ಕಳಕಳಿ
ಹಣಮಂತ ಎಂ.ಕೆ
ಯುವಜನರನ್ನು ಭವ್ಯಭಾರತದ ನಿರ್ಮಾತೃಗಳು ಎಂದು ಕರೆಯಲಾಗುತ್ತದೆ. ಅಂಥ ಯುವಪೀಳಿಗೆಯೇ ಮದ್ಯಪಾನ, ಧೂಮಪಾನ, ಮಾದಕವಸ್ತು ಸೇವನೆ ಸೇರಿದಂತೆ ನಾನಾ ದುಶ್ಚಟಗಳಿಗೆ ಸಿಲುಕಿ ಹಾದಿ ತಪ್ಪುತ್ತಿರುವುದು ನೋಡಿದರೆ ದೇಶದ ಭವಿಷ್ಯದ ಕುರಿತಾದ ಆತಂಕಕಾರಿ ದೃಶ್ಯವೇ ಕಣ್ಣ ಮುಂದೆ ನಿಲ್ಲುತ್ತದೆ. ಬದುಕಿನಲ್ಲಿ ಎರಗುವ ಸಮಸ್ಯೆಗಳಿಂದಲೋ ಸಹವಾಸ ದೋಷದಿಂದಲೋ ಹೀಗೆ ದುಶ್ಚಟಗಳ ದಾಸರಾಗುವ ಯುವಜನರನ್ನು ಅವುಗಳ
ಬಿಗಿಮುಷ್ಟಿಯಿಂದ ಬಿಡಿಸಿ ಸಕಾರಾತ್ಮಕವಾಗಿ ಪರಿವರ್ತಿಸ ಬೇಕಾದ ಕಾರ್ಯ ಅತ್ಯಗತ್ಯವಾಗಿದೆ.
ವರದಿಯೊಂದರ ಪ್ರಕಾರ, ಮಾದಕ ದ್ರವ್ಯಗಳನ್ನು ಸೇವಿಸಿ ದೇಹ ಸ್ವಾಸ್ಥ್ಯ ಮತ್ತು ಚಿತ್ತಸ್ವಾಸ್ಥ್ಯಗಳನ್ನು ಹಾಳುಮಾಡಿಕೊಳ್ಳುತ್ತಿರುವವರ ಸಂಖ್ಯೆಯು ಕರ್ನಾಟಕದಲ್ಲಿ ದಿನೇದಿನೆ ಗಣನೀಯವಾಗಿ ಹೆಚ್ಚುತ್ತಿದೆ. ‘ಯುವಕರು, ವಿಶೇಷವಾಗಿ ವಿದ್ಯಾರ್ಥಿಗಳು ಡ್ರಗ್ಸ್ ವ್ಯಸನಿಗಳಾಗದಂತೆ ತಡೆಯುವುದು ನಮ್ಮ ಗುರಿಯಾಗಿದ್ದು, ಹೆಚ್ಚುತ್ತಿರುವ ಪ್ರಕರಣಗಳನ್ನು ನಿಭಾಯಿಸಲು ನಾವು ಸಿದ್ಧರಿದ್ದೇವೆ. ಡ್ರಗ್ ಮಾಫಿಯಾದ ಮೂಲೋತ್ಪಾಟನೆ ನಮ್ಮ ಗುರಿ’ ಎಂದಿದ್ದಾರೆ ಬೆಂಗಳೂರಿನ ಪೊಲೀಸ್ ಅಧಿಕಾರಿಯೊಬ್ಬರು.
ಯುವ ಸಮುದಾಯವು ಮಾದಕ ವಸ್ತುಗಳ ಮೊರೆಹೋಗುತ್ತಿರು ವುದೇಕೆ? ಎಂದು ವಿಶ್ಲೇಷಿಸಿದಾಗ ಸಮಸ್ಯೆಯ ಹಲವು ಮಗ್ಗುಲುಗಳು ತೆರೆದುಕೊಳ್ಳುತ್ತವೆ. ಪ್ರಾಯಶಃ ಇದರ ಬೀಜವು ಬಾಲ್ಯದಲ್ಲೇ ಮೊಳೆಯುತ್ತದೆ ಎನಿಸುತ್ತದೆ. ಕಾರಣ, ತಂದೆ-ತಾಯಿ ಇಬ್ಬರೂ ಉದ್ಯೋಗಸ್ಥರಾಗಿರುವ ಸಂದರ್ಭದಲ್ಲಿ ತಮ್ಮ ಮಗುವಿನ ವಿವಿಧ ಅಗತ್ಯಗಳ ನೆರವೇರಿಕೆ ಹಾಗೂ ಭಾವನಾತ್ಮಕ ಸುರಕ್ಷತೆಯ ಕಡೆಗೆ ಅವಶ್ಯವಾಗಿ ನೀಡಬೇಕಾದ ಗಮನವನ್ನು ಅವರಿಗೆ ನೀಡಲಾಗು ತ್ತಿಲ್ಲ.
ಇದರಿಂದ ಸಹಜವಾಗಿಯೇ ಮಕ್ಕಳು ಅಡ್ಡದಾರಿ ಹಿಡಿಯುವಂತಾಗಿದೆ. ಅವರ ದೈಹಿಕ ಚಟುವಟಿಕೆಯೂ ಬೇಕಿರುವಷ್ಟು ಇರುವುದಿಲ್ಲ; ದೇಹದ ಫಿಟ್ ನೆಸ್ ಮೂಲೆಗುಂಪಾದಾಗ, ಜೀವನೋತ್ಸಾಹ ಮತ್ತು ಲವಲವಿಕೆಯನ್ನೂ ಅವರು ಆನಂದಿಸಲಾಗುವುದಿಲ್ಲ. ಆಗ ನಶೆಯೇರಿಸಿಕೊಂಡು ಆನಂದಿ ಸುವುದು ಸುಲಭಮಾರ್ಗ ಆಗಿಬಿಡುತ್ತದೆ. ಮಾದಕ ವಸ್ತುಗಳು ನಶೆಯನ್ನಷ್ಟೇ ಏರಿಸದೆ ಕೆಲವು ಗಂಟೆಗಳ ಕಾಲ ಹುರುಪನ್ನೂ ಅಥವಾ ಹುರುಪಿನ ಭ್ರಮೆಯನ್ನೂ ನೀಡುವುದರಿಂದ ಯುವಪೀಳಿಗೆಯು ದೊಡ್ಡಮಟ್ಟದಲ್ಲಿ ಅವುಗಳ ಕಡೆಗೆ ತಿರುಗಿಕೊಳ್ಳುತ್ತಿದೆ. ಈ ಪರಿಸ್ಥಿತಿಯನ್ನು ನಿಯಂತ್ರಿಸುವುದು ಹೇಗೆ ಎಂಬ ಪ್ರಶ್ನೆ ಇಲ್ಲಿ ಕಾಡುವುದು ಸಹಜ.
ತಂದೆ-ತಾಯಿಯರು ಶ್ರೀಮಂತರಾಗಿದ್ದರೂ, ಒಂದು ವಯಸ್ಸಿಗೆ ಮುಟ್ಟುವವರೆಗೂ ಮಕ್ಕಳಿಗೆ ಆ ಸಂಪತ್ತಿನ ಅರಿವಿರ ಬಾರದು. ಇದನ್ನು ಮನಗಂಡೇ ಹಿಂದೆಲ್ಲಾ ರಾಜ- ಮಹಾರಾಜರು ತಮ್ಮ ಮಕ್ಕಳನ್ನು ಗುರುಕುಲಕ್ಕೆ ಕಳಿಸುತ್ತಿದ್ದರು. ಅಲ್ಲಿ ಇತರ ಸಾಮಾನ್ಯ ಮಕ್ಕಳ ಜತೆಯೇ ಓದುತ್ತಿದ್ದ ರಾಜಪುತ್ರರು, ಕನಿಷ್ಠತಮ ಅಗತ್ಯಗಳ ಜತೆಯಲ್ಲೇ ದಿನದೂಡುತ್ತಿದ್ದರು. ಹೀಗೆ, ಸಂಪತ್ತೆಂಬುದು ಬದುಕಿ ನೊಳಗೆ ಬರುವುದಕ್ಕೆ ಮೊದಲೇ ಶಿಸ್ತು, ತೊಡಗಿಸಿಕೊಳ್ಳುವಿಕೆ, ಪರಿಶ್ರಮ ಇತ್ಯಾದಿಗಳ ಪ್ರಜ್ಞೆಯು ಮಕ್ಕಳಿಗೆ ಬರಬೇಕು. ಇಲ್ಲವಾದರೆ, ಸಂಪತ್ತು ಎಂಬುದು ತಲೆಯ ಮೇಲೆ ಹೊತ್ತುಕೊಳ್ಳಬೇಕಾದ ಹೊರೆಯಾಗುತ್ತದೆ. ಈಗ ಯುವಪೀಳಿಗೆಗೆ ಆಗುತ್ತಿರುವುದೇ ಇದೇ.
ಆದ್ದರಿಂದ, ತಂದೆ-ತಾಯಿಯರು ಮಕ್ಕಳಿಗೆ ಪ್ರೀತಿ ತೋರಿಸಿ ಪಾಲಿಸಿ- ಪೋಷಿಸುವುದರ ಜತೆಜತೆಗೆ ಬದುಕಿನ ಕಹಿವಾಸ್ತವಗಳನ್ನೂ ಅವರಿಗೆ ಮನಗಾಣಿಸ ಬೇಕು. ಮನೆ ಯಲ್ಲಿ ಹಿರಿಯರ ಅಂಕೆ, ಕಟ್ಟುನಿಟ್ಟು ಇರಲೇಬೇಕು. ಇನ್ನು ನಮ್ಮ ಆಳುಗ ವ್ಯವಸ್ಥೆಯೂ ಮಾದಕ ದ್ರವ್ಯಗಳ ಮೂಲೋ ತ್ಪಾಟನೆಗೆ ಕೆಲ ಕಠಿಣ ಕಾನೂನುಗಳ ಜಾರಿ ಮತ್ತು ಪರಿಣಾಮಕಾರಿ ಅನುಷ್ಠಾನಕ್ಕೆ ಮುಂದಾಗಬೇಕು. ಪೊಲೀಸ್ ವ್ಯವಸ್ಥೆಯು ಈ ನಿಟ್ಟಿನಲ್ಲಿ ಸಮರ್ಥವಾಗಿ ಕೈಜೋಡಿಸ ಬೇಕು. ಆಗ ಮಾತ್ರವೇ ಆರೋಗ್ಯಕರ ಮತ್ತು ಸುಸ್ಥಿರ ಸಮಾಜ ನಿರ್ಮಾಣವಾದೀತು, ಯುವಪೀಳಿಗೆಯ ಬಾಳು ಹಸನಾದೀತು.
(ಲೇಖಕರು ಪತ್ರಿಕೋದ್ಯಮ ವಿದ್ಯಾರ್ಥಿ)