ಅಭಿಮತ
ಅನಿಲ್ ಬಿ.ಕೊಪ್ಪ
ಬಾಳ ಪಯಣದ ಪಥದಲ್ಲಿ ಸುಖದುಃಖಗಳು ಸದಾ ನಮ್ಮನ್ನು ಆವರಿಸುತ್ತಿರುತ್ತವೆ. ಈ ಸುಖದುಃಖಗಳನ್ನು ಸಮಚಿತ್ತದಿಂದ ಸ್ವೀಕರಿಸಿ, ಮುನ್ನಡೆಯುವ ಚಿತ್ತವೃತ್ತಿ ಯನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯ.
‘ಸಮತ್ವಂ ಯೋಗಮುಚ್ಯತೇ’ ಎಂಬ ಸಂಸ್ಕೃತ ವಾಣಿಯಂತೆ, ಜೀವನದಲ್ಲಿ ನೋವು – ನಲಿವು, ಸಿಹಿ – ಕಹಿ, ಉಷ್ಣ – ಶೀತ, ಕತ್ತಲೆ – ಬೆಳಕು ಇತ್ಯಾದಿ ದ್ವಂದ್ವ ಗಳು ವ್ಯಾಪಕ, ನಿರಂತರ. ಈ ದ್ವಂದ್ವಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಧರ್ಮವನ್ನು ರೂಪಿಸಿಕೊಳ್ಳಬೇಕಿದೆ. ದುಃಖ ಬಂದಾಗ ಕುಗ್ಗದೆ, ಸುಖ ಬಂದಾಗ ಮೈಮರೆಯದೆ ಅವರೆಡನ್ನೂ ಸಮಾನವಾಗಿ ಸ್ವೀಕರಿಸುವ ಮನೋಧರ್ಮವನ್ನು ರೂಪಿಸಿಕೊಳ್ಳುವುದೇ ಯೋಗ. ಯೋಗವನ್ನು ಪ್ರತಿದಿನವೂ
ಅಳವಡಿಸಿಕೊಳ್ಳುವುದು ಹಲವಾರು ಸಮಸ್ಯೆಗಳನ್ನು ದೂರಮಾಡುವ ಸುಯೋಗವಾಗುತ್ತದೆ.
ನಾಗಾಲೋಟದಲ್ಲಿ ಓಡುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ಸರ್ವರೂ ಕ್ಷಣಕ್ಷಣಕ್ಕೂ ಉದ್ವಿಗ್ನತೆಯಿಂದ ಬಳಲಿ ಬೆಂಡಾಗುತ್ತಿರುವಾಗ, ಅನಾರೋಗ್ಯದ ಕೂಪದಲ್ಲಿ ಬೀಳುತ್ತಿರುವಾಗ ಮನಃಶಾಂತಿ ಮತ್ತು ಆರೋಗ್ಯಕ್ಕಾಗಿ ಯೋಗವು ದಾರಿದೀಪವಾಗಿದೆ. ಯೋಗವು ಶಿಸ್ತನ್ನು ಕಲಿಸುತ್ತದೆ. ದೇಹ ಮತ್ತು ಮನಸ್ಸನ್ನು ಹತೋಟಿ ಯಲ್ಲಿಡುವ ವಿಧಾನವನ್ನು ಬೋಧಿಸುತ್ತದೆ. ಎಲ್ಲಾ ಸಮಸ್ಯೆಗಳನ್ನು ದೂರವಿಡುವ, ಮಾನಸಿಕ ಒತ್ತಡವನ್ನು ದೂರಮಾಡಲು ಇರುವ ದಿವ್ಯೌಷಧ’ವೇ ಯೋಗ. ಆರೋಗ್ಯಂ ಭಾಸ್ಕರಾದಿಚ್ಛೇತ್ ಎಂಬ ವೇದ ಪುರಾಣದ ಉಖದಂತೆ, ಸೂರ್ಯಕಿರಣಗಳು ದೇಹದ ಮೇಲೆ ಬೀಳುವುದರಿಂದ ಅನೇಕ ರೋಗಗಳು ದೂರವಾಗಿ, ಆರೋಗ್ಯವು ಲಭಿಸುತ್ತದೆ. ಆ ನಿಟ್ಟಿನಲ್ಲಿ ಮುಂಜಾನೆಯ ಬೆಳಕಿನಲ್ಲಿ ಸೂರ್ಯನಮಸ್ಕಾರ ಮಾಡುವುದರಿಂದ ಮನಸ್ಸು ಶಾಂತಗೊಂಡು,
ದೇಹದಾರ್ಢ್ಯ ಹೆಚ್ಚುತ್ತದೆ.
ಕರೋನಾದಂಥ ಮಹಾ ಕಾಯಿಲೆಯನ್ನು ಎದುರಿಸುತ್ತಿರುವ ಈ ಪರಿಸ್ಥಿತಿಯಲ್ಲಿ ಮಾನಸಿಕ ಖಿನ್ನತೆಯನ್ನು ದೂರಮಾಡಿ, ದೈಹಿಕ ಕ್ಷಮತೆಯನ್ನು ಹೆಚ್ಚಿಸಿಕೊಳ್ಳಲು ಯೋಗವೇ ಒಂದು ಆರೋಗ್ಯ ಕವಚವಿದ್ದಂತೆ ಎಂದರೆ ಅತಿಶಯೋಕ್ತಿಯಾಗಲಾರದು. ಪ್ರಾಣಾಯಾಮ, ಕ್ರಿಯಾತ್ಮಕ ಯೋಗಾಭ್ಯಾಸದ ವ್ಯಾಯಾಮಗಳನ್ನು ಮಾಡುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿಯು ಉತ್ತಮಗೊಳ್ಳುತ್ತದೆ. ಮಾನಸಿಕ ಆರೋಗ್ಯ ಮತ್ತು ಉಸಿರಾಟದಲ್ಲಿ ಸ್ಥಿರತೆ ಮೂಡುತ್ತದೆ. ಯೋಗ ವಾಸಿಷ್ಠ ಗ್ರಂಥದ ಉಖದಂತೆ, ಮನಃ ಪ್ರಶಮನೋಪಾಯಃ ಯೋಗಃ ಇತ್ಯಭಿಧಿಯತೇ ಅರ್ಥಾತ್ ಮನಸ್ಸನ್ನು ಪ್ರಶಮನಗೊಳಿಸುವ, ಶಾಂತಗೊಳಿಸುವ ಉಪಾಯವೇ ಯೋಗ.
ಯೋಗಾಸನಗಳು ಅವಯವಗಳನ್ನು ತೀಡುತ್ತವೆ. ಸ್ನಾಯುಗಳನ್ನು ಬಲಪಡಿಸುತ್ತವೆ. ಯೋಗ ಮತ್ತು ಧ್ಯಾನದಿಂದ ಅಂತರ್ ದೃಷ್ಟಿಯ ಸಾಮರ್ಥ್ಯವು ಹೆಚ್ಚುತ್ತದೆ. ನಿರ್ಮಲವಾದ ಮನಸ್ಸು ಹಾಗೂ ಸರ್ವಾಂಗ ಸುಂದರವಾದ ಕಾಯವನ್ನು ಹೊಂದುವುದೇ ಆರೋಗ್ಯ. ಆರೋಗ್ಯದ ಈ ಗುಟ್ಟನ್ನು ಹೇಳುವುದೇ ಯೋಗ. ಯೋಗದಲ್ಲಿ ಸಾಧನೆಯು ಸತತವಾಗಿದ್ದರೆ, ಪರಿಣಾಮ ಖಚಿತ. ಯಾವುದಕ್ಕೂ ಮುಖ್ಯವಾಗಿ ತಾಳ್ಮೆ ಬೇಕಷ್ಟೇ.ಯೋಗದಿನದಂಥ ಆಚರಣೆಗಳು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗದೇ, ದಿನನಿತ್ಯ ಪ್ರತಿ ಮನೆಗಳಲ್ಲಿಯೂ ಯೋಗ ದೀವಿಗೆಯು ಜ್ವಲಿಸಿ, ಮೈಮನಗಳಲ್ಲಿ ಸುಜ್ಞಾನ ದೀವಿಗೆಯ ಬೆಳಕಾಗಬೇಕಿದೆ. ಹಿತ್ತಲ ಗಿಡ ಮದ್ದಲ್ಲ ಎಂಬಂತೆ, ಅದು ಮದ್ದಾಗುವುದು, ಹೊರಗಿನವರು ಆ ಗಿಡವನ್ನು ಆರಿಸಿಕೊಂಡಾಗ ಮಾತ್ರ. ಈಗ ವಿದೇಶಿಗರೂ ಕೂಡ ತಮ್ಮ ದೇಹ ಸ್ವಾಸ್ಥ್ಯಕ್ಕಾಗಿ ನಮ್ಮ ಭರತಖಂಡದ ಹೆಮ್ಮೆಯಾಗಿರುವ ಯೋಗ ವಿದ್ಯೆಯ ಕಡೆಗೆ ತಿರುಗಿ ನೋಡುತ್ತಿರುವಾಗ ನಾವು ಕೂಡ ಆರೋಗ್ಯದ ಸನ್ಮಿತ್ರನಾಗಿ ಯೋಗ ವನ್ನು ಮುನ್ನಡೆಸುವ ಮೂಲಕ ಕೋವಿಡ್‌ನಂಥ ಸಂದಿಗ್ಧತೆಯಲ್ಲಿ ಉಂಟಾಗಿರುವ ಮಾನಸಿಕ ತುಮುಲಗಳಿಗೆ ಯೋಗದ ಮೂಲಕ ಮನಸ್ಸನ್ನು ನಿರ್ಮಲಗೊಳಿಸ ಬೇಕಾಗಿದೆ.