Friday, 2nd December 2022

ಬಿಲ್ಲು ತಾ! ಬಾಣ ತಾ ಲಕ್ಷ್ಮಣ! ಎಂದನಂತೆ ಶ್ರೀಕೃಷ್ಣ ಪರಮಾತ್ಮ!

ಚಕ್ರವ್ಯೂಹ

ಕೃಷ್ಣೇನಾಂಬ ಗತೇನ ರಂತುಮಧುನಾ ಮೃದ್ಭಕ್ಷಿತಾ ಸ್ವೇಚ್ಛಯಾ
ತಥ್ಯಂ ಕೃಷ್ಣ ಕ ಏವಮಾಹ ಮುಸಲೀ ಮಿಥ್ಯಾಂಬ ಪಶ್ಯಾನನಮ್|
ವಾದೇಹೀತಿ ವಿದಾರಿತೇ ಶಿಶುಮುಖೇ ದೃಷ್ಟ್ವಾ ಸಮಸ್ತಂ ಜಗ-
ನ್ಮಾತಾ ಯಸ್ಯ ಜಗಾಮ ವಿಸ್ಮಯಪದಂ ಪಾಯಾತ್ಸ ನಃ ಕೇಶವಃ||

ಶ್ಲೋಕ ಸಂಸ್ಕøತದಲ್ಲಿರುವುದರಿಂದ ನಮಗೆ ಅರ್ಥವಾಗದಿದ್ದೀತು. ಪರವಾಯಿಲ್ಲ; ಇದನ್ನೇ ಸರಳಗನ್ನಡದಲ್ಲಿ ಕೇಳೋಣ. ಶ್ಲೋಕದಂತೆ ಕಂಡರೂ ಈ ಪದ್ಯದ ಮೊದಲಾರ್ಧ, ಅಮ್ಮ-ಮಕ್ಕಳ ಸಂಭಾಷಣೆ. ಇಬ್ಬರು ಮಕ್ಕಳಲ್ಲಿ ಮೊದಲನೆಯಾತ ದೂರು ತಂದಿದ್ದಾನೆ. ಇಬ್ಬರು ಮಕ್ಕಳ ಮನೆಗಳಲ್ಲಿ ಹೀಗೆ ಇಬ್ಬರೂ ಒಬ್ಬರ ಮೇಲೊಬ್ಬರಂತೆ ದೂರು ತಂದು ತಂದೆತಾಯಿಗಳ ಕಿವಿಗಳನ್ನು ತೂತು ಹಾಕುವುದು ಮಾಮೂಲು ಸಂಗತಿಯೇ ಅಲ್ಲವೆ? ಅಮ್ಮಾ, ಈ ನಿನ್ನ ಮಗ ಇದ್ದಾನಲ್ಲ, ಮಣ್ಣು ತಿಂದಿದ್ದಾನೆ – ಅಣ್ಣನ ದೂರು. ಹೌದೇನೋ? ಮಣ್ಣು ತಿಂದೆಯೇನೋ?, ತಾಯಿಯ ಜೋರು.

ಯಾರು ಹೇಳಿದ್ದು ನಿನಗೆ? – ಅಮ್ಮನ ಜೊತೆ ಈ ಕಿರಿಮಗನ ಉಡಾಫೆಯ ಮರುಪ್ರಶ್ನೆ. ಇನ್ಯಾರು ಹೇಳೋದು? ನಿನ್ನಣ್ಣ ಬಲರಾಮ ಹೇಳ್ತಿದ್ದಾನೆ ನೋಡು – ಅಮ್ಮನ ಮರುವಾದ. ಇಲ್ಲಮ್ಮಾ, ಈ ಅಣ್ಣ ಶುದ್ಧ ಸುಳ್ಳುಗಾರ. ನಾನು ಮಣ್ಣು ತಿಂದೆ ಅಂತ ನಿನಗೆ ಸುಳ್ಳುಸುಳ್ಳೇ ದೂರು ಕೊಟ್ಟಿದ್ದಾನೆ. ಬೇಕಿದ್ದರೆ ನನ್ನ ಬಾಯಿ ನೋಡು ಎಂದು ಹೇಳಿದ ಮಗ ತಾಯಿ ಯಶೋದೆಗೆ ತನ್ನ ಬಾಯನ್ನು ತೆರೆದು ತೋರಿದ. ಪುಟ್ಟ ಹಾಲುಹಲ್ಲುಗಳನ್ನೂ ಪುಟ್ಟ ನಾಲಗೆಯನ್ನೂ ಕಾಣಬೇಕಿದ್ದವಳು ಆ ಬಾಯಲ್ಲಿ ಮೂರುಲೋಕ ಬ್ರಹ್ಮಾಂಡವನ್ನೇ ಕಂಡಳು! ಕಂಡು ಸ್ತಂಭೀಭೂತಳಾದಳು! ಮೈಮನಗಳನ್ನೆಲ್ಲ ಮರೆತು ಆ ಬಾಯಲ್ಲಿದ್ದ ವಿಶ್ವವನ್ನೇ ನೋಡುತ್ತಾ ಕಳೆದುಹೋಗಿಬಿಟ್ಟಳು. ಈ ಪ್ರಸಂಗವನ್ನು ಕೇಳರಿಯದವರು ಯಾರು! ಹರಿದಾಸರ ಕೈಯಲ್ಲಿ ಕೀರ್ತನೆಯಾಗಿ ಬಂದ ಈ ಪ್ರಸಂಗದ ಮೂಲಕರ್ತೃ ಲೀಲಾಶುಕನೆಂಬ ಕವಿಯೆಂಬುದು ಮಾತ್ರ ಬಹಳ ಮಂದಿಗೆ ಗೊತ್ತಿಲ್ಲದ ಸಂಗತಿ.

ಹಾಗೆ ನೋಡಿದರೆ ಲೀಲಾಶುಕ ನಮ್ಮ ದಕ್ಷಿಣ ಭಾರತದಲ್ಲಿ ಪ್ರಸಿದ್ಧನಾಗಬೇಕಿತ್ತು. ದುರ್ದೈವವೆಂದರೆ ಹಿತ್ತಲ ಗಿಡ ನಮಗೆ ಮದ್ದಲ್ಲ! ಉತ್ತರದ ತುಲಸೀದಾಸ, ಜಯದೇವ, ಕಲ್ಹಣ, ಬಿಲ್ಹಣ, ಬಾಣ, ಭವಭೂತಿಯರನ್ನೆಲ್ಲ ಓದಿ ಮೆದ್ದು ಅರಗಿಸಿಕೊಂಡ ನಮಗೆ ದಕ್ಷಿಣದ ನಮ್ಮದೇ ಊರಿನ ಆಚೀಚಿನ ಊರುಗಳಲ್ಲಿ ಓಡಾಡಿದ ಮಹನೀಯರ ಗುರುತು ಹತ್ತುವುದು, ನಮ್ಮ ಔದಾಸೀನ್ಯವೋ ಅವರ ದೌರ್ಭಾಗ್ಯವೋ, ಒಟ್ಟಲ್ಲಿ ಸ್ವಲ್ಪ ನಿಧಾನವೇ. ಅಂಥ ಭಾಗ್ಯಹೀನರ ಪೈಕಿ ಎದ್ದುಕಾಣುವ ಕವಿಪ್ರತಿಮೆ ಎಂದರೆ ಲೀಲಾಶುಕನದ್ದು. ಈತ ಇದ್ದದ್ದು 11-12ನೆಯ ಶತಮಾನದಲ್ಲಿ; ಬಿಲ್ವಮಂಗಲಾಚಾರ್ಯ ಎಂಬುದು ಈತನ ಇನ್ನೊಂದು ಹೆಸರು. ಪಕ್ಕದ ಕೇರಳ, ತಮಿಳುನಾಡುಗಳಲ್ಲಿ ಇದ್ದನೋ ಅಥವಾ ನಮ್ಮದೇ ರಾಜ್ಯದ ಪುತ್ತೂರಿನವನೇ ಆಗಿದ್ದನೋ, ಅದೆಲ್ಲ ಇನ್ನೂ ಬಗೆಹರಿಯದ ಪಂಡಿತವಾಗ್ವಾದ. ಆದರೆ ಆತ ನಮ್ಮ ಸಹ್ಯಾದ್ರಿಯ ಆಚೀಚೆಯಲ್ಲೇ ಇದ್ದದ್ದು ಹೌದು. ಸಂಸ್ಕøತದ ವ್ಯಾಕರಣ, ಅಲಂಕಾರ, ಶಾಸ್ತ್ರ, ಸಾಹಿತ್ಯವನ್ನು ಅರೆದುಕುಡಿದದ್ದು ನಿಜ.

ಮಹಾಪಂಡಿತನೆಂಬುದರಲ್ಲಿ ಯಾವ ಅನುಮಾನಕ್ಕೂ ಎಡೆಯಿಲ್ಲ. ಅವನ ಪಂಡಿತಪ್ರತಿಭೆ, ಕಾವ್ಯಶಕ್ತಿ, ಕಲ್ಪನಾವಿಲಾಸಕ್ಕೆ ಅವನು ಬರೆದಿರುವ `ಕೃಷ್ಣಕರ್ಣಾಮೃತ’ವೆಂಬ ಕಾವ್ಯರತ್ನವೇ ಸರ್ಟಿಫಿಕೇಟು, ಪಾರಿತೋಷಕ ಎಲ್ಲವೂ.

ಲೀಲಾಶುಕ ದೊಡ್ಡ ವಿದ್ವಾಂಸ. ಕಾವ್ಯಸಾಹಿತ್ಯಗಳನ್ನು ಓದಿಕೊಂಡವನು. ಆದರೆ ದೊಡ್ಡವರಿಗೆ ದೌರ್ಬಲ್ಯಗಳಿರಬಾರದೆಂದು ಲೋಕನಿಯಮವಿಲ್ಲ ತಾನೆ! ಹಾಗೆ ನಮ್ಮ ಲೀಲಾಶುಕನಿಗೊಂದು ದೌರ್ಬಲ್ಯವಿತ್ತು – ಅದೇ ವೇಶ್ಯೆ ಚಿಂತಾಮಣಿ. ಅದೊಂದು ದಿನ ಆಕಾಶವೇ ಕಳಚಿ ಭೂಮಿಗೆ ಬಿತ್ತೇನೋ ಎಂಬಂಥ ಧಾರಾಕಾರ ಮಳೆ. ಕಾಮಕ್ಕೆ ಕಣ್ಣಿಲ್ಲ; ಹೊತ್ತುಗೊತ್ತೂ ಇಲ್ಲ! ಆ ಕ್ಷಣದಲ್ಲಿ ಅವನಿಗೆ ಆಕೆಯನ್ನು ಕೂಡಬೇಕೆಂಬ ಬಯಕೆ ಹುಟ್ಟಿತು. ಆದರೆ ಅದಕ್ಕಾಗಿ ನದಿ ದಾಟಬೇಕು.

ನೆಲಕ್ಕೆ ಮೊಳೆ ಹೊಡೆದಂತೆ ಜಡಿಯುತ್ತಿರುವ ಮಳೆಯಲ್ಲಿ ನದಿ ದಾಟಿಸಲಿಕ್ಕಾದರೂ ಯಾವ ಅಂಬಿಗ ಇಳಿಯುತ್ತಾನೆ? ಆದರೆ ಹಿಡಿದ ಚಳಿಗಿಂತ ಕಾಮದ ಬಿಸಿಯೇ ಹೆಚ್ಚಿತ್ತು. ಲೀಲಾಶುಕ ಮನೆಯಿಂದ ಹೊರಟ. ಮಳೆಯಲ್ಲಿ ನೆನೆದೇ ನದಿಬದಿಗೆ ಬಂದಾಗ ಅಲ್ಲೊಂದು ಮರದ ಕೊರಡು ತೇಲುತ್ತಿರುವುದು ಕಂಡಿತು. ಸರಿ ಹತ್ತಿ, ನದಿ ದಾಟಿ ಆಕೆಯ ಮನೆಯಾಚೆ ಹೋದ. ಹೊರಗಿನ ಬಾಗಿಲಿಗೆ ಅಗುಳಿ ಹಾಕಿತ್ತು. ಕೂಗಿದರೂ ಕೇಳದಂಥ ಮಳೆಯ ಅಬ್ಬರ.

ಹತ್ತಿರದಲ್ಲೇ ಒಂದು ಹಗ್ಗ ಆಕೆಯ ಕೋಣೆಗೆ ಇಳಿಬಿದ್ದಿತ್ತು. ಅದನ್ನು ಹತ್ತಿ ಸರಸರನೆ ಏರಿ ಆಕೆಯ ಕೋಣೆಯೊಳಗೆ ಪ್ರವೇಶ ಪಡೆದ. ಇಷ್ಟೊಂದು ಪ್ರತಿಕೂಲ ಪ್ರಕೃತಿಯಲ್ಲೂ ಕಾಮವಾಂಛೆಯಿಂದ ಕುರುಡನಂತೆ ತನ್ನ ಬಳಿ ಬಂದ ವಿಟನನ್ನು ಕಂಡು ಚಿಂತಾಮಣಿ ಬೇಕುಬೇಕಾದ ರೀತಿಯಲ್ಲಿ ಉಪಚರಿಸಿದಳು. ಆಕೆಯ ಆತಿಥ್ಯಕ್ಕೆ ಅವನ ಮನಸ್ಸು ಅದೆಷ್ಟು ಕರಗಿಹೋಯಿತೆಂದರೆ ಕಾವ್ಯಪ್ರತಿಭೆ ಸ್ವಯಂಪ್ರಕಾಶಗೊಂಡು ಅವನಿಂದ ಒಂದು ಪದ್ಯವನ್ನೇ ಹಾಡಿಸಿಬಿಟ್ಟಿತು.

ನನ್ನ ಪ್ರೇಮ, ನನ್ನ ಕಾಮ, ನನ್ನ ವೇದನೆ, ನನ್ನ ವೈಭವ, ನನ್ನ ಜೀವನ, ನನ್ನ ದೇವರು ಎಲ್ಲವೂ ನೀನೇ ನೀನೇ ಎನ್ನುತ್ತ ಮೋಹಪರವಶನಾಗಿ ಹಾಡಿದ. ತನ್ನನ್ನು ಹೊಗಳುವುದನ್ನು ಕಿವಿತುಂಬ ಕೇಳಲು ಯಾವ ಹೆಣ್ಣಿಗೆ ತಾನೇ ಇಷ್ಟವಾಗುವುದಿಲ್ಲ? ಆದರೆ ಚಿಂತಾಮಣಿಗೆ, ತನ್ನ ಘನತೆಗೆ ನೂರ್ಪಟ್ಟು ಅತಿಶಯವಾದ ಶ್ಲಾಘನೆಯನ್ನು ಕೇಳಲು ಸಾಧ್ಯವಾಗಲಿಲ್ಲ. ಆತನ ಬಾಯಿಯನ್ನು ಕೈಯಿಂದ ಮುಚ್ಚಿದಳು. ಲಜ್ಜೆಯಿಂದ ಮುದ್ದೆಯಾದಳು.

ಅವನ ಪ್ರತಿಭೆಯೆಂಬ ಜೇನು ತನ್ನ ಮನೆಯಲ್ಲಿ ತಳ ಒಡೆದ ಮಡಿಕೆಯ ಕಳ್ಳಿನಂತೆ ಸೋರಿಹೋಗುತ್ತಿರುವುದಕ್ಕಾಗಿ ವ್ಯಥಿಸಿದಳು. ಬೇಡ ಸ್ವಾಮಿ! ಬೇಡ! ಇದೆಲ್ಲ ಸಾಕು ಮಾಡಿ. ಈ ನಿಮ್ಮ ಕಾವ್ಯಪ್ರಭೆಯನ್ನು ಸದ್ವಿನಿಯೋಗ ಮಾಡಿ. ಹತ್ತು ನಿಮಿಷದ ಕಾಮತೀಟೆಯನ್ನು ತೀರಿಸಿಕೊಳ್ಳುವ ಸಲುವಾಗಿ ನಿಮಗೆ ಜೊತೆಯಾಗಿರುವ ವೇಶ್ಯೆಗಾಗಿ ಇದನ್ನೆಲ್ಲ ಖರ್ಚುಮಾಡಬೇಡಿ.

ಕ್ಷಣಿಕಸುಖದ ಹಿಂದೆ ಬಿದ್ದು ನಾಶವಾಗುವ ಬದಲು ಶಾಶ್ವತಸುಖ ಕೊಡುವ ದೈವಭಕ್ತಿಯನ್ನು ರೂಢಿಸಿಕೊಳ್ಳಿ. ದೇವರಿಗೆ ಮೊರೆ ಹೋಗಿ ಎಂದು ಅವನನ್ನು ಪರಿಪರಿಯಾಗಿ ಬೇಡಿ ಕಣ್ಣೀರಾಗಿ ಕಾಲಿಗೆರಗಿ ಮನೆಯಿಂದ ಹೊರಗೆ ದಬ್ಬಿಬಿಟ್ಟಳು. ಮಾಯೆಯ ಪೆÇರೆ ಹರಿದು ವಾಸ್ತವಜಗತ್ತು ಗೋಚರಿಸಿತು ಲೀಲಾಶುಕನಿಗೆ. ಆಕೆಯ ಮನೆಗೆ ಹತ್ತಿಬರಲು ಸಹಾಯವಾದದ್ದು ಹಗ್ಗವಲ್ಲ, ಹಾವು ಎಂಬುದು ತಿಳಿಯಿತು. ತನ್ನನ್ನು ನದಿದಾಟಿಸಿದ್ದು ಮರದ ಕೊರಡಲ್ಲ, ತೇಲುತ್ತಿದ್ದ ಹೆಣ ಎಂಬುದೂ ದೃಷ್ಟಿಗೋಚರವಾಯಿತು. ಲೀಲಾಶುಕನಿಗೆ ಸಾಕ್ಷಾತ್ಕಾರವಾಯಿತು! ಆ ಮಳೆಯಲ್ಲೇ ದಿಕ್ಕೆಟ್ಟು ಓಡಿದ. ಅಲ್ಲೆಲ್ಲೋ ಒಂದು ಪಾಳುಗುಡಿ, ಅದರೊಳಗೆ ಓಡಿದ. ಕೃಷ್ಣನ ಮೂರ್ತಿ ನಗುತ್ತ ನಿಂತಿತ್ತು. ಹೋದ, ಅಪ್ಪಿಕೊಂಡ, ತಪ್ಪಾಯಿತೆಂದು ಕೆನ್ನೆ ಬಡಿದುಕೊಂಡು ಮೂರ್ತಿಯ ಬುಡದಲ್ಲಿ ಪ್ರಜ್ಞೆ ತಪ್ಪಿ ಬಿದ್ದ. ಬೆಳಗಾದಾಗ ಅಲ್ಲಿದ್ದದ್ದು ಹೊಸ ಮನುಷ್ಯ, ಬಂದದ್ದು ಹೊಸ ಜನ್ಮ. ಅಲ್ಲಿಂದ ಮುಂದಕ್ಕೆ ಅವನದ್ದು ಹೊಸ ಯಾನ. ಹೊಸ ಜೀವನ.

ಲೀಲಾಶುಕನ ಬದುಕಿನ ಬಗ್ಗೆ ನಮಗೆ ಗೊತ್ತಿರುವುದು ಇಷ್ಟೇ. ಆದರೆ ಈ ಕತೆ ಕೂಡ ಅವನ ಜೀವನದ್ದೋ ಅಥವಾ ಯಾರೋ ಕಟ್ಟಿ ಅವನ ಕೊರಳಿಗೆ ಕಟ್ಟಿದರೋ ಎಂಬುದೂ ಸ್ಪಷ್ಟವಿಲ್ಲ. ಯಾಕೆಂದರೆ ಇಂಥ ಕತೆಗಳು ಹಲವು ಮಹಾತ್ಮರ ಹೆಸರಿನಲ್ಲಿ ಚಾಲ್ತಿಯಲ್ಲಿವೆಯಷ್ಟೆ? ಕವಿಯೊಬ್ಬ ಇಂಥ ಜಾಗದಲ್ಲಿ ಈ ಇಸವಿಯಲ್ಲಿ ಹುಟ್ಟಿ ಇಂಥ ಸ್ಥಳದ ಈ ತಿಂಗಳಲ್ಲಿ ಸತ್ತ ಎಂದು ದಾಖಲೆ ಬರೆದಿಡುವ ವಿಷಯದಲ್ಲಿ ನಾವು ಭಾರತೀಯರು ಆಸಕ್ತರಲ್ಲ.

ಬದುಕಿ ಮಾಡಿz್ದÉೀನು ಎಂಬುದಷ್ಟೇ ನಮಗೆ ಮುಖ್ಯ. ಕೃಷ್ಣಕರ್ಣಾಮೃತ ನಮ್ಮ ಕೈಯಲ್ಲಿದೆ; ಅದರಲ್ಲಿ ಕವಿ ಲೀಲಾಶುಕ ಬದುಕಿದ್ದಾನೆ. ಅದು ಮುಖ್ಯ; ಮಿಕ್ಕಿದ್ದೆಲ್ಲ ನಗಣ್ಯ. ಭಾರತದ ಆತ್ಮ ಬಲು ಸಂಕೀರ್ಣ. ನಮಗೆ ಕೃಷ್ಣ ದೇವರಲ್ಲ; ಆತ ನಮ್ಮ ಸಾಹಿತ್ಯ, ಸಂಗೀತ, ಶಿಲ್ಪ, ಚಿತ್ರ, ಪ್ರತಿಭೆ, ಬುದ್ಧಿ, ಚಿತ್ತಗಳನ್ನು ಪ್ರಚೋದಿಸಿದ ಮಹಾನ್ ಗುರು. ಕೃಷ್ಣನಿಲ್ಲದೆ ಭಾರತದ ಬಹಳಷ್ಟು ಪ್ರತಿಭಾಭಿವ್ಯಕ್ತಿಗಳೇ ಇಲ್ಲ. ವ್ಯಾಸರ ಮಹಾಭಾರತ ನಿಂತಿರುವುದೇ ಕೃಷ್ಣನೆಂಬ ಊರುಗಂಬದ ಮೇಲೆ. ಗೋವರ್ಧನವೆಂಬ ಗಿರಿಯನ್ನು ಹೇಗೆ ಕೃಷ್ಣ ತನ್ನ ಕಿರುಬೆರಳ ತುದಿಯಲ್ಲಿ ನಿಲ್ಲಿಸಿದನೋ ಹಾಗೆಯೇ ಭಾರತೀಯತೆಯೆಂಬ ಪರ್ವತವನ್ನೂ ಆತ ಎತ್ತಿನಿಲ್ಲಿಸಿಟ್ಟಿದ್ದಾನೆ.

ಕೃಷ್ಣಾವತಾರದ ರೂಪವೈವಿಧ್ಯಗಳು ಭಾಗವತದ ದಶಮಸ್ಕಂದದಲ್ಲಿ ಅಥವಾ ವಿಷ್ಣುಪುರಾಣದಲ್ಲಿ ಅರಳಿಕೊಳ್ಳುವುದಕ್ಕಿಂತ ಹೆಚ್ಚು ವೈವಿಧ್ಯಮಯವಾಗಿ ಲೀಲಾಶುಕನ ಪುಟ್ಟ ಕೃತಿಯಲ್ಲಿ ಗರಿಗೆದರುತ್ತದೆ ಎಂದು ಅದನ್ನು ಓದಿದ ಸಹೃದಯರಿಗೆ ಅನ್ನಿಸದೇ ಇರದು. ಜಯದೇವನ ಗೀತಗೋವಿಂದ, ಕೃಷ್ಣನ ಶೃಂಗಾರರಸಾಭಿವ್ಯಕ್ತಿಗೆ ಹೆಚ್ಚಿನ ಒತ್ತು ಕೊಟ್ಟರೆ ಲೀಲಾಶುಕನ ಕೃಷ್ಣಕರ್ಣಾಮೃತದಲ್ಲಿ ನಾವು ಮುಕುಂದನ ಬಾಲಲೀಲೆಗಳನ್ನು ಕೂಡ ನೋಡಬಹುದು. ಲೀಲಾಶುಕನ ಸಂಸ್ಕøತ ಕೂಡ ತುಂಬ ಮೃದು, ಪಟ್ಟೆಪೀತಾಂಬರದಂತೆ. ಅವನ ಶಬ್ದಚಾತುರ್ಯದ ವರ್ಣವಿಲಾಸವೋ ಬಣ್ಣಬಣ್ಣದ ನವಿಲಗರಿಯಂತೆ. ಸ್ವರಗಳ ಏರಿಳಿತಗಳು ಕೊಳಲ ನಾದದಂತೆ. ಲೀಲಾಶುಕನ ಸಂಸ್ಕøತ, ಈಗಷ್ಟೇ ಕಡೆದು ತೆಗೆದ ನವನೀತದಂತೆ.

ಅದಕ್ಕೆ ಉದಾಹರಣೆಗಳನ್ನಂತೂ ಧಂಡಿಯಾಗಿ ಕೊಡಬಹುದು ಪುಟಪುಟಗಳಿಂದ!

ಕರಾರವಿಂದೇನ ಪದಾರವಿಂದಂ ಮುಖಾರವಿಂದೇ ವಿನಿವೇಶಯಂತಮ್ |
ವಟಸ್ಯ ಪತ್ರಸ್ಯ ಪುಟೇ ಶಯಾನಂ ಬಾಲಂ ಮುಕುಂದಂ ಮನಸಾ ಸ್ಮರಾಮಿ ||

ಇದು ಕೃಷ್ಣಕರ್ಣಾಮೃತದಲ್ಲಿ ಬರುವ ಮೊದಮೊದಲ ಪದ್ಯಗಳಲ್ಲೊಂದು. ತನ್ನ ಕಾಲೆಂಬ ಕಮಲವನ್ನು ಕೈಯೆಂಬ ಕಮಲದಲ್ಲಿ ಎಳೆಹಿಡಿದು ಮುಖವೆಂಬ (ಬಾಯೆಂಬ) ಕಮಲದೊಳಗೆ ಇಟ್ಟುಕೊಂಡಿರುವ ಮುದ್ದುಮುದ್ದಾಣ ಬಾಲಕೃಷ್ಣನ ಚಿತ್ರವನ್ನು ನೋಡದವರು ಯಾರು? ಅವನೆಂಥ ಮೂಲೋಕವನ್ನಾಳುವ ದೇವರೇ ಇರಲಿ, ಮಗುವಾಗಿದ್ದಾಗ ಕೇವಲ ಮಗು ತಾನೆ? ಕಾಲಿನ ಹೆಬ್ಬೆರಳನ್ನು ಕೈಯಿಂದ ಎಳೆದು ಬಾಯಲ್ಲಿಟ್ಟುಕೊಳ್ಳದೆ ಹೋದರೆ ಅದೆಂಥ ಮಗು! ಅವನೆಂಥ ದೇವರು! ಅಂಥ ದೇವರಂಥ ಮಗು, ಆಲದೆಲೆಯ ಮೇಲೆ ಮಲಗಿದೆಯಂತೆ.

ಅಂಥ ಮಗುವನ್ನು ನಾನು ಸದಾ ಮನಸ್ಸಿನಲ್ಲಿ ಸ್ಮರಿಸುತ್ತೇನೆ ಎನ್ನುತ್ತಾನೆ ಲೀಲಾಶುಕ. ಅವನ ಇನ್ನೊಂದು ಪದ್ಯ ಹೀಗಿದೆ:

ರತ್ನಸ್ಥಲೇ ಜಾನು ಚರಃ ಕುಮಾರಃ ಸಂಕ್ರಾಂತ ಮಾತ್ಮೀಯ ಮುಖಾರವಿಂದಂ |
ಆದಾತು ಕಾಮಸ್ತದಲಾಭ ಖೇದಾತ್ ವಿಲೋಕ್ಯ ಧಾತ್ರೀವದನಂ ರುರೋದ ||

ಕೃಷ್ಣ ಸ್ವಲ್ಪ ದೊಡ್ಡವನಾದ. ಅಂಬೆಗಾಲಿಟ್ಟು ನೆಲದಲ್ಲಿ ಅತ್ತಿಂದಿತ್ತ ಹರಿದಾಡತೊಡಗಿದ. ರತ್ನದಂತೆ ಹೊಳೆಯುತ್ತಿರುವ ನೆಲದಲ್ಲಿ ಒಮ್ಮೆ ಅವನ ಮುಖವನ್ನು ಅವನೇ ನೋಡಿದ. ಅದು ಆಟಿಕೆ ಇದ್ದಿರಬೇಕೆಂದು ಎತ್ತಿಕೊಳ್ಳಲು ನೋಡಿದ. ದೇವರಾದರೇನಂತೆ, ಪ್ರತಿಬಿಂಬವನ್ನು ಎತ್ತಿಕೊಳ್ಳಲು ಸಾಧ್ಯವೇ? ಆ ಆಟಿಕೆ ತನ್ನ ಕೈಗೆ ಸಿಗುತ್ತಿಲ್ಲವೆಂದು ತಾಯಿ ಯಶೋದೆಯ ಮುಖ ನೋಡಿ ಜೋರಾಗಿ ಅಳತೊಡಗಿದನಂತೆ! ಲೀಲಾಶುಕನ ಬಗ್ಗೆ ಬೇರೆ ಮಾಹಿತಿಗಳು ಇದೆಯೋ ಇಲ್ಲವೋ, ಆದರೆ ಆತ ಮಗುವೊಂದರ ತಂದೆಯಾಗಿದ್ದನೆಂದು ಮಾತ್ರ ಈ ಮೇಲಿನ ಪದ್ಯ ನೋಡಿ ಖಚಿತವಾಗಿ ಹೇಳಬಹುದು!

ಕೃಷ್ಣ ದೊಡ್ಡವನಾದ. ಅತ್ತಿತ್ತ ಓಡಾಡತೊಡಗಿದ. ಅವನ ಲೂಟಿಯನ್ನು ತಡೆಯುವುದಾದರೂ ಹೇಗೆ, ತಡೆವವರಾದರೂ ಯಾರು? ಸ್ವತಃ ತಾಯಿ ಯಶೋದೆಗೆ ಅದೊಂದು ದೊಡ್ಡ ತಲೆನೋವು. ಕೃಷ್ಣ ತನ್ನ ಬಳಗ ಕಟ್ಟಿಕೊಂಡು ಮನೆಯಿಂದ ಮನೆಗೆ ಓಡುತ್ತಿದ್ದನಂತೆ. ಗಡಿಗೆಗಳಿಗೆ ಕೈಬಾಯಿ ಹಾಕಿ ಹಾಲು, ಮೊಸರು, ಬೆಣ್ಣೆ ಎನ್ನುತ್ತ ಸಿಕ್ಕಿದ್ದೆಲ್ಲವನ್ನು ಭಕ್ಷಿಸುತ್ತಿದ್ದನಂತೆ. ಉಳಿದ ಗೋಪಬಾಲರಿಗೆ ಮಾತ್ರವಲ್ಲ, ತನ್ನೊಡನೆ ಲೂಟಿಯಲ್ಲಿ ಭಾಗಿಯಾದ ಕೋತಿಗಳ ಮೂತಿಗಳಿಗೂ ಅಷ್ಟಿಷ್ಟು ಒರೆಸುತ್ತಿದ್ದನಂತೆ! ಅದೊಮ್ಮೆ ಯಶೋದೆ ಪಕ್ಕದ ಮನೆಯ ಗೋಪಿಕೆಯನ್ನು ಮನೆಯಲ್ಲಿ ಕೂರಿಸಿ, ಕೃಷ್ಣ ಬಂದು ತಂಟೆ ಮಾಡಿದರೆ ಒಂದೋ ಬಾರಿಸು ಇಲ್ಲವೇ ಹಗ್ಗದಲ್ಲಿ ಕಟ್ಟಿ ಕೂರಿಸು ಎಂದು ಆಜ್ಞಾಪಿಸಿ ಹೊರಗೆ ಹೋದಳು.

ಕೃಷ್ಣ ಬಂದ. ಕಸ್ತೂರಿಯ ತಿಲಕ, ಎದೆಯಲ್ಲಿ ಕೌಸ್ತುಭಪದಕ, ಮೂಗಿನ ತುದಿಯಲ್ಲಿ ನತ್ತು (!), ಕೈಯಲ್ಲಿ ಕೊಳಲು, ಕಂಕಣ, ಮೈಯಲ್ಲಿ ಪೂಸಿಕೊಂಡ ಚಂದನ, ಕೊರಳಲ್ಲಿ ಧರಿಸಿದ ಮುಕ್ತಾವಲೀ ಇಷ್ಟೆಲ್ಲ ಅಲಂಕಾರ ಮಾಡಿಕೊಂಡು ಬಂದ ಚೆಲುವ ಕೃಷ್ಣನನ್ನು ಕಂಡಾಗ ಗೋಪಿಕೆಗೆ ಯಶೋದೆಯ ಎಚ್ಚರಿಕೆಯೆಲ್ಲ ಮರೆತೇಹೋಯಿತು! ಆಕೆ ಕೃಷ್ಣನ ಅಂದಚಂದಗಳನ್ನು ಮೈಮರೆತು ನೋಡುತ್ತ ನಿಂತಳು. ಕಾಂತದ ಸೆಳೆತಕ್ಕೆ ಕಂಪಿಸುವ ಕಬ್ಬಿಣದ ರಜದಂತೆ ಆ ಏಕಾಂತದಲ್ಲಿ ಕಾಣಿಸಿಕೊಂಡ ಮಾನಸ ಕಾಂತನನ್ನು ಕಂಡು ಆ ಕಾಂತೆ ಭ್ರಾಂತಿಯಿಂದ ಕೂತೇಬಿಟ್ಟಳು. ಕೃಷ್ಣ ಆಕೆಯ ಮುಖದ ಮೇಲೆ ಕೈಗಳನ್ನು ಮೃದುವಾಗಿ ತೀಡಿದ. ಗಡಿಗೆಯಿಂದ ಸಾಕಷ್ಟು ಬೆಣ್ಣೆ ತೆಗೆದುತಿಂದ. ಆದರೆ ಗೋಪಿ ಮಾತ್ರ ಸಮ್ಮೋಹಿನಿಗೆ ಒಳಗಾದವಳಂತೆ ಎಲ್ಲವನ್ನೂ ಮರೆತು ಆತನನ್ನು ನೋಡುತ್ತ ಕೂತುಬಿಟ್ಟಳು. ಕೊನೆಗೆ ಎಚ್ಚರಾಗಿ, ಅಯ್ಯೋ ತಪ್ಪಾಗಿ ಹೋಯಿತಲ್ಲ ಎಂದು ಅವನನ್ನು ಹಿಡಿಯಹೋದರೆ ಕಳ್ಳಕೃಷ್ಣ ಆಕೆಯ ಕೈಯನ್ನು ಕೊಸರಿಕೊಂಡು ಹೇಗೋ ಜಾರಿಹೋಗಿಬಿಟ್ಟ.

ಆಗ ಆಕೆಯಾದರೂ ಏನು ಹೇಳಬೇಕು?

ಹಸ್ತಮಾಕ್ಷಿಪ್ಯ ಯಾತೋಸಿ ಬಲಾತ್ಕøಷ್ಣ ಕಿಮದ್ಭುತಂ |
ಹೃದಯಾದ್ಯದಿ ನಿರ್ಯಾಸಿ ಪೌರುಷಂ ಗಣಯಾಮಿ ತೇ ||

ಹಿಡಿದ ಕೈಯಿಂದ ತಪ್ಪಿಸಿಕೊಂಡು ಹೋಗುವುದು ಎಂಥ ಪೌರುಷವೋ ಕೃಷ್ಣ? ಸಾಧ್ಯವಾದರೆ ನನ್ನ ಹೃದಯದಿಂದ ತಪ್ಪಿಸಿಕೊಂಡು ಹೋಗು ನೋಡೋಣ, ಆಗಾದರೆ ಒಪ್ಪಿಕೊಂಡೇನು ಅದು ಪೌರುಷ ಅಂತ!

ಮಕ್ಕಳನ್ನು ಮಲಗಿಸಬೇಕಾದರೆ ಕತೆ ಹೇಳಬೇಕು. ದೇವರ ತಾಯಿಯಾದರೂ ಯಶೋದೆಗೂ ಆ ಕಷ್ಟ ತಪ್ಪಿದ್ದಲ್ಲ! ರಾತ್ರಿ ಮಗುವನ್ನು ಮಲಗಿಸಲು ಆಕೆ ಕತೆ ಹೇಳುತ್ತಿದ್ದಳಂತೆ. ಕತೆಯೊಳಗೆ ಹೋದಾಗ ಕೇಳುವವರು ಹ್ಞೂ ಹ್ಞೂ ಎನ್ನುತ್ತ ಹ್ಞೂಗುಟ್ಟುವುದು ಸಾಮಾನ್ಯ ಅಲ್ಲವೆ? ಅದರಂತೆ ಅತ್ತಕಡೆಯಿಂದ ಹ್ಞೂಗಳು ಒಂದೊಂದಾಗಿ ತೇಲಿಬರುತ್ತಿದ್ದವು. ರಾಮ ಎಂಬ ರಾಜನಿದ್ದ ಎಂದಳು ಯಶೋದೆ. ಕೃಷ್ಣ ಹ್ಞೂ ಎಂದ. ಆತ ಸೀತೆಯೆಂಬ ರಾಜಕುಮಾರಿಯನ್ನು ಮದುವೆಯಾಗಿ ಮನೆತುಂಬಿಸಿಕೊಂಡ ಎಂದು ಕತೆ ಮುಂದುವರಿಸಿದಳು ಯಶೋದೆ.

ಕೃಷ್ಣ ಅದಕ್ಕೂ ಹ್ಞೂಗುಟ್ಟಿದ. ಹೀಗೆ ಒಂದೊಂದು ಹೆಜ್ಜೆ ಕತೆ ಮುಂದೆ ಹೋಗುತ್ತ ಮಗುವಿಗೆ ಒಂದೊಂದು ಹೆಜ್ಜೆಯಾಗಿ ನಿದ್ದೆ ಆವರಿಸುತ್ತ ಬಂದಿತು. ರಾಮ ತನ್ನ ತಂದೆಯ ಮಾತಿಗೆ ಬೆಲೆಕೊಟ್ಟು ಕಾಡಿಗೆ ಹೋದ, ಪಂಚವಟಿಯಲ್ಲಿ ವಿಹರಿಸಿದ, ಎಂದೆಲ್ಲ ಹೇಳಿ ಕೊನೆಗೆ ಯಶೋದೆ, ರಾವಣ ಬಂದ ಎಂದಳು. ನಿದ್ರೆಗೆ ಜಾರುತ್ತಿದ್ದ ಕೃಷ್ಣ ತಡಬಡಿಸಿ ಎದ್ದು, ಲಕ್ಷ್ಮಣಾ! ಬಿಲ್ಲು ತಾ.. ಬಿಲ್ಲು ತಾ.. ಬಿಲ್ಲು ತಾ.. ಎಂದು ಅತ್ತ ಇತ್ತ ಎತ್ತೆತ್ತಲು ನೋಡಿ ಕೂಗಿಕೊಂಡನಂತೆ! ಇಷ್ಟೊಂದು ಸುಂದರವಾದ ಕಲ್ಪನಾಭಾಗ ಇಡೀ ಭಾರತೀಯ ಸಾಹಿತ್ಯದಲ್ಲೇ ಇರಲಿಕ್ಕಿಲ್ಲ!

ಲೀಲಾಶುಕನ ಕೃತಿ ಅನನ್ಯವೆನ್ನಿಸುವುದು ಅದು ಕೊಡುವ ಚಿತ್ರವಿಚಿತ್ರ ಕಲ್ಪನೆಗಳಿಂದ ಹೇಗೋ ಆ ಕಲ್ಪನೆಗಳನ್ನು ತೋರಲು ಅವನು ಬಳಸಿದ ಭಾಷೆಯಿಂದ ಕೂಡ. ಆಗಲೇ ಹೇಳಿದಂತೆ ಅದು ಬೆಣ್ಣೆಯಂಥ ಭಾಷೆ. ಕೃತಿಯೊಳಗೆ ಬಗೆಬಗೆಯ ಛಂದಸ್ಸು, ತಾಳ, ಲಯಗಳ ಪ್ರಯೋಗ ಮಾಡಿದ್ದಾನೆ ಕವಿ. ನಮ್ಮ ಹರಿದಾಸಸಾಹಿತ್ಯಕ್ಕೆ ಈತನೇ ನಾಂದಿ ಹಾಡಿದನೆಂದರೂ ಅದು ಪೂರ್ತಿ ತಪ್ಪೇನಲ್ಲ. ಉದಾಹರಣಾರ್ಥ ಮೂರು ಪದ್ಯಗಳನ್ನು ನೋಡುವುದಾದರೆ:

(1) ಅಂಗನಾ ಮಂಗನಾ ಮಂತರೇ ಮಾಧವೋ
ಮಾಧವಂ ಮಾಧವಂ ಚಾಂತರೇಣಾಂಗನಾ |
ಇತ್ಥಮಾ ಕಲ್ಪಿತೇ ಮಂಡಲೇ ಮಧ್ಯಗಃ
ಸಂಜಗೌ ವೇಣುನಾ ದೇವಕೀನಂದನಃ ||
ಚಾರು ಚಂದ್ರಾವಲೀ ಲೋಚನೈಃ ಚುಂಬಿತಃ
ಗೋಪ ಗೋವೃಂದ ಗೋಪಾಲಕಾ ವಲ್ಲಭಃ |
ವಲ್ಲವೀ ಬೃಂದಬೃಂದಾರಕಃ ಕಾಮುಕಃ
ಸಂಜಗೌ ವೇಣುನಾ ದೇವಕೀನಂದನಃ ||

(2) ಸಾಯಂಕಾಲೇ ವನಾಂತೇ ಕುಸುಮಿತ ಸಮಯೇ ಸೈಕತೇ ಚಂದ್ರಿಕಾಯಾಂ |
ತ್ರೈಲೋಕ್ಯಾಕರ್ಷಣಾಂಗಂ ಸುರನರ ಗಣಿಕಾ ಮೋಹನಾಪಾಂಗಮೂರ್ತಿಂ ||
ಸೇವ್ಯಂ ಶೃಂಗಾರಭಾವೈಃ ನವರಸಭರಿತೈಃ ಗೋಪಕನ್ಯಾ ಸಹಸ್ರೈಃ |
ವಂದೇಹಂ ರಾಸಕೇಲೀರತಮತಿಸುಭಗಂ ವಶ್ಯ ಗೋಪಾಲಕೃಷ್ಣಂ ||

(3) ಲಕ್ಷ್ಮೀಕಲತ್ರಂ ಲಲಿತಾಬ್ಜನೇತ್ರಂ
ಪೂರ್ಣೇಂದು ವಕ್ತ್ರಂ ಪುರುಹೂತಮಿತ್ರಮ್ |
ಕಾರುಣ್ಯಪಾತ್ರಂ ಕಮನೀಯಗಾತ್ರಂ
ವಂದೇ ಪವಿತ್ರಂ ವಸುದೇವ ಪುತ್ರಂ ||

ಲೀಲಾಶುಕನ ಕಾವ್ಯದಲ್ಲಿ ಬಾಲಕೃಷ್ಣನ ಬಾಲಲೀಲೆಗಳ ಅಮಾಯಕತೆ, ಮುಗ್ಧತೆಗಳು ಹೇಗೆ ಮನೆಯಲ್ಲಿ ಹರಡಿದ ಮಕ್ಕಳಾಟಿಕೆಯಂತೆ ಪದ್ಯಪದ್ಯಗಳಲ್ಲಿ ಹರಡಿಕೊಂಡಿವೆಯೋ ಹಾಗೆಯೇ ಆತನ ಶೃಂಗಾರವಿನೋದಕೇಲಿಗಳು ಬೃಂದಾವನದಲ್ಲಿ ಹರಡಿದ ಪಾರಿಜಾತದಂತೆ ಕಾವ್ಯದ ತುಂಬ ಪರಿಮಳ ಬೀರುತ್ತವೆ. ಕೃಷ್ಣನಿಗಾಗಿ ಗೋಪಿಕೆಯರು ಅದೆಷ್ಟು ಹುಚ್ಚಾಗಿದ್ದರೆಂದರೆ ಒರಳಲ್ಲಿ ತುಂಬಿದ ಅಕ್ಕಿರಾಶಿಯನ್ನು ಮುಸಲದಿಂದ ಕುಟ್ಟುವಾಗಲೂ ಗೋವಿಂದ ದಾಮೋದರ ಮಾಧವಾ ಎಂದು ಭಜಿಸುತ್ತಿದ್ದರಂತೆ. ಹಾಲು, ಮೊಸರು ಮಾರಲೆಂದು ತಲೆಯಲ್ಲಿ ಗಡಿಗೆಯನ್ನಿಟ್ಟುಕೊಂಡು ಬೀದಿಯಲ್ಲಿ ಹೊರಟ ಗೋಪಿಕೆ ಹಾಲು ಬೇಕೆ, ಮೊಸರು ಬೇಕೆ ಎಂದು ಕೂಗುವುದನ್ನು ಬಿಟ್ಟು ಗೋವಿಂದ ಬೇಕೆ ದಾಮೋದರ ಬೇಕೆ ಮಾಧವ ಬೇಕೇ ಎಂದು ಕೂಗಿಬಿಟ್ಟಳಂತೆ! ಲೀಲಾಶುಕನ ಕಲ್ಪನೆಯ ಕುದುರೆಗೆ ಅದೆಷ್ಟು ಕಾಲುಗಳು!

ಒಂದು ಕತೆಯ ಪ್ರಕಾರ ಚಿಂತಾಮಣಿಯಿಂದ ದೂರವಾದ ಮೇಲೆ ಲೀಲಾಶುಕ ಅಲ್ಲಿಲ್ಲಿ ಅಲೆದ, ಕೊನೆಗೆ ಬೃಂದಾವನವನ್ನು ಸೇರಿಕೊಂಡ. ಅಲ್ಲಿ ಪಂಡಿತರಿಂದ ಪಾಠ ಹೇಳಿಸಿಕೊಂಡ. ಬೃಂದಾವನದಲ್ಲೇ ಇದ್ದುದರಿಂದ ಕೃಷ್ಣಭಕ್ತಿಗೆ ಅತಿಶಯವಾದ ಅವಕಾಶ ಒದಗಿಬಂದಂತಾಯಿತು. ಹಗಲಿರುಳು ಕೃಷ್ಣಸ್ತುತಿಯಲ್ಲಿ ಕಳೆದ. ಕೃಷ್ಣನ ಬಗೆ ಬಗೆಯ ರೂಪ-ಲೀಲೆಗಳನ್ನು ಧ್ಯಾನಿಸಿದ. ಚಿಂತಾಮಣಿಯೂ ಮುಂದೆ ತನ್ನ ಬದುಕಿನ ಲೌಕಿಕತೆಯಲ್ಲಿ ಬೇಸತ್ತು ಎಲ್ಲವನ್ನೂ ತ್ಯಜಿಸಿ ಸಂನ್ಯಾಸಿನಿಯಾಗಿ ಬೃಂದಾವನಕ್ಕೆ ಬಂದು ಲೀಲಾಶುಕನ ಶಿಷ್ಯವರ್ಗದಲ್ಲಿ ಒಬ್ಬಳಾಗಿ ಸೇರಿಕೊಂಡು ಗುರುಸೇವೆ ಮಾಡಿ ತನ್ನ ಪಾಪಗಳನ್ನು ಕಳೆದುಕೊಂಡಳಂತೆ. ಉತ್ತರ ಭಾರತದಲ್ಲಿ ಸಂಚರಿಸಿದ ಲೀಲಾಶುಕ ಅಯೋಧ್ಯೆಗೆ ಬಂದು, ಅಲ್ಲಿದ್ದ ಶ್ರೀರಾಮಮಂದಿರಕ್ಕೆ ಭೇಟಿಕೊಟ್ಟನಂತೆ. ಆಗ ಆತ ರಚಿಸಿದ ಪದ್ಯವೊಂದು ಕುತೂಹಲಕರವಾಗಿದೆ.

ವಿಹಾಯ ಕೋದಂಡ ಶರೌ ಮುಹೂರ್ತಂ
ಗೃಹಾಣ ಪಾಣೌ ಮಣಿ ಚಾರು ವೇಣುಮ್ |
ಮಯೂರ ಬರ್ಹಂ ಚ ನಿಜೋತ್ತಮಾಂಗೇ
ಸೀತಾಪತೇ ತ್ವಾಂ ಪ್ರಣಮಾಮಿ ಪಶ್ಚಾತ್ ||

ಹೇ ಸೀತಾಪತಿ! ನೀನು ಕೈಯಲ್ಲಿರುವ ಕೋದಂಡ ಶರಗಳನ್ನು ಸ್ವಲ್ಪ ಸಮಯ ಕೆಳಗಿಟ್ಟು ಮನೋಹರವಾದ ಮಣಿ ಮಯ ಭೂಷಿತ ಕೊಳಲನ್ನು ಹಿಡಿದು ನಿಲ್ಲಪ್ಪ! ಹಾಗೆಯೇ ತಲೆಯಲ್ಲಿ ಆ ಕಿರೀಟದ ಪಕ್ಕದಲ್ಲಿ ಒಂದು ಚೆಂದದ ನವಿಲುಗರಿಯನ್ನು ಸಿಕ್ಕಿಸಿಕೋ. ಹಾಗಿದ್ದರಷ್ಟೇ ನಾನು ನಿನಗೆ ಸಮಸ್ಕಾರ ಮಾಡುತ್ತೇನೆ! – ಇದು ಈ ಪದ್ಯದ ಅರ್ಥ. ಇದನ್ನು ನಿಂದಾಸ್ತುತಿ ಎನ್ನಬೇಕೋ ಕೃಷ್ಣಭಕ್ತಿಯ ಪರಾಕಾಷ್ಠೆ ಎನ್ನಬೇಕೋ? ಶ್ರೀರಾಮನ ಮಂದಿರ ಅಯೋಧ್ಯೆಯಲ್ಲೇ ಇತ್ತೆನ್ನುವುದಕ್ಕೆ ಸಾಕ್ಷಿ ಕೊಡಿ ಎಂದು ಕೇಳಿದ ಸುಪ್ರೀಂ ಕೋರ್ಟಿನ ಜಡ್ಜ್ ಸಾಹೇಬರಿಗೆ ಈ ಪದ್ಯವನ್ನು ಯಾರಾದರೂ ತಲುಪಿಸಿದ್ದರೆ ಒಳ್ಳೆಯದಿತ್ತು!
ಕೃಷ್ಣ ಎಂದರೆ ಪ್ರೀತಿ, ಕೃಷ್ಣ ಎಂದರೆ ಭಕ್ತಿ.

ಕೃಷ್ಣ ಎಂದರೆ ಮನುಷ್ಯನಿಗೆ ಸಾಧ್ಯವಿರುವ ಎಲ್ಲ ಕಲ್ಪನಾಶಕ್ತಿಯ ಸೀಮಾರೇಖೆ. ಮನುಷ್ಯನಿಗೆ ಸಾಧ್ಯವಿರುವ ಎಲ್ಲ ರಸಗಳ ಅಭಿವ್ಯಕ್ತಿಯ ಪರಮಬಿಂದು ಕೃಷ್ಣ. ಅದಕ್ಕೇ ಕೃಷ್ಣ ಎಂದರೆ ಭಾರತ. ಯಾಕೆಂದರೆ ಭಾರತದಲ್ಲಿ ಯಾವ ಕಲೆಯನ್ನೂ ಧರ್ಮ ಹಿಡಿದಿಡಲಿಲ್ಲ. ಯಾವ ಮನಃಅಭಿವ್ಯಕ್ತಿಯನ್ನೂ ತಡೆಯಲಿಲ್ಲ. ಕೃಷ್ಣ ಭಾರತೀಯರ ಎಲ್ಲ ಬಗೆಯ ಪ್ರತಿಭೆ, ಕಲ್ಪನೆ, ಕನಸುಗಳ ಮೂರ್ತರೂಪವಾದ. ಲೀಲಾಶುಕನಲ್ಲಿ ನಾವು ಕಾಣುವುದು ಅಂಥ ಅಭಿವ್ಯಕ್ತಿಯ ಔನ್ನತ್ಯವನ್ನು. ಕಾಮದ ಕೊಳೆಯಲ್ಲಿ ಕೊಚ್ಚಿ ಎಲ್ಲೋ ದಿಕ್ಕೆಟ್ಟು ಕಳೆದುಹೋಗಲಿದ್ದ ಕವಿಯನ್ನು ವೇಶ್ಯೆಯೊಬ್ಬಳು ತಡೆದು ಕೃಷ್ಣನ ದಾರಿ ತೋರಿಸಿ ಕೊನೆಗೆ ಆತನ ಪ್ರತಿಭೆಯ ಪೂರ್ಣ ಅನಾವರಣಕ್ಕೆ ಕಾರಣಳಾಗುವುದು ಬಹುಶಃ ಭಾರತದಲ್ಲಿ ಮಾತ್ರ ಸಾಧ್ಯವೇನೋ. ಭಾರತ ಕಂಡ ಮತ್ತೋರ್ವ ಮಹಾನ್ ಸಂತ ಚೈತನ್ಯ ಮಹಾಪ್ರಭುಗಳು ಹೇಳಿದ ಒಂದು ಮಾತು: ನೀವು ಬದುಕಿನಲ್ಲಿ ಏನೇ ಮಾಡಿ, ಏನನ್ನಾದರೂ ಸಾಧಿಸಿರಿ. ಆದರೆ ಲೀಲಾಶುಕನ ಕೃಷ್ಣ ಕರ್ಣಾಮೃತವನ್ನು ಸವಿಯದೆ ಹೋದರೆ ನಿಮ್ಮ ಬದುಕಿನಲ್ಲಿ ಕೊರತೆಯೊಂದು ಉಳಿದೇ ಉಳಿದಂತೆ!