Thursday, 2nd February 2023

ಕನ್ನಡ ನಾಡಿಗೆ ಬಳ್ಳಾರಿ ಕೊಡುಗೆ ಅಪಾರ: ಅರಣ್ಯ ಸಚಿವ ಬಿ.ಎಸ್.ಆನಂದಸಿಂಗ್

65ನೇ ಕರ್ನಾಟಕ ರಾಜ್ಯೋತ್ಸವ ದಿನ ಆಚರಣೆ

ಬಳ್ಳಾರಿ: ಭವ್ಯ ಪರಂಪರೆ ಹಾಗೂ ಇತಿಹಾಸ ಹೊಂದಿರುವ ಈ ನಮ್ಮ ನಾಡಿಗೆ ನಮ್ಮ ಬಳ್ಳಾರಿ ಜಿಲ್ಲೆಯ ಕೊಡುಗೆ ಅಪಾರ ವಾಗಿದೆ ಎಂದು ಅರಣ್ಯ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎಸ್. ಆನಂದಸಿಂಗ್ ಅವರು ಹೇಳಿದರು.

65ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ನಿಮಿತ್ತ ಬಳ್ಳಾರಿ ಜಿಲ್ಲಾಡಳಿತ ವತಿಯಿಂದ ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಸಂದೇಶ ನೀಡಿದರು.
ಎಂದು ಮರೆಯದ ಸಾಮ್ರಾಜ್ಯವಾಗಿ ಭಾರತದ ಇತಿಹಾಸದಲ್ಲಿ ಸುವರ್ಣ ಯುಗವನ್ನು ಸೃಷ್ಟಿಮಾಡಿ ವಿಶ್ವ ಪಾರಂಪರಿಕ ತಾಣ ವಾದ ವಿಜಯನಗರ ಸಾಮ್ರಾಜ್ಯದ ಹಂಪಿ ನಮ್ಮ ಜಿಲ್ಲೆಯದು ಎಂಬುದು ನಮ್ಮೆಲ್ಲರಿಗೂ ಹೆಮ್ಮೆ ತರುವ ವಿಷಯವಾಗಿದೆ ಎಂದು ಬಳ್ಳಾರಿ ಜಿಲ್ಲೆ ಬಗೆಗಿನ ತಮ್ಮ ಅಭಿಮಾನ ವ್ಯಕ್ತಪಡಿಸಿದ ಆನಂದಸಿಂಗ್ , ಕರ್ನಾಟಕವೆಂಬುದು ಕೇವಲ ಒಂದು ಭೂಪ್ರದೇಶಕಷ್ಟೆ ಸೀಮಿತವಾಗಿಲ್ಲ.

ಕರ್ನಾಟಕವೆಂದರೇ ಒಂದು ಸಂಸ್ಕೃತಿ’, ‘ಒಂದು ಜನಸಮುದಾಯ”, ಇದೊಂದು ಭವ್ಯ ಪರಂಪರೆಯನ್ನು ಪ್ರತಿನಿಧಿಸುವ ಪ್ರಾಚೀನ ಸುಧೀರ್ಘ ಇತಿಹಾಸವಾಗಿದೆ. ಕನ್ನಡನಾಡು ವಿವಿಧ ಮತ, ಪಂಥ, ಧರ್ಮಗಳ ಸಂಗಮವಾಗಿದೆ ಎಂದರು. ಭವ್ಯ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಸಾಮರಸ್ಯವೇ ಈ ನಾಡಿನ ಜೀವಾಳವಾಗಿರುವ ಪುರಾವೆಗಳು ಈ ನಾಡಿನ ಇತಿಹಾಸ ಉದ್ದಕ್ಕೂ ಸಾಕಾಷ್ಟು ಸಿಗುತ್ತವೆ.

ಸರ್ವ ಧರ್ಮ ಸಹಿಷ್ಣುತೆ, ಸತ್ಯಾರಾಧನೆ, ಧರ್ಮನೀತಿ,ಸಮಬಾಳ್ವೆ, ಸೌರ್ಹಾ ದತೆ, ಹಾಗೂ ಭಾವಕ್ಕೆತೆಯ ದಿವ್ಯಸ್ವರ್ಗ ಈ ನಾಡು ಈ ನಾಡಿನಲ್ಲಿ ಸಾಹಿತಿಗಳು, ಕವಿಗಳು, ಶಿಲ್ಪಿಗಳು, ಕಲಾವಿದರು, ಸಂಶೋಧಕರು ಹಾಗೂ ಇತಿಹಾಸಕಾರರು ತಮ್ಮದೇ ಶೈಲಿಯಲ್ಲಿ ಸಾಧನೆ ಮಾಡಿ ಕರ್ನಾಟಕ ಮಾತೆ ಭುವನೇಶ್ವರಿಯ ಕಿರ್ತಿ ಕಳಸಕ್ಕೆ ಗರಿಗಳಾಗಿದ್ದಾರೆ. ಇದಕ್ಕೆ ಮುಕುಟ ಪ್ರಾಯವೆಂಬಂತೆ ದೇಶ ದಲ್ಲೆ ಹೆಚ್ಚು ಅಂದರೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಈ ನಮ್ಮ ಕನ್ನಡಕ್ಕೆ ಸಿಕ್ಕಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ರಾಜ್ಯದಲ್ಲಿಯೇ ಅತ್ಯಂತ ಹೆಚ್ಚು ಖನಿಜ ನಿಕ್ಷೇಪಗಳನ್ನು ಹೊಂದಿರುವ ಜಿಲ್ಲೆ ನಮ್ಮ ಬಳ್ಳಾರಿ ಜಿಲ್ಲೆ. ಈ ಜಿಲ್ಲೆಯ ಭೌತಿಕ, ನೈಸರ್ಗಿಕ ಹಾಗೂ ಮಾನವ ಸಂಪನ್ಮೂಲವನ್ನು ಬಳಸಿಕೊಂಡು ಸರ್ವಾಂಗೀಣ ಅಭಿವೃದ್ಧಿಗೆ ನಾವೆಲ್ಲರು ಶ್ರಮಿಸಲು ಕಂಕಣ ಬದ್ದರಾಗೋಣ. ಈ ಮೂಲಕ ನಾಡನ್ನು ಶ್ರೀಮಂತಗೊಳಿಸೋಣ ಎಂದರು.

ಕಂಗ್ಲಿಷ್‍ಗಳಾಗುವುದು ಬೇಡ, ಕನ್ನಡ ಭಾಷೆ ಬಳಸಿ ಉಳಿಸೋಣ: ಪ್ರತಿಯೊಬ್ಬರು ನಾಡಿನ ಭಾಷೆ,ನೆಲ,ಜಲ ಸಂಸ್ಕೃತಿ, ಸಾಹಿತ್ಯ ಹಾಗೂ ಕಲೆ ಗಳನ್ನು ಬೆಳೆಸಿ ಉಳಿಸುವಲ್ಲಿ ಆಸಕ್ತಿ ವಹಿಸುವುದು ತುಂಬಾ ಅವಶ್ಯವಾಗಿದೆ. ಇಂಗ್ಲೀಷ್ ಭಾಷೆಯ ವ್ಯಾಮೋಹಕ್ಕೆ ಒಳಗಾಗಿ ಅತ್ತ ಇಂಗ್ಲೀಷ ಕಲಿಯದೇ ಇತ್ತ ಕನ್ನಡವನ್ನೂ ಅರಿಯದ ಕಂಗ್ಲಿಷಗಳಾಗುವುದು ಬೇಡ ಎಂದು ಸಚಿವ ಸಿಂಗ್ ಅವರು ಹೇಳಿದರು.

ಈ ಹುಚ್ಚು ಭ್ರಮೆಯಿಂದ ಹೊರಬಂದು ಅತ್ಯಂತ ಶಕ್ತಿಶಾಲಿಯಾದ ಹಾಗೂ ಅಗಾಧ ಜ್ಞಾನ ಮತ್ತು ಪರಂಪರೆಯನ್ನು ಹೊಂದಿ ರುವ ನಮ್ಮ ಕನ್ನಡ ಭಾಷೆ ಯನ್ನು ಬಳಸಿ ಉಳಿಸೋಣ’ ಅತ್ಯಂತ ಪ್ರಮುಖ ಪರೀಕ್ಷೆಗಳಲ್ಲಿ ಒಂದಾದ ಅಖಿಲ ಭಾರತ ಸೇವೆಯ ಹುದ್ದೆಗಳ ಪರೀಕ್ಷೆಗಳನ್ನು ಈಗ ಕನ್ನಡ ಮಾಧ್ಯಮದಲ್ಲಿ ಬರೆಯುವುದಕ್ಕೆ ಅವಕಾಶ ಇರುವುದರಿಂದ ನಮ್ಮ ಭಾಷೆಯ ಬಗ್ಗೆ ನಮಗೆ ಹೆಮ್ಮೆ ಇರುವುದು ಅವಶ್ಯವಾಗಿದೆ ಎಂದರು.

ಸರ್ವಧರ್ಮ ಸಹಿಷ್ಣುತೆ ಮೆರೆಯೋಣ: ಇಂದು ಕುಸಿಯುತ್ತಿರುವ ಜೀವನ ಮೌಲ್ಯ, ನೈತಿಕ ಹಾಗೂ ಮಾನವೀಯ ಮೌಲ್ಯ ಗಳನ್ನು ಪನರುತ್ಥಾನ ಮಾಡುವ ಮೂಲಕ ಅದಮ್ಯ ರಾಷ್ಟ್ರೀಯ ಪ್ರಜ್ಞೆ ಹಾಗೂ ನಾಗರಿಕ ಜವಾಬ್ದಾರಿಗಳನ್ನು ನಾಡಿನ ಪ್ರತಿಯೊಬ್ಬ ಪ್ರಜೆಯು ಬೇಕಾಗಿದೆ ಎಂದು ಸಚಿವ ಆನಂದಸಿಂಗ್ ಅಭಿಪ್ರಾಯಪಟ್ಟರು.

ಹಿಂಸಾಚಾರ ಮತ್ತು ದ್ವೇಷವನ್ನು ಹತ್ತಿಕ್ಕಿವ ಮೂಲಕ ಸರ್ವ ಧರ್ಮ ಸಹಿಷ್ಣುತೆಯನ್ನು ಮೆರೆದು ನಾವೆಲ್ಲರು ಒಂದು ಎಂಬ ಭಾವದಿಂದ ಶಾಂತಿ ಸಹಭಾಳ್ವೆಯಿಂದ ಬಾಳಿದರೆ ಈ ನಾಡಿನ ನಮ್ಮ ಹಿರಿಯರು ಹಾಕಿಕೊಟ್ಟಿರುವ ಭವ್ಯ ಪರಂಪರೆ ಇತರೆ ರಾಜ್ಯ  ಗಳಿಗೆ ಮಾದರಿಯಾಗಿ ನಿಲ್ಲುತ್ತದೆ ಎಂದು ಅವರು ಹೇಳಿದರು.

ಎರಡು ಸಾವಿರ ವರ್ಷದ ಇತಿಹಾಸ ಇರುವ ಈ ನಮ್ಮ ಹೆಮ್ಮೆಯ ಭಾಷೆಗೆ ಶಾಸ್ತ್ರೀಯ ಸ್ಥಾನ ಮಾನ ದೊರೆತಿದೆ ಅದನ್ನು ಸದುಪ ಯೋಗ ಪಡಿಸಿಕೊಳ್ಳುವುದರೊಂದಿಗೆ ನಮ್ಮ ನಾಡು ನುಡಿಯನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸೋಣ ಎಂದು ಅವರು ಹೇಳಿದರು.

ಕಾವೇರಿಯಿಂದ ಗೋದಾವರಿಯ ವರೆಗೆ ಹಬ್ಬಿದ ಈ ಪ್ರದೇಶದ ಸಂಸ್ಕೃತಿ ಭಾರತದ ಅತೀ ಪ್ರಾಚೀನ ಸಂಸ್ಕೃತಿಗಳಲ್ಲಿ ಒಂದು. ಜಗತ್ತಿನ ಇತರೆ ಭಾಷೆಗಳು ಅಂಬೆಗಾಲಿನಿಂದ ನಡೆಯುವ ಸಂಧರ್ಭದಲ್ಲಿ ಕನ್ನಡ ಭಾಷೆಯಲ್ಲಿ ಮಹಾನ್ ಮಹಾ ಕಾವ್ಯಗಳು ರಚನೆಗೊಂಡಿರುವ ಕಥೆ ಬಲು ರೋಚಕವಾಗಿದೆ. ಈ ನಾಡನ್ನು ಶಾತವಾಹನರಿಂದ ಆರಂಭಗೊಂಡು ವಿವಿಧ ರಾಜ ಮಹಾ ರಾಜರು ಆಳಿದ್ದಾರೆ ಜೋತೆಗೆ ಈ ನಾಡನ್ನು ಭದ್ರಪಡಿಸುವ ಮೂಲಕ ಶ್ರೀಮಂತ ಸಂಸ್ಕೃತಿಯನ್ನು ಪ್ರಪಂಚಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದು ಅವರು ವಿವರಿಸಿದರು.

ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನಾಡುವ ಈ ಪ್ರದೇಶವು ಭಾರತದ ಇತರೆ ಪ್ರದೇಶಗಳಂತೆಯೇ ಪರಕೀಯರ ಆಕ್ರಮಣಕ್ಕೆ ಒಳಗಾಗಿ ಸ್ವತಂತ್ರವನ್ನು ಕಳೆದುಕೊಂಡಿತು. ಮುಂದೆ ಅನೇಕ ಮಹನೀಯರ ಹೋರಾಟದ ಫಲದಿಂದ ಭಾರತ ಸ್ವತಂತ್ರಗೊಂಡಿತು. ಆದರೆ, ಕನ್ನಡ ಭಾಷೆಯನ್ನಾಡುವ ಈ ಪ್ರದೇಶ ಬೇರೆ ಬೇರೆ ಆಡಳಿತ ವಿಭಾಗಗಳಲ್ಲಿ ಹಂಚಿಹೋಗಿ, ಕನ್ನಡಭಾಷೆಯನ್ನಾಡುವ ಜನರು ವಿವಿಧ ಪ್ರದೇಶಗಳಲ್ಲಿ ಹಂಚಿಹೋಗಿದ್ದರು. ಮತ್ತೆ ಈ ನಾಡಿನ ಜನರನ್ನು ಒಂದುಗೂಡಿ ಸುವುದಕ್ಕೆ ಹೋರಾಟವೇ ನಡೆದು ಅದು ಕರ್ನಾಟಕದ ಏಕೀಕರಣ ಚಳುವಳಿ ಯಾಗಿದ್ದು ಈಗ ಇತಿಹಾಸ ಎಂದರು.

ಶ್ರೀರಾಮುಲು ಅವರನ್ನು ಒಳಗೊಂಡಂತೆ ನಡೆದ ಹೋರಾಟದ ಫಲವಾಗಿ ಭಾಷವಾರು ಪ್ರಾಂತ್ಯಗಳ ರಚನೆಗೆ ಚಾಲನೆ ದೊರೆ ಯಿತು. ವಿವಿಧ ಪ್ರದೇಶಗಳಲ್ಲಿ ಕನ್ನಡ ಭಾಷೆಯನ್ನಾಡುವ ಜನರನ್ನು ಒಳಗೊಂಡಂತೆ ಪ್ರತ್ಯೇಕ ಪ್ರಾಂತ ರಚನೆಗೆ ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಆಲೂರು ವೆಂಕಟರಾಯರು. ಡೆಪ್ಯೂಟಿ ಚೆನ್ನಬಸಪ್ಪನವರು, ಕರ್ನಾಟಕ ವಿದ್ಯಾವರ್ಧಕ ಸಂಘ ಹಾಗೂ ವಾಗ್ಬೂಷಣ ಪತ್ರಿಕೆ ಮುಂತಾದ ಹತ್ತು ಹಲವರ ಹೋರಾಟದ ಫಲವಾಗಿ 1953ರಲ್ಲಿ ಫಜಲ್ ಅಲಿ ಸಮಿತಿ ರಚನೆ ಯಾಯಿತು.

1956 ರಲ್ಲಿ ಈ ಸಮಿತಿ ವರದಿ ಸಲ್ಲಿಸಿದ ಬಳಿಕ, 1956ರ ನವೆಂಬರ್ 1 ರಂದು ವಿವಿಧ ಪ್ರದೇಶಗಳಲ್ಲಿ ಹಂಚಿಹೋಗಿದ್ದ ಕನ್ನಡ ಭಾಷೆಯನ್ನಾಡುವ ಜನರ ರಾಜ್ಯ ಉದಯವಾಯಿತು. ಈ ಸುದಿನವನ್ನೇ ನಾವಿಂದು ಪ್ರತೀ ವರ್ಷ ಕರ್ನಾಟಕ ರಾಜ್ಯೋತ್ಸವ ವೆಂದು ಸಂಭ್ರಮದಿಂದ ಆಚರಿಸುತ್ತೇವೆ ಎಂದರು.

ಒಂದು ನೂರು ವರ್ಷ ನಿರಂತರ ಹೋರಾಟದ ಫಲ ಸ್ವರೂಪವಾಗಿ 1956 ನವೆಂಬರ್ 1ರಂದು ಏಕಿಕೃತ ರಾಜ್ಯ ಉದಯಗೊಳ್ಳಲು ಹೋರಾಡಿದ ಮಹನಿಯರನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.

1956ರಲ್ಲಿ ಕನ್ನಡ ಭಾಷವಾರು ಪ್ರಾಂತವೇನೋ ರಚನೆಯಾಯಿತು, ಆದರೆ ಈ ನಾಡಿಗೆ ಕರ್ನಾಟಕವೆಂದು ನಾಮಕರಣ ಮಾಡಲು ಮತ್ತೊಂದು ಸುತ್ತಿನ ಹೋರಾಟ ನಡೆದು ಡಿ.ದೇವರಾಜ ಅರಸು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ಅಂದರೆ 1973ರ ನವೆಂಬರ್ 01ರಂದು ಕನ್ನಡವನ್ನಾಡುವ ಮೈಸೂರು ರಾಜ್ಯ ಕರ್ನಾಟಕ ರಾಜ್ಯವಾಗಿ ಹೊರಹೊಮ್ಮುವ ಮೂಲಕ ನಾಡಿನ ಬಹುಪಾಲು ಸಾಹಿತಿಗಳ, ಸಂಶೋಧಕರ, ಇತಿಹಾಸಕಾರರ ಹಾಗೂ ಹೋರಾಟಗಾರರ ಕನಸು ನನಸಾಯಿತು ಎಂದರು.

ಸಾಕಾರಗೊಂಡ ಕನಸಿನ ಈ ನಾಡಿನ ಕಲೆ, ಸಾಹಿತ್ಯ, ಸಂಸ್ಕøತಿ, ಸಂಪ್ರದಾಯ, ಭವ್ಯ ಪರಂಪರೆ ಹಾಗೂ ಅಗಾಧ ಅಲೋಚನೆಗಳು ಈ ರಾಜ್ಯದ ಅಭಿವೃದ್ಧಿಗೆ ಬಳಸಿಕೊಳ್ಳುವ ಮೂಲಕ ನಾಡು ನುಡಿಯ ರಕ್ಷಣೆಯೊಂದಿಗೆ ಉಜ್ವಲ ಭವಿಷ್ಯ ರೂಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅಲ್ಲದೆ ಆದುನಿಕ ತಂತ್ರಜ್ಞಾನ ಇಂದು ಎಲ್ಲಾ ರಂಗಗಳನ್ನು ಪ್ರವೇಶಿಸಿದೆ. ಅದರ ಮಹಾನ್ ಶಕ್ತಿಯನ್ನು ನಾಡಿನ ಯುವ ಜನಾಂಗಕ್ಕೆ ಮುಟ್ಟಿಸಿ ಸಮಗ್ರ ಅಭಿವೃದ್ಧಿಗೆ ಪಣ ತೋಡುವ ಮೂಲಕ ನಮ್ಮ ಹಿರಿಯರ ಸಂಕಲ್ಪ ಸಾಕಾರ ಗೊಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಆಗಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಜಿ. ಸೋಮಶೇಖರ ರೆಡ್ಡಿ, ಅಲ್ಲಂ ವೀರಭದ್ರಪ್ಪ, ಕೆ.ಸಿ. ಕೊಂಡಯ್ಯ, ಜಿಲ್ಲಾಧಿಕಾರಿ ಎಸ್.ಎಸ್. ನಕುಲ್, ಎಸ್ಪಿ ಸೈದುಲು ಅಡಾವತ್, ಜಿಪಂ ಸಿಇಒ ನಂದಿನಿ ಕೆ.ಆರ್, ಡಿಎಫ್‍ಇ ಸಿದ್ರಾಮಪ್ಪ ಚಳಕಾಪುರೆ, ಎಡಿಸಿ ಪಿ.ಎಸ್. ಮಂಜುನಾಥ, ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಇತರರು ಇದ್ದರು.

ಬಸವರಾಜ ನಿರೂಪಿಸಿದರು. ಪ್ರೋಬೇಷನರಿ ಐಎಎಸ್ ರಾಹುಲ್ ಸಂಕನೂರು ವಂದಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣವರ್ ಸ್ವಾಗತಿಸಿದರು.

error: Content is protected !!