Thursday, 12th December 2024

Yagati Raghu Nadig Column: ಹೂಮೊಗವಾಡದ ಇರಿಯುವ ಮುಳ್ಳೇ ಎಲ್ಲಿವರೆಗೆ ನಿನ್ನಾಟ?

Yagati Raghu Nadig Column

ರಸದೌತಣ

ಯಗಟಿ ರಘು ನಾಡಿಗ್

Yagati Raghu Nadig Column: ಅದು ಗ್ರಾಮಾಂತರ ಪ್ರದೇಶದಲ್ಲಿ ಸಂಚರಿಸುವ ಖಾಸಗಿ ಬಸ್ಸು. ‘ಶುಭ್ರ-ಶ್ವೇತ’ ಪಂಚೆ ಮತ್ತು ಜುಬ್ಬಾ, ದಪ್ಪಗಾಜಿನ ಕನ್ನಡಕ ಧರಿಸಿದ್ದ ವಯೋವೃದ್ಧರೊಬ್ಬರು ಅದನ್ನೇರಿ ಸಿಕ್ಕಿದ ಸೀಟಿನಲ್ಲಿ ಕುಳಿತುಕೊಂಡರು. ಒಬ್ಬೊಬ್ಬರೇ ಜಮೆಯಾಗುತ್ತಿದ್ದಂತೆ ಬಸ್ಸು ಭರ್ತಿಯಾಯಿತು, ಆದರೆ ಅದು ಹೊರಡುವುದಕ್ಕಿನ್ನೂ ಸಾಕಷ್ಟು ಸಮಯವಿತ್ತು. ಕೆಲ ಹೊತ್ತಿನ ನಂತರ ಅಂಧನೊಬ್ಬ ಬಸ್ಸನ್ನೇರಿ, ಎರಡು ಸಾಲಿನ ಸೀಟುಗಳ ನಡುವಿನ ಜಾಗದಲ್ಲಿ ತಡವರಿಸಿಕೊಂಡೇ ಬಸ್ಸಿನ ಮುಂಭಾಗಕ್ಕೆ ಬಂದು, ಪ್ರಯಾಣಿಕರ ಕಡೆಗೆ ತಿರುಗಿಕೊಂಡು, ‘‘ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು ಒಳಗೆ ಬರಲಪ್ಪಣೆಯೆ ದೊರೆಯೇ’’ ಎಂಬ ಗೀತೆಯನ್ನು ಹಾಡತೊಡಗಿದ. ವೈಕಲ್ಯವಿದ್ದುದು ಅವನ ಕಣ್ಣಿಗೇ ಹೊರತು, ಸಿರಿಕಂಠಕ್ಕಲ್ಲ. ಹೀಗಾಗಿ ಅವನ ಹಾಡು ಸುಶ್ರಾವ್ಯವಾಗಿಯೇ ಇತ್ತು. ಹಾಡಿಕೊಂಡು ಕೊನೆಯ ಸಾಲಿನವರೆಗೂ ಬಂದ ಅವನಿಗೆ, ಹಲವು ಪ್ರಯಾಣಿಕರು (ಅವರಲ್ಲಿ ಕೆಲವರು ಗದ್ಗದಿತರು!) ಯಥಾಶಕ್ತಿ ಕಾಸು ಹಾಕಿದರು. ಆ ಅಂಧ ತಡವರಿಸಿಕೊಂಡೇ ಬಸ್ಸಿನಿಂದಿಳಿದು ಪಕ್ಕದ ಬಸ್ಸಿಗೆ ಹತ್ತಿದ.

ದಪ್ಪಗಾಜಿನ ಕನ್ನಡಕ ಧರಿಸಿದ್ದ ವಯೋವೃದ್ಧರು ಪಕ್ಕದ ಬಸ್ಸಿನ ಕಡೆಗೇ ದೃಷ್ಟಿ ನೆಟ್ಟು, ಕಿವಿ ಕೊಟ್ಟು ಕೂತಿದ್ದರು. ಅಲ್ಲಿಯೂ ಬಸ್ಸಿನ ಮುಂಭಾಗಕ್ಕೆ ತೆರಳಿದ ಆ ಅಂಧಗಾಯಕ, ಮತ್ತದೇ ‘‘ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು….’’ ಗೀತೆಯನ್ನು ಹಾಡತೊಡಗಿದ. ವಯೋವೃದ್ಧರಿಗೆ ಅಚ್ಚರಿಯಾಗಿ ತಾವು ಕೂತಿದ್ದ ಸೀಟಿನಿಂದ ಕೆಳಗಿಳಿದು, ಪಕ್ಕದ ಬಸ್ಸಿನ ಬಳಿಗೆ ಹೋದರು. ಆ ಅಂಧಗಾಯಕ ಹಾಡು ಹೇಳಿ ಮುಗಿಸಿ ಬರುವುದನ್ನೇ ಕಾಯತೊಡಗಿದರು. ಆತ ಬಸ್ಸಿನಿಂದ ಇಳಿದಾಗ ಅವನಲ್ಲಿಗೆ ಸಾಗಿದ ವಯೋವೃದ್ಧರು, ‘‘ಅಲ್ಲಪ್ಪಾ, ನಮ್ಮ ಬಸ್‌ನಲ್ಲೂ ಅದೇ ಹಾಡು ಹಾಡಿದೆ, ಪಕ್ಕದ ಈ ಬಸ್‌ನಲ್ಲೂ ಅದೇ ಹಾಡು ಹಾಡಿದೆ. ನಿನಗೆ ‘ಬಳೆಗಾರ ಚೆನ್ನಯ್ಯ… ’ ಹಾಡು ಬಿಟ್ಟರೆ ಬೇರೆಯದು ಬರೋಲ್ವೇ?’’ ಎಂದು ಆಪ್ಯಾಯತೆಯಿಂದಲೂ ಸಹಾನುಭೂತಿಯಿಂದಲೂ ಕೇಳಿದರು. ಅದಕ್ಕೆ ಆ ಅಂಧಗಾಯಕ, ‘‘ಇನ್ನೂ ತುಂಬಾ ಭಕ್ತಿಗೀತೆ, ಚಿತ್ರಗೀತೆ, ಜನಪದ ಗೀತೆಗಳು ಬರ್ತವೇ ಸ್ವಾಮೀ…’’ ಎಂದ. ಅದಕ್ಕೆ ವಯೋವೃದ್ಧರು, ‘‘ಹಾಗಿದ್ದ ಮೇಲೆ, ಅಂಥ ಬೇರೆ ಬೇರೆ ಹಾಡುಗಳನ್ನೂ ಹಾಡೋದು ಬಿಟ್ಟು ನೀನು ‘ಬಳೆಗಾರ ಚೆನ್ನಯ್ಯ… ’ ಹಾಡನ್ನೇ ಹಾಡೋದ್ಯಾಕಪ್ಪಾ?’’ ಎಂದು ಕೇಳಿದರು. ಅದಕ್ಕೆ ಆತ, ‘‘ಅದೇನೋ ನಂಗೆ ಗೊತ್ತಾಗವಲ್ದು ಸ್ವಾಮೀ…. ‘ಬಳೆಗಾರ ಚೆನ್ನಯ್ಯ..’ ಹಾಡು ಶುರುಮಾಡಿಕೊಂಡು ಮುಗಿಸುವ ವೇಳೆಗೆ ನನ್ನ ಕೈತುಂಬಾ ಜನರ ಕಾಸು ಬಿದ್ದಿರುತ್ತೆ. ಏನು ಮಾಡೋದು ಸ್ವಾಮೀ, ಹೊಟ್ಟೆಪಾಡು. ಜನರು ಮೆಚ್ಚೋದನ್ನೇ, ನನ್ನ ಹೊಟ್ಟೆ ತುಂಬಿಸೋದನ್ನೇ ಹಾಡಬೇಕಾಗುತ್ತೆ…’’ ಎಂದು ಹೇಳಿ ಮುಂದಿನ ಬಸ್ಸಿಗೆ ಹತ್ತಿಕೊಂಡ.

ಅವನು ಅಲ್ಲಿಂದ ತೆರಳುವುದನ್ನೇ ದಿಟ್ಟಿಸುತ್ತಿದ್ದ ಆ ವಯೋವೃದ್ಧರು, ‘‘ಪರವಾಗಿಲ್ಲ…. ‘ಬಳೆಗಾರ ಚೆನ್ನಯ್ಯ.. ’ ಹಾಡು ಅದನ್ನು ಬರೆದೋರಿಗೆ ಹೊಟ್ಟೆ ತುಂಬಿಸ್ತಾ ಇದೆಯೋ ಇಲ್ಲವೋ ಅನ್ನೋದು ಬೇರೆ ಮಾತು; ಆದರೆ ಆ ಹಾಡು ಹಲವರ ಕಿವಿಯನ್ನು ತಣಿಸ್ತಾ ಇದೆ, ಮತ್ತೆ ಕೆಲವರ ಹೊಟ್ಟೆಯನ್ನು ತುಂಬಿಸ್ತಾ ಇದೆ ಅನ್ನೋದೇ ಸಮಾಧಾನದ ವಿಷಯ. ಕವಿಗೆ ಇದಕ್ಕಿಂತ ಮಿಗಿಲಾದ ಸಂತೋಷ ಇನ್ನೇನಿದೆ? ಕವಿಯ ಕವಿತ್ವದ ಸಾರ್ಥಕತೆ ಅಂದ್ರೆ ಇದೇ ಅಲ್ಲವೇ…’’ ಎಂದು ಹೇಳಿಕೊಂಡರು.

ಅಂದಹಾಗೆ, ಈ ರೀತಿ ‘ಬಳೆಗಾರ ಚೆನ್ನಯ್ಯ’ ಹಾಡನ್ನು ಎರಡೆರಡು ಸಲ ಕೇಳಿಸಿಕೊಂಡವರು, ತಾವಿದ್ದ ಬಸ್ಸಿನಿಂದಿಳಿದು ಆ ಅಂಧಗಾಯಕನನ್ನು ಮಾತಾಡಿಸಿ, ಅವನ ‘ಮಾರ್ಕೆಟಿಂಗ್ ಟೆಕ್ನಿಕ್’ ಗ್ರಹಿಸಿದವರು ಬೇರಾರೂ ಅಲ್ಲ, ಸ್ವತಃ ಆ ಹಾಡನ್ನು ಬರೆದ ‘ಮೈಸೂರು ಮಲ್ಲಿಗೆ’ಯ ಕವಿ ಕೆ.ಎಸ್.ನರಸಿಂಹಸ್ವಾಮಿಯವರು!!

ಇದು ಸುಮಾರು 57 ವರ್ಷಗಳ ಹಿಂದಿನ ಕಥೆ. ಅವರು ಕನ್ನಡದ ಮತ್ತೊಬ್ಬ ಮಹಾನ್ ಕವಿ, ದಾರ್ಶನಿಕ. ಕವಿತ್ವಕ್ಕೆ, ಪ್ರತಿಭೆಗೆ ಬರವಿಲ್ಲದ ಜೀವ. ಒಟ್ಟಾರೆ ಹೇಳಬೇಕೆಂದರೆ ಸಾಕ್ಷಾತ್ ಸರಸ್ವತಿ ಅವರ ಲೇಖನಿಯಲ್ಲಿ ಶಾಯಿಯಾಗಿದ್ದಳು. ಅಕ್ಷರಗಳ ಸಾಂಗತ್ಯದಲ್ಲಿ ಭಾರಿ ಹೆಸರು ಮಾಡಿದ್ದರೂ ಅವರಿಗೆ ‘ಲಕ್ಷ್ಮೀ ಕಟಾಕ್ಷ’ವಿರಲಿಲ್ಲ. ಜತೆಗೆ ವೃದ್ಧಾಪ್ಯ ಬೇರೆ. ಇದನ್ನು ಕಣ್ಣಾರೆ ಕಂಡಿದ್ದ ಅವರ ಸಾಹಿತ್ಯಾಭಿಮಾನಿಗಳು ಧನಸಹಾಯಕ್ಕೆ ಮುಂದಾದಾಗಲೆಲ್ಲ ಆ ಸ್ವಾಭಿಮಾನಿ ಕವಿ ಅಂಥ ನೆರವು ಪಡೆಯಲು ನಿರಾಕರಿಸುತ್ತಿದ್ದರು. ಹೀಗಾಗಿ ಅಭಿಮಾನಿಗಳು ಒಳಗೊಳಗೇ ನೊಂದುಕೊಳ್ಳುತ್ತಿದ್ದರು. ಆದರೆ ಕವಿಗೆ ಆರ್ಥಿಕವಾಗಿ ನೆರವಾಗಬೇಕೆಂಬ ಸಂಕಲ್ಪವನ್ನು ಮಾತ್ರ ಅವರು ಕೈಬಿಟ್ಟಿರಲಿಲ್ಲ.

ದಿನಗಳು ಹೀಗೇ ಸಾಗುತ್ತಿದ್ದವು, ಆ ಕವಿ 80ನೇ ವರ್ಷಕ್ಕೆ ಕಾಲಿಟ್ಟರು. ಆಗ ಅಭಿಮಾನಿಗಳೆಲ್ಲ ಒಟ್ಟಾಗಿ, ಬೆಂಗಳೂರಿನ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ಅವರನ್ನು ಸನ್ಮಾನಿಸಲು ಯೋಜಿಸಿದರು. ಜತೆಗೆ, ‘‘ಈ ಸ್ವಾಭಿಮಾನಿ ಎಷ್ಟು ಒತ್ತಾಯಿಸಿದರೂ ನಮ್ಮಿಂದ ದುಡ್ಡು ತೆಗೆದುಕೊಳ್ಳುವುದಿಲ್ಲ. ಸನ್ಮಾನದ ನೆಪದಲ್ಲಿ ಗೌರವಧನವನ್ನು ಕೊಟ್ಟುಬಿಡೋಣ, ಆಗ ಅದನ್ನು ಅವರು ನಿರಾಕರಿಸಲೂ ಆಗುವುದಿಲ್ಲ’’ ಎಂದು ಸಂಕಲ್ಪಿಸಿದರು. ಈ ಸಂಕಲ್ಪಕ್ಕೆ ಸ್ಪಂದಿಸಿದವರೆಲ್ಲರೂ ಉದಾರವಾಗಿ, ಪ್ರೀತಿಪೂರ್ವಕವಾಗಿ ಹಣ ನೀಡಿದ್ದರಿಂದ ಆಗಿನ ಕಾಲಕ್ಕೇ ಬರೋಬ್ಬರಿ 1 ಲಕ್ಷ ರುಪಾಯಿಗಳು ಸಂಗ್ರಹವಾದವು! ಅದನ್ನು ಸನ್ಮಾನ ಸಮಾರಂಭದಲ್ಲಿ ಆ ಕವಿಪುಂಗವರಿಗೆ ಅರ್ಪಿಸಲಾಯಿತು!

ಕವಿಯನ್ನು ಸನ್ಮಾನಿಸಿದ ಮರುದಿನವದು. ‘ಸುಧಾ’ ವಾರಪತ್ರಿಕೆಯ ಅಂದಿನ ಸಂಪಾದಕ ಇ.ಆರ್.ಸೇತುರಾಮ್ ಅವರು ಕಾರ್ಯನಿಮಿತ್ತವಾಗಿ ಬೆಂಗಳೂರಿನ ಬಸವನಗುಡಿ ಬಡಾವಣೆಯ ನಾಗಸಂದ್ರ ರಸ್ತೆಯ ಬಳಿಗೆ ಬಂದಿದ್ದರು. ಅಲ್ಲಿನ ದಿನಸಿ ಅಂಗಡಿಯೊಂದರ ಬಳಿ ಕ್ಷಣಕಾಲ ನಿಂತು ಒಂದು ಸಿಗರೇಟು ಸೇದಿ ಹೋಗುವುದು ಅವರ ವಾಡಿಕೆ. ಹೀಗೆ ‘ಅಗ್ನಿಕಾರ್ಯ’ದಲ್ಲಿ ಅವರು ವ್ಯಸ್ತರಾಗಿರುವಾಗ, ಹುಡುಗನೊಬ್ಬ ಕೈಯಲ್ಲೊಂದು ಚೀಟಿ ಹಿಡಿದುಕೊಂಡು ಆ ದಿನಸಿ ಅಂಗಡಿಯೆಡೆಗೆ ಧಾವಿಸಿ ಬಂದ. ಆತ ಕೊಂಚ ಅವಸರದಲ್ಲಿದ್ದ, ಓಡೋಡಿ ಬಂದಿದ್ದರಿಂದ ಹಣೆಯಲ್ಲಿ ಬೆವರಿನ ಮಣಿಗಳು ಸಾಲುಗಟ್ಟಿದ್ದವು. ಈತ, ಹಿಂದಿನ ದಿನ ಸನ್ಮಾನಿಸಲ್ಪಟ್ಟ ಕವಿಯ ಮನೆಗೆಲಸದ ಹುಡುಗ ಎಂಬುದು ಸೇತುರಾಮ್ ಅವರಿಗೆ ಗೊತ್ತಾಯಿತು. ಆದರೆ ಆ ಚೀಟಿಯಲ್ಲಿ ಕವಿ ಅದೇನು ದಿನಸಿ ಸಾಮಾನಿಗೆ ಬರೆದು ಕಳಿಸಿರಬಹುದು ಎಂಬ ‘ಕೆಟ್ಟ ಕುತೂಹಲ’ವೂ ಸೇತುರಾಮ್‌ ರನ್ನು ಕಾಡತೊಡಗಿತು! ಸಂಕೋಚ ಬಿಟ್ಟು, ಅಂಗಡಿಯ ಶೆಟ್ಟರನ್ನು ಕೇಳಿಯೇಬಿಟ್ಟರು ಸೇತುರಾಮ್!

ಪರಿಚಯಸ್ಥರಾದ್ದರಿಂದ ಶೆಟ್ಟರು ಆ ಚೀಟಿಯನ್ನು ಸೇತುರಾಮ್‌ ರಿಗೆ ವರ್ಗಾಯಿಸಿದರು. ಬಿಡಿಸಿ ನೋಡಿದರೆ ಅದರಲ್ಲಿ ಹೀಗೆ ಬರೆದಿತ್ತು: ‘‘ಮನೆಗೆ ಅತಿಥಿಗಳು ಬಂದುಬಿಟ್ಟಿದ್ದಾರೆ. ದಯವಿಟ್ಟು ಸ್ವಲ್ಪ ಕಾಫಿಪುಡಿ, ಸಕ್ಕರೆಯನ್ನು ಕಳಿಸಿಕೊಡಿ. ನಾಳೆ ಬಂದು ಹಣವನ್ನು ಕೊಡುತ್ತೇನೆ..’’. ಸಂಶಯವೇ ಇಲ್ಲ, ಅದು ಹಿಂದಿನ ದಿನ ಸನ್ಮಾನಿಸಲ್ಪಟ್ಟ ಕವಿಯದೇ ಕೈಬರಹ! ‘‘ಈ ಕವಿವರ್ಯರಿಗೆ ಹಿಂದಿನ ದಿನವಷ್ಟೇ 1 ಲಕ್ಷ ರುಪಾಯಿ ಗೌರವಧನ ಸಂದಾಯವಾಗಿತ್ತಲ್ಲಾ? ಇಷ್ಟಾಗಿಯೂ ಶೆಟ್ಟರ ಅಂಗಡಿಯಲ್ಲಿ ಸಾಲ ಬರೆಸುವಂಥ ದರ್ದು ಏನಿತ್ತು?’’ ಎಂಬ ಗೊಂದಲ ಸೇತುರಾಮ್‌ ರನ್ನು ಕಾಡತೊಡಗಿತು. ಆ ಗೊಂದಲ ಅಷ್ಟಕ್ಕೇ ನಿಲ್ಲದೆ ಗುಂಗೆಹುಳುವಾಗಿ ತಲೆಯನ್ನು ಕೊರೆಯಲಾರಂಭಿಸಿತು. ಆಗ ಅಕ್ಷರಶಃ ‘ಪತ್ತೆದಾರ ಪುರುಷೋತ್ತಮ’ನ ಅವತಾರವನ್ನು ತಳೆದ ಸೇತುರಾಮ್, ಈ ವಿಷಯದ ಬೆನ್ನತ್ತಿದರು. ಅವರ ಪತ್ತೆದಾರಿಕೆ ಫಲ ನೀಡಿತು, ರಹಸ್ಯ ಹೊರಬಿತ್ತು- ತಮಗೆ ಸನ್ಮಾನದ ವೇಳೆ ಅರ್ಪಿಸಲಾಗಿದ್ದ 1 ಲಕ್ಷ ರುಪಾಯಿ ಹಣವನ್ನು ಒಂದು ಪೈಸೆಯೂ ಬಿಡದಂತೆ ಆ ಕವಿ ಬೆಂಗಳೂರಿನ ನರಸಿಂಹರಾಜಾ ಕಾಲನಿಯಲ್ಲಿರುವ ‘ಗೋಖಲೆ ಸಾರ್ವಜನಿಕ ವಿಚಾರಸಂಸ್ಥೆ’ಯ ಅಭಿವೃದ್ಧಿಗೆ ಕೊಟ್ಟು ಕೃತಾರ್ಥರಾಗಿದ್ದರು!

ಸನ್ಮಾನದ ವೇಳೆ ತಮಗೆ ಹಣವನ್ನು ನೀಡಕೂಡದು, ತಾವು ಅದನ್ನು ಬಿಲ್‌ ಕುಲ್ ಸ್ವೀಕರಿಸುವುದಿಲ್ಲ ಎಂದೇ ಆ ಸ್ವಾಭಿಮಾನಿ ಕವಿ ತಾಕೀತು ಮಾಡಿದ್ದರಂತೆ. ಆದರೆ ಅಭಿಮಾನಿಗಳು ಬಿಡಬೇಕಲ್ಲ! 1 ಲಕ್ಷ ರುಪಾಯಿಯಷ್ಟು ‘ಲಕ್ಷ್ಮಿ’ಯನ್ನು ಸಂಗ್ರಹಿಸಿ, ಈ ‘ಸರಸ್ವತೀ’ಪುತ್ರನಿಗೆ ಸಮರ್ಪಿಸಿದರು. ಸಾಹಿತ್ಯಾಭಿಮಾನಿಗಳಿಗೆ ಏಕೆ ಬೇಸರ ಉಂಟುಮಾಡಬೇಕೆಂದು ಅದನ್ನು ಆ ಕ್ಷಣಕ್ಕೆ ಸ್ವೀಕರಿಸಿದ ಆ ವಯೋವೃದ್ಧ ಮತ್ತು ಸ್ವಾಭಿಮಾನಿ ಕವಿ, ನಂತರ ‘‘ಇದಂ ನ ಮಮ, ಇದಂ ನ  ಮಮ‘’ (ಇದು ನನ್ನದಲ್ಲ, ಇದು ನನ್ನದಲ್ಲ) ಎಂಬಂತೆ ಅದನ್ನು ಸೇರಬೇಕಾದಲ್ಲಿಗೆ ಸೇರಿಸಿದ್ದರು. ಮರುದಿನ ಎಂದಿನಂತೆ ಕಾಫಿಪುಡಿ-ಸಕ್ಕರೆಗೂ ಅವರ ಬಳಿ ಕಾಸಿರಲಿಲ್ಲ!

ಇಂಥ ನಿಸ್ಪಹತೆ ಮೆರೆದ ಸ್ವಾಭಿಮಾನಿ ಕವಿ ಬೇರಾರೂ ಅಲ್ಲ. ಅವರೇ ಡಾ. ಡಿ.ವಿ.ಗುಂಡಪ್ಪ ಉರುಫ್ ‘ಡಿವಿಜಿ’…!

ಕನ್ನಡ ಸಾರಸ್ವತ ಲೋಕಕ್ಕೆ ‘ಮೈಸೂರು ಮಲ್ಲಿಗೆ’ಯಂಥ ಅನುಪಮ ಕವಿತಾ ಗುಚ್ಛವನ್ನು ನೀಡಿದ ಕೆ.ಎಸ್.ನರಸಿಂಹ ಸ್ವಾಮಿ ಮತ್ತು ಕನ್ನಡದ ಭಗವದ್ಗೀತೆ ಎಂದೇ ಹೆಸರಾದ ‘ಮಂಕುತಿಮ್ಮನ ಕಗ್ಗ’ ಮಾತ್ರವಲ್ಲದೆ, ‘ಉಮರನ ಒಸಗೆ’, ‘ಮರುಳ ಮುನಿಯನ ಕಗ್ಗ’ ಮುಂತಾದ ಕಾಲಾತೀತ ಕೃತಿಗಳನ್ನು ನೀಡಿದ ಡಿವಿಜಿ ತಂತಮ್ಮ ಬದುಕಿನಲ್ಲಿ ಯಾವ ತೆರನಾದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು ಎಂಬುದನ್ನು ವಿವರಿಸುವ ಎರಡು ನಿದರ್ಶನಗಳಿವು.

ಈ ಸಾಲಿಗೆ ಸೇರಿದ ಪ್ರತಿಭಾವಂತರು ನಮ್ಮಲ್ಲಿ ಸಾಕಷ್ಟಿದ್ದಾರೆ. ಕೌಟುಂಬಿಕ ಬದುಕಿನ ಹತ್ತು ಹಲವು ಬವಣೆಗಳಲ್ಲಿ ಬೆಂದು ‘ಬೇಂದ್ರೆ’ ಆದ ದ.ರಾ.ಬೇಂದ್ರೆ, ಕನ್ನಡದ ಕವಿವರ್ಯರ ಪಾಲಿಗೆ ‘ಭವತಿ ಭಿಕ್ಷಾಂದೇಹಿ’ ಎಂಬುದೇ ಅನುಗಾಲದ ‘ಸಪ್ತಾಕ್ಷರಿ ಮಂತ್ರ’ ಎಂದು ಹಾಸ್ಯಭರಿತವಾಗಿಯೇ ನೋವು ತೋಡಿಕೊಂಡ ನಂದಳಿಕೆ ನಾರಾಣಪ್ಪ (ಇವರು ‘ಮುದ್ದಣ’ ಎಂಬ ಕಾವ್ಯನಾಮದಿಂದಲೇ ಖ್ಯಾತರು; ‘ಮುದ್ದಣ-ಮನೋರಮೆಯರ ಸಲ್ಲಾಪ’ವನ್ನೊಮ್ಮೆ ನೆನಪಿಸಿಕೊಳ್ಳಿ!) ಇಂಥ ಒಂದೆರಡು ಉದಾಹರಣೆಗಳು. ಇಂಥವರಲ್ಲಿ ಕಂಡುಬರುವ ಒಂದು ‘ಕಾಮನ್ ಫ್ಯಾಕ್ಟರ್’ ಎಂದರೆ ‘ಬಡತನ’. ಆದರೆ ಇವರೆಲ್ಲ, ಬದುಕು ತಮಗೊಡ್ಡಿದ ಸಂಕಷ್ಟಗಳನ್ನೆಲ್ಲಾ ನುಂಗಿಕೊಂಡು ಶ್ರೇಷ್ಠ ಸಾಹಿತ್ಯ ಸುಮಗಳನ್ನೇ ಸಾರಸ್ವತ ಲೋಕಕ್ಕೆ ಅರ್ಪಿಸಿದರೇ ಹೊರತು, ರೋದಿಸುತ್ತಾ ಕೂರಲಿಲ್ಲ, ಸಾಧನೆಯ ಪಥದಿಂದ ಹಿಮ್ಮೆಟ್ಟಲಿಲ್ಲ. ‘ಬೆಂಕಿಯಲ್ಲಿ ಅರಳಿದ ಹೂಗಳು’ ಅಂದರೆ ಇವರೇ ಇರಬೇಕು…!

ಆದರೆ, ಇಂಥ ನಿಸ್ವಾರ್ಥಿ ಸಾಧಕರ ಅಭಿಮಾನಿಗಳು ವಿಧಿಯನ್ನು ಉದ್ದೇಶಿಸಿ, ಈ ಲೇಖನದ ಶೀರ್ಷಿಕೆಯಲ್ಲಿನ ಪ್ರಶ್ನೆಯನ್ನು ಕೇಳೋದಂತೂ ನಿಜ!

ಇದನ್ನೂ ಓದಿ : Rani Rampal: ರಾಜೇಂದ್ರ ಭಟ್‌ ಅಂಕಣ: ನಕ್ಷತ್ರಗಳೇ ಆಕೆಗೆ ಬಾಲ್ಯದಲ್ಲಿ ಗಡಿಯಾರ ಆಗಿದ್ದವು!