ಜಾತ್ರೆ ಸ್ಪೆಷಲ್
ಕುಮಾರಸ್ವಾಮಿ ವಿರಕ್ತಮಠ
ಕರ್ನಾಟಕದಲ್ಲಿ ನಡೆಯುವ ಪ್ರತಿಯೊಂದು ಜಾತ್ರೆಯ ಸಾಂಸ್ಕೃತಿಕ ಮಹತ್ವ ಅಪಾರವಾದುದು. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಜರುಗುವ ಜಾತ್ರೆಗಳಲ್ಲಿ ಸಂಸ್ಕೃತಿ, ಸಂಪ್ರದಾಯ, ಪರಂಪರೆಗಳು, ಜನಪದ ಸೊಗಡು ಮತ್ತು ಪದ್ಧತಿಗಳ ಕಲರವ ಮನೆಮಾಡಿರುತ್ತದೆ. ಜಾತ್ರೆಗಳು ಸಾಮಾನ್ಯವಾಗಿ
ಹಬ್ಬಗಳು, ಸುಗ್ಗಿಯ ಋತುಗಳು ಮತ್ತು ಸ್ಥಳೀಯ ಸಂಪ್ರದಾಯಗಳೊಂದಿಗೆ ತಳುಕು ಹಾಕಿಕೊಂಡಿರುತ್ತವೆ.
ಜಾತ್ರೆ ಎಂಬುದು ಸ್ಥಳೀಯ ಪರಂಪರೆಯನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವ ಸಾಂಸ್ಕೃತಿಕ ಭಂಡಾರವಾಗಿದೆ. ಜಾತ್ರೆಯು ಸಮುದಾಯದ ಬಾಂಧವ್ಯ ವನ್ನು ಬೆಳೆಸುವ ಒಂದು ಸಾಮಾಜಿಕ ಕಾರ್ಯಕ್ರಮವಾಗಿದೆ. ಸಮಾಜದ ವಿವಿಧ ಸ್ತರದ ಜನರು ಒಂದೆಡೆ ಸೇರಿ ಸಂಭ್ರಮಿಸುವ ಅಭೂತ ಪೂರ್ವ ಕ್ಷಣಗಳು ಅಲ್ಲಿ ಹುಟ್ಟಿಕೊಳ್ಳುತ್ತವೆ. ಹೀಗೆ ಸೇರಿದ ಎಲ್ಲ ಜನರೂ ಅಲ್ಲಿ ಏಕತೆ ಮತ್ತು ಸೌಹಾರ್ದದ ಭಾವ ಮೂಡಿಸುತ್ತಾರೆ. ಜಾತ್ರೆಗಳು ಜಾತ್ಯತೀತ. ಎಲ್ಲಾ ಜಾತಿ, ಧರ್ಮದವರೂ ಇಲ್ಲಿ ಪಾಲ್ಗೊಳ್ಳುತ್ತಾರೆ.
ಹಾಗೆ ಪಾಲ್ಗೊಂಡು ‘ಇದು ನನ್ನ ಸಮಾಜ, ಇವರೆಲ್ಲ ನನ್ನವರು’ ಎಂಬ ಧನ್ಯತೆ ಅನುಭವಿಸುವುದಕ್ಕಾಗಿಯೇ ಅವು ಇರುವುದು. ಎಲ್ಲರ ಸಹಕಾರ ಸಹಯೋಗಗಳಿಂದಲೇ ಅವು ನೆರವೇರುವುದು. ಜಾತ್ರೆಗಳೊಂದಿಗೆ ನಮ್ಮ ಜನ ಸಾಮಾನ್ಯರ ಜೀವನ, ಸಾಮಾಜಿಕ ಆಗುಹೋಗುಗಳು, ಆರ್ಥಿಕ ವ್ಯವಸ್ಥೆ, ಮನಶ್ಶಾಸ ಎಲ್ಲವೂ ಹಾಸುಹೊಕ್ಕಾಗಿವೆ. ಪ್ರತಿಯೊಬ್ಬ ಭಾರತೀಯನ ಬಾಲ್ಯದ ನೆನಪಿನ ಅಂಗಳದಲ್ಲೂ ಜಾತ್ರೆಯೊಂದು ಖಂಡಿತ ಇರುತ್ತದೆ. ಅಲ್ಲಿ ಕಾಣ ಬರುವ ಹಳ್ಳಿ ಮತ್ತು ನಗರದ ನಾನಾ ಬಗೆಯ ಜನರು, ವಿಧ ವಿಧದ ಪೂಜೆ-ಪುನಸ್ಕಾರಗಳು, ರಥ, ತೇರು, ಬಂಡಿಗಳು, ರಥ ಎಳೆಯುವ ಭಕ್ತರ ಆವೇಶ, ಘಂಟೆಯ ನಿನಾದ, ಡೋಲು, ತಮಟೆ, ಕಹಳೆ, ಜೈಕಾರಗಳು, ನಾನಾ ಬಣ್ಣಗಳ ಬಲೂನು ಬೆಂಡು-ಬತ್ತಾಸುಗಳು ಇವೆಲ್ಲ ನಮ್ಮ ಸ್ಮತಿಪಟಲದಲ್ಲಿ ಗಟ್ಟಿಯಾಗಿ ನೆಲೆಯೂರಿ ಜೀವಮಾನ ದುದ್ದಕ್ಕೂ ಸವಿನೆನಪಾಗಿ ಹಿಂಬಾಲಿಸಿ ಬರುತ್ತಿರುತ್ತವೆ.
ಈಗಲೂ ಗ್ರಾಮೀಣ ಪ್ರದೇಶಗಳಲ್ಲಿ, ರೈತರ ಕುಟುಂಬ ಗಳು ತಮ್ಮ ವಾರ್ಷಿಕ ಖರೀದಿ ನಡೆಸುವುದು ಜಾತ್ರೆ ಗಳಲ್ಲಿಯೇ. ಅಂಥದ್ದೇ ಒಂದು ಸಂದರ್ಭ ವೆಂದರೆ ಸುತ್ತೂರು ಜಾತ್ರೆ. ಕರ್ನಾಟಕದಲ್ಲಿ ಲೆಕ್ಕವಿಲ್ಲದಷ್ಟು ಜಾತ್ರೆಗಳು ವರ್ಷ ಪೂರ್ತಿ ನಡೆಯುತ್ತವೆ. ಯಾವ ಜಾತ್ರೆಯೂ ಒಂದರಂತೆ ಇನ್ನೊಂದು ಇರುವುದಿಲ್ಲ. ಪ್ರತಿಯೊಂದು ಜಾತ್ರೆಗೂ ಅದರದೇ ವೈಶಿಷ್ಟ್ಯಗಳಿವೆ. ಅಂಥ ಜಾತ್ರೆಗಳಲ್ಲಿ ಪ್ರಸಿದ್ಧ ಸುತ್ತೂರು ಜಾತ್ರೆಯೂ ಒಂದು. ಕನ್ನಡ ನಾಡಿನ ಶ್ರೀ ಸುತ್ತೂರು ಮಠದ ಆದಿಜಗದ್ಗುರು ಶ್ರೀ ಶಿವರಾತ್ರಿ ಶಿವ ಯೋಗಿಗಳವರ ಚರಿತ್ರೆಯು ಸದಾ ಸ್ಮರಣಾರ್ಹವಾದುದು.
ಸಾವಿರ ವರ್ಷಗಳ ಹಿಂದೆ ಸಮಾಜದಲ್ಲಿ ಅಂಧಕಾರ, ಅಪ ನಂಬಿಕೆ, ಅಸೂಯೆಗಳು ತಾಂಡವವಾಡುತ್ತಿದ್ದವು. ಜನರನ್ನು ಕತ್ತಲಿನಿಂದ ಬೆಳಕಿನೆಡೆಗೆ ತರಲು ಹಲವಾರು ಪ್ರಮಥರು ಸಮಾಜದಲ್ಲಿ ಜನ್ಮತಾಳಿದರು. ಹಾಗೆ ಅವತರಿಸಿದ ಅಮರಗಣಗಳಲ್ಲಿ ಒಬ್ಬರು ಶಿವರಾತ್ರೀಶ್ವರ ಶಿವಯೋಗಿಗಳು. ದೇಶದ ಅನೇಕ ದಿವ್ಯಕ್ಷೇತ್ರಗಳನ್ನು ಸಂದರ್ಶಿಸುತ್ತಾ ಲೋಕ ಕಲ್ಯಾಣಕ್ಕಾಗಿ ಮತ್ತು ಗುರುವಿನ ದರುಶನಕ್ಕಾಗಿ ಸಂಚಾರಿಯಾದ ಇವರು, ಗುರುವನ್ನು ಕಾಣುವ ಹಂಬಲದಲ್ಲಿ ತಪೋಮಗ್ನರಾದರು. ಶಿವಯೋಗಿ ಗಳ ಮನಸ್ಸು ಸದಾ ಗುರುವಿನ ಪಾದಧ್ಯಾನದಲ್ಲಿ ಮಗ್ನವಾಗಿತ್ತು.
ಅವರ ಮನಸ್ಸು ಇಲ್ಲಿಗೆ ಬಂದ ಉದ್ದೇಶವನ್ನು ಅರಿಯಲು ಪ್ರಯತ್ನಿಸುತ್ತಿತ್ತು. ಇದಕ್ಕಾಗಿ ಗುರುವಿನ ಮಾರ್ಗದರ್ಶನಕ್ಕಾಗಿ ಕಾಯ್ದಿದ್ದ ಶಿವಯೋಗಿಗಳಿಗೆ
ಮಹಾಶಿವರಾತ್ರಿಯ ಪುಣ್ಯದಿನದಂದು ಗುರುವಿನ ದಿವ್ಯ ದರ್ಶನವಾಯಿತು. ಭೂಲೋಕದಲ್ಲಿ ಹೆಚ್ಚಿದ್ದ ಅಜ್ಞಾನ ವನ್ನು ತೊಲಗಿಸಿ ಭಕ್ತಿಪ್ರಸಾರ ಮಾಡುವ ಹೊಣೆ ಶಿವಯೋಗಿಗಳ ಕಾಯಕವಾಯಿತು. ಮಹಾಶಿವರಾತ್ರಿ ಯಂದು ದಿವ್ಯದರ್ಶನವಾದುದರಿಂದ ‘ಶ್ರೀ ಶಿವರಾತ್ರಿ ಶಿವಾಚಾರ್ಯ’ ಎಂಬ ಶುಭನಾಮವು ಶಿವಯೋಗಿಗಳಿಗೆ ಸ್ಥಿರವಾಯಿತು.
ಸಮಾಜದ ಜನರಲ್ಲಿ ಮೂಡಿದ್ದ ಅಜ್ಞಾನ, ಅಸೂಯೆ, ಅಪನಂಬಿಕೆ, ಅಂಧಕಾರವನ್ನು ತೊಲಗಿಸುವ ಕಾಯಕದಲ್ಲಿ ಶಿವಯೋಗಿಗಳು ನಿರತರಾದರು. ಗುರು ತೋರಿದ ದಾರಿಯಂತೆ ಕಪಿಲಾ ನದಿ ತೀರಕ್ಕೆ ಬಂದು ಧ್ಯಾನಸ್ಥರಾದರು. ನಂತರ ನಡೆದಿದ್ದೆಲ್ಲವೂ ಇತಿಹಾಸ. ಭಾರತದ ಎರಡು ಬಲಿಷ್ಠ ರಾಜವಂಶ ಗಳಾಗಿದ್ದ ಚೋಳರು ಮತ್ತು ಗಂಗರ ನಡುವೆ ನಡೆಯಬೇಕಿದ್ದ ಘೋರ ಕದನ ವನ್ನು ತಡೆದರು. ಯುದ್ಧಸನ್ನದ್ಧರಾಗಿದ್ದ ಎರಡೂ ಮನೆತನಗಳ ನಡುವೆ ಶಾಂತಿ-ಸೌಹಾರ್ದ ಮೂಡಿಸಿದ ಕುರುಹಾಗಿ ಅಂದು ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿ ಗಳವರಿಂದ ಸಂಸ್ಥಾಪಿತವಾದ ಮಠವೇ ಸುತ್ತೂರು ಶ್ರೀಮಠ. ಶ್ರೀಮಠದ ಪರಂಪರೆಯ ನಂತರದ ಎಲ್ಲ ಗುರುಗಳು ಸಮಾಜದ ಸರ್ವತೋಮುಖ ಪ್ರಗತಿಗಾಗಿ ಕಾಯಕ ನಿರತರಾದವರು.
ಸುತ್ತೂರು ಶ್ರೀಮಠವು ಧಾರ್ಮಿಕ, ಆಧ್ಯಾತ್ಮಿಕ ಕಾರ್ಯ ಗಳಿಗೆ ಮಾತ್ರ ಸೀಮಿತವಾಗದೆ, ಸಮಾಜದ ಒಳಿತಿಗಾಗಿ ಅಕ್ಷರ-ಅನ್ನ-ಅನುಭಾವ ದಾಸೋಹದ ಕೈಂಕರ್ಯ ಗಳನ್ನು ಕೈಗೊಂಡಿದೆ. ಶ್ರೀಮಠದ ತ್ರಿವಿಧ ದಾಸೋಹಕ್ಕೆ ಭದ್ರಬುನಾದಿ ಹಾಕಿದವರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು, ಅದಕ್ಕೆ ನೀರೆರದು ಹೆಮ್ಮರವಾಗಿ ಬೆಳೆಸಿದವರು ಅವರ ಕರಕಮಲ ಸಂಜಾತ ರಾದ ಇಂದಿನ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು.
ಸುತ್ತೂರು ಜಾತ್ರೆಯ ವಿಶೇಷ: ‘ಹತ್ತೂರು ಮೀರಿಸುವ ಸುತ್ತೂರು ಜಾತ್ರೆ’ ಎಂಬ ನಾಣ್ಣುಡಿ ಜನರ ಬಾಯಲ್ಲಿ ಜನಜನಿತವಾದುದು. ಹೌದು ಈ ಜಾತ್ರೆಯ ವೈಶಿಷ್ಟ್ಯ ವನ್ನು ವರ್ಣಿಸಲು ಅಸಾಧ್ಯ. ಧಾರ್ಮಿಕ ಕೈಂಕರ್ಯ ಗಳಿಗಷ್ಟೇ ಸೀಮಿತವಾದ ಜಾತ್ರೆ ಇದಲ್ಲ. ಕಲೆ-ಸಂಸ್ಕೃತಿ, ಕೃಷಿ, ಕ್ರೀಡೆ, ಆರೋಗ್ಯ, ವೈಜ್ಞಾನಿಕತೆಗಳಿಂದ ಕೂಡಿದ ಜಾತ್ರೆ ಎಂದೇ ಇದು ನಾಡಿನಲ್ಲಿ ಹೆಸರುವಾಸಿಯಾಗಿದೆ. ಭಾರತವು ಕೃಷಿ ಪ್ರಧಾನ ರಾಷ್ಟ್ರ, ರೈತರೇ ದೇಶದ ಬೆನ್ನೆಲಬು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಸುತ್ತೂರು ಜಾತ್ರೆಯಲ್ಲಿ ಕೃಷಿ ಮತ್ತು ರೈತರಿಗೆ ಹೆಚ್ಚಿನ ಪ್ರಾಧಾನ್ಯ ನೀಡಲಾಗುತ್ತದೆ. ಇಲ್ಲಿ ನಡೆಯುವ ಕೃಷಿ
ಮೇಳದಲ್ಲಿ, ಕ್ಷೇತ್ರ ಪ್ರಾತ್ಯಕ್ಷಿಕೆಗಳ ಮೂಲಕ ಬೆಳೆ ಅಭಿವೃದ್ದಿ, ಬಿತ್ತನೆ ವಿಧಾನ, ಕೃಷಿಹೊಂಡ, ಬೀಜ ವಿತರಣೆ, ಸಾವಯವ ಕೃಷಿ, ಕೃಷಿ ಯಂತ್ರೋ ಪಕರಣಗಳು, ಕೃಷಿ ವಿಚಾರ ಸಂಕೀರಣ, ಪ್ರಗತಿಪರ ರೈತರಿಗೆ ಸನ್ಮಾನ ಮುಂತಾದವುಗಳ ಬಗ್ಗೆ ರೈತರಲ್ಲಿ ಒಲವು ಹೆಚ್ಚಿಸಲಾಗುತ್ತಿದೆ.
ಕಳೆದ ೫೨ ವರ್ಷಗಳಿಂದಲೂ ಜಾತ್ರೆಯಲ್ಲಿ ದನಗಳ ಪರಿಷೆಯನ್ನು ಆಯೋಜಿಸಲಾಗುತ್ತಿದೆ. ಪಶು ಸಂಗೋಪನೆ, ಕೃಷಿಯ ಎತ್ತುಗಳು, ಹೋರಿಗಳು, ಕುರಿ-ಕೋಳಿ ಸಾಕಾಣಿಕೆಯ ಮಾಹಿತಿ ಒದಗಿಸುವುದರ ಜತೆಗೆ, ರೈತರಿಗೆ ಅನುಕೂಲ ವಾಗಲೆಂದು ದೇಶಿ ತಳಿಗಳ ಪ್ರದರ್ಶನವನ್ನು ಏರ್ಪಡಿಸಿಕೊಂಡು ಬರಲಾ ಗುತ್ತಿದೆ. ಶೈಕ್ಷಣಿಕ ಮತ್ತು ವೈಜ್ಞಾನಿಕ, ಕರಕುಶಲ/ಗುಡಿ ಕೈಗಾರಿಕಾ ಉತ್ಪನ್ನಗಳ ಪ್ರದರ್ಶನ ಸುತ್ತೂರು ಜಾತ್ರೆಯ ಪ್ರಮುಖ ಆಕರ್ಷಣೆ. ವಿದ್ಯಾರ್ಥಿಗಳು ತಯಾರಿಸಿದ ಶೈಕ್ಷಣಿಕ ಮಾದರಿಗಳ ಪ್ರದರ್ಶನ ಇಲ್ಲಿ ನಡೆಯುತ್ತದೆ. ವಿವಿಧ ಸಹಕಾರ ಸಂಘಗಳು, ಸೀ ಶಕ್ತಿ ಗುಂಪುಗಳಿಗೆ ಇದೊಂದು ಉತ್ತಮ ವೇದಿಕೆಯಾಗಿ ಮಾರ್ಪಟ್ಟಿದೆ.
ಜೆಎಸ್‌ಎಸ್ ಆಸ್ಪತ್ರೆ, ವೈದ್ಯಕೀಯ ಕಾಲೇಜು, ಆರ್ಯುವೇದ ಅಸ್ಪತ್ರೆಗಳ ಸಹಯೋಗದಲ್ಲಿ ನುರಿತ ವೈದ್ಯರುಗಳಿಂದ ಉಚಿತ ಆರೋಗ್ಯ ತಪಾಸಣೆಯನ್ನು ನಡೆಸಲಾಗುತ್ತದೆ. ವಿದ್ಯಾರ್ಥಿ ಗಳಿಂದ ಅರೋಗ್ಯದ ಕುರಿತಾದ ಮಾಹಿತಿಯನ್ನು ಒ ಗೊಂಡ ವಸ್ತುಪ್ರದರ್ಶನವೂ ಇರುತ್ತದೆ. ಕನ್ನಡ ನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಲಾ ತಂಡಗಳ ವೈಭವವನ್ನು ಸುತ್ತೂರು ಜಾತ್ರೆಯಲ್ಲಿ ಕಣ್ತುಂಬಿ ಕೊಳ್ಳಲು ಎರಡು ಕಣ್ಣು ಸಾಲವು. ವೀರಗಾಸೆ, ನಂದಿ ಕೋಲು ಕುಣಿತ, ಕಂಸಾಳೆ, ಡೊಳ್ಳು ಕುಣಿತ, ಜಗ್ಗಲಿಗೆ ಮೇಳ, ನವಿಲು ಕುಣಿತ, ಡೋಲು, ಚಂಡೆ ವಾದ್ಯ, ಗೊಂಬೆ ಮತ್ತು ಕುದುರೆ ಕುಣಿತ. ಪೌರಾಣಿಕ ನಾಟಕಗಳ ಪ್ರದರ್ಶನ, ಭಜನಾಸ್ಪರ್ಧೆ, ಸೋಬಾನೆಪದ ಸ್ಪರ್ಧೆ ಮೊದಲಾದವುಗಳಿಗೆ ಪ್ರತಿವರ್ಷವೂ ವೇದಿಕೆಯನ್ನು ಕಲ್ಪಿಸಲಾಗುತ್ತದೆ. ಬರುವ ಭಕ್ತರು, ಪ್ರವಾಸಿಗರು ಅಹ್ಲಾದಕರವಾಗಿ ವಿಹರಿಸಲು ಶ್ರೀಕ್ಷೇತ್ರದ ತಟದಲ್ಲಿ ಹರಿಯುವ ಕಪಿಲೆಯ ಮಡಿಲಲ್ಲಿ ದೋಣಿ ವಿಹಾರವನ್ನು
ಏರ್ಪಡಿಸಲಾಗುತ್ತದೆ.
ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಹಾಗೂ ಬಡಬಗ್ಗರಿಗೆ ಅನುಕೂಲವಾಗಲೆಂದೇ ಯಾವುದೇ ಜಾತಿ- ಮತಗಳ ಭೇದವಿಲ್ಲದೆ ಪ್ರತಿ ವರ್ಷವೂ ನೂರಾರು
ಜೋಡಿಗಳ ಸಾಮೂಹಿಕ ವಿವಾಹವನ್ನು ಉಚಿತವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಕ್ರಿಕೆಟ್, ಪುಟ್ಬಾಲ್ ಕ್ರೀಡೆಗಳ ಮಧ್ಯೆ ನಶಿಸಿಹೋಗುತ್ತಿರುವ ದೇಸಿ ಕ್ರೀಡೆಗಳನ್ನು ನೀವು ಆಡಬೇಕೆಂದರೆ ಮತ್ತು ನೋಡಬೇಕೆಂದರೆ ಸುತ್ತೂರು ಜಾತ್ರೆಗೆ ಬರಲೇಬೇಕು. ಕುಸ್ತಿ ಪಂದ್ಯಾವಳಿ, ಕೆಸರುಗದ್ದೆ ಓಟ, ಹಗ್ಗ ಜಗ್ಗಾಟ, ಹಳಗುಣಿಮಣೆ, ಗೋಲಿ, ಬುಗುರಿ, ಚದುರಂಗ, ಕುಂಟೆಬಿಲ್ಲೆ, ಗುಂಡು ಎತ್ತುವ ಸ್ಪರ್ಧೆ, ಮೂಟೆ ಹೊತ್ತು ಓಡುವ ಸ್ಪರ್ಧೆ, ಗಾಳಿಪಟ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ.
ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗೆ ಕುಟೀರಗಳನ್ನು ನಿರ್ಮಿಸಿ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ, ನಿತ್ಯವೂ ಪ್ರಸಾದದ ವ್ಯವಸ್ಥೆಯಿರುತ್ತದೆ. ಸೌದೆ ಒಲೆಯಲ್ಲಿ ತಯಾರಿಸುವ ಸ್ವಾದಿಷ್ಟಕರ ಪಾಯಸ, ಸಿಹಿಬೂಂದಿ, ತರಕಾರಿ ಹುಳಿ, ಮೈಸೂರುಪಾಕ್, ಅನ್ನ, ಸಾಂಬಾರ್ ಮತ್ತು ಮಜ್ಜಿಗೆ ಎಲ್ಲೆಡೆ ಜನಜನಿತ. ಪ್ರತಿ ವರ್ಷದಂತೆ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವವು ಈ ಬಾರಿ ಫೆಬ್ರವರಿ ೬ರಿಂದ ಆರಂಭ ಗೊಂಡು, ಮಹಾರಥೋತ್ಸವ, ಲಕ್ಷದೀಪೋತ್ಸವ, ಕಪಿಲಾರತಿ, ತೆಪ್ಪೋತ್ಸವ ಮುಂತಾದ ಧಾರ್ಮಿಕ ಕೈಂಕರ್ಯಗಳೊಂದಿಗೆ ಫೆ.೧೧ರಂದು ಸಂಪನ್ನ
ಗೊಳ್ಳುತ್ತದೆ. ನಾಡಿನ ಮಠಾಽಶರುಗಳು, ಜನಪ್ರತಿನಿಽ ಗಳು, ಗಣ್ಯರು, ಸಾಹಿತಿಗಳು, ಕಲಾವಿದರು ಪಾಲ್ಗೊಂಡು ಜಾತ್ರೆಗೆ ಮೆರುಗು ತರಲಿದ್ದಾರೆ.
(ಲೇಖಕರು ಹವ್ಯಾಸಿ ಬರಹಗಾರರು)