Friday, 9th December 2022

ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಕಂಡು ಕಮಲಕ್ಕೆ ಉರಿ: ಪರಂ ಕಿಡಿ

ತುಮಕೂರು: ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆ ಕಂಡು ಕಮಲ ಪಕ್ಷಕ್ಕೆ ಉರಿ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ. ಪರಮೇಶ್ವರ್ ತಿಳಿಸಿದರು.
ಭಾರತ ಜೋಡೋ ಯಾತ್ರೆ ಇಂದಿನ ಸಮಾಜಕ್ಕೆ ಅಗತ್ಯವಾಗಿದ್ದು, ದ್ವೇಷ ತುಂಬಿರುವ ಸಮಾಜದಲ್ಲಿ ಶಾಂತಿಗಾಗಿ ನಡೆಯು ತ್ತಿರುವ ಯಾತ್ರೆಗೆ ಜನಬೆಂಬಲ ದೊರೆತಿದೆ ಎಂದು  ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ್ ಜೋಡೋ ಯಾತ್ರೆ ಆರಂಭವಾದ ನಂತರ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಸಮಾಜದಲ್ಲಿ ಸಾಮರಸ್ಯ ಕಾಪಾಡಲು ರಾಹುಲ್ ಗಾಂಧಿ ಹೆಜ್ಜೆ ಹಾಕುತ್ತಿದ್ದು, ಜನಸಾಮಾನ್ಯರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ಬೆಂಬಲ ತೋರು ತ್ತಿದ್ದಾರೆ ಎಂದರು.
ಭಾರತ ಯುವಕರ ರಾಷ್ಟ್ರ, ನಿರುದ್ಯೋಗ ಸಮಸ್ಯೆ ತೀವ್ರವಾಗಿದ್ದು, ಜ್ವಲಂತ ಸಮಸ್ಯೆ ಗಳಿಗೆ, ಆರ್ಥಿಕ ವ್ಯವಸ್ಥೆ ಸರಿಪಡಿಸಲು ಕೇಂದ್ರ ರ‍್ಕಾರ ಮುಂದಾಗುತ್ತಿಲ್ಲ. ಕೆಲವರ ಆಸ್ತಿ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ದೇಶದ ಶೇ.1 ರಷ್ಟು ಜನರ ಕೈಯಲ್ಲಿ ದೇಶದ ಆರ್ಥಿಕತೆ ಇದೆ. ಅಸಮತೋಲನದ ಆರ್ಥಿಕತೆಯಿಂದ ಸಾಮಾನ್ಯ ಜನರಿಗೆ ಉಪಯೋಗ ಇಲ್ಲದಂತಾಗಿದೆ ಎಂದರು.
ಕೃಷಿ ಉತ್ಪನ್ನ ಇಳಿಮುಖವಾಗಿದ್ದು, ಆಡಳಿತದಲ್ಲಿ ವಿಪರೀತ ಭ್ರಷ್ಟಾಚಾರವಾಗುತ್ತಿದ್ದು, ಲೋಕಾಯುಕ್ತದಂತಹ ಸಂಸ್ಥೆಯಲ್ಲಿ ಕೆಲಸ ಮಾಡಲು ಆಗದಂತಹ ವಾತಾವರಣ ಇದೆ. ದೇಶದ ಪರಿಸ್ಥಿತಿ ಜನಸಾಮಾನ್ಯರಿಗೆ ತಿಳಿಸುವ ನಿಟ್ಟಿನಲ್ಲಿ ರಾಹುಲ್‌ಗಾಂಧಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದರು.
ಭಾರತದ ಸಂವಿಧಾನಕ್ಕೆ ವಿರೋಧವಾಗಿ ಆಡಳಿತ ಬಿಜೆಪಿ ಸರಕಾರ ನಡೆದುಕೊಳ್ಳುತ್ತಿದೆ. ಸಮಾನತೆ, ಸಾಮರಸ್ಯವನ್ನು ಅಲುಗಾಡಿ ಸುವ ಈ ಆಡಳಿತದ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸಬೇಕಿದೆ. ಸಾವಿರಾರು ಮಂದಿ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುವ ಮೂಲಕ ಅಭೂತ  ಬೆಂಬಲ ದೊರೆತಿದೆ ಎಂದು ಹೇಳಿದರು.
ಅಗತ್ಯ ತಯಾರಿ: ಶನಿವಾರ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಜಿಲ್ಲೆಗೆ ಆಗಮಿಸಲಿದ್ದು, ಟಿ.ಬಿ. ಕ್ರಾಸ್‌ನಿಂದ ಬಾಣಸಂದ್ರವರೆಗೆ, ಭಾನುವಾರ ಕೆ.ಬಿ.ಕ್ರಾಸ್‌ನಿಂದ ಬರಕನಾಳ್ ವರೆಗೆ ಪಾದಯಾತ್ರೆ ನಡೆಯಲಿದೆ. ಸೋಮವಾರ ಹುಳಿಯಾರು ಮೂಲಕ ಹಿರಿಯೂರು ತಾಲ್ಲೂಕಿಗೆ ಭಾರತ್ ಜೋಡೋ ಯಾತ್ರೆಗೆ ಸಾಗಲಿದ್ದು, ಕೆಂಕೆರೆಯಿಂದ ಹಿರಿಯೂರುವರೆಗೆ ವಾಹನದಲ್ಲಿ ಪ್ರಯಾಣ ಮಾಡಲಿದ್ದಾರೆ ಎಂದು ವಿವರಿಸಿದರು. ಪಾದಯಾತ್ರೆಯಲ್ಲಿ ಆಗಮಿಸುವ ತಂಡಕ್ಕೆ ಬೇಕಾದ ಅಗತ್ಯ ತಯಾರಿ ಮಾಡಿಕೊಳ್ಳಲಾಗಿದೆ.
25 ಸಾವಿರ ಮಂದಿ ಭಾಗಿ: 
ರಾಜ್ಯದಲ್ಲಿ 521 ಕಿ.ಮೀ. ಯಾತ್ರೆ ಸಾಗಲಿದ್ದು, 500 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಬೇರೆ ಜಿಲ್ಲೆ ಮತ್ತು ತಾಲ್ಲೂಕಿನಿಂದ ಯಾತ್ರೆಯಲ್ಲಿ ಭಾಗವಹಿಸಲಿದ್ದು ಕನಿಷ್ಠ 25 ಸಾವಿರ ಮಂದಿ ಯಾತ್ರೆಯಲ್ಲಿ ಇರಲಿದ್ದಾರೆ ಎಂದರು.
ತುರುವೇಕೆರೆ ತಾಲ್ಲೂಕಿನ ಅರಳೀಕೆರೆ ಪಾಳ್ಯದಲ್ಲಿ ತೆಂಗು ಮತ್ತು ಅಡಿಕೆ ಬೆಳೆಗಾರರೊಂದಿಗೆ ರಾಹುಲ್ ಮಾತುಕತೆ ನಡೆಸಲಿದ್ದು, ತೆಂಗು ಮತ್ತು ಅಡಿಕೆಯ ಪ್ರಗತಿಪರ ರೈತರೊಂದಿಗೆ ಒಂದು ಗಂಟೆ ಸಂವಾದ ನಡೆಸಲಿದ್ದಾರೆ. ತಿಪಟೂರು ತಾಲ್ಲೂಕಿನ ಕಾಡೇನಹಳ್ಳಿ ಗೇಟ್ ಬಳಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆ, ಬೀಡಿ ಕಾರ್ಮಿಕರೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದರು.
ಚಿಕ್ಕನಾಯಕನಹಳ್ಳಿಯಲ್ಲಿ ವಾಲ್ಮೀಕಿ ಜಯಂತಿ ಕರ‍್ಯಕ್ರಮದಲ್ಲಿ ರಾಹುಲ್ ಅವರು ಪಾಲ್ಗೊಳ್ಳಲಿದ್ದು, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯದೊಂದಿಗೆ ಚರ್ಚೆ ನಡೆಸುವ ನಿಟ್ಟಿನಲ್ಲಿ ಮನವಿ ಮಾಡಲಾಗಿದೆ. ಕೇಂದ್ರ ಕಚೇರಿ ಒಪ್ಪಿಗೆ ನಂತರ ಅಂತಿಮಗೊಳ್ಳಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ರಾಮಕೃಷ್ಣ, ಮಾಜಿ ಶಾಸಕ ಡಾ. ರಫೀಕ್ ಅಹಮದ್, ಕೆಪಿಸಿಸಿ ವೀಕ್ಷಕ ಕೇಶವಮರ‍್ತಿ, ಮುಖಂಡರುಗಳಾದ ಮುರುಳೀಧರ ಹಾಲಪ್ಪ, ಇಕ್ಬಾಲ್ ಅಹಮದ್, ಹೊನ್ನಗಿರಿಗೌಡ, ಯಲಚವಾಡಿ ನಾಗರಾಜು, ರಾಯಸಂದ್ರ ರವಿಕುಮಾರ್, ಶಶಿಹುಲಿಕುಂಟೆ ಮಠ, ರೆಡ್ಡಿಚಿನ್ನಯಲ್ಲಪ್ಪ, ನರಸೀಯಪ್ಪ, ಪ್ರಸನ್ನಕುಮಾರ್, ಶಂಕರಾನಂದ ಮತ್ತಿತರರು ಉಪಸ್ಥಿತರಿದ್ದರು.