Saturday, 27th February 2021

ಕಲೆ ಪಡೆಯಿತು ನವೀನರೂಪ

ಡಾ.ಉಮಾಮಹೇಶ್ವರಿ ಎನ್‌.

ನವ್ಯ ಕಲೆಗಳು ಉಚ್ಛ್ರಾಯ ಕಂಡದ್ದು ಇಪ್ಪತ್ತನೆಯ ಶತಮಾನದ ಆರಂಭದಲ್ಲಿ. ಅಂದು ರಚನೆಗೊಂಡ ಹಲವು ಕಲಾಕೃತಿಗಳ ಪ್ರದರ್ಶನವನ್ನು ನೋಡುವುದೇ ಒಂದು ನವೀನ ಅನುಭವ.

ಹತ್ತೊಂಬತ್ತನೆಯ ಶತಮಾನದ ಕೊನೆಯಲ್ಲಿ ಮತ್ತು ಇಪ್ಪತ್ತನೆಯ ಶತಮಾನದ ಆರಂಭ ದಲ್ಲಿ ಯುರೋಪಿನಲ್ಲಿ ಕೈಗಾರಿಕಾ ಕ್ರಾಂತಿಯಾದಾಗ, ಕಲಾಪ್ರಕಾರಗಳಲ್ಲಿಯೂ ಹೊಸ ಗಾಳಿ ಬೀಸಿತು. ಎಲ್ಲಾ ಕಲೆಗಳಲ್ಲೂ ಹೊಸತನದ ಛಾಪು ಮೂಡತೊಡಗಿತು. ಇದರ ಮೂಲ ಇಂಗ್ಲೆಂಡ್. ತದನಂತರ ಯುರೋಪಿನೆಲ್ಲೆಡೆ ಹೊಸ ರೀತಿಯ ಕಲೆ, ವಿನ್ಯಾಸ, ವಾಸ್ತು ಶೈಲಿ ಪ್ರಸಿದ್ಧವಾಯಿತು.

ಇಂಗ್ಲಿಷ್‌ನಲ್ಲಿ ಮಾಡರ್ನ್ ಆರ್ಟ್ ಎಂದು ಕರೆಯಿಸಿಕೊಳ್ಳುವ ಈ ಕಲಾಪ್ರಕಾರ ಫ್ರೆಂಚ್ ‌ನಲ್ಲಿ ಆರ್ಟ್ ನೂವೋ ಮತ್ತು ಜರ್ಮನ್ ನಲ್ಲಿ ಯುಗೆಂಡ್ ಸ್ಟಿಲ್ ಎಂದು ಪ್ರಸಿದ್ಧವಾಗಿದೆ. ಯುಗೆಂಡ್ ಸ್ಟಿಲ್ ಎಂದರೆ ಯುವ (ಯಂಗ್) ಶೈಲಿ ಎಂದು ಸ್ಥೂಲವಾಗಿ ಹೇಳಬಹುದು. ಮುಖ್ಯವಾಗಿ ಕಟ್ಟಡ ಮತ್ತು ಪೀಠೋಪಕರಣಗಳ ವಿನ್ಯಾಸದ ಮೇಲೆ ಯುಗೆಂಡ್‌ಸ್ಟಿಲ್ ಪ್ರಭಾವ ಕಾಣಬಹುದು. 1890ರಿಂದ 1910ರ ಅವಧಿಯಲ್ಲಿ ನವ್ಯ ಶೈಲಿಯ ಕಟ್ಟಡ ಕಲಾಪ್ರಕಾರಗಳಿಗೆ ಆರಂಭಿಕ ಉತ್ತೇಜನ ದೊರೆಯಿತು.

ಜರ್ಮನಿಯ ಡಾರ್ಮ್ ಸ್ಟಾಟ್ ನಗರದ ರಾಜ ನಾಗಿದ್ದ ಎರ್ನ್‌ಸ್ಟ್‌ ಲುಡ್ವಿಗ್ ಕಲೆಗಳ ಆರಾಧಕನಾಗಿದ್ದ. ಇವನ ನೇತೃತ್ವದಲ್ಲಿ 1899 ರಿಂದ ಈ ನಗರದಲ್ಲಿ ಕಲಾ ಪ್ರದರ್ಶನಗಳ ವ್ಯವಸ್ಥೆ ಆರಂಭಿಸಲಾಯಿತು. ಕಲಾವಿದರು ತಾವು ನಿರ್ಮಿಸಿದ ಕಲಾಕೃತಿ ಗಳನ್ನು ದಿನನಿತ್ಯ ಉಪಯೋಗಿಸಿಕೊಂಡು ಬದುಕುವುದು ಇದರ ಮುಖ್ಯ ಧ್ಯೇಯ ವಾಗಿತ್ತು. ಮನೆಗಳ ನಿರ್ಮಾಣ, ಒಳಾಲಂಕಾರ, ಪೀಠೋಪಕರಣಗಳು, ಪಿಂಗಾಣಿ ವಸ್ತುಗಳು ಹಾಗೂ ಇತರ ವಿಷಯಗಳಲ್ಲಿ ನವ್ಯಕಲೆ ತಾನಾಗಿಯೇ ರಾರಾಜಿಸತೊಡಗಿತು.

ಇದಲ್ಲದೆ ಚಿತ್ರಕಲೆ, ಸಂಗೀತೋಪಕರಣಗಳ ನಿರ್ಮಾಣ, ಸಂಗೀತ ರಚನೆ ಮತ್ತು ಸಂಯೋಜನೆ ಎಲ್ಲದರಲ್ಲೂ ಕಾಲಘಟ್ಟಕ್ಕೆ ಅನುಗುಣವಾಗಿ ನವ್ಯತೆ ನುಸುಳಿಕೊಂಡಿತು. ಡಾರ್ಮ್‌ಸ್ಟಾಟ್ ನಗರದ ಮೆಟಿಲ್ಡೆನ್ ಹೋಹೆ ಎಂಬ ಜಾಗದಲ್ಲಿ ಕಲಾವಿದರದೇ ಆದ ಒಂದು ಕಲಾಗ್ರಾಮ ತಲೆ ಎತ್ತಿತು. ಇದರಲ್ಲಿ ಕಾಲಕಾಲಕ್ಕೆ ಅತಿ ಪ್ರಸಿದ್ಧವಾದ ಕಲಾಪ್ರದರ್ಶನಗಳು ನಡೆದವು. 1901, 1904,
1908, 1914 ರಲ್ಲಿ ನಡೆದ ಕಲಾಪ್ರದರ್ಶನಗಳು ಹೊಸತನದ ಬಿರುಗಾಳಿಯನ್ನೇ ಎಬ್ಬಿಸಿದ್ದವು.

ಕಲಾಗ್ರಾಮದಲ್ಲಿನ ಪ್ರತಿಹಂತದ ಪ್ರದರ್ಶನದಲ್ಲೂ ಹೊಸ ನಿರ್ಮಾಣಗಳೊಂದಿಗೆ ಮುನ್ನಡೆದಿತ್ತು. ಕಲಾವಿದರಿಗಾಗಿ ಪ್ರತ್ಯೇಕ ಸ್ಥಳ ಕಲಾಪ್ರೇಮಿಯಾಗಿದ್ದ ಲುಡ್ವಿಗ್ 1899ರಲ್ಲಿ ನವ್ಯಕಲೆಗಳ ಬೀದಿ ಅಥವಾ ಆರ್ಟಿಸ್ಟ್‌ ಕಾಲೊನಿಯ ನಿರ್ಮಾಣಕ್ಕೆ ಚಾಲನೆ ಇತ್ತ. ಕಲಾವಿದರ ವಾಸ ಮತ್ತು ಕೆಲಸ ಒಂದೆಡೆಯೇ ಇರುವಂತೆ ವ್ಯವಸ್ಥೆಯಾಯಿತು.

ಕಟ್ಟಡಗಳ ವಿನ್ಯಾಸದಿಂದ ಹಿಡಿದು, ಚಿತ್ರಕಲೆ, ಗಾಜು ಹಾಗೂ ಪಿಂಗಾಣಿ ವಸ್ತುಗಳ ತಯಾರಿ, ಉದ್ಯಾನಗಳ ನಿರ್ಮಾಣ ಹಾಗೂ ವಿನ್ಯಾಸ…ಯಾವ ಕಲಾಪ್ರಕಾರದ ವಿಷಯವೆತ್ತಿದರೂ ಅವೆಲ್ಲವೂ ಈ ಜಾಗದಲ್ಲಿ ಹೊಸ ರೂಪದಲ್ಲಿ ದರ್ಶನವೀಯ ತೊಡಗಿದವು. ಮುಖ್ಯವಾಗಿ ಕಟ್ಟಡಗಳ ವಾಸ್ತುವಿನಲ್ಲಿ ಕಂಡ ನವೋನ್ಮೇಶವು ಎದ್ದು ಕಾಣಿಸತೊಡಗಿತು. ಇಲ್ಲಿನ ನಿರ್ಮಾಣಗಳು 1901-1914ರ ಮಧ್ಯದಲ್ಲಿ ಪೂರ್ಣಗೊಂಡವು. ಜೋಸೆಫ್ ಮರಿಯಾ ಓಲ್ಬ್ರಿಚ್ ಕಲಾವಿದರ ತಂಡದ ಪ್ರಮುಖನಾಗಿದ್ದ. ಮೊದಲು ಎಂಟು ಕಲಾವಿದರ ತಂಡ ದೊಡನೆ ಆರಂಭವಾದ ಈ ಕಲಾಸಂಸ್ಥೆಯಲ್ಲಿ ಹದಿನಾರು ವರ್ಷಗಳ ಅವಧಿಯಲ್ಲಿ ಒಟ್ಟು 23 ಜನ ಕಲಾವಿದರು ಸದಸ್ಯರಾಗಿದ್ದರು.

ಐದು ಬೆರಳುಗಳ ಸೌಧ
ಬಹುಮಹಡಿಗಳ ಮದುವೆ ಗೋಪುರ ಡಾರ್ಮ್ ಸ್ಟಾಟ್ ನ ನಾಗರಿಕರಿಂದ ಲುಡ್ವಿಗ್‌ನಿಗೆ ಮದುವೆಯ ಉಡುಗೊರೆ. ವಿಭಿನ್ನ ವಿನ್ಯಾಸದ ನಿರ್ಮಿತಿಯ ತುದಿಭಾಗ ಐದು ಬೆರಳುಗಳಂತೆ ಕಾಣುವುದರಿಂದ ‘ಐದು ಬೆರಳುಗಳ’ ಸೌಧವೆಂಬ ಅನ್ವರ್ಥನಾಮವೂ
ಇದೆ. ಒಳಗಿರುವ ಗೋಡೆಗಳ ಚಿತ್ರಕೃತಿಗಳು ಅದ್ಭುತ. ರಾಜ-ರಾಣಿಯರ ಕೋಣೆಗಳು ವೀಕ್ಷಣೆಗೆ ಲಭ್ಯವಿವೆ. ಇವುಗಳಲ್ಲಿ ಒಂದು ಅಂತಸ್ತು ಮದುವೆ ಹಾಗೂ ಮದುವೆಗಳ ನೋಂದಣಿಗಾಗಿ ಈಗಲೂ ಮೀಸಲಿವೆ.

ತುತ್ತತುದಿಯ ವೀಕ್ಷಣಾಸ್ಥಳ 360ಡಿಗ್ರಿ ಸುಂದರ ನೋಟವನ್ನು ಸಾಧ್ಯವಾಗಿಸುತ್ತದೆ. ಫ್ರಾಂಕ್ ಫರ್ಟ್ ನಗರದ ಗಗನಚುಂಬಿ ಕಟ್ಟಡಗಳ ನೋಟವೂ ಲಭ್ಯ. ಎರ್ನ್‌ಸ್ಟ್‌ ಲುಡ್ವಿಗ್‌ನ ಮನೆಯು ಈಗ ಶಾಶ್ವತವಾದ ಕಲಾಸಂಗ್ರಹಾಲಯವಾಗಿದೆ. ಮದುವೆಗೋ
ಪುರದ ಎದುರಿಗೇ, ವಿನೂತನ ಶೈಲಿಯ ರಷ್ಯನ್ ಪ್ರೊಟೆಸ್ಟೆಂಟ್ ಚರ್ಚ್ ಇದೆ. ಇದರ ಸೌಂದರ್ಯ ಕಂಡೇ ಅನುಭವಿಸಬೇಕು. ಶಬ್ದಗಳಲ್ಲಿ ವಿವರಿಸುವುದು ಸ್ವಲ್ಪ ಕಷ್ಟ. ಚರ್ಚಿನ ಎದುರುಗಡೆ ಕೃತಕ ಕೊಳ ಹಾಗೂ ಕಾರಂಜಿಗಳ ರಚನೆ ಇದೆ.

ಕೇಂದ್ರ ಸಂಕೀರ್ಣದ ಇನ್ನೊಂದು ಬದಿಯಲ್ಲಿ ಪ್ರಸಿದ್ಧ ಕಲಾವಿದರ ಮನೆಗಳಿವೆ. ಕೆಲವು ಮನೆಗಳು ಸಂಗ್ರಹಾಲಯಗಳಾಗಿದ್ದರೆ ಇನ್ನು ಕೆಲವು ಕಛೇರಿಗಳ ಸ್ಥಾನವಾಗಿವೆ. ಎರಡನೇ ಮಹಾಯುದ್ಧ ಕಾಲದಲ್ಲಿ ಶತ್ರು ಸೈನಿಕರ ದಾಳಿಯಲ್ಲಿ ಸ್ವಲ್ಪ ಮಟ್ಟಿಗೆ
ಹಾನಿಗೊಂಡ ಕೆಲವು ಸುಂದರ ಮತ್ತು ವಿಶಿಷ್ಟ ವಿನ್ಯಾಸದ ಮನೆಗಳನ್ನು ಮೂಲರೂಪದಲ್ಲೇ ನವೀಕರಿಸಲಾಗಿದೆ.

ಭಗವದ್ಗೀತೆಯ ಸಾಲುಗಳು
ಮದುವೆ ಗೋಪುರ- ಚರ್ಚುಗಳ ಸಂಕೀರ್ಣದ ಒಂದು ಬದಿಯಲ್ಲಿ ಸುಂದರ ಉದ್ಯಾನವಿದೆ. ಉದ್ಯಾನದಲ್ಲೂ ಕಲ್ಲಿನ ಕಲಾಕೃತಿ ಗಳನ್ನು ನಾಲ್ಕೂ ಬದಿಗಳಲ್ಲಿ ಸ್ಥಾಪಿಸಲಾಗಿದೆ. ನಾಲ್ಕು ಮೂಲೆಗಳಲ್ಲಿ ಕಲ್ಲಿನ ಫಲಕಗಳ ಮೇಲೆ ಜರ್ಮನ್ ಭಾಷೆಯ
ಬರಹ ಗಳಿದ್ದವು. ಇವುಗಳು ಭಗವದ್ಗೀತೆಯ ನಾಲ್ಕು ಶ್ಲೋಕಗಳ ಜರ್ಮನ್ ಅನುವಾದವೆಂದು ಜೊತೆಗಿದ್ದ ಸ್ಥಳೀಯ ಗೆಳತಿ ಉಲಿದಾಗ ಆದ ಆಶ್ಚರ್ಯಕ್ಕೆ ಎಣೆಯಿಲ್ಲ.

Leave a Reply

Your email address will not be published. Required fields are marked *