Monday, 3rd October 2022

ಭಾರತ್‌ ಜೋಡೋಗೆ ಅಡ್ಡಹಾದಿಗಳಿಲ್ಲ

ರಾಜನೀತಿ

ಜಾನ್‌ ಬ್ರಿಟ್ಚಾಸ್‌

ಗುಜರಾತ್‌ನಂಥ ರಾಜ್ಯದಲ್ಲಿ ಯಾತ್ರೆ ಸಾಗಬೇಕಿತ್ತು; ಏಕೆಂದರೆ, ಮುಂದಿನ ವರ್ಷ ಅಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅಂತೆಯೇ ಹಿಮಾಚಲ ಪ್ರದೇಶದಲ್ಲಿ ಕೂಡ; ಇದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ತವರು ರಾಜ್ಯವೂ ಹೌದು.

ನಾವಾಡಿದ ಮಾತು ಪ್ರತಿಧ್ವನಿಸುವಂತಿರುವ ಕೋಣೆಯಲ್ಲಿ ಕುಳಿತುಕೊಂಡಿದ್ದರೆ ಒಂಥರಾ ಮಜಾ ಸಿಗುತ್ತಿರುತ್ತದೆ. ಅಲ್ಲಿ ವಾಸ್ತವದ ಅರಿವೇ ಆಗುವುದಿಲ್ಲ. ಕಾಂಗ್ರೆಸ್ ಪಕ್ಷವು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಈಗಾಗಲೇ ಹಮ್ಮಿಕೊಂಡಿರುವ, ಬರೋಬ್ಬರಿ ೩,೫೦೦ ಕಿ.ಮೀ.ವರೆಗೆ ಸಾಗುವ ‘ಭಾರತ್ ಜೋಡೋ’ ಪಾದಯಾತ್ರೆಯ ಸಾಫಲ್ಯ-ವೈಫಲ್ಯಗಳ ಬಗ್ಗೆ ಈಗಲೇ ಏನನ್ನೂ ಹೇಳಲಾಗದು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಈ ಯಾತ್ರೆಯನ್ನು ಸಂಪನ್ನಗೊಳಿಸಿ ಶ್ರೀನಗರ ತಲುಪುವ ಹೊತ್ತಿಗೆ, ಕಾಂಗ್ರೆಸ್ ಪಕ್ಷವು ಪ್ರಸ್ತುತ ಎದುರಿಸುತ್ತಿರುವ ರಾಜಕೀಯದ ಹಲವು ಕಟುವಾಸ್ತವಗಳಿಂದ ದೂರ ಉಳಿದುಬಿಡುವ ಸಾಧ್ಯತೆಯೇ ಹೆಚ್ಚಿದೆ ಎನಿಸುತ್ತದೆ. ಸಮಾಜದ ವಿವಿಧ ನೆಲಗಟ್ಟುಗಳಲ್ಲಿ ಒಡಕುಂಟುಮಾಡುವ ಬಿಜೆಪಿಯ ವಿಭಜಕ ರಾಜಕೀಯದಿಂದ ದೇಶವನ್ನು ರಕ್ಷಿಸುವುದೇ ಈ ಯಾತ್ರೆಯ ಮೂಲೋದ್ದೇಶ ಎಂದು ರಾಹುಲರೇ ಒಂದೆಡೆ ಹೇಳಿಕೊಂಡಿದ್ದಾರೆ.

ಯಾತ್ರೆ ಶುರುವಾಗಿ ಸಾಕಷ್ಟು ದಿನಗಳು ಕಳೆದಿರುವ ಈ ಘಟ್ಟದಲ್ಲಿ, ದ್ವೇಷ ಮತ್ತು ಧರ್ಮಾಂಧತೆಯಿಂದ ದೇಶವನ್ನು ವಿಮೋಚನೆ ಗೊಳಿಸುವ ನಿಟ್ಟಿನಲ್ಲಿ ನೆಹರು-ಗಾಂಧಿ ಕುಟುಂಬ ಏನೇನೆಲ್ಲ ಮಾಡಿದೆ ಎಂಬ ವಿಷಯದ ಕುರಿತಾದ ವಿಸ್ತೃತ ಚರ್ಚೆಯಲ್ಲಿ ರಾಜಕೀಯ ವಲಯ ತೊಡಗಿಸಿಕೊಂಡಿದೆ. ರಾಹುಲ್ ಗಾಂಧಿ ಮತ್ತು ಅವರ ಸಹಚರರು ಧರಿಸಿರುವ ದುಬಾರಿ ಟಿ-ಶರ್ಟ್ ಬಗ್ಗೆ, ಯೇಸುಕ್ರಿಸ್ತ ದೇವರು ಹೌದೋ ಅಲ್ಲವೋ ಎಂಬುದರ ಬಗ್ಗೆ ಮತ್ತು ಕೇರಳದ ರಸ್ತೆಬದಿಯ ಕುರುಕಲು ತಿಂಡಿಗಳು ಎಷ್ಟು ರುಚಿಕರವಾಗಿದ್ದವು ಎಂಬುದರ ಬಗ್ಗೆಯಷ್ಟೇ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ.

ಆದರೆ, ದೆಹಲಿಯ ಜಾಣನೊಬ್ಬ ಹಿಂದೊಮ್ಮೆ ಹೇಳಿದ್ದ ‘ದೆಹಲಿ ಇನ್ನೂ ತುಂಬ ತುಂಬ ದೂರವಿದೆ’ ಎಂಬ ಮಾತನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುವುದು ಅರ್ಥ ಪೂರ್ಣವೆನಿಸುತ್ತದೆ. ಇಂಥದೊಂದು ಭಾರಿ ಅಂತರದ ಯಾತ್ರೆಯನ್ನು ಹಮ್ಮಿ
ಕೊಂಡು ಶುರುಮಾಡಿದ ರಾಹುಲ್ ಗಾಂಧಿಯವರ ಸಾಹಸವನ್ನು ಮೆಚ್ಚೋಣ, ಸ್ವಾಗತಿಸೋಣ. ಆದರೆ ಇಲ್ಲೊಂದು ಸಂಗತಿ ಯನ್ನು ಗಮನಿಸಬೇಕು.

ಹಿಂದೊಮ್ಮೆ ಅವರು ಇಂಥ ಯಾತ್ರೆಯ ಪ್ರಸ್ತಾವನೆಯಿಂದ ಹಿಮ್ಮೆಟ್ಟಿದ್ದರ ಜತೆಗೆ, ಮೋದಿ ನಾಯಕತ್ವದ ಬಿಜೆಪಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲರಾಗಿದ್ದರು. ಪ್ರಸ್ತುತ ‘ಭಾರತ್ ಜೋಡೋ’ ಯಾತ್ರೆ ಕೇರಳದಲ್ಲಿ ಸಾಗುತ್ತಿದ್ದು, ಈ ಕಾಲ ಘಟ್ಟದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಬಹುದಾದ ಜೋಕುಗಳ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ. ಅಲ್ಲಿ ಬಿಜೆಪಿಯ ಹಿಡಿತದಿಂದ ರಾಜ್ಯವನ್ನು ಹೊರತರುವ ಮಾತು ಅಪ್ರಸ್ತುತವೆನಿಸುತ್ತದೆ.

ಏಕೆಂದರೆ ಕೇರಳದಲ್ಲಿ ಬಿಜೆಪಿ ಇನ್ನೂ ಕಾಲೂರಿಯೇ ಇಲ್ಲ. ಬಹುಶಃ, ಕೇರಳ ರಾಜ್ಯದಲ್ಲಿ ಕಾಣಬರುವ ಸಾಮಾಜಿಕ ಸಾಮರಸ್ಯ ಮತ್ತು ‘ವಿವಿಧತೆಯಲ್ಲಿ ಏಕತೆ’ಯ ಪರಿಕಲ್ಪನೆ ಯನ್ನು ದೇಶದ ಇತರೆ ರಾಜ್ಯಗಳಿಗೂ ಪಸರಿಸುವ ಉದ್ದೇಶ ರಾಹುಲರಿಗೆ ಇರಬ ಹುದು. ಅಚ್ಚರಿಯೆಂದರೆ, ದ್ವೇಷ ಮತ್ತು ಅಸಾಮರಸ್ಯವಿರುವ ಪ್ರದೇಶಗಳ ಮೂಲಕ ಈ ಯಾತ್ರೆ ಹಾದುಹೋಗುತ್ತಿಲ್ಲ. ಗುಜರಾತ್‌ ನಂಥ ರಾಜ್ಯದಲ್ಲಿ ಈ ಯಾತ್ರೆ ಸಾಗಬೇಕಿತ್ತು; ಏಕೆಂದರೆ, ಮುಂಬರುವ ವರ್ಷ ಅಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅಂತೆಯೇ ಹಿಮಾಚಲ ಪ್ರದೇಶದಲ್ಲಿ ಕೂಡ- ಇದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ತವರುರಾಜ್ಯವೂ ಹೌದು.

ಬಿಜೆಪಿಯ ದರ್ಬಾರು ನಡೆಯುತ್ತಿರುವ ರಾಜ್ಯಗಳಲ್ಲಿ ಯಾತ್ರೆ ಸಾಗುವುದಕ್ಕೆ ರಾಹುಲ್ ಗಾಂಧಿಯವರ ಸಲಹೆಗಾರರು ಇಷ್ಟ ಪಡುತ್ತಿಲ್ಲ ಮತ್ತು ಕಾಂಗ್ರೆಸ್ಸಿನ ಸೀಟುಗಳನ್ನು ಭದ್ರಪಡಿಸಿಕೊಳ್ಳುವುದಕ್ಕೆ ಮಾತ್ರವೇ ಅವರ ಉದ್ದೇಶ ಸೀಮಿತವಾಗಿದೆ ಎಂದೂ ಹೇಳಲಾಗುತ್ತಿದೆ. ಸ್ವಾರಸ್ಯಕರ ಸಂಗತಿಯೆಂದರೆ, ಕೇರಳದ ಸ್ಥಳೀಯ ರಾಜಕಾರಣದಲ್ಲಿ ರಾಹುಲ್ ಗಾಂಧಿಯವರಿಗೆ ಹೆಚ್ಚಿನ ಒಲವು ಇದ್ದಂತಿದೆ. ಲ್ಯಾಟಿನ್ ಆರ್ಚ್ ಡಯೊಸೆಸ್‌ನ ಪಾದ್ರಿಗಳ ಪ್ರತಿಭಟನೆ, ಕೇರಳದ ಸೆಮಿ ಹೈಸ್ಪೀಡ್ ಯೋಜನೆಯ ಬಗೆಗಿನ ಪ್ರತಿಭಟನೆ ಇತ್ಯಾದಿಗಳಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದು ಈ ಮಾತಿಗೆ ಪುಷ್ಟಿ ನೀಡುತ್ತವೆ.

ತಿರುವನಂತಪುರದ ವಿಳಿಂಜಮ್ ಎಂಬಲ್ಲಿರುವ ಬಂದರನ್ನು ಯುಪಿಎ ಸರಕಾರವಿದ್ದಾಗಲೇ ಮಂಜೂರು ಮಾಡಲಾಗಿತ್ತು. ಆಗ
ಓಮನ್ ಚಾಂಡಿ ಕೇರಳದ ಮುಖ್ಯಮಂತ್ರಿಯಾಗಿದ್ದರೆ, ಕಾಂಗ್ರೆಸ್ಸಿನ ಮಾಧ್ಯಮ ವಿಭಾಗದ ಮುಖ್ಯಸ್ಥ ಜೈರಾಮ್ ರಮೇಶ್ ಕೇಂದ್ರ ಪರಿಸರ ಖಾತೆಯ ಸಚಿವರಾಗಿದ್ದರು. ಕಡಲಕೊರೆತ ಮತ್ತು ಜನರ ಜೀವನೋಪಾಯಕ್ಕೆ ಒದಗಬಹುದಾದ ತೊಂದರೆಗಳೂ ಸೇರಿದಂತೆ ಹತ್ತು ಹಲವು ಸಮಸ್ಯೆಗಳು ಮತ್ತು ಚರ್ಚಾವಿಷಯಗಳ ನಡುವೆಯೇ ಈ ಯೋಜನೆಯನ್ನು ಕಾರ್ಯಗತ ಗೊಳಿಸ ಲಾಗಿತ್ತು ಎಂಬ ಸಂಗತಿಯನ್ನಿಲ್ಲಿ ನೆನಪುಮಾಡಿಕೊಳ್ಳಬೇಕು.

ಅದಿರಲಿ, ಈಗ ಮತ್ತೆ ಯಾತ್ರೆಯ ವಿಷಯಕ್ಕೆ ಬರೋಣ. ಕೇಸರಿ ಪಾಳಯದ ಪ್ರಾಂತ್ಯಗಳಲ್ಲಿ, ಅದರಲ್ಲೂ ವಿಶೇಷವಾಗಿ ಯೋಗಿ ಆದಿತ್ಯನಾಥರ ಆಡಳಿತವಿರುವ ಉತ್ತರ ಪ್ರದೇಶದಲ್ಲಿ ರಾಹುಲರ ಯಾತ್ರೆ ಸಾಗುವುದೇ ಇಲ್ಲ. ಕಳೆದ ಲೋಕಸಭಾ ಚುನಾವಣೆ ಯಲ್ಲಿ ಅವರು ಮುಸ್ಲಿಂ ಲೀಗ್ ಪ್ರಾಬಲ್ಯವಿರುವ ವಯನಾಡನ್ನು ಸ್ಪರ್ಧೆಗೆ ಆಯ್ದುಕೊಂಡಾಗ, ‘ಇದೊಂದು ಅಸಮಂಜಸ ನಿರ್ಧಾರ’ ಎಂಬ ಮಾತು ಅವರದೇ ಪಕ್ಷದ ವಲಯಗಳಲ್ಲಿ ಹರಿದಾಡಿತ್ತು.

‘ಯುದ್ಧ ಗೆಲ್ಲಲು ಅಗತ್ಯವಿರುವ ಶೌರ್ಯವಿಲ್ಲದ ಕಾರಣಕ್ಕಾಗಿ, ಹಸಿರು ಹುಲ್ಲುಗಾವಲು ಹುಡುಕಿಕೊಂಡು ಕೇರಳಕ್ಕೆ ಹೋಗಿ
ಚುನಾವಣೆಗೆ ನಿಂತಿದ್ದಾರೆ’ ಎಂಬ ಆರೆಸ್ಸೆಸ್ ಬ್ರಿಗೇಡಿನ ಟೀಕೆಗಳನ್ನೂ ಅವರು ಎದುರಿಸಬೇಕಾಗಿ ಬಂತು. ಪಂಜಾಬಿನಲ್ಲಿ
ಕಾಂಗ್ರೆಸ್ಸನ್ನು ಹಿಮ್ಮೆಟ್ಟಿಸಿ ಆಮ್ ಆದ್ಮಿ ಪಕ್ಷ ಹೇಗೆ ತನ್ನ ಪಾರಮ್ಯ ಮೆರೆಯಿತೋ, ಅದು ಕೇರಳದಲ್ಲಿ ಆಗದಂತೆ ನೋಡಿಕೊಳ್ಳುವ ತಂತ್ರಗಾರಿಕೆಯನ್ನು ಹೊಸೆಯುವಂತೆ ಸಲಹೆಗಾರರು ರಾಹುಲರಿಗೆ ಸರಿಯಾದ ಮಾರ್ಗದರ್ಶನ ನೀಡಬಹುದಿತ್ತು ಎನಿಸುತ್ತದೆ.

ಒಂದಂತೂ ನಿಜ. ಮೋದಿಯವರನ್ನು ಹಿಮ್ಮೆಟ್ಟಿಸಬಲ್ಲ ಸಶಕ್ತ ಅಸಪ್ರಯೋಗ ಮಾಡುವುದು ರಾಹುಲರಿಗೆ ಸಾಧ್ಯವಾದಲ್ಲಿ ಮಾತ್ರವೇ ಕಾಂಗ್ರೆಸ್‌ನಲ್ಲಿ ಧಗಧಗಿಸುತ್ತಿರುವ ಅಸಹನೆ ಮತ್ತು ಅಶಾಂತಿ ತಣ್ಣಗಾಗಬಹುದು. ಗಾಂಧಿ ಕುಟುಂಬದ ಯಾರಾದರೂ ಸದಸ್ಯರು ಮುಂಚೂಣಿಯಲ್ಲಿ ಇಲ್ಲದೆ ಹೋದರೆ ಬಹುಪಾಲು ಕಾಂಗ್ರೆಸ್ಸಿಗರು ಏನನ್ನೋ ಕಳಕೊಂಡವರಂತೆ ತಳಮಳಿಸುತ್ತಾರೆ. ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ನಿಂದ ಎಲ್ಲರೂ ಬಯಸುತ್ತಿರುವುದು ಪರಿಣಾಮಕಾರಿಯಾದ ಸಾಂಸ್ಥಿಕ ಸ್ವರೂಪ, ತತ್ತ್ವಬದ್ಧ ವಾದ ದೂರ ದೃಷ್ಟಿಯುಳ್ಳ ನಡೆ. ಆದರೆ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುವಲ್ಲಿ ಅಗತ್ಯವಿರುವ ಗಟ್ಟಿತನವನ್ನು ರಾಹುಲ್
ಗಾಂಧಿ ಆದಷ್ಟು ಬೇಗ ಮೈಗೂಡಿಸಿಕೊಳ್ಳಬೇಕಿದೆ.

ಪಕ್ಷದ ಒಳಗಿನ ಮತ್ತು ಹೊರಗಿನ ಎಲ್ಲರ ಮಾತುಗಳನ್ನೂ ಅವರು ಶಾಂತವಾಗಿ ಆಲಿಸಬೇಕಾದ ಪರಿಸ್ಥಿತಿಯಿದೆ. ದೇಶ ಮತ್ತು
ಕಾಂಗ್ರೆಸ್ ಪಕ್ಷ ಎರಡೂ ಬದಲಾವಣೆಯ ಅಂಚಿನಲ್ಲಿವೆ, ಅಂಥದೊಂದು ಅನಿವಾರ್ಯತೆಯಲ್ಲಿ ಸಿಲುಕಿವೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕಿದೆ. ಹೀಗಾಗಿ, ಪಕ್ಷದಲ್ಲಿ ತಮ್ಮ ಉತ್ತರಾಧಿಕಾರಿಯಾಗುವ ವ್ಯಕ್ತಿಗೆ ಪಕ್ಷದ ಪುನಶ್ಚೇತನಕ್ಕೆ ಬೇಕಾದ ಎಲ್ಲ ಸಹಕಾರಗಳನ್ನೂ ಅವರು ನೀಡಬೇಕಿದೆ.

ಒಂದು ವೇಳೆ, ಹೊಗಳುಭಟರಿಂದ ಪರಾಕು ಹೇಳಿಸಿಕೊಳ್ಳುವ ಚಾಳಿಗೇ ಅವರು ಒಡ್ಡಿಕೊಂಡರೆ, ಅವರ ಪಕ್ಷ ಖಂಡಿತ ಉದ್ಧಾರ ವಾಗದು. ತಮಾಷೆ ನೋಡಿ- ರಾಹುಲ್ ಗಾಂಧಿಯವರ ಪಾದ ಯಾತ್ರೆ ಸಾಗುತ್ತಿರುವ ಕಾಲಘಟ್ಟದಲ್ಲಿಯೇ ಕಾಂಗ್ರೆಸ್ ಪಕ್ಷದ
ಅಧ್ಯಕ್ಷೀಯ ಚುನಾವಣೆಯೂ ನಡೆಯಲಿದೆ. ಅಂದರೆ ಒಂದು ಮಾತು ಸ್ಪಷ್ಟ- ರಾಹುಲ್ ಗಾಂಧಿಯವರ ನೆರಳಿನಂತಿರುವ ವ್ಯಕ್ತಿಯೊಬ್ಬರು ಪಕ್ಷದ ಅಧ್ಯಕ್ಷರಾಗಲಿದ್ದಾರೆ. ಸ್ವತಃ ರಾಹುಲರೇ ಯಾತ್ರೆಯ ಭಾಗವಾಗಿ ರಸ್ತೆಯಲ್ಲಿ ನಡೆದಾಡುತ್ತಿರುವಾಗ ಪಕ್ಷಕ್ಕೆ ಹೊಸ ಅಧ್ಯಕ್ಷ ನೇಮಕವಾಗುತ್ತಾರೆಂದರೆ, ಆ ಪಕ್ಷದಿಂದ ಬೇರಿನ್ನೇನನ್ನು ನಿರೀಕ್ಷಿಸಲು ಸಾಧ್ಯ ಹೇಳಿ?