ಅವಲೋಕನ
ರವಿ ಮಡೋಡಿ
ಸಾವಿರಾರು ವರ್ಷಗಳ ಇತಿಹಾಸವಿರುವ ಜಾಗತಿಕ ರಂಗಭೂಮಿಯಲ್ಲಿ ದಿನನಿತ್ಯ ಅನೇಕ ನಾಟಕಗಳ, ಅನೇಕ ಪ್ರಯೋಗ ಗಳನ್ನುಕಾಣುತ್ತಿರುತ್ತವೆ. ಇಲ್ಲಿಯ ರಂಗಭೂಮಿಯನ್ನು ಅವಲೋಕಿಸಿದಾಗ, ಇಂಗ್ಲೆಂಡಿನ ಅಗಥ ಕ್ರೀಸ್ತೇ (agatha christie) ರಚಿಸಿ ರುವ ‘ಮೌಸ್ ಟ್ರ್ಯಾಪ್’ (Mousetrap) ಎನ್ನುವ ನಾಟಕ 1952 ರಿಂದ ಇಂದಿನವರೆಗೂ ಪ್ರದರ್ಶನಗೊಳ್ಳುತ್ತಿದ್ದು, 35 ಸಾವಿರಕ್ಕಿಂತ ಲೂ ಹೆಚ್ಚಿನ ಪ್ರದರ್ಶನವನ್ನ ಕಂಡಿದೆ.
ಕೃತಿಗಾರನ ಕೃತಿಯೊಂದು ಇಷ್ಟು ಸಂಖ್ಯೆಯಲ್ಲಿ ಪ್ರಯೋಗವಾಗಿರುವುದು ಜಾಗತಿಕ ಮಟ್ಟದಲ್ಲಿ ದಾಖಲೆಯನಿಸುತ್ತದೆ. ಆದರೆ ನಮಗೆ ತಿಳಿಯದೆ ಇರುವ, ನಮ್ಮ ಅರಿವಿನಲ್ಲೇ ಬಾರದ, ನಮ್ಮ ನಡುವೆಯೇ ಇರುವ ಕೃತಿಯೊಂದು ಸರಿಸುಮಾರು 75 ಸಾವಿರ ಕ್ಕೂ ಅಧಿಕ ಬಾರಿ ರಂಗ ಪ್ರಯೋಗವಾಗಿದೆ ಎಂದರೆ ನಿಮಗೆ ಆಶ್ಚರ್ಯವೆನಿಸಬಹುದು. ಇದು ಆಶ್ಚರ್ಯವಾದರೂ ಸತ್ಯ
ಸಂಗತಿ!. ಅದು ಮತ್ತಾವುದು ಅಲ್ಲ. ಯಕ್ಷಗಾನ ರಂಗಭೂಮಿಯ ಅಗರಿ ಶ್ರೀನಿವಾಸ ಭಾಗವತರ ‘ಶ್ರೀ ದೇವಿ ಮಹಾತ್ಮೆ’ ಎಂಬ ಕೃತಿ ಈ ಹೆಗ್ಗಳಿಕೆಯನ್ನು ಪಡೆಯುತ್ತದೆ. ಇದು ಅಗಥ ಕ್ರೀಸ್ತೇ ಅವರ ರಚಿಸಿರುವ ಎಲ್ಲ ನಾಟಕಗಳ ಒಟ್ಟು ಪ್ರದರ್ಶನ ಸಂಖ್ಯೆಗಿಂತಲೂ ಈ ಅಧಿಕ ಸಂಖ್ಯೆಯಾಗಿದ್ದರೆ ಅತಿಶಯವಲ್ಲ!
ಯಕ್ಷಗಾನವೆಂದರೆ ನೆನಪಾಗುವುದು ನಮ್ಮ ನಾಡಿನ ಸಾಂಸ್ಕೃತಿಕ ವೈಭವ, ಆ ಬಣ್ಣಗಳ ಮೆರುಗು, ಚಂಡೆ – ಮದ್ದಳೆಗಳ ನಿನಾದ. ಇಂದು ಯಕ್ಷಗಾನದಲ್ಲಿ ‘ದೇವಿ ಮಹಾತ್ಮೆ’ ಎಂಬ ಪ್ರಸಂಗ ಅತ್ಯಂತ ಜನಪ್ರಿಯ ಆಖ್ಯಾನ. ಬಹು ಪ್ರಯೋಗವಾಗುವ ಪ್ರಸಂಗ.
ಇದರ ಇತಿಹಾಸವನ್ನು ನೋಡುವಾಗ, ಇದು 1950 ಸುಮಾರಿಗೆ ಅಗರಿ ಶ್ರೀನಿವಾಸ ಭಾಗವತರು ಇದನ್ನ ರಚಿಸುತ್ತಾರೆ. ಇದಕ್ಕೆ ಮೊದಲು, 17ನೇ ಶತಮಾನದಲ್ಲಿ ದೇವಿದಾಸ ಹಾಗೂ 19ನೇ ಶತಮಾನದಲ್ಲಿ ಬಲಿಪ ನಾರಾಯಣ ಭಾಗವತ (ಹಿರಿಯ) ಎಂಬ ಇಬ್ಬರೂ ಯಕ್ಷ ಕವಿಗಳು ಇದೇ ಕಥೆಯನ್ನು ಆಧಾರಿಸಿ ಪ್ರಸಂಗವನ್ನು ರಚಿಸಿದ್ದರು. ಬಲಿಪರು ರಚಿಸಿದ ದೇವಿ ಮಹಾತ್ಮೆ ಕೂಡ ಆ ಕಾಲದಲ್ಲಿ(1940) ಅನೇಕ ಪ್ರಯೋಗಗಳನ್ನು ಕಂಡಿತ್ತು ಎನ್ನುವುದನ್ನ ಯಕ್ಷಗಾನ ಇತಿಹಾಸ ನಮಗೆ ತಿಳಿಸುತ್ತದೆ.
ಆದರೆ ಅಗರಿಯವರ ಈ ಪ್ರಸಂಗ ರಚನೆಯಾದ ಮೇಲೆ ದೇವಿ ಮಹಾತ್ಮೆ ಪ್ರಸಂಗಕ್ಕೆ ಇನ್ನಷ್ಟು ಜನಪ್ರಿಯತೆ ಸಿಕ್ಕು, ಕಳೆದ 70 ವರುಷದಿಂದ ಅವಿರತವಾಗಿ ಪ್ರದರ್ಶನವಾಗುತ್ತಿದೆ. ಇಂದಿಗೂ, ದಿನಾಲೂ ಕನಿಷ್ಠ 5ಕ್ಕೂ ಹೆಚ್ಚು ಕಡೆ ಪ್ರಯೋಗವಾಗುತ್ತದೆ ಎಂದರೆ ಇದರ ಜನಪ್ರಿಯತೆಗೆ ಸಾಕ್ಷಿಯಾಗಿ ನಿಲ್ಲುತ್ತದೆ.
ಹಾಗಾದರೆ ದೇವಿ ಮಹಾತ್ಮೆ ಕಥೆಯನ್ನು ನೋಡುವುದಾದರೆ, ಇದು ಮಾರ್ಕಂಡೆಯ ಪುರಾಣ ಹಾಗೂ ದೇವಿ ಭಾಗವತವನ್ನ ಆಧಾರವಾಗಿ ಇಟ್ಟುಕೊಂಡು ರಚನೆಯಾದ ಕೃತಿಯಾಗಿದೆ. ಈ ಕಥೆಯನ್ನು 3 ಭಾಗಗಳಾಗಿ ವಿಭಾಗಿಸಬಹುದು. ಮೇದಿನಿ ನಿರ್ಮಾಣ (ಭೂಮಿ ಹುಟ್ಟು) ಸೃಷ್ಟಿಯ ಆದಿಯು ಓಂಕಾರದೊಂದಿಗೆ ಆರಂಭವಾಗಿ, ಅದರಿಂದಲೇ ಬ್ರಹ್ಮ, ವಿಷ್ಣು, ಮಹೇಶ್ವರರ
ಜನನವಾಗುತ್ತದೆ. ತಾವ್ಯಾರು? ತಮ್ಮ ಕರ್ತವ್ಯವೇನು ಎಂಬ ಅರಿವಿಲ್ಲದೇ ಇದ್ದಾಗ ಅಶರೀರ ವಾಣಿಯೊಂದು ಕೇಳುತ್ತದೆ. ನೀವು ಬ್ರಹ್ಮ, ವಿಷ್ಣು, ಮಹೇಶ್ವರ ಎಂದು ಹೆಸರನ್ನ ಇರಿಸಿ, ಅವರ ಕರ್ತವ್ಯವನ್ನು ನಿಗದಿಪಡಿಸುತ್ತದೆ. ಮುಂದೆ ಅವರ ಮಧ್ಯೆಯೇ ಮೇಲಾಟ ಉಂಟಾಗಿ, ವಿಷ್ಣು ಹಾಗೂ ಶಿವ ಒಂದಾಗಿ ತಮ್ಮಲ್ಲಿ ಭೇದವಿಲ್ಲ ಎಂದರೆ, ಬ್ರಹ್ಮನು ಮಾತ್ರ ತಾನು ವಿಷ್ಣುವಿಗಿಂತಲೂ ಮೇಲು ಎಂದು ಹೋರಾಟಕ್ಕೆ ಇಳಿಯುತ್ತಾನೆ.
ವಿಷ್ಣುವು ಬ್ರಹ್ಮನ ದೇಹದ ಒಳಹೊಕ್ಕು ಆತನನ್ನು ಶೋಧಿಸಿದಾಗ ಬ್ರಹ್ಮ ತನ್ನ 8 ದ್ವಾರಗಳನ್ನು ಮುಚ್ಚುತ್ತಾನೆ. ವಿಷ್ಣುವು ಬ್ರಹ್ಮನ ಜಠರ ದರ್ಶನ ಮಾಡಿ ಆತನನ್ನು ಹಿರಣ್ಯಗರ್ಭನೆಂದು ಬಣ್ಣಿಸುತ್ತಾನೆ. ನಂತರ ಬ್ರಹ್ಮನು ವಿಷ್ಣುವಿನ ಬಾಯಿ ಮೂಲಕ ಒಳಹೊಕ್ಕು, ಅಲ್ಲಿನ ವೈಭವನ್ನು ನೋಡಿ ದಿಗ್ಬ್ರಾಂತನಾಗುತ್ತಾನೆ. ವಿಷ್ಣು ತನ್ನ ಎಲ್ಲ ಮಾರ್ಗವನ್ನು ಮುಚ್ಚುತ್ತಾನೆ. ಬ್ರಹ್ಮ ವಿಷ್ಣುವಿನ ಹೊಕ್ಕಳಿನಿಂದ ಹೊರಕ್ಕೆ ಬಂದು, ತಾವರೆಯ ಹೂವಿನಲ್ಲಿ ಕುಳಿತುಕೊಂಡು, ಕಮಲ ಸಂಭವ ಎಂಬ ಹೆಸರನ್ನು
ಪಡೆಯುತ್ತಾನೆ.
ಮುಂದೆ ವಿಷ್ಣುವು ಆಲದ ಎಲೆಯ ಮೇಲೆ ಮಲಗಿ, ಯೋಗ ನಿದ್ರೆೆಯಲ್ಲಿರುವಾಗ, ಅವನು ತನ್ನ ಕಿವಿಯ ಕಿಲ್ಬಿಷವನ್ನು ಹೊರ ಹಾಕಿದಾಗ ಮಧು – ಕೈಟಭರೆಂಬ ರಕ್ಕಸರ ಜನನವಾಗುತ್ತದೆ. ಮಹಿಷಾ ಮರ್ದಿನಿ ಮುಂದೆ ದೇವತೆಗಳನ್ನು ಗೆಲ್ಲಬಲ್ಲ ಮಗು
ವೊಂದನ್ನು ಪಡೆಯಬೇಕು ಎಂಬ ಉದ್ದೇಶದಿಂದ ದಿತಿಯ ಮಗಳಾದ ಮಾಲಿನಿಯೂ ತಪಸ್ಸನ್ನು ಮಹಿಷ ರೂಪದಿಂದ ಆಚರಿಸುತ್ತಾಳೆ. ಇವಳ ತಪಸ್ಸಿನ ಜ್ವಾಲೆಯಿಂದ ಸುಪಾರ್ಶ್ವಕ ಎಂಬ ಮುನಿಗೆ ತಟ್ಟಿದಾಗ, ಕುಪಿತನಾದ ಮುನಿಯೂ ಮಾಲಿನಿಯ ಹೊಟ್ಟೆಯಲ್ಲಿ ಕೋಣವೆ ಹುಟ್ಟಲೆಂದು ಶಾಪವನ್ನು ಕೊಡುತ್ತಾನೆ.
ಮುಂದೆ ಮಾಲಿನಿಯೂ ವಿದ್ಯುನ್ಮಾಲಿಯೊಂದಿಗೆ ಮದುವೆಯಾಗುತ್ತಾಳೆ. ವಿದ್ಯುನ್ಮಾಲಿ ದೇವಲೋಕಕ್ಕೆ ದಾಳಿ ಮಾಡಿದಾಗ, ಯುದ್ದದಲ್ಲಿ ಆತ ಸಾಯುತ್ತಾನೆ. ವಿಷಯವನ್ನ ತಿಳಿದ ವಿದ್ಯುನ್ಮಾಲಿಯ ಮಗ ಮಹಿಷ, ಕುಪಿತನಾಗಿ, ದೇವತೆಗಳನ್ನು ಸಧೆ ಬಡಿಯಲು ಬ್ರಹ್ಮನಲ್ಲಿ ತಪಸ್ಸು ಮಾಡುತ್ತಾನೆ. ತನಗೆ ಅಯೋನಿಜೆಯಿಂದ ಮರಣ ಬರಲಿ ಎಂಬ ವರವನ್ನು ಪಡೆಯುತ್ತಾನೆ. ವರವನ್ನು ಪಡೆದ ಮೇಲೆ ದೇವಲೋಕಕ್ಕೆ ದಾಳಿಯನ್ನು ಮಾಡುತ್ತಾನೆ. ದೇವತೆಗಳನ್ನು ಅಲ್ಲಿಂದ ಓಡಿಸುತ್ತಾನೆ. ದಿಕ್ಕುಕಾಣದ ದೇವತೆಗಳು, ತ್ರಿಮೂರ್ತಿಗಳು ಸೇರಿ ತಮ್ಮ ಒಂದೊಂದು ಶಕ್ತಿಯನ್ನು ಕೊಟ್ಟು, ದೇವಿಯ ರೂಪವು ಪ್ರಾದುರ್ಭವಿಸುವಂತೆ
ಮಾಡುತ್ತಾರೆ.
ಇವರೆಲ್ಲರ ಪ್ರಾರ್ಥನೆಯಂತೆ ಶ್ರೀದೇವಿಯು ಮಹಿಷನಿದ್ದಲಿಗೆ ಹೋಗಿ ಅವನನ್ನು ಸಂಹರಿಸುತ್ತಾಳೆ. ಕದಂಬ ಕೌಶಿಕೆ ಮುಂದೆ ಶೋಣಿತಾಪುರದಲ್ಲಿ ಶುಂಭ ನಿಶುಂಭರೆಂಬ ಅಸುರರು ರಾಜರಾಗಿ ಮೆರೆಯುತ್ತಿದ್ದರು. ಇವರ ಮಂತ್ರಿಗಳು ಕದಂಬವನ ದಲ್ಲಿ ಸಂಚರಿಸುತ್ತಿದ್ದಾಗ ಉಯ್ಯಾಲೆಯಲ್ಲಿ ಸಂತಸದಿಂದ ತೂಗುತ್ತಿದ್ದ ದೇವಿಯನ್ನು ಕಾಣುತ್ತಾರೆ. ಅವಳ ಅನುಪಮ ಸೌಂದರ್ಯ ವನ್ನು ಕಂಡು ಶುಂಭನಿಗೆ ಯೋಗ್ಯವಾದ ವಧು ಎಂದು ತಿಳಿಸುತ್ತಾರೆ.
ಮೋಹಿತನಾಗುವ ಶುಂಭನು ತನ್ನ ಪ್ರಧಾನ ಮಂತ್ರಿ ಸುಗ್ರೀವನಲ್ಲಿ ದೇವಿಯನ್ನು ಕರೆತರಲು ಕಳುಹಿಸಿದನು. ದೇವಿಯೂ
ಅವನನ್ನು ಕೊಂದು ಮತ್ತೆ ಬದುಕಿಸುತ್ತಾಳೆ. ನಂತರ ಶುಂಭನ ಪಡೆಯನ್ನ ಕೊಲ್ಲುತ್ತಾಳೆ. ಧೂಮ್ರಾಕ್ಷನನ್ನು ಸುಟ್ಟು ಹಾಕುತ್ತಾಳೆ. ಚಂಡ ಮುಂಡರ ರುಂಡವನ್ನು ಚೆಂಡಾಡುತ್ತಾಳೆ. ಮೋಹದಲ್ಲಿ ಬಿದ್ದ ಶುಂಭನು ರಕ್ತಬೀಜನ ಮಾತನ್ನು ಧಿಕ್ಕರಿಸುತ್ತಾನೆ. ಕೊನೆಗೆ
ರಕ್ತಬೀಜನೂ ಕೂಡ ದೇವಿಯಿಂದ ಹತನಾಗುತ್ತನೆ. ಯುದ್ಧಕ್ಕೆ ಬರುವ ಲೋಕ ಕಂಟಕ ಶುಂಭ ನಿಶುಂಭರನ್ನು ಶಾಂಭವಿ ರೂಪ ದಲ್ಲಿ ಬಂದು ದೇವಿ ಸಂಹಾರವನ್ನು ಮಾಡುತ್ತಾಳೆ.
ದೇವಿ ಮಹಾತ್ಮೆ ಇಷ್ಟೊಂದು ಜನಪ್ರಿಯವಾಗಿರುವುದಕ್ಕೆ ಮತ್ತೊಂದು ಪ್ರಮುಖ ಕಾರಣವೆಂದರೆ ಇದು ದೇವಸ್ಥಾನಗಳ ಹರಕೆಯ ಭಾಗವಾಗಿರುವುದು. ದೇವಿ ದೇವಸ್ಥಾನಗಳಾದ ಕಟೀಲು ದುರ್ಗಾಪರಮೇಶ್ವರಿ, ಮಂದಾರ್ತಿ ದುರ್ಗಾಪರಮೇಶ್ವರಿ, ಕಮಲಶಿಲೆ
ಶ್ರೀಬ್ರಾಹ್ಮೀ ದುರ್ಗಾಪರಮೇಶ್ವರಿ ಮುಂತಾದ ಕಡೆ ಭಕ್ತರು ತಮ್ಮ ಇಷ್ಟಾರ್ಥವನ್ನು ಈಡೇರಿಸಿಕೊಳ್ಳಲು ದೇವರಲ್ಲಿ ಬೆಳಕಿನ ಸೇವೆಯೆಂಬ (ಯಕ್ಷಗಾನ ಪ್ರದರ್ಶನ) ಹರಕೆಯನ್ನು ಹೊರುತ್ತಾರೆ. ತಮ್ಮ ಇಷ್ಟಾರ್ಥ ಪೂರೈಸಿದಾಗ ತಮ್ಮ ಮನೆಯಲ್ಲಿ ಅಥವಾ
ಊರಿನಲ್ಲಿ ಆಯಾ ಮೇಳಗಳ(ತಂಡ) ಯಕ್ಷಗಾನ ಪ್ರದರ್ಶನವನ್ನು ಏರ್ಪಡಿಸುವುದು ವಾಡಿಕೆ.
ಈ ಸಂದರ್ಭದಲ್ಲಿ ಭಕ್ತರು ತಮ್ಮ ಇಷ್ಟದೇವತೆಯಾದ ದೇವಿಯ ಕಥೆಯನ್ನೆ ಅಪೇಕ್ಷಿಸುವ ಕಾರಣದಿಂದ ಇದು ಹೆಚ್ಚು ಹೆಚ್ಚು ಪ್ರಯೋಗಗಳನ್ನು ಕಾಣುತ್ತಿದೆ. ಕಟೀಲು, ಮಂದಾರ್ತಿ, ಕಮಲಶಿಲೆ, ಹನುಮಗಿರಿ, ಭಗವತಿ, ಮಾರಣಕಟ್ಟೆ, ಧರ್ಮಸ್ಥಳ ಸೇರಿದಂತೆ ಒಟ್ಟು 30ಕ್ಕೂ ಹೆಚ್ಚು ವೃತ್ತಿ ಮೇಳಗಳಿರುವ (ತಂಡ) ಕರಾವಳಿಯಲ್ಲಿ, ಎಲ್ಲ ಮೇಳಗಳು ಈ ಪ್ರಸಂಗವನ್ನ ಪ್ರಯೋಗಿಸುತ್ತಿದೆ. ಕಟೀಲು ಮೇಳವೊಂದೇ ಸರಸಾರಿ 700ಕ್ಕೂ ಹೆಚ್ಚು ವಾರ್ಷಿಕವಾಗಿ ಪ್ರದರ್ಶನಗೈಯುತ್ತಿದೆ.
ಉಳಿದಂತೆ ಮಂದಾರ್ತಿ ಮೇಳ 250 – 300, ಕಮಲಶಿಲೆ 80 – 100 ವಾರ್ಷಿಕವಾಗಿ ಪ್ರಸಂಗದ ಪ್ರದರ್ಶನವನ್ನುಡುತ್ತಿರುವುದು
ವಿಶೇಷ. ಇದರ ಜತೆಗೆ ಬೇರೆ ವೃತ್ತಿ ಮೇಳಗಳು, ಹವ್ಯಾಸಿಗಳು, ಬಾಲ ಕಲಾವಿದರು, ಮಹಿಳೆಯರು ಸಹ ಇದನ್ನ ಕಾಲಮಿತಿಯಲ್ಲಿ ಅಥವಾ ಇಡಿ ರಾತ್ರಿಯಲ್ಲಿ ಇದರ ಪ್ರದರ್ಶನವನ್ನ ಮಾಡುತ್ತಿದ್ದಾರೆ. ಈ ಪ್ರಸಂಗ ತಾಳಮದ್ದಲೆಯಲ್ಲಿ ಪ್ರಯೋಗ ವಾಗುತ್ತಿರುವು ದನ್ನ ಸಹ ಕಾಣಬಹುದಾಗಿದೆ. ಒಂದು ಅಂದಾಜಿನ ಪ್ರಕಾರ ವಾರ್ಷಿಕವಾಗಿ 1500 – 1700ವರೆಗೆ ಪ್ರದರ್ಶನ ಕಾಣುತ್ತಿದೆ.
ಕಳೆದ 70 ವರುಷದ ಒಟ್ಟು ಪ್ರಯೋಗ ಗಳನ್ನ ಅಂದಾಜಿನಲ್ಲಿ ನೋಡುವುದಾದರೆ, ಈ ಸಂಖ್ಯೆ ಒಂದು ಲಕ್ಷದ ಗಡಿಯನ್ನು ಮುಟ್ಟುತ್ತದೆ(ನಿಖರವಾದ ಸಂಖ್ಯೆ ದೊರೆಯುವುದು ಕಷ್ಟ). ಇದು ‘ಮೌಸ್ ಟ್ರ್ಯಾಪ್’ನ ಎರಡರಷ್ಟಿದೆ ಎನ್ನುವುದನ್ನ ಕಂಡಿತ ವಾಗಿಯೂ ಹೇಳಬಹುದು!
ಕಾವ್ಯವಾಗಿ ದೇವಿ ಮಹಾತ್ಮೆ ಪ್ರಸಂಗವನ್ನು ನೋಡುವುದಾದರೆ, ಅಗರಿಯವರು 309 ಪದ್ಯಗಳನ್ನ ರಚಿಸಿದ್ದಾರೆ. ಪದ್ಯಗಳು ಓದುವುದಕ್ಕೂ ಸರಳವಾಗಿದೆ. ಇಲ್ಲಿ ಸಂದರ್ಭಕ್ಕೆ ಅನುಗುಣವಾಗಿ ವಿವಿಧ ಮಟ್ಟುಗಳನ್ನ ಬಳಸಿ ಕವಿ ರಚಿಸಿದ್ದರಿಂದ, ರಂಗ
ಪ್ರಯೋಗದಲ್ಲಿ ಒಳ್ಳೆಯ ಆವರಣವನ್ನು ಕಲಾವಿದರು ಸೃಷ್ಟಿಸುವುದಕ್ಕೆ ಸಾಧ್ಯವಾಗುತ್ತಿದೆ. ಅರರೆ ಇನ್ನಿವಳೆಂತ ವಿಟಗಾರೆ, ಹರಿಯು ಪೊಗುತಲೆ ವಿಧಿಯ ಜಠರವ, ಸ್ಮರಿಸುತಲೆ ಶ್ರೀದೇವಿಚರಣವ, ಹುಲು ತರುಣಿಯೆ ವಿಧಿ ವರದಿ ಇತ್ಯಾದಿ ಪದ್ಯಗಳು ಬಹು ಜನಪ್ರಿಯ ಪದ್ಯಗಳಾಗಿವೆ.
ಪ್ರದರ್ಶನವಾಗಿ ನೋಡುವುದಿದ್ದರೆ, ದೇವಿ ಮಹಾತ್ಮೆ ಅದೊಂದು ಬಣ್ಣಗಳ ಲೋಕದಂತೆ ಕಾಣಿಸುತ್ತದೆ. ರಾತ್ರಿ 8.30ರಿಂದ ಆರಂಭವಾಗುವ ಪ್ರದರ್ಶನವು ಮುಗಿಯುವುದು ಬೆಳಗ್ಗೆ 5.30 – 6ರವರೆಗೆ. ಸುಮಾರು 9 ತಾಸುಗಳ ಆಖ್ಯಾನ ನವರಸಗಳಿಂದ ಕೂಡಿರುವುದರಿಂದ ರಸಾನುಭವಕ್ಕೆ ಯಾವುದೇ ಕೊರತೆಯಾಗುವುದಿಲ್ಲ. ಕಣ್ಣಿಗೆ ಮನಸ್ಸಿಗೆ ಮುದ ನೀಡುವ ಬ್ರಹ್ಮ, ವಿಷ್ಣು, ಮಹೇಶ್ವರ ನರ್ತನಗಳು, ಮಧು ಕೈಟಭರ ಆರ್ಭಟ, ತಿಳಿಹಾಸ್ಯದಲ್ಲಿ ವಿಷ್ಣು ಅವರನ್ನ ವಧಿಸುವ ಸನ್ನಿವೇಶ, ಕಚಗುಳಿಯಿಡುವ ಮಾಲಿನಿಯ ಮದುವೆಯ ಪ್ರಸಂಗ, ಮಾಲಿನಿಯ ವೈಧವ್ಯವಾದಗ, ಬಾ ಮಗನೇ ಮಹಿಷಾ ಕರೆಯದಾಗ ರಾಳದ ಬೆಂಕಿಯಲ್ಲಿ ಪ್ರೇಕ್ಷಕರ ಮಧ್ಯದಿಂದ ಬರುವ ಕೋಣದ ರೂಪದ ಮಹಿಷಾಸುರ ಎಲ್ಲರ ಆಕರ್ಷಣೆಯಾಗುತ್ತದೆ.
ದೇವಿಯೂ ತನ್ನ 9 ಕೈಯಲ್ಲಿ, ವಿವಿಧ ಆಯುಧಗಳಲ್ಲಿ ನಡೆಯುವ ದೇವಿ – ಮಹಿಷಾಸುರ ಕಾಳಗ, ಚಂಡ – ಮುಂಡರ ಅಟ್ಟ ಹಾಸ, ಕದಂಬ ವನದಲ್ಲಿ ಉಯ್ಯಾಲೆಯಲ್ಲಿ ತೂಗುವ ಕೌಶಿಕೆ, ಶುಂಭನ ನಿಶುಂಭರ ವಧೆ ಇತ್ಯಾದಿ ಸನ್ನಿವೇಶಗಳು ನೆನಪಿನಲ್ಲಿ ಡುತ್ತದೆ. ರಕ್ತಬೀಜನ ಪಾತ್ರವನ್ನು ಮೇಳದ ಪ್ರಧಾನ ಮಾತುಗಾರರೇ ಅದನ್ನ ನಿರ್ವಹಿಸುವುದರಿಂದ, ಬೌದ್ಧಿಕ ನಿಲುಮೆಗಳು ಪ್ರಕಟಗೊಳ್ಳುತ್ತದೆ. ಇಡಿ ರಾತ್ರಿಯ ಕತ್ತಲಿನಲ್ಲಿ, ಮೇಳೈಸುವ ಹಿಮ್ಮೇಳಗಳ ಮಧ್ಯದಲ್ಲಿ, ಬಣ್ಣ ಬಣ್ಣಗಳ ವೇಷಗಳ ಚಿತ್ತಾರದಲ್ಲಿ ದೇವಿ ಮಹಾತ್ಮೆ ನಮ್ಮನ್ನ ಪುರಾಣ ಲೋಕಕ್ಕೆ ಕರೆದೊಯ್ಯುವಂತೆ ಮಾಡುತ್ತದೆ.
ವಿಜ್ಞಾನಕ್ಕೆ ಸವಾಲೆನಿಸುವ ಸೃಷ್ಠಿಯ ಹಿಂದಿನ ರಹಸ್ಯ, ಮಾನವನ ಊಹೆಗೂ ನಿಲುಕದ ಯಾವುದೋ ಅತೀಂದ್ರಿಯ ಶಕ್ತಿ
ಕಲ್ಪನೆಗಳು ಪ್ರಸಂಗದಲ್ಲಿ ಒಡಮೂಡುತ್ತದೆ. ದುಷ್ಟ ಶಿಕ್ಷಣ – ಶಿಷ್ಟ ರಕ್ಷಣ ಎಂಬ ಸಂದೇಶ ಪ್ರಸಂಗದಲ್ಲಿ ಪ್ರತಿಪಾದನೆಯಾಗು ತ್ತದೆ. ಇಂಥ ವಿಶಿಷ್ಠ ಅಲೌಕಿಕ ಕಲ್ಪನೆಯನ್ನ ನೀಡಿ, ಸಮಾಜದಲ್ಲಿ ಆದರ್ಶವನ್ನ ಪ್ರತಿಪಾದಿಸುವ ದೇವಿ ಮಹಾತ್ಮೆ ಯಕ್ಷಗಾನ ರಂಗಭೂಮಿ ಇತಿಹಾಸದಲ್ಲಿ ಒಂದು ಸಾರ್ವಕಾಲಿಕ ದಾಖಲೆಯನ್ನ ಬರೆಯುತ್ತದೆ.
ಗಿನ್ನಿಸ್ ಪುಸ್ತಕದಲ್ಲಿ ಹೆಸರು ಸೇರಬೇಕಿದ್ದ ದೇವಿ ಮಹಾತ್ಮೆ ಪ್ರಸಂಗ, ನಮ್ಮ ಅರಿವಿನ ಮಿತಿಯಲ್ಲಿ ಒದಗದೆ ಇದ್ದಿದ್ದು ಸೋಜಿಗ ವೆನಿಸುತ್ತದೆ. ಈ ಬಗ್ಗೆ ಈಗಲಾದರೂ, ಸರಕಾರ, ಸಂಘ, ಸಂಸ್ಥೆಗಳು, ದೇವಸ್ಥಾನಗಳು ಗಿನ್ನಿಸ್ ದಾಖಲೆಗೆ ಸೇರಿಸುವ ಕಾರ್ಯಕ್ಕೆ ಪ್ರಯತ್ನಿಸಿದರೆ ಕನ್ನಡ ನಾಡಿಗೆ, ಜತೆಗೆ ಕಲೆಗೆ, ಕವಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗೋಣ.
ಯಕ್ಷಗಾನವೆಂದರೆ ನೆನಪಾಗುವುದು ನಮ್ಮ ನಾಡಿನ ಸಾಂಸ್ಕೃತಿಕ ವೈಭವ, ಆ ಬಣ್ಣಗಳ ಮೆರುಗು, ಚಂಡೆ – ಮದ್ದಳೆಗಳ ನಿನಾದ. ಇಂದು ಯಕ್ಷಗಾನದಲ್ಲಿ ‘ದೇವಿ ಮಹಾತ್ಮೆ’ ಎಂಬ ಪ್ರಸಂಗ ಅತ್ಯಂತ ಜನಪ್ರಿಯ ಆಖ್ಯಾನ. ಬಹು ಪ್ರಯೋಗವಾಗುವ ಪ್ರಸಂಗ. ಇದರ ಇತಿಹಾಸವನ್ನು ನೋಡುವಾಗ, ಇದು 1950 ಸುಮಾರಿಗೆ ಅಗರಿ ಶ್ರೀನಿವಾಸ ಭಾಗವತರು ಇದನ್ನ ರಚಿಸುತ್ತಾರೆ. ಇದಕ್ಕೆ ಮೊದಲು, 17ನೇ ಶತಮಾನದಲ್ಲಿ ದೇವಿದಾಸ ಹಾಗೂ 19ನೇ ಶತಮಾನದಲ್ಲಿ ಬಲಿಪ ನಾರಾಯಣ ಭಾಗವತ (ಹಿರಿಯ) ಎಂಬ ಇಬ್ಬರೂ ಯಕ್ಷ ಕವಿಗಳು ಇದೇ ಕಥೆಯನ್ನು ಆಧಾರಿಸಿ ಪ್ರಸಂಗವನ್ನು ರಚಿಸಿದ್ದರು.
ಬಲಿಪರು ರಚಿಸಿದ ದೇವಿ ಮಹಾತ್ಮೆ ಕೂಡ ಆ ಕಾಲದಲ್ಲಿ(1940) ಅನೇಕ ಪ್ರಯೋಗಗಳನ್ನು ಕಂಡಿತ್ತು.