ವಿನುತಾ ಹೆಗಡೆ ಶಿರಸಿ
ಅಡಕೆಗೆ ಪರ್ಯಾಯ ಎನಿಸಿರುವ ತಾಳೆ ಬೆಳೆದು, ಮಾದರಿಯಾದ ರೈತ
ಉತ್ತರ ಕನ್ನಡ ಜಿಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಕೆಗೆ ತಾಳೆ ಸೆಡ್ಡು ಹೊಡೆಯುವಲ್ಲಿ ಮುನ್ನುಡಿ ಬರೆದಿದೆ. ಯಾವುದೇ ತೊಂದರೆ, ರೋಗ ಇಲ್ಲದೇ ಬೆಳೆದು ಲಾಭ ಕಾಣುವ ಬೆಳೆಯಲ್ಲಿ ತಾಳೆ ಇಂದು ತನ್ನ ಅಸ್ತಿತ್ವವನ್ನು ಗುರುತಿಸಿಕೊಂಡಿದೆ.
ಅಡಕೆಗೆ ಪರ್ಯಾಯ ಎನಿಸಿರುವ ತಾಳೆ ಬೆಳೆಯನ್ನು ಬೆಳೆದು ತಾಲೂಕಿನ ತಿಗಣಿ ಗ್ರಾಮದ ಮೃತ್ಯುಂಜಯ ಕೆ.ಗೌಡ ಎಂಬ ರೈತ ಮಾದರಿ ಎನಿಸಿದ್ದಾರೆ. ತಿಗಣಿ ಗ್ರಾಮದಲ್ಲಿರುವ ಸುಮಾರು ಆರು ಎಕರೆಗೂ ವಿಸ್ತಾರದ ತೋಟದಲ್ಲಿ ನೂರಾರು ತಾಳೆ ಮರಗಳನ್ನು ಅವರು ಬೆಳೆಸಿದ್ದಾರೆ. ಹರಿಹರ ತಾಲೂಕಿನ ಕಲ್ಪವೃಕ್ಷ ತಾಳೆ ಎಣ್ಣೆ ಉತ್ಪಾದನಾ ಕಂಪನಿ ಅವರಿಗೆ ತಾಂತ್ರಿಕ ಸಲಹೆ ನೀಡುತ್ತಿದೆ. ಬೆಳೆಯನ್ನು ನೇರವಾಗಿ ಖರೀದಿಸುತ್ತಿದೆ.
2013ರಲ್ಲಿ ಪ್ರಯೋಗಕ್ಕಾಗಿ ಕೆಲವೇ ಗಿಡ ಬೆಳೆದಿದ್ದೆ. ನಂತರದ ದಿನಗಳಲ್ಲಿ ನಾಲ್ಕು ಎಕರೆ ಭೂಮಿಯನ್ನು ಇದೇ ಬೆಳೆಗಾಗಿ ಮೀಸಲಿಟ್ಟೆ. ಮೊದಲ ಬಾರಿ ಕಡಿಮೆ -ಸಲಿನಿಂದ ಬೇಸರ ಉಂಟಾಗಿತ್ತು. ಆರು ವರ್ಷದ ಬಳಿಕ ಉತ್ತಮ ಫಸಲು ಬರತೊಡಗಿತು. ಈಗ ಸರಾಸರಿ 25 ರಿಂದ ೩೦ ಟನ್ ಬೆಳೆ ತೆಗೆಯುತ್ತಿದ್ದೇನೆ ಎಂದು ಮೃತ್ಯುಂಜಯ ತಿಳಿಸಿದರು.
ಈಗ ೪೦೦ಕ್ಕೂ ಹೆಚ್ಚು ತಾಳೆ ಮರಗಳು ಬೆಳೆದು ನಿಂತಿವೆ. ಸರಿಯಾಗಿ ಬೆಳೆದ ಮರ ಗರಿಷ್ಠ 1 ಕ್ವಿಂಟಲ್ಗೂ ಅಧಿಕ ಫಸಲು ಒಮ್ಮೆಲೆ ನೀಡುತ್ತದೆ. ಒಂದೊಂದು ಗೊನೆಯಿಂದ 60 ರಿಂದ 70 ಕೆಜಿಯಷ್ಟು ತಾಳೆ ಪಡೆಯಲು ಸಾಧ್ಯವಿದೆ ಎಂದರು. ಬೇಸಿಗೆಯಲ್ಲಿ ತೋಟಕ್ಕೆ ನೀರು ಹಾಯಿಸಲು ಸಮಸ್ಯೆ ಆಗುತ್ತಿತ್ತು. ವೊಲ್ಟೇಜ್ ಕೊರತೆಯಿಂದ ಪಂಪ್ಸೆಟ್ ಕೆಲಸ ಮಾಡುತ್ತಿರಲಿಲ್ಲ. ಪ್ರತ್ಯೇಕ ಪರಿವರ್ತಕ ಅಳವಡಿಸಿಕೊಂಡ ಬಳಿಕ ಸಮಸ್ಯೆ ನೀಗಿದೆ ಎಂದರು. ಪ್ರಸ್ತುತ ಪ್ರತಿ ಟನ್ ತಾಳೆ ಬೆಳೆಗೆ ?13500 ಬೆಂಬಲ ಬೆಲೆ ಇದೆ. ಇದೇ ಬೆಲೆಯಲ್ಲಿ ರೈತರಿಂದ ಫಸಲು ಖರೀದಿಸ ಬೇಕಾಗುತ್ತದೆ. ರೈತರಿಗೆ ತಾಳೆ ಬೆಳೆಯಿಂದ ಸಾಕಷ್ಟು ಪ್ರಯೋಜನವಿದೆ ಎಂದರು.
ಸರಕಾರದಿಂದ ತಾಳೆ ಬೆಳೆಗೆ ಸಹಾಯಧನ
ತಾಳೆ ಉತ್ಪನ್ನಗಳಿಗೆ ಹೆಚ್ಚು ಬೇಡಿಕೆಯೂ ಇರುವ ಕಾರಣ ಕೇಂದ್ರ ಸರಕಾರ ತಾಳೆ ಬೆಳೆಗೆ ಉತ್ತೇಜನ ನೀಡುತ್ತಿದೆ. ಹೊಸದಾಗಿ ಬೆಳೆ ಬೆಳೆಯಲು ಮುಂದಾಗುವ ರೈತರಿಗೆ ಉಚಿತವಾಗಿ ಸಸಿಗಳನ್ನು ನೀಡಲಾಗುತ್ತದೆ. ಮೊದಲ ವರ್ಷದಿಂದ ನಾಲ್ಕು ವರ್ಷದವರೆಗೆ ತೋಟಗಳ ನಿರ್ವಹಣೆಗೂ ಸಹಾಯಧನ ಒದಗಿಸಲಾಗುತ್ತದೆ. ಗೊಬ್ಬರ, ಯಂತ್ರೋಪಕರಣ ಖರೀದಿಗೂ ಸಹಾಯಧನ ನೀಡ ಲಾಗುತ್ತದೆ ಎಂದು ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ ಮಾಹಿತಿ ನೀಡಿದರು.
***
ವರ್ಷಕ್ಕೆ 30 ಟನ್ ಬೆಳೆ ಬೆಳೆಯುತ್ತೇವೆ. 17 ರುಪಾಯಿ ಕೆಜಿಯೊಂದಕ್ಕೆ. ನಾಲ್ಕು ಎಕರೆ ಸ್ಥಳದಲ್ಲಿ ತಾಳೆ ಮರ ಬೆಳೆದಿದ್ದು, 3 ಎಕರೆಗೆ ಸಸಿ ಹಾಕಿದ್ದು ಲಾಭದಾಯಕವಾಗಿದೆ. ಇಲ್ಲಿನ ಬೆಳೆಯನ್ನು ಹರಿಹರ ಆಯಿಲ್ ಪ್ಯಾಕ್ಟ್ರಿಗೆ ಕಳಿಸುತ್ತಿದ್ದೇವೆ. ತೋಟಗಾರಿಕಾ ಇಲಾಖೆ ಯಿಂದ ಸಾಕಷ್ಟು ಸಹಾಯಧನ ಸಿಗುತ್ತಿದೆ. ಆದ್ದರಿಂದ ನಾವು ಇದನ್ನು ಲಾಭದಾಯಕವನ್ನಾಗಿಸಿಕೊಂಡಿದ್ದೇವೆ. ಇದು ಯಾವುದೇ ಮಳೆ ಹಾನಿ, ನೆರೆಗೆ ಒಳಗಾಗದೇ ಇರುವುದರಿಂದ ರೈತರಿಗೆ ಅನುಕೂಲವಾಗಿದೆ.
-ಮೃತ್ಯುಂಜಯ ಕೆಂಡಪ್ಪಗೌಡ ಸ್ಥಳೀಯ ರೈತ