Thursday, 28th January 2021

ಅಲೌಕಿಕ ವ್ಯಕ್ತಿತ್ವದ ಮಹತ್ವದ ಲೇಖಕ ಸಂಸ

ಸ್ಮರಣೆ

ನಂ.ಶ್ರೀಕಂಠ ಕುಮಾರ್‌

ಸಂಸ ಇದೊಂದು ಹೆಸರು ನನ್ನ ತಲೆಯಲ್ಲಿ ಆಗಾಗ್ಗೆ ಬಂದು ಹೋಗುತ್ತಿದ್ದರೂ, ವೃತ್ತಿಯ ನಡುವೆ ಹೆಚ್ಚಿಗೆ ತಿಳಿಯಲು ಸಮಯ
ವಾಗದೇ ನಿವೃತ್ತಿಯ ನಂತರ ಮತ್ತೆ ನನ್ನ ಮನಸ್ಸಿನಲ್ಲಿ ಮೂಡಿದ್ದು.

ಹಾಗಾಗಿ ಮತ್ತಷ್ಟು ಆಸಕ್ತಿ ಉಂಟಾಗಲು ಕಾರಣ, ಸಂಸರು ನನ್ನ ಹುಟ್ಟೂರಾದ ಕೊಳ್ಳೇಗಾಲ ತಾಲೂಕಿನವರೆಂದು. ಹಾಗೆಯೇ ಅವರು ಎಲಿಮೆಂಟರಿ ವಿದ್ಯಾಭ್ಯಾಸ ಪಡೆದ ಕುಣಗಹಳ್ಳಿ ಸಹ ನನ್ನ ಮುತ್ತಾತನ ಊರು. ಹಾಗಾದ್ದರಿಂದ ಸಂಸರ ಬಗ್ಗೆ ಮತ್ತಷ್ಟು ಆಸಕ್ತಿ ಹೆಚ್ಚಿತು. ನನ್ನ ಬಾಲ್ಯದಲ್ಲಿ ಆಗಾಗ್ಗೆ ಮುತ್ತಾತನ ಮನೆಗೆ ಸೈಕಲ್‌ನಲ್ಲೇ ಹೋಗುತ್ತಿದ್ದುದು ಸಹಜವಾಗಿತ್ತು. ಅಲ್ಲಿಯೇ ಕುಣಗಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಂತೆ ಹರಿಯುತ್ತಿದ್ದ ಹೊನ್ನೊಳೆ ಮಳೆಗಾಲದಲ್ಲಿ ನೀರು ತುಂಬಿ ಹರಿಯುತ್ತಿದ್ದರೂ ನಂತರ ಕೆಲವೊಮ್ಮೆ ಬತ್ತಿರುತಿತ್ತು. ಅದನ್ನು ದಾಟಿದರೆ ಸಂಸರ ಹುಟ್ಟೂರು ಅಗರ ಗ್ರಾಮ.

ಸಂಸರ ಬಗ್ಗೆ ತಿಳಿಯಲು ಮಾಹಿತಿಯ ಪುಸ್ತಕವನ್ನು ಹುಡುಕುವಾಗಲೇ ದೊರೆತದ್ದು ಸುಮಾರು 115 ಪುಟಗಳ ಸಂಸರ ಸ್ವಂತ ಅಣ್ಣನವರಾಗಿದ್ದ ಸಂಸ್ಕೃತ ವಿದ್ವಾನ್ ಡಾ.ಎ.ಎನ್.ನರಸಿಂಹಯ್ಯರವರ ಪುತ್ರರಾದ ಅ.ನ. ಸುಬ್ರಹ್ಮಣ್ಯಂ ಅವರು ಬರೆದು, 1987ರಲ್ಲಿ ಪ್ರಕಟಗೊಂಡ ಸಂಸರ ಮಾಹಿತಿಯುಳ್ಳ ಪುಸ್ತಕ. ಹಾಗೆಯೇ ಒಮ್ಮೆ ಪೂರಾ ಓದಿ ಮುಗಿಸುವಷ್ಟರಲ್ಲೇ ಮತ್ತೊಂದು
ಅಚ್ಚರಿ ಕಾದಿತ್ತು. ಮೈಸೂರಿನವರೇ ಆದ ಲೇಖಕ ಪ್ರೊ.ಮಲೆಯೂರು ಗುರುಸ್ವಾಮಿರವರು ಬರೆದ ಕಾದಂಬರಿ ಸಂಸ. ಬಹುಶಃ ಈ ಕಾದಂಬರಿಗೆ ಮತ್ತೊಂದು ಹೆಸರು ಸೂಕ್ತವಲ್ಲವೆಂದೇನೋ ಸಂಸ ಎಂದೇ ಇಬ್ಬರೂ ಲೇಖಕರು ಹೆಸರಿಸಿದ್ದಾರೆ.

ಸಂಸ ಹೆಸರಿನಲ್ಲೇ ಅವರ ಎಲ್ಲಾ ಗುಣಗಳು ಅಡಗಿರಬಹುದು. ಈ ಒಂದೇ ಹೆಸರಿನ ಎರಡೂ ಪುಸ್ತಕಗಳೂ ಸಂಸರ ಬದುಕಿನ ಮೇಲೆ ಉತ್ತಮ ಬೆಳಕನ್ನು ಚೆಲ್ಲಿದೆ ಎನ್ನಬಹುದು. ಬಹಳ ವರ್ಷಗಳ ನಂತರ ಸಂಸರು ಪ್ರಸ್ತುತರಾಗುತ್ತಿರುವುದೇ ಅವರ ಅಲೌಕಿಕ ವ್ಯಕ್ತಿತ್ವದ ಮಹತ್ವ. ಹಾಗಾಗಿ ಅವರ ಬದುಕಿನ ಬಗೆಗಿನ ಸಂಶೋಧನೆ ನಡೆದಷ್ಟೂ ಕನ್ನಡ ಸಾಹಿತ್ಯ ಲೋಕಕ್ಕೆ ಉಪಕಾರ ವಾದೀತು.

ಅಂದಿನ ಮೈಸೂರು ಸಂಸ್ಥಾನದ ಭಾಗವಾಗಿದ್ದ ಕೊಳ್ಳೇಗಾಲ ಸಮೀಪದ ಅಗರ ಗ್ರಾಮದಲ್ಲಿ ಸವಾಗಿದ್ದ ನರಸಿಂಹಪಂಡಿತ ಹಾಗೂ ಗೌರಮ್ಮ ನವರ ಇಬ್ಬರು ಹೆಣ್ಣು ಮಕ್ಕಳು ಹಾಗೂ ಮೂರು ಗಂಡು ಮಕ್ಕಳಲ್ಲಿ ಮೊದಲನೆಯವರು ಡಾ.ಎ.ಎನ್.
ನರಸಿಂಹಯ್ಯನವರು. ಎರಡನೆಯವರು ಡಾ.ಎನ್.ವೆಂಕಟಸುಬ್ಬಯ್ಯನವರು, ಕೊನೆಯ ಮಗನೇ ವೆಂಕಟಾದ್ರಿ ಅಯ್ಯರ್ ಉರು- ಎ.ಎನ್. ಸಾಮಿ ಮುಂದೆ ಕಾವ್ಯನಾಮದ ಸಂಸರು. ದಿನಾಂಕ 13ನೇ ಜನವರಿ 1898ರಂದು ಅಗರ ಗ್ರಾಮದಲ್ಲಿ ಜನಿಸಿದ
ಸಂಸರಿಗೆ ನಾಮಕರಣವಾದದ್ದು ವೆಂಕಟಾದ್ರಿ ಅಯ್ಯರ್ ಎಂದು.

ಇವರ ಅಣ್ಣನವರು ವಾಡಿಕೆಯಾಗಿ ಸಾಮಿ ಎಂದೂ ಸಹ ಕರೆಯುತಿದ್ದರು. ಪಕ್ಕದ ಕುಣಗಹಳ್ಳಿಯಲ್ಲಿ ಎಲಿಮೆಂಟರಿ ಹಾಗೂ ಕೊಳ್ಳೇಗಾಲದ ತಾಲೂಕು ಬೋರ್ಡ್ ಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರಿಕೆ. ನಂತರ 1910ರಲ್ಲಿ ಮೈಸೂರಿನ ಮರಿಮಲ್ಲಪ್ಪ ಹೈಸ್ಕೂಲು ಸೇರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಅನುತ್ತೀರ್ಣರಾದದ್ದು ಅವರ  ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಕೊಟ್ಟಂತಾ ಯಿತು. ಸಂಸರ ಹಿರಿಯ ಸಹೋದರರು ವಿದ್ಯಾವಂತರಾದರೂ ಸಂಸರಿಗೇಕೊ ವಿದ್ಯಾಭ್ಯಾಸದ ಮೇಲೆ ಹೆಚ್ಚಿನ ಆಸಕ್ತಿ ಮೂಡ ಲಿಲ್ಲ. ಆದರೆ ಪಡೆದ ವಿದ್ಯಾಭ್ಯಾಸದಲ್ಲೇ ಹೆಚ್ಚಿನದಾಗಿ ಸಮಯವನ್ನು ಹಳೆಗನ್ನಡಕ್ಕೂ ಮೀಸಲಿಟ್ಟು ಒಮ್ಮನಸ್ಸಿನಿಂದ ಭಾಷೆ – ಸಾಹಿತ್ಯಗಳಲ್ಲಿ ಅಗಾಧ ಪಾಂಡಿತ್ಯವನ್ನು ಗಳಿಸಿದರು.

ಅನೇಕ ಕಾವ್ಯ, ನಾಟಕಗಳನ್ನು ಬರೆದರು. ಐತಿಹಾಸಿಕ ನಾಟಕ ರಚನೆಗೆ ಹೊಸದೊಂದು ಸಂಪ್ರದಾಯವನ್ನು ಹಾಕಿದರು.
ನಾಟಕ ರಚನೆ ಮತ್ತು ನಾಟಕ ರಂಗಗಳಲ್ಲಿನ ಅವರಿಗಿದ್ದ ಅಪಾರ ಪಾಂಡಿತ್ಯ ಹಾಗೂ ಅನುಭವಗಳು ಅಸಾಧಾರಣ ಮತ್ತು ಅಪಾರ. ಐತಿಹಾಸಿಕ ನಾಟಕ ರಚನೆ, ನಿರ್ದೇಶನ, ಮೇಕಪ್, ರಂಗಸಿದ್ಧತೆ ಇತರ ಎಲ್ಲಾ ಆಯಾಮಗಳಲ್ಲೂ ಸಂಸರದು ಅದ್ಭುತ
ಪ್ರತಿಭೆ. ನಾಟಕ ಕಂಪನಿಗಳ ಪರಿಚಯ ಹಾಗೂ ಸಂಪರ್ಕದಿಂದಾಗಿ ಅನೇಕ ನಾಟಕಗಳನ್ನು ನಿರ್ದೇಶಿಸಿ, ಸಂಪೂರ್ಣ ಕಲಾವಿದ ರಾಗಿದ್ದರು. ಸಂಸರದು ಹೊರ ಜಗತ್ತಿಗೆ ಬಿಚ್ಚುಕೊಳ್ಳದ, ಸದ್ದುಗದ್ದಲವಿಲ್ಲದ ಅಲ್ಪತೃಪ್ತ ವ್ಯಕ್ತಿತ್ವ.

ಮೈಸೂರಿನಲ್ಲಿದ್ದ ಸರಸ್ವತಿ ಭಂಡಾರ ಗಳಿಗೆ ಭೇಟಿ ನೀಡಿ ಓದುವುದು ಪ್ರಮುಖ ಹವ್ಯಾಸವಾಯಿತು. ಎಲ್ಲೂ ಒಂದೆಡೆ ನಿಲ್ಲದ ಗುಣ ಸಂಸರದು. ಮೈಸೂರಿನಲ್ಲಿ ಕೆಲಕಾಲ ರೂರಲ್ ಎಲ್ಲಾ ಸ್ಕೂಲ್‌ನಲ್ಲಿ ಮುಖ್ಯೋಪಾಧ್ಯಾಯರಾಗಿಯೂ ಸೇವೆ ಸಲ್ಲಿಸಿದರು. ನಂತರ ಮುಂದೆ ಚಾಮರಾಜನಗರ, ಬೊಂಬಾಯಿ, ಧಾರವಾಡ, ಬೆಂಗಳೂರುಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ಅಲೆಮಾರಿ ಜೀವನ ಸಾಗಿಸುವಂತಾಯಿತು. ಯಾವುದಕ್ಕೂ ಅಂಗಲಾಚುವ ಸ್ವಭಾವ ಸಂಸರದಲ್ಲ. ಅವರ ಅಲೆಮಾರಿ ವ್ಯಕ್ತಿತ್ವ ದಿಂದಾಗಿ ಅವರಿಗೆ ಆರ್ಥಿಕ ಸಂಕಷ್ಟ ಉಂಟಾಯಿತು.

1936ರ ಸಮಯದಲ್ಲಿ ಮೈಸೂರಿನ ರಮಾವಿಲಾಸ ರಸ್ತೆಯ ಸೀತಾರಾಮ ದೇವಸ್ಥಾನದ ಹಿಂಭಾಗದಲ್ಲಿದ್ದ ಮೂಲೆಯ ಕೊಠಡಿ ಯಲ್ಲಿ ಕೆಲವು ಕಾಲ ಏಕಾಂಗಿಯಾಗಿಯೇ ವಾಸವಾಗಿದ್ದರು. ಕುಟುಂಬದ ಸಂಬಂಧಿಕರೊಡನೆ ಅತೀ ಕಡಿಮೆಯ ಸಂಪರ್ಕ, ಹಾಗೇನಾದರೂ ಸಂಪರ್ಕವಿದ್ದವರೊಡನೆ ಅವಶ್ಯವಿದ್ದಷ್ಟೇ ಮಾತು. ಮೌನವೇ ಹೆಚ್ಚು. ಓದುವುದರಲ್ಲೇ ಹೆಚ್ಚು ಆಸಕ್ತಿ. ಅವರು ಸಮಯವನ್ನು ಬಹುಪಾಲು ವ್ಯಾಸಂಗ, ಚಿಂತನೆಯಲ್ಲಿ ಹಾಗೂ ಆಗಾಗ ಒಂದಿಷ್ಟು ಬರವಣಿಗೆಯಲ್ಲಿ ತೊಡಗಿಸಿಕೊಂಡು ಯಾರೊಡನೆಯೂ ಒಣ ಹರಟೆಗೆ ಸಿಕ್ಕಿಕೊಳ್ಳುತ್ತಿರಲಿಲ್ಲ.

ಪ್ರತಿನಿತ್ಯ ಅರಮನೆಯಲ್ಲಿನ ಸರಸ್ವತಿ ಭಂಡಾರ ಗ್ರಂಥಾಲಯಕ್ಕೆ ಹಾಗೂ ಓರಿಯಂಟಲ್ ಲೈಬ್ರರಿಗೆ ಭೇಟಿ ತಪ್ಪಿದ್ದಲ್ಲ. ಬೆಳಗ್ಗೆ
ಯಿಂದ ಸಂಜೆವರೆಗೆ ಕುಳಿತು ಓದುತ್ತಾ ಟಿಪ್ಪಣಿಗಳನ್ನು ಗುರುತು ಹಾಕಿಕೊಳ್ಳುವುದರಲ್ಲೇ ಮಗ್ನರಾಗಿರುತ್ತಿದ್ದರು. ಕನ್ನಡ ಭಾಷೆಯಲ್ಲಿ ಸಂಸರಿಗೆ ಅಗಾಧ ವಿದ್ವತ್ತು ಇತ್ತು. ಹಾಗೆಯೇ ಇಂಗ್ಲೀಷ್ ಭಾಷೆಯಲ್ಲೂ ಕಾದಂಬರಿ ಬರೆಯುವಷ್ಟು ಪ್ರಾವೀಣ್ಯತೆ ಸಹ ಇತ್ತು.

ತಮಿಳು ಭಾಷೆಯಲ್ಲೂ ಪಾಂಡಿತ್ಯ ಹೊಂದಿದ್ದು, ಸಂಸ್ಕೃತವನ್ನೂ ಚೆನ್ನಾಗಿಯೇ ಕಲಿತಿದ್ದರು. ತಕ್ಕ ಮಟ್ಟಿಗೆ ಜೋತಿಷ್ಯವನ್ನೂ ತಿಳಿದಿದ್ದರಂತೆ. ಚಿಕ್ಕಂದಿನಿಂದಲೇ ಸಂಸರು ಛಂದೋಬದ್ಧವಾಗಿ ಕತೆ ರಚಿಸುತ್ತಿದ್ದರು. ಇವರ ಶಾಲಾ ದಿನಗಳಲ್ಲೇ ರಚನೆಯಾದ ನಾಟಕ ಸುಗುಣ ಗಂಭೀರ. ಸಂಸರ ಮೊದಲ ಕಾದಂಬರಿ ಕೌಶಲ 1917ರಲ್ಲಿ ಪ್ರಕಟವಾಯಿತು. ಶ್ರೀಮಂತೋದ್ಯಾನವರ್ಣನಂ ಎಂಬ ಕಾವ್ಯ ರಚನೆಯನ್ನೂ ಮಾಡಿದರು.

ವ್ಯವಹಾರಿಕವಾಗಿ ಸಂಸರಿಗೆ ಹಲವಾರು ಉರು ನಾಮಧೇಯಗಳಿದ್ದವು. 1925ರಲ್ಲಿ ಗಡ ಕ್ರಮರಾಯ ನಾಟಕದ ಹಸ್ತ ಪ್ರತಿಯನ್ನು ಕಂಸ ಎಂಬ ಕಾವ್ಯನಾಮದಿಂದ ಪ್ರಕಟಿಸುವಂತೆ ಪ್ರಬುದ್ಧ ಕರ್ನಾಟಕ ಪತ್ರಿಕೆಯ ಸಂಪಾದಕರಿಗೆ ಪ್ರಕಟಣೆಗಾಗಿ ನೀಡಿದಾಗ ಅಂದು ನೌಕರನು ಮಾಡಿದ ಮುದ್ರಣ ದೋಷದಿಂದ ಕಂಸ ಎಂಬ ಅವರ ಕಾವ್ಯನಾಮ ಸಂಸ ಎಂದು ತಪ್ಪಾಗಿ ಮುದ್ರಿತ ವಾಯಿತು. ಒಂದು ರೀತಿಯಲ್ಲಿ ತಪ್ಪಾಗಿ ಮುದ್ರಿತವಾಗಿದ್ದ ಸಂಸ ಕಾವ್ಯನಾಮವನ್ನೇ ಮುಂದೆ ಅವರ ಎಲ್ಲಾ ಕೃತಿಗಳಲ್ಲೂ ಮುಂದುವರಿಸಿದ ಪರಿಣಾಮ ಸಂಸ ಎಂದೇ ನಾಮಧೇಯವಾಯಿತು.

ವಿಶೇಷವೆಂದರೆ ಅವರ ಕೃತಿಗಳ ಪೈಕಿ ಅವರಿಗೆ ಹೆಚ್ಚು ಜನಪ್ರಿಯತೆ ತಂದು ಕೊಟ್ಟಿದ್ದು ಗಡಕ್ರಮರಾಯ ನಾಟಕ. ಮೈಸೂರಿನ ಪಿತಾಮಹ ಎಂದೇ ಖ್ಯಾತರಾಗಿದ್ದ ಸ್ವಾತಂತ್ರ್ಯ ಹೋರಾಟಗಾರರಾದ ಎಂ. ವೆಂಕಟಕೃಷ್ಣಯ್ಯ, ಅಂಬಳೆ ನರಸಿಂಹಯ್ಯಂಗಾರ್, ಎಚ್.ವಿ.ನಂಜುಂಡಯ್ಯರವರ ಮಾರ್ಗದರ್ಶನದಂತೆ 1916 ರಲ್ಲಿ ಅರಗಿಣಿ ಎಂಬ ಪತ್ರಿಕೆಯನ್ನು ಪ್ರಾರಂಭಿಸಿ ಮುದ್ರಣ ಗೊಂಡರೂ ಆರ್ಥಿಕ ಮುಗ್ಗಟ್ಟಿನಿಂದ ಹೊರತರಲಾಗದೆ ಅಲ್ಲಿಗೇ ನಿಂತು ಹೋಯಿತು.

ಜೀವನಕ್ಕೆ ಅನ್ಯ ಮಾರ್ಗವಿಲ್ಲದೆ ತಮ್ಮ 22ನೇ ವಯಸ್ಸಿನಲ್ಲಿ ಸಂಸರು ಉದ್ಯೋಗ ಅರಸ ಬೇಕಾಯಿತು. ಕೆಲವು ವರ್ಷಗಳ ಕಾಲ ನಿರುದ್ಯೋಗಿಯಾಗಿ ನಂತರ ಹಲವಾರು ಒದಗಿಬಂದ ಉದ್ಯೋಗ ಗಳಲ್ಲಿ ಕೆಲಸ ಮಾಡಬೇಕಾಯಿತು. ಮೈಸೂರಿನ ಸ್ವಾತಂತ್ರ್ಯ ಹೋರಾಟಗಾರರಾದ ಅಗರಂ ರಂಗಯ್ಯ ನವರ ಸಾಧಿ ಪತ್ರಿಕೆಯಲ್ಲಿಯೂ ಸಹ ಕೆಲಸಕ್ಕೆ ಸೇರಿ ಸ್ವಲ್ಪ ಕಾಲ ಕೆಲಸ ನಿರ್ವಹಿಸಿದರು. ನಂತರ ಧಾರವಾಡಕ್ಕೆ ತೆರಳಿ ಸ್ವಲ್ಪ ಕಾಲ ಇದ್ದರೆಂದು ತಿಳಿದುಬರುತ್ತದೆ.

ಮತ್ತೆ ಮರಳಿ ಮೈಸೂರಿನ ಶಾರದಾವಿಲಾಸ ಶಾಲೆಯಲ್ಲಿ ಕನ್ನಡ ಪಂಡಿತರ ಕೆಲಸಕ್ಕೆ ಸೇರಿದರು. ತಮ್ಮ ಅನುಮತಿ ಪಡೆಯದೆ ಗಡ ಕ್ರಮರಾಯ ನಾಟಕವನ್ನು ಹೊರ ಊರೊಂದರಲ್ಲಿ ಆಡಿಸಿದರೆಂದು ಕೆಲವು ದಿನಗಳಲ್ಲೇ ಶಾರದಾ ವಿಲಾಸ ಶಾಲೆಯ ಕೆಲಸಕ್ಕೂ ರಾಜೀನಾಮೆ ಕೊಟ್ಟು ಹೊರಬಂದರು.

1931ರ ಜೂನ್ ತಿಂಗಳಲ್ಲಿ ನಾಟಕ ಶಿರೋಮಣಿ ವರದಾಚಾರ್ಯರ ಕಂಪನಿಯವರು ದಿವಾನ್ ಮಿರ್ಜಾ ಇಸ್ಮಾಯಿಲ್‌ರವರ ಸಮ್ಮುಖದಲ್ಲಿ ಗಡ ಕ್ರಮರಾಯ ನಾಟಕವನ್ನು ಪ್ರದರ್ಶಿಸಿ ಮೆಚ್ಚುಗೆ ಗಳಿಸಿದರು. ಹೀಗಾಗಿ ನಾಟಕದ ವಿಷಯವು ಮೈಸೂರು ಸಂಸ್ಥಾನದ ಶ್ರೀಮನ್ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ಕಿವಿಗಳಿಗೂ ಬಿದ್ದಿತು.

ಅಂದಿನಿಂದ ನಾಟಕವನ್ನು ನೋಡುವ ಆಸಕ್ತಿ ಅವರಿಗೂ ಉಂಟಾಯಿತು. ಒಮ್ಮೆ ಸಮಾರಂಭವೊಂದರಲ್ಲಿ ವರದಾಚಾರ್ಯ ರನ್ನು ನೋಡಿದ ಮಹಾರಾಜರು ನಾಟಕವನ್ನು ನೋಡುವ ಇಂಗಿತವನ್ನು ವ್ಯಕ್ತಪಡಿಸಿದರು. ನಂತರ ರಾಜಾಜ್ಞೆಯಂತೆ ನಾಟಕ ಪ್ರದರ್ಶನದ ಸಿದ್ಧತೆಗಳು ನಡೆದವು. ಸಂಸರೇ ನಾಟಕದ ನಿರ್ದೇಶನದ ಹೊಣೆ ಹೊತ್ತರು. ಮಹಾರಾಜರ ಸಮ್ಮುಖದಲ್ಲಿ ಗಡ ಕ್ರಮರಾಯ ನಾಟಕ ಪ್ರದರ್ಶನವು ಜಗನ್ಮೋಹನ ಅರಮನೆಯಲ್ಲಿ ನಡೆಯಿತು. ನಾಟಕ ಬರೆದವರನ್ನು ರಂಗಕ್ಕೆ ಬರಹೇಳಿ,
ಅವರನ್ನು ನೋಡಿ ಅವರಿಗೆ ಸನ್ಮಾನ ಮಾಡಬೇಕೆಂದು ಅಪ್ಪಣೆಯಾಯಿತು.

ಅಷ್ಟರಲ್ಲೇ ಸಂಸರು ಜಗನ್ಮೋಹನ ಅರಮನೆಯಿಂದ ಹೊರಟು ಹೋಗಿದ್ದರು. ಯಾವುದೇ ಸನ್ಮಾನ, ಹೊಗಳಿಕೆಯನ್ನು
ಸಂಸರು ಇಷ್ಟಪಡುತ್ತಿರಲಿಲ್ಲ. ಇವರಿಗೆ ಆ ಕಾಲದ ಸಾಹಿತ್ಯಲೋಕದ ದಿಗ್ಗಜರುಗಳಾದ ಟಿ.ಎಸ್. ವೆಂಕಣ್ಣಯ್ಯ, ಮಂಜೇಶ್ವರ
ಗೋವಿಂದಪೈ, ಪಂಜೆ ಮಂಗೇಶರಾಯರು, ಜಿ.ಪಿ.ರಾಜರತ್ನಂ ಮುಂತಾದವರೊಡನೆ ಒಡನಾಟವಿತ್ತು. ಹಾಗೂ ಖ್ಯಾತ ನಟರು, ನಿರ್ದೇಶಕರಾದ ಟಿ.ಪಿ.ಕೈಲಾಸಂ, ಎಚ್.ಎಲ್.ಎನ್.ಸಿಂಹ, ಬಿ.ಆರ್.ಪಂತುಲು ಹಾಗೂ ಮಹಮದ್ ಫೀರ್ ಸಾಹೇಬರ
ನಾಟಕ ಕಂಪನಿ ಜತೆ ನಿಕಟ ಪರಿಚಯವಿತ್ತು.

1918ರಲ್ಲಿ ಬೆಂಗಳೂರಿನ ಎಡಿಎ ಎಂಬ ಸಂಸ್ಥೆಯ ಆಶ್ರಯದಲ್ಲಿ ನಡೆದ ಅಖಿಲ ಭಾರತ ನಾಟಕ ಸಮ್ಮೇಳನದ ಅಂಗವಾಗಿ ಯುವರಾಜ ಶ್ರೀ ಕಂಠೀರವ ನರಸರಾಜ ಒಡೆಯರ್‌ರವರ ಹೆಸರಿನಲ್ಲಿ ಕನ್ನಡ ನಾಟಕ ರಚನೆಯ ಸ್ಪರ್ಧೆಯನ್ನು ಏರ್ಪಡಿಸಿತ್ತು. ಈ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಟಿ.ಪಿ. ಕೈಲಾಸಂ ರವರ ಟೊಳ್ಳುಗಟ್ಟಿಗೂ, ಎರಡನೇ ಬಹುಮಾನ ಸಂಸರ ಸುಗುಣ ಗಂಭೀರ ನಾಟಕಕ್ಕೂ ಲಭಿಸಿದವು.

ನಂತರ 1933ರಲ್ಲಿ ಸುಗುಣ ಗಂಭೀರ ನಾಟಕವು ಪುಸ್ತಕ ರೂಪವಾಗಿ ಹೊರಬಂದಿತು. ಇವರ ಪ್ರಮುಖ ನಾಟಕಗಳಾದ ಬಿರುದೆಂತೆಂಬರ ಗಂಡ, ಬೆಟ್ಟದ ಅರಸು, ಸುಗುಣ ಗಂಭೀರ, ಗಡ ಕ್ರಮರಾಯ, ಜಯನಾರಸಿಂಹ, ಮಂತ್ರಶಕ್ತಿ ಹಾಗೂ ಕಾದಂಬರಿ
ಕೌಶಲ, ಪ್ರಮುಖ ಕಾವ್ಯಗಳು ಶ್ರೀಮಂತೋಧ್ಯಾನ ವರ್ಣನಂ, ಸಂಸಪದಂ, ಐತಿಹಾಸಿಕ ಜೀವನ ಚರಿತ್ರೆಯಾದ ಮುಮ್ಮಡಿ ಕೃಷ್ಣರಾಜ ಭೂಪಾಲ, ನರಕ ದುರ್ಯೋಧನೀಯಂ, ಅಚ್ಚುಂಬ ಶತಕ ಕೃತಿಗಳು ಮಾತ್ರ ಲಭ್ಯವಾದವು. ತಾವು ರಚಿಸಿದ
ಹಲವಾರು ಕೃತಿಗಳನ್ನು ತಾವೇ ನಾಶಪಡಿಸಿದ ಹಲವಾರು ನಿದರ್ಶನಗಳು ಕಂಡುಬಂದಿದೆ.

1935ರ ಫೆಬ್ರವರಿ ತಿಂಗಳಲ್ಲಿ ಅಂದಿನ ಮದ್ರಾಸ್ ಸರಕಾರದಿಂದ ಪಾಸ್‌ಪೋರ್ಟ್ ಪಡೆದು ಸುಮಾರು ಎರಡೂವರೆ ತಿಂಗಳ ಕಾಲ ಕ್ವೆಟ್ವಾದಲ್ಲಿ ಕೆಲಸಕ್ಕೆ ಹೋಗಿದ್ದರು. ಸಂಸರಿಗೆ ಹಣಕಾಸಿನ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಪೊಲೀಸರು ಅವರನ್ನು
ಅನುಮಾನಿಸಿ ಹಿಂಬಾಲಿಸುತ್ತಿದ್ದಾರೆ ಎಂಬ ಆತಂಕ ಬಹಳ ಕಾಲದವರೆಗೆ ಅವರಲ್ಲಿ ಆವರಿಸಿತ್ತು. ಹೀಗಾಗಿ ಗೊತ್ತುಗುರಿಯಿಲ್ಲದ ಅಲೆದಾಟ, ತಾನಾರೆಂಬುದನ್ನು ಎಲ್ಲರಿಂದಲೂ ಮರೆಮಾಚುವ ಪ್ರಯತ್ನ ಮಾಡುತ್ತಿದ್ದರು. ಆದರೆ ಅದು ಅವರ ಭ್ರಮೆ ಮಾತ್ರವಾಗಿತ್ತು.

ಅವರಿಗೆ ಕೆಲಸ ಸಿಗುವುದು ಕಷ್ಟವಾಯಿತು. ಸಿಕ್ಕಿದ ಕೆಲಸಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ. ವಿದ್ಯಾಭ್ಯಾಸ ನಿಂತಿದ್ದ ರಿಂದ ಖಾಯಂ ಕೆಲಸಕ್ಕೆ ಬೇಕಾದ ಪ್ರಮಾಣ ಪತ್ರಗಳು ಅವರಲ್ಲಿರಲಿಲ್ಲ. ಆದರೂ ಉಪಾಧ್ಯಾಯ ವೃತ್ತಿಯಲ್ಲೂ, ಗುಮಾಸ್ತಗಿರಿ ಯಲ್ಲೂ ಕೆಲಸ ಮಾಡಿ ಅವರು ದಕ್ಷ ಎಂದು ಹೆಸರು ಗಳಿಸಿದ್ದರು.

ಮತ್ತೆ ಪ್ರೆಸ್‌ನಲ್ಲಿಯೂ ಆಪರೇಟರ್ ಆಗಿ ದುಡಿಯುತ್ತಿದ್ದರು. ಡರ್ಬನ್‌ನಲ್ಲಿ ಕಾರ್ಮಿಕನಾಗಿಯೂ, ಈಜಿಪ್ಟ್‌ನಲ್ಲಿ ಗುಮಾಸ್ತ ರಾಗಿಯೂ ನಂತರ ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿಯೂ ಕೆಲವು ಕಾಲ ಇದ್ದು ಕೆಲಸ ಮಾಡಿಯೂ ಎಲ್ಲೂ ನೆಲೆಯನ್ನು
ಕಂಡು ಕೊಳ್ಳಲಾಗಲಿಲ್ಲ. ಬದುಕಿನಲ್ಲಿ ಬಹಳಷ್ಟು ಏಳುಬೀಳು ಕಂಡ ಸಂಸರಿಗೆ ಒಮ್ಮೆ ಅನಿಸಿದ್ದು ಬದುಕಿದರೂ ಸಮ, ಇಲ್ಲದಿದ್ದರೂ ಸಮ. ಬಾಳಿನಲ್ಲಿಯೂ ಅರ್ಥವಿಲ್ಲ, ಸಾವಿನಲ್ಲೇನಾದರೂ ಅರ್ಥರಬಹುದೇ ಎಂಬ ಯೋಚನೆ ತಾನೇ
ತಾನಾಗಿ ಮಾನಸಿಕ ದೌರ್ಬಲ್ಯ ಉಂಟಾಯಿತು.

ಹಾಗಾಗಿ 1920ರಲ್ಲಿ ಕಾಶಿಗೆ ಹೋದಾಗ ಗಂಗೆಗೆ ಹಾರಿ ಆತ್ಮಹತ್ಯೆಯ ವಿಫಲ ಯತ್ನ ಮಾಡಿದ್ದರು. 1936ರಲ್ಲಿ ಬೆಂಗಳೂರಿ ನಲ್ಲಿಯೂ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಅಂತಿಮವಾಗಿ 1939ರ ಫೆ.14ರಂದು ಮೈಸೂರಿನ ಸದ್ವಿದ್ಯಾ ಪಾಠಶಾಲೆಯಲ್ಲಿ ತಾವು ತಂಗಿದ್ದ ಕೊಠಡಿಯಲ್ಲಿ ಆತ್ಮಹತ್ಯೆಗೆ ಶರಣಾದರು.

Leave a Reply

Your email address will not be published. Required fields are marked *