Tuesday, 18th January 2022

ಕಾಂಚಾಣದ ಸದ್ದು ಅಡಗಲಿ

VIdhana Parishad

ರಾಜ್ಯಾದ್ಯಂತ ವಿಧಾನ ಪರಿಷತ್ ಅಖಾಡ ರಂಗೇರುತ್ತಿದ್ದು, ಎಲ್ಲ ಪಕ್ಷಗಳೂ ಅತಿ ಹೆಚ್ಚು ಸೀಟುಗಳನ್ನು ಗೆಲ್ಲಲೇಬೇಕು ಎಂದು ಶತಾಯ ಗತಾಯ ಪ್ರಯತ್ನಿಸುತ್ತಿವೆ. ಆಡಳಿತಾರೂಢ ಬಿಜೆಪಿಯು ಉಪಚುನಾವಣೆಯಲ್ಲಿ ಆದ ಡ್ಯಾಮೇಜ್‌ನ್ನು ಈ ಚುನಾವಣೆಯಲ್ಲಿ ಹೆಚ್ಚು ಸೀಟು ಗೆಲ್ಲುವ ಮೂಲಕ ಕಂಟ್ರೋಲ್ ಮಾಡಲು ಮುಂದಾ ಗಿದ್ದರೆ, ಪ್ರತಿಪಕ್ಷ ಕಾಂಗ್ರೆಸ್‌ನ ನಾಯಕರು ಸಿಎಂ ಬೊಮ್ಮಾಯಿ ಅವರ ನಾಯಕತ್ವ ವನ್ನು ಠುಸ್ ಮಾಡಲು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿ ದ್ದಾರೆ.

ಇನ್ನು ಜೆಡಿಎಸ್ ತನ್ನ ಸೀಮಿತ ಪ್ರದೇಶದಲ್ಲಿ ಸೀಮಿತ ರಾಜಕಾರಣ ಮುಂದುವರಿಸಿದ್ದು, ತನ್ನ ಸೀಟುಗಳನ್ನು ಭದ್ರಪಡಿಸಿಕೊಳ್ಳಲು ಹೆಣಗಾಡು ತ್ತಿದೆ. ಹೀಗಾಗಿ ಸಹಜವಾಗಿಯೇ ಪರಿಷತ್ ಚುನಾವಣೆಯಲ್ಲಿ ಕಾಂಚಾಣದ ಸದ್ದು ಜೋರಾಗಿಯೇ ಕೇಳಿ ಬರುತ್ತಿದೆ. ಅದಕ್ಕೆ ಪುಷ್ಠಿ ಎಂಬಂತೆ, ಮೈಸೂರಿನಲ್ಲಿ ಪತ್ರಕರ್ತರು ಏರ್ಪಡಿಸಿದ್ದ ಸಂವಾದದಲ್ಲಿ ‘ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾರರಿಗೆ ಹಣ ಹಂಚುವುದಿಲ್ಲ ಎಂದು ದೇವರ ಹೆಸರಿನಲ್ಲಿ ಪ್ರಮಾಣ ಮಾಡುವಿರಾ?’ ಎಂಬ ಮಾಧ್ಯಮದವರ ಪ್ರಶ್ನೆಗೆ, ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಅಭ್ಯರ್ಥಿಗಳು ಸರಿಯಾಗಿ ಉತ್ತರಿಸಲು ಹಿಂದೇಟು ಹಾಕಿದ್ದಾರೆ. ಅಂದರೆ ಮತದಾರ ರಿಗೆ ಹಣ ಹಂಚುತ್ತೇವೆ ಎಂದು ಪರೋಕ್ಷವಾಗಿ ಇವರೆಲ್ಲ ಒಪ್ಪಿಕೊಂಡಂತಲ್ಲವೇ? ಮತದಾರರಿಗೆ ಹಣ ಹಂಚದೆ ಯಾವ ಚುನಾವಣೆಯೂ ನಡೆಯುವುದಿಲ್ಲ ವೆಂದು ಎಲ್ಲ ಪಕ್ಷಗಳೂ ನಿರ್ಧರಿಸಿದಂತಿದೆ.

ಹೀಗಾಗಿ ಹಣ ಹಂಚಿಕೆ ಎಂಬುದು ಚುನಾವಣೆಯ ಭಾಗವೇ ಆಗಿಬಿಟ್ಟಿದೆ. ಆದರೆ ಮುಂದಿನ ಮುಂಚೂಣಿ ರಾಜಕಾರಣಿಗಳಾಗಲಿರುವ ಇಂದಿನ ಗ್ರಾಮ ಪಂಚಾಯಿತಿ ಸದಸ್ಯರು ಹೊಸ ಬದಲಾವಣೆಯೊಂದನ್ನು ಈ ಚುನಾವಣೆಯಿಂದಲೇ ಪ್ರಾರಂಭಿಸಬೇಕಿದೆ. ಅವೆರೆಲ್ಲರೂ ಮತಪೆಟ್ಟಿಗೆಯಲ್ಲಿ ಹಾದು ಬಂದಿರುವುದರಿಂದ ಚುನಾವಣೆಗಳ ಕಷ್ಟ ನಷ್ಟ ಅನುಭವಿಸಿರುತ್ತಾರೆ.

ಮುಂದಿನ ರಾಜಕೀಯ ಜೀವನದಲ್ಲೂ ಚುನಾವಣೆಗಳನ್ನು ಎದುರಿಸಲಿರುವ ಅವರಲ್ಲಿ ಅನೇಕರು ಹಣ ಹಂಚಿಕೆಯ ಬಲಿಪಶುಗಳಾಗುವುದನ್ನು ತಪ್ಪಿಸಬೇಕಾದರೆ, ಇಂದು ಅವರ ಹಣ ಪಡೆಯದೇ ಮತ ಚಲಾಯಿಸಬೇಕಿದೆ. ‘ಚುನಾವಣೆಗಳಲ್ಲಿ ನಾನು ಹಣ ಪಡೆಯಲ್ಲ, ಹಣ ಕೊಡಲ್ಲ’ ಎಂಬ ನಿರ್ಧಾರಕ್ಕೆ ಈಗಲೇ ಬರಬೇಕಿದೆ. ಚಿಂತಕರ ಚಾವಡಿಗೆ ಹೋಗುವ ನಾಯಕರು ಅಂತಹ ವಾತಾವರಣ ಸೃಷ್ಟಿ ಮಾಡಬೇಕು. ಇಲ್ಲವಾದಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗುತ್ತದೆ.