Monday, 6th February 2023

ಇಂತಹ ಕಳ್ಳ ಚಿರತೆಗಳು ಹತ್ತು ಬಂದರೂ ಹೆದರಲ್ಲ

ಕೊತ್ತೂರು ಮಂಜುಗೆ ಟಾಂಗ್ ನೀಡಿದ ಸಚಿವ ಸುಧಾಕರ್

ಜನರ ಬೆಂಬಲವೇ ನನ್ನ ಶಕ್ತಿ ಮುದ್ದೇನಹಳ್ಳಿ ಗ್ರಾಮ ಸಭೆಯಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಸವಾಲು

ಚಿಕ್ಕಬಳ್ಳಾಪುರ : ಕರಿ ಚಿರತೆ ಹೆಸರಿನಲ್ಲಿ ಕಾಂಗ್ರೆಸ್ ನವರು ಕಳ್ಳ ಚಿರತೆಯನ್ನು ಚಿಕ್ಕಬಳ್ಳಾಪುರಕ್ಕೆ ಕರೆತರುತ್ತಿದ್ದು, ಇಂತಹ ಹತ್ತು ಜನ ಬಂದರೂ ಹೆದರುವುದಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು.

ತಾಲೂಕಿನ ಮುದ್ದೇನಹಳ್ಳಿಯಲ್ಲಿ ಮಂಗಳವಾರ ಆಯೋಜಿಸಿದ್ದ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಗಾದರೂ ಮಾಡಿ ಡಾ. ಸುಧಾಕರ್ ಅವರನ್ನು ಸೋಲಿಸಿ ನಿಮ್ಮ ದಮ್ಮಯ್ಯ ಅಂತ ಬೇಡಿಕೊಳ್ಳುತ್ತಾರೆ.ಕಳ್ಳ ಚಿರತೆಯೊಂದನ್ನು ಕರೆತರುವುದಾಗಿ ಹೇಳುತ್ತಿದ್ದು, ಇಂತವಹರು ಹತ್ತು ಜನ ಬರಲಿ ಹೆದರುವವನು ನಾನಲ್ಲ ಎಂದು ಕೊತ್ತೂರು ಮಂಜು ಹೆಸರು ಹೇಳದೆಯೇ ಸವಾಲೆಸೆದರು.

ಚಿಕ್ಕಬಳ್ಳಾಪುರ  ಕ್ಷೇತ್ರಕ್ಕೆ ಕರಿ ಚಿರತೆಯಲ್ಲ, ಕಳ್ಳ ಚಿರತೆಯನ್ನು ಕಾಂಗ್ರೆಸ್ ಕರೆತರುತ್ತಿದ್ದು, ದಲಿತ ಎಂದು ಬೋಗಸ್ ಪ್ರಮಾಣ ಪತ್ರ ನೀಡಿ, ಐದು ವರ್ಷ ಶಾಸಕನಾಗಿದ್ದವರನ್ನು ಚಿಕ್ಕಬಳ್ಳಾಪುರದ ಜನತೆ ಸುಮ್ಮನೆ ಬಿಡುತ್ತಾರೆಯೇ, ಇಲ್ಲಿನ ದಲಿತರು ಒಪ್ಪುತ್ತಾರೆಯೇ ಎಂದು ಅವರು ಪ್ರಶ್ನಿಸಿದರು.

ನಿಮ್ಮ ವಿಶ್ವಾಸ, ನಂಬಿಕೆಯೇ ಶ್ರೀರಕ್ಷೆ

ಕ್ಷೇತ್ರದ ಜನತೆಯ ವಿಶ್ವಾಸ ಮತ್ತು  ನಂಬಿಕೆಯೇ ನನಗೆ ಶ್ರೀರಕ್ಷೆ. ಕ್ಷೇತ್ರದ ಜನರ ಆಶೀರ್ವಾದ ಇರುವುದರಿಂದ ಧೈರ್ಯದಿಂದ ಇದ್ದೇನೆ. ತಪ್ಪು ಮಾಡಿದ್ದರೆ ಹೆದರಬೇಕು, ತಪ್ಪೇ ಮಾಡಿಲ್ಲ ಹಾಗಾಗಿ ಯಾರನ್ನು ಬೇಕಾದರೂ ಹೆದರಿಸುತ್ತೇನೆ. ನಿಮ್ಮ ಪ್ರೀತಿ ವಿಶ್ವಾಸ ಹೀಗೇ ಇರಲಿ ಎಂದು ಅವರು ಕೋರಿದರು.

ಮುದ್ದೇನಹಳ್ಳಿ ಗ್ರಾಪಂನಲ್ಲಿ ರಸ್ತೆಗಳ ನಿರ್ಮಾಣ, ಶುದ್ಧ ನೀರಿನ ಘಟಕಗಳ ಸ್ಥಾಪನೆ, ಸೇರಿದಂತೆ ಹಲವಾರು ಅಭಿವೃದ್ಧಿ ಮಾಡಲಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಎಲ್ಲ ಸಮಸ್ಯೆಗಳನ್ನೂ ಬಗೆಹರಿಸಲಾಗಿದೆ. ಗ್ರಾಮ ವಿಕಾಸದಲ್ಲಿ ೧ ಕೋಟಿ ಅನುದಾನ ನೀಡಲಾಗಿದೆ, ಪ್ರತಿ ಗ್ರಾಮದಲ್ಲಿಯೂ ಅಬಿವೃದ್ಧಿ ಮಾಡಲಾಗಿದೆ ಎಂದರು.

ಇದೇ ಗ್ರಾಪಂ ವ್ಯಾಪ್ತಿಯವರೊಬ್ಬರು ಹಿಂದೆ ಶಾಸಕರಾಗಿದ್ದರು, ಅವರು ನಿವೇಶನ, ಮನೆ ನೀಡಿದ್ದರೇ ಎಂದು ಪ್ರಶ್ನಿಸಿದ ಸಚಿವರು, ಮುದ್ದೇನಹಳ್ಳಿ ಗ್ರಾಪಂನಲ್ಲಿ ಒಟ್ಟು ೧೭ ಗ್ರಾಮಗಳಿವೆ. ನಿವೇಶನ ರಹಿತರಗಾಗಿ ಒಟ್ಟು ೬.೧೯ ಗುಂಟೆ ಭೂಮಿ ಗುರ್ತಿಸಲಾಗಿದೆ, ಇದರಲ್ಲಿ ೩೨೫ ನಿವೇಶನಗಳು ಸಿದ್ಧವಿದ್ದು, ಇದರ ಜೊತೆಗೆ ೧೦೦ ಮನೆಗಳನ್ನು ವಿತರಿಸಲಾಗುತ್ತಿದೆ. ಇದರಿಂದ ಒಟ್ಟು ೪೨೫ ಕುಟುಂಬಗಳಿಗೆ ಶಾಶ್ವತ ವಸತಿ ಸಿಗಲಿದೆ ಎಂದರು.
ಇದೇ ವೇದಿಕೆಯಲ್ಲಿ ೩೬ ಮಂದಿಗೆ ಹಕ್ಕುಪತ್ರ ವಿತರಣೆ ಮಾಡಲಾಗುವುದು, ಇಲ್ಲಿಗೆ ಸ್ನಾತಕೋತ್ತರ ವಿವಿ ಬಂದಿದೆ. ವಿಶ್ವೇಶ್ವರಯ್ಯ ಐಟಿಐ ಬರುತ್ತಿದೆ, ಮುದ್ದೇನಹಳ್ಳಿಗೆ ವೈದ್ಯಕೀಯ ಕಾಲೇಜು ನೀಡಲಾಗಿದೆ, ಮಾದರಿ ಪ್ರೌಢಶಾಲೆಯೂ ಆಗಿದೆ, ಇದು ರಾಜ್ಯಕ್ಕೇ ಮಾದರಿಯಾಗಿದ್ದು, ಮುದ್ದೇನಹಳ್ಳಿ ಶಿಕ್ಷಣ ಕಾರಿಡಾರ್ ಆಗುತ್ತಿದೆ, ಮುಂದಿನ ಐದು ವರ್ಷದಲ್ಲಿ ಇನ್ನಷ್ಟು ಅಬಿವೃದ್ಧಿಯಾಗಲಿದೆ ಎಂದು ವಿವರಿಸಿದರು.

೮೩ ಕೋಟಿ ವೆಚ್ಚದಲ್ಲಿ ನಂದಿ ಬೆಚ್ಚಕ್ಕೆ ರೋಪ್ ವೇ ನಿರ್ಮಾಣವಾಗಲಿದೆ, ಈ ಗ್ರಾಪಂನಲ್ಲಿ ೩೨೪ ಮಂದಿ ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದು, ೩೨೫ ನಿವೇಶನ ಇದೆ, ಹಾಗಾಗಿ ಎಲ್ಲರಿಗೂ ನಿವೇಶನ ಸಿಗಲಿದೆ. ಮೂರು ದಿನದಲ್ಲಿ ರಂಗೋಲಿ ಸ್ಪರ್ಧೆ ಬಹುಮಾನಗಳ ವಿತರಣೆಯಾಗಲಿದೆ. ಪ್ರತಿ ಗ್ರಾಮಕ್ಕೆ ತೆರಳಿ ಮನೆ ಮನೆಗೆ ಸಮಾಧಾನಕರ ಬಹುಮಾನ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಈ ತಿಂಗಳಲ್ಲಿ ಪಡಿತರ ಅಕ್ಕಿ ಕಡಿತಗೊಳಿಸಿರುವ ಬಗ್ಗೆ ಕಾಂಗ್ರೆಸ್‌ನವರು ಸುಳ್ಳು ಹೇಳುತ್ತಿದ್ದಾರೆ. ಕಳೆದ ೩೦ ತಿಂಗಳಿನಿAದ ಗರೀಬಿ ಕಲ್ಯಾಣ ಯೋಜನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡುತ್ತಿದ್ದ ೫ ಕೆಜಿ ಅಕ್ಕಿ ನಿಲ್ಲಿಸಿದ್ದಾರೆ. ಹಾಗಾಗಿ ಈ ತಿಂಗಳಿನಲ್ಲಿ ಅಕ್ಕಿ ನಿಲ್ಲಿಸಲಾಗಿದ್ದು, ಮುಂದಿನ ತಿಂಗಳಿನಿ0ದ ಅದನ್ನು ಮತ್ತೆ ನೀಡಲಾಗುತ್ತದೆ. ಕಾಂಗ್ರೆಸ್ ನವರು ಸುಳ್ಳು ಹೇಳುವುದನ್ನೇ ಕರಗತ ಮಾಡಿಕೊಂಡಿದ್ದು, ಅವರ ಸುಳ್ಳುಗಳನ್ನು ನಂಬದ0ತೆ ಸಚಿವ ಸುಧಾಕರ್ ಮನವಿ ಮಾಡಿದರು.

ವೇದಿಕೆಯಲ್ಲಿ  ನಗರಾಭಿವೃದ್ದಿ ಪ್ರಾಧಿಕಾರದ ಕೃಷ್ಣಮೂರ್ತಿ,ಮಾಜಿ ಟಿಪಿಎಸ್ ಅಧ್ಯಕ್ಷ ರಾಮಸ್ವಾಮಿ, ಮರಳುಕುಂಟೆ ಕೃಷ್ಣ ಮೂರ್ತಿ,ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನಿನಾರಾಯಣಪ್ಪ, ಛಾಯಗುರುರಾಜ್,ಶಿವಕುಮಾರ್,ವೆಂಕಟೇಶ್ ಮೂರ್ತಿ,ಶಿವರಾಜ್,ನರಸಿಂಹಮೂರ್ತಿ, ಓಂಶಕ್ತಿ ಮೂರ್ತಿ, ಕೃಷ್ಣಮೂರ್ತಿ ನಾರಾಯಣಸ್ವಾಮಿ ರಾಧಮ್ಮ,ಸುಕನ್ಯ ಮೂರ್ತಿ,ಚೆನ್ನಮ್ಮ, ಕೇಶವಮೂರ್ತಿ, ಮಂಜುನಾಥ್ ಸೇರಿ ಎಲ್ಲಾ ಗ್ರಾಪಂ ಸದಸ್ಯರು ಹಾಜರಿದ್ದರು.

error: Content is protected !!