Monday, 5th December 2022

ಸೃಷ್ಟಿಯ ವಿಜ್ಞಾನಕೋಶ ಭಗವದ್ಗೀತೆ

ಸ್ವಾಸ್ಥ್ಯ ಸಂಪದ

yoganna55@gmail.com

ಮನುಷ್ಯ ಸೃಷ್ಟಿಯ ವಿಕಾಸ ಕ್ರಿಯೆಯ ಒಂದು ಹಂತದಲ್ಲಿ ಜನ್ಮತಾಳಿದ, ಸೃಷ್ಟಿಯ ಎಲ್ಲವುಗಳ ರಚನೆಗಳು ಮತ್ತು ಕಾರ್ಯಗಳ ಪ್ರತಿಬಿಂಬಗಳನ್ನೊಳಗೊಂಡ ಮತ್ತು ಸೃಷ್ಟಿಯ ಎಲ್ಲವುಗಳೊಡನೆ ಅವಿನಾಭಾವವಾಗಿ ಪೂರ್ವಯೋಜಿತವಾಗಿ ಜೋಡಿತ ವಾಗಿದ್ದು, ಇಡೀ ಸೃಷ್ಟಿಯಲ್ಲಿಯೇ ಅತ್ಯಂತ ಉನ್ನತ ಮಟ್ಟದಲ್ಲಿ ವಿಕಾಸವಾಗಿರುವ ಜೀವಿಯಾಗಿದ್ದಾನೆ ಎಂಬುದು ವೈಜ್ಞಾನಿಕ ವಾಗಿಯೂ ಸಹ ನಿರ್ವಿವಾದದ ಸಂಗತಿ.

ಅವನು ದೇಹ, ಮನಸ್ಸು ಮತ್ತು ಆತ್ಮಗಳಿಂದ ಸಂಯೋಜಿತವಾಗಿರುವ ಆಧ್ಯಾತ್ಮಿಕ ಜೀವಿ ಎಂಬುದೂ ಸಹ ವೈಜ್ಞಾನಿಕ. ಮನುಷ್ಯನ ಮನಸ್ಸು, ತನ್ನನ್ನೂ ಒಳಗೊಂಡಂತೆ ಇಡೀ ಸೃಷ್ಟಿಯಲ್ಲಿರುವ ಎಲ್ಲವುಗಳ ಉಗಮ, ಗುಣಲಕ್ಷಣಗಳು ಮತ್ತು ಉಪಯೋಗಗಳನ್ನು ಅರ್ಥಮಾಡಿಕೊಳ್ಳುವ, ವಿಮರ್ಶೆ ಮಾಡುವ ವಿವೇಚನೆ ಮತ್ತು ಬುದ್ಧಿವಂತಿಕೆಯುಳ್ಳ ಅತ್ಯಂತ ಶ್ರೇಷ್ಠ ಮಟ್ಟದಲ್ಲಿ ವಿಕಾಸವಾಗಿರುವ ಅದ್ವಿತೀಯ ಶಕ್ತಿಯಾಗಿದೆ.

ಇಷ್ಟೆಲ್ಲಾ ಶಕ್ತಿಯುತವಾಗಿದ್ದರೂ ಅದು ಸಕಾರಾತ್ಮಕ ಮತ್ತು ನಕಾರಾತ್ಮಕ ಭಾವ ಮತ್ತು ಆಲೋಚನೆಗಳ ನಡುವೆ ತೊಳಲಾಡುವ ಚಂಚಲತೆಯನ್ನು ಹೊಂದಿದ್ದು, ಅದಕ್ಕೆ ನೈಜ ಸರಿತಪ್ಪುಗಳ ಅರಿವಿಲ್ಲದಿದ್ದಲ್ಲಿ ಮನುಷ್ಯನ ಬದುಕಿಗೆ ಪೂರಕವಾಗಿ ಸಂತೋಷ ನೀಡಬೇಕಾಗಿದ್ದ ಮನಸ್ಸು ತದ್ವಿರುದ್ಧ ವಾಗಿ ಅಸಂತೋಷಮಯ ಬದುಕುಂಟಾಗುತ್ತದೆ. ಮನುಷ್ಯನ ಎಲ್ಲಾ ಕಾರ್ಯಗಳು, ಮನಸ್ಸಿನಲ್ಲಿ ಉಂಟಾಗುವ ಆಲೋಚನೆಗಳನ್ನೇ ಅವಲಂಬಿಸಿರುವುದರಿಂದ ಮನಸ್ಸಿನಲ್ಲಿ ಯಾವ ಬಗೆಯ ಆಲೋಚನೆಗಳ ಉದ್ಭವದಿಂದ ಮನುಷ್ಯ ನೆಮ್ಮದಿ ಮತ್ತು ಸಂತೋಷದಿಂದ ಬದುಕಲು ಸಾಧ್ಯ ಎಂಬ ಅರಿವು ಪ್ರತಿಯೊಬ್ಬ ರಿಗೂ ಅತ್ಯವಶ್ಯಕ. ಈ ಅರಿವುಗಳನ್ನೊಳಗೊಂಡ ಜ್ಞಾನಕೋಶವೇ ಭಗವದ್ಗೀತೆ.

ಭಗವದ್ಗೀತೆ ಶಿಕ್ಷಣ ಅವಶ್ಯಕವೇ?
ಭಗವದ್ಗೀತೆಯನ್ನು ಶಾಲಾ ಕಾಲೇಜುಗಳಲ್ಲಿ ಬೋಧಿಸಬೇಕೆಂಬ ಕರ್ನಾಟಕ ಸರ್ಕಾರದ ನಿರ್ಧಾರದ ಬಗ್ಗೆ ಕೆಲವು ಅಪಸ್ವರಗಳು ಎದ್ದಿದ್ದು, ಇದರ ಸಾಧಕ ಬಾಧಕಗಳ ಬಗ್ಗೆ ಬೆಳಕು ಚೆಲ್ಲುವ ಲೇಖನವಿದು.

ಭಗವದ್ಗೀತೆಯ ಬೋಧನೆ ಅವಶ್ಯಕತೆಯಿದೆ ಎನ್ನುವವರು ಇದರಿಂದ ಮಕ್ಕಳಿಗೆ ಪ್ರಾರಂಭದಲ್ಲಿಯೇ ಬದುಕಿನ ಉದ್ದೇಶಗಳು, ಬದುಕಿನಲ್ಲಿ ಪಾಲಿಸಬೇಕಾದ ಮೌಲ್ಯಯುತ ಮಾರ್ಗೋಪಾಯಗಳು, ಸೃಷ್ಟಿಯ ಉಗಮ, ಮನಸ್ಸನ್ನು ಸಕಾರಾತ್ಮಕವಾಗಿ ನಿಯಂತ್ರಿಸುವ ಮಾರ್ಗೋಪಾಯಗಳು, ಅತೀತ ಶಕ್ತಿಯ ಅರಿವು ಇವೆಲ್ಲವುಗಳ ಬಗ್ಗೆ ಅರಿವು ಮೂಡಿಸಿ, ಮನಸ್ಸನ್ನು ಆಧ್ಯಾತ್ಮಿಕವಾಗಿ ಕೃಷಿ ಮಾಡಿ ಮೌಲ್ಯಯುತವಾಗಿ ಬದುಕುವ ಜೀವನಶೈಲಿಯುಳ್ಳ ಸದೃಢ ಮನಸ್ಸುಗಳನ್ನು ನಿರ್ಮಾಣಮಾಡಲು ಅವಶ್ಯಕ ಎಂಬುದಾಗಿದೆ.

ಪ್ರಸ್ತುತ ಆಧುನಿಕ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾವಂತ ಮನುಷ್ಯರುಗಳೂ ಸಹ ಜೀವನಮೌಲ್ಯಗಳೆಲ್ಲವನ್ನೂ ಗಾಳಿಗೆ ತೂರಿ ಭೌತಿಕ ಸಂಪತ್ತಿನ ಗಳಿಕೆ ಮತ್ತು ಭೌತಿಕ ಅಭಿವೃದ್ಧಿಗಳೇ ಜೀವನದ ಮೂಲ ಉದ್ದೇಶ ಎಂದು ಭ್ರಮಾಧೀನರಾಗಿ, ಭೌತಿಕ ಸಂಪತ್ತನ್ನು ಗಳಿಸಿದರೂ ನೆಮ್ಮದಿಯನ್ನು ಹಾಳುಮಾಡಿಕೊಂಡು ಅಶಾಂತ ಸ್ಥಿತಿಯ ಸಮಾಜ ನಿರ್ಮಾಣಕ್ಕೆ ನಾಂದಿಯಾಗಿ ಸಾಮಾಜಿಕ ಆರೋಗ್ಯ ಕ್ಷೀಣಿಸುತ್ತಿರುವ ಈ ಸಂದರ್ಭದಲ್ಲಿ, ಮನುಷ್ಯನನ್ನು ನೆಮ್ಮದಿಯಿಂದಿಟ್ಟು ವಿಶ್ವಶಾಂತಿಗೆ ಬುನಾದಿ ಯಾಗಲು ಆಧ್ಯಾತ್ಮಿಕ ಆರೋಗ್ಯವೊಂದೇ ದಾರಿಯಾಗಿರುವುದರಿಂದ ಮೌಲ್ಯ ಶಿಕ್ಷಣವನ್ನು ಬೋಧಿಸುವ ಭಗವದ್ಗೀತೆಯನ್ನು ಶಿಕ್ಷಣದಲ್ಲಿ ಅಳವಡಿಸುವುದು ಹಿಂದಿಗಿಂತ ಇಂದು ಅತ್ಯವಶ್ಯಕ.

ವಿರೋಧಿಸುವವರು ಭಗವದ್ಗೀತೆ ಹಿಂದೂ ಧರ್ಮದ ಗ್ರಂಥವಾಗಿದ್ದು, ಬಹು ಧರ್ಮಗಳ ಆಧಾರಿತ ಧರ್ಮಾತೀತ ಭಾರತದಲ್ಲಿ ಒಂದು ಧರ್ಮದ ಗ್ರಂಥವನ್ನು ಶಿಕ್ಷಣದಲ್ಲಿ ಅಳವಡಿಸುವುದು ನ್ಯಾಯಸಮ್ಮತವಲ್ಲ, ಭಗವದ್ಗೀತೆ ಮನುಷ್ಯರನ್ನು ಜಾತಿ ಆಧಾರದ ಮೇಲೆ ವಿಂಗಡಿಸಿ ಮೇಲು ಕೀಳೆಂಬ ಭಾವನೆಗಳನ್ನು ಹುಟ್ಟುಹಾಕುತ್ತದೆ, ಬ್ರಾಹ್ಮಣ ಮತ್ತು ಅಬ್ರಾಹ್ಮಣ ಎಂಬ ವಿಂಗಡಣೆಯನ್ನು ಸೂಚಿಸುತ್ತದೆ, ಮಾನವಕುಲವನ್ನು ಮಾನವೀಯತೆ ದೃಷ್ಟಿಯಿಂದ ಏಕರೂಪದಲ್ಲಿ ನೋಡದೆ ಹುಟ್ಟಿನಿಂದಲೇ ಮನುಷ್ಯ ನನ್ನು ಮೇಲು ಕೀಳೆಂದು ವಿಂಗಡಿಸುತ್ತದೆ, ಕಣ್ಣಿಗೆ ಕಾಣದ ದೈವತ್ವವನ್ನು ಆರಾಧಿಸುತ್ತದೆ ಎಂಬಿತ್ಯಾದಿ ವಿಚಾರ ಗಳನ್ನು ಒಳಗೊಂಡಿದ್ದು, ಇದು ಶಿಕ್ಷಣದಲ್ಲಿ ಬೋಧನಾ ಅರ್ಹವಲ್ಲ ಎಂಬ ವಾದವನ್ನು ಮುಂದಿಟ್ಟುಕೊಂಡು ವಿರೋಧಿಸು ತ್ತಿದ್ದಾರೆ. ಇವೆರಡೂ ಅಭಿಪ್ರಾಯಗಳ ತುಲನಾತ್ಮಕ ವಿಮರ್ಶೆ ಅತ್ಯವಶ್ಯಕ.

ಭಗವದ್ಗೀತೆಯ ಹಿನ್ನೆಲೆ
ವೇದಗಳು ಇಡೀ ಪ್ರಪಂಚದಲ್ಲಿಯೇ ಲಭ್ಯವಿರುವ ಪ್ರಪ್ರಥಮ ಜ್ಞಾನಕೋಶಗಳು ಎಂಬುದು ನಿರ್ವಿವಾದದ ಸತ್ಯಸಂಗತಿ. ಜರ್ಮನಿಯ ಖ್ಯಾತ ವಿಜ್ಞಾನಿ ಮತ್ತು ತತ್ತ್ವಶಾಸ್ತ್ರಜ್ಞ ಮ್ಯಾಕ್ಸ್‌ಮುಲ್ಲರ್ ಹೇಳಿರುವ ಮಾತಿದು. ಮಹಾಭಾರತ ಆದಿಕಾಲ
ದಿಂದಲೂ ಮನುಷ್ಯನ ನಡೆವಳಿಕೆಗಳಲ್ಲಿ ಸಂಭವಿಸಬಹುದಾದ ಎಲ್ಲ ಕೆಟ್ಟ ಮತ್ತು ಒಳ್ಳೆಯ ಗುಣಗಳ ವ್ಯಕ್ತಿತ್ವಗಳನ್ನು ಹೊಂದಿದ್ದು, ಆಯಾಯ ವ್ಯಕ್ತಿತ್ವಗಳ ನಡೆವಳಿಕೆಗಳಿಂದ ಬದುಕಿನಲ್ಲಿ ಸಂಭವಿಸಬಹುದಾದವಿಭಿನ್ನ ಘಟನಾವಳಿಗಳನ್ನು ಮನಮುಟ್ಟುವಂತೆ ಕಥಾರೂಪದಲ್ಲಿ ನಿರೂಪಿಸಿರುವ ಸುಮಾರು ೨ ಲಕ್ಷಕ್ಕೂ ಹೆಚ್ಚು ಶ್ಲೋಕಗಳಿರುವ ಬೃಹತ್ ಸಂಸ್ಕೃತ
ಗ್ರಂಥ.

ಈ ಬೃಹತ್ ಗ್ರಂಥದಲ್ಲಿ ಯುದ್ಧಭೂಮಿಯಲ್ಲಿ ವೈರಾಗ್ಯ ತಳೆದ ಅರ್ಜುನನನ್ನು ಪುನಶ್ಚೇತನಗೊಳಿಸಿ ಕ್ರಿಯಾತ್ಮಕನನ್ನಾಗಿಸಲು ಕೃಷ್ಣನಿಂದ ಬೋಧಿಸಲ್ಪಟ್ಟ ಚೈತನ್ಯಕಾರಿ ಆಧ್ಯಾತ್ಮಿಕ ಚಿಂತನೆಗಳೇ ಭಗವದ್ಗೀತೆ. ವೇದಗಳನ್ನು ವಿಂಗಡಿಸಿ ಅವುಗಳಿಗೆ ಸ್ಪಷ್ಟ ಲಿಖಿತರೂಪ ಕೊಟ್ಟ ಕರ್ತೃ ವ್ಯಾಸಮಹರ್ಷಿಗಳು ವೇದಗಳ ಸಾರವನ್ನು ಕೃಷ್ಣನಿಂದ ಅರ್ಜುನನಿಗೆ ಬೋಧಿಸಿ, ಸರ್ವರಿಗೂ ಲಭಿಸುವಂತಾಗಿಸಿದರು.

ಭಗವದ್ಗೀತೆ ವೇದಗಳ ಸಾರವಾದುದರಿಂದ ಇದೂ ಸಹ ಅತ್ಯಂತ ಪ್ರಾಚೀನವಾದ ಮೊದಲ ಆಧ್ಯಾತ್ಮಿಕ ಜ್ಞಾನವುಳ್ಳ ಗ್ರಂಥ ಎಂಬುದೂ ಸಹ ನಿರ್ವಿವಾದ. ತದನಂತರ ಬಂದ ಎಲ್ಲ ಧರ್ಮಗ್ರಂಥಗಳ ಮೇಲೆ ವೇದಗಳ ಮತ್ತು ಭಗವದ್ಗೀತೆಯ ಪ್ರಭಾವ ಇರುವುದನ್ನು ಗುರುತಿಸಬಹುದಾಗಿದೆ.

ಸೃಷ್ಟಿಯ ವಿಜ್ಞಾನಕೋಶ 
೭೦೦ ಶ್ಲೋಕಗಳನ್ನುಳ್ಳ ಹದಿನೆಂಟು ಅಧ್ಯಾಯಗಳ ನ್ನೊಳಗೊಂಡ ಭಗವದ್ಗೀತೆ ಸೃಷ್ಟಿಯ ಉಗಮ, ರಚನೆ, ವಿಕಾಸ, ಸೃಷ್ಟಿಯಲ್ಲಿ ಒಂದಕ್ಕೊಂದಿರುವ ಸಂಬಂಧ, ಪೂರ್ವನಿಗದಿತ ಕಾರ್ಯಚಕ್ರಗಳು, ಮನುಷ್ಯನ ರಚನೆ, ಅವನ ಮನಸ್ಸನ್ನು
ನಿಯಂತ್ರಿಸುವ ವಿಽ ವಿಧಾನಗಳು, ಬದುಕಿನ ಮೂಲ ಉದ್ದೇಶ, ಹುಟ್ಟು ಮತ್ತು ಸಾವುಗಳು, ಪುನರ್ಜನ್ಮ, ಕರ್ತವ್ಯ ಪ್ರಜ್ಞೆ, ಸುಖ ದುಃಖಗಳ ನಿಯಂತ್ರಣ, ಬದುಕಿನಲ್ಲಿ ಏನು ಮಾಡಬೇಕು, ಏನು ಮಾಡಬಾರದು, ಗುಣಗಳು ಮತ್ತು ವೃತ್ತಿಗಳ ಆಧಾರಿತವಾದ ಮನುಷ್ಯರ ವಿಂಗಡಣೆ, ಇಂದ್ರಿಯ ಮತ್ತು ಇಂದ್ರಿಯಾತೀತ ಜ್ಞಾನ, ಯೋಗ ಇತ್ಯಾದಿ ಮತ್ತು ಇವೆಲ್ಲವುಗಳನ್ನು ನಿಯಂತ್ರಿಸುವ ಅತೀತ ಶಕ್ತಿ (ದೇವರು) ಇವೆಲ್ಲವುಗಳ ಬಗ್ಗೆ ವಿವರವಾದ, ವೈಜ್ಞಾನಿಕ ದೃಷ್ಟಿಕೋನವುಳ್ಳ ಜ್ಞಾನಗಳನ್ನೊಳಗೊಂಡಿದೆ.

ನುಷ್ಯನ ಮೆದುಳು ಮತ್ತು ಮನಸ್ಸಿನಲ್ಲಿ ಜನ್ಮದತ್ತವಾಗಿ ಹುದುಗಿರುವ ಸೃಷ್ಟಿಯ ಜ್ಞಾನವನ್ನು ಅನಾವರಣ ಮಾಡಿಕೊಳ್ಳಲು ಪಂಚೇಂದ್ರಿಯಗಳ(ಕಣ್ಣು, ಕಿವಿ, ನಾಲಿಗೆ, ಮೂಗು, ಚi) ಮೂಲಕ ಮೆದುಳಿಗೆ ಹೋಗುವ ನರಸಂವೇದನೆಗಳು  ಅತ್ಯವಶ್ಯಕ ವಾಗಿದ್ದು, ಇವುಗಳನ್ನು ಇಂದ್ರಿಯ ಜ್ಞಾನಗಳು ಎನ್ನಲಾಗುತ್ತದೆ.

ಪಂಚೇಂದ್ರಿಯಗಳ ಸಹಾಯವಿಲ್ಲದೆ ಸೃಷ್ಟಿಯಲ್ಲಿ ಅದೃಶ್ಯ, ಅಶ್ರವಣ, ಅಸ್ಪರ್ಶ, ಇಂದ್ರಿಯಾತೀತವಾದ ಸತ್ಯಾಂಶಗಳಿದ್ದು,
ಅವೆಲ್ಲವುಗಳನ್ನು ಗ್ರಹಿಸಿ ತಿಳಿಯುವ ವಿಽ ವಿಧಾನಗಳನ್ನು ಭಗವದ್ಗೀತೆ ಒಳಗೊಂಡಿದೆ. ಒಟ್ಟಿನಲ್ಲಿ ಭಗವದ್ಗೀತೆ ಮನುಷ್ಯನನ್ನೂ ಒಳಗೊಂಡಂತೆ ಇಡೀ ಸೃಷ್ಟಿಯ ರಚನೆ ಮತ್ತು ಕಾರ್ಯಗಳನ್ನೊಳಗೊಂಡ ಸೃಷ್ಟಿಯ ವಿಜ್ಞಾನಕೋಶ.

ಭಗವದ್ಗೀತೆಯ ಪ್ರತಿಯೊಂದು ಶ್ಲೋಕವೂ ಹತ್ತಾರು ಗೂಢಾರ್ಥಗಳನ್ನು ಒಳಗೊಂಡಿದ್ದು, ಇದನ್ನು ಅರ್ಥಮಾಡಿಕೊಳ್ಳಲು ಸೃಷ್ಟಿಯ ವಿಕಾಸ, ರಚನೆ, ಮನುಷ್ಯನ ರಚನೆ ಮತ್ತು ವಿಕಾಸ, ಮನುಷ್ಯನ ಮನಸ್ಸು ಮತ್ತದರ ಗುಣಗಳು ಇವುಗಳ ಬಗೆಗಿನ ಜ್ಞಾನ ಅತ್ಯವಶ್ಯಕ. ಪ್ರತಿಯೊಂದು ಶ್ಲೋಕದ ಅರ್ಥವನ್ನು ವೈಜ್ಞಾನಿಕ ದೃಷ್ಟಿಕೋನಕ್ಕೆ ಜೋಡಿಸಬಹುದಾಗಿದ್ದು, ಕೆಲವು ಉದಾಹರಣೆಗಳನ್ನು ಮಾತ್ರ ಇಲ್ಲಿ ಪ್ರಸ್ತಾಪಿಸಲಾಗಿದೆ.

ಅತೀತಶಕ್ತಿಯ ನಿಯಂತ್ರಣ
ಇಡೀ ಸೃಷ್ಟಿ ಅತೀತ ಶಕ್ತಿಯ ನಿಯಂತ್ರಣದಲ್ಲಿದೆ ಎಂಬುದಕ್ಕೆ ಹಲವಾರು ಉದಾಹರಣೆಗಳನ್ನು ಕೊಡಬಹುದಾಗಿದೆ. ಹಲವಾರು ಏರುಪೇರುಗಳ ನಡುವೆಯೂ ನಾಶವಾಗದೆ ಪದೋನ್ನತಿ ಕಡೆಗೆ ಸಾಗಿಬಂದಿರುವ ಸೃಷ್ಟಿಯ ಮತ್ತು ಮನುಷ್ಯನ ವಿಕಾಸ, ನಿರ್ದಿಷ್ಟ ಕಾಲಮಾನಕ್ಕೆ ಜರುಗುವ ಋತುಮಾನಗಳು, ಕಾಲಾನುಕಾಲಕ್ಕಾಗುವ ಭ್ರೂಣದ ನಿರ್ದಿಷ್ಟ ಬೆಳೆವಣಿಗೆ, ನಿರ್ದಿಷ್ಟ ಕಾಲಾವಧಿಯಲ್ಲಾಗುವ ವಯೋಮಾನದ ಬದಲಾವಣೆಗಳು, ನಿಗದಿತ ಚಂದ್ರೋದಯ, ಸೂರ್ಯೋದಯ ಮತ್ತಿತರ ಗ್ರಹಗಳ ಸಂಚಾರ ಇವೆಲ್ಲವೂ ಅತೀತಶಕ್ತಿಯ ನಿಯಂತ್ರಣದ ವೈಜ್ಞಾನಿಕ ಸುಳಿವನ್ನು ನೀಡುತ್ತವೆ.

ಸೃಷ್ಟಿಯಲ್ಲಿರುವ ಎಲ್ಲವುಗಳು ಅತೀತಶಕ್ತಿಯ ರೂಪಕಗಳು. ಅತೀತಶಕ್ತಿಯ ಇರುವಿಕೆಯನ್ನು ಈ ಶ್ಲೋಕಗಳಲ್ಲಿ ಮನೋಜ್ಞ ವಾಗಿ ವಿವರಿಸಲಾಗಿದೆ.

ಭೂಮಿರಾಪೋನಲೋ ವಾಯುಃ ಖಂ
ಮನೋ ಬುದ್ಧಿರೇವ ಚ|
ಅಹಂಕಾರ ಇತೀಯಂ ಮೇ ಭಿನ್ನಾ
ಪ್ರಕೃತಿರಷ್ಟಧಾ||( ಅಧ್ಯಾಯ-೭, ಶ್ಲೋಕ-೪)
ಭೂಮಿ, ನೀರು, ಅಗ್ನಿ, ವಾಯು, ಆಕಾಶ, ಮನಸ್ಸು, ಬುದ್ಧಿ, ಅಹಂಕಾರ ಈ ಎಂಟು ಶಕ್ತಿಗಳು ಅತೀತಶಕ್ತಿಯ ಪ್ರತಿಬಿಂಬ ಗಳಾಗಿವೆ ಎಂಬ ಅರ್ಥ ಈ ಶ್ಲೋಕದ್ದಾಗಿದ್ದು, ಸೃಷ್ಟಿಯ ಪ್ರತಿಯೊಂದು ಅತೀತಶಕ್ತಿಯೊಂದರ ರೂಪಕ ಎಂಬ ಅಂಶ ಕ್ವಾಂಟಂ ಭೌತಶಾಸ ಪ್ರತಿಪಾದಿಸುವ ವೈಜ್ಞಾನಿಕ ಅಂಶಕ್ಕೆ ಅನುಗುಣವಾಗಿದೆ.

ನಮ್ಮ ಅಸ್ತಿತ್ವಕ್ಕೆ ಕಾರಣಕರ್ತ ನಾದ ಭಗವಂತನಿಗೆ(ಅತೀತಶಕ್ತಿಗೆ) ಕೃತಜ್ಞತಾ ಪೂರ್ವಕವಾಗಿರಬೇಕು ಎಂಬುದನ್ನು  ಭಗವದ್ಗೀತೆ ಪ್ರತಿಪಾದಿಸುತ್ತದೆ.
ಆತ್ಮ ಎಂದರೇನು?
ಹೃದಿ ಹ್ಯೇಷ ಆತ್ಮಾ| ಅತ್ರೈತದೇಕಶತಂ ನಾಡೀನಾಂ
ತಾಸಾಂ ಶತಂ
ಶತಮೇಕೈಕಸ್ಯಾಂ ದ್ವಾಸಪ್ತತಿರ್ದ್ವಾಸಪ್ತತಿಃ
ಪ್ರತಿಶಾಖಾನಾಡೀಸಹಸ್ರಾಣಿ
ಭವಂತ್ಯಾಸು ವ್ಯಾನಶ್ಚರತಿ||
ಅನ್ತವನ್ತ ಇಮೇ ದೇಹಾ ನಿತ್ಯಸ್ಯೋಕ್ತಾಃ
ಶರೀರಿಣಃ||
ಅನಾಶಿನೋಪ್ರಮೇಯಸ್ಯ ತಸ್ಮಾದ್ ಯುಧ್ಯಸ್ವ
ಭಾರತ|| (ಅಧ್ಯಾಯ-೨, ೧೮ನೇ ಶ್ಲೋಕ)
ನ ಜಾಯತೇ ಮ್ರಿಯತೇ ವಾ ಕದಾಚಿನ್
ನಾಯಂ ಭೂತ್ವಾ ಭವಿತಾ ವಾ ನ ಭೂಯಃ|
ಅಜೋ ನಿತ್ಯಃ ಶಾಶ್ವತೋಯಂ ಪುರಾಣೋ
ನ ಹನ್ಯತೇ ಹನ್ಯಮಾನೇ ಶರೀರೇ|| ಅಧ್ಯಾಯ-೨,
೨೦ನೇಶ್ಲೋಕ)
ಈ ಶ್ಲೋಕಗಳಲ್ಲಿ ಆತ್ಮವನ್ನು ನಾಶಪಡಿಸಲಾಗದ, ಅಗ್ನಿಯಿಂದ ಸುಡಲಾಗದ, ಶಸ್ತ್ರಗಳಿಂದ ಕತ್ತರಿಸಲಾಗದ, ಹೃದಯ  ಲ್ಲಿರುವ, ಸಾವಿನ ಸಮಯದಲ್ಲಿ ನೆತ್ತಿಯಲ್ಲಿರುವ ಸಹಸ್ರಾರ ಚಕ್ರದಿಂದ ಹೊರಹೋಗುತ್ತದೆ, ಇದು ಅವಿನಾಶಿ ಎಂದು ವಿವರಿಸ ಲಾಗಿದೆ. ಇದನ್ನು ವೈಜ್ಞಾನಿಕ ದೃಷ್ಟಿಯಿಂದ ವಿಶ್ಲೇಷಿಸುವುದಾದರೆ, ಆತ್ಮ ಎಂದರೆ ಶಕ್ತಿ ಎಂತಲೂ, ಮನುಷ್ಯನಲ್ಲಿರುವ ಅತೀತ ಶಕ್ತಿಯ ಅಣು “ಆತ್ಮ”ವೆಂದೂ ತಿಳಿಯಬಹುದಾಗಿದೆ.

ಸೃಷ್ಟಿಯಲ್ಲಿರುವ ಎಲ್ಲವುಗಳು ಭೌತಶಾಸದ ಪ್ರಕಾರ ವಸ್ತು ಮತ್ತು ಶಕ್ತಿಗಳ ರೂಪಗಳಾಗಿದ್ದು, ಇವೆಲ್ಲವೂ ಅತೀತ ಶಕ್ತಿಯ ಕಣಗಳಾಗಿವೆ. ಶಕ್ತಿಯನ್ನು ನಾಶಪಡಿಸಲಾಗುವುದಿಲ್ಲ. ರೂಪಾಂತರ ಮಾಡಬಹುದಷ್ಟೇ ಎಂಬುದು ವೈಜ್ಞಾನಿಕ. ಮನುಷ್ಯನ ಆತ್ಮ ಹೃದಯದಲ್ಲಿದ್ದು, ಹೃದಯ ಅದರಲ್ಲಿಯೇ ಉತ್ಪತ್ತಿಯಾಗುವ ವಿದ್ಯುಚ್ಛಕ್ತಿಯಿಂದ ಕಾರ್ಯನಿರ್ವಹಿಸುತ್ತಿದ್ದು, ಆ ಜೈವಿಕ ವಿದ್ಯುತ್ ಸ್ಥಗಿತವಾದಾಗ ಹೃದಯ ನಿಂತು ದೇಹದ ಎಲ್ಲ ಭಾಗಗಳಿಗೂ ರಕ್ತ ಸಂಚಾರ ಇಲ್ಲವಾಗಿ, ಜೀವಕೋಶಗಳಲ್ಲಿ ಜೈವಿಕ ವಿದ್ಯುತ್ ಉತ್ಪತ್ತಿ ನಿಂತು ಅವುಗಳ ಸಾವುಂಟಾಗುತ್ತದೆ.

ತದನಂತರ ಮೆದುಳಿನಲ್ಲಿರುವ ಹೃದಯಕೇಂದ್ರದ ಕಾರ್ಯ ಸ್ಥಗಿತವಾಗಿ ಅದರಲ್ಲಿರುವ ವಿದ್ಯುಚ್ಛಕ್ತಿ ದೇಹದಿಂದ ಹೊರ ಬಂದು ಸಾವುಂಟಾಗುತ್ತದೆ. ಸಾವಾದಾಗ ದೇಹದೊಳಗೆ ಜೈವಿಕ ವಿದ್ಯುಚ್ಛಕ್ತಿ ಉತ್ಪತ್ತಿ ಸ್ಥಗಿತವಾಗುತ್ತದೆ. ದೇಹ ಮತ್ತು ಹೃದ ಯದಲ್ಲಿರುವ ಜೈವಿಕ ವಿದ್ಯುತ್ ಪರಿಸರದಿಂದ ಬಂದ ಆಹಾರದಿಂದ ಉತ್ಪತ್ತಿಯಾಗುವುದರಿಂದ ಇದು ವಿಶ್ವಶಕ್ತಿಯ
ರೂಪಕವಾಗಿದೆ. ಸಾವುಂಟಾದಾಗ ದೇಹದೊಳಗಿನ ಜೈವಿಕ ಶಕ್ತಿ ಹೊರಬಂದು ವಿಶ್ವಶಕ್ತಿಯೊಡನೆ ಪುನರ್ಮಿಲನವಾಗುತ್ತದೆ.

ಶಾಂತಿ ಹೇಗೆ?
ಮನುಷ್ಯ ಶಾಂತಿಯಿಂದ ಬದುಕಬೇಕಾದರೆ ಬದುಕಿನಲ್ಲಿ ಅವನು ಅನುಸರಿಸಬಹುದಾದ ಜೀವನ ಮಾರ್ಗೋಪಾಯಗಳು ಮತ್ತು ಗಳಿಸಬೇಕಾದ ಗುಣಗಳ ಬಗ್ಗೆ ಹಲವಾರು ಶ್ಲೋಕಗಳಲ್ಲಿ ವಿವರಿಸಲಾಗಿದೆ.

ವಿಹಾಯ ಕಾಮಾನ್ ಯಃ ಸರ್ವಾನ್
ಪುಮಾಂಶ್ಚರತಿ ನಿಃಸ್ಪಹಃ|
ನಿರ್ಮಮೋ ನಿರಹಂಕಾರಃ ಶಾನ್ತಿ
ಮಽಗಚಗಚ್ಛತಿ||( ಅಧ್ಯಾಯ-೨, ೭೧ನೇಶ್ಲೋಕ)
ಇಂದ್ರಿಯ ಸುಖಗಳಿಂದ ಯಾರು ದೂರವಿರುತ್ತಾರೋ(ಭೌತಿಕ ಸುಖ), ಒಡೆತನದ ಭಾವವನ್ನು ಯಾರು ತ್ಯಜಿಸುತ್ತಾರೋ, ಅಹಂಕಾರ ರಹಿತರಾಗಿರುತ್ತಾರೋ ಅವರು ಮಾತ್ರ ಶಾಂತಿಯಿಂದಿರಲು ಸಾಧ್ಯ. ನಿರಂತರ ಸಂತೋಷವಾಗಿಡುವ ಜೀವನಮಾರ್ಗವನ್ನು ಭಗವದ್ಗೀತೆ ಬೋಧಿಸುತ್ತದೆ.

ಮನಸ್ಸಿನ ನಿಯಂತ್ರಣ
ಮನಸ್ಸನ್ನು ಸಕಾರಾತ್ಮಕವಾಗಿ ನಿಯಂತ್ರಿಸಿ ತನ್ನ ಹಿಡಿತದಲ್ಲಿ ಹಿಡಿದಿಟ್ಟುಕೊಂಡು ನೆಮ್ಮದಿಯಾಗಿರುವ ವಿಧಿ ವಿಧಾನಗಳನ್ನು ವಿವರವಾಗಿ ತಿಳಿಸುತ್ತದೆ.

ಯತೋ ಯತೋ ನಿಶ್ಚಲತಿ ಮನಶ್ಚ
ಞಲಮಸ್ಥಿರಮ್|
ತತಸ್ತತೋ ನಿಯಮ್ಯೈತದಾತ್ಮನ್ಯೇವ ವಶಂ
ನಯೇತ್||(ಅಧ್ಯಾಯ-೬, ಶ್ಲೋಕ-೨೬)

ಚಂಚಲವಾಗಿ ಅಲೆದಾಡುವ ಮನಸ್ಸನ್ನು ಹಿಂದಕ್ಕೆ ಸೆಳೆದು ಅದನ್ನು ಆತ್ಮದ ನಿಯಂತ್ರಣಕ್ಕೆ ಒಳಪಡಿಸಬೇಕು, ಇದರಿಂದ ಮನಸ್ಸು ಶಾಂತವಾಗುತ್ತದೆ. ಯೋಗಾಭ್ಯಾಸದಿಂದ ಮಾತ್ರ ಇದು ಸಾಧ್ಯ ಎಂಬುದನ್ನು ಹಲವಾರು ಶ್ಲೋಕಗಳಲ್ಲಿ
ಅಳವಡಿಸಲಾಗಿದೆ.

(ಮುಂದುವರಿಯುವುದು)