ದಿಕ್ಸೂಚಿ
ಚಂದ್ರಶೇಖರತನಯ
‘ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು’ ಎಂಬ ಧ್ಯೇಯವಾಕ್ಯ ಬಹುತೇಕರಿಗೆ ಗೊತ್ತಿರುವಂಥದ್ದೇ. ಅಬೋಧ ಕಂಗಳ ಪುಟ್ಟ ಮಕ್ಕಳಲ್ಲಿ ನಮ್ಮ ದೇಶದ ಸಂಸ್ಕೃತಿ, ಪರಂಪರೆ, ಚರಿತ್ರೆ, ಪುರಾಣೇತಿಹಾಸ, ವಿಜ್ಞಾನ, ಮಾನವೀಯತೆ, ಅನುಕಂಪ, ಪರಾನುಭೂತಿ ಶಕ್ತಿ ಇವೇ ಮೊದಲಾದ ಅಂಶಗಳ ಅರಿವನ್ನು
ತುಂಬಿ ಅವರನ್ನು ‘ಚಲಿಸುವ ಮಾಹಿತಿ ಕಣಜ’ಗಳನ್ನಾಗಿಸಬೇಕು.
ಹೀಗಾದಲ್ಲಿ, ಅವರು ಆಯಾ ಕಾರ್ಯಕ್ಷೇತ್ರದಲ್ಲಿ ಪ್ರಜ್ವಲಿಸುವ ಸಮರ್ಥ ಕಾರ್ಯಪಟುಗಳಾಗಿ ಹೊರಹೊಮ್ಮಿ, ಆತ್ಮೋದ್ಧಾರಕ್ಕೂ, ಸಮಾಜದ ಏಳಿಗೆಗೂ, ತನ್ಮೂಲಕ ದೇಶದ ಸರ್ವಾಂಗೀಣ ಅಭಿವೃದ್ಧಿಗೂ ತಳಹದಿಯಾಗುತ್ತಾರೆ ಎಂಬುದು ಈ ಧ್ಯೇಯವಾಕ್ಯದ ಹಿಂದಿರುವ ಸದಾಶಯ. ಮೇಲೆ ಉಲ್ಲೇಖಿಸಿರುವ ಧ್ಯೇಯವಾಕ್ಯವನ್ನು ಮತ್ತಷ್ಟು ಹಿಗ್ಗಲಿಸಬೇಕಾದ ಅಗತ್ಯವೀಗ ಎದುರಾಗಿದೆ. ಅಂದರೆ, ದೇಶದ ಸರ್ವತೋಮುಖ ಪ್ರಗತಿಯ ಸಂಕಲ್ಪ ವನ್ನು ತಳೆಯುವ ಮಕ್ಕಳು, ತರುವಾಯದ ಕಾಲಘಟ್ಟದಲ್ಲಿ ‘ಯುವ ಜನರು’ ಎನಿಸಿಕೊಂಡಾಗ ಆ ಧ್ಯೇಯವನ್ನೇ ಕೊಂಚ ವಿಸ್ತರಿಸಿ, ದೇಶದಲ್ಲೊಂದು ಸದೃಢ ಹಾಗೂ ಸಮರ್ಥ ಸರಕಾರವನ್ನೂ ಪ್ರತಿಷ್ಠಾಪಿಸುವಂತಾಗುವ ನಿಟ್ಟಿನಲ್ಲಿ ಕಟಿಬದ್ಧರಾಗಬೇಕಾಗುತ್ತದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂಥ ಸಂಕಲ್ಪದ ನೆರವೇರಿಕೆಗೆ ಅನುವು ಮಾಡಿಕೊಡುವುದು ಸಾರ್ವತ್ರಿಕ ಚುನಾವಣೆ ಎಂಬ ಮಹತ್ವದ ಪರ್ವ ಎಂಬು ದರಲ್ಲಿ ಎರಡು ಮಾತಿಲ್ಲ. ಚುನಾವಣೆಗಳಿಗಿರುವ ಇಂಥ ಮಹತ್ವದ ಹಿನ್ನೆಲೆ ಯಲ್ಲಿ, ಕೇಂದ್ರ ಶಿಕ್ಷಣ ಸಚಿವಾಲಯವು ಈ ಪರ್ವದಲ್ಲಿ ಯುವಜನರು ಸಂಪೂರ್ಣವಾಗಿ ಮತ್ತು ಪ್ರಬುದ್ಧ ರೀತಿಯಲ್ಲಿ ತೊಡಗಿಸಿಕೊಳ್ಳಬೇಕಿರುವುದರ ಅಗತ್ಯವನ್ನು ಮನ ಗಂಡು, ದೇಶದ ಉದ್ದಗಲಕ್ಕೂ ಇರುವ ಉನ್ನತ ಶಿಕ್ಷಣ ಸಂಸ್ಥೆ ಗಳಲ್ಲಿ ಕಳೆದ -ಬ್ರವರಿ ೨೮ರಿಂದ ಮಾರ್ಚ್ ೬ರವರೆಗೆ ‘ನನ್ನ ಮೊದಲ ಮತ ದೇಶಕ್ಕಾಗಿ’ ಎಂಬ ಅಭಿಯಾನವನ್ನು ಹಮ್ಮಿಕೊಂಡಿದ್ದಕ್ಕೆ ಜನರು ಸಾಕ್ಷಿಯಾಗಿದ್ದಾರೆ.
ಈ ಅಭಿಯಾನದ ಅಧ್ವರ್ಯುವಾಗಿದ್ದ ಕೇಂದ್ರ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಹಾಗೂ ಉದ್ಯಮಶೀಲತೆ ಖಾತೆಯ ಸಚಿವ ಧರ್ಮೇಂದ್ರ ಪ್ರಧಾನ್ ಅವರು, ‘ರಾಷ್ಟ್ರದ ಯುವಜನರು ತಮ್ಮ ದನಿಯೆತ್ತಬೇಕು’ ಎಂದು ಆಗ್ರಹಿಸಿದ್ದರ ಜತೆಗೆ, ‘ನಮ್ಮ ಯುವಜನರು ಮತ್ತು ಇದೇ ಮೊದಲ ಬಾರಿಗೆ ಮತ ಚಲಾಯಿಸುತ್ತಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು’ ಎಂಬ ಪ್ರಧಾನಿ ಮೋದಿಯವರ ಕರೆಯನ್ನೂ ಉಲ್ಲೇಖಿ ಸಿದ್ದು, ಮತದಾನಕ್ಕಿರುವ ಪಾವಿತ್ರ್ಯಕ್ಕೆ ಮತ್ತು ಮಹತ್ವಕ್ಕೆ ದ್ಯೋತಕವಾಗಿದೆ.
ರಾಜರ ಆಳ್ವಿಕೆ, ಪಾಳೇಗಾರಿಕೆ, ನಿರಂಕುಶಾಧಿಕಾರಿತ್ವ, ಊಳಿಗಮಾನ್ಯ ಪದ್ಧತಿ ಹೀಗೆ ಬಗೆಬಗೆಯ ಆಳುಗ ವ್ಯವಸ್ಥೆಗೆ ಕಾಲಾನುಕಾಲಕ್ಕೆ ಒಡ್ಡಿಕೊಂಡೇ ಬಂದಿರುವ ನಮ್ಮ ದೇಶದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವುದು ಪ್ರಜಾಪ್ರಭುತ್ವ ವ್ಯವಸ್ಥೆ. ಇದು ನಿಜಾರ್ಥದಲ್ಲಿ ‘ಪ್ರಾತಿನಿಧಿಕ’ ಎನಿಸಿಕೊಳ್ಳಬೇಕೆಂದರೆ, ಪ್ರಜಾಪ್ರಭುತ್ವದ ಮಹತ್ವ ಹಾಗೂ ಪ್ರಜಾರಕ್ಷಣೆಯ ಹೊಣೆಗಾರಿಕೆ ಎರಡನ್ನೂ ಅರಿತಿರುವ ಸಮರ್ಥರು ಪ್ರಜಾಪ್ರತಿನಿಧಿಗಳಾಗಿ ಆಯ್ಕೆಯಾಗು ವಂತಾಗಬೇಕು. ಇಂಥ ಘನೋದ್ದೇಶವನ್ನು ಮನವರಿಕೆ ಮಾಡಿಕೊಟ್ಟು ಯುವಶಕ್ತಿಯನ್ನು ಈ ಪ್ರಕ್ರಿಯೆಯಲ್ಲಿ ತೊಡಗುವಂತೆ ಉತ್ತೇಜಿಸಲು ಹಾಗೂ ಮತದಾನ ಕ್ಕಿರುವ ಮೌಲ್ಯವನ್ನು ಒತ್ತಿಹೇಳಲು ದೇಶಾದ್ಯಂತದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ‘ನನ್ನ ಮೊದಲ ಮತ ದೇಶಕ್ಕಾಗಿ’ ಎಂಬ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು ಮತ್ತು ಸಂಬಂಧಿತ ‘ಮತದಾರರ ಜಾಗೃತಿ ಚಟುವಟಿಕೆಗಳನ್ನು’ ನಡೆಸುವಂತೆ ಆಯಾ ಸಂಸ್ಥೆಗಳಿಗೆ ನಿರ್ದೇಶನ ನೀಡಲಾಗಿತ್ತು ಎಂಬುದಿಲ್ಲಿ ಉಲ್ಲೇಖನೀಯ.
‘ವಜ್ರದ ಹರಳು ಚಿನ್ನದ ಸಾಂಗತ್ಯವನ್ನೇ ಅಪೇಕ್ಷಿಸುತ್ತದೆ’ ಎಂಬುದೊಂದು ಮಾತಿದೆ. ಅಂದರೆ ಶ್ರೇಷ್ಠತೆ ಎಂಬುದು ಅಂಥ ಮತ್ತೊಂದು ಮಹತ್ತರ ಮೌಲ್ಯವನ್ನೇ ಅನ್ವೇಷಿಸುತ್ತಿರುತ್ತದೆ. ಈ ಗ್ರಹಿಕೆಯೇ ‘ನನ್ನ ಮೊದಲ ಮತ ದೇಶಕ್ಕಾಗಿ’ ಅಭಿಯಾನದ ಜೀವಾಳ. ಅಂದರೆ, ರಾಷ್ಟ್ರಕ್ಕೆ ಒಳಿತಾಗ
ಬೇಕೆಂದರೆ, ಸ್ವಹಿತಾಸಕ್ತಿಯನ್ನು ಪಕ್ಕಕ್ಕಿಟ್ಟು ರಾಷ್ಟ್ರಹಿತಕ್ಕೆ ಆದ್ಯತೆ ನೀಡುವವರನ್ನು ಚುನಾಯಿಸುವ ಕೈಂಕರ್ಯದಲ್ಲಿ ತೊಡಗಿಸಿ ಕೊಳ್ಳಲು ಯುವಜನರನ್ನು ಉತ್ತೇಜಿಸುವುದು ಈ ಉಪ ಕ್ರಮದ ಉದ್ದೇಶವಾಗಿತ್ತು.
ಮೊದಲೇ ಹೇಳಿದಂತೆ, ಸಾರ್ವತ್ರಿಕ ಚುನಾವಣೆಗಿರುವ ಮಹತ್ವವನ್ನು ಹಾಗೂ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಎನಿಸಿಕೊಂಡಿರುವ ಭಾರತದಲ್ಲಿ ಮತದಾನಕ್ಕಿರುವ ಹೆಮ್ಮೆ ಮತ್ತು ಧನ್ಯತಾಭಾವವನ್ನು ಈ ಉಪ ಕ್ರಮ ಸಂಕೇತಿಸುತ್ತದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಕಾಲೇಜುಗಳು, ಉನ್ನತ ಶಿಕ್ಷಣ ಸಂಸ್ಥೆಗಳು, ವಿಶ್ವ ವಿದ್ಯಾಲಯಗಳು ಹೀಗೆ ದೇಶಾದ್ಯಂತದ ‘ವಿದ್ಯಾಲಯಗಳು’ ತೊಡಗಿಸಿಕೊಂಡಿದ್ದ ಈ ಉಪಕ್ರಮದಲ್ಲಿ ಮತದಾರರ ಜಾಗೃತಿ ಸಂಬಂಧಿತ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದರ ಜತೆಗೆ ಆ ಸಂಸ್ಥೆಗಳಲ್ಲಿ ಹಾಗೂ ‘Mygov’ ವೇದಿಕೆಯಲ್ಲಿ ಸೃಜನಶೀಲ ಚಟುವಟಿಕೆಗಳಿಗೂ ಅನುವುಮಾಡಿಕೊಡಲಾಗಿತ್ತು.
ಬ್ಲಾಗ್ ಬರವಣಿಗೆ, ಪ್ರಬಂಧ ರಚನೆ, ಪಾಡ್‌ಕಾಸ್ಟ್ ಚರ್ಚೆ, ಆಶುಭಾಷಣ, ರಸಪ್ರಶ್ನೆ, ‘ಬ್ಯಾಟಲ್ ಆಫ್ ಬ್ಯಾಂಡ್’ ಇತ್ಯಾದಿ ಸ್ಪರ್ಧೆಗಳು ಈ ಸೃಜನಶೀಲ ಚಟುವಟಿಕೆಗಳಲ್ಲಿ ಸೇರಿದ್ದವು ಎಂಬುದು ಗಮನಾರ್ಹ. ‘ಕೆಲವಂ ಬಲ್ಲವರಿಂದ ಕಲ್ತು, ಕೆಲವಂ ಶಾಸಂಗಳ ಕೇಳುತಂ’ ಎಂದಿದ್ದಾರೆ ನಮ್ಮ ಹಿಂದಿನವರು. ಇದರನ್ವಯ, ಮತದಾನದ ಮೌಲ್ಯವನ್ನು ಒತ್ತಿಹೇಳುವ ಹಾಗೂ ಚುನಾವಣಾ ಪ್ರಕ್ರಿಯೆಗಿರುವ ಮಹತ್ವವನ್ನು ಯುವಪೀಳಿಗೆಗೆ ಮನವರಿಕೆ ಮಾಡಿ ಕೊಡುವ ಧ್ಯೇಯದ ಅಂಗವಾಗಿ ಸಂವಾದಾತ್ಮಕ ಕಾರ್ಯಾಗಾರಗಳು ಮತ್ತು ವಿಚಾರ ಸಂಕಿರಣಗಳನ್ನು ಆಯೋಜಿಸಿದ್ದು ಈ ಅಭಿಯಾನದ ‘ಹೈಲೈಟ್’. ಸಾಲದೆಂಬಂತೆ, ಚುನಾವಣಾ ಪ್ರಕ್ರಿಯೆಯಲ್ಲಿ ತಮಗಿರುವ ಬದ್ಧತೆಯನ್ನು ಮತ್ತಷ್ಟು ಗಟ್ಟಿಗೊಳಿಸಲೆಂದು ಯುವಜನರು https://ecisveep.nic.in/pledge/ ಎಂಬ ಅಽಕೃತ ಜಾಲತಾಣದಲ್ಲಿ ‘ಮತದಾರರ ಪ್ರತಿಜ್ಞೆ’ಯನ್ನು ಕೈಗೊಳ್ಳುವುದಕ್ಕೂ ಹಾಗೂ ಮತದಾರರ ಸಹಾಯ ವಾಣಿ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳುವುದಕ್ಕೂ ಅನುವು ಮಾಡಿಕೊಟ್ಟಿದ್ದು ಈ ಅಭಿಯಾನದ ಹೆಗ್ಗಳಿಕೆ.
ಇಷ್ಟು ಹೇಳಿದ ಮಾತ್ರಕ್ಕೆ ಅಭಿಯಾನ ಸಂಪನ್ನಗೊಂಡಿತು ಎಂದರ್ಥವಲ್ಲ; ಎನ್‌ಎಸ್‌ಎಸ್ ಸಂಸ್ಥೆ ಮತ್ತು ಅದರ ಸ್ವಯಂಸೇವಕರು ಆಯಾ ಶಿಕ್ಷಣ ಸಂಸ್ಥೆಗಳಲ್ಲಿ ಈ ಕಾರ್ಯಕ್ರಮವನ್ನು ಮುನ್ನಡೆಸುತ್ತಾರೆ ಹಾಗೂ ಆ ಸಂಸ್ಥೆಗಳ ಕ್ಲಬ್ ಗಳೂ ಈ ಅಭಿಯಾನದಲ್ಲಿ ಪಾಲ್ಗೊಳ್ಳುತ್ತವೆ ಎಂಬುದು
ಗಮನಾರ್ಹ. ಭಾರತದಲ್ಲಿ ಪ್ರಸ್ತುತ ಸುಮಾರು ೨ ಕೋಟಿ ಯಷ್ಟು ಮೊದಲ ಬಾರಿಯ ಮತದಾರರಿದ್ದು, ಅವರಲ್ಲಿ ಸಹಜವಾಗಿಯೇ ಮತದಾನ ಪ್ರಕ್ರಿಯೆಯ ಕುರಿತು ಕುತೂಹಲ, ಪುಳಕ, ಹೆಮ್ಮೆ, ಸಂತಸ ಮನೆ ಮಾಡಿರುತ್ತವೆ.
ಇವುಗಳ ಜತೆಗೆ ಅವರು ‘ನನ್ನ ಮೊದಲ ಮತ ದೇಶಕ್ಕಾಗಿ’ ಎಂಬ ಧ್ಯೇಯವಿಟ್ಟುಕೊಂಡು ರಾಷ್ಟ್ರಹಿತವೇ ಧ್ಯೇಯವಾಗಿರುವವರಿಗೆ ಮತವನ್ನು ಚಲಾ ಯಿಸಿದರಂತೂ ಅವರ ಈ ಮತದಾನದ ಹಕ್ಕಿಗೆ ಸಾರ್ಥಕ್ಯ ಸಿಕ್ಕಂತಾಗುತ್ತದೆ. ಉಜ್ವಲ ರಾಷ್ಟ್ರ ನಿರ್ಮಾಣದ ಧ್ಯೇಯವು ಸಮರ್ಥವಾಗಿ ಸಾಕಾರ
ಗೊಳ್ಳಬೇಕೆಂದರೆ ಯುವಪೀಳಿಗೆಯ ಪಾಲ್ಗೊಳ್ಳುವಿಕೆ ಅಲ್ಲಿರ ಬೇಕು; ಅದೇ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ನಿರ್ಣಾಯಕ ಚಟುವಟಿಕೆಯಾಗಿದೆ. ‘ಅಮೃತ ಕಾಲ’ವನ್ನು ಹುಟ್ಟುಹಾಕು ವಲ್ಲಿ ಈ ‘ಅಮೃತ ಪೀಳಿಗೆ’ಯ ಅವಶ್ಯಕತೆ ಹಿಂದೆಂದಿಗಿಂತ ಹೆಚ್ಚಾಗಿದೆ. ಈ ಧ್ಯೇಯಕ್ಕೆ ದೇಶದ ವಿವಿಧ ಕಾರ್ಯ ಕ್ಷೇತ್ರಗಳ ಮತ್ತು ಸ್ತರಗಳ ಜನರು ದನಿಗೂಡಿಸಿರುವುದೇ ಈ ಉಪಕ್ರಮಕ್ಕಿರುವ ಮಹತ್ವವನ್ನು ಒತ್ತಿಹೇಳಿದೆ ಎನ್ನಬೇಕು.
ಇದನ್ನು ಸಮರ್ಥವಾಗಿ ಮನಗಂಡು ನಮ್ಮ ಯುವ ಪೀಳಿಗೆಯು ರಾಷ್ಟ್ರಪ್ರೇಮಿ ಜನಪ್ರತಿನಿಧಿಗಳನ್ನು ಚುನಾಯಿಸುವಂತಾದಲ್ಲಿ ಅದು ಈ ಅಭಿಯಾನದ ಪಾಲಿಗೆ ಸಾರ್ಥಕ ಕ್ಷಣವಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.
(ಲೇಖಕರು ಹಿರಿಯ ಪತ್ರಕರ್ತರು)