Tuesday, 27th July 2021

ಗೃಹ ಕೈಗಾರಿಕೆಯಲ್ಲಿ ಬಾಳೆಹಣ್ಣಿನ ಹಲ್ವಾ

ಶಾರದಾಂಭ ವಿ.ಕೆ.

ಲಾಕ್‌ಡೌನ್ ದಿನಗಳಲ್ಲಿ ಕೃಷಿ ಉತ್ಪನ್ನಗಳ ಬೇಡಿಕೆ ಕುಗ್ಗಿತು. ಅಂತಹ ದಿನಗಳಲ್ಲಿ ಕಳಿತ ಬಾಳೆಹಣ್ಣನ್ನು ಉಪಯೋಗಿಸಿ ಮನೆಯಲ್ಲೇ ಸಣ್ಣ ಉದ್ಯಮ
ಆರಂಭಿಸಿದ ಕಥನವೊಂದು ಇಲ್ಲಿದೆ.

ಕಳೆದ ಒಂದು ವರ್ಷದಿಂದ ಆಗಾಗ ನಮ್ಮ ದಿನಚರಿಯ ಮೇಲೆ ಪರಿಣಾಮ ಬೀರಿದ ವಿದ್ಯಮಾನವೆಂದರೆ ಲಾಕ್‌ಡೌನ್. ಉದ್ದಿಮೆ, ವ್ಯವಹಾರ, ಕೃಷಿ ಎಲ್ಲದರ ಮೇಲೆ ಕರೋನಾ ವಿಧಿಸಿದ ದಿಗ್ಬಂಧನವು ಸಾಕಷ್ಟು ಪರಿಣಾಮ ಬೀರಿದೆ. ಆದರೂ ಬದುಕು ನಡೆಯಲೇಬೇಕಲ್ಲವೆ!

ಲಾಕ್‌ಡೌನ್ ಸಮಯದಲ್ಲಿ ಹೊಸ ದಾರಿಯನ್ನು ಕಂಡುಕೊಂಡವರೂ ಕೆಲವರು ಇದ್ದರು. ಕರೋನಾ ಮೊದಲ ಅಲೆಯ ಸಮಯ. ತೋಟದಲ್ಲಿ ಬೆಳೆದ ಬಾಳೆ ಗೊನೆಗಳು ಒಂದೇ ಬಾರಿಗೆ ಹಣ್ಣಾಗಲು ಪ್ರಾರಂಭಿಸಿದವು. ಜನ ಸಂಚಾರ ಹೆಚ್ಚಾಗಿ ಇಲ್ಲದ್ದರಿಂದ ಮತ್ತು ಅಂಗಡಿಗಳು ಹಲವು ದಿನ ಮುಚ್ಚಿದ್ದರಿಂದ, ಮಾರುಕಟ್ಟೆಯಲ್ಲಿ ವರ್ತಕರು ಬಾಳೆಹಣ್ಣನ್ನು ಬಹಳಾ ಕಡಿಮೆ ಬೆಲೆಗೆ ಕೇಳಿದರು. ಇತ್ತ ನೋಡಿದರೆ ಬಾಳೆ ಹಣ್ಣುಗಳು ಒಂದೇ ಸಮನೆ ಮಾಗು ತ್ತಿವೆ. ಈ ಬಾಳೆಹಣ್ಣುಗಳನ್ನು ಏನು ಮಾಡುವುದು? ಕಳಿತ ಬಾಳೆಹಣ್ಣನ್ನು ಉಪಯೋಗಿಸಿ, ಕೃಷಿಗೆ ಬೆಂಬಲ ನೀಡುವ ಆರ್ಥಿಕ ಚಟುವಟಿಕೆಯನ್ನು ನಡೆಸಲು ಸಾಧ್ಯವೆ?

ಮನೆಯಲ್ಲೇ ಉದ್ಯಮ
ಈ ರೀತಿ ಯೋಚಿಸಿದವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕೊಡುಂಗಾಯಿ ಗ್ರಾಮದ ಗೋವಿಂದ ಪ್ರಸಾದ್. ಬಾಳೆಹಣ್ಣನ್ನು ಉಪಯೋಗಿಸಿ ಏನಾದರೂ ಉತ್ಪನ್ನ ತಯಾರಿಸುವ ಕುರಿತಾಗಿ ಮಾಹಿತಿ ಕಲೆಹಾಕಿದರು, ತಿಳಿದವರ ಬಳಿ ವಿಚಾರಿಸಿದರು, ಅಂತರ್ಜಾಲದಲ್ಲಿ ಏನಾದರೂ ಪರಿಹಾರ ದೊರೆಯುತ್ತದೆಯೋ ಎಂದು ಹುಡುಕಿದರು. ಆಗ ಹೊಳೆದದ್ದೇ ಬಾಳೆ ಹಣ್ಣಿನ ಹಲ್ವಾ!

ಗೋವಿಂದಪ್ರಸಾದ್ ವರ ಮನೆಯಲ್ಲಿ ಹಸುವಿನ ತುಪ್ಪ ಇತ್ತು. ಮನೆ ಎದುರಿನ ತೋಟದಲ್ಲಿ ಬಾಳೆಹಣ್ಣು ಗಳು ಒಂದೇ ಸವನೆ ಹಣ್ಣಾಗತೊಡಗಿದ್ದವು. ಇವೆರಡನ್ನೂ ಸೇರಿಸಿ ಅವರು ತಮ್ಮ ಸುಮನಾ ಅವರೊಂದಿಗೆ ಸೇರಿ, ಹಲ್ವಾ ತಯಾರಿಯ ಕಾರ್ಯ ಹಮ್ಮಿಕೊಂಡರು. ಇದಕ್ಕಾಗಿ ಒಂದು ಯಂತ್ರ ಬೇಕಿತ್ತು. ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಹಲ್ವಾ ತಯಾರಿಸಲು ಮೆಷೀನ್ ಅಗತ್ಯವಿದೆ ಎನಿಸಿ ಮಾರುಕಟ್ಟೆಯಲ್ಲಿ ವಿಚಾರಿಸಿದಾಗ ಮೆಷೀನ್ ದುಬಾರಿ ಎನಿಸಿತು.

ಸ್ವತಃ ಎಂಜಿನಿಯರ್ ಆಗಿರುವ ಗೋವಿಂದಪ್ರಸಾದ್, ಗೆಳೆಯ ಮುಳಿಯ ವೆಂಕಟಕೃಷ್ಣ ಶರ್ಮರವರ ಜೊತೆಗೂಡಿ ತಾವೇ ಒಂದು ಯಂತ್ರ ತಯಾರಿಸಲು
ವಿನ್ಯಾಸ ಸಿದ್ಧಪಡಿಸಿದರು. ಅದಕ್ಕೆ ಅಗತ್ಯ ಇರುವ ವಸ್ತುಗಳನ್ನು ಕಲೆಹಾಕಿದಾಗ, ಸಾಕಷ್ಟು ಕಡಿಮೆ ಖರ್ಚಿನಲ್ಲಿ ಒಂದು ಮೆಷೀನ್ ತಯಾರಿಸಿದರು. ಅವರಿಗೆ ಈ ಹಿಂದೆ ಕೆಲವು ಕೃಷಿ ಸಂಬಂಧಿ ಉಪಕರಣಗಳನ್ನು ತಯಾರಿಸಿದ ಅನುಭವವಿತ್ತು. ಹಾಗಾಗಿ ಹಲ್ವಾ ಮಾಡುವ ಮೆಷೀನ್ ಅವರ ಕೈಯಿಂದ ಸರಳವಾಗಿ
ರೂಪು ಗೊಂಡಿತು. ಮನೆಯ ಶುದ್ಧ ತುಪ್ಪ , ತಮ್ಮದೇ ತೋಟದ ಬಾಳೆಹಣ್ಣು , ಸ್ವತಃ ತಯಾರಿಸಿದ ಮೆಷೀನ್ – ಒಂದು ರೀತಿಯ ಸಂತಸದ ಗಳಿಗೆ. ಬಾಳೆಹಣ್ಣನ್ನು ಗ್ರೈಂಡರ್‌ಗೆ ಹಾಕಿ ಪಲ್ಪ್ ತಯಾರಿಸಿದರು.

ಅದಕ್ಕೆ ಅಗತ್ಯ ಎನಿಸುವಷ್ಟು ಸಕ್ಕರೆ , ತುಪ್ಪ, ಏಲಕ್ಕಿ ಎಲ್ಲವನ್ನೂ ಒಟ್ಟು ಯಂತ್ರದಲ್ಲಿ ಹಾಕಿ ತಿರುಗಿಸಿ, ಹಲ್ವಾ ತಯಾರಿಸಿದರು. ನಿಗದಿತ ಸಮಯದಲ್ಲಿ ಫಳ ಫಳ
ಹೊಳೆಯುವ ಕಂದುಬಣ್ಣದ ಹಲ್ವಾ ತಯಾರು. ಇಳಿಸುವ ಸ್ವಲ್ಪ ಮೊದಲು ಗೋಡಂಬಿ ಚೂರುಗಳು. ಬೆಂಕಿ ಶಾಖದಲ್ಲಿ ಕೂರಬೇಕಾದ ಪ್ರಮೇಯವಿಲ್ಲ. ಹದ ನೋಡುತ್ತಾ ಇರಬೇಕೆನ್ನುವ ಗೋಜಿಲ್ಲ.

ಬಾಯಿಂದ ಬಾಯಿಗೆ ಹಬ್ಬಿದ ಸ್ವಾದ
ತಯಾರಾದ ಸ್ವಾದಿಷ್ಟಕರ ಹಲ್ವಾ ವನ್ನು ತುಂಡು ಮಾಡುವುದೊಂದೇ ಕೆಲಸ ಗೋವಿಂದ ಪ್ರಸಾದ್ ದಂಪತಿಗೆ. ಸಕ್ಕರೆ ಬೇಡ ಎನಿಸಿದಾಗ ಉತ್ತಮ ಗುಣಮಟ್ಟದ ಬೆಲ್ಲ ಹಾಕಿದ ಹಲ್ವಾ ಕೂಡಾ ಇವರು ತಯಾರಿಸುತ್ತಾರೆ. ಸುತ್ತ ಮುತ್ತ ಇರುವ ಪರಿಚಿತರು, ಅಕ್ಕಪಕ್ಕದ ಊರಿನವರು ಹಲ್ವಾದ ರುಚಿಗೆ ಮನಸೋತರು.

ಬಾಯಿಯಿಂದ ಬಾಯಿಗೆ ಹಲ್ವಾದ ರುಚಿಯ ಸ್ವಾದ ಹಬ್ಬಿ ಬೇಡಿಕೆ ಹೆಚ್ಚಾಯಿತು. ತಮ್ಮ ಹಾಗೇ ಸಾವಯುವ ರೀತಿಯಲ್ಲಿ ಸುತ್ತಮುತ್ತಲಿನ ರೈತರು ಬೆಳೆದ ಬಾಳೆ ಹಣ್ಣನ್ನು ಖರೀದಿಸಿ ಹಲ್ವಾ ತಯಾರಿಸಿ, ಬೇಡಿಕೆ ಪೂರೈಸುತ್ತಿದ್ದಾರೆ. ‘ಅನಿರುಚಿ’ ಎಂಬ ಹೆಸರಿನಿಂದ ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಿದ ಹಲ್ವಾ ಸುತ್ತಮುತ್ತಲಿ ನವರಿಗೆ ಪರಿಚಿತಗೊಂಡ ನಂತರ, ಹೊರಗಿನವರು ಸಹ ಬೇಡಿಕೆ ಸಲ್ಲಿಸಲಾರಂಭಿಸಿದರು.

ಇಂದು ಮುಂಬೈ, ಗುಜರಾತ್, ಚೆನ್ನೈ ಮೊದಲಾದ ಕಡೆಗಳಿಂದ ಇವರ ಬಾಳೆಹಣ್ಣಿನ ಹಲ್ವಾಕ್ಕೆ ಬೇಡಿಕೆ ಬರುತ್ತಿದೆ. ಮನೆಯಲ್ಲಿ ಬೆಳೆದ ಮತ್ತು ಸುತ್ತಮುತ್ತಲಿನಿಂದ ಖರೀದಿಸಿದ ಬಾಳೆಹಣ್ಣನ್ನು ಖರೀದಿಸಿ ಹಲ್ವಾ ಮಾಡಿ, ಇವರು ಕಳುಹಿಸುತ್ತಿದ್ದಾರೆ. ಕೃಷಿ ಚಟುವಟಿಕೆಗೆ ಪೂರಕವಾಗಿ, ಆರ್ಥಿಕ ಸಹಕಾರ ಇದರಿಂದ ದೊರೆಯು ತ್ತಿದೆ. ಇದೇ ರೀತಿ ಸೀಸನ್‌ನಲ್ಲಿ ಹಲಸಿನ ಹಣ್ಣಿನ ಹಲ್ವಾವನ್ನು ಸಹಾ ಗೋವಿಂದ ಪ್ರಸಾದ್ ತಯಾರಿಸುತ್ತಾರೆ. ಬಾಳೆಹಣ್ಣಿನ ಜಾಮ, ಕಾಯಿಯ ಚಿಪ್ಸ್, ಒಣಗಿಸಿದ ಬಾಳೆಹಣ್ಣು ಹೀಗೆ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದಾರೆ.

ಲಾಕ್‌ಡೌನ್ ಸಮಯದಲ್ಲಿ ಬಾಳೆ ಹಣ್ಣಿನ ಬೇಡಿಕೆ ತಗ್ಗಿದಾಗ ಆರಂಭಿಸಿದ ಹಲ್ವಾ ತಯಾರಿಕೆಯು ಇಂದು ಸಣ್ಣ ಆರ್ಥಿಕ ಚಟುವಟಿಕೆಯಾಗಿ ರೂಪುಗೊಂಡಿದೆ. ಮನೆಯಲ್ಲೇ ಸಣ್ಣ ಪ್ರಮಾಣದ ಉದ್ಯಮ ಆರಂಭಿಸುವವರಿಗೆ ಗೋವಿಂದಪ್ರಸಾದ್ ಅವರ ಸಾಹಸವು ಸೂರ್ತಿ ತುಂಬಬಲ್ಲದು. ಬಾಳೆ ಹಣ್ಣಿನ ಹಲ್ವಾ ತಯಾರಿಕೆಯ
ವಿಧಾನ ತಿಳಿಯಲು ಇವರನ್ನು 7996924431 ಸಂಖ್ಯೆಯಲ್ಲಿ ಸಂಪರ್ಕಿಸಬಹುದು. ಹಳ್ಳಿಯಲ್ಲೇ ಸಣ್ಣ ಮಟ್ಟದ ಸಾಹಸೋದ್ಯಮ ಹುಟ್ಟುಹಾಕುವುದೆಂದರೆ ಇದೇ ಅಲ್ಲವೆ!

Leave a Reply

Your email address will not be published. Required fields are marked *