Tuesday, 9th August 2022

ನಾಳೆಯಿಂದ ಬಜೆಟ್ ಅಧಿವೇಶನ ಆರಂಭ: ನಿಷೇಧಾಜ್ಞೆ ಜಾರಿ

ಬೆಂಗಳೂರು: ಇದೇ ತಿಂಗಳ 28ರಿಂದ ವಿಧಾನಸೌಧದಲ್ಲಿ ಆರಂಭಗೊಳ್ಳುತ್ತಿರುವ ವಿಧಾನಮಂಡಲದ ಬಜೆಟ್ ಅಧಿವೇಶನ ಹಿನ್ನೆಲೆಯಲ್ಲಿ ವಿಧಾನಸೌಧ ಕಟ್ಟಡದ ಸುತ್ತಲೂ ಎರಡು ಕಿ.ಮೀ.ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.

ನಾಳೆಯಿಂದ ಫೆಬ್ರವರಿ 5ರವರೆಗೆ ಅಧಿವೇಶನ ನಡೆಯಲಿದ್ದು, ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಬೆಂಗಳೂರು ನಗರದ ವಿಧಾನಸೌಧ ಕಟ್ಟಡದ ಸುತ್ತಲೂ ಎರಡು ಕಿ.ಮೀ.ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ವೇಳೆ ಕಾನೂನುಭಂಗ ಉಂಟು ಮಾಡುವ ಉದ್ದೇಶದಿಂದ 5 ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪು ಸೇರುವಂತಿಲ್ಲ.

ಮೆರವಣಿಗೆ, ಸಭೆ, ಪ್ರತಿಭಟನೆ ನಡೆಸುವಂತಿಲ್ಲ. ಯಾವುದೇ ರೀತಿಯ ಪ್ರದರ್ಶನ, ವ್ಯಕ್ತಿಗಳು ಅಥವಾ ಅವರ ಶವಗಳ ಪ್ರತಿಕೃತಿ ಪ್ರದರ್ಶನ, ಪ್ರಚೋದನಾಕಾರಿ ಬಹಿರಂಗ ಘೋಷಣೆ, ಸಂಜ್ಞೆ ಮಾಡುವುದು, ಹಾಡುವುದು, ಸಂಗೀತ ನುಡಿಸುವುದು, ಚಿತ್ರ, ಸಂಕೇತಗಳನ್ನು, ಭಿತ್ತಿ ಪತ್ರ ಅಥವಾ ಇತರ ಯಾವುದೇ ವಸ್ತುಗಳನ್ನು ಪ್ರದರ್ಶಿಸುವುದನ್ನು ನಿಷೇಧಿಸಲಾಗಿದೆ ಎಂದು ಪಂತ್ ತಿಳಿಸಿದ್ದಾರೆ.