಟಂಬಟ್ಟೆ ಕೋಳಿಮೊಟ್ಟೆ ತಿಂಗ್ಳು ತಂಕ ಮಾತಾಡಿಸ್ಬೇಡ ಠೂ.. ಠೂ.. ಠೂ…” ಎಂದು ೩
ಬಾರಿ ಹೇಳಿಬಿಟ್ಟರೆ, ಅದು ‘ತ್ರಿವಳಿ ತಲಾಕ್’ಗಿಂತಲೂ ಸ್ಟ್ರಾಂಗು ಗುರೂ!

ಅಂದರೆ ಒಡನಾಡಿಗಳಲ್ಲಿ ಯಾರಾದರೊಬ್ಬರು ಮಾಡಿದ ತಪ್ಪಿಗೆ ಇನ್ನೊಬ್ಬರು ವಿಧಿಸುವ ಶಿಕ್ಷೆಯಿದು. ಇದರನ್ವಯ, ಶಿಕ್ಷೆಯ ಫಲಾನುಭವಿಯು ತನಗೆ ಶಿಕ್ಷೆ ಘೋಷಿಸಿದಾತನನ್ನು, ಒಂದೊಮ್ಮೆ ಆತ ಬಾರಿಬಾರಿಗೆ ಎದುರಿಗೆ ಸಿಗು ತ್ತಿದ್ದರೂ ಮಾತಾಡಿಸುವಂತಿಲ್ಲ. ಆದರೆ ಈ ‘ಭೀಷ್ಮ ಪ್ರತಿಜ್ಞೆ’ಯ ನೆರವೇರಿಕೆ ಅಂದುಕೊಂಡಷ್ಟು ಸುಲಭವಲ್ಲ; ‘ಠೂ’ ಬಿಟ್ಟ ಒಂದೆರಡು ದಿನಗಳಲ್ಲೇ ಆ ಬಾಲಹೃದಯಗಳು ತಳಮಳಿಸತೊಡಗುತ್ತವೆ. ಏನನ್ನೋ ಕಳಕೊಂಡ ಸಂಕಟ, ಹೃದಯದ ಹೃತ್ಕರ್ಣ-ಹೃತ್ಕುಕ್ಷಿಗಳು ಪರಸ್ಪರ ಬೇರೆಬೇರೆ ಯಾಗಿಬಿಟ್ಟವೇ? ಎಂಬ ಭಾವ. ಹಾಗಂತ, ಹೋಗಿ
ಮಾತಾಡಿಸೋಣವೆಂದರೆ, ಇನ್ನಿಲ್ಲದ ಬಿಗುಮಾನ!

ಹೀಗಾಗಿ, ‘ಠೂ’ ಬಿಟ್ಟವರು ಮತ್ತು ಬಿಡಿಸಿಕೊಂಡವರು (!) ಅನಿವಾರ್ಯವಾಗಿ ಸಂವಹಿಸಲೇಬೇಕಾಗಿ ಬಂದಾಗ
ನೇರವಾಗಿ ದೃಷ್ಟಿಯಿಟ್ಟು ಮಾತಾಡದೆ, ಪರಸ್ಪರರಿಗೆ ಕೇಳಿಸುವಂತೆ ಹೇಳಬೇಕಾದುದನ್ನು ಜೋರಾಗಿ ಹೇಳಿ ಕೈ ತೊಳೆದುಕೊಳ್ಳುವುದುಂಟು ಅಥವಾ ಇಬ್ಬರಿಗೂ ಸಮಾನ-ಸ್ನೇಹಿತನಾಗಿರುವವನನ್ನು ಇಲ್ಲಿ ಮಧ್ಯವರ್ತಿಯಾಗಿ ಬಳಸಿಕೊಳ್ಳುವುದುಂಟು. ಹೀಗೆ ‘ಮಹಾಭಾರತದ ವಿದುರ’ನ ಪಾತ್ರ ವಹಿಸುವವನಿಗೆ ಉಭಯ ಪಕ್ಷಸ್ಥರಲ್ಲೂ
ಕೆಲಕಾಲ ಇನ್ನಿಲ್ಲದ ಮಹತ್ವವಿರುತ್ತದೆ. ಆದರೆ ಈ “ಅಟ್ಟಂಬಟ್ಟೆ ಕೋಳಿಮೊಟ್ಟೆ….” ಹೆಚ್ಚುದಿನ ಗಿಟ್ಟುವಂಥದ್ದಲ್ಲ ಎನಿಸತೊಡಗಿದಾಗ, ಸಂಧಾನದ ಪ್ರಕ್ರಿಯೆಗೆ ಚಾಲನೆ ಸಿಗುತ್ತದೆ. ಕೆಲವೇ ದಿನಗಳ ಹಿಂದೆ ‘ಠೂ’ ಬಿಟ್ಟಿದ್ದವರು ಅಗಲಿಕೆಯ ವೇದನೆಯನ್ನು ತಾಳಲಾಗದೆ (ಅದೊಂಥರಾ ವಿರಹವೇದನೆ ಎನ್ನಿ!) ಎಳೆಹುಣಿಸೇಕಾಯಿ, ನೆಲ್ಲೀಕಾಯಿ, ಬೋರೆಹಣ್ಣು, ಶುಂಠಿ ಪೆಪ್ಪರಮಿಂಟು, ಸೆಂಟ್ ರಬ್ಬರ್ ಅಥವಾ ಅರ್ಧ ಬಳಸಿದ ಪೆನ್ಸಿಲ್ ಮುಂತಾದವುಗಳ ಪರಸ್ಪರ ವಿನಿಮಯದೊಂದಿಗೆ ‘ಚಾಳಿ ಕಟ್ಟು’ತ್ತಾರೆ! ಅಲ್ಲಿಗೆ ಮುನಿಸು ಮಟಾಷ್, ಜಗಳ ಫಿನಿಶ್!

‘ಎಳೇಮಕ್ಕಳು’ ರೂಪಿಸಿಕೊಳ್ಳುವ ಇಂಥದೊಂದು ರಾಜಿಸೂತ್ರ ತಥಾಕಥಿತ ‘ದೊಡ್ಡವರಿಗೆ’ ಏಕೆ ಹೊಳೆಯುವುದಿಲ್ಲ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ಹೊಳೆದಿದ್ದಿದ್ದರೆ, ಉಕ್ರೇನ್-ರಷ್ಯಾ ಯುದ್ಧ, ಇಸ್ರೇಲ್ -ಹಮಾಸ್ ಉಗ್ರರ ಸಂಘರ್ಷಗಳು ಮೆಗಾಧಾರಾವಾಹಿಯಂತೆ ಮುಂದುವರಿಯುತ್ತಿರಲಿಲ್ಲ, ರಕ್ತದ ಹೊಳೆ ಹರಿಯುತ್ತಿರಲಿಲ್ಲ, ಹೆಣಗಳ ಬೆಟ್ಟ ನಿರ್ಮಾಣವಾಗುತ್ತಿರಲಿಲ್ಲ, ಘರ್ಷಣೆಯ ಸಂತ್ರಸ್ತರ ನಿಟ್ಟುಸಿರೇ ಉಸಿರಾಡುವ ಗಾಳಿಯಾಗುತ್ತಿರಲಿಲ್ಲ! ಗೊತ್ತಿದ್ದೋ ಗೊತ್ತಿಲ್ಲದೆಯೋ ತಮ್ಮ ನಡುವೆ ರೂಪುಗೊಳ್ಳುವ ಅಭಿಪ್ರಾಯಭೇದ-ಅಸಮಾಧಾನ, ಮುನಿಸು- ಮತ್ಸರವನ್ನು ಮುಂದುವರಿಸಿಕೊಂಡು ಹೋಗದೆ, ತಮ್ಮ ಮಿತಿಯಲ್ಲೇ ಲಭ್ಯವಿರುವ ಗಿಫ್ಟ್‌ ಗಳನ್ನು ಕೊಟ್ಟು-ತೆಗೆದುಕೊಳ್ಳುವಂಥ ‘ಬಾರ್ಟರ್-ಸಿಸ್ಟಮ್’ ಅನುಸರಿಸುವ ಮೂಲಕ ಮುನಿಸಿಗೆ ತೆರೆಯೆಳೆದು ಹೆಗಲಿಗೆ ಹೆಗಲು ಚಾಚುವ ‘ಎಳೇ ಮಕ್ಕಳನ್ನು’ ಈ ಕಾರಣಕ್ಕಾಗಿ ‘ದೊಡ್ಡವರು’ ಎನ್ನಬೇಕೋ? ಅಥವಾ ಕಡಿದರೆ ನಾಲ್ಕು ಆಳಾಗುವಂಥ ಶರೀರ, ಸಾಕಷ್ಟು ಸಂಪನ್ಮೂಲ- ಸೌಕರ್ಯಗಳಿದ್ದರೂ ಕಾರಣವಲ್ಲದ ಕಾರಣಕ್ಕೆ ಕಿತ್ತಾಡಿ
ರಕ್ತಪಿಪಾಸುಗಳೆನಿಸಿಕೊಳ್ಳುವ ದೊಡ್ಡವರನ್ನು ‘ಎಳೇಮಕ್ಕಳು’ ಎನ್ನಬೇಕೋ? ಎಂಬ ಗೊಂದಲ ಆಗಾಗ ಕಾಡುವುದಿದೆ….

ಇದನ್ನೂ ಓದಿ: Yagati Raghu Nadig Column: ಬೆತ್ತಲೆ ರಾಜ್ಯದಲ್ಲಿ ಬಟ್ಟೆ ಹಾಕ್ಕೊಂಡೋನೇ ಮೂರ್ಖ!