Sunday, 8th September 2024

ಅತಂತ್ರತೆಯಲ್ಲಿ ಬಾಂಗ್ಲಾ: ಯೂನಸ್ ಆಶಾಕಿರಣ

ಅಭಿಮತ

ಪ್ರೊ.ಆರ್‌.ಜಿ.ಹೆಗಡೆ

ಸರ್ವ ಸ್ವತಂತ್ರ ದೇಶವೊಂದು ಇಷ್ಟು ಬೇಗನೆ ಹೀಗೆ ಅತಂತ್ರವಾಗಬಹುದು ಎಂಬುದನ್ನು ಯಾರಾದರೂ ಊಹಿಸಲು ಸಾಧ್ಯವೇ? ಅಂತಹ ಘಟನೆಗಳು ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದು ಹೋಗಿವೆ. ಅಲ್ಲಿ ಇತ್ತೀಚೆ ನಿರ್ಮಾಣವಾದ ಅರಾಜಕತೆ ಮತ್ತು ದಂಗೆಯ ಘಟನೆಗಳು ಬೆಚ್ಚಿ ಬೀಳಿಸುವಂತಿವೆ. ಕಳೆದ ಜನವರಿಯಲ್ಲಷ್ಟೇ ಆಯ್ಕೆಯಾಗಿ ಆಡಳಿತದಲ್ಲಿದ್ದ ಸರಕಾರವು ಬುಡ ಮೇಲಾಗಿ ಹೋಗಿದೆ. ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಆಯ್ಕೆಯಾದ ಪ್ರಧಾನಮಂತ್ರಿ ಪದತ್ಯಾಗ ಮಾಡಿ ಅನಿರೀಕ್ಷಿತವಾಗಿ ದೇಶವನ್ನೇ ತೊರೆದು ಹೋಗಿದ್ದಾರೆ.

ಪ್ರಧಾನಮಂತ್ರಿ ದೇಶಬಿಟ್ಟು ಹೋದಂತೆ ಅವರ ನಿವಾಸವನ್ನು ಸುತ್ತುವರಿದ ಚಳವಳಿಗಾರರು ಪ್ರಧಾನ ಮಂತ್ರಿಯ ಅಧಿಕೃತ ನಿವಾಸದೊಳಗೆ ನುಗ್ಗಿ ದೊಂಬರಾಟ ನಡೆಸಿ ಕೈಗೆ ಸಿಕ್ಕಿದ್ದನ್ನೆಲ್ಲ ದೋಚಿ ಹೋಗಿದ್ದಾರೆ. ಎಡೆ ಲೂಟಿ, ಕೊಲೆ, ದೊಂಬಿ, ವಿಧ್ವಂಸಕ ಕೃತ್ಯ ನಡೆದಿವೆ. ಕಾನೂನು ಸುವ್ಯವಸ್ಥೆ ಕಾಪಾಡುವ ವ್ಯವಸ್ಥೆಯೇ ಕುಸಿದುಬಿದ್ದು ಪೊಲೀಸರೇ ಠಾಣೆ ಬಿಟ್ಟು ಓಡಿಹೋಗಿದ್ದಾರೆ. ಹೀಗಾಗಿ ಅರಾಜಕತೆಯು ವಿಕೋ ಪಕ ತಲುಪಿ ಹಿಂಸಾಚಾರ ಮಿತಿ ಮೀರಿ ಹೋಯಿತು. ಕಳೆದ ಕೆಲವೇ ದಿನಗಳಲ್ಲಿ ಐನೂರಕ್ಕೂ ಹೆಚ್ಚು ಜನರ ಕೊಲೆಯಾಗಿದೆ. ಮನೆ ಬಿಟ್ಟು ಹೊರಟವರು ನಿರಾಶ್ರಿತರ ರೂಪಿನಲ್ಲಿ ಭಾರತದ ಗಡಿಯಲ್ಲಿ ಬೀಡು ಬಿಟ್ಟು ಭಾರತ ಪ್ರವೇಶಕ್ಕೆ ಅನುಮತಿ ಕೋರಿದ್ದಾರೆ.

ಆಡಳಿತದಲ್ಲಿದ್ದ ಅವಾಮಿ ಲೀಗಿನ ಅನೇಕ ಮುಖಂಡರ ಶವ ಪತ್ತೆಯಾಗಿವೆ. ಆ ಪೈಕಿ ಒಬ್ಬರ ದೇಹವನ್ನು ಸೇತುವೆಯೊಂದಕ್ಕೆ ನೇತು ಹಾಕಲಾಗಿದೆ. ವಿದ್ವಂಸಕ ಕೃತ್ಯಕ್ಕೆ ಹೆದರಿ ಭಾರಿ ಪ್ರಮಾಣದಲ್ಲಿ ಜನರು ವಲಸೆ ಹೊರಟಿದ್ದಾರೆ. ಲೂಟಿಯ ಕಾರಣಗಳಿಂದಾಗಿ ಬ್ಯಾಂಕು, ಅಂಗಡಿಗಳು, ಉದ್ಯೋಗ ಸಂಸ್ಥೆಗಳು ಮುಚ್ಚಲ್ಪಟ್ಟವು. ಲೂಟಿಕಾರರ, ಹಿಂಸಾಕೋರರ ವಶದಲ್ಲಿ ಸಾಮಾಜಿಕ ವ್ಯವಸ್ಥೆಯು ಸಿಲುಕಿ ದಾಗ ಏನೆಲ್ಲ ಅನಾಚಾರ ನಡೆಯಬವುದೋ ಅವೆಲ್ಲವೂ ಅಲ್ಲಿ ನಡೆದು ಹೋಗಿವೆ. ಇಷ್ಟೆಲ್ಲ ದುರ್ಘಟನೆಗಳು ಅಷ್ಟು ಶೀಘ್ರ ದಲ್ಲಿ ನಡೆದುಹೋದಾಗ ಅಂತಾರಾಷ್ಟ್ರೀಯ ಸಮುದಾಯವು ಮೂಕ ಪ್ರೇಕ್ಷಕನಾಗಿರಬೇಕಾಗಿ ನೋಡುವ ಸ್ಥಿತಿ ಬಂತು. ಇಂತಹುದೇ ಅರಾಜಕ ಸ್ಥಿತಿ ಎರಡು ವರ್ಷಗಳ ಹಿಂದೆ ಶ್ರೀಲಂಕಾದಲ್ಲಿ ನಡೆದಿತ್ತು. ಅಲ್ಲಿಯೂ ಅಧ್ಯಕ್ಷರು ದೇಶ ಬಿಟ್ಟು ಪಲಾಯನವಾಗಿದ್ದರು. ದಂಗೆಕೋರರರು ಅಧ್ಯಕ್ಷನಿವಾಸದಲ್ಲಿ ನುಗ್ಗಿ ವಿಪರೀತ ದಾಂಧಲೆ ನಡೆಸಿದ್ದರು.

ಪ್ರತಿಭಟನೆಯು ಹಿಂಸಾ ರೂಪು ತಳೆದಿದ್ದರೂ ಬಾಂಗ್ಲಾದಷ್ಟು ಉದ್ರೇಕ ಸ್ಥಿತಿ ತಲುಪಿರಲಿಲ್ಲ. ಶ್ರೀಲಂಕಾದ ದಂಗೆಗೆ ದೇಶ ಆರ್ಥಿಕವಾಗಿ ದಿವಾಳಿಯಾದದ್ದು ಕಾರಣವಾಗಿದ್ದರೆ ಬಾಂಗ್ಲಾದ ಅತಂತ್ರತೆಗೆ ವಿದ್ಯಾರ್ಥಿಗಳು ವಿರೋಽಸಿದ ಮೀಸಲಾತಿ ಚಳುವಳಿಯು ಕಾರಣವಾಗಿದೆ. ೧೯೭೧ರಲ್ಲಿ ಬಾಂಗ್ಲಾ ಸ್ವತಂತ್ರ ದೇಶವಾದಾಗ ಸ್ವಾತಂತ್ರ ಹೋರಾಟದಲ್ಲಿ ಭಾಗಿಯಾದವರ ಕುಟುಂಬ ಮತ್ತು ಸಂಬಂಽಗಳಿಗೆ ಸರಕಾರಿ ನೌಕರಿಗಳಲ್ಲಿ ೩೦ ಪ್ರತಿಶತ (ಒಟ್ಟೂ ೫೬ ಪ್ರತಿಶತ ಮೀಸಲಾತಿಯಲ್ಲಿ)ಘೋಷಿಸಲ್ಪಟ್ಟಿದ್ದು ಮೀಸಲಾತಿಯು ಸುಮಾರು ೪೧ ವರ್ಷ ನಡೆದು ಬಂದಿತ್ತು. ಎಷ್ಟೋ ವರ್ಷಗಳ ನಂತರವೂ ಸ್ವತಂತ್ರ ಹೋರಾಟದ ಹೆಸರಿನಲ್ಲಿ ಇನ್ನೂ ಯಾರೋ ಲಾಭ ಗಿಟ್ಟಿಸಿ ನಡೆದಿದ್ದರು. ಈ ವಿಚಾರವು ಅತೃಪ್ತಿಗೆ ಕಾರಣವಾಗಿದ್ದರೂ ಸಹನೆಯ ಕಟ್ಟೆಯೊಡೆದು ಉಗ್ರರೂಪ ತಾಳಿದ್ದು ಇತ್ತೀಚೆಗೆ. ಈ ನಡುವೆ ಅಲ್ಲಿನ ಸುಪ್ರೀಂ ನ್ಯಾಯಾಲಯವು ಮೀಸಲಾತಿಯನ್ನು ರದ್ದುಗೊಳಿಸಿ ಕೇವಲ ಐದು ಪ್ರತಿಶತಕ್ಕೆ ಇಳಿಸಿದ್ದರೂ ನಡುವೆ ನಡೆದ ಆಂದೋಲನದಲ್ಲಿ ಅನೇಕರು ಸರಕಾರದ ಕ್ರಮದಿಂದ ಪ್ರಾಣ ಕಳೆದುಕೊಳ್ಳುವಂತಾಗಿದ್ದು ಆಂದೋಲನವು ಶೇಖ್ ಹಸೀನಾ ಸರಕಾರದ ವಿರುದ್ಧ ತೀವ್ರ ರೂಪಿನಲ್ಲಿ ಭುಗಿಲೇಳುವಂತಾಯಿತು.

ಚಳವಳಿ ಹತ್ತಿಕ್ಕಲು ಮತ್ತೆ ಹಸೀನಾ ಸರಕಾರವು ಸುರಕ್ಷಾ ಪಡೆಗಳನ್ನು ಬಳಸಿದ ಕಾರಣವಾಗಿ ಆಗ ೪ರಂದು ೯೯ ಆಂದೋಲನಕಾರರು ಅಸು ನೀಗಿದ್ದು ಪರಿಸ್ಥಿತಿ ಬೆಂಕಿಯ ಕೆಂಡವಾಗಿ ಪರಿಣಮಿಸಿತು. ಬಾಂಗ್ಲಾದೇಶ ಈ ಸ್ಥಿತಿ ತಲುಪಿದ್ದು ನಿಜಕ್ಕೂ ಶೋಚ ನೀಯ. ನಮ್ಮ ದೇಶಕ್ಕಂತೂ ಅನಪೇಕ್ಷಿತ. ಭಾರತವು ಬಾಂಗ್ಲಾಕ್ಕೆ ಪಿತೃ ಸಮಾನ. ಭಾರತವು ಬಾಂಗ್ಲಾದ ಮುಕ್ತಿಯ ದಿಶೆಯಲ್ಲಿ ಅಂದು ಅಲ್ಲಿನ ಮುಕ್ತಿ ಬಹಿನಿಗೆ ಬೆಂಬಲ ನೀಡಿ ಹೋರಾಡದಿದ್ದರೆ ಇನ್ನೆಷ್ಟು ವರ್ಷಗಳ ಆಂದೋಲನ, ಹೋರಾಟ, ರಕ್ತಪಾತದಲ್ಲಿ ಬಾಂಗ್ಲಾ ಜನತೆ  ತೊಳಲಾಡಬೇಕಿತ್ತೋ. ಭಾರತವು ಹೋರಾಟದಲ್ಲಿ ಪ್ರವೇಶಿಸುವ ಮೊದಲೇ ಸುಮಾರು ಇಪ್ಪತ್ತು ವರ್ಷಗಳ ದೀರ್ಘ ಕಾಲದ ದಂಗೆ, ಆಂತರಿಕ ಯುದ್ಧ, ಹೋರಾಟದಲ್ಲಿ ಬಾಂಗ್ಲಾ ತೊಡಗಿ ಆಗಿತ್ತು. ಅದೆಷ್ಟೋ ಲಕ್ಷ ಬಂಗಾಳಿ ಪ್ರಜೆಗಳು ಅಲ್ಲಿನ ಸೇನೆಯ ಹತ್ಯೆಗೆ ಒಳಗಾಗಿದ್ದರು. ಅಸಂಖ್ಯಾತ ಮಹಿಳೆಯರು ಅತ್ಯಾಚಾರಕ್ಕೆ ತುತ್ತಾಗಿದ್ದರು.

ಪೂರ್ವ ಪಾಕಿಸ್ತಾನವೆಂಬ ಹೆಸರಲ್ಲಿ ಪಾಕಿಸ್ತಾನದ ತೆಕ್ಕೆಯಲ್ಲಿ ತೊಳಲಾಡಿದ್ದ ದೇಶವು ಮುಕ್ತಿ ಪಡೆದು ಬಾಂಗ್ಲಾ ಉದಯಿಸಿದ್ದು ಒಂದು ಅವಿರತ ಹೋರಾಟದ ರೋಚಕ ಕಥೆ.
ಬಾಂಗ್ಲಾಕ್ಕೆ ಸ್ವಾತಂತ್ರ್ಯ ಸಿಕ್ಕ ದಿನಗಳು ನಮಗೂ ಅಷ್ಟೇ ರೋಮಾಂಚಕವಾಗಿದ್ದವು! ಭಾರತ ಸರಕಾರವು ನೆರೆಯ ದೇಶವೊಂದನ್ನು ಸ್ವತಂತ್ರಗೊಳಿಸಲು ಮುಂದಾದ ದಿಟ್ಟ ದಿನಗಳು.
ಮನೆ ಮನೆಗಳಲ್ಲಿ ರೇಡಿಯೋ ವಾರ್ತೆಗಳನ್ನು ಕೇಳಲು ಸುತ್ತ ಮುತ್ತಲಿನ ಜನ ಸೇರಿದ್ದರು. ಮಾಣಿಕ್ ಷಾ ನೇತೃತ್ವದ ಭಾರತ ಸೇನೆಯ ಸಾಹಸ ತಿಳಿದು ಪುಳಕಿತರಾಗಿದ್ದರು. ಮೈಲು ಗಟ್ಟಲೆ
ದೂರ ನಡೆದು ದಿನಪತ್ರಿಕೆ ಓದಿದ್ದರು. ಎರಡನೇ ವಿಶ್ವಯುದ್ಧದ ನಂತರ ಅತಿ ಹೆಚ್ಚು ಸೈನಿಕರು ಶಸ ತೊರೆದು ಶರಣಾಗತರಾಗಿದ್ದು ಬಂಗಾಲ ವಿಮೋಚನೆಯ ಸಂದರ್ಭದಲ್ಲಿ
ಭಾರತೀಯ ಸೇನೆಗೆ. ಅಂತೂ ಪೂರ್ವ ಪಾಕಿಸ್ತಾನವು ಮುಕ್ತಿ ಪಡೆದು ಬಾಂಗ್ಲಾ ದೇಶವಾದಾಗ ನಮ್ಮಲ್ಲಿ ಹಬ್ಬದ ವಾತಾವರಣವಿತ್ತೆಂಬ ಸಂಗತಿ ಸದಾ ನನಪಿನಲ್ಲಿ ಉಳಿದಿದೆ. ಮುಕ್ತಿ ಸಿಕ್ಕ ೫೩ ವರ್ಷಗಳ ಮತ್ತೆ ಬಾಂಗ್ಲಾದೇಶ ಈ ಪ್ರಮಾಣದ ಅರಾಜಕತೆಗೆ ಈಡಾಗಿದ್ದು ದುರದೃಷ್ಟಕರ.

ನಿಜವಾದ ಸಂಗತಿಯೆಂದರೆ ಪ್ರತ್ಯೇಕ ರಾಷ್ಟ್ರವಾದ ಮೇಲೂ ಬಾಂಗ್ಲಾದಲ್ಲಿ ಆಗಾಗ ಬೇರೆ ಬೇರೆ ವಿಚಾರಗಳಿಂದ ಉನ್ಮತ್ತ ವಾದ ಚಳುವಳಿಗಳು, ದಂಗೆ ಪ್ರತಿರೋಧಗಳು ನೆಡೆಯುತ್ತಲೇ
ಇವೆ. ನಾಲ್ಕು ಸಾರಿ ಸೇನಾಕ್ರಾಂತಿಯಾಗಿದೆ. ಇಬ್ಬರು ರಾಷ್ಟ್ರಾಧ್ಯಕ್ಷರು ಕೊಲೆಗೀಡಾಗಿದ್ದರೆ. ಆಗಾಗ ಅಲ್ಲಿ ಆಂತರಿಕ ಘರ್ಷಣೆಗಳು ಒಂದಿಂದು ಕಾರಣಗಳಿಂದ ನಡೆದೇ ಇದೆ. ಅಲ್ಲಿನ
ಕ್ಲಿಷ್ಟ ಸಾಮಾಜಿಕ ಸ್ವರೂಪವೇ ಅದಕ್ಕೆ ಮುಖ್ಯ ಕಾರಣವೆನ್ನಬೇಕು. ಇಸ್ಲಾಮಿಕ್ ಮೂಲಭೂತವಾದಿಗಳು, ಮುಸ್ಲಿಮರಲ್ಲಿಯೇ ಬೇರೆ ಬೇರೆ ತಂಡಗಳು, ಭಾರತ ಮೂಲದ ಮುಸ್ಲಿಮರು, ಬಂಗಾಲಿಗರು ಮತ್ತು ಬಿಹಾರ್ ಮತ್ತಿತರ ಉತ್ತರ ಭಾರತದ ಹತ್ತಿರದ ವಲಯದಿಂದ ಬಂದು ವಾಸವಾದವರು ಹೀಗೆ ಪ್ರವೃತ್ತಿಯಲ್ಲಿ ಅನೇಕ ರೀತಿಯಿಂದ ವಿರೋಧವಾದವಾದ ಗುಣಗಳಿಂದ ತುಂಬಿರುವ ಸಮಾಜವು ಸಣ್ಣ ಪುಟ್ಟ ತಪ್ಪುಗಳನ್ನೂ ದೊಡ್ಡದಾಗಿಸಿ ರೊಚ್ಚಿಗೇಳುವ ಮನಸ್ಥಿತಿಯಿಂದ ಸ್ವಾತಂತ್ರಾನಂತರದಲ್ಲಿ ಹೊರಬರಲೇ ಇಲ್ಲ.

ಹಾಗೆಂದ ಮಾತ್ರಕ್ಕೆ ಬಾಂಗ್ಲಾ ಸಾಽಸಿದ ಅಭಿವೃದ್ಧಿಯನ್ನು ಅಲ್ಲಗಳೆಯುವಂತಿಲ್ಲ. ಶ್ರೀಲಂಕಾದಲ್ಲಿ ಅರಾಜಕತೆಯಾಗಿದ್ದು ಆರ್ಥಿಕ ದಿವಾಳಿತನದಿಂದ. ಸಾಮಾನ್ಯವಾಗಿ ಸಮಾಜದಲ್ಲಿ
ಇಷ್ಟೆಲ್ಲ ಮಟ್ಟಿಗಿನ ಪರಿಸ್ಥಿತಿ ಉದ್ಭವವಾಗುವುದು ಆರ್ಥಿಕ ಸಮಸ್ಯೆಯ ಮೂಲದಿಂದ. ಬಾಂಗ್ಲಾದಲ್ಲಿನ ಅರಾಜಕತೆ ಆರ್ಥಿಕ ಸಮಸ್ಯೆಯ ಮೂಲದ್ದಲ್ಲ. ಸ್ವತಂತ್ರವಾದ ಸಂದರ್ಭದಲ್ಲಿ ಬಾಂಗ್ಲಾ ಕಡು ಬಡ ದೇಶಗಲ್ಲಿ ಒಂದಾಗಿದ್ದು ನಿಜವಾದರೂ ಶೇಖ್ ಹಸೀನಾ ದೀರ್ಘ ಆಡಳಿತಾವಧಿಯಲ್ಲಿ ಬಾಂಗ್ಲಾದ ಆರ್ಥಿಕತೆ ಸಾಕಷ್ಟು ಸುಧಾರಿಸುತ್ತ ಬಂದಿದೆ. ಶೇಕಡಾ ೬ರಷ್ಟು ಜಿಡಿಪಿ ಪ್ರಗತಿ ಸಾಽಸಿದೆ. ಬಾಂಗ್ಲಾದೇಶಕ್ಕೆ ಅಂತಾರಾಷ್ಟ್ರೀಯ ನಿಽ ಸಹಾಯವೂ ದೊಡ್ಡ ಪ್ರಮಾಣದಲ್ಲಿ ಸಿಗುತ್ತಿದೆ.ಪದತ್ಯಾಗ ಮಾಡಿ ಇತ್ತೀಚೆ ಭಾರತಕ್ಕೆ ಬಂದು ಉಳಿದಿರುವ ಶೇಕ್ ಹಸೀನಾ ಅವರ ಆಡಳಿತವು ಬಾಂಗ್ಲಾದ ಉನ್ನತಿಗೆ ಕಾರಣವಾಗಿದ್ದರಲ್ಲಿ ಎರಡು ಮಾತಿಲ್ಲ.

ಬಾಂಗ್ಲಾದೇಶದ ಒಳ ಜಗಳದ ಇತಿಹಾಸದ ನಡುವೆ ಅಲ್ಲಿಗೆ ಬರುವ ಪ್ರವಾಸಿಗರಿಗೆ, ವ್ಯಾಪಾರ ವ್ಯವಹಾರಗಳಲ್ಲಿ ತೊಡಗಿ ಬಂದವರಿಗೆ ಅಂತಹ ಭಯದ ವಾತಾವರಣವಿರಲಿಲ್ಲವೆಂದೇ
ಹೇಳಬೇಕು. ನಾನೂ ಹಲವು ಸಾರಿ ಕೆಲಸದ ನಿಮಿತ್ತ ಢಾಕಾಗೆ ಹೋಗಿದ್ದಿದೆ, ವಾರಗಟ್ಟಲೆ ಉಳಿದಿದ್ದಿದೆ. ಬೀದಿಯ ಬದಿಗಿರುವ ಸಾಮಾನ್ಯ ಖಾನಾವಳಿಗಳಲ್ಲಿ ಊಟ ಮಾಡಿದ್ದಿದೆ. ವಿಶೇಷ ಸವಲತ್ತಿನ ಕಾರಣಗಳಿಂದ ಅಲ್ಲಿ ಅನೇಕ ಬಹುರಾಷ್ಟ್ರೀಯ ಔಷಧಿ ಸಂಸ್ಥೆಗಳು ಮತ್ತಿತರ ವ್ಯಾಪಾರೀ ಸಂಘಟನೆಗಳು ನೆಲೆಯೂರಿ ಕಾರ್ಯಭಾರ ಮಾಡುತ್ತಿವೆ. ಭಾರತದಿಂದ ಸಾಕಷ್ಟು ಸಂಖ್ಯೆಯಲ್ಲಿ ಯಾತ್ರಿಕರು ಅಲ್ಲಿ ಬರುತ್ತಾರೆ. ದೊಡ್ಡ ಪ್ರಮಾಣದಲ್ಲಿ ವ್ಯಾಪಾರೀ ಸಂಬಂಧವಿದೆ. ನವರಾತ್ರಿಯ ಸಮಯದಲ್ಲಿ ಒಮ್ಮೆನಾನು ಅಲ್ಲಿzಗ ಪ್ರಸಿದ್ಧ ಢಾಕೇಶ್ವರಿ ಮಂದಿರ ಮತ್ತು ಕಾಳಿಕಾದೇವಿ ಮಂದಿರಕ್ಕೆ ಹೋಗಿz. ಅಲ್ಲಿ ಅನೇಕ ಹಿಂದೂ ಮಂದಿರಗಳು, ಸಂಸ್ಥೆಗಳು ಶಾಂತಿಪೂರ್ವಕವಾಗಿ ನಡೆದು ಬಂದಿವೆ.

ಢಾಕಾ ಹೆಸರು ಬಂದಿದ್ದು ಢಾಕೇಶ್ವರಿ ಹೆಸರಿನಿಂದಲೇ ಎನ್ನಲಾಗಿದೆ! ಧಾರ್ಮಿಕ ಒಡನಾಟದ ವಿಚಾರದಲ್ಲಿ ಪರಸ್ಪರ ಗೌರವ, ಪ್ರೀತ್ಯಾದರಗಳಿಂದ ಬದುಕಿರುವ ಸಮಾಜದಲ್ಲಿ ಇತ್ತೀಚೆ
ನಡೆದ ಕೋಮು ಘಟನೆಗಳು ವಿಷಾದನೀಯ. ಸ್ವಾತಂತ್ರ್ಯಾನಂತರ ಬಾಂಗ್ಲಾದಲ್ಲಿ ಆಗಾಗ ನಡೆದು ಬಂದ ದಂಗೆಗಳಿಗೆ ಧಾರ್ಮಿಕ ಕಾರಣಗಳಿಗಿಂತ ಉಳಿದ ಸ್ಥಳೀಯ ಸಂಗತಿಗಳೇ ಕಾರಣವಾಗಿದ್ದ ಪ್ರಸಂಗಗಳೇ ಹೆಚ್ಚು ಅಂದರೆ ತಪ್ಪಲ್ಲ. ಮುಖ್ಯವಾಗಿ ಎಲ್ಲ ಸಂಗತಿಗಳನ್ನೂ ರಾಜಕೀಯವಾಗಿ ಬಳಸಿ ಉನ್ಮಾದಕ್ಕೆ ಒಯ್ಯಲು ಹವಣಿಸುತ್ತಿದ್ದ ವಿರೋಧಿ ಪಕ್ಷ ಮತ್ತು ವಿರೋಧಿ ಗುಂಪು. ಅಂತಹ ವಿರೋಧಿ ಶಕ್ತಿಯನ್ನು ಮೆಟ್ಟಿ ನಿಂತು ಸಾಕಷ್ಟು ಯಶಸ್ವಿಯಾಗಿ ಪ್ರಗತಿಪರ ಆಡಳಿತ ನೀಡಿದ್ದ ಶೇಖ್ ಹಸೀನಾ ಪಕ್ಷ ಇನ್ನೊಂದೆಡೆ.

ಶೇಖ್ ಹಸೀನಾರನ್ನು ಪದಚ್ಯುತಿಗೊಳಿಸಿ ಅಸ್ಥಿರತೆಯನ್ನು ನಿರ್ಮಿಸುವತ್ತ ವಿರೋಧಿ ಶಕ್ತಿಗಳಿಗೆ ಕುಮ್ಮಕ್ಕು ನೀಡಿರುವ ಕುರಿತು ಹೇಳಲಾದ ಚೀನಾ ಮತ್ತು ಪಾಕಿಸ್ತಾನದ ಕೈವಾಡ. ಕಳೆದ ಕೆಲ ಕಾಲದಿಂದ ಅಮೆರಿಕದ ಜತೆಯೂ ಶೇಖ್ ಹಸೀನಾ ಬಾಂಧವ್ಯ ಅಷ್ಟೊಂದು ಸರಿಯಾಗಿರಲಿಲ್ಲ ಎನ್ನುವ ಮಾತೂ ಇದೆ. ಈ ಕುರಿತು ಇಬ್ಬಗೆಯ ಅಸಮಾಧಾನ ಆಗಾಗ ಪ್ರಕಟವಾಗಿದ್ದಿದೆ.
ಭಾರೀ ಗೊಂದಲಕ್ಕೀಡಾಗಿರುವ ಬಾಂಗ್ಲಾದಲ್ಲಿ ಇದೀಗ ಮಧ್ಯಂತರ ಸರಕಾರದ ಮುಖ್ಯಸ್ಥರಾಗಿ ನೋಬಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಪ್ರೊ.ಮೊಹಮ್ಮದ್ ಯೂನುಸ್ ಸರ್ವ ಸಮ್ಮತಿಯಿಂದ ಪ್ರಮಾಣವಚ ಸ್ವೀಕರಿಸಿರುವುದು ಸ್ವಾಗತಾರ್ಹ.

ನೊಬೆಲ್ ಶಾಂತಿ ವಿಜೇತ ಯೂನುಸ್ ಅವರ ಮಾರ್ಗದರ್ಶನದಲ್ಲಿ ದೇಶದಲ್ಲಿ ಶಾಂತಿ, ಸದ್ಭಾವ ಸದಾ ನೆಲೆಸುವಂತಾಗಿ ಪ್ರಗತಿ ಪಥದತ್ತ ದೇಶ ಸಾಗಲಿ ಎಂಬುದು ಎಲ್ಲರ ಹಾರೈಕೆ. ಭಾರತದ ಹಿತಾಸಕ್ತಿಯಿಂದ ಬಾಂಗ್ಲಾದಲ್ಲಿ ಶಾಂತಿಯುತ, ಪ್ರಗತಿಪರ ಸ್ನೇಹಪರ ಪ್ರಜಾಪ್ರಭುತ್ವ ಮತ್ತೆ ಸ್ಥಾಪನೆಯಾಗುವುದು ಅತ್ಯಂತ ಮಹತ್ವದ ವಿಚಾರ.

(ಲೇಖಕರು: ಹವ್ಯಾಸಿ ಬರಹಗಾರರು)

Leave a Reply

Your email address will not be published. Required fields are marked *

error: Content is protected !!