Friday, 9th December 2022

ಕೋಲ್ಕತ್ತಾ: ಬಿಜೆಪಿ ಕಾರ್ಯಕರ್ತರ ಶವ ಪತ್ತೆ

ಕೋಲ್ಕತ್ತಾ: ಉತ್ತರ ಕೋಲ್ಕತ್ತಾದ ಕಾಶಿಪುರ್ ಪ್ರದೇಶದಲ್ಲಿ ಶುಕ್ರವಾರ ಬಿಜೆಪಿ ಕಾರ್ಯಕರ್ತರೊಬ್ಬರ ಶವ ಪತ್ತೆಯಾಗಿದೆ.

ಎರಡು ದಿನಗಳ ಪಶ್ಚಿಮ ಬಂಗಾಳ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಮೃತರ ನಿವಾಸಕ್ಕೆ ಭೇಟಿ ನೀಡಿ, ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳಲಿದ್ದಾರೆ.

ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಅರ್ಜುನ್ ಚೌರಾಸಿಯಾ ಅವರ ಶವವು ಘೋಷ್ ಬಗಾನ್ ಪ್ರದೇಶದ ಕಟ್ಟಡವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆಡಳಿತಾರೂಢ ಟಿಎಂಸಿ ಅವರನ್ನು ಹತ್ಯೆ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಎರಡು ದಿನಗಳ ರಾಜ್ಯ ಪ್ರವಾಸದಲ್ಲಿರುವ ಶಾ ಚೌರಾಸಿಯಾ ಅವರ ನಿವಾಸಕ್ಕೆ ಭೇಟಿ ನೀಡಲಿದ್ದಾರೆ ಎಂದು ರಾಜ್ಯ ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಅರ್ಜುನ್ ಪಕ್ಷದ ದಕ್ಷ ಕಾರ್ಯಕರ್ತರಾಗಿದ್ದರು. ಸುದ್ದಿ ಕೇಳಿ ಅಮಿತ್ ಶಾ ಬೇಸರಗೊಂಡಿದ್ದಾರೆ. ಅಮಿತ್ ಶಾರಿಗೆ ಭವ್ಯ ಸ್ವಾಗತ ನೀಡಲು ಸಿದ್ಧತೆ ನಡೆಸಲಾಗಿತ್ತು, ಆದರೆ ಕಾರ್ಯಕರ್ತರ ಸಾವಿನ ಹಿನ್ನೆಲೆಯಲ್ಲಿ ಭವ್ಯ ಸ್ವಾಗತ ರದ್ದುಗೊಳಿಸಲು ಸೂಚಿಸಿದ್ದಾರೆ ಎಂದು ಹಿರಿಯ ನಾಯಕರು ಸ್ಪಷ್ಟ ಪಡಿಸಿದ್ದಾರೆ.

ಟಿಎಂಸಿ ಸಂಸದ ಸಂತಾನು ಸೇನ್, ಆರೋಪಗಳು ಆಧಾರರಹಿತವಾಗಿವೆ. ಪೊಲೀಸರು ತನಿಖೆ ಮಾಡಲಿ. ನಂತರ ಈ ಬಗ್ಗೆ ಹೇಳಿಕೆ ನೀಡುತ್ತೇವೆ ಎಂದಿದ್ದಾರೆ.