Tuesday, 27th October 2020

ಹ್ಯಾಪ್ ಮೋರೆ ಹಾಕೋ ಆ್ಯಪ್(App) ಡೆವಲಪರ್‌

ಬಡೆಕ್ಕಿಲ ಪ್ರದೀಪ
ಟೆಕ್ ಟಾಕ್

ಕೆಲವು ಆ್ಯಪ್ ಗಳನ್ನು ಗೂಗಲ್ ಪ್ಲೇಸ್ಟೋರ್ ಅಥವಾ ಆ್ಯಪಲ್ ಸ್ಟೋರ್ ಡಿಲೀಟ್ ಮಾಡುತ್ತದೆ. ಇದರ ಕಾರಣ ಏನಿರಬಹುದು? ಒಂದು ಅವಲೋಕನ.

ಆ್ಯಪ್‌ಗಳು. ಯಾವುದಕ್ಕೆ ಆ್ಯಪ್ ಆಗಿಲ್ಲ ಅನ್ನೋದೇ ಈಗ ಪ್ರಶ್ನೆ. ಬೆಳಗ್ಗೆ ಎದ್ದೇಳೋದಕ್ಕೆ ಒಂದು ಆ್ಯಪ್ ಆದರೆ, ಚ್ಯಾಟ್
ಮಾಡೋಕೆ, ಫೋಟೋ ತೆಗೆಯೋಕೆ, ತೆಗೆದ ಫೋಟೋ ಎಡಿಟ್ ಮಾಡೋಕೆ ಒಂದು, ವಿಡಿಯೋ ಶೂಟ್ ಮಾಡೋಕೆ, ಎಡಿಟ್ ಮಾಡೋಕೆ, ಪೋಸ್ಟ್‌ ಮಾಡೋಕೆ ಮತ್ತೂ ಹನ್ನೊಂದು. ಹನ್ನೊಂದಕ್ಕೆ ಇನ್ನೊಂದು ಸೇರಿಸಿದರೂ ಮುನ್ನೂರ ಒಂದು ಅದೇ ರೀತಿಯ ಆ್ಯಪ್‌ಗಳ ಆಯ್ಕೆಗಳನ್ನು ಪ್ರತಿಯೊಂದು ವಿಭಾಗದಲ್ಲೂ ಕಾಣಬಹುದು ಅನ್ನೋದಕ್ಕೆ ಸಾಕ್ಷಿಯಾಗಿ, ಇದೀಗ ನೀವು ಆಂಡ್ರಾಯ್ಡ್‌ ಆಗಿದ್ದರೆ ಸುಮಾರು 28 ಲಕ್ಷ ಆ್ಯಪ್‌ಗಳ ಮಹಾ ಸಮುದ್ರದಲ್ಲಿ ಹತ್ತೋ ನೂರೋ ಆ್ಯಪ್‌ಗಳನ್ನು ಮಾತ್ರ ನಿಮ್ಮ ಫೋನ್‌ಗಳಲ್ಲಿ ಡೌನ್ ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿದ್ದೀರಾ. ಐಫೋನ್‌ನ ಮಂದಿಗೆ ಇದರ ಸಂಖ್ಯೆ ಸ್ವಲ್ಪ ಕಮ್ಮಿ, ಆದರೂ ಅದು 22 ಲಕ್ಷದಷ್ಟಿದೆ!

ಅದೆಲ್ಲಾ ಒತ್ತಟ್ಟಿಗಿರಲಿ, ಪ್ರತಿಯೊಬ್ಬರಿಗೂ ಅವರದೇ ಆಯ್ಕೆಗಳಿರುತ್ತವೆ, ಅವರು ಅದಕ್ಕೆ ತಕ್ಕ ಆ್ಯಪ್‌ಗಳನ್ನು ಬಳಸ್ತಾರೆ ಅನ್ನೋದು ಒಂದೆಡೆಯಾದರೆ, ಇನ್ನೊಂದೆಡೆ ಪ್ರತಿಯೊಂದು ಸಣ್ಣ ಪುಟ್ಟ ಕಾರಣಗಳಿಗೂ ಆ್ಯಪ್‌ಗಳು ಲಾಂಚ್ ಆಗುವುದು, ಕೆಲವೊಂದು ಪಂಗಡಕ್ಕೆ ಸೀಮಿತವಾಗಿ ಆ್ಯಪ್ ಗಳನ್ನು ಬಳಕೆ ಮಾಡುತ್ತಿರುವುದು, ಅಥವಾ ಯಾವುದೋ ಕಾಲೇಜು-ವಿಶ್ವವಿದ್ಯಾ ಲಯ ಇರಬಹುದು, ಆಸ್ಪತ್ರೆ ಇರಬಹುದು, ಅಥವಾ ಸರಕಾರಿ ಕಛೇರಿ, ಯೋಜನೆಗೆ ಸಂಬಂಧಿಸಿ ಬೇರೆ ಬೇರೆ ಆ್ಯಪ್‌ಗಳಿರುವುದೂ ಇದಕ್ಕೆ ಕಾರಣ ಅನ್ನೋಣ.

ಚೀನಾದ ಮೇಲೆ ಕೆಂಗಣ್ಣು
ಆದರೆ ಮುಖ್ಯ ವಿಷಯ ಅಂದ್ರೆ ಮೊನ್ನೆ ಮೊನ್ನೆ ತನ್ನ ಆ್ಯಪ್ ಸ್ಟೋರ್‌ನಿಂದ ಚೀನಾ ಒಡೆತನದ ಟೆನ್ಸೆಂಟ್ ಅನ್ನುವ ಪಬ್‌ಜಿ ಗೇಮನ್ನು ಮಾಡಿರುವ ಕಂಪೆನಿಯನ್ನು ಆ್ಯಪಲ್ ಕಿತ್ತುಹಾಕಿರುವುದಕ್ಕೆ ಅದರ ಕುರಿತಾದ ಕಾದಾಟ ನಡೀತಾನೇ ಇದೆ.

ಇನ್ನೊಂದೆಡೆ ಪೇಟಿಎಂ ಅನ್ನು ಗೂಗಲ್ ಒಂದು ದಿನದ ಮಟ್ಟಿಗೆ ಬ್ಯಾನ್ ಮಾಡಿತ್ತು. ಅದಾದ ಮೇಲೆ ಅದು ಹೇಗೋ ಮತ್ತೆ ಪಟ್ಟಿಯಲ್ಲಿ ಬಂದರೂ ಇದು ದೊಡ್ಡ ಚರ್ಚೆಗೆ ವಿಷಯವಾಯಿತು. ಈ ವಿಷಯಗಳನ್ನು ನೋಡ್ತಾ ನನಗೆ ಯೋಚನೆಗೆ
ಬಂದಿದ್ದು, ಈ ಆ್ಯಪ್‌ಗಳನ್ನು ಯಾಕೆ ಬ್ಯಾನ್ ಮಾಡ್ತಾರೆ, ಅಥವಾ ಹೊಸ ಆ್ಯಪ್ ಆಗಿದ್ದರೆ ಅನುಮೋದನೆ ಮಾಡದೇ ಇರ್ತಾರೆ ಅಂತ ಹೀಗೇ ಸಣ್ಣ ಹುಡುಕಾಟ ನಡೆಸಿದಾಗ ಮಾಹಿತಿಗಳ ಕಣಜವೇ ಹೊರಬಂತು.

ಹಾಗೆ ಹೇಳೋದಾದರೆ ಈ ಲೇಖನದ ಮೂಲ ಉದ್ದೇಶ ಇದರ ಮೂಲಕ್ಕೆ ಹೋಗಿ ಅದನ್ನು ಆಮೂಲಾಗ್ರ ಅವಲೋಕಿಸುವುದಲ್ಲ, ಯಾವ್ಯಾವ ಕಾರಣಗಳಿಗೆ ಈ ಆ್ಯಪ್‌ಗಳನ್ನು ಆಪಲ್ ಆಗಲಿ, ಆಂಡ್ರಾಯ್ಡ್‌‌ಗಳನ್ನು ಲಾಂಚ್ ಮಾಡಿರೋ ಗೂಗಲ್ ಆಗಲಿ
ಅನುಮೋದಿಸೋದಿಲ್ಲ ಅನ್ನೋದರ ಬಗ್ಗೆ ಸಣ್ಣ ಅವಲೋಕನ ಮಾಡುವುದಷ್ಟೆ. ಒಂದು ಮಾಹಿತಿಯ ಪ್ರಕಾರ ಗೂಗಲ್ ತನಗೆ ಬಂದ ಒಟ್ಟೂ ಆ್ಯಪ್‌ಗಳ ಪೈಕಿ 55 ಶೇಕಡಾ ಆ್ಯಪ್ ಗಳನ್ನು ರಿಜೆಕ್ಟ್ ಮಾಡಿದೆಯಂತೆ.

ಇನ್ನು ಎರಡೂ ಕಂಪೆನಿಗಳ ತುಲನೆಯಲ್ಲಿ ರಿಜೆಕ್ಟ್‌ ಮಾಡುವುದರಲ್ಲಿ ಹೆಚ್ಚು ಅನುಭವ ಇರೋದು ಆಪಲ್‌ಗೇ ಅನ್ನೋದು ತಜ್ಞರ  ಆಭಿಮತ. ಆಪಲ್ ತುಂಬಾ ಕಟ್ಟುನಿಟ್ಟಿನ ಉಪಕ್ರಮಗಳ ಮೂಲಕ ತನ್ನ ಆ್ಯಪ್ ಸ್ಟೋರ್ ಅನ್ನು ಕಾಪಾಡುತ್ತದೆ ಅನ್ನಲಾಗುತ್ತದೆ.
ಗೂಗಲ್ ಹಾಗೂ ಆಪಲ್ ಎರಡೂ ಮಕ್ಕಳ ಉಪಯೋಗ, ಲೈಂಗಿಕ ಕಿರುಕುಳ, ದ್ವೇಷದ ಮಾತುಗಳುಳ್ಳವು, ಉಗ್ರವಾದ, ಹಿಂಸೆ, ಜೂಜು, ಫ್ಯಾಂಟಸಿ ಆಟಗಳು ಹೀಗೆ ಯಾವುದನ್ನೂ ಸಹಿಸುವುದಿಲ್ಲ. ಇದೇ ಜೂಜನ್ನು ಪ್ರಚೋದಿಸಿ, ಅದಕ್ಕೆ ತಕ್ಕ ವ್ಯವಸ್ಥೆಯನ್ನು ಒದಗಿಸುತ್ತಿದ್ದೀರಿ ಎಂದು ಹೇಳಿಯೇ ಗೂಗಲ್ ಪ್ಲೇಸ್ಟೋರ್ ನಿಂದ ಪೇಟಿಎಂ ಅನ್ನು ತೆಗೆದುಹಾಕಿದ್ದು.

ಗೂಗಲ್‌ನ ಮೂಗುದಾರ ಇನ್ನು ಆ್ಯಪ್‌ನ ಒಳಗೇ ಇನ್ನೊಂದು ಪುಟ್ಟ ಪ್ರಪಂಚವೆನ್ನುವಂತೆ ತಮ್ಮದೇ ಮಿನಿ ಆ್ಯಪ್‌ಗಳನ್ನು ಅಭಿವೃದ್ಧಿಗೊಳಿಸಲು ಬಳಕೆದಾರರಿಗೆ ಅವಕಾಶ ನೀಡುವ ಆ್ಯಪ್‌ಗಳಿವೆ. ಆ ಮಿನಿ ಆ್ಯಪ್ ಗಳಲ್ಲಿ ಯಾವುದೇ ಅನಿಯಂತ್ರಿತ
(ಅಂದರೆ ಮೇಲೆ ಹೇಳಿದ ರೀತಿಯ ವಿಷಯಗಳು) ಮಾಹಿತಿ- ಪೋಸ್‌ಟ್‌‌ಗಳು ಹಾಕಲು ಅವಕಾಶ ನೀಡಿದರೆ ಆ್ಯಪ್‌ಗಳನ್ನು ಬ್ಯಾನ್ ಮಾಡುವ ಸಾಧ್ಯತೆ ಇದೆ. ಉಳಿದವರ ಆಸ್ತಿಯನ್ನು (ಇನ್ನೊಬ್ಬರು ತಯಾರಿಸಿದ ಮಾಹಿತಿ-ಫೋಟೋ- ವಿಡಿಯೋ ಇತ್ಯಾದಿ) ಒಂದು ಆ್ಯಪ್‌ನಲ್ಲಿ ಬಳಸಿದರೆ, ಬಳಸಲು ಅವಕಾಶ ನೀಡಿದರೆ, ಆಗ ಆ್ಯಪ್ ಅನ್ನು ಬ್ಯಾನ್ ಮಾಡುವ ಸಾಧ್ಯತೆ ಇದೆ. ಜೊತೆಗೆ ಬೇರೊಂದು ಆ್ಯಪ್‌ನ ನಕಲು ಪ್ರತಿಯಂತೂ ಇರಬಾರದು, ಹಾಗೊಮ್ಮೆ ಇದ್ದದ್ದೇ ಆದರೆ ಗೂಗಲ್ ಅದನ್ನು ಬ್ಯಾನ್ ಮಾಡಬಹುದು.

ಆ್ಯಪಲ್‌ನ ಬಿಗಿ ಹಿಡಿತ?
ಆ್ಯಪ್ ಸ್ಟೋರ್ ಪ್ಲೇ ಸ್ಟೋರ್‌ಗೆ ಹಿರಿಯಣ್ಣನಿದ್ದಂತೆ, ಕಡಿಮೆ ಆ್ಯಪ್‌ಗಳಿರುವುದಕ್ಕೆ ಅಲ್ಲಿ ತಮ್ಮ ಆ್ಯಪ್ ಅನ್ನು ಹಾಕಲು ಬರುವವರ ಸಂಖ್ಯೆ ಕಮ್ಮಿ ಅಂತಲ್ಲ. ಆ್ಯಪಲ್ ಒಪ್ಪಿಕೊಳ್ಳುವ ಆ್ಯಪ್‌ಗಳ ಸಂಖ್ಯೆ ಕಮ್ಮಿ ಅನ್ನಬೇಕಷ್ಟೆ. ಮೊದಲಿಗೆ ಸಬ್ಮಿಟ್ ಮಾಡಲ್ಪಡುವ ಆ್ಯಪ್‌ನ ಬಗ್‌ಗಳು (ಅಡೆತಡೆಗಳು) ಹಾಗೂ ಕ್ರಾಶ್ ಆಗುವಿಕೆ ತುಂಬಾ ಕಮ್ಮಿ ಇರಬೇಕು. ಹಾಗೊಮ್ಮೆ ಇತ್ತು ಅಂದರೆ ಅದು ಸಂಪೂರ್ಣ ಅಭಿವೃದ್ಧಿ ಹೊಂದದ ಆ್ಯಪ್ ಅನ್ನುತ್ತದೆ ಆಪಲ್.

ಇದರೊಂದಿಗೆ ನೀಡಿರುವ ಎಲ್ಲಾ ಲಿಂಕ್‌ಗಳೂ (ಅಂದರೆ ಕ್ಲಿಕ್ ಮಾಡಿದಾಗ ಕೆಲಸ ಮಾಡುವ ಮಾಹಿತಿಗಳು) ಸರಿಯಾಗಿ
ಕೆಲಸ ಮಾಡದಿದ್ದರೂ ರಿಜೆಕ್ಟ್‌ ಆಗುವುದು ಅಂತಾನೇ. ಸರಿಯಾದ, ಉಪಯುಕ್ತ ಮಾಹಿತಿಗಳನ್ನು ನೀಡದ ಆ್ಯಪ್ ಆಗಿದ್ದಲ್ಲಿ, ಒಳಗೊಂದು ವಿಚಾರ, ಸ್ಕ್ರೀನ್‌ಶಾಟ್‌ನಲ್ಲಿ ಮತ್ತೊಂದನ್ನೇ ಹಾಕಿ ತಮ್ಮ ಆ್ಯಪ್‌ಗಳನ್ನು ಪಾಸ್ ಮಾಡಿಸುವ ಹಾಗೂ ಆ್ಯಪ್ ಸ್ಟೋರ್‌ನಲ್ಲಿ ಸೇರಿಸುವ ಪ್ರಯತ್ನಗಳಿಗೆ ನೇರ ಉತ್ತರ-ರಿಜೆಕ್ಟೆಡ್.

ಐಓಎಸ್‌ಗೆ ತಕ್ಕ ಡಿಸೈನ್ (ಯೂಸರ್ ಇಂಟರ್‌ಫೇಸ್), ಹಾಗೂ ಸಂಪೂರ್ಣ ಮಾಹಿತಿಯನ್ನು ನೀಡದೇ ಆ್ಯಪಲ್ ಆ್ಯಪ್‌ಗಳನ್ನು ಒಳಗೆ ಸೇರಿಸೋದೇ ಇಲ್ಲ. ಒಟ್ಟಿನಲ್ಲಿ ಹೆಚ್ಚಾಗಿ ಪ್ಲೇಸ್ಟೋರ್‌ಗೆ ಬಂದ ಆ್ಯಪ್ ಒಂದು ಆ್ಯಪ್ ಸ್ಟೋರ್‌ಗೆ ಹೆಜ್ಜೆ ಇಡಲು ತುಂಬಾ ಕಾಲ ಬೇಕಾಗಲು ಕಾರಣ ಇದೇನೇ. ಅದೆಷ್ಟೇ ತಿಪ್ಪರಲಾಗ ಹಾಕಿದರೂ ಆ್ಯಪಲ್ ತನ್ನ ನಿಯಮ ಉಲ್ಲಂಘನೆ ಮಾಡೋದಿಲ್ಲ. ಇತ್ತೀಚೆಗೆ ಗೂಗಲ್ ಕೂಡ ಇದೇ ದಾರಿ ಹಿಡಿಯತೊಡಗಿದೆ.

ಒಟ್ಟಿನಲ್ಲಿ, ಇದೆಲ್ಲದರ ಮೂಲ ಉದ್ದೇಶ ಬಳಕೆದಾರರಿಗೆ ಒಳ್ಳೆಯ ಬಳಕೆಯ ಅನುಭವ ನೀಡೋದು. ಅಷ್ಟೇ!

Leave a Reply

Your email address will not be published. Required fields are marked *