Tuesday, 27th July 2021

ಬಂದ್: ಚಾಮರಾಜನಗರದಲ್ಲಿ ಉತ್ತಮ ಪ್ರತಿಕ್ರಿಯೆ

ಚಾಮರಾಜನಗರ : ಭೂಸುಧಾರಣಾ ಕಾಯ್ದೆ ಹಾಗು ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಕರೆ ನೀಡಲಾಗಿದ್ದ ಚಾಮರಾಜ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಂದ್ ಯಶಸ್ವಿಯಾಗಿದ್ದು ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾ ಕೇಂದ್ರ ಹಾಗು ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಹಾಗು ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಅಗತ್ಯ ವಸ್ತು ಹಾಗು ಸೇವೆ ಹೊರತು ಪಡಿಸಿ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು‌ ಬೆಳಿಗ್ಗೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಒಂದೆರೆಡು ಬಸ್ ಗಳು ಮೈಸೂರಿಗೆ ಹೊರಟವು. ಈ ವೇಳೆ ರೈತರು ಪ್ರತಿಭಟನೆ ನಡೆಸಿದಾಗ ಬಸ್ ಸಂಚಾರ ಸ್ಥಗಿತಗೊಳಿಸಲಾಯ್ತು.

ಬೆಳಿಗ್ಗೆ ವಿವಿಧ ಸಂಘಟನೆಗಳ ಕಾರ್ಯಕರ್ತರು ವಿವಿದೆಡೆ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆಯ ಕಾವು ಹೆಚ್ಚಿಸಿದರು. ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗ ರೈತರು ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸುತ್ತಿದ್ದಾಗ ಪೊಲೀಸರು ನೀರು ಹಾಕಿ ಬೆಂಕಿ ನಂದಿಸಿದರು. ಈ ವೇಳೆ ಪೊಲೀಸರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ರೈತರು ಬಿಜೆಪಿ ಕಾಂಗ್ರೆಸ್ ಪಕ್ಷಗಳು ಹೀಗೆ ಪ್ರತಿಭಟನೆ ನಡೆಸಿದಾಗ ಹೀಗೆಯೇ ಬೆಂಕಿ ನಂದಿಸಿದ್ದೀರಾ ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್ಯಾಲಿ ನಡೆಸಿದ ರೈತರು ಹಾಗು ವಿವಿಧ ಸಂಘಟನೆಗಳ ಕಾರ್ಯಕರ್ತರು ತೆರೆದಿದ್ದ ಕೆಲವು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಸಹಕರಿಸುವಂತೆ ಕೈಮುಗಿದು ಮನವಿ ಮಾಡುತ್ತಿದ್ದ ದೃಶ್ಯ ಕಂಡು ಬಂತು. ತೆರೆದಿದ್ದ ಹೊಟೇಲ್ ಒಂದರ ಮುಂದೆ ನಿಜಧ್ವನಿ ಹೋರಾಟ ಸಮಿತಿಯ ಗೋವಿಂದರಾಜು ಎಂಬುವವರು ದೀರ್ಘ ದಂಡ ನಮಸ್ಕಾರ ಹಾಕಿ ಬಂದ್ ಬೆಂಬಲಿಸುವಂತೆ ಮನವಿ ಮಾಡಿದ್ದು ವಿಶೇಷವಾಗಿತ್ತು .

ಗುಂಡ್ಲುಪೇಟೆಯಲ್ಲಿ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯ್ತು. ಬಂದ್ ವೇಳೆ ಪ್ರತಿಭಟನೆ ನಡೆಸುತ್ತಿದ್ದ 25 ಕ್ಕು ಹೆಚ್ಚು ರೈತ ರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.  ಯಳಂದೂರು ಪಟ್ಟಣದಲ್ಲಿ ರೈತ ಸಂಘದ ಕಾರ್ಯಕರ್ತರು ಹೆದ್ದಾರಿಯಲ್ಲಿ ಪ್ರತಿಭಟಿಸಿ ನ ರಸ್ತೆ ತಡೆ ನಡೆಸಿದರು. ಇಲ್ಲಿಯು ಸಹ ಬಂದ್ ಬಹುತೇಕ ಯಶಸ್ವಿಯಾಯ್ತು. ಇನ್ನು ಕೊಳ್ಳೇಗಾಲ ದಲ್ಲಿ ಬಂದ್ ಸಂಪೂರ್ಣ ಯಶಸ್ವಿಯಾಯ್ತು. ರೈತರು ನಡೆಸಿದ ಪ್ರತಿಭಟನೆಯಲ್ಲಿ ಹನೂರು ಶಾಸಕ ಆರ್.ನರೇಂದ್ರ, ಕೊಳ್ಳೇ ಗಾಲದ ಶಾಸಕ ಎನ್ ಮಹೇಶ್, ಮಾಜಿ ಶಾಸಕರಾದ ಎ‌ಆರ್.ಕೃಷ್ಣಮೂರ್ತಿ, ಜಯಣ್ಣ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *