ಅಭ್ಯರ್ಥಿಗಳ ಅಂತಿಮಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ಸಜ್ಜು
ವೆಂಕಟೇಶ ಆರ್.ದಾಸ್ ಬೆಂಗಳೂರು
ಬಿಬಿಎಂಪಿ ಚುನಾವಣೆ ನಡೆಯುವುದು ಇನ್ನೂ ಅನುಮಾನ ಎಂದುಕೊಂಡು ಕೆಲ ನಾಯಕರಿದ್ದರೆ, ಬಿಜೆಪಿ ಮಾತ್ರ ಒಳಗೊಳಗೇ
ಚುನಾವಣೆ ಎದುರಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಬಿಬಿಎಂಪಿ ಚುನಾವಣೆ ನಡೆಸುವ ಸಂಬಂಧ ಸರಕಾರ ಇನ್ನೂ ಕಾನೂನು ಹೋರಾಟ ನಡೆಸಬಹುದು ಎಂಬ ಅನುಮಾನವಿದೆ. ಮೀಸಲು ಮತ್ತು ವಾರ್ಡ್ ವಿಂಗಡಣೆ ವರದಿ ಯಲ್ಲಿನ ತಾಂತ್ರಿಕ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಚುನಾವಣೆ ಮುಂದೂಡುವ ಪ್ರಯತ್ನವನ್ನು ಸರಕಾರ ನಡೆಸುತ್ತಿದೆ.
ಚುನಾವಣೆ ನಡೆಸಲು ಬೆಂಗಳೂರಿನ ಬಹುತೇಕ ಮಂತ್ರಿಗಳು ಮತ್ತು ಶಾಸಕರಿಗೆ ಮನಸ್ಸಿಲ್ಲ. ಹೀಗಾಗಿ, ಸುಪ್ರಿಂ ಆದೇಶದ ಪ್ರಕಾರ ಎರಡು ತಿಂಗಳಲ್ಲಿ ಚುನಾವಣೆ ನಡೆಯಬೇಕಿದ್ದರೂ, ಚುನಾವಣೆ ಮುಂದೂಡುವ ಎಲ್ಲ ಪ್ರಯತ್ನಗಳು ನಡೆಯುತ್ತಿವೆ ಎನ್ನಲಾಗಿತ್ತು. ಆದರೆ, ಬೆಂಗಳೂರು ನಗರ ಜಿಲ್ಲಾ ಬಿಜೆಪಿ, ಬಿಬಿಎಂಪಿ ಚುನಾವಣೆಯ ಅಗತ್ಯ ಸಿದ್ಧತೆಗಳನ್ನು ಈಗಾಗಲೇ ಆರಂಭಿಸಿದ್ದು, ಅರ್ಹ ಅಭ್ಯರ್ಥಿಗಳ ಆಯ್ಕೆಗೆ ತಯಾರಿ ನಡೆಸುತ್ತಿದೆ.
ಬೂತ್ ಮಟ್ಟದ ಕಾರ್ಯಕರ್ತರು ಮತ್ತು ಆರ್ಎಸ್ಎಸ್ ಕಾರ್ಯಕರ್ತರ ಮಾಹಿತಿ ಅನ್ವಯ ಯಾವ ವಾರ್ಡ್ನಲ್ಲಿ ಯಾರು ಅಭ್ಯರ್ಥಿಯಾಗಬೇಕು ಎಂಬುದನ್ನು ನಿರ್ಧರಿ ಸಲು ಅಂತಿಮ ಹಂತದ ಸಿದ್ಧತೆ ನಡೆಸ ಲಾಗಿದೆ. ಯಾವುದೇ ಕ್ಷಣದಲ್ಲಿ ಚುನಾವಣೆ ಘೋಷಣೆಯಾಗುವ ಸಾಧ್ಯತೆಯಿದ್ದು, ಇದಕ್ಕೆ ಬಿಜೆಪಿ ಸರ್ವಸನ್ನದ್ಧವಾಗಿದೆ ಎನ್ನಲಾಗುತ್ತಿದೆ.
ನಗರದ ಮೂರು ಜಿಲ್ಲಾ ಅಧ್ಯಕ್ಷರ ನೇತೃತ್ವದಲ್ಲಿ ಆಯಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೂತ್ ಪ್ರಮುಖರಿಂದ ಮಾಹಿತಿ ಸಂಗ್ರಹ ಕಾರ್ಯ ಪೂರ್ಣಗೊಂಡಿದೆ. ಬೂತ್ ಪ್ರಮುಖರಿಗೆ ಹತ್ತು ಪ್ರಶ್ನೆಗಳುಳ್ಳ ಬುಕ್ಲೆಟ್ ಕೊಟ್ಟು, ಬಿಬಿಎಂಪಿ ಚುನಾವಣೆಯ
ತಯಾರಿಗೆ ಅಗತ್ಯ ಮಾಹಿತಿ ಸಂಗ್ರಹಿಸಲಾಗಿದೆ. ಇದರಲ್ಲಿ ಚುನಾವಣೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆಯೂ ಸೇರಿದೆ ಎನ್ನಲಾಗುತ್ತಿದೆ.
ಬೂತ್ ಪ್ರಮುಖರು ನೀಡಿರುವ ಮಾಹಿತಿ ಆಧರಿಸಿ, ಜಿಲ್ಲಾ ಅಧ್ಯಕ್ಷರು, ವರದಿಯನ್ನು ರಾಜ್ಯ ಬಿಜೆಪಿಗೆ ಸಲ್ಲಿಕೆ ಮಾಡಲಿದ್ದಾರೆ. ಆ
ವರದಿಯನ್ನಿಟ್ಟುಕೊಂಡು, ಸ್ಥಳಿಯ ಶಾಸಕರ ಅಭಿಪ್ರಾಯ ಪಡೆದು ಅಭ್ಯರ್ಥಿಯನ್ನು ಅಂತಿಮಗೊಳಿಸಲಾಗುತ್ತದೆ. ಹೊರ ವಲಯದ ಅಭಿವೃದ್ಧಿಗೆ ಆದ್ಯತೆ: ನಗರದ ಕೋರ್ ಏರಿಯಾಗಳಲ್ಲಿ ರಸ್ತೆ ಗುಂಡಿ ಮತ್ತು ರಸ್ತೆಗಳಷ್ಟೇ ಅಭಿವೃದ್ಧಿ ಹೊಂದ ಬೇಕಿ ದ್ದರೆ, ನಗರದ ಹೊರವಲಯದಲ್ಲಿ ರಸ್ತೆಗಳು, ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ಕಾವೇರಿ ಪೈಪ್ಲೈನ್ ಅಳವಡಿಕೆ ಮೊದಲಾದ ಕಾಮಗಾರಿಗಳು ನೆನಗುದಿಗೆ ಬಿದ್ದಿದ್ದವು.
ಚುನಾವಣೆ ಸಂದರ್ಭದಲ್ಲಿ ಇದೆಲ್ಲವೂ ಬಾಕಿಯಿದ್ದರೆ, ಹೊರವಲಯದ ಮತದಾರರು ಬಿಜೆಪಿಯ ಕೈಬಿಡುವುದು ಶತಸಿದ್ಧ. ಹೀಗಾಗಿ, ಹೊರವಲಯದ ಕಾಮಗಾರಿಗಳಿಗೆ ವೇಗ ನೀಡಬೇಕು ಎಂದು ಸರಕಾರ ತೀರ್ಮಾನಿಸಿದೆ. ಇದಕ್ಕೆ ಸಂಬಂಧಿಸಿ ಯಶವಂತ ಪುರ, ರಾಜರಾಜೇಶ್ವರಿ ನಗರ, ಮಹದೇವಪುರ, ಗೋವಿಂದ ರಾಜ ನಗರ ಕ್ಷೇತ್ರಗಳಲ್ಲಿ ಕಳೆದೊಂದು ವಾರದಲ್ಲಿ ಸಾವಿರಾರು ಕೋಟಿ ರು.ಗಳ ಅಭಿವೃದ್ಧಿ ಯೋಜನೆಗಳಿಗೆ ಸಿಎಂ ಬೊಮ್ಮಾಯಿ ಅವರು ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಉಳಿದ ಕ್ಷೇತ್ರಗಳಲ್ಲಿನ ಅಭಿವೃದ್ಧಿ ಕಾಮಗಾರಿಗಳನ್ನು ವೇಗವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದಾರೆ. ಆ ಮೂಲಕ ಮುಂದಿನ ಚುನಾವಣೆಗೆ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಹೋಗಲು ತೀರ್ಮಾನಿಸಿ ದ್ದಾರೆ ಎನ್ನಲಾಗಿದೆ.
***
ಅಭಿವೃದ್ಧಿ ಕಾಮಗಾರಿಗೆ ವೇಗ
ಸುಪ್ರಿಂ ಕೋರ್ಟ್ ಚುನಾವಣೆ ಘೋಷಣೆಗೆ ಗಡುವು ನೀಡುತ್ತಿದ್ದಂತೆ ಸರಕಾರಕ್ಕೆ ನಗರದ ಅಭಿವೃದ್ಧಿ ಕಾರ್ಯಗಳೇ ಹಿನ್ನಡೆ ಯಾಗುವ ಭಯ ಕಾಡುತ್ತಿತ್ತು. ರಸ್ತೆ ಗುಂಡಿಗಳು ಮತ್ತು ನಗರ ವ್ಯಾಪ್ತಿಯಲ್ಲಿ ಬಾಕಿಯುಳಿದಿದ್ದ ಕಾಮಗಾರಿಗಳು ಪಕ್ಷದ ವಿರುದ್ಧ ಆಡಳಿತ ವಿರೋಧಿ ಅಲೆಯನ್ನು ಸೃಷ್ಟಿಸುವ ಆತಂಕವಿತ್ತು. ಇದಕ್ಕಾಗಿಯೇ ಸರಕಾರ ಕೆಲ ಕಾಲಾವಕಾಶ ಪಡೆದು, ಅಗತ್ಯವಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪೂರೈಸುವ ಮೂಲಕ ಚುನಾವಣೆಗೆ ಸಜ್ಜಾಗುತ್ತಿದೆ. ಕಳೆದ ಒಂದು ವಾರದಲ್ಲಿ ಸಿಎಂ ಬೊಮ್ಮಾಯಿ ಅವರು, ನಗರದ ವಿವಿಧ ಕ್ಷೇತ್ರಗಳಲ್ಲಿ ಸಾವಿರಾರು ಕೋಟಿ ರು.ಗಳ ಅಭಿವೃದ್ಧಿ ಕಾಮಗರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಮುಂದೆ ಮತ್ತಷ್ಟು ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡುವ ಮೂಲಕ ಜನರ ಮುಂದೆ ಹೋಗಲು ಸರಕಾರ ತೀರ್ಮಾನಿಸಿದೆ ಎನ್ನಲಾಗುತ್ತಿದೆ.