ಪಿಯುಸಿ ಪಠ್ಯದಲ್ಲಿ ಅವಹೇಳನವಿದ್ದರೂ ಹಳೆ ಪಠ್ಯದ ಮುಂದುವರಿಕೆಗೆ ಸಮ್ಮತಿ
ರಂಜಿತ್ ಎಚ್. ಅಶ್ವತ್ಥ ಬೆಂಗಳೂರು
ಹಿಂದೂ ಧರ್ಮ, ದೇವರು ಹಾಗೂ ಬ್ರಾಹ್ಮಣರ ಅವಹೇಳನ, ತಪ್ಪು ಮಾಹಿತಿ ಇರುವ ಪಠ್ಯವನ್ನು ಯಾವುದೇ ಕಾರಣಕ್ಕೂ ಕಲಿಸಲು ಬಿಡುವುದಿಲ್ಲ; ದ್ವಿತೀಯ ಪಿಯುಸಿಯ ಇತಿಹಾಸದ ಪಠ್ಯದಲ್ಲಿರುವ ಲೋಪವನ್ನು ಬದಲಾಯಿಸೇ ತೀರುತ್ತೇವೆ ಎನ್ನುತ್ತಿದ್ದವರು ಈಗ ಮೌನಕ್ಕೆ ಶರಣಾಗಿದ್ದಾರೆ.
ಪಠ್ಯ ಪರಿಷ್ಕರಣೆಯ ವಿವಾದ ದೊಡ್ಡದಾಗುತ್ತಿದ್ದಂತೆ, ಹಿಂದೂ ಧರ್ಮದ ಬಗ್ಗೆ ಅವಹೇಳನ ಕಾರಿ ಅಂಶಗಳಿದ್ದರೂ ಅದನ್ನೇ ಮುಂದು ವರಿಸಲು ಬಿಜೆಪಿ ನೇತೃತ್ವದ ಸರಕಾರ ತೀರ್ಮಾನಿಸಿರುವುದು ಇದೀಗ ಅನೇಕರ ವಿರೋಧಕ್ಕೆ ಕಾರಣವಾಗಿದೆ. ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣಾ ಸಮಿತಿಯ ವಿರುದ್ಧ ಕಾಂಗ್ರೆಸ್ ಹಾಗೂ ಎಡಪಂಥೀಯರು ಸಮರ ಸಾರಿದ್ದರಿಂದ ಸಮಿತಿಯನ್ನು ಬರ್ಖಾಸ್ತುಗೊಳಿಸಿರುವ ಸರಕಾರ, ಇದೀಗ ಲೋಪವಿರುವ ದ್ವಿತೀಯ ಪಿಯುಸಿ ಪಠ್ಯವನ್ನೇ ಈ ವರ್ಷ ಬೋಧಿಸಲು ತೀರ್ಮಾನಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ತರಗತಿಯ ಇತಿಹಾಸ ಪಠ್ಯಪುಸ್ತಕದ ‘ಪ್ರಾಚೀನ ಯುಗ’ ಎನ್ನುವ ಪಾಠದಲ್ಲಿ ಹಾಗೂ ‘ಧರ್ಮಗಳ ಉಗಮ’ ಎನ್ನುವ ಪಾಠದಲ್ಲಿ, ಹಿಂದು ವಿರೋಧಿ ಹಾಗೂ ಬ್ರಾಹ್ಮಣರವ ಹೇಳನದ ಮಾಹಿತಿಗಳಿವೆ. ಇದಿಷ್ಟೇ ಅಲ್ಲದೇ, ‘ಬ್ರಹ್ಮ, ವಿಷ್ಣು, ಮಹೇಶ್ವರ ಸೇರಿದಂತೆ ಅನೇಕ ದೇವರುಗಳು ಉತ್ತರ ವೇದಕಾಲದಲ್ಲಿ ಬಂದರು’ ಎನ್ನುವ ಮೂಲಕ ಅನೇಕರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ. ಈ ಲೋಪದ ಬಗ್ಗೆ ಶಿಕ್ಷಣ ಇಲಾಖೆಯ ಬಳಿ ಮಾಹಿತಿಯಿದ್ದರೂ, ಅದನ್ನೇ ಮುಂದುವರಿಸುವ ಔಚಿತ್ಯ ಪ್ರಶ್ನಿಸಲ್ಪಡುತ್ತಿದೆ. ಇದರೊಂದಿಗೆ ‘ಪ್ರಾಣಿ ಬಲಿ ವೇದ-ಶಾಸ್ತ್ರಗಳ ಒಂದು ಭಾಗವಾಗಿತ್ತು’ ಎಂಬ ಮಾಹಿತಿ ಪಠ್ಯ ಭಾಗದಲ್ಲಿರು ವುದು ಮತ್ತೊಂದು ವಿವಾದವನ್ನು ಸೃಷ್ಟಿಸಿದೆ.
ಮುಂದುವರಿಕೆ ತಪ್ಪು: ಇನ್ನು ಕಾಂಗ್ರೆಸ್ ನೇತೃತ್ವದ ಸರಕಾರ ನೇಮಿಸಿದ್ದ ಈ ಹಿಂದಿನ ಬರಗೂರು ಸಮಿತಿಯಲ್ಲಿದ್ದ ಎಡಪಂಥೀಯ ಚಿಂತಕರು ಈ ರೀತಿ ಹಿಂದು ಧರ್ಮದ ಅವಹೇಳನಕಾರಿ ಅಂಶವನ್ನು ಸೇರಿಸಿರಬಹುದು. ಆದರೆ ಈಗಿರುವ ಬಿಜೆಪಿ ಸರಕಾರ, ಹಿಂದುಗಳ ರಕ್ಷಣೆ ಮಾಡುವುದು ಹೇಳುತ್ತಿದೆ. ಅವರಿಗೆ ಈ ಲೋಪಗಳು ಗೊತ್ತಾದ ಬಳಿಕವೂ, ಅದನ್ನೇ ಮುಂದುವರಿಸಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ. ಕಾಂಗ್ರೆಸ್ ವಿರೋಧಿಸುತ್ತಿದೆ ಎನ್ನುವ ಕಾರಣಕ್ಕೆ ತಪ್ಪಿದ್ದರೂ ಮುಂದುವರಿಸುತ್ತೇವೆ ಎನ್ನುವುದು ಪಲಾಯನ ವಾದವಲ್ಲವೇ ಎಂಬ ಪ್ರಶ್ನೆ ಹುಟ್ಟುಹಾಕಿದೆ.
ಬುದ್ಧನ ಬಗ್ಗೆಯೂ ತಪ್ಪು: ಇದೇ ಪಠ್ಯದಲ್ಲಿ ಹೊಸ ಧರ್ಮಗಳ ಉದಯ ಎನ್ನುವ ವಿಷಯದ ಪೀಠಿಕೆಯಲ್ಲಿ ‘ಜನರು ಅಸಂತಷ್ಟರು ಮತ್ತು ಅತೃಪ್ತರಾಗಿದ್ದಾಗ ಮಹಾವೀರ ಮತ್ತು ಗೌತಮ ಬುದ್ಧರಂತಹ ಇಬ್ಬರು ಮಹಾನ್ ವ್ಯಕ್ತಿಗಳು ಜನಿಸಿದರು. ಅವರು ಸರಳವಾದ ತತ್ವ ಗಳನ್ನು ಜನರಾಡುವ ಭಾಷೆಯಲ್ಲಿ ಬೋಧಿಸಿದರು. ಹೊಸ ಧರ್ಮಗಳು ಬೋಧಿಸಿದ ಸರಳ ಮುಕ್ತಿ ಮಾರ್ಗದಿಂದಾಗಿ ಸಾಮಾನ್ಯರು
ಹೊಸ ಧರ್ಮಗಳತ್ತ ಆಕರ್ಷಿಸಲ್ಪಟ್ಟರು.’ ಎಂದು ಹೇಳಲಾಗಿದೆ.
ಆದರೆ ಜೈನ ಧರ್ಮವನ್ನು ಸ್ಥಾಪಿಸಿದ್ದು, ಪಾರ್ಶ್ವನಾಥರು. ಇನ್ನು ಸಿದ್ಧಾರ್ಥ ಬುದ್ಧನಾಗಿದ್ದು, ಯಾವುದೇ ಧರ್ಮ ಸ್ಥಾಪನೆಯ ಉದ್ದೇಶದಿಂದ ಅಲ್ಲ. ಬದಲಿಗೆ ತನ್ನಲ್ಲಿನ ವೈರಾಗ್ಯ ಹುಟ್ಟಿ ಹೊರಟ್ಟಿದ್ದು. ಆದರೆ ಪಠ್ಯದಲ್ಲಿ ದಾರಿ ತಪ್ಪಿಸುವ ಕೆಲಸವನ್ನು ಮಾಡಿದ್ದಾರೆ ಎನ್ನುವ ಆರೋಪ ವನ್ನು ಅನೇಕರು ಮಾಡುತ್ತಿದ್ದಾರೆ.
ಇಲಾಖೆಗೆ ಬೇಡ: ಲೋಪದ ಬಗ್ಗೆ ಇಲಾಖೆಯ ಗಮನಕ್ಕೆ ಬಂದು, ಸಚಿವರು ಕೂಡಲೇ ಇದನ್ನು ಸರಿಪಡಿಸಿ ಪರಿಷ್ಕೃತ ಪಠ್ಯವನ್ನು ಬೋಧಿಸುವಂತೆ ಸೂಚನೆ ನೀಡಿದ್ದರು. ಇದನ್ನು ಸರಿಪ ಡಿಸುವ ಜವಾಬ್ದಾರಿಯನ್ನು ರೋಹಿತ್ ಹೆಗಲಿಗೆ ಹೇರಿದ್ದರು. ಆದರೆ ಗೊಂದಲ ದಿಂದ ಸಮಿತಿಯನ್ನು ಬರ್ಖಾಸ್ತುಗೊಳಿಸುವ ಜತೆಗೆ ವಿವಾದವೇ ಬೇಡವೆಂದು, ಹಳೆಯ ಪಠ್ಯವನ್ನೇ ಮುಂದುವರಿಸಲು ಇಲಾಖೆ ತೀರ್ಮಾನಿಸದೆ ಎಂದು ಮೂಲಗಳು ತಿಳಿಸಿವೆ.
ಅಕ್ಷೇಪಾರ್ಹ ಅಂಶವೇನು?
ಉತ್ತರ ವೇದಕಾಲದಲ್ಲಿ ಧರ್ಮಾಚರಣೆ ಸಂಕೀರ್ಣ ಮತ್ತು ಕಠಿಣವಾಯಿತು. ದೇವತೆಗಳ ಸಂಖ್ಯೆ ಬಹುಪಟ್ಟು ಹೆಚ್ಚಿತು, ದೇವತೆಗಳಿಗೆ
ವಿವಿಧ ಆಕಾರ, ಗುಣಗಳನ್ನು ಕೊಡಲಾಯಿತು. ಮೂರ್ತಿಪೂಜೆ ಅಸ್ತಿತ್ವಕ್ಕೆ ಬಂದಿತು. ದೇವತೆಗಳನ್ನು ಶ್ರೇಣೀಕರಿಸಲಾಯಿತು. ಹೊಸ ದೇವತೆಗಳಾದ ಬ್ರಹ್ಮ, ವಿಷ್ಣು, ಮಹೇಶ್ವರ, ಗಣೇಶ, ಕಾರ್ತಿಕೇಯ, ಪಾರ್ವತಿ, ಲಕ್ಷ್ಮಿ, ಕಾಳಿ, ದುರ್ಗಾ ಮುಂತಾದವರು ಅಸ್ತಿತ್ವಕ್ಕೆ
ಬಂದರು. ಆಕಳನ್ನು ಪವಿತ್ರವೆಂದು ಪರಿಗಣಿಸಲಾಗಿತ್ತು ಮತ್ತು ಅದರ ಹತ್ಯೆಯನ್ನು ನಿಷೇಧಿಸಲಾಯಿತು.
ಯಜ್ಞ ಮತ್ತು ಯಾಗಾದಿಗಳ ಆಚರಣೆಯೂ ವಿಸ್ತೃತವಾದವು. ಆದ್ದರಿಂದ ವೈದಿಕ ಧರ್ಮದ ಆಚರಣೆ ದುಬಾರಿಯಾಯಿತು, ಕ್ಷುದ್ರಪೂಜೆ,
ವಾಮಾಚಾರ ಮತ್ತು ಮಾಟಮಂತ್ರಗಳು ರೂಢಿಗೆ ಬಂದವು. ಬ್ರಾಹ್ಮಣರು ಇತರ ಜಾತಿಗಳ ಮೇಲೆ ಪರಮಾಧಿಕಾರ ಸ್ಥಾಪಿಸಿದರು. ಜನರಿಗೆ ಪುರೋಹಿತರಿಲ್ಲದೆ ಯಜ್ಞಗಳನ್ನು ಮಾಡುವುದು ಅಸಾಧ್ಯವಾಗಿತ್ತು. ಬ್ರಾಹ್ಮಣರು ಅನೇಕ ವಿಶೇಷ ಸೌಲಭ್ಯಗಳನ್ನು ಅನುಭವಿಸು ತ್ತಿದ್ದರು ಮತ್ತು ತಮ್ಮನ್ನು ಎಲ್ಲರಿಗಿಂತ ಶ್ರೇಷ್ಠರೆಂದು ತಿಳಿದಿದ್ದರು.
ಪ್ರಾಣಿ ಬಲಿ ಶಾಸ್ತ್ರ ವಿಧಿಗಳ ಒಂದು ಭಾಗವಾಗಿತ್ತು ಮತ್ತು ಇವುಗಳ ಆಚರಣೆ ದುಬಾರಿಯಾಯಿತು. ಹೀಗಾಗಿ ಜನರು ಅಸ್ತಿತ್ವದಲ್ಲಿದ್ದ
ಧರ್ಮದಲ್ಲಿನ ನಂಬಿಕೆ ಕಳೆದುಕೊಂಡರು. ಋಗ್ವೇದದ ಕಾಲದ ಧಾರ್ಮಿಕ ವಿಧಿ ಮತ್ತು ಧರ್ಮಾಚರಣೆ ಉತ್ತರ ವೇದ ಕಾಲದಲ್ಲಿ
ಸಂಕೀರ್ಣವಾದವು.