Sunday, 14th August 2022

ಅದ್ಧೂರಿಯಾಗಿ ಸಿದ್ದವಾಗುತ್ತಿದೆ ಅಶ್ವ

ಚಂದನವನದಲ್ಲಿ ಹೊಸ ಹೊಸ ಚಿತ್ರಗಳು ಸೆಟ್ಟೇರುತ್ತಿವೆ. ಈ ಸಾಲಿನಲ್ಲಿ ಈಗ ಹೊಸಬರ ಬಿಗ್ ಬಜೆಟ್ ಚಿತ್ರ ಅಶ್ವ ಸೆಟ್ಟೇರಲು
ರೆಡಿಯಾಗಿದೆ. ಸ್ಯಾಂಡಲ್‌ವುಡ್‌ನಲ್ಲಿ ಮೊದಲು ಎನ್ನುವಂತೆ ಅಶ್ವ ಸಿನಿಮಾವು ಯಾವ ರೀತಿ ಮೂಡಿಬರಲಿದೆ ಎಂದು ಇಪ್ಪತ್ತೈದು ನಿಮಿಷದ ಪ್ರೀಮಿಯರ್ ಷೋ ರೀಲ್ಸ್‌ ರಿಲೀಸ್ ಮಾಡಿದೆ.

ಇದರಲ್ಲಿ ಆ್ಯಕ್ಷನ್, ಕಾಮಿಡಿ, ಸೆಂಟಿಮೆಂಟ್, ಪ್ರೀತಿ, ತುಂಟಾಟ ಎಲ್ಲವೂ ಕಾಣಿಸಿಕೊಂಡಿವೆ. ಇವಿಷ್ಟು ಕಥೆಯಲ್ಲಿ ಶೇಕಡ ಎರಡರಷ್ಟು ಮಾತ್ರ ಬರಲಿದ್ದು, ಚಿತ್ರವು ಬೇರೆ ರೀತಿಯಲ್ಲಿ ಇರುತ್ತ ದಂತೆ. ಒಂದು ದಶಕದ ಕಾಲ ಸಾಕಷ್ಟು ಚಿತ್ರಗಳಿಗೆ ಮಾತುಗಳನ್ನು ಪೋಣಿಸಿದ್ದ ಎ.ಆರ್.ಸಾಯಿ ರಾಮ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ.

ಕೋಲಾರದ ಕೇಶವ ಮತ್ತು ಹೇಮಲತಾ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಕೆ.ಕೆ.ಎಂಟರ್ ಟೈನ್‌ಮೆಂಟ್ಸ್‌ ಮತ್ತು ಸೂಪರ್ ‌ನೋವ ಎಂಟರ್‌ಟೈನ್‌ಮೆಂಟ್‌ನಲ್ಲಿ ಚಿತ್ರ ಸಿದ್ದಗೊಳ್ಳುತ್ತಿದ್ದು, ರಾಕಿಂಗ್ ಸ್ಟಾರ್ ಯಶ್ ಅರ್ಪಿಸುತ್ತಿರುವುದು ಮತ್ತೊಂದು  ಹಿರಿಮೆಯಾಗಿದೆ. ಅಶ್ವ ಚಿತ್ರದ ಮೂಲಕ ಯುವ ನಟ ವಿವನ್ ನಾಯಕನಾಗಿ ಪರಿಚಯವಾಗುತ್ತಿದ್ದಾರೆ. ನಾಯಕಿಗಾಗಿ ಶೋಧ ನಡೆಯತ್ತಿದೆ.

ತಾರಾಗಣದಲ್ಲಿ ಸುಹಾಸಿನಿ, ಸಾಯಿಕುಮಾರ್, ಪ್ರಕಾಶ್‌ರೈ, ಸಾಧುಕೋಕಿಲ, ರಂಗಾಯಣ ರಘು, ಭವಾನಿಪ್ರಕಾಶ್, ಚಿಕ್ಕಣ್ಣ, ಗಿರಿ, ನಂದಗೋಪಾಲ್, ನಾಗೇಂದ್ರ ಅರಸ್, ಬಲರಾಜವಾಡಿ, ಯಶ್ ‌ಶೆಟ್ಟಿ, ಪವನ್‌ಪಚ್ಚಿ, ರಿಚ್ಚಿ ಮುಂತಾದವರು ನಟಿಸುತ್ತಿದ್ದಾರೆ. ಯೋಗರಾಜಭಟ್, ಜಯಂತ್ ಕಾಯ್ಕಣಿ, ಡಾ.ನಾಗೇಂದ್ರಪ್ರಸಾದ್, ಭರ್ಜರಿಚೇತನ್ ಸಾಹಿತ್ಯದ ಹಾಡುಗಳಿಗೆ ಬಿ.ಅಜನೀಶ್
ಲೋಕನಾಥ್ ಸಂಗೀತವಿದೆ.

ರವಿಕುಮಾರ್ ಛಾಯಾಗ್ರಹಣ, ಶ್ರೀಕಾಂತ್‌ಗೌಡ ಸಂಕಲನ, ರವಿವರ್ಮ, ಪೀಟರ್‌ಹನ್‌ಸ್‌ ವಿಕ್ರಂ, ಕುಂಗುಫು ಚಂದ್ರು ಸಾಹಸ, ಜಾನಿ-ಶೇಖರ್, ಧನಂಜಯ್ ನೃತ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರು, ಸಕಲೇಶಪುರ, ಮಂಗಳೂರು, ಅಮೃತಸರ, ಪಣಜಿ, ಹೈದರಬಾದ್ ಮತ್ತು ಕಾಕಿನಾಡದ ಸುಂದರ ತಾಣಗಳಲ್ಲಿ ನವೆಂಬರ್ ಕೊನೆವಾರದಿಂದ ಚಿತ್ರೀಕರಣ ನಡೆಸಲು ತಂಡವು ತಯಾರಿ ಮಾಡಿಕೊಳ್ಳುತ್ತಿದೆ.