Tuesday, 9th August 2022

ದಾವಣಗೆರೆ ಮಹಾನಗರ ಪಾಲಿಕೆ: ಮೇಯರ್, ಉಪ ಮೇಯರ್ ಸ್ಥಾನಕ್ಕೇರಿದ ಬಿಜೆಪಿ

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯ ಮೂರನೇ ಅವಧಿಗೆ ಬಿಜೆಪಿ ಮೇಯರ್, ಉಪ ಮೇಯರ್ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ.

ಶುಕ್ರವಾರ ಮೇಯರ್, ಉಪ ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 30 ನೇ ವಾರ್ಡ್‌ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಬಿಜೆಪಿ ಸೇರಿರುವ ಜಯಮ್ಮ ಗೋಪಿನಾಯ್ಕ,ಉಪ ಮೇಯರ್ ಆಗಿ 8 ನೇ ವಾರ್ಡ್ ನ ಬಿಜೆಪಿ ಯ ಗಾಯತ್ರಿ ಖಂಡೋಜಿರಾವ್ ಆಯ್ಕೆಯಾದರು.

ಪರಿಶಿಷ್ಟ ಜಾತಿ(ಮಹಿಳೆ) ಮೀಸಲಾಗಿದ್ದ ಮೇಯರ್ ಸ್ಥಾನಕ್ಕೆ ನಿರೀಕ್ಷೆಯಂತೆ 30 ನೇ ವಾರ್ಡ್ ನ ಜಯಮ್ಮ ಗೋಪಿನಾಯ್ಕ ಆಯ್ಕೆಯಾದರು. ಕಾಂಗ್ರೆಸ್ ನ ನಾಗರತ್ನಮ್ಮ ವಿರುದ್ಧ ನಾಲ್ಕು ಮತಗಳ ಅಂತರದಿಂದ ಜಯ ಸಾಧಿಸಿದರು. ಉಪ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಗಾಯತ್ರಿ ಬಾಯಿ ಖಂಡೋಜಿ ರಾವ್ 29 ಮತ ಪಡೆದರು. ಕಾಂಗ್ರೆಸ್ ನ ಶ್ವೇತಾ ಶ್ರೀನಿವಾಸ್ 25 ಮತ ಪಡೆದರು.

ಉಪ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಂಟನೇ ವಾರ್ಡ್ ನ ಬಿಜೆಪಿಯ ಗಾಯತ್ರಿ ಖಂಡೋಜಿರಾವ್ ಕಾಂಗ್ರೆಸ್ ಶ್ವೇತ ಶ್ರೀನಿವಾಸ್ ವಿರುದ್ದ ನಾಲ್ಕು ಮತಗಳ ಜಯಗಳಿಸಿದರು.

ಒಟ್ಟು 45 ಸದಸ್ಯತ್ವ ಬಲದ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ 18 ಸದಸ್ಯರು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ 29 ಮತದಾರರ ಬಲ ಹೊಂದಿದ್ದು ಸತತ ಮೂರನೇ ಬಾರಿಗೆ ಮೇಯರ್,‌ ಉಪ ಮೇಯರ್ ಗಾದಿಗೆ ಏರುವಲ್ಲಿ ಯಶಸ್ವಿಯಾಗಿದೆ. ಮಹಾನಗರ ಪಾಲಿಕೆಯಲ್ಲಿ ಅತಿ ಹೆಚ್ಚಿನ ಸದಸ್ಯರ ಹೊಂದಿರುವ ಕಾಂಗ್ರೆಸ್ ಮೂರನೇ ಬಾರಿಯೂ ಮೇಯರ್, ಉಪ ಮೇಯರ್ ಹುದ್ದೆಗೇರುವಲ್ಲಿ ವಿಫಲವಾಗಿದೆ.

ಜಿಲ್ಲಾ ಬಿಜೆಪಿ ಮುಖಂಡರ ಮನವೊಲಿಸುವ ಭಾರೀ ಪ್ರಯತ್ನ ನಡೆಸಿದ್ದರು. ಶಿಲ್ಪ ಜಯಪ್ರಕಾಶ್ ಉಪ ಮೇಯರ್ ಹುದ್ದೆ ಅಲಂಕರಿಸಿರುವ ಹಿನ್ನೆಲೆ ಯಲ್ಲಿ ತಮಗೆ ಮೇಯರ್ ಸ್ಥಾನ ನೀಡಬೇಕು ಎಂದು ಜಯಮ್ಮ ಗೋಪಿನಾಯ್ಕ ಪಟ್ಟು ಹಿಡಿದಿದ್ದರು. ಬಿಜೆಪಿ ಅಧಿಕಾರಕ್ಕೆ ಏರುವಲ್ಲಿ ಸಹಕಾರ‌ ನೀಡಿ ರುವುದರಿಂದ ತಮಗೆ ಅವಕಾಶ ನೀಡಬೇಕು ಎಂದು ನಾಯಕರಿಗೆ ಕೋರಿದ್ದರು.

ಜಯಮ್ಮ ಗೋಪಿನಾಯ್ಕ ಪಕ್ಷೇತರರಾಗಿ ಆಯ್ಕೆ ಆಗಿದ್ದರೂ ಅಂತಿಮವಾಗಿ ಮೇಯರ್ ಸ್ಥಾನ ನೀಡಲು ಪಕ್ಷದ ಮುಖಂಡರು ನಿರ್ಧರಿಸಿದರು. ಮೇಯರ್ ಆಗಿ ಆಯ್ಕೆಯಾಗಿರುವ ಜಯಮ್ಮ ಗೋಪಿನಾಯ್ಕ ಹೊಸ ಇತಿಹಾಸ ಬರೆದರು.