Friday, 18th June 2021

ಭೂತೋಚ್ಚಾಟನೆಗೆ ಬೆತ್ತಲೆ ಕುಸ್ತಿ ಕಾಂಗ್‌ ಹೈ..ಕೀ.

ಅಲೆಮಾರಿಯ ಡೈರಿ

ಸಂತೋಷಕುಮಾರ ಮೆಹೆಂದಳೆ

ಎಲ್ಲಿಂದ ಬರ್ತಿದಿಯಾ..? ಇಷ್ಟೊತ್ತಲ್ಲಿ ಎಲ್ಲಿಗೆ ಹೋಗ್ತಿಯಾ ಆಗಲೇ ನಾಲ್ಕೂವರೆ ಆಗ್ತಿದೆ. ಇನ್ನೇನು ಅರ್ಧ ಗಂಟೆಗೂ ಮೊದಲೆ ನೀನು ಕತ್ತಲೆಯಲ್ಲಿ ಸಿಕ್ಕು ಬೀಳುತ್ತಿಯಾ. ಅಮೇಲೆ ಇಲ್ಲಿ ಉಳಿಯೋಕೆ ಯಾವ ವ್ಯವಸ್ಥೆನೂ ಆಗುವುದಿಲ್ಲ. ಇತ್ಯಾದಿ ಇತ್ಯಾದಿ.

ಆಕೆಯ ಸ್ಥಳೀಯ ವಿವರಣೆ ಜತೆಗೆ ಪೂಕುತ್ತಿದ್ದ ಬೀಡಿಯ ಕೆಮ್ಮು ಅಡ್ಡ ಬರುತ್ತಿತ್ತು. ನಾನು ಸುಮ್ಮನೆ ನೋಡಿದ್ದೆ. ಕೈ ಮುಂದೆ ಮಾಡಿ ಬೀಡಿ ಬೇಕಾ ಎಂದು ಕೇಳಿದವಳ ಕೈಯಿಂದ ಕಿತ್ತುಕೊಂಡು ಒಂದು ಚುರುಕು ಸೆಳೆದು ಬಿಸಾಡುತ್ತ, ನನ್ನೆಲ್ಲ ಅಲೆಮಾರಿ ತನದ ಕಥೆ ಹೇಳಿ ಎಲ್ಲಿಗೆ ಹೋಗಲಿ ಎಂದು ದೊಡ್ಡ ಯುದ್ಧಕ್ಕೆ ಹೊರಡುವವನಂತೆ ಎದ್ದು ನಿಂತಿದ್ದೆ. ಅಷ್ಟೆ ಸೀದಾ ಹೊರಗಿನ
ಬಾಗಿಲಿನ ಎಡಕ್ಕೆ ತಿರುಗಿಸಿ ಇಲ್ಲಿಂದ ಹನ್ನೆರಡು ಕಿ.ಮೀ. ಹೋಗು ದಾರಿಲಿ ಚಿಕ್ಕ ಜಲಪಾತ ಇದೆ.

ನೋಡಿಕೊಂಡು ಮುಂದೆ ಹೋದರೆ ಸಿಕ್ಕೊದೆ ಕೌಲಿಂಗ್… ಎಂದಳು. ಏನಿದು ಕೌಲಿಂಗ್? ಊರಾ, ಹೋಟೆಲಾ..? ಕೂತಿದ್ದ ಬೈಕು
ಗುಡುಗುಡಿಸುತ್ತಲೇ ಇತ್ತು. ನಿನ್ನಂಥವರಿಗೆಂದೆ ಇರೋ ಊರು. ಜೇನಿನಂಥ ಕಿತ್ತಳೆ ವೈನು ಅದಕ್ಕೂ ದೀವಿನಾದ ಕೆಂಪು ಬಿದರಕ್ಕಿ
ಅನ್ನ ಮತ್ತು ಗೆಣಸು ಪಲ್ಯ ಇಷ್ಟೆ ಅಲ್ಲಿ ಸಿಗೋದು. ಅದೂ ವೆಜ್ಜು ಎನ್ನುತ್ತಾ ಮಜಾಲು ಎಂಬ ಐವತ್ತರ ಆಸುಪಾಸಿನ ವಯಸ್ಕ
ಹೆಂಗಸು ಅರ್ಧಕ್ಕಿಂತ ಹೆಚ್ಚೆ ಬಿಚ್ಚಿದ್ದ ಎದೆ ಮುಚ್ಚುವ ಗೋಜಿಗೂ ಹೋಗದೆ ಗಾಳಿಗೆ ಒಡ್ಡಿಕೊಂಡು ಕೂತು ವಿವರ ಕೊಡುತ್ತಿದ್ದರೆ
ನಾನು ಭರ್ತಿ ವೇಗದಲ್ಲಿ ಗಾಡಿ ದೌಡಾಯಿಸಿದ್ದೆ.

ಅಂದ ಇಲ್ಲಿನ ಹೆಚ್ಚಿನ ಬುಡಕಟ್ಟಿನವರಲ್ಲಿ ಈಗಲೂ ಎದೆಯ ಭಾಗ ಮುಚ್ಚುವ ಅಭ್ಯಾಸ ಇಲ್ಲವೇ ಇಲ್ಲ. ಅರ್ಧ ನೇತಾಡುವ ಸರ, ಚಿಪ್ಪಿನ ಶೃಂಗಾರದ ಆಭರಣ ಮತ್ತು ಆಂಗೈಯಗಲದ ಎಳೆಗಳಡಿಯಲ್ಲಿ ಎಲ್ಲಾ ಬಹಿರಂಗ. ಮಜಾಲು ಕರೆಕ್ಟಾಗೇ ದಾರಿಯ ಮಾಹಿತಿ ಕೊಟ್ಟಿದ್ದಳು. ಸ್ಥಳೀಯ ದುಬಾಷಿ ಕಮ್ ಗೈಡ್ ಮೋವಾನ್, ನೋಡು ಎಲ್ಲೂ ನಿಲ್ಲೋದಿಲ್ಲ ಅಂಥ ಬೈಕು ಕೊಡ್ಸೀದಿನಿ ಎಂದಿದ್ದೂ ನಿಜವೇ ಆಗಿತ್ತು. ಏಳುಬೀಳಿನ ಕಚ್ಚಾ ರಸ್ತೆಯಲ್ಲಿ ಕೌಲಿಂಗ್ ಜಲಪಾತದ ಸರಹದ್ದಿನಲ್ಲಿ ಮುಳುಗೆದ್ದು ಬೂಟು, ಚೆಡ್ಡಿತನಕ ಒಳಗೆಲ್ಲಾ ಒದ್ದೆ ಪಿಚಿಪಿಚಿ ಮಾಡಿಕೊಂಡು ನಡುರಾತ್ರಿಯ ಅನುಭವಕ್ಕೀಡು ಮಾಡುವ ಕಾಳರಾತ್ರಿಯ ಸಂಜೆಯ ಹೊತ್ತಿಗೆ ಕಾಂಗ್ ಹೈ ಕೀ ನಡೆಯುವ ಹಳ್ಳಿಯ ಹೆಬ್ಬಾಗಿಲಿಗಿದ್ದೆ.

ಅಲ್ಲೊಂದು ಇಲ್ಲೊಂದು ಚಿಕ್ಕ ಅಂಗಡಿಗಳು ತೆರೆದೇ ಇದ್ದವು. ನಾಯಿಗಳೆರಡು ನುಗ್ಗಿ ಬಂದವು. ಕಾಲೆತ್ತದೆ ಕೂತೇ ಇದ್ದೆ. ನನ್ನ ಹೆಲ್ಮೇಟ್ಟು, ಬೆನ್ನಿಗಿದ್ದ ರ‍್ಯಾಕ್‌ಸ್ಯಾಕು ಅದಕ್ಕಿಂತ ದೊಡ್ಡ ಜರ್ಕೀನು, ಗ್ಲೋವ್ಸು ಇತ್ಯಾದಿ ನೋಡಿ ಕುಂಯ್ ಗುಟ್ಟಿ ಸುಮ್ಮನಾದವು. ಸೈಡ್‌ಸ್ಟ್ಯಾಂಡಿಗೆ ಗಾಡಿ ಎಳೆದು ಗೂಡಂಗಡಿ ಅಮ್ಮನ ಮುಂದೆ ನಿಂತು ಇವತ್ತಿಗೆ ಊಟ ಮತ್ತು ರೂಮು ಎಂದು ಮಣಿಪುರಿಯಲ್ಲಿ ಹಲ್ಕಿರಿದಿದ್ದೆ. ಏನು ಹೇಳಬೇಕೆಂದು ಮೊದಲೇ ಕೇಳಿಕೊಂಡು ಬರೆದಿಟ್ಟುಕೊಳ್ಳುತ್ತಿದ್ದೆ.

ಹತ್ತನ್ನೆರಡು ಸಾಲು ಪ್ರಶ್ನೆಗಳು, ಬೇಕಾದ ಊರ ಹೆಸರುಗಳು ಇದಿಷ್ಟು ಸರಿಯಾಗಿ ಸ್ಥಳೀಯ ಭಾಷೆಯಲ್ಲಿ ಬರೆದಿರಿಸಿಕೊಂಡರೆ ಒಂದು ರಾಜ್ಯ ಸುತ್ತಬಹುದು. ಅದನ್ನೆ ಹೋದಲ್ಲೆಲ್ಲ ಓದಿ ಕೇಳುತ್ತಾ ಸಾಗುತ್ತಿದ್ದೆ. ಮರುದಿನದ ಕಾಂಗ್ ಹೈ ಕೀ ಕುಸ್ತಿಗೆ ಬಂದಿರುವು ದಾಗಿ ಅವಳಿಗೆ ಗೊತ್ತಾಗಿ ಖುಷಿಯಾಗಿದ್ದಳು. ಸುಮಾರು ನೂರು ಮೀ. ದೂರ ಇದ್ದ ಕಿಶಾ ಎಂಬುವವಳ ಮನೆಯಲ್ಲಿ ಅಶ್ರಯ ಕೊಡಿಸಿದ್ದಳು. ಹಿಂದಿನ ಊರಿನ ಮಜಾಲು ಹೇಳಿದ್ದ ವೈನು / ಕೆಂಪು ಬಿದಿರಕ್ಕಿ ಅನ್ನ ಮತ್ತು ಗೆಣಸು ಪಲ್ಯೆ ಎಂದೆ. ಆಕೆ ತಂಬಾಕು ಜಗಿದು ಅದಕ್ಕಿಂತಲೂ ಕೆಂಪಾದ ಹಲ್ಕಿರಿಯುತ್ತ, ಏನು ಬರ್ತಿದ್ದಂತೆ ಕುಡಿಯೋಕೆ ಕೂತ್ಕೊತೀಯಾ..? ಎಂದಳು.

ಇಲ್ಲ ಇಲ್ಲ ಆ ಅಂಗಡಿ ಮಾಯಿ ಮಜಾಲು ಹೇಳಿದ್ದಳು ಅದಕ್ಕೆ ಕೇಳಿದೆ ಎನ್ನುತ್ತಾ ಹಲ್ಕಿರಿದು ತಪ್ಪು ಮಾಡಿದ್ದೆ. ಎಷ್ಟೆಂದರೂ
ಹೆಂಗಸರು. ಒಂದು ಜಡೆ ಇನ್ನೊಂದಕ್ಕೆ ಆಗುವುದಿಲ್ಲ. ರಂಪ ರಾಮಾಯಣದ ಕೂಗಾಟ ಮಾಡಿಬಿಟ್ಟಿದ್ದಳು. ಆ ಹೆಂಗಸಿಗೆ ಬುದ್ಧಿ ಇಲ್ಲ. ಹೊರಗಿನಿಂದ ಬಂದ ಜನರಿಗೆಲ್ಲಾ ನಾನು ಹೆಂಡ ಮಾರುವವಳು ಎಂದು ಹೇಳಿ ನನ್ನ ಮರ್ಯಾದೆ ತೆಗೆಯುತ್ತಾಳೆ.
ಅವಳಿಗೇನೂ ಕೂತು ನನ್ನ ಹೆಸರು ಹೇಳ್ತಾಳೆ. ನಾನೇನು ದಂಧೇನಾ ಮಾಡ್ತಿದೀನಿ ಅಪ್ಪಟ ಹೆಂಗಸರ ಶೈಲಿಯಲ್ಲಿ ಚಿಟಿಚಿಟಿ
ಚೀರತೊಡಗಿದ್ದಳು. ಎಲ್ಲಿ ಹೋದರೂ ಇದು ಯುನಿವರ್ಸಲ್.

ಸುಮ್ಮನೆ ನಕ್ಕು ಕಿಶಾಳ ಹಿಂದೆ ಹೋಗಿದ್ದೆ. ರಾತ್ರಿಗಿನ್ನು ಸಮಯವಿತ್ತು. ಅಷ್ಟರಲ್ಲಿ ಆಚೆ ಕಡೆಯ ಬಾಗಿಲಲ್ಲಿ ಸದ್ದಾಗಿತ್ತು.
ಜಗುಲಿಯಲ್ಲಿದ್ದ ಬೆಂಚಿನ ಮೇಲೆ ಊಟ ಮತ್ತು ಜೇನಿನಂತಹ.. ಅದರೊಂದಿಗೆ ಸರ್ವೀಸಿಗೆ ನಿಂತಾಕೆ ಅಪ್ಪಟ ಮಣಿಪುರಿ
ಸೌಬಾಯಿ ಅನ್ನೋ ಮನೆಯಾಕೆ. ಅದ್ಭುತ ದಿನವೊಂದು ಕಾಯ್ದಿತ್ತು. ಪಕ್ಕದಲ್ಲೇ ಹರಿಯುವ ಅಫಾ ನದಿ ರಭಸ ಯಾವಾಗಲೂ ಭರ್ರ್ ಎನ್ನುವ ಸಪ್ಪಳ ಮಾಡುತ್ತಿದ್ದರೆ ಅಲ್ಲೆಲ್ಲೋ ಪುಂಗಾ ಚೊಲೆಮ್ ನುಡಿಸುವ ಸದ್ದು ಇಲ್ಲಿ ಖಾಯಂ. ಆವತ್ತಿಗೆ
ಕಿತ್ತಳೆ ಜಿಲ್ಲೆ ತೆಮೆನ್‌ಗ್ಲಾಂಗ್ ನಿದ್ರೆಗೆ ಜಾರುತ್ತಿತ್ತು.

ಮರುದಿನ ಬೆಳಗ್ಗೆ ನಸುಕು ಮೂಡುವ ಮೊದಲೇ ಲ್ಲೆಲ್ಲ ಈ ಕಾಂಗ್ ಹೈ ಕೀ ಕುಸ್ತಿ ನೋಡಲು ಮತ್ತು ಮಾಡಲು ಬಂದು ಬೀಡುಬಿಟ್ಟಿದ್ದವರು ಮರ್ರಮ್‌ನ ಹೊರವಲಯದ ಬಯಲಿನಲ್ಲಿ ಸೇರಿದ್ದರು. ಆಗಲೇ ವಿಸಿಲ್ ಗಳು ಬಾರಿಸುತ್ತಿದ್ದವು. ಕುಸ್ತಿಗೆ ಮೊದಲಿಟ್ಟಿತ್ತು. ಆಯಾ ವಯಸ್ಸಿಗನುಗುಣವಾಗಿ. ಸುಮ್ಮನೆ ಸೊಂಟಕ್ಕೊಂದು ಬಣ್ಣದ ದಟ್ಟಿ ಕಟ್ಟಿ ಯಾವ ಸಂಕೋಚವಿಲ್ಲದೆ ಧಿಮಿಧಿಮಿ ತಿರುಗುತ್ತಾ ಕುಸ್ತಿ. ಮಣ್ಣಲ್ಲಿ ಹೊರಳುವಾಗ ಅಂಗಾತ. ದೇವರಿಗೇ ಬಿಟ್ಟಿ ದರ್ಶನ. ಮೊದಲ ಎರಡು ಸೆಕೆಂಡಲ್ಲೆ ಬಟ್ಟೆ ಎಲ್ಲೋ ನಾಪತ್ತೆ.

ಕಿತ್ತೆಸೆದು ಕೆಡುವಿ ಅಂಗಾತ ಎತ್ತಿ ಊರಿಗೆಲ್ಲ ಮೆರವಣಿಗೆ ಮಾಡಿಸುತ್ತಿದ್ದರು. ಕುಸ್ತಿ ಹಿಡಿತಕ್ಕೆ ಇರಲಿ ಎಂದು ಸೊಂಟಕ್ಕೊಂದು ಬಣ್ಣದ ಅಥವಾ ಬಿಳಿಯ ದಟ್ಟಿ ಬಿಗಿದಿರುತ್ತಾರೆ. ಅದರೆ ಎಲ್ಲ ಭಾರ ಅದರ ಮೇಲೆ ಬೀಳುವಾಗ ಅದ್ಯಾವಾಗ ಮಣ್ಣು ಪಾಲಾಗುತ್ತದೋ ಗೊತ್ತಾಗುವುದಿಲ್ಲ. ಏಳು ದಿನಗಳ ಸಾಂಪ್ರಾದಾಯಿಕ ಹಬ್ಬವಾಗಿದ್ದು ಮರ್ರಮ್ ನಾಗಾಗಳು ಈ ಕಾಂಗ್ ಹೈ ಕೀಯನ್ನು ಹಬ್ಬದ ಏಳನೆ ದಿನ ಆಡುತ್ತಾರೆ. ಕೆಲವು ಕಡೆ ಉತ್ಸಾಹ ಮೇರೆ ಮೀರಿರುವಲ್ಲಿ, ಜನ ಸಂದಣಿ, ಬೆಟ್ಟಿಂಗ್ ಇರುವಲ್ಲಿ ಐದನೆಯ ದಿನವೂ ಆರಂಭವಾಗುತ್ತದೆ. ಸೂರ್ಯ ಉದಯಿಸುವ ಮೊದಲೇ ಮುಗಿಯುವ ಕಂಡಿಶನ್ ಅಪ್ಲೆ ಆಗುತ್ತೆ.

ಆದರೆ ಡಿಸೆಂಬರ್ ಚಳಿಯ ಮಂಜಿನಲ್ಲಿ ಸೂರ್ಯ ಹುಟ್ಟಿದ್ದು, ಬೆಳೆದಿದ್ದು ಯಾರಿಗೆ ಕಾಣುತ್ತೆ. ಬೆಳಗಿನ ಏಳೂವರೆ ಎಂಟರವರೆಗೆ ಚಾಲ್ತಿ ಇದ್ದೇ ಇರುತ್ತದೆ. ಕೊನೆಗೆ ಊರ ಹಿರಿಯ ಆವತ್ತಿಗೆ ಸಮಾಪ್ತಿ ಘೋಷಿಸುತ್ತಾನೆ. ಹಾಗಾಗಿ ಬೆಳಗಿನ ಐದು ಗಂಟೆಗೇ ಅಂಗಣದ ಸುತ್ತ ಊರು ನೆರೆದಿರುತ್ತದೆ. ಅರೆಬೆತ್ತಲೆಯಾಗಿ ಕೆಲವೊಮ್ಮೆ ಬತ್ತಲೆಯಾಗಿ ಕುಸ್ತಿಯನ್ನು ಆಡುವುದು ಈ ಉತ್ಸವದ ಒಂದು
ಭಾಗವಾಗಿದ್ದು ಇದರಿಂದಾಗಿ ಭೂತ ಗಣಗಳು ನಾಚಿಕೆ ಪಟ್ಟು ಆ ಪ್ರದೇಶವನ್ನು ಬಿಟ್ಟು ಓಡಿ ಹೋಗುತ್ತವೆ ಎನ್ನುವುದು ನಂಬಿಕೆ.
ವರ್ಷಪೂರ್ತಿ ಊರಿನಲ್ಲಿ ಬಂದು ನೆಲೆ ನಿಲ್ಲುವ ಭೂತ ಪಿಶಾಚಿಗಳು ಇದರಿಂದ ಊರು ತೊರೆಯುತ್ತವೆ ಎಂಬುವುದನ್ನು ಅತಿಯಾಗಿ ನಂಬುತ್ತಾರೆ.

ಕೆಲವೊಮ್ಮೆ ಘನ ಘೋರ ಕಾಳಗವೂ ನಡೆದು ಅಲ್ಲಲ್ಲಿ ಪಟುಗಳು ಗಾಯಗೊಳ್ಳುವುದೂ ಇದೆ. ಅಂದಹಾಗೆ ಕಾಂಗ್ ಹೈ ಕೀ ಅಂದರೆ ಡಿಸೆಂಬರ್ ತಿಂಗಳ ಮೊದಲ ಭಾಗ ಎಂದೂ ಅರ್ಥ. ಚಳಿಯಲ್ಲಿ ಆಡುವ ಕುಸ್ತಿ ಮೊದಲೆಲ್ಲ ಕೇವಲ ಗಂಡಸರು ಮಾತ್ರ ಜಮಾಯಿಸುತ್ತಿದ್ದರು. ಈಗ ಯಾವ ಭೇದವಿಲ್ಲದೆ ಜಂಗುಳಿ ಸೇರುತ್ತದೆ. ಪ್ರತಿ ಸುತ್ತಿನ ನಂತರವೂ ತಂತಮ್ಮ ಪಟುಗಳನ್ನು ಕಿರುಚುತ್ತಾ ಪ್ರೋತ್ಸಾಹಿಸುತ್ತಾರೆ.

ಅದರಲ್ಲೂ ಇತ್ತಿಚಿಗೆ ಫ್ಯಾಷನ್ ಕಾಲಿಟ್ಟಿದ್ದು ಬಣ್ಣಬಣ್ಣದ ಸಣ್ಣ ಅಮೆರಿಕನ್ ಚೆಡ್ಡಿ ಧರಿಸಿ ಫೀಲ್ಡಿಗಿಳಿಯುತ್ತಾರೆ. ಆದರೆ
ಅವನನ್ನು ಚಿತ್ ಮಾಡುತ್ತಲೇ ಬೆತ್ತಲೆ ಮಾಡಿಬಿಡುವ ಎದುರಾಳಿ ಅಮೆರಿಕನ್ ಚೆಡ್ಡಿ ಪತಾಕೆಯಾಗಿಸುತ್ತಾನೆ. ಹೀಗೆ ಹಲವು ಹೊಸತು ಮತ್ತು ಅಚ್ಚರಿಗೆ ಕಾರಣವಾಗುವ ಸೇನಾಪತಿ ಜಿಲ್ಲೆ, ಹುಡುಕಿ ಅನುಭವಿಸುವ ದರ್ಶಕರಿಗೆ ಖುಷಿ ಕೊಡಬಹುದೇನೋ. ಆದರೆ ಪ್ರವಾಸದ ದೃಷ್ಟಿಯಿಂದ ನಿಜಕ್ಕೂ ಯಾವ ಸೌಕರ್ಯವೂ ಇಲ್ಲದೆ ಇದು ಪ್ರಯಾಸವೇ. ಸಂಜೆಯ ಆರರ ಮೊದಲೇ ಪ್ರತಿ ಊರು ಹೊರದಾರಿಯನ್ನು ಬಂದ್ ಮಾಡಿಬಿಡುತ್ತವೆ. ಹೀಗೆಯೇ ಅರೆಹೊತ್ತಲ್ಲಿ ಬಂದು ಸೇರಿದ್ದೇ ಈ ಮರ್ರೆಮ್.

ಪವಣಾದಿಂದ ಬೆಳಗ್ಗೆನೆ ಹೊರಟು, ಎಡಕ್ಕೆ ಲಭ್ಯವಿರುವ ಇನ್ನೊಂದು ಅಡ್ಡದಾರಿ ಹಿಡಿದು ಸೇನಾಪತಿ ಜಿಲ್ಲೆ ಮುಗಿಸಿ ಆವತ್ತೆ ಚುರ್ಚಾಂಡಪುರಕ್ಕೆ ಕಾಲಿಟ್ಟು ಬಿಡೋಣ ಎಂದುಕೊಂಡಿದ್ದೆ. ಅದೇ ಅವಸರದಲ್ಲಿ ಭರಭರನೆ ಮೊಬೈಕು ಓಡಿಸಿಕೊಂಡು ಹೋಗಿದ್ದೊಂದೆ ಗೊತ್ತು. ಅನಾಮತ್ತು ನಲ್ವತ್ತೈದು ಕಿ.ಮೀ ಕ್ರಮಿಸುವಷ್ಟರಲ್ಲಿ ಡೌಟು ಬಂದ ಮೇಲೆಯೇ ಗೊತ್ತಾಗಿದ್ದು ನಾನು ಆಗಲೇ ಚುರ್ಚಾಂಡ್ಪುರ ಬದಲಾಗಿ ತೇಮೆನ್‌ಗ್ಲಾಂಗ್ ಸರಹದ್ದಿನೊಳಕ್ಕೆ ಬಂದು ಬಿಟ್ಟಿದ್ದು.

ಯಾರನ್ನೋ ನಿಲ್ಲಿಸಿಕೊಂಡು ಮೊದಲು ಚಹದ ಅಂಗಡಿ ಹುಡುಕಿಕೊಂಡಿದ್ದೆ. ಊರ ಎಲ್ಲ ಮಾಹಿತಿ ದಕ್ಕುವುದೇ ಇಂಥಾ
ಪಾಯಿಂಟ್‌ನಲ್ಲಿ. ಹಾಗಾಗಿ ಅಲ್ಲಿ ಚಹದ ಅಂಗಡಿಯ ಗಲ್ಲೆಯ ಮೇಲೆ ಕೂತು ಬೀಡಿ ಪೂಕುತ್ತಿದ್ದ ಹೆಂಗಸು ಮಜಾಲು ಸಿಕ್ಕಿ
ಮರ್ರೆಮ್‌ನ ಬೆತ್ತಲೆ ಕುಸ್ತಿಯ ಭೂತೋಚ್ಚಾಟನೆಯ ಹಳ್ಳಿಗೆ ದಾರಿ ತೋರಿಸಿದ್ದಳು. ಭವ್ಯ ದರ್ಶನಗಳಿಂದ ಪ್ರವಾಸ ಪುನೀತ ಎಂದು ಬೇರೆ ಹೇಳಬೇಕಿಲ್ಲವಲ್ಲ.

Leave a Reply

Your email address will not be published. Required fields are marked *